ರಾಮ-ರಾಮಾಯಣ
ಅಯೋಧ್ಯಾರಾಮ.
ಗಣೇಶ ಭಟ್ ಶಿರಸಿ
..
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿರುವುದರಿಂದ ಜನಸಾಮಾನ್ಯರು ನಿರಾಳವಾಗಿದ್ದರೆ, ರಾಜಕೀಯ ಪಕ್ಷಗಳಿಗೆ ಚಿಂತೆ ಶುರುವಾಗಿದೆ. ಬಹಳಷ್ಟು ವರ್ಷಗಳಿಂದ ಸಮಸ್ಯೆಯನ್ನು ಜೀವಂತವಾಗಿಟ್ಟು, ಜನರನ್ನು ಮರುಳು ಮಾಡಿ ಮತ ಗಳಿಸುತ್ತಿದ್ದವರಿಗೆ ಇನ್ನೊಂದು ಹೊಸ ಸಮಸ್ಯೆ ಹುಟ್ಟು ಹಾಕುವ ಕುರಿತು ಯೋಚಿಸುವ ಪರಿಸ್ಥಿತಿ ಎದುರಾಗಿದೆ. ಇನ್ನು ರಾಮನನ್ನು ಬಹುಬೇಗ ನೇಪಥ್ಯಕ್ಕೆ ಸರಿಸಲಾಗುತ್ತದೆ. ರಾಮಾಯಣದ ಅಯೋಧ್ಯೆಯ ರಾಮಚಂದ್ರನಿಗೂ, ಭಾರತೀಯ ದರ್ಶನಶಾಸ್ತ್ರದ ರಾಮನಿಗೂ ಏನಾದರೂ ಸಂಬಂಧವಿದೆಯೇ ಎಂಬ ಕುರಿತು ಪುನಃ ಚಿಂತನೆ ನಡೆಸಬೇಕಾದ ಸಮಯವಿದು.
ಭಾರತೀಯ ಚಿಂತನೆಯನ್ವಯ ರಾಮ ಎಂದರೆ ಪರಮ ಪುರುಷ, ಪುರುಷೋತ್ತಮ, ಪರಮಪ್ರಜ್ಞೆ; ಜನಸಾಮಾನ್ಯರ ಭಾಷೆಯ ದೇವರು. ಸಂಸ್ಕೃತದ ಮೂಲಧಾತು ‘ರಮ್’ ಗೆ ಗಂಯ್ ಪ್ರತ್ಯಯ ಸೇರಿಸಿದಾಗ ರಾಮ ಎಂದಾಗುತ್ತದೆ. ಯಾವ ಅಸ್ತಿತ್ವವು ಸಂತೋಷವನ್ನು ನೀಡುತ್ತದೋ, ಮನಕ್ಕೆ ಆನಂದವನ್ನು ಒದಗಿಸುತ್ತದೋ ಅದುವೇ ರಾಮ. ಅಮಿತ ಆನಂದದ ಮೂರ್ತ ರೂಪವೇ ರಾಮ.
ರಾಮ ಶಬ್ದಕ್ಕೆ ಮೂರು ರೀತಿಯ ಪ್ರಮುಖ ವ್ಯಾಖ್ಯೆಗಳಿವೆ. ‘ರಮಂತೇ ಯೋಗಿನ ಯಸ್ಮಿನ್’ ಅಂದರೆ ಯಾವುದರಿಂದ ಯೋಗಿಗಳು ಆನಂದ ಪಡೆಯುತ್ತಾರೋ ಅದು ರಾಮ. ಯೋಗ ಎಂದರೆ ಜೀವಾತ್ಮ ಪರಮಾತ್ಮನಲ್ಲಿ ಒಂದಾಗುವುದು; ಈ ಉದ್ದೇಶವನ್ನು ಗುರಿಯಾಗಿಟ್ಟುಕೊಂಡು ಬದುಕುವವರು ಯೋಗಿಗಳು. ಯೋಗಿಯಾದವರು ಅಲ್ಪಸುಖದಿಂದ ಅಥವಾ ತಾತ್ಕಾಲಿಕ ಸಂತೋಷದಿಂದ ತೃಪ್ತರಾಗುವುದಿಲ್ಲ. ಅವರಿಗೆ ಬೇಕಾದುದು ಮಿತಿಯಿಲ್ಲದಷ್ಟು ಸುಖ; ಸುಖ ಅನಂತವಾದಾಗ ಅದು ಆನಂದ ಎನಿಸಿಕೊಳ್ಳುತ್ತದೆ. ಅನಂತವಾದ ಸುಖವನ್ನು ನೀಡುವ ಸಾಮಥ್ರ್ಯ ಅನಂತವಾದ ಅಸ್ತಿತ್ವಕ್ಕೆ ಮಾತ್ರ ಇರಲು ಸಾಧ್ಯ. ಈ ಅನಂತತೆಯನ್ನೇ ದಾರ್ಶನಿಕರು ಪರಮಾತ್ಮ, ಪರಮಪ್ರಜ್ಞೆ ಮುಂತಾಗಿ ಕರೆದಿದ್ದಾರೆ. ಆದ್ದರಿಂದ ಯೋಗಿಗಳಿಗೆ ಪರಮಾನಂದವನ್ನು ನೀಡುವ ಅಸ್ತಿತ್ವವೇ ರಾಮ.
ರಾಮನ ಇನ್ನೊಂದು ವ್ಯಾಖ್ಯೆಯೆಂದರೆ ‘ರಾತಿ ಮಹೀಧರಮ್ ರಾಮ’. ರಾತಿ ಎಂದರೆ ಅತ್ಯಂತ ಉಜ್ವಲವಾದದ್ದು. ತಾನು ಸ್ವತಃ ಪ್ರಕಾಶಿಸುವದರ ಜೊತೆಗೆ ಇತರರಿಗೂ ಪ್ರಭೆ ಬೀರುವ ಸಾಮಥ್ರ್ಯವನ್ನು ಒದಗಿಸುವ ಅಸ್ತಿತ್ವವೇ ರಾಮ. ಚಂದ್ರನ ಪ್ರಭೆಗೆ ಪೃಥ್ವಿ ಕಾರಣ, ಪೃಥ್ವಿಯ ಪ್ರಭೆಗೆ ಸೂರ್ಯ, ಸೂರ್ಯನ ಪ್ರಕಾಶಕ್ಕೆ ಕಾರಣ ಸೃಷ್ಟಿಕರ್ತ ಅಥವಾ ಪರಮಾತ್ಮ. ಈ ವ್ಯಾಖ್ಯೆಯನ್ವಯವೂ ರಾಮ ಎಂದರೆ ಪರಮ ಪುರುಷ. ರಾತಿಯ ರಾ+ ಮಹೀಧರದ ‘ಮ’ ಸೇರಿದಾಗ ರಾಮ.
‘ರಾವಣಸ್ಯ ಮರಣಮ್ ರಾಮ’ ಎಂಬುದು ರಾಮ ಶಬ್ದದ ಇನ್ನೊಂದು ವ್ಯಾಖ್ಯೆ. ರಾವಣನ ಮರಣಕ್ಕೆ ಕಾರಣವಾಗುವುದೇ ರಾಮ. ರಾವಣ ಎಂದರೆ ಭ್ರಷ್ಟಮನ. ರೌ+ಅಣ =ರಾವಣ. ಯಾವುದರಿಂದ ಮನಸ್ಸು ಅಧಃಪತನದತ್ತ ಚಲಿಸುತ್ತದೋ ಅದು ರಾವಣ. ರಾವಣ ದಶಕಂಠ. ಯಾಕೆಂದರೆ ಮನಸ್ಸು ನಾಲ್ಕು ದಿಕ್ಕುಗಳು, ನಾಲ್ಕು ಉಪದಿಶೆಗಳು, ಮೇಲೆ ಮತ್ತು ಕೆಳಗೆ ಹೀಗೆ ಒಟ್ಟೂ ಹತ್ತು ದಿಕ್ಕುಗಳಲ್ಲಿ ಚಲಿಸುತ್ತದೆ. ಇಂತಹ ಮನಸ್ಸಿನ ಮರಣ ಎಂದರೆ ಅದು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವುದು. ಮಾನವನ ಮನಸ್ಸು ಪರಮಾತ್ಮನಲ್ಲಿ ಒಂದಾದಾಗ ಮಾತ್ರ ಅದರ ಅಸ್ತಿತ್ವ ಇಲ್ಲವಾಗುತ್ತದೆ. ಮನಸ್ಸನ್ನು ಏಕಾಗ್ರಗೊಳಿಸಿ, ಅನಂತತೆಯ ಭಾವಧಾರಣೆಯಿಂದ ಸಾಧನೆ ಮಾಡಿದಾಗ ಇದು ಸಾಧ್ಯ. ದಶದಿಕ್ಕುಗಳಲ್ಲಿ ಚಲಿಸುವ ಚಂಚಲ ಮನವನ್ನು ಸ್ಥಿರಗೊಳಿಸಿ ಅದನ್ನು ಉನ್ನತಿಯತ್ತ ನಡೆಸುವ ಅಸ್ತಿತ್ವವೇ ರಾಮ. ಇಲ್ಲಿ ಕೂಡಾ ರಾವಣದ ರಾ+ ಮರಣದ ಮ ಸೇರಿ ರಾಮ.
ರಾಮಾಯಣ ಎಂದರೆ ರಾಮನ ಆಶ್ರಯ ತಾಣ. ಉದಾಹರಣೆಗಾಗಿ ನಾರಾಯಣ. ನಾರ+ ಅಯನ. ಎಲ್ಲಿ ನಾರ ಆಶ್ರಯ ಪಡೆಯುತ್ತದೋ ಅದುವೇ ನಾರಾಯಣ. ನಾರ ಶಬ್ದಕ್ಕೆ ಸಂಸ್ಕೃತದಲ್ಲಿ ನೀರು , ಪ್ರಕೃತಿ , ಭಕ್ತಿ ಎಂಬ ಮೂರು ಅರ್ಥಗಳಿವೆ. ಪ್ರಕೃತಿಯ ಆಶ್ರಯ ಪರಮಾತ್ಮ, ಪರಮ ಪುರುಷನ ಕುರಿತಾದ ಅನನ್ಯ ಪ್ರೀತಿಯೇ ಭಕ್ತಿ. ಆದ್ದರಿಂದಲೇ ನಾರಾಯಣ ಎಂದರೆ ನಾರಕ್ಕೆ ಆಶ್ರಯದಾತ. ಸಂಸ್ಕೃತ ಶಬ್ದದ ಈ ವಿಶ್ಲೇಷಣೆಯಂತೆ ರಾಮನಿಗೆ ಆಶ್ರಯ ನೀಡಿರುವುದು ರಾಮಾಯಣ. ರಾಮ ಶಬ್ದದ ಅರ್ಥವೇ ಪರಮಾತ್ಮ ಎಂದಿರುವಾಗ , ಸಕಲ ಚರಾಚರಗಳ ಆಶ್ರಯದಾತನೂ, ಆಧಾರವೂ ಆಗಿರುವ ಪರಮ ಪುರುಷನಿಗೂ ಆಶ್ರಯವನ್ನು ನೀಡುವ ವಿಚಾರವೇ ಅಸಂಬದ್ಧ.
ಹಾಗಾದರೆ ರಾಮಾಯಣದ ಹುಟ್ಟು ಹೇಗಾಯಿತು? ಮಹರ್ಷಿ ವಾಲ್ಮೀಕಿಯು ತನ್ನ ಕಲ್ಪನೆಯಲ್ಲಿ ಮಾಡಿದ ಆದರ್ಶ ರಾಜ, ಆದರ್ಶ ವ್ಯಕ್ತಿ ರಾಮ. ಅವನಿಗೆ ಆಶ್ರಯ ನೀಡಿದ ಕಥಾನಕ ಗ್ರಂಥವೇ ರಾಮಾಯಣ. ರಾಮಾಯಣದಲ್ಲಿ ಬರುವ ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ.
ರಾಮಾಯಣದ ಕುರಿತಾದ ಇನ್ನೊಂದು ಪ್ರಸಿದ್ಧ ಗ್ರಂಥವೆಂದರೆ ತುಳಸಿದಾಸರ ರಾಮಚರಿತ ಮಾನಸ. ಹೆಸರೇ ಸೂಚಿಸುವಂತೆ ತುಳಸಿದಾಸರ ಕಲ್ಪನೆಯಲ್ಲಿ ಮೂಡಿದ ರಾಮನ ಚರಿತ್ರೆ.
ರಾಮಾಯಣದಲ್ಲಿ ವಿವರಿಸಿದ ಘಟನೆಗಳು, ಇತಿಹಾಸ ಎನ್ನುವುದಕ್ಕಿಂತ ನೀತಿ ಕಥೆ ಎಂಬ ವಾದವನ್ನೇ ಪುರಸ್ಕರಿಸುತ್ತವೆ. ಇಡೀ ರಾಮಾಯಣದಲ್ಲಿ ಎದ್ದು ಕಾಣುವುದು ಪುರುಷ ಪ್ರಧಾನ ಮತ್ತು ಪಿತೃ ಪ್ರಧಾನ ವ್ಯವಸ್ಥೆಯ ವಿವರಣೆ. ರಾಜನ ಹಿರಿಯ ಮಗನಿಗೆ ಪಟ್ಟದ ಹಕ್ಕು , ಸೀತೆಯ ಪಾತಿವೃತ್ಯದ ಪರೀಕ್ಷೆ, ಶುರ್ಪನಖಿ ಪ್ರಕರಣ ಮುಂತಾಗಿ ಪ್ರತಿಯೊಂದೆಡೆಯೂ ಪುರುಷ ಪ್ರಧಾನತೆಯೇ ಎದ್ದು ತೋರುತ್ತದೆ.
ಮಹರ್ಷಿ ವಾಲ್ಮೀಕಿಯ ಕಲ್ಪನೆಯಂತೆ ಒಬ್ಬ ಆದರ್ಶ ರಾಜನನ್ನಾಗಿ ಅಯೋಧ್ಯೆಯ ರಾಮಚಂದ್ರನನ್ನು ರೂಪಿಸಲಾಗಿದೆ. ಇದರರ್ಥ ಆ ಸಮಯದಲ್ಲಾಗಲೇ ರಾಜನ ಆಳ್ವಿಕೆಯ ಪದ್ಧತಿ ಜಾರಿಯಲ್ಲಿತ್ತು. ಗುಂಪಾಗಿ ಬದುಕುತ್ತಿದ್ದ ಮಾನವರು, ಶೂರನೊಬ್ಬನ ಆಡಳಿತಕ್ಕೆ ಒಳಪಟ್ಟಿದ್ದು, ರಾಜ್ಯದ ಗಡಿಗಳನ್ನು ಗುರ್ತಿಸಿಕೊಂಡದ್ದು, ಗುರುಕುಲ ಶಿಕ್ಷಣ ಪದ್ಧತಿ ರೂಢಿಯಲ್ಲಿ ಬಂದಿದ್ದು, ಮುಂತಾದವುಗಳು ಮಾನವನ ವಿಕಾಸ ಪಥದ ಇತ್ತೀಚಿನ ಕೆಲವು ಸಾವಿರ ವರ್ಷಗಳ ಬೆಳವಣಿಗೆ.
ಮಾನವ ಸಮಾಜದಲ್ಲಿ ಮೊದಮೊದಲಿಗೆ ಮಾತೃ ಪ್ರಧಾನ ವ್ಯವಸ್ಥೆಯೇ ಜಾರಿಯಲ್ಲಿತ್ತು. ಸುಮಾರು ಮೂರುವರೆ ಸಾವಿರ ವರ್ಷಗಳ ಹಿಂದಿನ ಮಹಾಭಾರತದ ಕಾಲಘಟ್ಟದಲ್ಲಿ, ಎರಡು ಸಾವಿರ ವರ್ಷಗಳ ಹಿಂದಿನ ಬುದ್ಧನ ಸಮಯದಲ್ಲಿ ಕೂಡ ತಾಯಿಯ ಹೆಸರಿನಿಂದಲೇ ಮಕ್ಕಳನ್ನು ಗುರ್ತಿಸುವ ಪದ್ಧತಿ ಅಸ್ತಿತ್ವದಲ್ಲಿತ್ತು. ಅಂದಿನ ದಿನಗಳಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಕೂಡಾ ಪ್ರಚಲಿತವಿದ್ದು, ನಿಧಾನಕ್ಕೆ ಬೇರೂರತೊಡಗಿತ್ತು. ಗುಂಪಿನ ನೇತಾರನಾಗಿ ಗೋಷ್ಠಿ ಮಾತೆಯ ಬದಲಿಗೆ ಗೋಷ್ಠಿ ಪಿತನನ್ನು ಒಪ್ಪಿಕೊಂಡ ನಂತರವೇ ಪಿತೃ ಪ್ರಧಾನ ವ್ಯವಸ್ಥೆ ಗಟ್ಟಿಗೊಳ್ಳತೊಡಗಿತ್ತು. ರಾಮಾಯಣದಲ್ಲಿ ವಿವರಿಸಿರುವ ಘಟನೆಗಳು ಮಾತೃ ಪ್ರಧಾನ ವ್ಯವಸ್ಥೆಯ ಯಾವ ಕುರುಹನ್ನು ಒಳಗೊಂಡಿರದ ಕಾರಣ ಆ ಕಥಾನಕದ ಕಾಲಘಟ್ಟವನ್ನು ತುಂಬಾ ಪ್ರಾಚೀನ ಎನ್ನಲಾಗದು.
ರಾಮಾಯಣವನ್ನು ಇತಿಹಾಸವೆಂದು ಸಾಧಿಸುವ, ಅದರ ಕಾಲಘಟ್ಟವನ್ನು ತೀರಾ ಹಿಂದಕ್ಕೆ ಒಯ್ಯುವ ಪ್ರಯತ್ನಗಳು ಇಂದಿಗೂ ಮುಂದುವರಿದಿದೆ. ಸುಂದರಾಂಗ ರಾಮಚಂದ್ರನು ದಕ್ಷಿಣ ಭಾರತಕ್ಕೆ ಬಂದಾಗ, ಅವನ ಅನುಯಾಯಿಗಳೆಲ್ಲರೂ ವಾನರ ಸಂತಾನರು. ಕಿಷ್ಕಿಂದೆಯ ದಕ್ಷಿಣಕ್ಕೆ ವಾಸಿಸುವವರನ್ನು ವಾನರರೆಂದು ಬಿಂಬಿಸಿರುವುದಕ್ಕೆ ಎರಡು ಕಾರಣಗಳು ಎದ್ದು ಕಾಣುತ್ತವೆ. ಮೊದಲನೆಯದು ಆರ್ಯರ ಶ್ರೇಷ್ಠತೆಯನ್ನು ದಾಖಲಿಸುವ ಪ್ರಯತ್ನ. ಇನ್ನೊಂದು ಈ ಕಥಾನಕಕ್ಕೆ ಪ್ರಾಚೀನತೆಯನ್ನು ಆರೋಹಿಸುವುದು.
ಸುಮಾರು ಎಂಟು ಸಾವಿರ ವರ್ಷಗಳ ಹಿಂದೆ ಆರ್ಯರು ಭಾರತಕ್ಕೆ ಬಂದವರೆಂದು ಹೇಳಲಾಗುತ್ತದೆ. ಪಶು ಸಂಗೋಪನೆ ಮಾಡುತ್ತಾ ಅಲೆಮಾರಿಗಳಾಗಿದ್ದ ಶೀತ ಪ್ರದೇಶದ ನಿವಾಸಿಗಳಾದ ಆರ್ಯರು ಸಮೃದ್ಧಿಯ ಈ ಪ್ರದೇಶಕ್ಕೆ ಕಾಲಿಟ್ಟ ನಂತರವೇ ಭಾರತ ವರ್ಷವೆಂಬ ಹೆಸರು ಬಂತು. ಭಾರತ ಶಬ್ದಕ್ಕೆ ಭರ್+ತನ್+ಅಲ್ ಎಂದರೆ ಮಾನವನ ಅಸ್ತಿತ್ವವನ್ನು ಕಾಪಾಡುವವ, ಮಾನವನ ಉನ್ನತಿಗೆ ಅಗತ್ಯವಾದವುಗಳನ್ನು ನೀಡುವವನು ಎಂಬ ಅರ್ಥವಿದೆ. ಅಂತಹ ಪ್ರದೇಶಕ್ಕೆ ಭಾರತ ವರ್ಷ ಎನ್ನುತ್ತಾರೆ. ಅರ್ಜುನನಿಗೆ ಭಾರತ ಎಂದು ಹಲವು ಬಾರಿ ಸಂಬೊಧಿಸಿರುವುದನ್ನು ಭಗವದ್ಗೀತೆಯಲ್ಲಿ ಕಾಣುತ್ತೇವೆ. ಆದರ್ಶ ರಾಜ ಎಂಬುದು ಇದರ ಅರ್ಥ. ಭಾರತ ವರ್ಷೇ, ಭಾರತ ಖಂಡೇ… ಎಂಬುದು ತನ್ನನ್ನು ಗುರ್ತಿಸಿಕೊಳ್ಳಲು ಮಂತ್ರಗಳಲ್ಲಿ ಇಂದಿಗೂ ಬಳಕೆಯಲ್ಲಿರುವ ಶಬ್ದ.
ಆರ್ಯರು ಭಾರತಕ್ಕೆ ಬರುವ ಮೊದಲೇ ಇಲ್ಲಿ ನಾಗರಿಕತೆ ವಿಕಾಸ ಹೊಂದಿತ್ತು. ಇಲ್ಲಿನ ಮೂಲ ನಿವಾಸಿಗಳು ತಮ್ಮೊಳಗಿನ ಅನಂತತೆಯನ್ನು ಅರಿಯುವ ದಾರಿಯಲ್ಲಿ ಸಾಗುವ ವಿಧಾನಗಳನ್ನು ಅನುಸರಿಸುತ್ತಿದ್ದರು. ಮನಸ್ಸನ್ನು ಅಂತರ್ಮುಖಿಯಾಗಿಸಿ, ಏಕಾಗ್ರತೆಯಿಂದ ಧ್ಯಾನ ಮಾಡುವ ಕಲೆ ಇವರಿಗೆ ಸಿದ್ದಿಸಿತ್ತು. ಆದರೆ, ಆರ್ಯರು ಇನ್ನೂ ಬಾಹ್ಯ ಪೂಜೆಯಲ್ಲೇ ನಿರತರಾಗಿದ್ದರು. ಯಜ್ಞ, ಯಾಗಾದಿಗಳು ಅವರೊಂದಿಗೇ ಭಾರತಕ್ಕೆ ಬಂದವು.
ಭಾರತದ ಮೂಲ ನಿವಾಸಿಗಳು ದ್ರಾವಿಡ, ಮಂಗೋಲಿಯನ್ ಜನಾಂಗ ಸೇರಿದವರಾಗಿದ್ದು, ಆರ್ಯರಿಗೆ ಹೋಲಿಸಿದರೆ ಇವರ ದೇಹ ಸಣ್ಣದಾಗಿತ್ತು. ಎತ್ತರದ ನಿಲುವಿನ , ಬಲಿಷ್ಠ ದೇಹದ ಆರ್ಯರು, ಕುದುರೆಯನ್ನೂ ಪಳಗಿಸಿ, ಬಳಸುತ್ತಿದ್ದುದರಿಂದಾಗಿ, ಭಾರತದ ಮೂಲ ನಿವಾಸಿಗಳನ್ನು ಸೋಲಿಸಲು ಸಾಧ್ಯವಾಯಿತು. ಗಂಗಾನದಿಯ ಬಯಲು ತಟ ಮತ್ತು ಉತ್ತರ ಭಾರತದ ಗುಡ್ಡಗಾಡು ಪ್ರದೇಶವನ್ನು ಆರ್ಯರು ಆಕ್ರಮಿಸಿಕೊಂಡು, ಅಲೆಮಾರಿ ಬದುಕಿಗೆ ವಿದಾಯ ಹೇಳಿ ಒಂದೇ ಸ್ಥಳದಲ್ಲಿ ವಾಸಿಸತೊಡಗಿದ್ದು ಇತಿಹಾಸ.
ಆರ್ಯರು ನಡೆಸುತ್ತಿದ್ದ ಯಜ್ಞ, ಯಾಗಗಳಲ್ಲಿ ಅಮೂಲ್ಯವಾದ ಆಹಾರ ವಸ್ತುಗಳನ್ನು ಸುಡುತ್ತಿದ್ದುದು ಇಲ್ಲಿನ ಮೂಲ ನಿವಾಸಿಗಳಿಗೆ ಒಪ್ಪಿಗೆಯಾಗುತ್ತಿರಲಿಲ್ಲ. ಆದ್ದರಿಂದಲೇ ಅವರ ಯಜ್ಞಗಳನ್ನು ಕೆಡಿಸುವ ಕೂಟ ನೀತಿಯಿಂದ ಆರ್ಯರನ್ನು ಮಣಿಸುವ , ಆಹಾರ ಪದಾರ್ಥಗಳನ್ನು ಪುನಃ ಒಯ್ಯುವ ಕೆಲಸಕ್ಕೆ ಮುಂದಾಗುತ್ತಿದ್ದರು. ಆರ್ಯರು ಮತ್ತು ಮೂಲ ನಿವಾಸಿಗಳ ನಡುವೆ ಸಾಕಷ್ಟು ಸಂಘರ್ಷಗಳಾಗುತ್ತಿದ್ದವು. ಮೂಲ ನಿವಾಸಿಗಳನ್ನು ರಾಕ್ಷಸರು, ದುಷ್ಟರು, ಮಾಯಾವಿಗಳು ಎಂದೇ ಆರ್ಯರು ಕರೆಯುತ್ತಿದ್ದರು.
ವಿಶ್ವಾಮಿತ್ರರು ನಡೆಸುವ ಯಜ್ಞದ ರಕ್ಷಣೆ ಹೊರುವ ರಾಮಚಂದ್ರ , ಯಜ್ಞವನ್ನು ಕೆಡಿಸುವ ಮಾರೀಚ ಮುಂತಾದ ವರ್ಣನೆಗಳು ಆರ್ಯರ ಶ್ರೇಷ್ಠತೆಯನ್ನು ಬಿಂಬಿಸುವ ಕಥಾನಕ ಎನ್ನುವುದಕ್ಕೆ ಸಾಕ್ಷಿ. ಇದಕ್ಕೆ ಪೂರಕವಾಗಿ ವಾನರ ರಾಜರಾದ ವಾಲಿ, ಸುಗ್ರೀವ ಅವರ ಆಕಾರ, ರೀತಿ, ರಿವಾಜುಗಳನ್ನು ಆರ್ಯರಿಗಿಂತ ಕನಿಷ್ಠವೆಂದು ತೋರಿಸುವುದನ್ನು ಕಾಣಬಹುದು.
ರಾವಣನನ್ನು ಶಿವಭಕ್ತನೆಂದು ಬಿಂಬಿಸಲಾಗಿದೆ. ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಇದೇ ಭರತಭೂಮಿಯ ಮೇಲೆ ಆವಿರ್ಭವಿಸಿದ ಸದಾಶಿವನ ಅನುಯಾಯಿಗಳಾದ ದ್ರಾವಿಡರು, ಅಂತರ್ಮುಖಿಯಾಗಿ ಪರಮಾತ್ಮನನ್ನು ಕಾಣುವ ವಿದ್ಯಾತಂತ್ರವನ್ನು ತಮ್ಮದಾಗಿಸಿಕೊಂಡರು. ಎಲ್ಲರೊಂದಿಗೆ ಬೆರೆಯುವ , ಸರಳ ಆಧ್ಯಾತ್ಮಿಕ ಬದುಕನ್ನು ಬೋಧಿಸುತ್ತಿದ್ದ ಶಿವನನ್ನು ಆರ್ಯರು ವಿರೋಧಿಸುತ್ತಿದ್ದರು. ರಾವಣನ ವ್ಯಕ್ತಿತ್ವವನ್ನು ಕಟ್ಟಿಕೊಡುವಾಗ ಕೂಡಾ ಆರ್ಯರ ಮತ್ತು ಅವರ ನಂಬಿಕೆ , ಆಚರಣೆಗಳೇ ಶ್ರೇಷ್ಠವೆಂಬ ವಿಚಾರ ಸ್ಪಷ್ಟ ಗೋಚರ.
ಭಾರತದ ರಾಜಕಾರಣಿಗಳಿಗೆ ಆಧ್ಯಾತ್ಮಿಕ ದಾರಿ ಬೇಕಿಲ್ಲ. ಮಂದಿರ, ಮಸೀದಿಗಳ ಜಗಳದಲ್ಲಿ ಜನರನ್ನು ತೊಡಗಿಸಿ, ತಾವು ರಾಜಕೀಯ ಅಧಿಕಾರ ಪಡೆಯುವದೇ ಅವರ ಗುರಿ. ಆಧ್ಯಾತ್ಮದ ರಾಮ ಅವರಿಗೆ ಬೇಕಿಲ್ಲ. ಅಯೋಧ್ಯೆಯ ಕಾಲ್ಪನಿಕ ರಾಮಚಂದ್ರನೇ ಅವರಿಗೆ ಪ್ರಿಯ. ಪುರುಷ ಪ್ರಧಾನ ಸಮಾಜವನ್ನು ಇನ್ನಷ್ಟು ಗಟ್ಟಿಗೊಳಿಸುವ ಚಿಂತನೆಯೂ ಈ ರಾಜಕಾರಣಿಗಳ ಇತರ ಸ್ವಾರ್ಥದೊಂದಿಗೆ ಸೇರಿಕೊಂಡಿದೆ.
ದೈನಂದಿನ ಬದುಕನ್ನು ಸಾಗಿಸುವುದೇ ಕಷ್ಟದಾಯಕವಾಗಿರುವ ಜನಸಾಮಾನ್ಯರು ಅಯೋಧ್ಯೆಯ ರಾಮಚಂದ್ರನಲ್ಲೇ ದಾರ್ಶನಿಕ ರಾಮನನ್ನು ನೋಡುವ ಪ್ರಯತ್ನ ಮಾಡುತ್ತಿದ್ದಾರೆ. ಆಧ್ಯಾತ್ಮದ ದಾರಿ ಅವರಿಗೆ ರುಚಿಸುವುದಿಲ್ಲ. ಅತಾರ್ಕಿಕತೆ, ಅವೈಚಾರಿಕ ನಂಬಿಕೆಗಳು, ಪಾಪ, ಪುಣ್ಯಗಳ ತಪ್ಪು ತಿಳುವಳಿಕೆ ನೀಡಿ, ಕಾಣದ ಜಗತ್ತಿನ ಭಯ ಹುಟ್ಟಿಸಿ, ಪುರೋಹಿತಶಾಹಿ ಶೋಷಣಾ ವಿಧಾನದಿಂದ ಜನರನ್ನು ದಿಕ್ಕು ತಪ್ಪಿಸಿ, ಅಸಹಾಯಕ ಭಾವವನ್ನು ಮೂಡಿಸಿ, ಗಟ್ಟಿಗೊಳಿಸಲಾಗುತ್ತಿದೆ. ಆಧುನಿಕ ಬಂಡವಾಳಶಾಹಿಗಳು ಈ ಸಂದರ್ಭವನ್ನು ತಮ್ಮ ಲಾಭ ಹೆಚ್ಚಳಕ್ಕಾಗಿ ಬಳಸಿಕೊಳ್ಳಲು ಮೂಢನಂಬಿಕೆಗಳನ್ನು ನೀರೆರೆದು ಪೋಷಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಮೂಢನಂಬಿಕೆಗಳನ್ನೇ ಬಿತ್ತುವ, ಬೆಳೆಸುವ ಧಾರವಾಹಿ, ಜ್ಯೋತಿಷಿ ಮುಂತಾದವುಗಳ ಪ್ರಾಯೋಜಕತ್ವ ವಹಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಬುದ್ದಿಜೀವಿಗಳನ್ನು, ಕಲಾಕಾರರನ್ನು, ರಾಜಕಾರಣಿಗಳನ್ನು ತಮ್ಮ ಧನಬಲದಿಂದ ಗುಲಾಮರನ್ನಾಗಿಸಿಕೊಂಡು ಬಂಡವಾಳಶಾಹಿಗಳು ಶೋಷಣೆ ನಡೆಸುತ್ತಿದ್ದಾರೆ. ಇದಕ್ಕೂ ಒಂದು ಕೊನೆಯಿದೆ ಎಂಬುದನ್ನು ಅವರು ಮರೆತಿರುವಂತಿದೆ.
ಪ್ರತಿಯೋರ್ವ ವ್ಯಕ್ತಿಗೂ ಜೀವನದ ಆರ್ಥಿಕ ಭದ್ರತೆ ನೀಡುವ ಜನಾಧಿಕಾರ ವ್ಯವಸ್ಥೆ ಅನುಷ್ಠಾನಗೊಂಡಾಗ ಇಡೀ ಸಮಾಜ, ಆಧ್ಯಾತ್ಮದ ದಾರಿಯಲ್ಲಿ ನಡೆಯುವ ಸಾಮಥ್ರ್ಯ ಪಡೆಯುತ್ತದೆ. ಆಗ ಆಧ್ಯಾತ್ಮದ ರಾಮ ಮಾತ್ರ ಎಲ್ಲರ ಬದುಕಿನಲ್ಲಿ ಪ್ರಕಾಶಿಸುತ್ತಾನೆ.