ಕಾಡುವ ಹಕ್ಕಿ.

ಕಾಡುವ ಹಕ್ಕಿ

ಅಬ್ಳಿ,ಹೆಗಡೆ

Hummingbird, Bird, Flight, Avian

ಹಾಡು ಹಕ್ಕಿಯೊಂದು
  ನಿತ್ಯಕಾಡುತಿದೆ
  ‘ಹಾಡು ನೀನು’ಎಂದು.


         ಗಂಟಲೊಣಗಿದರೆ
         ಕಂಠನುಲಿಯದದು
         ಹಾಡಲೇಗೆ ಇಂದು..?


   ಮರ್ಮವರಿಯದೆ
   ಧರ್ಮ,ಕರ್ಮಗಳ
   ನಡುವೆ ಬಂಧಿ ನಾನು.


         ಹಾರಲಾಗದಿದೆ
         ಭಾರ ರೆಕ್ಕೆಯಿದೆ
         ಹೊರಗೆ ಬಂದರೂನು.


   ನೋವು,ಹಿಂಸೆಗಳು
   ಸುತ್ತ ಕುಣಿಯುತಿವೆ
   ಕೊಳ್ಳಿ ದೆವ್ವದಂತೆ.


          ಹಸಿರು ಪ್ರಕ್ರತಿಯಾ
          ತಂಪು,ಸೊಂಪುಗಳು
          ಒಡಲ ಬೆಂಕಿಯಂತೆ.


   ಹರಿವನದಿಯಂತೆ
   ಬದುಕು ಸರಿಯುತಿದೆ
   ಸೆಳವು ಈಜಲಾರೆ.


           ಖುಷಿಯ ಬಾನಿನಲಿ
           ಹಾಡಿ,ತೇಲುವದು
           ಎಂತೋ…?ಹೇಳಲಾರೆ.


   ಭಾವ ಬತ್ತಿಹುದು
ಖುಷಿಯು ಸತ್ತಿಹುದು
   ಬರದು ಮಧುರಗೀತೆ.


           ದುಃಖ ಉಮ್ಮಳಿಸಿ
           ಬಿಕ್ಕುತ್ತ ಹಾಡಿದರೆ
           ಅದುವೆ ಚರಮಗೀತೆ.


    ಹಾಡುಹಕ್ಕಿಯೆ ನಿನ್ನ
    ಸ್ವಚ್ಛಂಧ ಬಂಧ
    ನನ್ನ ಬದುಕಿಗಿಲ್ಲ.


           ಬುವಿಯಂದ ಹೀರಿ
           ಬಾನಗಲ ಹಾರಿ
      .    ಹಾಡೆ ಖುಷಿಯ ಸೊಲ್ಲ.

***********

  

Leave a Reply

Back To Top