ಕಥೆ
ಶ್ರೀಗಂಧದ ಕೊರಡು
ಸುಧಾ ಭಂಡಾರಿ
ಪಾರು ಎಂದಿನಂತೆ ಊಟದ ನಂತರ ಒಬ್ಬಳೆ ಟಿವಿ ಹಚ್ಗಂಡು ಕೂತಿದ್ಲು.ತುಂಬಾ ದಿನಗಳ ನಂತ್ರ ರಾಜ್ ಕುಮಾರ ನ ‘ ಜೀವನ ಚೈತ್ರ’ ತಾಗಿತ್ತು.ಪಾರುಗೆ ರಾಜ್ ಕುಮಾರ ಸಿನಿಮಾ ಅಂದ್ರೆ ಪಂಚಪ್ರಾಣ. ಸಿನಿಮಾದಲ್ಲಿ ರಾಜ್‍ಕುಮಾರ್ ಹೆಂಡತಿ ಬಸುರಿ ಎಂದು ಗೊತ್ತಾದಾಗ ಅವಳನ್ನ ಎತ್ಗಂಡು ‘ ಲೇ ನೀನು ನನ್ ಮಗೂನ ತಾಯಿ ಆಗ್ತಿದ್ದೀಯಾ’ ಅಂತ ಮುದ್ದಾಡಿ ಒಂದು ಹಾಡು ಇರೋ ಸೀನ್ ಬರ್ತದೆ..ನೋಡ್ತಾ ನೋಡ್ತಾ ಪಾರೂನ ಅಂತರಂಗದ ಆಸೆ ಮತ್ತೆ ಧುಸ್ಸೆಂದು ಹೆಡೆ ಎತ್ತಿ ಆಕ್ರೋಶ,ಅಸಹಾಯಕತೆಯಿಂದ ಕಣ್ಣೀರು ಕನ್ನೆ ತೊಳೆಸಿತ್ತು..ಎಷ್ಟು ಹೊತ್ರು ಹಾಗೆ ಕುಳಿತಿದ್ದಳೊ ಏನೊ; ಅತ್ಯಮ್ಮ ಮಲಗೆದ್ದು ‘ ಏ ಪಾರೂ ಎಲ್ಲಿದ್ಯೆ? ಇವತ್ತು ಚಾಯಿ ಮಾಡುದಿಲ್ವೇನೆ’ ಎಂದು ಕರೆಯುತ್ತಲೆ ಎಚ್ಚೆತ್ತ ಅವಳು ‘ ಮಾಡ್ಕಂಡು ಕುಡೀರಿ: ಎನ್ನುತ್ತ ಕಿವಿ ಕೇಳದ ಅತ್ಯಮ್ಮನಿಗೆ ಕೇಳಿಯೂ ಕೇಳದಿರುವ ಹಾಗೆ ಗೊಣಗುತ್ತ ಅಡುಗೆ ಮನೆಗೆ ಹೋಗಿ ತನ್ನ ಅಸಹಾಯಕತೆಯನ್ನೆಲ್ಲ ಪಾತ್ರೆಗಳ ಮೇಲೆ ತೋರಿಸಿದಳು.
ಪಾರು ಘಟ್ಟದ ಮೇಲಿನ ಗಟ್ಟುಮಟ್ಟಾ ಗಂಡಾಳಿನಂತ ಹೆಣ್ಣು ಮಗಳು. ಒಡಿದೀರ ಮನೆಯ ದನ ಮೇಯ್ಸಗಂಡು ಹಾಯಾಗಿ ಗುಂಡ್ಕಲ್ಲ ಹಾಗೆ ಬೆಳೆದವಳು. ಗಂಡನ ಕಳಕಂಡ ನಾಗಿ ಒಡಿದೀರ ಮನೆ ಕೆಲ್ಸ ಮಾಡ್ಕಂಡು ಅವರಿವರ ಕೃಪೆಯಿಂದ ಇಬ್ಬರು ಹೆಣ್ಮಕ್ಕಳ ಮದ್ವಿ ಮಾಡಿ ಕಿರಿಯ ಮಗಳು ಪಾರೂನ ಮದ್ವಿ ಮಾಡಿ ಮುಗಿಸಿ ಸಿವ್ನ ಪಾದ ಸೇರ್ಕಂಡ್ರೆ ಜಲ್ಮ ಸಾರ್ಥಕ ಅಂದ್ಕಂಡಿದ್ಲು.ಇದೇ ಹೊತ್ತಿಗೆ ನಾಗರಪಂಚಮಿಗೆ ಘಟ್ಟದ ಕೆಳ್ಗೆ ಮದ್ವಿ ಮಾಡಿಕೊಟ್ಟಿದ್ದ ತಂಗಿ ಶಾರ್ದೆ ಅಕ್ಕನ ಮನೆಗೆ ಬಂದವ್ಳು ಒಂದ್ ವಿಸ್ಯ ಅಕ್ಕನ ಕಿವೀಲಿಟ್ಲು. ‘ ಅಲ್ವೆ ಅಕ್ಕಾ, ಹೆಂಗೂ ಪಾರೂ ಮದ್ವಿ ಮಾಡ್ಬೇಕು ಅಂತಿವಿ ಅಲ್ವೆ? ನಮ್ ಸುರೇಸ ಎಂತಾಗನೆ. ಚೆಂದಾಗಿ ದುಡಿತಿವ, ಪೈಟಾಗಿ ಮನಿ ಕಟ್ಗಂಡು ಅವ್ವಿ ಜೊತೀಲಿ ಅವ್ನೆ.ನೋಡುಕೂ ದಾಟ್ನೀಟ್ ಇವ. ನಾ ಒಂದ್ ಮಾತ್ ಹೇಳಿರೆ ಅಲ್ಲಾ ಅಂಬುದಿಲ್ಲ.ಪಾರೂಗೆ ಸರಿ ಹೋಯ್ತದೆ ಜೋಡಿ.ಯಾವ್ದುಕೂ ಕೇಳ್ನೋಡು’ ಅಂದಿದ್ಲು. ಈ ವಿಸ್ಯ ಕಿವಿಗೆ ಬಿದ್ದಿದ್ದೆ ಪಾರೂಗೆ ಸ್ವರ್ಗಕ್ಕೆ ಮೂರೇ ಗೇಣು! ಅವ್ಳ ಜೀಂವ್ ಮಾನ್ದಾಗೆ ಒಡಿದೀರ್ ಮನಿ ಬಿಟ್ರೆ ಎಲ್ಲೂ ಇರದಿದ್ದ ಫ್ಯಾನು- ಪೋನು ಎಲ್ಲಾ ಅವರ ಮನೀಲಿ ಚಿಕ್ಕಿ ಮನಿಗೆ ಬಂದಾಗ ನೋಡಿದ್ಲು.ಪಾರು ಗ್ರೀನ್ ಸಿಗ್ನಲ್ ಕೊಟ್ಟುಬಿಟ್ಟಳು.ಅಂತೂ ನಾಗಿ ದಿಬ್ಣ ತಗಂಬಂದು ಸುರೇಸನ ಕೈನಾಗೆ ಇಟ್ಟು ಧಾರಿ ನೀರು ಬಿಟ್ಟು ನಿರುಮ್ಮಳನಾದ್ಲು. ಮದುವಿ ಏನೋ ಮುಗೀತು.ರಾತ್ರಿ ಸೋಬ್ನದ ಸಾಸ್ತ್ರ ಮುಗಿಸಲು ಅವ್ವಿ, ದೊಡ್ಡ ಅಕ್ಕ ಉಳ್ಕಂಡಿರು.ಅಕ್ಕ ಚೆಂದಾಗಿ ಸೀರಿ ಉಡ್ಸಿ , ಮಲ್ಗಿ ಹೂವು ಮುಡಿಸಿದಳು.ಮುತೈದೆಯರು ಸೋಬ್ನದ ಹಾಡೇಳಿ , ಪಾರೂ ಕೈಲಿ ಹಾಲು ಕೊಟ್ಟು ಒಳ್ಗೆ ಕಳ್ಸಿರು. ಪಾರು ನಾಚುತ್ತ, ಬೆಳ್ಗಿಂದ ಒಂದ್ ಕಿತಾನೂ ನನ್ ಮೊಕ ನೋಡಿ ನಗ್ದಿರು ಈ ಆಸಾಮಿ ಹೆಂಗೋ ಏನೊ ಅಂತ ಢವಗುಟ್ತಿರು ಎದೆ ಬಡಿತನ ಹಿಡಿತದಲ್ಲಿಟ್ಗಂಡು ಒಳ್ಗ್ ಬಂದು ಚಿಲ್ಕ ಹಾಕಿ ತಲೆ ಬಗ್ಸಿ ಹಾಲಿನ ಲೋಟ ಮುಂದೆ ಹಿಡಿದ್ಲು.ಗಂಡ ಅನ್ನು ಪ್ರಾಣಿ ಲೋಟ ತಗಂಡು ಹಾಲ್ ಒಟ್ಟೂ ಕಡಿದ; ಸಿನಮಾದಲ್ಲೆಲ್ಲ ನೋಡು ಹಂಗೆ ತಂಗೂ ಒಂಚೂರು ಉಳಿಸಿ ಕೈ ಹಿಡಿದು ಎಳ್ಕಂಡು ತೊಡಿ ಮೇಗೆ ಕೂರ್ಸಗಂಡು ಕುಡಿಸ್ತಾನೆ ಅಂತ ಆಸೆಗಣ್ಣಿಂದ ನೋಡುತ್ರಿದ್ದವ್ಳಿಗೆ ಮೊದಲ ನಿರಾಸೆ. ಹಂಗೆ ಕುಡಿದವ್ನೆ ಹೆಂಡತಿಯ ಮೊಕ ನೋಡದೆ ಎಲ್ಲೆಲ್ಲೂ ನೋಡ್ತಾ ‘ ನೋಡು ಪಾರ್ವತಿ ನೀನು ಈ ಮಂಚದ ಮೇಗೆ ಮನಿಕ; ನಾ ಕೆಳ್ಗೆ ಚಾಪಿ ಹಾಕ್ಕಂಡು ಮನಿಕಂತಿ ‘ ಎಂದ.ಪಾರು ಏನೊಂದು ತಿಳಿಯದೆ’ ಯಂತಕ್ರ ಹಿಂಗಂತಿರಿ.ಮೈ ಹುಸಾರ್ ಇಲ್ವಾ? ನೀವು ಕೆಳ್ಗೆ ಮನಿಕಂಬುದು ಬ್ಯಾಡ.ಒಟ್ಗೆ ಮನಿಕಂಬ’ ಎನ್ನಲು ‘ ಬ್ತಾಡ, ನೀ ಮೇಗೆ ಮನಿಕ ‘ ಎಂದವನೆ ಮೂಲೆಲಿ ಚಾಪಿ ಹಾಕ್ಕಂಡು ಸುರುಟಿಕೊಂಡ.ಪಾರುಗೆ ಏನ್ ಮಾಡ್ಬೇಕು ತಿಳಿಲಿಲ್ಲ.ನಿರಾಸೆಯಿಂದ ಹಾಗೆ ಮಂಚದ ಮ್ಯಾಗೆ ಕುಳಿತಿದ್ದವ್ಳಿಗೆ’ ಲೈಟ್ ತೆಗಿ, ಮನಿಕ.ನಂಗೆ ನಿದ್ದಿ ಬರುದಿಲ್ಲ’ ಎಂದು ಮಗ್ಗಲು ಬದಲಿಸಿದ.ಪಾರೂಗೆ ಉಟ್ಡಿದ್ದ ಸೀರಿ, ಮಲ್ಗಿ ದಂಡಿ ಸಾವಿರ ವಿಷದ ಹಾವು ಕಡಿದಂತಾಗಿ ಅಳು ಒತ್ತರಿಸಿ ಬಂದು ಹಾಗೇ ಮಂಚದ ಮ್ಯಾಗೆ ಬಿದ್ದುಕೊಂಡಳು.
ದಿನವೂ ಬಯಕೆಯ ಭಾರದಿಂದ ಕೋಣೆ ಸೇರುವ ಪಾರೂಗೆ ದಿನವೂ ನಿರಾಸೆ.ಅವನಲ್ಲಿ ಅನು ಇಲ್ಲ ಮುನು ಇಲ್ಲ.ತಿಂಗಳು ಎರಡು ಮೂರು ಕಳೀತು.ಒಂದಿನ ಪಾರೂನ ಬಯಕೆ, ಆಕ್ರೋಶ ಎಲ್ಲಾ ಮೇಳೈಸಿ ಒಂದ್ ನಿಕ್ಕಿ ಮಾಡುದೇಯ ಅಂಬು ಗಟ್ಟಿ ಮನ್ಸ್ ಮಾಡಿ ಚಿಲ್ಕ ಹಾಕಿದವ್ಳೆ ಗಂಡನ ಕೊರಳಿಗೆ ಜೋತು ಬಿದ್ದಳು. ಗಟ್ಟಿಯಾಗಿ ತಬ್ಬಿಕೊಂಡು ಮಂಚಕ್ಕೆ ಎಳೆದಳು.ಅಷ್ಟೇ ಶಾಂತವಾಗಿ ಹೆಂಡತಿಯ ಕೈ ಸರಿಸಿ ದೂರ ಸರಿದ. ಒತ್ತರಿಸಿ ಬಂದ ಆವೇಶ,ಅವಮಾನದಿಂದ ‘ ಹೇಳಿ, ಎಂತಕೆ ನನ್ ಕಿತ ಮನಿಕಂಬುದಿಲ್ಲ.ನೋಡುಕೆ ದಾಂಡಿಗನ ಹಾಂಗಿವ್ರಿ. ನಾ ಎಂತಕ್ ಬ್ಯಾಡ? ನಂಗ್ ಯಾವ್ದು ಉತ್ತರ ಹೇಳಿ.ಮೂರ್ ತಿಂಗ್ಳಾಯ್ತೆ ಬಂತು.ಒಂದ್ ಕಿತ ಮುಟ್ಲಿಲ್ಲ ಕಿಟ್ಲಿಲ್ಲ.ಹಿಂಗೆ ಇರುದಾಗಿರೆ ಎಂತ ಸುಡುಕೆ ನನ್ ಮದ್ವಿ ಮಾಡಕಂಡಿರಿ ಹೇಳಿ’ ಎಂದು ಗಂಡನ ಹೆಗಲು ಹಿಡಿದು ಜಗ್ಗಿದಳು. ‘ ನೋಡು, ನಂಗೆ ದಾಡಿ ಆಗದೆ.ನಾ ನಿನ್ ಕಿತ ಮನಿಕಂಬುಕಾಗುದಿಲ್ಲ. ನೀ ಹಿಂಗೆ ಗೌಜು, ಗಲಾಟಿ ಮಾಡುದಾರೆ ನಾ ಎಲ್ಲಾರೂ ಮನಿ ಬಿಟ್ಟು ಹೋಯ್ತೆ; ನೀ ಅವ್ವಿ ನೋಡ್ಕಂಡು ಮನಿಲಿರು. ನಿಂಗೆ ಇಲ್ಲಿ ಇರುಕೆ ಮನ್ಸಿಲ್ಲ ಅಂದ್ರೆ ನಿನ್ ಅವ್ವಿ ಮನಿಗೆ ಬೇಕಾರೆ ಹೋಗು.ನಾ ಬ್ಯಾಡ ಅಂಬುದಿಲ್ಲ.ಮತ್ತ್ ಈ ವಿಸ್ಯದಾಗೆ ಮಾತಾಡ್ ಬ್ಯಾಡ’ ಹೀಗಂದವ್ನೆ ಕೆಳ್ಗೆ ಚಾಪಿ ಮೇಲೆ ಬಿದ್ಗಂಡು ಚಾದ್ರ ಮುಚ್ಗಂಡ. ಪಾರೂನ ಕನಸು, ಆಸಿ ಎಲ್ಲಾ ಮಣ್ ಪಾಲಾಗಿ ಮಂಚದ ಮ್ಯಾಗೆ ಬಿದ್ಗಂಡು ಬಿಕ್ಕಳಿಸುತ್ತಲೆ ಇದ್ಲು.ಬೆಳ್ಗುಂಸರಿಗೆ ಐದ್ ಗಂಟಿಗೆ ಎದ್ ಸಪ್ಪಿಗ್ ಹೋಗ್ವವ ಒಂದ್ ಕಿತ ಹೆಂಡತಿ ಕಡಿಗೆ ನೋಡ್ದ. ಒಂದ್ ಮೂಲೆಲಿ ಮುರುಟುಕೊಂಡಿದ್ದ ಹೆಂಡತಿನ ಎತ್ತಿ ಸರಿಯಾಗಿ ಮಲಗ್ಸಿ ತಲಿ ಕೂದ್ಲ ಸರಿ ಮಾಡಿ ಚಾದ್ರ ಹೊದಿಸ್ದ.ಪಾರು ಕಣ್ ಬಿಟ್ಲು.ಕೆನ್ನೆ ಸವರಿ ಹೊರಟ. ದಿನ ಉರುಳ್ತಾ ಇತ್ತು. ಈಗ ಪಾರೂಗೆ ಪಕ್ಕಾ ತನ್ನ ಗಂಡಗೆ ಏನೊ ತೊಂದರಿ ಅದೆ,ಅದ್ಕೆ ನನ್ ಮುಟ್ಟುದಿಲ್ಲ ಅನ್ನುದು ಗೊತ್ತಾಗಿದು. ಹಾಂಗೂ ಕೊನಿ ಆಸೆ ಅಂಬು ಹಂಗೆ ಯಾವ್ದಾದ್ರೂ ಡಾಕ್ಟರ್ ಹತ್ರ ತೋರಿಸ್ಕಂಬ, ನಾನೂ ಬತ್ತಿ ಎಂದ್ಲು.ಊಹುಂ, ಏನೂ ಪ್ರಯೋಜನ ಆಗ್ಲಿಲ್ಲ.ವಿಸ್ಯ ಚಿಕ್ಕಿ ಶಾರ್ದೆ ಕೆಮಿಗೂ ಬಿತ್ತು.ಅವ್ರೂ ಹೇಳಿ – ಕೇಳಿ ನೋಡಿದ್ರು. ಏನೂ ಹೆಚ್ಚು ಕಮ್ಮಿ ಆಗ್ಲಿಲ್ಲ.ದಿನ ,ವರ್ಸ ಉರುಳ್ರಾ ಇತ್ತು. ಪಾರು ಎದೆಯಲ್ಲಿ ಬಯಕೆ ದಿನ ದಿನವೂ ಹೆಡೆ ಎತ್ತಿ ಬುಸುಗುಡುತ್ತಿತ್ತು. ದೇಹ ನಿರಾಸೆಯಿಂದ ಕೃಶವಾಗುತ್ತಿತ್ತು.
ಈ ನಡುವೆ ವರ್ಷದ ದೀಪಾವಳಿ ಬಂತು.ಸುರೇಸ ಹೆಂಡತಿಗೆ ಕಾಲಿಗೆ ಗೆಜ್ಜೆ, ಎರ್ಡ್ ಸೀರಿ ತಂದ್ಕೊಟ್ಟ. ಮೊದಲ ಹಬ್ಬಕೆ ಅವ್ವಿ ಮನಿಗೂ ಕರ್ಕೊಂಡೋಗಿ ಬಂದ.ಆ ದಿನ ರಾಜ್ ಕುಮಾರ್ ಸಿನಿಮಾ ನೋಡಿ ಅಶಾಂತಿಯಿಂದ ಕೂತಿದ್ದವ್ಳಿಗೆ ಸಂಜಿನಪ್ಪಗೆ ಬರ್ಬೇಕರೆ ಒಂದು ಪೊಟ್ಲೆ ಕೈಗಿತ್ತು’ ಏ ಪಾರು, ಇದ್ರಲ್ಲಿ ಬಿಸಿ ಬಿಸಿ ನೀರುಳ್ಳಿ ಬಜ್ಜಿ ಅದೆ.ಅವ್ವಿಗೆ ಕೊಟ್ಗಂಡು ತಿನ್ನು.ನಾ ಮಿಂದ್ಕ ಬತ್ತೆ.ಒಂದ್ ಕಪ್ ಖಡಕ್ ಚಾಯಿ ಮಾಡು’ ಎಂದ.ಪಾರೂನ ಮನಸ್ಸು ಮತ್ತೆ ಮೆದುವಾಯ್ತು.ಇಂತ ಗಂಡನ್ನ ಬಿಟ್ಟು ಎಲ್ ಹೋಗ್ತಾಳೆ.ವಯಸ್ಸಾದ ಅವ್ವಿ,ಅಕ್ಕಂದಿರಿಗೆ ಹೆಂಗ್, ಏನ್ ಹೇಳ್ತಾಳೆ ಪಾಪ! ಇಲ್ಲ ಪಾರೂ ಗಟ್ಟಿ ನಿರ್ಧಾರ ಮಾಡಿ ಆಗಿದೆ. ಇರು ಕಿತಾ ಇಲ್ಲೆ , ಹಿಂಗೆ ಇರೂದು ಅಂತ. ಗಂಡನ್ ಮೇಲೆ ಕನಿಕರ ತೋರ್ತಾಳೆ.ಅತ್ಯಮ್ಮನ ಸೇವೆ ಮಾಡ್ತಾಳೆ. ಅಕ್ಕಂದಿರ ಇಬ್ರು ಮಕ್ಕಳ ಓದ್ಸುಕೆ ಮನಿಲಿಟ್ಕಂಡಳೆ.ನೋಡೋರ ಕಣ್ಣಗೆ ಚೆಂದದ ಜೋಡಿ; ಒಳಗಿನ ಗುಟ್ಟು ಸಿವ್ನೆ ಬಲ್ಲ.ಪಾರೂ ಶ್ರೀಗಂಧದ ಕೊರಡಿನ ಹಾಗೆ ಜೀವ ತೇಯ್ತಿದ್ದಾಳೆ; ಒಳಗೊಳಗೆ ಬಾಡಿ ಬಸವಳಿತಿದ್ದಾಳೆ.
****************************