ಕವಿತೆ
ಶುಭ ದೀಪಾವಳಿ
ಮುರಳಿ ಹತ್ವಾರ್
ಒಣಗುವ ಮುನ್ನವೇ ಉದುರಿದ
ಹಸಿ-ಹಸಿಯ ಎಲೆಗಳ ರಾಶಿ
ಇಬ್ಬನಿಯ ತಬ್ಬಿದ ನೆಲವ ತುಂಬಿದೆ
ಯಾವ ಹಸಿವಿನ ಹೊಟ್ಟೆಯ ಹೊಂಚೋ?
ನಡುಗುತ ಸೊರಗಿವೆ ಬೋಳು ಮರಗಳು
ಆಳದ ಬೇರಿಗೂ ಕರಗಿ ಹೋಗುವ ಚಿಂತೆ
ಯಾವ ಕಾರಿರುಳ ರಕ್ಕಸ ಸಂಚೋ ?
ಹಣತೆ ಹಣತೆಗಳ ಕಿರಣಗಳ ಬಾಣ
ಬಂಧಿಸಲಿ ಭಯದ ಎಲ್ಲ ನೆರಳುಗಳ,
ಹೊಸೆದ ಬೆಳಕಿನ ಶರ ಪಂಜರದಲಿ
ಒಲುಮೆಯ ಅಭಯದ ಆ ಬಯಲಲಿ
ಮತ್ತೆ ಚಿಗುರಲಿ ಬಯಕೆಯ ಹಸಿರು
ಹೊಸ ನಗೆಯ ತುಂಬಿ ಮುಖ ಪಂಕಜದಲಿ
*******************