ಕವಿತೆ
ವಿರಹ ತಾಪ
ನಿ.ಶ್ರೀಶೈಲ ಹುಲ್ಲೂರು
ತಿರುತಿರುಗಿ ಒರಗುತಿದೆ
ಭಾವಲಹರಿಯ ಬುಗುರಿ
ನಲಿವಿನಲು ಹಸಿಗಾಯ
ಹೀಗೇಕೆ ಎದೆ ನಗರಿ ?
ಎನಿತೆನಿತೊ ಆಸೆಗಳ
ಹೊತ್ತ ಒಡಲಿನ ತುಡಿತ
ನಿನ್ನೊಲವಿನಮಲಿನಲೆ
ತೊಪ್ಪೆಯಾಗಿದೆ ಮಿಡಿತ
ಬಾನು ರಂಗೇರಿದರು
ಬಿಡದು ಕಡಲಿನ ಮೊರೆತ
ಕತ್ತಲೆಯನಪ್ಪಿದ ಕಣ್
ಬೆಳಕಲು ನೆನಪಿನದೆ ಇರಿತ
ಹಿಡಿದಷ್ಟು ಉಕ್ಕುವುದು
ಹಾಲ ನೊರೆಯಂತೆ
ನೀನಿರದ ಈ ಬದುಕು
ನೀರಿರದ ಕೆರೆಯಂತೆ
ಬಳಲಿದರು ತೆವಳುತಿದೆ
ನಿನ್ನೆಡೆಗೆ ಈ ದೇಹ
ಅದಾವ ಪರಿ ಸೆಳೆದೆ ನೀ
ನರಳುತಿದೆ ಮೋಹ
ಸುಖದ ಸುಗ್ಗಿಯನೆಲ್ಲ
ಮಾಡುತಿಹೆ ಕನಸಿನಲಿ
ಹುರಿದು ಮುಕ್ಕುವೆ ಏಕೆ
ಸೊಗಸಿರದ ಮನಸಿನಲಿ
ಕಂಕಣಬಲವಿಲ್ಲೆನಗೆ ನೀ
ನೋಡಿ ಬಂದು ಬಿಡು
ಬರದಿದ್ದರೆ ಬೇಗ ಕೈ
ಯಾರೆ ಕೊಂದು ಬಿಡು
**********************************