ಕಥಾಗುಚ್ಛ

ಜೀವನವೆಂದರೆ ಹೀಗೇನೆ

ಟಿ.ಎಸ್.ಶ್ರವಣಕುಮಾರಿ

ಪುಟ್ಟ ದೀಪೂಗೆ ಇವತ್ತು ಶಾಲೆಯಿಂದ ಬರುವಾಗಲೇ ಎರಡು ರೆಕ್ಕೆ ಹುಟ್ಟಿಕೊಂಡು ಬಿಟ್ಟಿತ್ತು. ಯಾವಾಗಲೂ ತನ್ನನ್ನು ಎರಡನೆಯ ಸ್ಥಾನಕ್ಕೆ ತಳ್ಳುತ್ತಿದ್ದ ಪುನೀತನನ್ನು ಅವನು ಎರಡನೆಯ ಸ್ಥಾನಕ್ಕೆ ಕಳಿಸಿ ತಾನು ಅವನ ಜಾಗದಲ್ಲಿ ಹೆಮ್ಮೆಯಿಂದ ನಿಂತಿದ್ದ. ಟೀಚರ್ ಮಾರ್ಕ್ಸ್ ಕಾರ್ಡ್ ಕೊಡೋವಾಗ ಪುನೀತನ ಮುಖ ನೋಡ್ಬೇಕಿತ್ತು. `ತಾನೇ ಫಸ್ಟ್ ಬರೋದು ಅನ್ನೋ ಜಂಭ… ಬೀಗ್ತಾ ಎಲ್ಲರ ಕಡೆ ನೋಡ್ತಾ ಇದ್ದ. ಆದರೆ ತನ್ನ ಹೆಸರು ಹೇಳಿದ ತಕ್ಷಣ ಅವನ ಮುಖ ಹೇಗಾಗಿ ಹೋಯಿತು…. ಹಾ! ಹಾ! ಹಾಗೇ ಆಗಬೇಕು ಅವನಿಗೆ. ಇನ್ನು ಯಾವತ್ತೂ ನಾನು ಈ ಜಾಗ ಬಿಟ್ಟು ಕೊಡಬಾರದು. ಅಪ್ಪ ಹೇಳಿದ್ದು ನಿಜ.. ಫಸ್ಟ್ ಬರೋದ್ರ ಖುಷೀನೇ ಬೇರೆ…. ಹೀಗೇ ಉತ್ಸಾಹದ ಕುದುರೆಯ ಬೆನ್ನೇರಿ ಗಾಳಿಯಲ್ಲಿ ತೇಲುತ್ತಾ ಬಂದಂತೆ ಮನೆಗೆ ಬಂದ.

ಬಾಗಿಲ ಹತ್ತಿರ ಬರುತ್ತಿರುವಾಗಲೇ ಕೂಗಿಕೊಂಡ ಅಮ್ಮಾ ಇವತ್ತು ಏನು ಸ್ಪೆಷಲ್ ಹೇಳು ನೋಡೋಣ’’.ಏನು ಸ್ಪೆಷಲ್ಲೂ? ಯಾರ್ದಾ ದ್ರೂ ಹುಟ್ಟಿದ ಹಬ್ಬ ಇತ್ತಾ? ಕ್ಯಾಡ್ಬರೀಸ್ ಚಾಕಲೇಟ್ ಕೊಟ್ರಾ?’’ ಕೇಳಿದಳು ಸುಮಿತ್ರ. ಹೋಗಮ್ಮ ಅದಲ್ಲ. ಕೇಳಿದ್ರೆ ನೀನೇ ಕೊಡಿಸಲ್ವಾ ಚಾಕಲೇಟ್‌ನ. ಇನ್ನೂ ಬೇರೆ ಏನೋ ಬೇಗ ಹೇಳು’’. ಈಗ ಅವನ ಮುಖವನ್ನು ಸರಿಯಾಗಿ ಗಮನಿಸಿದಳು - ಕಣ್ಣು ಹೊಳೆಯುತ್ತಿದೆ, ಮುಖದಲ್ಲಿ ಸಂತೋಷವನ್ನು ಬಚ್ಚಿಡಲು ಅವನಿಂದ ಸಾಧ್ಯವೇ ಆಗುತ್ತಿಲ್ಲ... ಸರಿ ಹಾಗಾದ್ರೆ. ನೀನು ಯಾವುದೋ ಸ್ಪರ್ಧೇಲಿ ಬಹುಮಾನ ತೊಗೊಂಡಿದೀಯ.. ಎಷ್ಟನೇ ಬಹುಮಾನ’’ ಅವನ ಕೆನ್ನೆ ಹಿಂಡುತ್ತಾ ಕೇಳಿದಳು. ಉತ್ತರ ಅರ್ದ ಸರಿ ಅರ್ದ ಸರಿ ಅಲ್ಲ’’ ಅವನು ಜಾಣತನವಾಗಿ ನುಡಿದ.ಹಾಗಂದರೇನೋ’’ ಅರ್ಥವಾಗದವಳಂತೆ ಅವನ ಮುಖವನ್ನೇ ನೋಡಿದಳು. ಈಗ ಬಾಯ್ಬಿಟ್ಟ ಜಾಣ ಈ ಸಲ ನಾನೇ ಕ್ಲಾಸಿಗೆ ಫಸ್ಟ್ ಗೊತ್ತಾ. ಪುನೀತಂಗೆ ನನಗಿಂತ ಐದು ಮಾರ್ಕು ಕಮ್ಮಿ. ಅಪ್ಪ ಯಾವಾಗ್ಲೂ ಹೇಳ್ತಿದ್ರಲ್ಲಾ `ನೀನು ಫಸ್ಟ್ ಬಂದ್ರೇನೇ ನಾನು ಮಾರ್ಕ್ಸ್ ಕಾರ್ಡ್ಗೆ ಸೈನ್ ಮಾಡೋದು. ಇಲ್ದೇ ಇದ್ರೆ ಅಮ್ಮನ ಕೈಲೇ ಮಾಡಿಸ್ಕೊಂಡು ಹೋಗೂಂತ. ಈ ಸಲ ನೋಡು ನಾನು ಅವರ ಕೈಲೇ ಹಾಕಿಸ್ಕೊಂಡು ಹೋಗ್ತೀನಿ. ಇಲ್ನೋಡು’’ ಏನೋ ರಾಜ್ಯ ಗೆದ್ದು ಬಂದವರ ಹೆಮ್ಮೆಯಿಂದ ಬ್ಯಾಗಿನಿಂದ ಹುಷಾರಾಗಿ ಮಾರ್ಕ್ಸ್ ಕಾರ್ಡನ್ನು ತೆಗೆದು ಅಮ್ಮನಿಗೆ ತೋರಿಸುತ್ತಾ ಫಸ್ಟ್ ಎಂದು ಬರೆದಿದ್ದರ ಮೇಲೆ ಮುದ್ದಾಗಿ ಬೆರಳಿಡುತ್ತಾ ಹೇಳಿದ.ಆಯ್ತಾಯ್ತು. ಈಗ ಷೂ ಬಿಚ್ಚಿ, ಯೂನಿಫಾರಂ ಬದಲಾಯಿಸಿಕೊಂಡು ಕೈಕಾಲು ತೊಳೆದುಕೊಂಡು ಬಾ. ತಿಂಡಿ ತಿಂದು ಹಾಲು ಕುಡೀವಂತೆ. ಅಪ್ಪನಿಗೂ ಇವತ್ತು ತುಂಬಾ ಖುಷಿಯಾಗತ್ತೆ’’ ಎನ್ನುತ್ತಾ ಅವನ ಬ್ಯಾಗನ್ನು ತೆಗೆದುಕೊಂಡು ಒಳಗೆ ಹೋದಳು.

ತಿಂಡಿ ತಿನ್ನುವಾಗಲೂ ಅವನಿನ್ನೂ ತನ್ನ ಸಾಧನೆಯ ಗುಂಗಿನಿಂದ ಹೊರಗೆ ಬಂದಿರಲಿಲ್ಲ. ಅಮ್ಮ…, ಅಪ್ಪನಿಗೆ ಇವತ್ತು ತುಂಬಾ ಖುಷಿಯಾಗತ್ತೆ ಅಲ್ವಾ? ನನ್ನ ಅವರ ತೊಡೆ ಮೇಲೆ ಕೂರಿಸಿಕೊಂಡು ಮುದ್ದು ಮಾಡ್ತಾರೆ. ನಾನು ಅವರ ಹತ್ರ ಒಂದು ಟೆಂಪ್ಟೇಷನ್ ಚಾಕೊಲೇಟ್ ತೆಗೆಸಿಕೊಳ್ಳುತ್ತೀನಿ. ಖಂಡಿತಾ ಕೊಡಿಸ್ತಾರೆ ಅಲ್ವಾ’’ ಅವನ ಮಾತಿನ ಪ್ರವಾಹ ನಿಲ್ಲುತ್ತಲೇ ಇಲ್ಲ.ಹ್ಞೂಂ. ಸರಿ. ಅವರು ಬಂದ ಮೇಲೆ ಖಂಡಿತಾ ಕೊಡಿಸ್ತಾರೆ. ಈಗ ನಿನ್ನ ಫ್ರೆಂಡ್ಸ್ ಕಾಯ್ತಿರ್ತಾ ರೆ. ಆಟ ಆಡಕ್ಕೆ ಹೋಗು’’ ಎಂದಳು. ಅಪ್ಪನ ಹತ್ತಿರಾ ಏನೋ ಚಾಕೊಲೇಟ್ ಕೊಡಿಸ್ಕೋತೀನಿ. ನೀನು ನಂಗೆ ಏನು ಮಾಡ್ಕೊಡ್ತೀಯ’’ಹೇಳು ಏನು ಮಾಡ್ಕೊಡ್ಲಿ?’’ ಜಾಮೂನು ಮಾಡ್ತೀಯಾ? ರಾತ್ರಿ ಊಟದ ಜೊತೆ ತಿನ್ನೋಣ’’ಆಯ್ತು ಹಾಗೇ ಮಾಡೋಣ’’ ಇನ್ನೂ ಅವನ ಉತ್ಸಾಹ ಕಮ್ಮಿಯಾಗಿಲ್ಲ ನೋಡು ನಾನೇನ್ಮಾಡ್ತೀನಿ ಗೊತ್ತಾ. ಪ್ರತಿಸಲದ ಹಾಗೆ ಸುಮ್ಮನೆ ಮಾರ್ಕ್ಸ್ ಕಾರ್ಡ್ ಇಟ್ಟುಕೊಂಡು ನಿಂತರ್ತೀ್ನಿ. ಅಪ್ಪ `ಮತ್ತೆ ಅದೇ ತಾನೇ ನಾನು ಸೈನ್ ಮಾಡಲ್ಲ ಹೋಗು; ಅಮ್ಮನ ಹತ್ರ ಮಾಡಿಸ್ಕೋ’ ಅಂತಾರೆ. ಆಗ ನೀನು ಹೇಳ್ಬೇಕು. ಇಲ್ಲಾ ಈಸಲ ಫಸ್ಟ್ ಬಂದಿದಾನೇಂತ. ಆಗ ಅವರಿಗೆ ಎಷ್ಟು ಖುಷಿಯಾಗತ್ತೆ...’’ ಅವನು ರಂಗ ಸಜ್ಜಿಕೆಯನ್ನು ಮಾಡತೊಡಗಿದ.ಹಾಗೇ ಆಗ್ಲಿ. ಈಗ ಆಡಕ್ಕೆ ಹೋಗು. ನಾನೂ ಜಾಮೂನು ಮಾಡಿ ಇಡ್ತೀನಿ. ಫ್ರೆಂಡ್ಸ್ ಕಾಯ್ತಿದಾರೆ’’ ಎನ್ನುತ್ತಾ ಅವನನ್ನು ಕಳಿಸಿ ಜಾಮೂನು ಮಾಡಲು ಒಳಗೆ ಹೋದಳು.

ದೀಪು ಇವತ್ತು ಎಷ್ಟು ಖುಷಿಯಾಗಿದಾನೆ. ಸಧ್ಯ ಅವರಪ್ಪನಿಗೆ ಇವತ್ತಾದರೂ ಸಮಾಧಾನವಾಗತ್ತೆ. ಪ್ರತಿಸಲ ಇವನು ಮಾರ್ಕ್ಸ್ ಕಾರ್ಡ್ ತಂದಾಗಲೂ ಇವರದ್ದು ಒಂದೇ ತಕರಾರು. “ಇನ್ನೂ ಒಂದು ನಾಲ್ಕೈದು ಮಾರ್ಕ್ ಹೆಚ್ಚಿಗೆ ತೊಗೊಳ್ಳೋಕೆ ಏನು ಧಾಡಿ. ಏನು ಕಮ್ಮಿ ಮಾಡಿದೀವಿ ನಿಂಗೆ. ಶ್ರದ್ಧೆಯಿಂದ ನೀನು ಓದಿದ್ರೆ ಬರಲೇಬೇಕು. ನೀನು ಶುದ್ಧ ಸೋಂಭೇರಿ. ಹೀಗೇ ಓದ್ತಾ ಇದ್ರೆ ನೀನು ಖಂಡಿತಾ ಉದ್ಧಾರ ಆಗಲ್ಲ…. ನಾನು ಮಾತ್ರ ಇದಕ್ಕೆ ಸೈನ್ ಮಾಡಲ್ಲ. ನೀನು ಯಾವತ್ತು ಕ್ಲಾಸಿಗೆ ಫಸ್ಟ್ ಬರ್ತೀ ಯೋ ಆ ಮಾರ್ಕ್ಸ್ ಕಾರ್ಡ್ಗೇ ನಾನು ಸೈನ್ ಹಾಕೋದು. ಅಲ್ಲಿಯವರೆಗೆ ನಿಮ್ಮಮ್ಮನ ಹತ್ರಾನೇ ಹಾಕಿಸ್ಕೊಂಡು ಹೋಗು’’ ರಾಮ ರಾಮಾ ಅವರ ಕೋಪ ಬೇಗ ತಣ್ಣಗಾಗುತ್ತಲೇ ಇರಲಿಲ್ಲ. ಅವರ ಸಿಟ್ಟಿಗೆ ಇನ್ನೊಂದು ಕಾರಣ ಕ್ಲಾಸಿಗೆ ಫಸ್ಟ್ ಬರುತ್ತಿದ್ದ ಪುನೀತನ ಅಪ್ಪ ದುರಾದೃಷ್ಟವಶಾತ್ ಆಫೀಸಿನಲ್ಲಿ ಇವರ ಕೈಕೆಳಗಿನ ನೌಕರ. ಅವನ ಮುಂದೆ ತನ್ನ ಪ್ರತಿಷ್ಠೆಗೆ ಕುಂದೆಂಬ ಭಾವ ಬೇರೆ. ಅವನಾದರೂ ಸುಮ್ಮನಿರಬಾರದೆ. ಪ್ರತಿಸಲವೂ `ಮಾರ್ಕ್ಸ್ ಕಾರ್ಡ್ ನೋಡಿದ್ರಾ ಸಾರ್’ ಅಂತ ಸಹಜವಾಗೋ, ವ್ಯಂಗ್ಯವಾಗೋ ಅಂತೂ ಕೇಳುತ್ತಾನೆ. ಇವರಿಗೆ ಮೈಯೆಲ್ಲಾ ಉರಿದುಹೋಗುತ್ತೆ. ಮನೆಗೆ ಬಂದ ಮೇಲೆ ಅದರ ಮೊದಲ ಪರಿಣಾಮ ಅವನ ಮೇಲೆ; ಆಮೇಲೆ ನನ್ನ ಮೇಲೆ. “ನಿನ್ನ ಮುದ್ದಿಂದಾನೇ ಅವ್ನು ಹಾಳಾಗಿ ಹೋಗ್ತಿರೋದು. ನೀನು ಅವನಿಗೆ ಶಿಸ್ತು, ಶ್ರದ್ಧೆ ಕಲಿಸಲ್ಲ. ನೀನೇ ಅವನ ಮೊದಲ ಹಿತಶತ್ರು…’’ ಹೀಗೆಲ್ಲಾ ಆಪಾದನೆ.

ಎಷ್ಟೋ ಸಲ ಹೇಳಿದ್ದೇನೆ ಅವನ ವಯಸ್ಸೆಷ್ಟು? ಅವನಿಗೆ ಎಷ್ಟು ಸಾಧ್ಯವೋ ಅಷ್ಟು ಓದುತ್ತಾನೆ. ಅವನ ಮೇಲೆ ಯಾವುದನ್ನೂ ಅಷ್ಟೊಂದು ಬಲವಂತವಾಗಿ ಹೇರಬೇಡಿ. ಅವನೇನೂ ಫೇಲಾಗುತ್ತಿಲ್ಲವಲ್ಲ. ಸೆಕೆಂಡ್ ಬರುವುದೂ ಅಷ್ಟೊಂದು ಸುಲುಭವೇನಲ್ಲ. ಅಲ್ಲದೆ ಇಷ್ಟು ಚಿಕ್ಕ ಮಕ್ಕಳಲ್ಲಿ ಅಷ್ಟೊಂದು ಸ್ಪರ್ಧಾ ಮನೋಭಾವ ಬೆಳೆಸುವುದು ಒಳ್ಳೆಯದಲ್ಲ’’ ಈ ಮಾತುಗಳನ್ನು ದೀಪು ಎದುರಿನಲ್ಲಿ ಇಲ್ಲದಾಗ ಪ್ರತಿಸಲವೆನ್ನುವಂತೆ ಹೇಳಿದ್ದೇನೆ. ಅವರಿಗೆ ಇಂತಹ ಮಾತುಗಳನ್ನು ಕೇಳಿದಾಗ ಇನ್ನೂ ಅಷ್ಟು ಕೋಪ ಜಾಸ್ತಿಯಾಗುತ್ತದೆ.ನೀನು ಈ ಮನೋಭಾವ ಇಟ್ಟುಕೊಂಡು ಬೆಳೆಸ್ತಾ ಇರೋದ್ರಿಂದಲೇ ಅವನು ಮೇಲೆ ಬರ್ತಾ ಇಲ್ಲ. ನೀನೇ ಅವನ ಓದಿಗೆ ಮೊದಲ ಶತ್ರು. ಪುನೀತನಿಗೆ ಸಾಧ್ಯವಾಗೋದು ಇವನಿಗ್ಯಾಕೆ ಆಗ್ತಿಲ್ಲ? ಅಲ್ಲಿಯವರೆಗೆ ಹೋದವನು ಒಂದು ನಾಲ್ಕೈದು ಮಾರ್ಕಿನಲ್ಲಿ ಎಡವುತ್ತಾನೆಂದರೆ ಅವನಲ್ಲಿ ಮುಂದೆ ಬರಬೇಕೆಂಬ ಹಟವಿಲ್ಲ. ಅಥವಾ ಅದನ್ನು ಪಡೆದುಕೊಳ್ಳುವ ನೈಪುಣ್ಯತೆ, ಚಾಕಚಕ್ಯತೆ, ಛಲ ಇಲ್ಲ. ಈಗಿನಿಂದ ಅದನ್ನು ಸರಿಪಡಿಸಿಕೊಳ್ಳದೇ ಹೋದರೆ, ಜೀವನದಲ್ಲಿ ಹೇಗೆ ಮುಂದೆ ಬರ್ತಾನೆ?’’ ಅವರು ಹೇಳುವುದೇನೋ ಸರಿ. ಆದರೆ ಇವನು ಇನ್ನೂ ಚಿಕ್ಕವನು ಎನ್ನುವ ಭಾವನೆ ನನ್ನಲ್ಲಿ. ತಂದೆಯಾಗಿ ನನ್ನ ಮಗ ಮುಂದಿರಬೇಕೆಂದು ನನಗೆ ಆಸೆ ಇರೋಲ್ವೆ ಎನ್ನುವ ಧೋರಣೆ ಇವರಲ್ಲಿ. ಸರಿ ಎಷ್ಟು ಮಾತಾಡಿದರೂ ಇದು ಮುಗಿಯದ ಚರ್ಚೆ ಎನ್ನುವುದು ನನಗರ್ಥವಾಗಿ ಹೋಗಿದೆ. ಆದರೂ ಪ್ರತಿಸಲ ಅವನ ಮಾರ್ಕ್ಸ್ ಕಾರ್ಡ್ ಬಂದಾಗ ಇದರ ಪುನರಾವರ್ತನೆಯೇ. ಸಧ್ಯ ಈಸಲ ಅದಕ್ಕೆ ಅವಕಾಶವಿಲ್ಲವಲ್ಲ ದೇವರೇ ಎಂದುಕೊಳ್ಳುತ್ತಾ ಸುಮಿತ್ರ ಮನದಲ್ಲಿಯೇ ದೇವರಿಗೆ ಕೈಮುಗಿದು ಜಾಮೂನನ್ನು ಮಾಡತೊಡಗಿದಳು.

ಅಮ್ಮ ಅಪ್ಪ ಇನ್ನೂ ಬರಲಿಲ್ವಾ’’ ಆರೂವರೆಗೆ ಎರಡೆರಡು ಮೆಟ್ಟಿಲನ್ನು ಒಟ್ಟೊಟ್ಟಿಗೆ ಹಾರುತ್ತಾ ಬಂದ ದೀಪು ಕೇಳಿದ.ಇಷ್ಟು ಬೇಗ ಯಾವತ್ತು ಬಂದರ್ತಾನರೆ. ಅವರು ಬರೋದು ಏಳೂವರೆಯಾಗುತ್ತೆ. ಅಲ್ಲಿಯವರೆಗೆ ಕೈಕಾಲು ಮುಖ ತೊಳೆದುಕೊಂಡು ದೇವರಿಗೆ ನಮಸ್ಕಾರ ಮಾಡಿ ಓದ್ತಾ ಕೂತುಕೋ ಹೋಗು’’ ಎನ್ನುತ್ತಾ ಕೈಲಿದ್ದ ಕೆಲಸವನ್ನು ಮುಂದುವರಿಸಿದಳು. `ಇವತ್ತು ಒಂದರ್ಧ ಘಂಟೆ ಕಂಪ್ಯೂಟರ್ ಆಡ್ಕೋತೀನಿ. ಅಪ್ಪ ಹೇಳಿದ್ರಲ್ವಾ ಕ್ಲಾಸಿಗೆ ಫಸ್ಟ್ ಬಂದ್ರೆ ಆಮೇಲೆ ಕಂಪ್ಯೂಟರಿನಲ್ಲಿ ಆಡಕ್ಕೆ ಬಿಡ್ತೀನಿ ಅಂತ. ಇವತ್ತು ಬಂದಿದೀನಲ್ಲ’’ ಆಸೆಯ ಕಂಗಳಿಂದ ನೋಡಿದ. ಅವನ ಮಾತು ಕೇಳಿ ನಗು ಬಂತುಸರಿ ಆಡ್ಕೋ ಹೋಗು ತುಂಬಾ ಹೊತ್ತು ಬೇಡ. ಒಂದರ್ಧ ಘಂಟೆ ಆಡಿ ಆಮೇಲೆ ಓದ್ಕೋ ಬೇಕು’ ಎನ್ನುತ್ತಾ ಪಾಸ್ ವರ್ಡ್ ಹಾಕಿ ಬಂದಳು. `ಸರಿ ಸರಿ’ ಅನ್ನುತ್ತಾ ಅವನು ಆಡಲು ಶುರುಮಾಡಿ ಅದರಲ್ಲೇ ಮುಳುಗಿ ಹೋದ. ಸುಮಿತ್ರೆಯೂ ಅಡುಗೆಮನೆಯ ಕೆಲಸದಲ್ಲೇ ಮಗ್ನಳಾಗಿ ಹೋದಳು.

ಕಾಲಿಂಗ್ ಬೆಲ್ ಸದ್ದಿನಿಂದಲೇ ಅದು ರಮೇಶನದೆಂದು ಅರ್ಥವಾಗಿ ಹೋಯಿತು ಸುಮಿತ್ರೆಗೆ. ಓ! ಆಗಲೇ ಕತ್ತಲಾಗಿ ಹೋಗಿದೆ ಅಂದುಕೊಂಡು ಪಡಸಾಲೆ, ವರಾಂಡದ ದೀಪವನ್ನು ಹಾಕಿ ಬಾಗಿಲು ತೆರೆದಳು. ಬರುವಾಗಲೇ `ಎಲ್ಲಿ ಅವನು? ಏನ್ಮಾಡ್ತಾ ಇದಾನೆ?’ ಬುಸುಗುಡುತ್ತಲೇ ಬಂದ ರಮೇಶ. ಅಪ್ಪನ ದನಿ ಕೇಳುತ್ತಲೇ ಬ್ಯಾಗಿನಿಂದ ಮಾರ್ಕ್ಸ್ ಕಾರ್ಡ್ ತೆಗೆದುಕೊಂಡು ದೀಪು ಹೊರಗೆಬಂದ. ಅಷ್ಟರಲ್ಲಿ ಅವನು ಕಂಪ್ಯೂಟರ್‌ನಲ್ಲಿ ಆಡ್ತಾ ಇದಾನೆ’’ ಸುಮಿತ್ರೆ ಮೆತ್ತಗೆ ಹೇಳುತ್ತಿದ್ದಳು. ಅವನ ಕೋಪಕ್ಕೆ ಇನ್ನಷ್ಟು ತುಪ್ಪ ಸುರಿದಂತಾಯಿತು.ಯಾರವನಿಗೆ ಕಂಪ್ಯೂಟರ್ ಪಾಸ್ ವರ್ಡ್ ಹಾಕಿ ಕೊಟ್ಟೋರು. ಒಂದು ಶಿಸ್ತು ಇಲ್ಲ, ಶ್ರದ್ಧೆ ಇಲ್ಲ. ಯಾವಾಗ ನೋಡಿದರೂ ಆಟ, ಆಟ, ಆಟ. ನೀನೂ ಅವನಿಗೆ ತಕ್ಕ ಹಾಗೆ ಕುಣೀತೀಯಾ.’’ ಕಿರುಚಿದ ಸಿಟ್ಟಿನಿಂದ. ದೀಪುವಿಗೆ ಹಿಂದೆ ಮುಂದೆ ಅರ್ಥವಾಗದೇ ಬೆಪ್ಪಾಗಿ ನಿಂತಿದ್ದ. ಅವನನ್ನು ನೋಡುತ್ತಲೇ ಮತ್ತಷ್ಟು ಕೆರಳಿದ ರಮೇಶ ಬೆನ್ನಿಗೊಂದು ಗುದ್ದಿದ. ಎಷ್ಟು ಸಲ ಹೇಳಿದೀನಿ ನಿಂಗೆ. ಸಾಯಂಕಾಲ ಏಳು ಘಂಟೆ ಆಗತ್ಲೂವೆ ಮನೆ ಮುಂದಿನ ದೀಪ ಹಾಕಬೇಕು. ನಾನು ಬರುವ ಹೊತ್ತಿಗೆ ಓದ್ತಾ ಕೂತಿರಬೇಕು ಅಂತ. ನೀನೇನ್ಮಾಡಿದೀಯ. ಆಟ ಆಡಿಕೊಂಡು ಬಂದು ಬ್ಯಾಟು ಬಾಲನ್ನು ಎಸೆದಿದೀಯ. ವರಾಂಡ ತುಂಬ ಬೂಟಿನ ಮಣ್ಣು… ಹಾಕಿದೀಯ ದೀಪ ಇವತ್ತು? ಹೇಳಿದ ಮಾತಿಗೆ ಒಂದಿಷ್ಟಾದರೂ ಬೆಲೆಯಿದೆಯಾ? ಜೀವನದಲ್ಲಿ ಶ್ರದ್ಧೆ ಇರಬೇಕು, ಶಿಸ್ತು ಇರಬೇಕು. ಇಲ್ದಿದ್ರೆ ಹಾಳಾಗಿ ಹೋಗ್ತೀಯ. ನಮ್ಮ ನಮ್ಮ ಕೆಲಸಾನ ಅಚ್ಚುಕಟ್ಟಾಗಿ ಮಾಡಿಕೊಂಡ್ರೆ ಮಾತ್ರ ಜೀವನದಲ್ಲಿ ಮುಂದೆ ಬರೋಕೆ ಸಾಧ್ಯ. ಇಲ್ದಿದ್ರೆ ಎಲ್ಲಾದರೂ ತಾಪೇದಾರಿ ಮಾಡ್ಕೊಂಡು ಜೀವನ ಮಾಡ್ಬೇಕು...’’ ಅವನ ಮಾತನ್ನು ತಡೆಯುತ್ತಾ ಸುಮಿತ್ರ ಹೇಳಿದಳುಸ್ವಲ್ಪ ಇಲ್ಲಿ ಕೇಳಿ ಇವತ್ತು ಏನಾಯ್ತೂಂದ್ರೆ….’’ ನೀನು ಬಾಯ್ಮುಚ್ಚು. ನಿನ್ನಿಂದಾನೇ ಅವನು ಕೆಟ್ಟು ಕುಲಗೆಟ್ಟು ಕೆರ ಹಿಡಿದು ಹೋಗಿರೋದು. ನಿನ್ನ ಪ್ರತಿಯೊಂದು ತಪ್ಪಿಗೂ ನಿನ್ನ ಹತ್ರ ಒಂದೊಂದು ಕಾರಣ ಇರತ್ತೆ; ಹಾಗೇ ಅವನ ತಪ್ಪಿಗೂ. ತಪ್ಪಿಗೆ ಕಾರಣ ಕೊಡೋದನ್ನ ಅವನಿಗೆ ಕಲಿಸಬೇಡ. ಅದನ್ನ ತಿದ್ದುಕೊಂಡು ಮುಂದೆ ಬರೋದಕ್ಕೆ ಅವನಿಗೆ ಅವಕಾಶ ಕೊಡು. ಮೊದಲು ನೀನು ಶಿಸ್ತು ಕಲಿ. ಆಗ ನಿನ್ನ ಮಗ ತಾನೇ ಕಲೀತಾನೆ.’’ಹಾಗಲ್ಲ ನಾನು ಹೇಳೋ ಒಂದು ಮಾತನ್ನ ನೀವು ಕೇಳಿ. ಅಮೇಲೆ ಕೂಗಾಡ್ತೀರಂತೆ’’ ಅವನಿಗೆ ಇನ್ನಷ್ಟು ರೇಗಿ ಹೋಯಿತು. “ಏನು? ಏನದು ಅಂತ ಮಾತು. ನಾನು ಎಷ್ಟು ಸಲ ನಿಂಗೆ ಹೇಳಿಲ್ಲ. ಅವನು ಕ್ಲಾಸಿನಲ್ಲಿ ಫಸ್ಟ್ ಬರೋತಂಕ ಕಂಪ್ಯೂಟರ್ ಮುಟ್ಟಕೂಡದು ಅಂತ. ನೀನು ಯಾಕೆ ಅವನಿಗೆ ಆಡಕ್ಕೆ ಹಾಕಿಕೊಟ್ಟಿದ್ದು? ತಾಯಿ, ಮಗ ಇಬ್ಬರೂ ಒಂದೇ. ನಿಮ್ಮಿಬ್ಬರ ದೃಷ್ಠೀಲಿ ನಾನೊಬ್ಬ ವಿಲನ್. ಈಗ ನಿಮಗೆ ನಾನು ಹೇಳೋದು ಅರ್ಥ ಆಗಲ್ಲ. ಬೈಯೋವ್ರು ಒಳಿತಿಗೆ ಬೈತಾರೆ ಅಂತ’’. ಸಿಡಿಮಿಡಿಗುಟ್ಟುತ್ತಲೇ ಬಟ್ಟೆ ಬದಲಾಯಿಸಲು ರೂಮಿಗೆ ಹೋದ ಮಾತನ್ನು ಅಲ್ಲಿಗೆ ಮುಗಿಸುವಂತೆ.

ದೀಪೂ ಆಡಬೇಕೆಂದಿದ್ದ ನಾಟಕ ನಿಜರೂಪದಲ್ಲೇ ನಡೆದು ಹೋಗಿತ್ತು. ಆದರೆ ಅಂತ್ಯ ಮಾತ್ರ ಬದಲಾಗಿತ್ತು. ಬೆನ್ನಿಗೆ ಗುದ್ದಿದಾಗ ಕೈಯಲ್ಲಿದ್ದ ಮಾರ್ಕ್ಸ್ ಕಾರ್ಡ್ ಮೂಲೆಗೆ ಹೋಗಿ ಬಿದ್ದಿತ್ತು. ಕಟ್ಟಿಕೊಂಡಿದ್ದ ರೆಕ್ಕೆಗಳು ಅವನ ಕಣ್ಣ ಮುಂದೆಯೇ ಮುರಿದು ಬಿದ್ದಿದ್ದವು. ಅಡುಗೆಮನೆಯ ಬಾಗಿಲಿಗೆ ಒರಗಿ ನಿಂತಿದ್ದ ಸುಮಿತ್ತೆಯ ಕಣ್ಣಲ್ಲಿ ನೀರಾಡಿತು. ಸೆರಗಿನಿಂದ ಅದನ್ನು ಒರೆಸಿಕೊಳ್ಳುತ್ತಾ ಕಾಫಿ ಬೆರೆಸಲು ನಡೆದಳು. ಮಾಡಿಟ್ಟಿದ್ದ ಜಾಮೂನು ಅವಳನ್ನು ಅಣಕಿಸತೊಡಗಿತು. ಅದನ್ನು ನೋಡಲಾಗದೆ ಫ್ರಿಜ್ಜಿನೊಳಗೆ ಸರಿಸಿದಳು. ಮೂಲೆಯಲ್ಲಿ ಬಿದ್ದಿದ್ದ ಮಾರ್ಕ್ಸ್ ಕಾರ್ಡನ್ನು ಎತ್ತಿಕೊಂಡು ದೀಪೂ ತನ್ನ ರೂಮಿನೊಳಗೆ ಹೋಗಿ ಬಾಗಿಲು ಮುಂದೆ ಸರಿಸಿದ. ಅದನ್ನು ಮತ್ತೊಮ್ಮೆ ನೋಡುವ ಮನಸ್ಸಾಗದೇ ಹಾಗೆಯೇ ಬ್ಯಾಗಿನೊಳಗೆ ತುರುಕಿಕೊಂಡ. ಯಾಕೋ ದುಃಖ ಒತ್ತರಿಸಿಕೊಂಡು ಬಂತು. ಸದ್ದಾಗದಂತೆ ಮನದಲ್ಲೇ ಬಿಕ್ಕತೊಡಗಿದ. ಹಾಲಿನಲ್ಲಿ ಟೀವಿಯನ್ನು ನೋಡುತ್ತಾ ಕುಳಿತಿದ್ದ ರಮೇಶ ತಾನು ಇಷ್ಟು ಬೈದಿದ್ದಕ್ಕೆ ಮಗ ಓದುತ್ತಾ ಕುಳಿತಿದ್ದಾನೆಂದು ನೆಮ್ಮದಿಯಿಂದ ವಾರ್ತೆಗಳನ್ನು ನೋಡುತ್ತಾ ಕುಳಿತ.

ಅಂದು ರಾತ್ರಿ ಊಟದ ಟೇಬಲ್ಲಿನಲ್ಲಿ ಯಾರ ಮಧ್ಯವೂ ಮಾತಿಲ್ಲ. ಬೇಜಾರಾದರೆ ಆಗಲಿ. ನಾನೇನು ಕೆಟ್ಟದ್ದು ಹೇಳುತ್ತೇನೆಯೇ. ಇವತ್ತು ಬೇಜಾರಾದರೂ ಪರವಾಗಿಲ್ಲ. ನಾಳೆ ಅವನು ಉದ್ಧಾರವಾಗುವುದು ತಾನೇ ನನಗೆ ಬೇಕು. ನನ್ನ ಈ ಕನ್ಸರ್ನ್ ಅವರಿಬ್ಬರೂ ಅರ್ಥ ಮಾಡಿಕೊಳ್ಳುತ್ತಾ ಇಲ್ಲ. ಹೇಳಿದ್ದನ್ನ ಬಲು ಹಗುರವಾಗಿ ತೆಗೆದುಕೊಳ್ಳುತ್ತಾರೆ. ನನಗೇನು ದ್ವೇಷವೇ ಮಗನನ್ನು ಕಂಡರೆ. ಇವಳಾದರೂ ಅಷ್ಟೆ. ಸದಾ ಮಗನ ಪರ ವಹಿಸಿ ಮಾತಾಡ್ತಾಳೆ. ತಾಯಿ ಪ್ರೀತೀನೇ ಇರಬಹುದು. ಆದ್ರೆ ಅದು ಅವನಿಗೆ ಮುಳುವಾಗ ಬಾರದಲ್ಲ. ಮಲಗಿದಾಗಲೂ ಅವನ ಮನಸ್ಸಿನಲ್ಲಿ ಈ ಚಿಂತನೆಗಳೇ ತುಂಬಿ ಬಿಟ್ಟವು.

ಕೆಲಸವೆಲ್ಲಾ ಮುಗಿಸಿ ದೀಪುವಿನ ಕೋಣೆಗೆ ಬಂದಾಗ ದೀಪವಾರಿತ್ತು. ಅಮ್ಮ ಬಂದಿದ್ದು ಗೊತ್ತಾದರೂ ಕಣ್ಣು ಮುಚ್ಚಿ ಮಲಗಿದಂತೆ ನಟಿಸಿದ. ಮೆಲ್ಲನೆ ಅವನನ್ನು ಪಕ್ಕಕ್ಕೆ ಸರಿಸಿ ಅವನ ಪಕ್ಕದಲ್ಲೇ ಉರುಳಿಕೊಂಡು ಹಗುರವಾಗಿ ಅವನನ್ನು ತಬ್ಬಿ ಹಿಡಿದುಕೊಂಡಳು. ತಡೆ ಹಿಡಿದ ದುಃಖವೆಲ್ಲಾ ಒಮ್ಮೆಲೇ ಹೊರಬಂದಂತೆ ಅವಳ ಕಣ್ಣಿಂದ ನೀರು ಜಾರಿ ಮಗನ ತಲೆ, ಮುಖವನ್ನು ತೋಯಿಸತೊಡಗಿತು. ಅದರೊಂದಿಗೆ ಅವನ ಕಣ್ಣ ಹನಿಗಳೂ ಅವಳಿಗೆ ಗೊತ್ತಾಗದಂತೆ ಸೇರಿಕೊಂಡವು. ಅವನಿಗೆ ತಿಳಿಯುತ್ತಿಲ್ಲವೆಂಬಂತೆ ಅವಳು, ಅಮ್ಮನಿಗೆ ತಿಳಿದಿಲ್ಲವೆಂಬಂತೆ ಅವನು ಪರಸ್ಪರ ಮೌನದಲ್ಲಿ ದುಃಖವನ್ನು ಹಂಚಿಕೊಂಡರು.

ಬೆಳಗ್ಗೆದ್ದು ಮಾಮೂಲಿನಂತೆ ಶಾಲೆಗೆ ರೆಡಿಯಾಗಿ ನಿಂತ ದೀಪು ಮಾರ್ಕ್ಸ್ ಕಾರ್ಡ್ನೊಂದಿಗೆ ಅಡುಗೆ ಮನೆಗೆ ಬಂದ. ಅಮ್ಮ ಸೈನ್ ಮಾಡಿ ಕೊಡಮ್ಮ’’ ಅಂದ.ಅಪ್ಪನ ಹತ್ತಿರ ಒಂದು ಸಲ ತೋರ್ಸು . ಅವ್ರು ನಿನ್ನೆ ಕೋಪದಲ್ಲಿದ್ರು. ಈಗ ಖುಷಿಯಾಗತ್ತೆ’’ ಮಗನ ತಲೆ ಸವರುತ್ತಾ ಹೇಳಿದಳು. ಬೇಡ ಬಿಡಮ್ಮ. ಯಾವಾಗ್ಲೂ ನೀನೇ ತಾನೇ ಹಾಕಿ ಕೊಡೋದು. ಈಗ್ಲೂ ಹಾಕಿ ಕೊಟ್ಬಿಡು. ತೊಗೊ ಪೆನ್ನು’’ ಮುಚ್ಚಳ ತೆಗೆದು ಕೊಟ್ಟ ಮತ್ತೇನೂ ಮಾತಾಡಲು ತೋಚದೆ ಸಹಿ ಹಾಕಬೇಕಾದ ಜಾಗದಲ್ಲಿ ಕೈಯಿಟ್ಟಳು. ತಿಂಡಿಯ ಜೊತೆಗೆ ಜಾಮೂನನ್ನೂ ಬಟ್ಟಲಿಗೆ ಹಾಕಿ ಕೊಟ್ಟಳು.ಅಮ್ಮ ಈಗ ಬೇಡ. ಸಾಯಂಕಾಲ ಬಂದು ತಿಂತೀನಿ. ಈಗ ಬರೀ ಎರಡು ಇಡ್ಲಿ ಸಾಕು’’ ಎನ್ನುತ್ತಾ ಅವಸರವಸರವಾಗಿ ತಿಂದು, ಬ್ಯಾಗು ತೆಗೆದುಕೊಂಡು ವ್ಯಾನ್ ಸ್ಟಾಪಿಗೆ ಓಡಿದ. ಕೈಯಲ್ಲಿ ಜಾಮೂನು ಬಟ್ಟಲನ್ನು ಹಿಡಿದುಕೊಂಡು ಮಗ ಓಡಿದ ದಾರಿಯನ್ನೇ ನೋಡುತ್ತಾ ನಿಂತಿದ್ದ ಸುಮಿತ್ರಳನ್ನು ರಮೇಶನ ಮಾತು ಎಚ್ಚರಿಸಿತು. ಏನಿವತ್ತು ಜಾಮೂನು? ನಿನ್ನ ಮುದ್ದು ಮಗನ ಆಸೇನಾ. ತಿನ್ನದೇ ಹಾಗೇ ಓಡಿ ಹೋದ’’. ತಡೆಯಲಾಗಲಿಲ್ಲ ಸುಮಿತ್ರೆಗೆ.ನೀವು ಅಷ್ಟು ನೋಯಿಸಿದರೆ ಅವನು ಹೇಗೆ ತಿಂತಾನೆ? ಈ ಸಲ ಅವನೇ ಕ್ಲಾಸಿಗೆ ಫಸ್ಟು. ಅದನ್ನ ನಿಮಗೆ ಹೇಳ್ಬೇಕೂಂತ ನಿನ್ನೆಯೆಲ್ಲಾ ಅದೆಷ್ಟೊಂದು ಆಸೆ ಪಟ್ಟಿದ್ದ. ರಾತ್ರಿ ಊಟ ಮಾಡೋವಾಗ ಸಂತೋಷವಾಗಿ ತಿನ್ಬೇಕೂಂತ ಮಾಡ್ದೆ. ಯಾರೂ ತಿನ್ಲಿಲ್ಲ’’ ಮುಂದೆ ಮಾತಾಡಲಾಗದೆ ಗಂಟಲುಬ್ಬಿ ಬಂತು. ರಮೇಶನಿಗೆ ಕಪಾಳಕ್ಕೆ ಹೊಡೆಸಿಕೊಂಡಂತಾಯಿತು. ಓಡಿ ಹೋಗಿ ಕಿಟಕಿಯಿಂದ ವ್ಯಾನ್ ಸ್ಟಾಪಿನ ಕಡೆಗೆ ನೋಡಿದ. ವ್ಯಾನ್ ಬಂದಿತ್ತು. ದೀಪು ಅದರಲ್ಲಿ ಹತ್ತುತ್ತಿದ್ದ…

Leave a Reply

Back To Top