ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ

ಪ್ರಶಸ್ತಿ

ಶೋಭಾ ನಾಯ್ಕರ ಅವ್ವ ಮತ್ತು ಅಬ್ಬಲಿಗೆ ಕೃತಿಗೆ

`ಸರಳಾ ರಂಗನಾಥರಾವ್ ಪ್ರಶಸ್ತಿ

ಸರಳಾ ರಂಗನಾಥರಾವ್ ಸ್ಮಾರಕ ಪ್ರತಿಷ್ಠಾನವು ಕೊಡುವ ೨೦೧೯ನೇ ಸಾಲಿನ ಸರಳಾ ರಂಗನಾಥರಾವ್ ಪ್ರಶಸ್ತಿಗೆ ಶಿರಸಿಯ ಕವಯಿತ್ರಿ ಶೋಭಾ ಹಿರೇಕೈ ಕೊಂಡ್ರಾಜಿ ಅವರು ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯನ್ನು ಲೇಖಕಿಯರ ಚೊಚ್ಚಲ ಕೃತಿಗೆ ಕೊಡಲಾಗುತ್ತಿದ್ದು, ಶೋಭಾ ಅವರ ಅವ್ವ ಮತ್ತು ಅಬ್ಬಲಿಗೆ ಕವನ ಸಂಕಲನ  ಈ ಪ್ರಶಸ್ತಿಗೆ ಆಯ್ಕೆಯಾಗಿದೆ.

ಶೋಭಾ ಹಿರೇಕೈ ಕೊಂಡ್ರಾಜಿ ಅವರು  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಕಂಡ್ರಾಜಿಯವರು. ಪ್ರಸ್ತುತ ಸಿದ್ದಾಪುರ ತಾಲ್ಲೂಕಿನಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಮೊದಲ ಕವನ ಸಂಕಲನ `ಅವ್ವ ಮತ್ತು ಅಬ್ಬಲಿಗೆ’ ೨೦೧೯ರಲ್ಲಿ ಪ್ರಕಟಣೆ ಕಂಡಿದೆ. ಗ್ರಾಮೀಣ ಪರಿಸರ, ತಾಯ್ತನ ಈ ಸಂಕಲನದ ಪ್ರಧಾನ ಧಾರೆ. ಹಾಗೆ ಯುದ್ಧವಿರೋಧಿ ಧೋರಣೆ, ಬುದ್ಧನ ಕರುಣೆ ಹಾಗೂ ಅಯ್ಯಪ್ಪನನ್ನು ತಾಯಿಯ ಮಗನಾಗಿ ನೋಡುವ ಪ್ರಮುಖ ಕವಿತೆಗಳು ಅವ್ವ ಮತ್ತ ಅಬ್ಬಲಿಗೆ ಸಂಕಲನದಲ್ಲಿವೆ. ಅಲ್ಲದೇ ಹೆಣ್ಣಿನ ಕನಸು, ಪ್ರೀತಿಯ ಹಂಬಲ, ಬಂಜೆತನ ಹಾಗೂ ಶ್ರಮಿಕವರ್ಗದ ಬಗ್ಗೆ ಇರುವ ಕಳಕಳಿಯ ಕವಿತೆಗಳಿದ್ದು, ಕನ್ನಡ ಕಾವ್ಯ ಪರಂಪರೆಯನ್ನು ಶೋಭಾ ನಾಯ್ಕ ಹಿರೇಕೈ ಕವನಗಳಲ್ಲಿ ಕಾಣಬಹುದಾಗಿದೆ.

ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ, ಚಿಂತಾಮಣಿ ಕೊಡ್ಲೇಕೆರೆ ಮತ್ತು ವಿಮರ್ಶಕರಾದ ಜಿ. ಎನ್. ರಂಗನಾಥ್ ರಾವ್ ಅವರು ತೀರ್ಪುಗಾರರಾಗಿದ್ದರು. ೨೦೨೧ರ ಜನವರಿಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಂತೋಷವಾಗಿದೆ :

 ಅವ್ವ ಮತ್ತು ಅಬ್ಬಲಿಗೆ ಕೃತಿಗೆ `ಸರಳಾ ರಂಗನಾಥರಾವ್ ಪ್ರಶಸ್ತಿ’ ಪ್ರಶಸ್ತಿ ಘೋಷಣೆಯಾದ ಕ್ಷಣದ ಕುರಿತು ಕವಯಿತ್ರಿ ಶೋಭಾ ನಾಯ್ಕ ಅವರು ಪ್ರತಿಕ್ರಿಯಿಸಿದ್ದು, ನನಗೆ ಸಂತೋಷವಾಗಿದೆ. ನನ್ನ ಮೊದಲ ಸಂಕಲನಕ್ಕೆ ಪ್ರಶಸ್ತಿ ಬಂದದ್ದು ಇನ್ನೂ ಖುಷಿಯ ಸಂಗತಿ. ನನ್ನ ಹಳ್ಳಿಯ ಸಂಬಂಧ ಗಟ್ಟಿಯಾಗಿದೆ. ನಾನು ಬರೆಯುವುದು ಸಹ  ವಿರಳ. ಶಾಲಾ ಶಿಕ್ಷಕಿಯಾಗಿರುವ ನನಗೆ ಮಕ್ಕಳ ಜೊತೆಗಿನ ಒಡನಾಟ, ನನ್ನ ಪರಿಸರ ಹಾಗೂ ಕನ್ನಡ ಪಠ್ಯಗಳಲ್ಲಿನ ವಚನಗಳು ಸೇರಿದಂತೆ ಕನ್ನಡ ಕವಿಗಳ ಕವಿತೆಗಳನ್ನು ಓದುತ್ತಾ, ಕಲಿಸುತ್ತಾ ನನಗೂ ಬರೆಯುವ ಹಂಬಲ ಹುಟ್ಟಿತು. ಅದೇ ಅವ್ವ ಅಬ್ಬಲಿಗೆಯಾಗಿದೆ. ಮುಂದೆ ನನ್ನೂರಿನ ಚಿತ್ರಗಳನ್ನು ಗದ್ಯ ರೂಪದಲ್ಲಿ ಬರೆಯುವ ಕನಸಿದೆ. ನನ್ನ ಮೇಲೆ ದೇವನೂರು ಮಹಾದೇವ ಅವರ ಬರಹಗಳು, ಎದೆಗೆ ಬಿದ್ದ ಅಕ್ಷರ ತುಂಬಾ ಪ್ರಭಾವ ಬೀರಿವೆ. ಕನ್ನಡದ ಸೌಹಾರ್ದ, ಮಾನವೀಯ ಪರಂಪರೆ ನನ್ನ ಪ್ರಜ್ಞೆಯಲ್ಲಿದೆ ಎಂದರು.

*******************************

Leave a Reply

Back To Top