ಕವಿತೆ
ತಕ್ಕಡಿ ಸರಿದೂಗಿಸಿ
ನೂತನ ದೋಶೆಟ್ಟಿ
ಬೀದಿಯಲ್ಲಿ ಅವಳ ಹೆಣ್ತನ
ಕಳೆದು ಹೋದಾಗ
ಹುಡುಕಲು ಹಗಲು ರಾತ್ರಿಯೆನ್ನದೆ
ಬೀದಿಗಿಳಿದರು ಎಲ್ಲ
ತಕ್ಕಡಿ ಹಿಡಿದು ನಾನೂ ಹೊರಟೆ
ನನ್ನ ಕಾಲ ಧೂಳು ನೀನು
ಎಂದ ಅವನ ಮಾತನ್ನು ತೂಗಿಕೊಂಡು
ಬೈಗುಳ, ಹೊಡೆತ, ಗಾಯ-ಬರೆಗಳನ್ನು
ತಂದು ಪೇರಿಸಿದರು ದಾರಿಗುಂಟ
ತಕ್ಕಡಿ ಜಗ್ಗುತ್ತ ನೆಲಕ್ಕೆ ಹೊಸೆಯುತಿತ್ತು
ಅಲ್ಲಿ ತಕ್ಕಡಿ, ನಾನು ಇಬ್ಬರೆ
ನಿನ್ನ ಕೂಗಿಗೆ
ಯಾರೂ ಬೀದಿಗಿಳಿಯಲಿಲ್ಲವಲ್ಲ !
ಮನೆಯ ಗೋಡೆ – ಕಿಟಕಿಗಳಿಗೆ
ಮೈದುಂಬಿತು ಆವೇಶ
ಮುಚ್ಚಿದ ಕದಗಳು
ಏರ್ ಕಂಡೀಷನ್ ರೂಮುಗಳು
ಸೌಂಡ್ ಪ್ರೂಫ್ ಕಛೇರಿಗಳು
ಶಬ್ದವನ್ನು ದಾಟಗೊಡಲಿಲ್ಲ
ಅರಿಯದ ಮೌಢ್ಯತೆ ಏನೆಲ್ಲ ಅವಕ್ಕೆ
ಕೈಯ ತಕ್ಕಡಿ ನೆಲ ಹೊಸೆಯುತ್ತಲೇ ಇತ್ತು
ಬಿದಿಗಿಳಿದವರಿಗೆ ಏನೋ ಕಾನೂನು ಬಂತಂತೆ ?
ಕಾಂಪೌಂಡುಗಳು ಮಾತಾಡಿಕೊಂಡವು
ಮನೆಯಲ್ಲಿ ಕಾನೂನು ಕಣ್ಣೀರಿಡುತ್ತಿದೆ
ಹಲ್ಲಿಗಳು ಲೊಚಗುಟ್ಟಿದವು
ತಕ್ಕಡಿಯ ಸರಿದೂಗಿಸೆಂದು
ಆಕೆಗೆ ಹೇಳುತ್ತಾ
ಕಣ್ಣ ಪಟ್ಟಿಗೆ ಕೈ ಹಾಕಿದೆ
ಅಲ್ಲಿ ಪಾಪೆಗಳೇ ಇರಲಿಲ್ಲ !
ಕಪ್ಪು ಬಟ್ಟೆಯನ್ನು ತಕ್ಕಡಿಯಲ್ಲಿಟ್ಟು
ಬೀಳ್ಕೊಟ್ಟಳು ಅವಳು
ಊರ ಹೆಬ್ಬಾಗಿಲಲ್ಲಿ ಹೊಸೆಯುತ್ತಿರುವ
ತಕ್ಕಡಿ ಇನ್ನೂ ತೂಗುತ್ತಿದೆ.
*******************************
ಚಂದದ ಭಾವಾಭಿವ್ಯಕ್ತಿ