ಅಂಕಣ ಬರಹ

ಬಾಗದ ಬದುಕು

Women Empowerment Archives - SarthakChintan

ನಾನು ಶಿವಮೊಗ್ಗೆಯಲ್ಲಿದ್ದ ದಿನಗಳಲ್ಲಿ ಹಲವು ತಲೆಮಾರಿಗೆ ಸೇರಿದ ಸ್ವಾತಂತ್ರ್ಯ ಹೋರಾಟಗಾರರು, ಗಾಂಧಿವಾದಿಗಳು ಹಾಗೂ ಸಮಾಜವಾದಿಗಳು ಬೀದಿಯಲ್ಲಿ ಓಡಾಡಿಕೊಂಡಿದ್ದನ್ನು ಕಾಣುತ್ತಿದ್ದೆ. ಹೆಚ್ಚಿನವರು ಗಾಂಧಿ ಇಲ್ಲವೇ ಲೋಹಿಯಾರ ವ್ಯಕ್ತಿತ್ವ ಅಥವಾ ಚಿಂತನೆಯ ಭಾವಕ್ಕೆ ಸಿಕ್ಕು ಬದುಕಿನ ಹಾದಿ ರೂಪಿಸಿಕೊಂಡವರು. ಸಮಕಾಲೀನ ಚುನಾವಣಾ ರಾಜಕಾರಣದಲ್ಲಿ ಇವರ ಯಾರ ಹೆಸರೂ ಚಾಲ್ತಿಯಲ್ಲಿರುತ್ತಿರಲಿಲ್ಲ. ಹೀಗಾಗಿ ಮಾಧ್ಯಮಗಳೂ ಇವರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವರು ಮಲೆನಾಡಿನ ಮಳೆಗಾಲದಲ್ಲಿ ಮೋಡಗಳ ಮರೆಯಿಂದ ತಟ್ಟನೆ ಕಾಣಿಸಿಕೊಂಡು ಬೆಳಗುವ ಸೂರ್ಯನಂತೆ ಸನ್ನಿವೇಶ ಬಂದಾಗ ಪ್ರತ್ಯಕ್ಷವಾಗುತ್ತಿದ್ದರು. ಇವರಲ್ಲಿ ಪೊನ್ನಮ್ಮಾಳ್ ಸಹ ಒಬ್ಬರು.
ತಮಿಳು ಮನೆಮಾತಿನ ಪೊನ್ನಮ್ಮಾಳ್ ಬ್ರಿಟಿಶರ ವಿರುದ್ಧದ ಹೋರಾಟಗಳಲ್ಲಿ ಭಾಗವಹಿಸಿ ಸೆರೆಮನೆ ಕಂಡವರು; ಹೋರಾಟಗಾರರಿಗೆ ನೀಡಲಾಗುತ್ತಿದ್ದ ಪೆನ್ಶನ್ ತೆಗೆದುಕೊಳ್ಳಲು ನಿರಾಕರಿಸಿದವರು; ನಾಡಸೇವೆಗೆ ಸಂಸಾರ ಅಡ್ಡಿಯಾದೀತೆಂದು ಮದುವೆಯಾಗದೆ ಉಳಿದವರು; ಖಾದಿಬಿಟ್ಟು ಬೇರೆ ಉಟ್ಟವರಲ್ಲ; ಲೋಹಿಯಾ ಅನುಯಾಯಿಯಾಗಿದ್ದವರು; ಸಮಾಜವಾದಿ ಚಿಂತನೆಯ ಮೂಸೆಯಲ್ಲಿ ರೂಪುಗೊಂಡವರು; ಬಹುತೇಕ ಆದರ್ಶವಾದಿಗಳಂತೆ ಮುರಿದರೂ ಬಾಗಲಾರೆನೆಂದು ಬದುಕಿದವರು; ನಂಬಿದ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡವರಲ್ಲ. ಕೆಟ್ಟದ್ದು ಅನಿಸಿದಾಗ ಸಹಿಸಿದವರಲ್ಲ.


ಗೌರವ ಹುಟ್ಟಿಸುವ ಇಂಥ ಸಮಾಜವಾದಿಗಳ ಹಠಮಾರಿತನ ಮತ್ತು ನೈತಿಕತೆ ಕೆಲವೊಮ್ಮೆ ದುರಂತಪ್ರಜ್ಞೆಯದು ಅನಿಸುತ್ತದೆ. ಉದಾಹರಣೆಗೆ, ಪೊನ್ನಮ್ಮಾಳರ ಸಮಕಾಲೀನರಾದ ಸದಾಶಿವರಾವ್. ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡ ಮುಂತಾದವರ ಸಂಗಾತಿಯಾಗಿದ್ದ ಇವರು ತೀರ್ಥಹಳ್ಳಿ ಸೀಮೆಯವರು. ಐವತ್ತರ ದಶಕದ ಸಮಾಜವಾದಿ ಚಳುವಳಿಯಲ್ಲಿ ಒಡಮೂಡಿದವರು; ಕಾಗೋಡು ಸತ್ಯಾಗ್ರಹದ ಪ್ರಭಾವದಿಂದ ಉಳುವವರಿಗೇ ನೆಲವನ್ನು ಬಿಟ್ಟುಕೊಡಬೇಕು ಎಂಬ ಆದರ್ಶಕ್ಕೆ ಬಿದ್ದು, ಇದ್ದಬದ್ದ ಜಮೀನನೆಲ್ಲ ರೈತರಿಗೆ ಹಂಚಿದವರು. ತಮಗಾಗಿ ಏನನ್ನೂ ಉಳಿಸಿಕೊಳ್ಳದ ಇವರ ಮುಪ್ಪಿನ ದಿನಗಳಲ್ಲಿ ಕಷ್ಟದ ದಿನಗಳು ಕಾಣಿಸಿದವು. ಇದನ್ನವರು ಯಾರಲ್ಲೂ ಹೇಳಿಕೊಳ್ಳಲಿಲ್ಲ. ಯಾರಿಗೂ ಸುದ್ದಿಯಾಗದಂತೆ ಒಂದು ದಿನ ತೀರಿಕೊಂಡರು.


ಶಿವಮೊಗ್ಗೆಯಲ್ಲಿದ್ದ ಇನ್ನೊಬ್ಬ ವಿಶಿಷ್ಟ ವ್ಯಕ್ತಿ ನಾಗಪ್ಪಶೆಟ್ಟರು. ಸಬರಮತಿ ಆಶ್ರಮದಲ್ಲಿ ಇದ್ದವರು. ಗಾಂಧೀಜಿಯವರಿಗೂ ಕಸ್ತೂರಬಾಯಿಗೂ ಯಾವುದೊ ವಿಷಯಕ್ಕೆ ಭಿನ್ನಮತ ಬಂದಾಗ, ಗಾಂಧಿಯವರ ವಿರುದ್ಧ ಓಟುಹಾಕಿ ದೋಷ ತೋರಿಸಿಕೊಟ್ಟವರು ಎಂದು ಅವರ ಬಗ್ಗೆ ಪ್ರತೀತಿಯಿತ್ತು. ಶೆಟ್ಟರು ಹಳೇಸೈಕಲೊಂದನ್ನು ಸವಾರಿ ಮಾಡಿಕೊಂಡು ಶಿವಮೊಗ್ಗ ಶಹರನೆಲ್ಲ ತಿರುಗಾಡುತ್ತಿದ್ದರು; ಎಚ್. ನರಸಿಂಹಯ್ಯನವರಂತೆ ಇವರೂ ಶಿಕ್ಷಣಸಂಸ್ಥೆ ಕಟ್ಟಲು ತಮ್ಮ ಜೀವನ ವ್ಯಯಿಸಿದರು. ವಿಚಿತ್ರವೆಂದರೆ, ಈ ಇಬ್ಬರೂ ಕಟ್ಟಿದ ಸಂಸ್ಥೆಗಳು ವಿಜ್ಞಾನ ಮತ್ತು ವಾಣಿಜ್ಯಶಾಸ್ತ್ರಕ್ಕೆ ಹೆಸರಾಗಿದ್ದವು. ಅಲ್ಲಿ ಬಡ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬರುತ್ತಿದ್ದುದು ಕಡಿಮೆ. ಇದನ್ನು ಅವರ ವೈಯಕ್ತಿಕ ಸರಳತೆಗಿದ್ದ ಸಾಮಾಜಿಕ ಪ್ರಜ್ಞೆಯ ಕೊರತೆ ಎನ್ನಬೇಕೊ, ತಮ್ಮ ಪ್ರಭಾವಶಾಲಿ ವ್ಯಕ್ತಿತ್ವವನ್ನು ಬೇರೆ ಹಿತಾಸಕ್ತಿಗಳು ಬಳಸಿಕೊಳ್ಳುವುದನ್ನು ಅರಿಯದ ಮುಗ್ಧತೆ ಎನ್ನಬೇಕೊ ತಿಳಿಯದು.


ಈ ವಿಷಯದಲ್ಲಿ ಪೊನ್ನಮ್ಮಾಳ್ ಭೋಳೆಯಲ್ಲ. ಸಂಸ್ಥೆಗಳಿಗೆ ತಮ್ಮ ವ್ಯಕ್ತಿತ್ವ ಬಳಕೆಗೊಳ್ಳಲು ಬೆಂಕಿಯಂತಹ ಅವರು ಬಿಡಲಿಲ್ಲ. ಉದ್ದಕ್ಕೂ ಶಕ್ತಿರಾಜಕಾರಣಕ್ಕೆ ದೂರವಾಗಿದ್ದು ಜನಪರ ಚಳುವಳಿಗಳಲ್ಲೇ ಗುರುತಿಸಿಕೊಂಡರು. ಅವರ ಮಾತು ಹರಿತವಾದ ಚಾಕುವಿನಿಂದ ಚರ್ಮದ ಮೇಲೆ ಗೀರಿದಂತೆ ಕಟುವಾಗಿರುತ್ತಿತ್ತು. ರಾಜಕಾರಣಿಗಳು ಇವರ ಸಹವಾಸವೇ ಬೇಡವೆಂದು ದೂರ ಇರುತ್ತಿದ್ದರು. ಜೆ.ಎಚ್. ಪಟೇಲ್, ಬಂಗಾರಪ್ಪ ಮುಂತಾದವರನ್ನೆಲ್ಲ ಪೊನ್ನಮ್ಮಾಳ್, ಅವರು ಮುಖ್ಯಮಂತ್ರಿಗಳಾಗಿದ್ದಾರೆ ಎಂಬುದನ್ನೂ ಲೆಕ್ಕಕ್ಕಿಡದೆ ಏಕವಚನದಲ್ಲಿ ಮಾತಾಡುತ್ತಿದ್ದರು. ಪಟೇಲರನ್ನು ಕೂರಿಸಿಕೊಂಡು ಅವರ ಕುಡಿತ ಸ್ತ್ರೀಶೋಕಿಗಳನ್ನು ಕಟುವಾಗಿ ಟೀಕಿಸುತ್ತಿದ್ದರಂತೆ; ಅವರ ಪ್ರಕಾರ, ಕುಡಿಯದ, ವ್ಯಾಯಾಮ ಮಾಡಿ ದೇಹವನ್ನು ಶಿಸ್ತಾಗಿ ಇಟ್ಟುಕೊಂಡಿದ್ದ ಬಂಗಾರಪ್ಪ, ಗುಡ್ಬಾಯ್ ಆಗಿದ್ದರು. ಬಂಗಾರಪ್ಪನವರಾದರೂ ಪೊನ್ನಮ್ಮಾಳ್ ನಡೆದುಹೋಗುತ್ತಿದ್ದರೆ, ಕಾರು ನಿಲ್ಲಿಸಿ ರಸ್ತೆಬದಿಯಲ್ಲೇ ನಿಂತು ಮಾತಾಡುತ್ತಿದ್ದರು. ಮಾತು ಮುಗಿದ ಬಳಿಕ ಪೊನ್ನಮ್ಮಾಳ್ ತಮ್ಮ ನಡಿಗೆ ಮುಂದುವರೆಸುತ್ತಿದ್ದರು.


ಅಧಿಕಾರಸ್ಥರ ಜತೆ ಹೀಗೆ ಅಂತರ ಕಾದುಕೊಂಡಿರುತ್ತಿದ್ದ ಪೊನ್ನಮ್ಮಾಳ್, ಸಾಮಾನ್ಯರ ಕಷ್ಟಗಳಿಗೆ ಸಂಬಂಧಪಟ್ಟ ಯಾವುದೇ ಚಳುವಳಿ-ಸತ್ಯಾಗ್ರಹ ಇದ್ದರೂ, ಇಡೀ ದಿನ ಬಂದು ಕೂರುತ್ತಿದ್ದರು. ಯೌವನದಲ್ಲಿ ಸುಂದರಿ ಆಗಿದ್ದಿರಬಹುದಾದ ಇವರು, ಹೊಸತಲೆಮಾರಿನ ಚಳುವಳಿಗಾರ ತರುಣ ತರುಣಿಯರನ್ನು ಸುತ್ತ ಕೂರಿಸಿಕೊಂಡು ಮಾತುಕತೆ ಮಾಡುತ್ತಿದ್ದರು- `ಟೈಟಾನಿಕ್’ ಚಿತ್ರದಲ್ಲಿ ಅಜ್ಜಿ, ಹಡಗು ಮುಳುಗುವಾಗ ಜೀವ ಉಳಿಸಿಕೊಳ್ಳಲು ಹೋರಾಡಿದ ಸಾಹಸಗಾಥೆ ಹಂಚಿಕೊಳ್ಳುವಂತೆ. ಆದರೆ ಟೈಟಾನಿಕ್ ಅಜ್ಜಿಯಷ್ಟು ಮುಕ್ತವಾಗಿ ಖಾಸಗಿ ಬದುಕನ್ನು ತೆರೆದು ಹೇಳುತ್ತಿರಲಿಲ್ಲ.


ಹಳಗಾಲದ ಅನೇಕ ಸ್ವಾತಂತ್ರ್ಯ ಹೋರಾಟಗಾರರಂತೆ, ಗತಕಾಲದ ಆದರ್ಶಗಳಲ್ಲೇ ಮುಳುಗಿ ವರ್ತಮಾನವೆಲ್ಲ ಪತನವಾಗಿದೆ ಎಂದು ಸಿನಿಕವಾಗಿ ಗೊಣಗುವ ಪೈಕಿ ಆಗಿರಲಿಲ್ಲ ಪೊನ್ನಮ್ಮಾಳ್. ಸಮಕಾಲೀನ ಹೋರಾಟಗಳಲ್ಲಿ ತೊಡಗಿಕೊಂಡು ಅವಕ್ಕೆ ನೈತಿಕ ಬೆಂಬಲ ತುಂಬುತ್ತಿದ್ದರು. ನಾನೂ ಭಾಗವಹಿಸಿದ್ದ ಹಳೆಯದಾದ ಪತ್ರಿಕಾ ವರದಿಯೊಂದನ್ನು ಒಮ್ಮೆ ನೋಡುತ್ತಿದ್ದೆ. ತುಂಗಭದ್ರಾ ನದಿಯನ್ನು ಕುದುರೆಮುಖದ ಅದಿರುಗಾರಿಕೆಯಿಂದ ಉಳಿಸುವ ಚಳುವಳಿಯದು. ಶಿವಮೊಗ್ಗೆಯ ಗೋಪಿಸರ್ಕಲಿನಲ್ಲಿ ಹಾಕಿದ ಪೆಂಡಾಲಿನಲ್ಲಿ ಅನೇಕ ಲೇಖಕರು ಚಿಂತಕರು ಧರಣಿ ನಿರತರಾಗಿದ್ದಾರೆ. ಅವರ ನಡುವೆ ಪೊನ್ನಮ್ಮಾಳ್ ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರ ಕುಳಿತ ಭಂಗಿಯಲ್ಲಿ ಮುಂದಾಳುತನದ ಗತ್ತಿಗಿಂತ, ನೀವು ಮಾಡುತ್ತಿರುವ ಒಳ್ಳೆಯ ಕೆಲಸಗಳಲ್ಲಿ ನನ್ನನ್ನೂ ಒಳಗೊಳ್ಳಿ ಎಂಬ ಕೋರಿಕೆಯೂ ಇದ್ದಂತಿದೆ. ತಮ್ಮ ಚೈತನ್ಯ ಹೊಸ ತಲೆಮಾರಿನ ತರುಣ ತರುಣಿಯರಲ್ಲಿ ಮುಂದುವರೆಯುತ್ತಿದೆ ಎಂಬ ಸಮಾಧಾನವಿದೆ. ಅವರು ಆದರ್ಶ ತುಂಬಿಕೊಂಡ ಹುಡುಗ-ಹುಡುಗಿಯರ ಜತೆ ಸೇರಿ, ತಮ್ಮ ಮನಸ್ಸಿನ, ಸಿದ್ಧಾಂತದ, ಆದರ್ಶದ ಯೌವನ ಉಳಿಸಿಕೊಂಡಿದ್ದರು. ಹಿರಿತನ ತನ್ನನ್ನು ನವೀಕರಿಸಿಕೊಳ್ಳುವುದು ಅಥವಾ ಪರಂಪರೆ ರೂಪುಗೊಳ್ಳುವುದು ಹೀಗೇ ತಾನೇ?


ಸಾರ್ವಜನಿಕ ಬದುಕಿನಲ್ಲಿ ಮಹಿಳೆಯರ ಪಾಲುಗೊಳ್ಳುವಿಕೆಯು ತೀರ ಕಡಿಮೆಯಿರುವ, ಇದ್ದರೂ ಸಹಾಯಕರಾಗಿ ಉಳಿಯುುವ ಭಾರತೀಯ ಸಾಮಾಜಿಕ ಸನ್ನಿವೇಶದಲ್ಲಿ, ಪೊನಮ್ಮಾಳ್ ನಮ್ಮ ಕೊಡಗಿನ ಗೌರಮ್ಮನವರ ತರಹ, ತಮ್ಮ ವ್ಯಕ್ತಿತ್ವದ ಘನತೆಯನ್ನು ಸ್ವಯಂ ಪರಿಭಾವಿಸಿದ್ದವರು. ಸದ್ಯ ಕರ್ನಾಟಕ ರಾಜಕೀಯ ಪಕ್ಷಗಳಲ್ಲಿರುವ ಕೆಲವು ನಾಯಕಿಯರು, ಸೂಕ್ಷ್ಮತೆ ಕಳೆದುಕೊಂಡು ಕೂಗುಮಾರಿಗಳಾಗಿ ಪರಿವರ್ತನೆಗೊಂಡಿರುವುದನ್ನು ಕಾಣುವಾಗ, ಜನಪರ ಚಳುವಳಿಗಳಲ್ಲಿ ರೂಪುಗೊಂಡ ಕರ್ನಾಟಕದ ಕಮಲಾದೇವಿ ಚಟ್ಟೋಪಾಧ್ಯಾಯ, ಪೊನ್ನಮ್ಮಾಳ್ ಮುಂತಾದ ಹಳಬರ ಧೀಮಂತಿಕೆ ಗೌರವ ಹುಟ್ಟಿಸುತ್ತದೆ. ಬಾಳಿನುದ್ದಕ್ಕೂ ವ್ಯವಸ್ಥೆಯ ಎದುರಾಳಿಯಾಗಿಯೇ ಜೀವಿಸಿದ ಪೊನ್ನಮ್ಮಾಳ್ ಕಡೆತನಕ ಒರೆಯಿಂದ ಆಗತಾನೇ ಹೊರಸೆಳೆದ ಕತ್ತಿಯಂತೆ ತಮ್ಮ ಪ್ರಖರತೆ ಉಳಿಸಿಕೊಂಡಿದ್ದರು. ಕಾಗೋಡು ಸತ್ಯಾಗ್ರಹಕ್ಕೆಂದು ಶಿವಮೊಗ್ಗೆಗೆ ಲೋಹಿಯಾ ಬಂದಾಗ ತೆಗೆಯಲಾದ ಒಂದು ಫೋಟೊ ಇದೆ. ಅದರಲ್ಲಿ ಸೈನಿಕಳಂತೆ ಪೊನ್ನಮ್ಮಾಳ್ ಲೋಹಿಯಾರ ಜತೆ ನಡೆಯುತ್ತಿದ್ದಾರೆ. ಅವರ ದೇಹಭಾಷೆ ಯಾರಿಗೂ ಬಾಗದೆ ಬದುಕುವ ಅವರ ಗುಣದ ಪ್ರತೀಕದಂತಿದೆ. ತುಸು ಬಾಗಿರುವ ಲೋಹಿಯಾ ಹೊಸತಲೆಮಾರಿನ ಹೆಣ್ಣೊಬ್ಬಳಲ್ಲಿ ತಮ್ಮ ಚೈತನ್ಯ ಪ್ರವಹಿಸುತ್ತಿರುವುದನ್ನು ಪರಿಭಾವಿಸಿರುವ ಭಾವದಲ್ಲಿ ಹೆಜ್ಜೆ ಹಾಕುತ್ತಿದ್ದಾರೆ.
ಪೊನ್ನಮ್ಮಾಳ್ ಹಾದಿಯಲ್ಲಿ ನಡೆದ ಹಲವಾರು ಮಹಿಳೆಯರನ್ನು ಕರ್ನಾಟಕ ಕಂಡಿತು.

**************************************

ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Leave a Reply

Back To Top