ಭೂತಾಯಿಗೆ ನಮನ

ಲೇಖನ

ಭೂತಾಯಿಗೆ ನಮನ

ರಾಘವೇಂದ್ರ ಈ ಹೊರಬೈಲು

ಇವತ್ತು ರಾತ್ರಿಯೆಲ್ಲಾ ಎಚ್ರಾಗಿರ್ಬೇಕು, ಮಲಗ್ಬಿಟ್ಟಿಯೋ. ರಾತ್ರಿಯೆಲ್ಲ ಹಬ್ಬ ಮಾಡ್ಬೇಕು, ಹಬ್ಬದಾಗೆ ಎಚ್ರಾಗಿರ್ದೆ  ಹಂಗೆ ಮಲ್ಗಿದ್ರೆ ದೇವ್ರು ಶಾಪ ಕೊಡ್ತಾನೆ ಕಣೋ” ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮನಾಡಿದ ಮಾತುಗಳು ಎಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿವೆ. “ಇದ್ಯಾವ ಹಬ್ಬನಪ್ಪ, ರಾತ್ರಿಯೆಲ್ಲ ಎಚ್ರಾಗಿರ್ಬೇಕಂತೆ” ಎಂದು ಗೊಣಗುಟ್ಟುತ್ತಾ ತೂಕಡಿಸುತ್ತಾ, ಅಮ್ಮನೋ ಅಪ್ಪನೋ ಹೇಳ್ತಾಯಿದ್ದ ಸಣ್ಣಪುಟ್ಟ ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ನಿದ್ರೆಗಣ್ಣಿನಲ್ಲೇ ಮಾಡುತ್ತಾ, ಕೆಲವೊಮ್ಮೆ ಹೆಚ್ಚು ಕಡಿಮೆಯಾಗಿ, ಬೈಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿದ್ದ ಆ ದಿನಗಳನ್ನು ಮತ್ತು ಮಾರನೆ ದಿನ ಬೆಳ್ಳಂಬೆಳಗ್ಗೆ ಹೊಲದಲ್ಲಿ “ಅಚ್ಚಂಬ್ಲಿ ಅಳಿಯಂಬ್ಲಿ ಮುಚ್ಕಂಡ್ ತಿನ್ನೆ ಭೂಮ್ತಾಯಿ” ಎಂದು ಬೆಳೆಗಳಿಂದ ತುಂಬಿದ ಹೊಲದಲ್ಲಿ ಏನನ್ನೋ ಬೀರುತ್ತಾ, ಕೂಗುತ್ತಾ ಸಾಗುತ್ತಿದ್ದ ಅಪ್ಪನ ಧ್ವನಿಯನ್ನು ಮರೆಯಲು ಸಾಧ್ಯವೇ?

ಸಾಂಸ್ಕೃತಿಕವಾಗಿ ಭಾರತವು ವಿಶ್ವದಲ್ಲೇ ಅತೀ ಶ್ರೀಮಂತ ರಾಷ್ಟ್ರ. ಹಬ್ಬ- ಹರಿದಿನಗಳ ವಿಷಯಕ್ಕೆ ಬಂದಿದ್ದೇ ಆದರೆ ನಮ್ಮಷ್ಟು ವಿವಿಧತೆ ಮತ್ತು ವಿಶೇಷತೆಯನ್ನು ಇನ್ನೆಲ್ಲೂ ಕಾಣಲು ಸಾಧ್ಯವಿಲ್ಲ. ಒಂದೊಂದು ಹಬ್ಬವೂ ಅದರದೇ ವಿಶೇಷತೆ ಮತ್ತು ಪ್ರಾಮುಖ್ಯತೆಯಿಂದಾಗಿ ಗಮನ ಸೆಳೆಯುತ್ತದೆ. ಒಂದು ಕಾಲದಲ್ಲಿ ಭಾರತ ದೇಶದ ಹಬ್ಬಗಳೆಂದರೆ ಅವು ಭಕ್ತಿ, ಸಂಸ್ಕೃತಿ, ಬೆರೆಯುವಿಕೆ, ಸಂತೋಷಗಳ ಸಮ್ಮಿಲನವಾಗಿತ್ತು. ನಮ್ಮ ತಾತ ಮುತ್ತಾತಂದಿರೆಲ್ಲರೂ ಹಬ್ಬಗಳನ್ನು ಒಂದು ಭಯಕ್ಕಾಗಿ, ಭಕ್ತಿಗಾಗಿ, ಎಲ್ಲರ ಒಳಿತಿಗಾಗಿ ಗಾಂಭೀರ್ಯದಿಂದ ಆಚರಿಸುತ್ತಿದ್ದರು. ಆದರೆ ಇಂದು ಎಲ್ಲಾ ಬುಡ ಮೇಲಾಗಿದೆ. ಉದಾಹರಣೆಗೆ ಹೇಳಬೇಕೆಂದರೆ, ಗಣೇಶನ ಹಬ್ಬ, ದೀಪಾವಳಿ, ಹೋಳಿ ಮುಂತಾದವು ತಮ್ಮ ಮೂಲ ಅರ್ಥ ಕಳೆದುಕೊಂಡು ಅನರ್ಥದತ್ತ ಸಾಗುತ್ತಿವೆ. ಭಯ-ಭಕ್ತಿಯಿಂದ, ನಿರ್ಮಲ ಮನಸ್ಸಿನಿಂದ ಆಚರಿಸುತ್ತಿದ್ದ ಗಣೇಶನ ಹಬ್ಬ ಇಂದು ಹೊಡೆದಾಟ, ಕಿತ್ತಾಟದ ಹಬ್ಬವಾಗಿದೆ. ಯಾರೂ ತಪ್ಪಾಗಿ ಭಾವಿಸದೇ ಸೂಕ್ಷ್ಮವಾಗಿ ಗಮನಿಸಿದ್ದೇ ಆದರೆ, ಹಲವೆಡೆ ಗಣೇಶನ ಹಬ್ಬದಲ್ಲಿ ಗಣೇಶನೇ ಕಾಣೆಯಾಗಿ, ಅಶ್ಲೀಲ ಆರ್ಕೆಸ್ಟ್ರಾ, ಕುಡಿತ, ಕುಣಿತ, ಐಟಂ ಸಾಂಗುಗಳದ್ದೇ ಮೆರವಣಿಗೆ ನಡೆಯುತ್ತಿದೆ. ರಾಷ್ಟ್ರ ಕವಿ ಕುವೆಂಪುರವರ “ಕಟ್ಟಕಡೆಯಲಿ ದೇವರ ಗುಡಿಯಲಿ ಪೂಜಾರಿಯೇ ದಿಟದ ನಿವಾಸಿ ದೇವರೇ ಪರದೇಸಿ” ಎಂಬ ಮಾತಿನಂತೆ “ಕಟ್ಟಕಡೆಯಲಿ ಗಣೇಶನ ಹಬ್ಬದಲಿ ಆರ್ಕೆಸ್ಟ್ರಾ ಐಟಂ ಸಾಂಗುಗಳು, ಕುಡುಕರ ಹುಚ್ಚು ಕುಣಿತವೇ ದಿಟದ ನಿವಾಸಿ, ಗಣೇಶನೇ ಪರದೇಸಿ” ಅಲ್ವಾ?

ದೀಪಗಳಿಂದ ಅಲಂಕೃತವಾಗಿ ಮನಸ್ಸಿನ ದುಃಖ ಕಳೆದು ಎಲ್ಲರ ಬಾಳಿಗೂ ಹರಷದ ಬೆಳಕನ್ನು ನೀಡುವಂತ ಹಬ್ಬವಾಗಲಿ ಎಂದು ಆಚರಿಸುತ್ತಿದ್ದ ‘ದೀಪಾವಳಿ ಹಬ್ಬ’ ಇಂದು ತನ್ನ ಅರ್ಥವನ್ನೇ ಕಳೆದುಕೊಂಡು ಪಟಾಕಿ ಮುಂತಾದ ಇಡೀ ಜೀವಸಂಕುಲಕ್ಕೇ ಕಂಟಕಪ್ರಾಯವಾದ ಸಿಡಿಮದ್ದುಗಳ ಸುಡುವಿಕೆಯ ಆಡಂಬರದಲ್ಲಿ ಮುಳುಗಿಹೋಗಿದೆ. ಹೆಚ್ಚು ಸಿಡಿಮದ್ದು ಸುಟ್ಟವನದೇ ಅದ್ದೂರಿ ದೀಪಾವಳಿ ಆಚರಣೆ ಎಂಬಂತಾಗಿರುವುದು ಶೋಚನೀಯ.

ಇಂಥ ಆಡಂಬರದ, ಅಂತಸ್ತಿನ ಪ್ರತೀಕದಂತಿರುವ ಹಬ್ಬಗಳೆಂದರೆ ಮೊದಲಿನಿಂದಲೂ ನನಗೆ ಅದೇನೋ ಅಸಡ್ಡೆ.

ಆದರೆ ಇಂತಹ ಹಬ್ಬಗಳ ನಡುವೆಯೇ ಅಂದು ನನ್ನ ನಿದ್ರೆಗೆಡಿಸಿ, ಅಮ್ಮ- ಅಪ್ಪನ ಬೈಗುಳಕ್ಕೆ ಎಡೆಮಾಡಿದ್ದ ಹಬ್ಬ, ಸದ್ದು-ಗದ್ದಲವಿಲ್ಲದೆ, ಇಡೀ ಜೀವಸಂಕುಲದ ತಾಯಿ, ನಿಜ ದೇವತೆ ಭೂಮಿತಾಯಿಯನ್ನು ಪೂಜಿಸುವ ‘ಭೂಮಿ ಹುಣ್ಣಿಮೆ’ ಇಂದಿಗೂ ಅರ್ಥವತ್ತಾಗಿ ನಡೆಯುತ್ತಿರುವ ಹಬ್ಬ. ನಗರ ಪ್ರದೇಶದ ಅದೆಷ್ಟೋ ಜನರಿಗೆ ಅರಿವೂ ಇರದ, ಹಳ್ಳಿಗಾಡಿನ ರೈತಾಪಿ ವರ್ಗದವರು ಆಚರಿಸಿಕೊಂಡು ಬರುತ್ತಿರುವ ಪಕ್ಕಾ ಗ್ರಾಮೀಣ ಹಬ್ಬ. ಗಣೇಶನ ಹಬ್ಬವಾದ ಹೆಚ್ಚು ಕಡಿಮೆ ಒಂದು ತಿಂಗಳ ಅಂತರದಲ್ಲಿ ಬರುವ ಹುಣ್ಣಿಮೆಯಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಭೂಮಿ ಹುಣ್ಣಿಮೆಯನ್ನು ‘ಸೀಗೆ ಹುಣ್ಣಿಮೆ’ ಎಂದೂ ಕರೆಯಲಾಗುತ್ತದೆ. ಭತ್ತ, ಜೋಳ, ಅಡಿಕೆ ಮುಂತಾದ ಬೆಳೆ ತೆನೆಬಿಡುವ ಸಮಯವಿದು. ಅಂದರೆ ಬೆಳೆಗಳು ಗರ್ಭ ಧರಿಸುವ ಕಾಲ. ಅಂದರೆ ಭೂತಾಯಿಯು ಗರ್ಭವತಿಯಾಗುವ ಸುಂದರ ಗಳಿಗೆ. ಬೆಳೆಗಳನ್ನೇ ಗರ್ಭ ಧರಿಸಿದ ಭೂತಾಯಿಯೆಂಬ ಭಕ್ತಿಯಿಂದ ಪೂಜಿಸುವ ನಮ್ಮ ಹಳ್ಳಿಗರು ಭತ್ತದ ಸಸಿಗೋ ಅಥವಾ ಅಡಕೆ ಗಿಡಕ್ಕೋ ಅಥವಾ ಜೋಳದ ಗಿಡಕ್ಕೋ ಅಥವಾ ನಾವು ಬೆಳೆದ ಯಾವುದೋ ಬೆಳೆಗೋ ಸೀರೆ ಉಡಿಸಿ, ಹೂವಿನ ಹಾರ ಹಾಕಿ, ತಾಳಿಯನ್ನು ಕಟ್ಟಿ ಹೆಣ್ಣಿನಂತೆ ಸಿಂಗಾರ ಮಾಡಿ, ಹೊಲಗಳಲ್ಲಿ, ಊರುಗಳಲ್ಲಿ ಸಿಗುವ ನಾನಾ ತರದ ಸೊಪ್ಪು, ತರಕಾರಿ, ಗೆಡ್ಡೆ-ಗೆಣಸುಗಳನ್ನು ಹಿಂದಿನ ದಿನವೇ ತಂದು (ಸೊಪ್ಪು ಹೆರಕುವ ಶಾಸ್ತ್ರ ಎಂಬುದು ಅದರ ಹೆಸರು), ಇಡೀ ರಾತ್ರಿ, ಮನೆಮಂದಿಯೆಲ್ಲಾ ಎಚ್ಚರವಿದ್ದು, ಒಂದು ರೀತಿಯ ಜಾಗರಣೆಯನ್ನೇ ಆಚರಿಸಿ, ಬಗೆಬಗೆಯ ಅಡುಗೆ ಮಾಡಿ, ವಿಶೇಷವಾದ ಖಾದ್ಯ ತಯಾರಿಸಿ, ಸೂರ್ಯ ಉದಯಿಸುವ ಮುನ್ನವೇ ಮಾಡಿದ ಖಾದ್ಯ, ಪೂಜಾ ಪರಿಕರಗಳನ್ನು ತೆಗೆದುಕೊಂಡು, ಹೊಲಕ್ಕೆ ತೆರಳಿ, ಸಿಂಗರಿಸಿದ ಸಸಿಗೆ ನಾನಾತರಹದ ಖಾದ್ಯಗಳನ್ನು ಎಡೆಯಿಟ್ಟು, ಪೂಜಿಸಿ, ನಂತರ ಹೊಲದಲ್ಲಿರುವ ಬೆಳೆಗಳ ಮೇಲೆ ‘ಅಚ್ಚಂಬಲಿ’ (ಬೆಳೆಗಳ ಮೇಲೆ ಬೀರಲು ತಯಾರಿಸುವ ವಿಶೇಷ ಖಾದ್ಯ) ಬೀರುವುದರ ಮೂಲಕ ‘ಬಯಕೆ ಶಾಸ್ತ್ರವನ್ನು’ ಮಾಡುತ್ತಾರೆ. ಆಮೇಲೆ ಮನೆಮಂದಿಯೆಲ್ಲ ಹೊಲದಲ್ಲಿಯೇ ಊಟಮಾಡಿಕೊಂಡು ವಾಪಾಸಾಗುವ, ಭೂತಾಯಿಯನ್ನು ಭಕ್ತಿಪೂರ್ವಕವಾಗಿ ಪೂಜಿಸುವ ಮನಮುಟ್ಟುವ ಹಬ್ಬ

.

ಹೀಗೆ ಆಚರಿಸುವ ಈ ವಿಶೇಷವಾದ ಹಬ್ಬ ಮನೆ-ಮನೆಯ ಹಬ್ಬವಾಗುವುದರ ಬದಲು ಎಲ್ಲೋ ಒಂದಿಷ್ಟು ಗ್ರಾಮಗಳಿಗೆ ಸೀಮಿತವಾಗಿರುವುದು ದುರಂತ. ಬರುಬರುತ್ತಾ ಜನರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಾ, ಕೃಷಿ ಜಮೀನು ಕೂಡಾ ದೊಡ್ಡ ದೊಡ್ಡ ಕಟ್ಟಡಗಳಿಗೆ ಜಾಗ ಬಿಟ್ಟುಕೊಟ್ಟು, ತಮ್ಮ ವಿಸ್ತಾರವಾದ ಹರವನ್ನು ಕಳೆದುಕೊಂಡಿವೆ. ಹಿಂದಿನ ದಿನಗಳ ನಿಷ್ಠೆ ಇಂದು ಈ ಹಬ್ಬದಲ್ಲೂ ಕಡಿಮೆಯಾಗುತ್ತಿರುವುದು ಸತ್ಯ. ಆದರೆ ಇಂತಹ ವಿಶೇಷ ಮತ್ತು ಭೂತಾಯಿಯನ್ನು ಪೂಜಿಸುವ ಹಬ್ಬವು ಸರ್ವರ ಹಬ್ಬವಾಗಲಿ. ಅದರ ಜೊತೆಗೆ ಅರ್ಥ ಕಳೆದುಕೊಂಡು ಎತ್ತೆತ್ತಲೋ ಸಾಗುತ್ತಿರುವ ಉಳಿದ ಹಬ್ಬಗಳೂ ಅರ್ಥಪೂರ್ಣವಾಗಿ ಭಕ್ತಿಯ, ಸ್ನೇಹದ, ಸಂಬಂಧದ, ಬೆರೆಯುವಿಕೆಯ ಧ್ಯೋತಕವಾಗಲಿ, ಅದರ ಮೂಲಕ ವೈವಿಧ್ಯಮಯ ಸಂಸ್ಕ್ರತಿಯ ನಮ್ಮ ದೇಶ ಸಾಂಸ್ಕೃತಿಕವಾಗಿ ಎಲ್ಲೆಲ್ಲೂ ರಾರಾಜಿಸಲಿ ಎಂಬುದೊಂದೇ ಆಶಯ.

************************************

Leave a Reply

Back To Top