ನಾನು ಕಂಡ ಹಿರಿಯರು.

ಪ್ರೋ.ಎ.ಎನ್.ಮೂರ್ತಿರಾವ್

ಡಾ.ಗೋವಿಂದ ಹೆಗಡೆ

ಪ್ರೊ ಎ ಎನ್ ಮೂರ್ತಿರಾವ್ (೧೯೦೦-೨೦೦೩)

೧೯೮೭ರ ಒಂದು ದಿನ. ಮೈಸೂರಿನಲ್ಲಿ ನಾನು ಎಂ ಬಿ ಬಿ ಎಸ್ ಓದುತ್ತಿದ್ದ ಸಮಯ.
ಅಂದು ಕಾಲೇಜಿನ ವಿದ್ಯಾರ್ಥಿ ಸಂಘದ ವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದ್ದವು.
ಉದ್ಘಾಟನೆಗೆ ಬಂದವರು ೮೭ರ ಹರೆಯದ ವಾಮನಮೂರ್ತಿ ಪ್ರೊ.ಎ ಎನ್ ಮೂರ್ತಿರಾವ್.
ಬಿಳಿಯ ಪಂಚೆ, ತುಂಬುತೋಳಿನ ಸಾದಾ ಅಂಗಿಯಲ್ಲಿದ್ದರು. ಅವರು ೧೯೮೪ರ ಅಖಿಲ ಭಾರತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು ಎಂಬುದನ್ನು ಬಿಟ್ಟರೆ ನನಗೂ ಹೆಚ್ಚು ಗೊತ್ತಿರಲಿಲ್ಲ.

ಕಾರ್ಯದರ್ಶಿ ಅವರನ್ನು ಸ್ವಾಗತಿಸಿ ಪರಿಚಯಿಸಿ ಮಾತನಾಡಲು ವಿನಂತಿಸಿದರು. ಒಂದೆರಡು ವಾಕ್ಯಗಳನ್ನು ಅವರು ನುಡಿಯುವಷ್ಟರಲ್ಲಿ ಹಿಂದಿನ ಸಾಲಿನ ಹುಡುಗರ ಗದ್ದಲ, ಶಿಳ್ಳೆ, ಕೇಕೆ. ನಿರುಪಾಯರಾಗಿ ಅವರು ಮಾತು ನಿಲ್ಲಿಸಬೇಕಾಯಿತು. ಹಿರಿಯರನ್ನು ಕರೆದು ಅವಗಣಿಸಿದ ಮುಜುಗರ,ವ್ಯಥೆ ನನಗಂತೂ ಆಯಿತು.

ಅವರ ಮಾತುಗಳನ್ನು ಕೇಳಲು ನಾನು ೧೯೯೦ರವರೆಗೂ ಕಾಯಬೇಕಾಯಿತು. ಈ ನಡುವೆ ಅವರ ‘ಅಪರವಯಸ್ಕನ ಅಮೆರಿಕಾ ಯಾತ್ರೆ’, ‘ದೇವರು’ ಮೊದಲಾದ ಪುಸ್ತಕಗಳನ್ನು ಓದಿ ಅವರನ್ನು ತುಸು ಹೆಚ್ಚು ಪರಿಚಯಿಸಿಕೊಂಡಿದ್ದೆ.

೧೯೯೦ರ ಜುಲೈ ಇರಬೇಕು.. ಮಹಾರಾಜಾ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಅವರ ೯೦ನೇ ಜಯಂತಿಯ ಪ್ರಯುಕ್ತ ಸನ್ಮಾನ ಕಾರ್ಯಕ್ರಮವೊಂದು ಏರ್ಪಾಡಾಗಿತ್ತು. ಅಲ್ಲಿ ಅವರ ಬಗ್ಗೆ ಮತ್ತು ಅವರದೇ ನುಡಿಗಳನ್ನು ಕೇಳಿದೆ. ಅವರ ಬರಹಗಳಂತೆಯೇ ಮೆಲುಮಾತು, ತಿಳಿ ಹಾಸ್ಯ ಅವರದು.

ಇಂಗ್ಲಿಷ್ ಅಧ್ಯಾಪಕರಾಗಿ,ಮೈಸೂರು ಆಕಾಶವಾಣಿಯ ಎ ಎಸ್ ಡಿ(ಉಪನಿರ್ದೇಶಕರು) ಆಗಿ, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾಗಿ ಅವರು ಮಾಡಿದ ಕಾರ್ಯಗಳು ಪ್ರಶಂಸನೀಯ.
ಚಿತ್ರಗಳು-ಪತ್ರಗಳು,ಅಪರವಯಸ್ಕನ ಅಮೆರಿಕ ಯಾತ್ರೆ, ಅಲೆಯುವ ಮನ, ಸಂಜೆಗಣ್ಣಿನ ಹಿನ್ನೋಟ, ದೇವರು ಮೊದಲಾದವು ಅವರ ಕೃತಿಗಳು.

‘ಚಿತ್ರಗಳು-ಪತ್ರಗಳು’ ಒಂದು ವಿಶಿಷ್ಟ ಕೃತಿ. ಮೊದಲ ಭಾಗದಲ್ಲಿ ತಾವು ಕಂಡ ಅನೇಕ ಹಿರಿಯರ ಚಿತ್ರಣಗಳನ್ನು ಅವರು ಒದಗಿಸಿದ್ದಾರೆ ಎರಡನೆಯ ಭಾಗದಲ್ಲಿ ಸಾಹಿತಿಗಳೊಂದಿಗಿನ ಪತ್ರ ವ್ಯವಹಾರವನ್ನು ದಾಖಲಿಸುತ್ತಾರೆ.
ಈ ಪುಸ್ತಕ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತಂದು ಕೊಟ್ಟಿದೆ.
‘ಅಪರವಯಸ್ಕನ ಅಮೆರಿಕ ಯಾತ್ರೆ’ ಕನ್ನಡದಲ್ಲಿ ಬಂದ ಪ್ರವಾಸ ಕಥನಗಳ ಪೈಕಿ ಅಪೂರ್ವವಾದದ್ದು. ಇಂಗ್ಲಿಷ್ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿ, ಇಂಗ್ಲಿಷ್ ಪ್ರೊಫೆಸರ್ ಆಗಿ ಬದುಕಿದ ರಾಯರು ಬಿಡುಗಣ್ಣಿನ ಮೂಲಕ ತಾವು ಕಂಡ ಅಮೇರಿಕಾದ ನೆನಪುಗಳನ್ನು ದಾಖಲಿಸುತ್ತ, ಜೊತೆಗೆ ತಮ್ಮ ಓದಿನಿಂದ, ನೆನಪುಗಳಿಂದ ಅಪೂರ್ವ ಒಳನೋಟಗಳನ್ನು ನೀಡುತ್ತ ಮೌಲಿಕ ಗ್ರಂಥವನ್ನು ನಮಗೆ ನೀಡಿದ್ದಾರೆ.
‘ಸಂಜೆಗಣ್ಣಿನ ಹಿನ್ನೋಟ’ ಅವರ ಆತ್ಮಕಥನ.
ಶತಾಯುಷಿ ರಾಯರು ತಮ್ಮ ನಿಡುಗಾಲದ ಬದುಕಿನಲ್ಲಿ ಕಂಡ ಹಲವು ಏಳುಬೀಳುಗಳನ್ನು ತುಂಬಾ ಸ್ವಾರಸ್ಯಕರವಾಗಿ ನಿರೂಪಿಸಿದ್ದಾರೆ.

‘ದೇವರು’ ಅತ್ಯಂತ ಚರ್ಚೆಗೊಳಗಾದ ವೈಚಾರಿಕ ಕೃತಿ. ನಾಸ್ತಿಕರಾದ ರಾಯರು ತಮ್ಮ ವಿಚಾರಧಾರೆಯನ್ನು ಓದುಗರ ಮೇಲೆ ಹೇರುವುದಿಲ್ಲ. ಬದಲಾಗಿ ದೇವರ ಬಗೆಗಿನ ನಮ್ಮ ಪರಿಕಲ್ಪನೆಗಳನ್ನು ವಿಸ್ತರಿಸುತ್ತಾರೆ, ಪ್ರಶ್ನಿಸುತ್ತಾರೆ. “ದೇವರು ಬೇಕು,ಆದರೆ ಅವನಿಲ್ಲ” ಎಂಬ ಕೊನೆಯ ಅಧ್ಯಾಯ ಅವರ ಮನೋಧರ್ಮದ ಪರಿಪಾಕವಾಗಿದೆ. ಈ ಪುಸ್ತಕ ಅವರಿಗೆ ಪಂಪ ಪ್ರಶಸ್ತಿಯನ್ನು ತಂದುಕೊಟ್ಟಿತು.

ಅಲೆಯುವ ಮನ, ಹಗಲುಗನಸುಗಳು, ಮಿನುಗು- ಮಿಂಚು ಮೊದಲಾದ ಲಲಿತ ಪ್ರಬಂಧಗಳ ಸಂಕಲನಗಳಲ್ಲಿ ತಮಗೆ ವಿಶಿಷ್ಟವಾದ ನವಿರಾದ ಹಾಸ್ಯಪ್ರಜ್ಞೆ, ವಿಸ್ತಾರವಾದ ಓದಿನಿಂದ ನೀಡುವ ಮಾಹಿತಿ, ಲವಲವಿಕೆಯ ಶೈಲಿ,ಹೀಗೆ ಮೂರ್ತಿರಾಯರು ಕನ್ನಡ ಲಲಿತ ಪ್ರಬಂಧ ಪ್ರಕಾರದ ಶಿಖರ ಎನ್ನಬಹುದು.
ಶೇಕ್ಸ್ಪಿಯರ್, ಬಿ ಎಂ ಶ್ರೀ, ಸಾಕ್ರೆಟೀಸನ ಕೊನೆಯ ದಿನಗಳು, ಪಾಶ್ಚಾತ್ಯ ಸಣ್ಣ ಕಥೆಗಳು ಜನತಾ ಜನಾರ್ದನ, ಯೋಧನ ಪುನರಾಗಮನ, ಗಾನ ವಿಹಾರ, ಪೂರ್ವಸೂರಿಗಳೊಡನೆ, ಆಷಾಡಭೂತಿ- ಹೀಗೆ ಜೀವನ ಚರಿತ್ರೆಗಳು, ನಾಟಕ ,ಅನುವಾದ ವೈಚಾರಿಕ ಬರಹ ಎಲ್ಲದರಲ್ಲೂ ಮೂರ್ತಿರಾಯರು ಪ್ರಥಮ ದರ್ಜೆಯ ವ್ಯವಸಾಯ ಮಾಡಿದ್ದಾರೆ.
ಸಹಜವಾಗಿಯೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ ೧೯೮೪ರಲ್ಲಿ ಅವರಿಗೆ ಒಲಿದು ಬಂತು.

೨೦೦೩ರಲ್ಲಿ ನಮ್ಮನ್ನು ಅಗಲಿದ ಮೂರ್ತಿರಾಯರು
ಸಂಗೀತ ಪ್ರೀತಿ, ಸಾಹಿತ್ಯ ಪ್ರೀತಿ, ಜೀವನಪ್ರೀತಿ ಮುಪ್ಪುರಿಗೊಂಡು ಮಾಗಿದ ಜೀವ.

ಮೊದಲ ಸಲ ಅವರನ್ನು ಕಂಡಾಗ ಮಾತು ಕೇಳಿಸಿಕೊಳ್ಳಲು ಆಗದ ಬಗ್ಗೆ ಮೇಲೆ ಬರೆದಿದ್ದೇನೆ.
ತಮ್ಮ ಬರಹಗಳ ಮೂಲಕ ಮೂರ್ತಿರಾಯರು ಸದಾ ನಮ್ಮೊಡನೆ ಮಾತನಾಡುತ್ತಾರೆ.
ನಾವು ಕೇಳಿಸಿಕೊಳ್ಳಬೇಕು ಅಷ್ಟೇ.

ಪ್ರೊ ಎ ಎನ್ ಮೂರ್ತಿರಾವ್ ಅವರ ಕೃತಿಗಳು:

ಆಷಾಡಭೂತಿ (ಅನುವಾದ)
ದೇವರು
ಅಲೆಯುವ ಮನ
ಅಪರವಯಸ್ಕನ ಅಮೆರಿಕ ಯಾತ್ರೆ
ಸಂಜೆಗಣ್ಣಿನ ಹಿನ್ನೋಟ
ಹಗಲುಗನಸುಗಳು

ಮಿನುಗು ಮಿಂಚು
ಜನತಾ ಜನಾರ್ದನ
ಮಹಾಭಾರತದಲ್ಲಿ ಕೇಡು ಎಂಬುದರ ಸಮಸ್ಯೆ
ಗಾನ ವಿಹಾರ
ಸಾಹಿತ್ಯ ಮತ್ತು ಸತ್ಯ
ಹೇಮಾವತಿ ತೀರದ ತವ
ಸಿ
ಪೂರ್ವಸೂರಿಗಳೊಡನೆ
ಶೇಕ್ಸ್ ಪಿಯರ್
ಬಿ ಎಂ ಶ್ರೀಕಂಠಯ್ಯ
ಚಿತ್ರಗಳು- ಪತ್ರಗಳು
ಸಾಕ್ರೆಟೀಸನ ಕೊನೆಯ ದಿನಗಳು
ಯೋಧನ ಪುನರಾಗಮನ
ಮತ್ತು
ಅನೇಕ ಪ್ರಬಂಧ ಸಂಕಲನಗಳು.


Leave a Reply

Back To Top