ಶಿವಮೊಗ್ಗ ಜಿಲ್ಲೆಯ ಚಳುವಳಿಗಳು

ಡಾ.ಸಣ್ಣರಾಮ

ಹಿಂದಿನ ವಾರದ ಮುಂದುವರೆದ ಭಾಗ

ಕರ್ನಾಟಕದಲ್ಲಿ ಶಿವಮೊಗ್ಗ ಜಿಲ್ಲೆ ವೈಶಿಷ್ಟ್ಯಪೂರ್ಣವಾದುದು. ಈ ಜಿಲ್ಲೆಯಲ್ಲಿ ಸದ್ಯ ಏಳು ತಾಲ್ಲೂಕುಗಳಿವೆ. ಅವುಗಳಲ್ಲಿ ನಾಲ್ಕು ಅತೀ ಹೆಚ್ಚು ಮಳೆಯಾಗುವ ತಾಲ್ಲೂಕುಗಳಾದರೆ, ಮೂರು  ಸಾಧಾರಣ ಮಳೆಯಾಗುವ ತಾಲ್ಲೂಕುಗಳು. ದಕ್ಷಿಣ ಭಾರತದ ‘ಚಿರಾಪುಂಜಿ’ ಎಂದು ಪ್ರಖ್ಯಾತವಾಗಿರುವ ಆಗುಂಬೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿದೆ. ದಟ್ಟ ಮಲೆನಾಡು ಅರೆಮಲೆನಾಡು ಭಾಗಗಳು ಜಿಲ್ಲೆಗೆ ಪ್ರಾಕೃತಿಕ, ಸಾಂಸ್ಕೃತಿಕ ವೈಶಿಷ್ಟತೆಯನ್ನು ತಂದುಕೊಟ್ಟಿದೆ. ಭಾಷೆಯ ಬಳಕೆಯಲ್ಲಿಯೂ ಈ ಏಳು ತಾಲ್ಲೂಕುಗಳು ಸೂಕ್ಷ್ಮವಾಗಿ ಭಿನ್ನತೆ ಕಂಡು ಬರುತ್ತದೆ. ಈ ಭಿನ್ನತೆ ಮತ್ತು ವೈಶಿಷ್ಟತೆ ಅಲ್ಲಿನ ಜನರಲ್ಲಿ ವೈಚಾರಿಕ ಶಕ್ತಿಯನ್ನು ಜಾಗ್ರತಗೊಳಿಸಿ ಚಿಂತನಾಶೀಲರನ್ನಾಗಿ, ಸಂವೇದನಾಶೀಲರನ್ನಾಗಿ ಮಾಡಿದೆ. ಸಾಹಿತ್ಯ ರಚನೆಯಲ್ಲಿಯೂ ಶಿವಮೊಗ್ಗ ಜಿಲ್ಲೆ ಇತರೆಲ್ಲಾ ಜಿಲ್ಲೆಗಳಿಗಿಂತ ಒಂದು ಕೈ ಮೇಲೆ ಎನ್ನಬಹುದು. ಇದುವರೆಗೆ ಕರ್ನಾಟಕಕ್ಕೆ ಲಭ್ಯವಾಗಿರುವ ಎಂಟು ಜ್ಞಾನಪೀಠಗಳಲ್ಲಿ ಮೂರು ಜ್ಞಾನಪೀಠಗಳನ್ನು ಕೊಟ್ಟ  ಶ್ರೇಯಸ್ಸು ಶಿವಮೊಗ್ಗ ಜಿಲ್ಲೆಯದು. ಈ ಎಲ್ಲಾ ಕಾರಣಗಳಿಂದಾಗಿ ಇಲ್ಲಿ ಜನಪರ ಚಳವಳಿಗಳು ಹುಟ್ಟಿವೆ. ಅಲ್ಲದೆ ಇಂದಿಗೂ ಕ್ರಿಯಾಶೀಲವಾಗಿದೆ.

  ಶಿವಮೊಗ್ಗ ಜಿಲ್ಲೆಯ ಚಳವಳಿಗಳಿಗೆ ಸುದೀರ್ಘ ಇತಿಹಾಸವಿದೆ. ಕರ್ನಾಟಕದಲ್ಲಿ ಸಾಮಾಜಿಕ, ಸಾಹಿತ್ಯಕ ಕ್ರಾಂತಿಗೆ ನಾಂದಿ ಹಾಡಿದ ೧೨ನೇ ಶತಮಾನದ ಶರಣ ಚಳವಳಿಯಿಂದಲೇ ಶಿವಮೊಗ್ಗ ಚಳವಳಿಯ ಬೇರನ್ನು ಗುರುತಿಸಬಹುದು. ಶರಣ ಚಳವಳಿಯಲ್ಲಿ ತಮ್ಮ ಮೇರು ಸದೃಶ್ಯ ಚಿಂತನೆಯಿಂದ ಗಮನ ಸೆಳೆದ ಮಹಾಶರಣ ಎಂದರೆ ಅಲ್ಲಮ ಪ್ರಭುಗಳು. ಹರಿಹರನ ಕಾಲದಿಂದಲೂ ಅಲ್ಲಮಪ್ರಭುವಿನ ಜೀವನವನ್ನು  ಆಧರಿಸಿದ ನೂರಾರು ಕೃತಿಗಳು, ನಡುಗನ್ನಡ ಮತ್ತು ಆಧುನಿಕ ಕನ್ನಡ ಸಾಹಿತ್ಯದಲ್ಲಿವೆ. ಅಲ್ಲದೆ ಸ್ವತಃ ಪ್ರಭುದೇವರು ಬರೆದಿರುವ ವಚನಗಳು ಅವರ ಜೀವನ ಇತಿಹಾಸವನ್ನು ಕಟ್ಟಿಕೊಡುವಲ್ಲಿ ಸಹಕರಿಸುತ್ತವೆ. ಇಂತಹ ವಿಶ್ವಮಾನ್ಯ ಶರಣ ಶಿವಮೊಗ್ಗ ಜಿಲ್ಲೆಯಲ್ಲಿದ್ದಾನೆಂಬುದು  ಹೆಮ್ಮೆಯ ಸಂಗತಿಯಾಗಿದೆ.

   ಅಲ್ಲಮ ಪ್ರಭು ಹುಟ್ಟಿದ್ದು ಶಿವಮೊಗ್ಗ  ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವಿ ಎಂಬ ಗ್ರಾಮದಲ್ಲಿ. ಹನ್ನೆರಡನೆ ಶತಮಾನದಲ್ಲಿ ಬಳ್ಳಿಗಾವಿ “ಬನವಸೆ ಹನ್ನೆರಡು ಸಾವಿರ” ಎಂಬ ಒಂದು ದೊಡ್ಡ ಆಡಳಿತ ವಿಭಾಗದ ಮುಖ್ಯ ಸ್ಥಳವಾಗಿತ್ತು. ವೀರಶೈವರ ಕಾಳಮುಖ ಪಂಥದ ಕೇಂದ್ರ ಸ್ಥಾನವಾಗಿತ್ತು. ಚಾಮರಸ ಹೇಳುವಂತೆ ಅಲ್ಲಮಪ್ರಭುವಿನ ತಂದೆ ತಾಯಿಯರ ಹೆಸರು ‘ನಿರಹಂಕಾರ ಸುಜ್ಞಾನಿ’ ದೇವಸ್ಥಾನದಲ್ಲಿ ಮದ್ದಳೆ ಸೇವೆಯನ್ನು ಸಲ್ಲಿಸುತ್ತಿದ್ದ ಪ್ರಭುಗಳು ಪ್ರಾಯಕ್ಕೆ ಬರುತ್ತಿದ್ದಂತೆ ಮದ್ದಳೆ ನುಡಿಸುವ ಕಲೆಯನ್ನು ತುಂಬಾ ಪ್ರಾವಿಣ್ಯ ಪಡೆದಿದ್ದ. ಅವನ ಮದ್ದಳೆ ಬಾರಿಸುವ ನೈಪುಣ್ಯಕ್ಕೆ ಮನಸೋತು ‘ಕಾಮಲತೆ’ ಎಂಬ ಸುಂದರ ಹೆಣ್ಣು ಮದುವೆಯಾಗುತ್ತಾಳೆ. ಪ್ರಭುವಿನದು ಸುಂದರ ದಾಂಪತ್ಯ, ಪ್ರಭು ದಾಂಪತ್ಯ ಜೀವನದ ರಸಾನಂದವನ್ನು  ಹೆಚ್ಚು ದಿನ ಸವಿಯಲಿಲ್ಲ. ಮದುವೆಯಾದ ಕೆಲವೇ ವರ್ಷಗಳಲ್ಲಿ ಕಾಮಲತೆಯು ಮರಣ ಹೊಂದಿತ್ತಾಳೆ. ಸತಿಯ ಮರಣದಿಂದ ಅಪಾರವೇದನೆ ಪಡುವ ಅಲ್ಲಮಪ್ರಭು ಸಂಸಾರದಲ್ಲಿ ನೊಂದು ಬದುಕಿನಲ್ಲಿ ಜುಗುಪ್ಸೆಯನ್ನು ಹೊಂದುತ್ತಾನೆ.

———————ಮುಂದುವರೆಯುತ್ತದೆ…

Leave a Reply

Back To Top