ಕವಿತೆ
ಇರಲಿ ಬಿಡು
ಸ್ಮಿತಾ ರಾಘವೆಂದ್ರ
ಸಂಬಂಧಗಳು ಸವಿಯೆಂದು ಬೀಗುತಿದ್ದೆ
ಕಳಚಿ ಬಿದ್ದಾಗಲೇ ಗೊತ್ತಾಗಿದ್ದು ಕಹಿಯೆಂದು
ಚಿಗುರು ಚಿವುಟಿದಮೇಲೆ ಫಲ ನೀಡುವ ಖಾತರಿ ಇಲ್ಲ
ಸುಮ್ಮನೇ ಬೆಳೆಯಲು ಬುಡವಾದರೂ
ಇರಲಿ ಬಿಡು.
ಕಳೆದ ಕಾಲವ ತಿರುಗಿ ನೋಡುತಲಿದ್ದೆ.
ಎಷ್ಟೊಂದು ನಲಿವುಗಳು ಉಸಿರ ನಿಲ್ಲಿಸಿವೆ
ನೋವುಗಳೂ ಬಸವಳಿದು ಸುಮ್ಮನಾಗಿವೆ,
ಬೇಡ ಬಾಚಿಕೊಳ್ಳುವದು ಏನನ್ನೂ
ಹಾಗೇ ಬದುಕಲು ಭಾವಗಳಾದರೂ ಇರಲಿ ಬಿಡು.
ಜೊತೆಯಿದ್ದ ನಂಬಿಕೆಯ ಜೀವಗಳ ಜತನದಲಿ ಸಲಹಿದ್ದೆ
ಜಾಡು ಮರೆತು ಮೇಲೇರಿ ಅಣಕಿಸುತಲಿವೆ
ಈಗ ಹಕ್ಕಿ ಗೂಡಿಗೆ ಮಾತ್ರ ಸೀಮಿತ
ರೆಕ್ಕೆಯನೇ ಮರೆಯುವದು ಅನಿವಾರ್ಯ
ಸೋತ ಕಾಲುಗಳಾದರೂ ಇರಲಿ ಬಿಡು.
ದಟ್ಟವಾಗಿದ್ದ ಕಣ್ಣ ಕನಸಿನ ಗರಿಗಳು
ಒಂದೊಂದೇ ಉದುರುತ್ತಿವೆ.
ಬೋಳಾದ ರೆಪ್ಪೆಯೊಳಗೆ-
ಹನಿ ಹಿಡಿದಿಡುವ ಕಸರತ್ತು ಮುಗಿದಿದೆ.
ಕಣ್ಣತೇವ ಆರಿದರೂ ನೋಟವಾದರೂ ಇರಲಿ ಬಿಡು.
ಕೊರೆದು ಕೊರೆದು ಅಗಲವಾದ ಅಂತರ
ಮುಚ್ಚಲೇಬೇಕೆಂಬ ಇರಾದೆ ಇಲ್ಲ ಯಾರಲ್ಲೂ
ಇನ್ನಾರೋ ಎಡವಿ ಬೀಳದಿರಲಿ ಒಂದು ಎಳೆಯ ಎಳೆದಿಡುವ
ಜೀಕಿದ ನೆನಪಾದರೂ ಇರಲಿ ಬಿಡು.
ಯಾನಕೆ ಕೊನೆ ಅದಾಗಿಯೇ ಬರಬೇಕು ಕವಲುದಾರಿ ಯಾದರೂ
ಮತ್ತೆಲ್ಲೋ ಹೋಗಿ ಸೇರಲೇ ಬೇಕು
ಇದ್ದೂ ಇಲ್ಲದಂತಾಗುವದು ಹೇಗೆ
ಬದುಕುತ್ತ ಕಾಯುವ ಇಲ್ಲ ಕಾಯುತ್ತ ಬದುಕುವ ನಿಟ್ಟುಸಿರಾದರೂ ಇರಲಿ ಬಿಡು.
******************************************
ಚೆಂದ ಕವಿತೆ
ಚನ್ನಾಗಿದೆ. ಅಭಿನಂದನೆಗಳು
ಚಂದದ ಕವಿತೆ
ಕವಿತೆ ಖುಷಿ ಕೊಟ್ಟಿತು