ಏಕೀ ಏಕತಾನತೆ

ಲಹರಿ

ಏಕೀ ಏಕತಾನತೆ

ಸ್ಮಿತಾ ಭಟ್

ಸ್ಮಿತಾಭಟ್ ಕಾವ್ಯಗುಚ್ಛ

ಅಮ್ಮಾ ನಿಂಗೆ ಇತ್ತೀಚಿಗೆ ಫಲಾವ್ ಮಾಡೋಕೆ ಬರಲ್ಲ ಎಂದು ಊಟಕ್ಕೆ ಕುಳಿತವ ಅಸಾಧ್ಯವಾದ ಅಸಮಾಧಾನ ತೋರಿಸಿ ಎರಡು ತುತ್ತು ತಿಂದ ಶಾಸ್ತ್ರ ಮಾಡಿ ಗೊಣಗುತ್ತಾ ಎದ್ದು ಹೊರಟೇ ಹೋದ.

ನನಗೋ ಅಳುವೇ ತುಟಿಗೆ ಬಂದ ಅನುಭವ.

ಮಾತು ಮಾತಿಗೂ ಅಮ್ಮನ ಫಲಾವ್ ಅಂದ್ರೆ ಅದೆಷ್ಟು ರುಚಿ, ಯಾರಿಗೂ ಈತರ ಮಾಡೋಕೆ ಬರಲ್ಲ ಎಂದು

ಯಾರದ್ದಾದರೂ ಮನೆಯಲ್ಲಿ, ಹೋಟೆಲ್‌ ಗಳಲ್ಲಿ , ತಿಂದು ಬಂದಾಗೆಲ್ಲ ಪಲಾವ್ ನ ಗುಣ ಸ್ವಭಾವ ದೂರುತ್ತ ನನಗೆ ಕೊಟ್ಟ ಸರ್ಟಿಫಿಕೇಟ್ ನ ಲೆಕ್ಕವೇ ಇಲ್ಲ.

ಇದೇನು ಇದ್ದಕ್ಕಿದ್ದಂತೆ ಈ ಪರಿ ಬದಲಾವಣೆ!?

ನಿರಿಕ್ಷೆಗೂ ಮೀರಿದ ಪ್ರತಿಕ್ರಿಯೆ

ಅಡುಗೆಯೆಂಬ ಅರಮನೆಯಲ್ಲಿ ನನ್ನ ಜಂಗಾಬಲವೇ ಉಡುಗಿಹೋಗಿತ್ತು.

ಎದ್ದು ಹೊರಟವನ ಹಿಂದಿಂದೇ ಹೋಗಿ

ಯಾಕೋ ಏನಾಯ್ತು ಹೇಳು.

ಮತ್ತೆ ಇಷ್ಟು ದಿನ ಬಾಯಿ ಚಪ್ಪರಿಸಿ ಚಪ್ಪರಿಸಿ ತಿಂತಾ ಇದ್ದೆ ಈಗೆನಾಯ್ತು ಅಂತದ್ದು.

ಸೋತ ಭಾವದೊಳಗೆ ಅವನ ಪರಿ ಪರಿಯಾಗಿ

ಕೇಳುತ್ತಿದ್ದೆ.

ಅದು ಆವಾಗ ಆಗಿತ್ತು,ಈಗ ಅಲ್ಲ.

ಈಗಂತೂ ನಿನ್ನ ಫಲಾವ್ ಯಾಕೋ ಮೊದಲಿನ ರುಚಿ ಬರೋದೇ ಇಲ್ಲ.

ಮರೆತೇ ಹೋಗಿದೆ ಅಮ್ಮಾ ನಿಂಗೆ ಆವತ್ತಿನ ರುಚಿ ಎನ್ನುತ್ತ,

ಯಾವ ಪ್ರತಿಕ್ರಿಯೆಗೂ ಕಾಯದೇ ಹೊರಟೇ ಹೋಗಿದ್ದ.

ಮನೆಯ ಎಲ್ಲ ಸದಸ್ಯರಿಂದ ಇಂತಹದ್ದೊಂದು ತಕರಾರು ಸದಾ ಸ್ವೀಕರಿಸುವ ನನಗೆ,ರೂಡಿಯಾದ ವಿಚಾರವೇ ಆದರೂ ಮಗನಿಂದ ಬಂದ ಪ್ರತಿಕ್ರಿಯೆಗೆ ಬೆರಗಾಗಿದ್ದೆ.

ಮತ್ತದರ ನಿರೀಕ್ಷೆಯೂ ಇರಲಿಲ್ಲ.

ಇಲ್ಲ ಕಣೋ ಬಹಳ ದಿನದಿಂದ ಒಂದೇ ತೆರನಾದ ರುಚಿ, ಕೈ ಅಡುಗೆ ತಿಂತಾ ಇದ್ದೀಯಲ್ಲ.ಅದೂ ಅಲ್ಲದೇ ನಿತ್ಯ ಫಲಾವ್ ಬೇಕು ಅಂತೀಯಲ್ಲ,ಅದಕ್ಕೆ ನಿನಗೆ ಬೇಜಾರು ಬಂದಿದೆ. ಎಂದು ವಾಸ್ತವದ ಅರಿವು ಮೂಡಿಸಲು ಪ್ರಯತ್ನಿಸುತ್ತಿದ್ದೆ.

ಇರಬಹುದು ಬಿಡು ಅಮ್ಮಾ,, ಆದ್ರೂ ನೀನ್ಯಾಕೆ ಮೊದಲಿನಂತೆ ಅಡುಗೆ ಮಾಡೋದಿಲ್ಲ ಈಗ, ಎನ್ನುತ್ತಲೇ ಎದ್ದು ನಡೆದಿದ್ದ.

ಅಡುಗೆ ಮನೆಗೆ ಎಂಟ್ರಿ ಕೊಡುತ್ತಿದ್ದಂತೆ

ಬೇಸಿನ್ ಒಳಗೆ ಇದ್ದ ಪಾತ್ರೆಗಳು. ಅಲ್ಲಲ್ಲೇ ತಿಂದು ಎದ್ದು ಹೋದ ತಟ್ಟೆಗಳು.

ಒರೆಸಿ ಇಡಬೇಕಾದ ಪಿಂಗಾಣಿಗಳು.

ಪಿಲ್ಟರ್ ಕೆಳಗೆ ಚೆಲ್ಲಿದ ನೀರು.

ತುಂಬಿಟ್ಟ ತರಕಾರಿಳ ದಂಡು.

ಜಾಗ ತಪ್ಪಿದ ಡಬ್ಬಿಗಳು.

ಮಾಡಬೇಕಾದ ನಿತ್ಯದ ಏಕತಾನತೆಯ ನೋವನ್ನು ನೆನಪಿಸುತ್ತಿತ್ತು.

ಸ್ವಲ್ಪ ಯೋಚಿಸಿ

ಊಟ ಮಾಡುವವರಿಗೇ ಏಕತಾನತೆ ಕಾಡುವಾಗ

ಅಡುಗೆ ಮಾಡುವರಿಗೆ ಇನ್ನೆಂತ ಏಕತಾನತೆ ಕಾಡುತ್ತದೆ ಎಂದು.

ಕೇವಲ ಊಟ, ಅಡುಗೆ ವಿಷಯ ಮಾತ್ರವಲ್ಲ,

ಪ್ರತೀ ಕೆಲಸದಲ್ಲೂ ಅಷ್ಟೇ ಮಾಡುವ ಕಷ್ಟ ಆಡುವವನಿಗೆ ಎಂದೂ ಅರ್ಥವಾಗುವದಿಲ್ಲ.

ಅದಕ್ಕೇ ಹೇಳೋದು

ಮಾತೊಗೆದು ಹೋಗುವಾಗಿನ ಅಹಂಕಾರ ಮೈ ಮುರಿದ ದುಡಿಯುವಾಗ ಇರೋದಿಲ್ಲ ಎಂದು.

ಈಗ ಐದಾರು ತಿಂಗಳಿನಿಂದ ಕರೋನಾ ಕಾರಣದಿಂದಾಗಿ,

ಕಾಲ ಎಲ್ಲರನ್ನೂ ಬದಿಗೆ ಸರಿಸಿ ತಾನು ಮಾತ್ರ ಓಡುತ್ತಿದೆಯೇ ಅನ್ನಿಸುತ್ತಿದೆ.

ಅದೆಷ್ಟೋ ಜನರ ಮನದೊಳಗೆ ಏಕತಾನತೆ ರೇಜಿಗೆ ಹುಟ್ಟಿಸುವಷ್ಟು ಹರಡಿಕೊಂಡಿದೆ.

ತಲೆ ತಲಾಂತರಗಳಿಂದ ನಡೆದುಕೊಂಡು ಬಂದ ಪದ್ದತಿಗೆ ಪುಲ್ ಸ್ಟಾಪ್ ಇಟ್ಟು ನಗುತ್ತಿದೆ.

ಕರೋನಾ.

ಇಂದು ಸರಿ ಹೋಗುತ್ತದೆ, ನಾಳೆ ಸರಿ ಹೋಗುತ್ತದೆ, ಎಂದು ಕಾದು ಕಾದು ಸುಸ್ತಾದ ಭಾವಗಳಿಗೆ ವಾಸ್ತವದ ಅರಿವು ಮೂಡಿಸಲು ಶತ ಪ್ರಯತ್ನ ಪಡುತ್ತಿದ್ದೇವೆ.

ಒಂದೇ ಊಟ, ಒಂದೇ ನೋಟ, ಒಂದೇ ಮಾತು,ಕುಳಿತಲ್ಲೇ ಕೆಲಸ,ಪಿಳಿ ಪಿಳಿ ಕಣ್ಣು ಅದೇ ಮುಖ,ಅದೇ ಭಾವ,ಎಲ್ಲಿಯೂ ಹೋಗೋದು ಬರೋದು ಅಂತೂ ಇಲ್ವೇ ಇಲ್ಲ.ಕೇವಲ ಭಯ ಭಯ.

ಕಪಾಟಿನಲ್ಲಿ ಡ್ರೆಸ್ಸುಗಳಂತೆ ಬದುಕು ಬಣ್ಣ ಮಾಸುತ್ತಿದೆ

ದುಬಾರಿ ಮೇಕಪ್ ಕಿಟ್‌ಗಳಂತೆ ಭಾವಗಳು ಡೇಟ್ ಬಾರ ಆಗುತ್ತಿವೆ.

ಒಂದಿನ ರಜೆ ಸಿಕ್ಕಿದ್ರೆ ಸಾಕಪ್ಪ ಅಂತಿದ್ದವರು ಯಾವಾಗಪ್ಪ ಕೆಲಸಕ್ಕೆ ಹೋಗೋದು ಎಂದು ಒದ್ದಾಡುತ್ತಿದ್ದಾರೆ.

ಮಾಡಬೇಕಾದ ಕೆಲಸಗಳೆಲ್ಲ ಮಕಾಡೆ ಮಲಗಿವೆ.

ಆದರೆ ರಾತ್ರಿ ಬೆಳಗು ಮಾತ್ರ ಆಗುತ್ತಲೇ ಇದೆ,  ನಾವು ಮಾತ್ರವೇ ನಿಂತ ನೀರಾಗಿದ್ದೇವೆ ಎಂದು ಅಲವತ್ತು ಕೊಳ್ಳುತ್ತ,  ಆವಾಹನೆ ಮಾಡದೇ ಹೋದರೂ ಬರುವ ಬೇಸರದ ಬೂತಕ್ಕೆ ಬಸವಳಿದು ಹೋಗಿದ್ದೇವೆ.

ಆರಂಭದ ಬದಲಾವಣೆಯನ್ನು ನಗು ನಗುತ್ತಲೇ ಸ್ವೀಕರಿಸಿದ ನಾವು,ಹೊಸ ಮಾರ್ಪಾಡಾಗಿ ಬದಲಾಯಿಸಿಕೊಳ್ಳಬೇಕೆಂದುಕೊಂಡ ನಾವು, ಈಗ ಮುಗುಮ್ಮಾಗಿ ಕುಳಿತಿದ್ದೇವೆ.

ಉತ್ಸಾಹ ಕುಂದಿದೆ.ಅಯ್ಯೋ ಏನಾದರೂ ಆಗಲಿ, ಒಂದು ಬದಲಾವಣೆ ಬರಲಿ, ಎಂದು ಬಕ ಪಕ್ಷಿಯಂತೆ ಕಾಯುತ್ತಿದ್ದೇವೆ.

ಬಂದಿಸಿಟ್ಟ ಸಮಯವನ್ನೂ ಸಂಯಮದಿಂದ ಕಳೆಯಬೇಕು. ಹೊಸತೇನ್ನೋ ಕಂಡುಕೊಳ್ಳಬೇಕು,ಎಂದು ಮನಸಿನಲ್ಲಿ ಲೆಕ್ಕ ಹಾಕಿದ ಸರಕುಗಳೆಲ್ಲ ಮುಗಿದು ಹೋಗಿವೆ.

ಏನನ್ನೇ ಆದರೂ ಎದುರಿಸುವ ಛಲ ಕಳ್ಳಬೆಕ್ಕಿನಂತೆ ಓಡಾಡುತ್ತಿದೆ.

ಯಾವ ಏಕತಾನತೆಯೇ ಆದರೂ ಬೇಸರ ತರಿಸುವುದು ಮನುಷ್ಯನ ಸ್ವಾಭಾವಿಕ ಗುಣಲಕ್ಷಣ,ಬಂಗಲೆಯಲ್ಲಿ ಬದುಕುವವಗೆ ಗುಡಿಸಲು ಆಕರ್ಷಿಸುವಂತೆ, ಗುಡಿಸಲು ಅರಮನೆಯ ಕನಸು ಕಾಣುವಂತೆ,

ನಿರಂತರವಾದ ಸುಖ, ಪ್ರೀತಿ,ನೋವು, ಕಷ್ಟಗಳೂ,

ಬದಲಾವಣೆಯನ್ನು ಬಯಸುತ್ತವೆ ಮತ್ತು ಬದಲಾವಣೆಯ ಮಾರ್ಗವನ್ನೂ ಕಂಡುಕೊಳ್ಳುತ್ತವೆ.

ಯಾಕೆಂದರೆ ಮನುಷ್ಯ ಸದಾ ಚಲನೆಯನ್ನು ಇಷ್ಟಪಡುತ್ತಾನೆ.

ನಿಂತ ನೀರಾದರೆ ಅಸಾಧ್ಯ ಅಸಹನೆಯಿಂದ ಗಬ್ಬುನಾರಲು ಶುರುವಾಗುತ್ತಾನೆ.

ಓಡುವ ಮೋಡ,ಹರಿಯುವ ನದಿ.

ಬೀಸುವ ಗಾಳಿ,ಕೊನೆಗೆ

ಭೂಮಿ ಸೂರ್ಯ ಚಂದ್ರ ಸಕಲ ಗ್ರಹಗಳೂ

ಚಲನೆಯ ಪ್ರತೀಕವೇ.ಅವುಗಳನ್ನೆಲ್ಲ ಹೇಗೆ ತಡೆದು ಹಿಡಿಯಲು ಸಾಧ್ಯವಿಲ್ಲವೋ ,

ತಡೆದರೂ ಅನಾಹುತವಾಗುವದೋ,

ಮನುಷ್ಯನ ಚಲನೆಯನ್ನು ತಡೆದರೂ ಅದೇ ಸಂಭವಿಸುತ್ತದೆ.

 ಇನ್ನು ಪುಟ್ಟ ಪುಟ್ಟ ಮಕ್ಕಳನ್ನು ಹೇಗೆ ಒಂದೇ ಗತಿಯಲ್ಲಿ ಇಡಲು ಸಾಧ್ಯ. ಬಹಳವೇ ಖಿನ್ನರಾಗುತ್ತಿದ್ದಾರೆ ಅವರು.

ಶಾಲೆ ಎನ್ನುವುದು ಮಕ್ಕಳಿಗೆ ಬೇಸರಕ್ಕಿಂತ ಹೆಚ್ಚು ಆಪ್ತಸಂಗತಿ.

ಮನೆಯಲ್ಲಿ ಇದ್ದೂ ಇದ್ದೂ ಏನೂ ಘಟಿಸದ ಬದುಕಿನಿಂದ ಬೇಸತ್ತ ಭಾವ ಹಲವು ಮಕ್ಕಳಲ್ಲಿ ವ್ಯಕ್ತವಾಗುತ್ತಿದೆ.

ಸ್ವಚ್ಚಂದ ಹಕ್ಕಿಗಳ ಗೂಡಿನಲ್ಲಿ ತುಂಬಿದರೆ ಏನಾದೀತು ಅಲ್ಲವೇ!?

ಎನನ್ನೇ ಆದರೂ ಸ್ವಲ್ಪ ದಿನ ಸಹಿಸಿಕೊಳ್ಳುತ್ತದೆ. ಮನಸು. ಬಹಳ ಧೀರ್ಘಕಾಲದವರೆಗಿನ ಏಕತಾನತೆಗೆ ಒಳಗಾಗಲಾರದು.

ಬದಲಾವಣೆ ಬಯಸುತ್ತಲೇ ಇರುತ್ತದೆ.

ಆಗಲೇ ಅಲ್ಲವೇ?

ನಾವು ಪ್ರವಾಸ, ಶಾಪಿಂಗ್,ಸಂಬಂಧಿಕರಮನೆ,ಅಂತೆಲ್ಲ ತಾತ್ಕಾಲಿಕ ಗ್ಯಾಪ್ ತೆಗೆದುಕೊಂಡು ಮತ್ತೆ

ಸ್ವಕ್ಷೇತ್ರಕ್ಕೆ ಮರಳುವದು.

ಜೀವನದ ಪರ್ಯಂತ ನಾವು ಹೀಗೆ ಮನಸ್ಸನ್ನು, ಬದುಕನ್ನು, ರಿಪ್ರೆಷ್ ಆಗುವ ಕಾರ್ಯ ಮಾಡುತ್ತಲೇ ಇರುತ್ತೇವೆ,ಏಕೆಂದರೆ ಆಗಾಗ ಬರುವ ಏಕತಾನತೆಯಿಂದ ಮಕ್ತಿಪಡೆಯಲು,ಅದು ಸರಿಕೂಡಾ.

ಆದರೆ ಈಗ !?

ಬದಲಾವಣೆಗಳನ್ನು ಬರಮಾಡಿಕೊಳ್ಳಲಾಗದೇ ಅಸಹಾಯಕರಾಗಿ ಪರ ಪರ ಕೆರೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ.

ಅಪರೂಪಕ್ಕೆ ಹೊರಗೆ ಕಾಲಿಟ್ಟ ಗಳಿಗೆಯನ್ನೇ ಭಯಂಕರ ಖುಷಿಯಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ಇಷ್ಟೆಲ್ಲ ಬದಲಾವಣೆಗಳನ್ನು ಮನಸು ಬಯಸುವಾಗ,

ಇನ್ನೆಷ್ಟು ದಿನ ಒಂದೇ ರುಚಿಯ ಫಲಾವ್ ಅನ್ನೇ ಹೊಗಳಿ ಹೊಗಳಿ ತಿನ್ನಲು ಸಾಧ್ಯ!? ಅವನ ಏಕತಾನತೆಗೂ ಅರ್ಥವಿದೆ

ಅಂತನ್ನಿಸಿತು ನನಗೂ.

ಮತ್ತೆ ನನ್ನೆದುರು ಬಂದು ಅಮ್ಮಾ ಶಾಲೆ ಶುರುವಾದರೆ ಎಲ್ಲ ಸರಿಯಾಗುತ್ತೆ ಅಂದ.

ಹೌದು ಕಣೋ

ಶಾಲೆಗೆ ಹೋಗಿ ಬಿಸಿಯೂಟ ಉಂಡು ಸ್ನೇಹಿತರ ಜೊತೆ ಕಳೆದು ಓದು ಬರಹ ತಲೆ ತುಂಬಾ ಹೊದ್ದು ಹೈರಾಣಾದಾಗ.

ಖಂಡಿತವಾಗಿ ಮತ್ತದೇ ಫಲಾವ್ ಗೆ ಬಾಯಿ ಚಪ್ಪರಿಸುತ್ತೀಯಾ.

ಬದುಕೂ ಹಾಗೆ  ಸಂಪೂರ್ಣವಾಗಿ ನಿರಂತರ ಬದಲಾವಣೆಯೊಂದಿಗೇ ಅನುಭವಿಸುತ್ತಿರಬೇಕು ಆಗಲೇ ಲವಲವಿಕೆ.

ಕಾಲ ಚಕ್ರದ ಗತಿಯಲ್ಲಿ ಏಳುಬೀಳುಗಳ ಸರಿದೂಗಿಸಿ ಹೋರಾಡುತ್ತಿದ್ದರೇ ಬದುಕಿಗೊಂದು ಅರ್ಥ ಎಂದೆ.

ಬೇಗ ಶಾಲೆ ಶುರುವಾಗಲಿ ಎಂದು ಪ್ರಾರ್ಥಿಸುತ್ತಿದ್ದ.

*******************************************************

6 thoughts on “ಏಕೀ ಏಕತಾನತೆ

  1. ಬದಲಾವಣೆ ಸಹಜ ಉರುಳಾದ ಬದುಕು ಹೋರಳಾಡಿ ಬದಲಾವಣೆ ಬಯಸಿ ಮುನ್ನಡೆದಾಗ ಕೊಳದನೀರು ತಿಳಿಯಾದಂತೆ ಅಷ್ಟೆ ಸ್ಪುಟವಾಗಿದೆ ಈ ಬರಹ

Leave a Reply

Back To Top