ಪ್ರಬಂಧ
ಅಳುವನ್ನು ಅನುಸರಿಸಿ ಹೋಗುವವನೇ ಕವಿ
ಸರಿತಾಮಧು
ಹಕ್ಕಿಯಂಥ ಸಣ್ಣ ಜೀವಿಯೊಂದರ ಅಳುವಿಗೂ ಕಿವಿಯಾಗಬಲ್ಲವನೇ ಕವಿ ಎಂಬ ಮಾತು ಅಕ್ಷರಶಃ ಸತ್ಯ. “ರುದಿತಾನುಸಾರಿ ಕವಿಃ ” ಎಂಬುದಾಗಿ ಮಹರ್ಷಿ ವಾಲ್ಮೀಕಿಯನ್ನು ಕಾಳಿದಾಸ ಕವಿ ಹೆಸರಿಸಿ, ಹಕ್ಕಿಯ ಶೋಕ ಹಾಗೂ ಸೀತೆಯ ಪ್ರಲಾಪ ಎರಡನ್ನೂ ಹೃದ್ಯವಾಗಿಸಿಕೊಂಡ ಮಹಾನ್ ಕವಿ , ಅಂದರೆ ಅಳುವನ್ನು ಅನುಸರಿಸಿ ಹೋಗುವವನೇ ಕವಿ ಎಂದರ್ಥ.
ನವರಸಗಳಲ್ಲಿ ಕರುಣ ರಸವೊಂದೇ ಇರುವುದು ಎಂಬ ಮೀಮಾಂಸೆಗೂ ಪಾತ್ರನಾದ ಕವಿ ವಾಲ್ಮೀಕಿ.
ಸ್ವತಃ ಬೇಡ ನಾಗಿದ್ದು ರತ್ನಾಕರ ಎಂಬ ಪೂರ್ವಾಶ್ರಮದ ನಾಮಧೇಯದ ವಾಲ್ಮೀಕಿ ನಾರದ ಮುನಿಗಳ ಉಪದೇಶದಿಂದ ರಾಮ ನಾಮ ಜಪದಲ್ಲಿ ತೊಡಗಿ , ಧ್ಯಾನಾಸಕ್ತನಾಗಿ ಮನಃಪರಿವರ್ತನೆಯಾದ ಕಥೆ ಎಲ್ಲರಿಗೂ ಗೊತ್ತಿರುವಂಥದ್ದು.
ಹೀಗಿರುವಾಗ ಒಮ್ಮೆ ವಾಲ್ಮೀಕಿ ಮಹರ್ಷಿಗಳು ತಮಸಾ ನದೀ ತೀರದಲ್ಲಿ ಸಂತೋಷವಾಗಿ ಹಾರಾಡುತ್ತಿದ್ದ ಕ್ರೌಂಚ ಪಕ್ಷಿ ಜೋಡಿಯೊಂದನ್ನು ಆನಂದತುಂದಿಲರಾಗಿ ವೀಕ್ಷಿಸುತ್ತಿದ್ದರು. ಅದೇ ಸಂದರ್ಭದಲ್ಲಿ ಬೇಡನೊಬ್ಬನು ತನ್ನ ಬಾಣದಿಂದ ಗಂಡುಹಕ್ಕಿಯನ್ನು ಕೊಲ್ಲುತ್ತಾನೆ. ಆ ಸಮಯಕ್ಕೆ ಅದರ ಸಂಗಾತಿ ಹೆಣ್ಣು ಹಕ್ಕಿಯು ವಿರಹದಿಂದ ಪ್ರಲಾಪಿಸುವುದು.ಇಂತಹ ಹೃದಯ ವಿದ್ರಾವಕ ಸನ್ನಿವೇಶವನ್ನು ಕಂಡು ಮಹರ್ಷಿಗಳು ಕರುಣೆ ಹಾಗೂ ಅತೀವ ದುಃಖದಿಂದ ಬೇಡನನ್ನು ಶಪಿಸುತ್ತಾರೆ:
“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ
ಯತ್ರ್ಕೌಂಚ ಮಿಥುನಾದೇಕ ಮವಧೀಃ ಕಾಮಮೋಹಿತಮ್”
ಅಂದರೆ ಕಾಮಮೋಹಿತವಾದ ಈ ಕ್ರೌಂಚ ಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು ಎಂಬ ಶೋಕದ ನುಡಿಯೇ ಶೋಕವಾಯಿತು.
ಬ್ರಹ್ಮದೇವನ ಇಚ್ಛೆಯಂತೆ ನಾರದರು ತನಗೆ ಹೇಳಿದ್ದ ರಾಮನ ಕಥೆಯನ್ನು ೨೪೦೦೦ ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ಬರೆದರು. ಹೀಗೆ ಸಂಕಟಕ್ಕೆ ಮಿಡಿದ ಮನಸ್ಸೊಂದು ಬೃಹತ್ ಕಾವ್ಯದ ಉಗಮಕ್ಕೆ ಪ್ರೇರಣೆಯಾಯಿತು.
ಅಲ್ಲಿಯವರೆಗೂ ವಾಲ್ಮೀಕಿಯಲ್ಲಿ ಹುದುಗಿದ್ದ ಕಾವ್ಯ ಶಕ್ತಿ ಪ್ರಕಟವಾಯಿತು ಅವನ ಕಾವ್ಯ ಪ್ರೌಢಿಮೆಯು ನಂತರದ ಕವಿಗಳಿಗೆ ದಾರಿದೀಪವಾಯಿತು.
ಆಂಜನೇಯನಿಗೂ ಅವನ ಶಕ್ತಿ ಸಾಮರ್ಥ್ಯಗಳ ಅರಿವು ಇರಲಿಲ್ಲವಂತೆ. ತನ್ನಿಂದೇನಾಗದು , ತಾನು ಯಶಸ್ವಿಯಾಗುವುದಿಲ್ಲ ,ತಾನೊಬ್ಬ ಸಾಧಾರಣ ವ್ಯಕ್ತಿ ಎಂದೇ ಆತ ತಿಳಿದಿರುತ್ತಾನೆ.ಇತರರು ಹೇಳಿ , ನೀನು ಮಾಡಬಲ್ಲೆ ಎಂದು ಹುರಿದುಂಬಿಸಿದರೆ ಮಾತ್ರ , ಅವನ ಶಕ್ತಿ ಸಾಮರ್ಥ್ಯ ಬೆಳಕಿಗೆ ಬರುತ್ತದೆ. ಇದು ಅವನಿಗೆ ಸೂರ್ಯದೇವನಿತ್ತ ಶಾಪ! ಅಂದರೆ ಈ ಕಥೆಯಂತೆ ವಾಲ್ಮೀಕಿಯಲ್ಲಿ ಸುಪ್ತ ವಾದ ಕಾವ್ಯಶಕ್ತಿಗೆ ಶೋಕ ಪ್ರಚೋದನೆ ನೀಡಿತು.
ಕ್ಕೊಕ್ಕರೆ, ಸಾರಸ, ಬೆಳ್ಳಕ್ಕಿ ಎಂದೂ ಕರೆಯಲ್ಪಡುತ್ತದೆ ಈ ಕ್ರೌಂಚ ಹಕ್ಕಿ.
ಸಂಸ್ಕೃತ ದಲ್ಲಿ ಸಾರಸ ಎಂದರೆ ಕೆರೆಯ ಹಕ್ಕಿ ಎಂದರ್ಥ. ಇದನ್ನು ಸಾರಂಸ ಎಂದೂ ಕರೆಯಲಾಗುತ್ತದೆ. ಯುರೋಪ್, ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಾಣಬರುವ ಸಾರಸ್ ಕೊಕ್ಕರೆ ಬಗ್ಗೆ ನನ್ನ ಗಮನ ಸೆಳೆದ ಪದ್ಯ ಪಂಜಾಬಿನ ಕವಿ ಮನಮೋಹನ ಸಿಂಗ್ ( ಮಾಜಿ ಪ್ರಧಾನಿ ,ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಲ್ಲ) ರವರು ಬರೆದಿರುವ “To a pair of sarus cranes”.
ವಾಲ್ಮೀಕಿ ಮಹರ್ಷಿಗಳನ್ನು ಕಾಡಿದಂತಹ ಭಾವವೊಂದು ಪುನರಾವರ್ತನೆ ಆಗಿರುವಂತೆ ಇದೆ ಈ ಪದ್ಯದ ಸಾಲುಗಳಲ್ಲಿ.
The male was shot as he necked
to pull the reluctant sun out from the rim of horizon
She flew crying
As he was picked up hands and jaws
And a proud neck was humbled to lie like dirty linen in a coarse washing bag
She circled the sky
In movements of grace over his disgraceful end
The killers went away and she returned to the death’s scene
With grief that inscribed its intensity in dots and pits
Like the Morse code of bird’s sorrow
Transmitted to the air
With her beak she kissed a few feathers
Picked the ones that wind had not taken away and sat to hatch
The blood stained feathers into a toddling chick
A wave of the seas she had never seen
Came to her from far away
ಈ ಪದ್ಯದ ಮೊದಲ ಸಾಲುಗಳಲ್ಲಿ ಸೂರ್ಯೋದಯ ಸಮಯಕ್ಕೆ ಗೂಡಿನಾಚೆ ತನ್ನ ಉದ್ದನೆಯ ಕತ್ತು ಚಾಚುವಷ್ಟರಲ್ಲಿ ಬೇಡನೊಬ್ಬನ ಬಾಣದ ಗುರಿಗೆ ಗಂಡುಹಕ್ಕಿ ಬಲಿಯಾಗಿಬಿಟ್ಟಿತು.
ಹೆಣ್ಣು ಕೊಕ್ಕರೆಯು ಪ್ರಲಾಪಿಸುತ್ತಾ ಅತ್ತ ಧಾವಿಸುತ್ತಿರಲು ಬೇಡನು ಇದಾವುದನ್ನು ಲೆಕ್ಕಿಸದೇ ತನ್ನ ಹಳೆಯ ಕೈಚೀಲದೊಳಗೆ ಸತ್ತ ಗಂಡು ಕೊಕ್ಕರೆಯನ್ನು ನಿರ್ದಾಕ್ಷಿಣ್ಯವಾಗಿ ಎಳೆದುಕೊಂಡು ಹೊರಟೇಬಿಟ್ಟನು.
ಆಕಾಶದಲ್ಲಿ ಪ್ರದಕ್ಷಿಣೆ ಹಾಕುತ್ತಾ ತನ್ನ ಸಂಗಾತಿ ಬಿದ್ದ ಜಾಗಕ್ಕೆ ಬರಲು , ರಕ್ತ ಸಿಕ್ತವಾಗಿ ಬಿದ್ದ ಪುಕ್ಕಗಳನ್ನು ಕೊಕ್ಕಿನಿಂದ ಎತ್ತಿ ಮುದ್ದಿಸಿ, ತನ್ನೆಲ್ಲಾ ಗರಿಗಳನ್ನು ಅದರ ಮೇಲೆ ಮುದುಡಿ ಮೊಟ್ಟೆ ಇಡುವಂತೆ ಕುಳಿತು ಬಿಟ್ಟಿತು.
ಸಮುದ್ರದಲೆಗಳ ಮೇಲಿಂದ ತೇಲಿ ಬರುವ ಬಿರುಗಾಳಿಗೆ ಆ ದುಃಖ ತಪ್ತ ಹೆಣ್ಣು ಹಕ್ಕಿಯನ್ನು ಗಂಡು ಹಕ್ಕಿಯ ಸಮೀಪಕ್ಕೆ ಕರೆದೊಯ್ದಿತು.
ಕವಿ ಇಲ್ಲಿ ಹೇಳುವುದೆಂದರೆ ಹೆಣ್ಣು ಹಕ್ಕಿಯ ಪ್ರೀತಿ ಮನುಷ್ಯರಿಗೂ ಮಿಗಿಲಾದದ್ದು.
ಯಕಃಶ್ಚಿತ್ ಪಕ್ಷಿ ಅಥವಾ ಪ್ರಾಣಿ ಎಂದು ಬೇಟೆಯಾಡುವ ಮಾನವನಿಗೆ ಅವುಗಳ ಮೂಕವೇದನೆ ಅರಿವಾಗುವುದೆಂದಿಗೆ?
ಹಾಗಾಗಿಯೇ ಮಹಾತ್ಮ ಗಾಂಧಿಯವರು ಹೇಳುತ್ತಾರೆ :
“The greatness of nation and it’s moral progress can be judged by the way its animals are treated”
ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಅಲ್ಲವೇ?
ಮೋಜಿಗಾಗಿ, ಆಹಾರಕ್ಕಾಗಿ, ವಿಹಾರಕ್ಕಾಗಿ ಹೇಯಕೃತ್ಯ ಪಕ್ಷಿ- ಪ್ರಾಣಿಗಳ ಬೇಟೆ. ಒಂದುವೇಳೆ ಮಾನವರಾದ ನಮ್ಮ ಚರ್ಮವನ್ನು ಸುಲಿದು ರಸ್ತೆ ಬದಿಯ ಅಂಗಡಿಗಳಲ್ಲಿ ತೂಗುಹಾಕಿದ್ದರೆ, ಬೆನ್ನಟ್ಟಿ ಬೇಟೆ ಆಡಿದ್ದರೆ, ಹರಕೆಯ ನೆಪದಲ್ಲಿ ಬಲಿ ಕೊಡುವಂತಿದ್ದರೆ ಮಾತು ಬರುವ ನಾವು ಸುಮ್ಮನಿರುತ್ತಿದ್ದೆವಾ?
ಅವುಗಳು ಕೂಡಾ ನಮ್ಮಂತೆಯೇ ಅಥವಾ ನಮಗಿಂತಲೂ ಮಿಗಿಲು ಎನ್ನುವ ಭಾವನೆ ನಮ್ಮದಾಗಲಿ.
ಪ್ರಾಣಿ ಪಕ್ಷಿಗಳ ಮೂಲಕವೇ ಹೆಣೆದಿರುವ ಸಾವಿರಾರು ಮೌಲ್ಯಯುತ ಕಥೆಗಳಿವೆ.ಅವುಗಳೊಡನೆ ನಮ್ಮ ಸಾಂಗತ್ಯ ಚಿರಂತನ.
**************************************************************
ಈಗ ಕೊರೋನಾಕ್ಕೆ ಕಾರಣವೆನ್ನುತ್ತಿರುವ ಸಜೀವ ಪ್ರಾಣಿಗಳ ಸೇವನೆ ನಮ್ಮೆಲ್ಲರಿಗೂ ಕಣ್ತೆರಿಯಿಸಬೇಕಾದ ಅಂಶ.