ಕವಿತೆ
ಮಧುವಣಗಿತ್ತಿ
ಎಚ್ ಕೆ ನಟರಾಜ
ಆಕೆಗೆ ದಿನವೂ
ಸಿಂಗರೀಸುವುದೇ ಕೆಲಸ
ಅಕ್ಷರಗಳಿಗೆ ಉಡುಗೆ ತೊಡಿಸಿ
ಅಲಂಕರಿಸಿ ಬಿಳಿ ಹಾಳೆಯ ಮೇಲೇ ಚಿತ್ತಾರ
ಬಿಡಿಸಿ ಶಾಯಿಯ ರಂಗೋಲಿ
ಸೂರ್ಯ ಚಂದ್ರನ ಹೂ ಮಾಲೆ ಮಾಡಿ..
ನಕ್ಷತ್ರಗಳನ್ನು ಕೆನ್ನೆ ರಂಗಾಗಿಸಿ
ಭಾವನೆಗಳಿಗೆ ಬಣ್ಣದುಡುಗೆ ತೊಡಿಸಿ
ಕಾಮವನ್ನು.. ಕಾಮವಿಲ್ಲದ ಹೃದಯ
ಭತ್ತಳಿಕೆಯ ಬಾಣವಾಗಿಸಿ
ಪದಪುಂಜದರಮನೆಗೆ ಲಗ್ಗೆ
ಹೀಗೆ ಈ ಮಧುವಣಗಿತ್ತಿ.. ಅಲ್ಲಿಂದ ಇಲ್ಲಿ
ಇಲ್ಲಿಂದ ಅಲ್ಲಿ ಶಭ್ಧಗಳ ನರ್ತನ.
ಆಡಂಭರದಾಟಕೂ ಅಂಕುಶ ತೊಡಿಸಿ
ಪ್ರೇಮನಿವೇದನೆ.
ಕನಸುಗಳ ಬಗೆದು ಅಲ್ಲೊಂದಷ್ಟು ಹೆಕ್ಕಿ
ಮನದಾಳದಿ ಕುಕ್ಕಿ…. ದುಃಖದಲ್ಲಿ ಬಿಕ್ಕಿ..
ನಗುವಿನಾಳದಲಿ ಒಲವ ಬಿತ್ತಿ.. ನಾಚಿ
ನೀರಾದ ರಂಗಿನೋಕುಳಿಯಲಿ..
ಮತ್ತೊಂದಷ್ಟು ಪದಗಳ ಮಾಲೆಕಟ್ಟಿ..
ಜೋಡಿಸಿ.. ಕಾಡಿಸೀ.. ಕೂಡಿಸಿ.. ತೊಡಿಸಿ
ಅಂತೂ.. ಒಂದು ಅಂತಿಮ ಸ್ಪರ್ಶ..
ಭಾವದೊಲುಮೆಗೆ ಆಕರ್ಷಕ..
ತೂರಲಿ ಕಣ್ಣೋಳೊಗೆ.. ಕವಿಭಾವಕೆ
ಕವನದ ದೃಶ್ಯ
ಹೀಗೆ ಮಧುವಣಗಿತ್ತಿ ಮೆರವಣಿಗೆಯಲಿ
ಅಕ್ಷರ ಸೃಷ್ಟಿಯ ಭಾಷ್ಯ
****************************