ನೈವೇದ್ಯ

ಕವಿತೆ

ನೈವೇದ್ಯ

low angle photography of missile silo hole

ಡಾ.ಕಾತ್ಯಾಯಿನಿ ಕುಂಜಿಬೆಟ್ಟು.

ಮೂರು ಕಲ್ಲುಗಳ ಒಲೆ
ನನ್ನ ಮನಸ್ಸು!
ಹಳದಿ ಮೈಯ ಕೆಂಪು ನಾಲಗೆಯನ್ನು
ಊರ್ಧ್ವಕ್ಕೆ ಕೊರಳುದ್ದಕ್ಕೂ ಚಾಚಿ ಚಾಚಿ
ಕಾಯಮಡಕೆಯನ್ನು ನೆಕ್ಕುತ್ತಿರುತ್ತದೆ
ಬೆಂಕಿಬಾಳು!

ಒಂದು ದೀರ್ಘ ಕಾಯುವಿಕೆಯಲ್ಲಿ
ಪ್ಲುತಕಾಲಗಳ ಬೇಯುವಿಕೆ…
ಅಕ್ಕಿ ಗುಳುಗುಳು ಕುದಿಯುತ್ತ ಅಂಗುಳ
ಅಗುಳು ಅಗುಳೂ ಅನ್ನವಾಗುತ್ತದೆ
ಆಹಾ! ಉದುರುದುರು ಮಲ್ಲಿಗೆ ಹೂವು!
ಬಟ್ಟಲು ತುಂಬ ಹರಿದಾಡುವ ಮುತ್ತು!
ಅನ್ನ ಜೀವವಾಗುತ್ತದೆ… ಪರಮ ಅನ್ನ!

ಬ್ರಹ್ಮ ವಿಷ್ಣು ಮಹೇಶ್ವರ ಪುಟುಪುಟು
ಅಂಬೆಗಾಲಿಡುತ್ತಿದ್ದಾರೆ…
ಚಿಗುರು ಬೆರಳ ಚುಂಚದಲ್ಲಿ ಹೆಕ್ಕಿ ಹೆಕ್ಕಿ
ಬಾಯಿ ಬ್ರಹ್ಮಾಂಡದಲ್ಲಿ ತುಂಬಿಕೊಳ್ಳಲು!
ಒಬ್ಬನ ಕೈಯ ಕೆಂದಾವರೆಗೆ
ಮತ್ತೊಬ್ಬನ ಹೊಕ್ಕುಳ ಕುಂಡದ ದಂಟಲ್ಲಿ ನಗು
ಹುಟ್ಟಿಗೆ ಬದುಕಿನ ನಂಟು!
ಹೊಕ್ಕುಳಬಳ್ಳಿ… ಅಮೃತಬಳ್ಳಿ!

ಮಗದೊಬ್ಬನ ನೊಸಲಲಿ ಒಲೆಯ
ಬೂದಿಯೆ ವಿಭೂತಿ!

ಕಾಯಮಡಕೆಯಲ್ಲಿ
ನನ್ನ ಪ್ರಾಣವೀಗ
ಅನ್ನ ನೈವೇದ್ಯ!

***************************

One thought on “ನೈವೇದ್ಯ

Leave a Reply

Back To Top