ಕವಿತೆ
ಕಾಯುವಿಕೆ
ತೇಜಾವತಿ ಹೆಚ್.ಡಿ.
ಎಷ್ಟು ಘಮಘಮಿಸಿತ್ತಿದ್ದೆ ನೀನು..
ಸುತ್ತೆಲ್ಲಾ ಮೂಲೆಗೂ ಕಂಪ ಪಸರಿಸುತ್ತಿದ್ದೆಯಲ್ಲ.. !
ದಾರಿಹೋಕರನ್ನೂ ಕೈಬೀಸಿ ಕರೆದು
ತನ್ನೆಡೆಗೆ ಸೆಳೆವ ಮಾಯಾವಿ ನೀನು!
ನಿನ್ನ ನೋಡಿದಾಗೆಲ್ಲ ಮುದ್ದಿಸಲೇ ಒಮ್ಮೆ ಎನ್ನಿಸುತ್ತುತ್ತು..
ನೀನೋ…
ಮುಟ್ಟಿದರೆ ಮಾಸುವಷ್ಟು ಶುಭ್ರ ಮೃದುಮಲ್ಲಿಗೆ..
ಹಿತವೆನಿಸುತ್ತಿತ್ತು ಸಾಂಗತ್ಯ
ಸಿಕ್ಕರೆ ದಿನವೂ ಮುಡಿಯಬೇಕೆನಿಸುತ್ತಿತ್ತು..
ಈಗಲೂ ಅಲ್ಲೇ ನಿನ್ನ ವಾಸ್ತವ್ಯ
ಅದೇ ಗಿಡ ಅದೇ ಬಳ್ಳಿ
ಎಲ್ಲೆಡೆ ಹರಡಿ ಮೈತುಂಬಾ ಹೂಗಳ ಪರಿಮಳ !
ಆದರೆ ಈಗೀಗ ಯಾಕೋ
ನೀನೇ ತಲೆನೋವಾಗಿರುವೆಯಲ್ಲ !
ಮುಡಿಯುವುದಿರಲಿ ವಾಸನೆಯೂ ಸೇರದು
ಇಲ್ಲಿ ಬದಲಾಗಿದ್ದು ಘಮಲೋ ಭಾವವೋ ನಾನರಿಯೆ
ಅಂತೂ ಅಂದು ಆಕರ್ಷಿತವಾಗಿದ್ದೆ ಇಂದು ತಿರಸ್ಕೃತವಾಯ್ತು..
ನಾನು ಅಂದು ಸವಿದ ಸುಗಂಧ
ಇಂದು ಮತ್ಯಾರದ್ದೋ ಪಾಲು
ಇಂದಿನ ನನ್ನ ತಲೆನೋವು
ನಾಳೆ ಇನ್ಯಾರದ್ದೋ…
ಇಲ್ಲಿ ಯಾವುದು ಸ್ಥಿರ ಹೇಳಿ
ಹಗಲಿಂದೆ ಇರುಳು ಇರುಳಿಂದೆ ಹಗಲು
ಕಾಲಚಕ್ರದಲ್ಲಿ ಎಲ್ಲವೂ ಸರತಿ..
ಕಾಯುವಿಕೆ ಮಾತ್ರ ನಮ್ಮದು..
****************************************
ಮೊದಲಿಗೆ ಆಕರ್ಷಣೆ, ನಂತರ ಒಲವು,ಭಾವನೆ,ಕಾಳಜಿ, ನಂತರ ಅದಕ್ಕೊಂದು ಶ್ರೇಷ್ಠವಾದ ಸ್ಥಾನ, ಜವಾಬ್ದಾರಿ, ನಂತರ ಇಬ್ಬರೂ ಉಳಿಸಿಕೊಂಡು,ಬೆಳೆಸಿಕೊಂಡು,ಶಾಶ್ವತವಾಗಿ ಮಾಡಿಕೊಂಡರೆ ಸಾಕು ತಾನೇ, ಬದುಕಿನಲ್ಲಿ ಗೆಲ್ಲುತ್ತೇವೆ ಅಂತಲೇ ಮುನ್ನುಗ್ಗಬೇಕೆ ಹೊರತು ಸೋಲಿನ ಬಗ್ಗೆ ಯೋಚಿಸಬಾರದು ತಾನೇ,ಉಳಿದದ್ದು ದೇವರ ಇಷ್ಟ, ಸರಿ ತಾನೇ
ಮಾರ್ಮಿಕ ಸಾಲುಗಳು
ಧನ್ಯವಾದಗಳು ಮೇಡಂ