ಕವಿತೆ
ಮೂಕ ಸಾಕ್ಷಿ
ಸರೋಜಾ ಶ್ರೀಕಾಂತ್
ಇತ್ತೀಚೆಗೆ ಸುಣ್ಣವಿರದ ಗೋಡೆಯೂ ಸನಿಹ ಬರಗೊಡದು
ಬಣ್ಣಿಸುವ ಕಿವಿಯಾಗುವುದು ಬಿಟ್ಟು ವರ್ಷಗಳೇ ಆದವೇನು!?
ನೆಪಕ್ಕಾದರೂ ಸಾಂತ್ವನದ ನುಡಿಗಳಾರೂ ಆಡಲಿಲ್ಲ
ದಿನಂಪ್ರತಿ ಸಾಯೋರಿಗೆ ಅಳುವರಾರು ಅಂದರೆಲ್ಲ
ಈಗೀಗ ಜೋತು ಬಿದ್ದ ಸೂರಿನ ಜಂತಿಗೂ ಜಿಗುಪ್ಸೆ
ಸಂಕಷ್ಟದ ಮಾಳಿಗೆ ಬಿಟ್ಟು ಕಾಲನಡಿ ಅಡಗಿ ಮಾಯವಾಗುವುದೇ ಇಷ್ಟವಂತೆ
ಇಲಿ ಬಿಡಿ,ಇರುವೆ ಜಿರಳೆಗಳ ಹಾವಳಿಯಾವುದೂ ಇಲ್ಲಿಲ್ಲ
ಬರಿದಾದ ಡಬರಿಗೆ ಯಾವ ಸಪ್ಪಳದ ಖಬರಿಲ್ಲ….!
ನಿದ್ರೆ ಇರದ ರಾತ್ರಿಗಳಲ್ಲೆಲ್ಲಾ ಹರಕು ಹಾಸಿಗೆಯಿಂದ ಹೊರ ಬರುತ್ತಲೇ ಇರುವ ಕಾಲುಗಳು
ಸುಳ್ಳಾಗಿಸುತ್ತವೆ ಗಾದೆ ಮಾತನ್ನು
ನಿತ್ಯ ಒಂದಿಷ್ಟು ಹೊತ್ತಾದರೂ ತಣ್ಣಗಿರುವುದೊಂದೆ , ಅದೇ
ಬೆಳಗಾಗುತ್ತಲೇ ಕಣ್ಣೊರೆಸಿ ಖಾಲಿಯಾಗುವ ಮಣ್ಣಿನ ಪಾತ್ರೆ
ಅವನಿಂದಾಚೆ ಏನೂ ಇಲ್ಲ
ಅವನಿಚ್ಛೆಯ ಆಯ್ಕೆಯಲ್ಲಿ ನಾವೂ ಇರುವೆವಲ್ಲ
ಆದಿಗೊಂದು ಅಂತ್ಯವೂ ಇದೆಯಲ್ಲ….!!!.
********************************