ಕವಿತೆ
ಗುಟ್ಟು
ಎಸ್ ನಾಗಶ್ರೀ
ಸಣ್ಣ ಊರಿನ ಪ್ರೇಮಿಗಳ
ಪಾಡು ಹೇಳಬಾರದು
ರಂಗೋಲಿ ಗೆರೆಯಲ್ಲಿನ
ಸಣ್ಣ ಮಾರ್ಪಾಡು
ಮೂಲೆಯಂಗಡಿಯ ಕಾಯಿನ್ನುಬೂತಿನ
ನಿಮಿಷಗಳ ಲೆಕ್ಕ
ಕಾಲೇಜು ಬಿಟ್ಟ ಕರಾರುವಕ್ಕು
ನಿಮಿಷ ಸೆಕೆಂಡು
ಯಾವ ಬಸ್ಸಿನ ದಾರಿಯಲಿ
ಅಡ್ಡ ನಿಂತಳು ಪೋರಿ
ಯಾರ ಮನೆಯ ಚಿತ್ರಾನ್ನ
ತಿಂದುಂಡ ಕೈ ಘಮ
ನಾಯಿಗೇಕೆ ಅಲ್ಲೇ ನಡೆದಾಟ
ಕೆನ್ನೆಗುಳಿ ಹೆಚ್ಚು ಹೊತ್ತು
ಯಾರ ಮುಂದಿತ್ತು
ಬೆಳಿಗ್ಗೆ ಮುಡಿಯದ ಹೂ
ಸಂಜೆ ಹೆರಳಿಗೆ ಬಂದದ್ದು ಹೇಗೆಂಬ
ಸೂಕ್ಷ್ಮಗಳು ಇಲ್ಲಿನ
ಗೋಡೆ, ಗಿಡ, ಮರ, ಬೇಲಿಗಳಿಗೆ ಸಲೀಸು
ಕಣ್ಣಲ್ಲೇ ತೂಕದ ಬಟ್ಟು ಹೊತ್ತು
ತಿರುಗುವ ತಕ್ಕಡಿಗಳು
ರಸ್ತೆಬದಿಗೆ ನಿರಪಾಯ ನಿಂತು
ಮನೆ ಹಿರಿಯರಿಗೆ
ಸಂದೇಶ ಕಳಿಸಿ
ಮಜಾ ನೋಡುತ್ತವೆ
ಸಣ್ಣ ಊರಿನ ಹೆಂಗೆಳೆಯರ
ಬುದ್ಧಿ ಬ್ರಹ್ಮಾಂಡ ಬೆಳೆಯುವುದು ಹೀಗೆ
ಪ್ರೀತಿಸಿದಾಗ ಬುದ್ಧಿ ಕಳೆಯದೆ
ಜೋಪಾನ ಮನೆಗೊಯ್ಯುವ ಕಲೆ
ನೊಸಲ ಮೇಲಿನ ಮುತ್ತು
ಕೆನ್ನೆರಂಗಿಗೆ ಇಳಿಯದಂತೆ
ತೋರುವ ಹುಷಾರು
ಉಹೂಂ
ಅರ್ಥವಾಗುವುದಿಲ್ಲ ಹುಡುಗಿಯರೆ
ಮಹಾನಗರದ ಅನಾಮಿಕಸುಖದಲಿ
ಪ್ರೇಮಿಸುವ ನಿಮಗೆ
************************
ಕವಿತೆ ಚೆಂದಿದೆ..ನಾಗಶ್ರೀ
ಧನ್ಯವಾದಗಳು ಸ್ಮಿತಾ
ಚೆನ್ನಾಗಿ
. ಮೂಡಿಬಂದಿದೆ
ಧನ್ಯವಾದಗಳು
Good one nagashri
ಧನ್ಯವಾದಗಳು
ತುಂಬಾ ಚೆನ್ನಾಗಿದೆ ನಾಗಶ್ರೀ…ಹೀಗೆ ನಿಮ್ಮ ಕವಿತೆ ಮುಂದುವರಿಯಲಿ ಹಾಗೂ ಅವಕಾಶ ಸಿಗಲಿ ಸದಾ ಎಂದು ಹಾರೈಸುವೆ
ಧನ್ಯವಾದಗಳು ನಿಮ್ಮ ಹಾರೈಕೆಗೆ
ಚೆನ್ನಾಗಿದೆ
ಧನ್ಯವಾದಗಳು
ಚಂದದ ಅಭಿವ್ಯಕ್ತಿ
ಚೆಂದ ಕವಿತೆ..ಪ್ರಸ್ತುತಿ