ಪುಸ್ತಕ ಪರಿಚಯ

ತಥಾಗತನಿಗೊಂದು ಪದ್ಮ ಪತ್ರ

ಭಾವಜೀವಿಯ ಭಾಷಾ ಚಮತ್ಕಾರಿಕ ಕವಿತೆಗಳು

ತಥಾಗತನಿಗೊಂದು ಪದ್ಮ ಪತ್ರ
ಕವನ ಸಂಕಲನ
ಡಾ. ಆನಂದ ಋಗ್ವೇದಿ
ಸಾಧನ ಪಬ್ಲಿಕೇಷನ್

ವೃತ್ತಿಯಿಂದ ದಾವಣಗೆರೆ ಜಿಲ್ಲಾ ಆಸ್ಪತ್ರೆ, ಚಿಟಗೇರಿಯಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಆನಂದ ಋಗ್ವೇದಿ ಅವರು ಪ್ರವೃತ್ತಿಯಿಂದ ಕವಿ.ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ, ಡಾ. ಜೋಳದರಾಶಿ ದೊಡ್ಡನಗೌಡ ನಾಟಕ ಪ್ರಶಸ್ತಿ, ರತ್ನಾಕರವರ್ಣಿ ಮುದ್ದಣ ದತ್ತಿ ಪ್ರಶಸ್ತಿ, ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗಳು ಲಭಿಸಿವೆ. ಪ್ರಕಟಿತ ಕೃತಿಗಳು – ‘ಜನ್ಮ ಮತ್ತು ಅನೂಹ್ಯ ಸಾಧ್ಯತೆ’ ಅವರ ಕಥಾಸಂಕಲನ. ‘ಊರ್ವಿ’ ಅವರ ನಾಟಕ, ‘ನಿತ್ಯ ನೆನಪಿಗೊಂದು ನವಿಲುಗರಿ’ ಅವರ ಕವನ ಸಂಕಲನ.

ಈ ಕವನಗಳ ಗುಚ್ಛದಲ್ಲಿ ನಾಲ್ಕು ಭಾಗಗಳಿವೆ; ಬಯಲು, ಬೆಳಕು, ಮೃದ್ವಂಗಿ ಮತ್ತು ಋತುಮಾನ. ಒಟ್ಟು ಅರವತ್ತೇಳು ಕವಿತೆಗಳು ಈ ಕೃತಿಯಲ್ಲಿವೆ.

ಶೀರ್ಷಿಕೆ ಕವಿತೆ ‘ತಥಾಗತನಿಗೊಂದು ಪದ್ಮ ಪತ್ರ’ ವನ್ನು ನೋಡಿ.

‘ ನಿನಗೆ ಜ್ಞಾನೋದಯವಾಗಿತ್ತಂತೆ, ನಮಗೆ
ಕನಿಷ್ಠ ಉದಯಿಸಲಿ ಹೊಸ ಬೆಳಕ ಕಿರಣ
ತೊಯ್ಯಿಸಲಿ ನವ ವರ್ಷ ಧಾರೆ
ಈ ಧಗೆ ಹಗೆ ಆರಿ ಆವರಿಸಲಿ ಶುದ್ಧ ಗಾಳಿ
ಅಂತಃಕರಣದ ಹೊಂಬಾಳೆ ಎಂಬುದೂ ದೂ
ರಾಸೆ!!’

ಸದಾಶಯದ ಸಾಲುಗಳು ಗಮನ ಸೆಳೆಯುತ್ತವೆ.

ಒಂಟಿ ಹಕ್ಕಿಯ ಉಲಿಯದ ಕೊಕ್ಕು ಕವಿತೆಯಲ್ಲಿ –
‘ಹಕ್ಕಿಗೆ ಬೇಕಿರುವುದು;
ಕೊರಳ ಹಾಡ ಆಲಿಸುವ ಕಿವಿ
ಕಣ್ಣ ಕನಸ ಕಾಯುವ ರೆಪ್ಪೆ
ದಣಿದ ರೆಕ್ಕೆಯ ಸವರುವ ಬೆರಳು
ಸದಾ ಹಿಂಬಾಲಿಸುವ –
ತನ್ನಂತಹುದೇ ನೆರಳು’

ಹಕ್ಕಿಗಳ ಕುರಿತು ಅದೆಷ್ಟು ಕವನಗಳು ಬಂದಿಲ್ಲ? ಆದರೆ ಇದು ತನ್ನದೇ ಆದ ವಿಶಿಷ್ಟತೆಯಿಂದ ಗಮನ ಸೆಳೆಯುತ್ತದೆ.

‘ಕಣ್ಣೆಂಬುದು ರೆಪ್ಪೆಯೊಳಗಿನ ಹಣ್ಣು’ ಎಂಬ ಶೀರ್ಷಿಕೆಯೇ ಪ್ರತಿಮಾತ್ಮಕವಾಗಿದೆ. ಇದರ ಮಿಂಚಿನಂತಹ ಸಾಲುಗಳನ್ನು ನೋಡಿ.. ‘ ಬದುಕೆಂಬುದು;
ರೆಪ್ಪೆ ತೆರೆದಾಗಿನಿಂದ ಮುಚ್ಚುವವರೆಗೆ
ತೆರೆದ ಅಧ್ಯಾಯ!!’

ಬಯಲಿಗೆ ಬಾಗಿಲಿಲ್ಲ, ಕೊಳಲೂದುವುದೆಂದರೆ, ಯುದ್ಧ ಸೋತ ಯಶೋಧರ ಬದುಕಿನ ದಾರಿಯನ್ನು ಶೋಧಿಸುವ ಕವಿತೆಗಳು. ಅದರದೇ ಸಾಲುಗಳು ಹೇಳುವಂತೆ ‘ ಯುದ್ಧದಿ ಮಣ್ಣ ಗೆಲ್ಲಬಹುದಲ್ಲದೇ
ಹೆಣ್ಣ ಗೆಲ್ಲಬಹುದೇ!?’

ಅಳು ಒಂದೇ ಜಗದ ಭಾಷೆ, ಲೀಲಾಂಮೃತ, ನಾಗರ ಪಂಚಮಿ, ಅಹಲ್ಯಾಗತ, ನೀರೆಯ ಸೆರಗು, ನೆಲದ ನಕ್ಷತ್ರ, ಮೃದ್ವಂಗಿ, ಭವತಾರಿಣಿ ಕವಿತೆಗಳು ಈ ಗುಚ್ಛದಲ್ಲಿ ನನಗೆ ಹೆಚ್ಚು ಇಷ್ಟವಾದ ಕವಿತೆಗಳು.ಬೆಳಕು – ಒಂದು ಗಜಲ್, ಮೃದ್ವಂಗಿ- ಬಿಡಿ ಕವಿತೆಗಳು ಇದೇ ಸಂಕಲನದಲ್ಲಿದ್ದು, ವಿಭಿನ್ನವಾಗಿವೆ.

ಸ್ನೇಹಶೀಲ ಮನಸ್ಸಿನ ಕವಿ ಆನಂದ ಋಗ್ವೇದಿ ಅವರು ಇತ್ತೀಚಿನ ವರ್ಷಗಳಲ್ಲಿ ಆತ್ಮೀಯರಾದವರು. ಅವರ ಹಿಂದಿನ ಕೃತಿಗಳನ್ನು ಓದಲು ನನಗೆ ಸಿಕ್ಕಿರಲಿಲ್ಲ. ಈ ಹೊಸ ಕವನ ಸಂಕಲನದಲ್ಲಿ ಅವರು ಹೊಸ ಎತ್ತರವನ್ನು ಏರುವ ಎಲ್ಲ ಭರವಸೆಗಳನ್ನು ಮೂಡಿಸಿದ್ದಾರೆ. ಅಪಾರ ಓದು, ಸಂಶೋಧನೆ ಮತ್ತು ಪರಿಶ್ರಮದಿಂದ ಕನ್ನಡ ಸಾರಸ್ವತ ಲೋಕದಲ್ಲಿ ಹೆಜ್ಜೆ ಗುರುತುಗಳನ್ನು ಛಾಪಿಸಿರುವ ಋಗ್ವೇದಿಯವರು ಮತ್ತಷ್ಟು ಬರೆಯುತ್ತಾ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಸಿರಿವಂತಗೊಳಿಸಿಲಿ ಎಂಬ ಆಶಯ ನನ್ನದು.
********************************

  • ಡಾ. ಅಜಿತ್ ಹರೀಶಿ

One thought on “ಪುಸ್ತಕ ಪರಿಚಯ

Leave a Reply

Back To Top