ಕವಿತೆ
ಶ್ರೀವಲ್ಲಿ ಶೇಷಾದ್ರಿ
ಮನದ ಮಾತಿನ್ನು ಮುಗಿದಿಲ್ಲ ನಲ್ಲ
ಮೆಲ್ಲನೆದ್ದು ಯಾಮಾರಿಸ ಬೇಡ
ನಿನ್ನೆದೆಯೊಳಗೊಂದು ಮುಳ್ಳಿನ ಪಕ್ಕ
ಕೆಂಪು ಗುಲಾಬಿ ಗಂಧವಿದೆಯೆಂದು
ನೀ ಹೇಳದಿದ್ದರೂ ನಾ ಬಲ್ಲೆ
ಗಂಡಸು ಹಾಗೆ ಬಲು ಗಡಸು
ಎಲ್ಲಿಂದ ಬಂದೀತು ನಯ ಸೊಗಸು
ಬೇಕೆಂದೆ ಮುಖ ಗಂಟಿಕ್ಕಿ ಮುನಿಸು
ಲಘು ಬಿಗು ಮುತ್ತುದುರಿದ ಮಾತು
ಕೋಪವಾರಿದಾಗ ಅಪರೂಪಕ್ಕೊಂದು ನಗು
ದೂರ ನಿಂತ ಬಾನಲ್ಲಿ ಮಿಂಚಂತೆ
ಆಲಿ ಕಲ್ಲುಗಳ ಕಲ್ಲೆಂದರಾದೀತೆ
ಧರೆ ತಬ್ಬಿದೊಡೆ ನೀರಾದಂತೆ
ಪ್ರೀತಿ ಹೊನಲು ಹರಿವ ಬಾ ಇನಿಯ
*************************