ಕವಿತೆ
ಕಡಲು ಕರೆದ ಗಳಿಗೆ
ಪ್ರೇಮಶೇಖರ

ಕಡಲ ತಡಿ
ಯಲ್ಲೊಂದು ಗುಡಿ
ಯ ಕಂಡು
ಮಿಂದು ಮಡಿ
ಯಾಗಿ ದರ್ಶನಕ್ಕೆಂದು
ನಡೆದರೆ
ಗುಡಿಯಲ್ಲಿ ದೇವತೆ
ಇರಲಿಲ್ಲ.
ಮರಳಲ್ಲಿ ದಿಕ್ಕು
ಮರೆತು ಕಾಲಾಡಿಸಿ,
ಬೊಗಸೆ ತುಂಬ
ಶಂಖಚಿಪ್ಪಿ ಆಯ್ದು,
ಪುಪ್ಪುಸ ಪೂರ್ತಿ
ಪಡುವಣದ ಗಾಳಿಯೆಳೆದು,
ಕಣ್ಣತುಂಬಾ ನೀಲಿನೀಲಿ
ಕಡಲನು ಆಹ್ವಾನಿಸಹೊರಟರೆ
ಅಲ್ಲಿ ಕಂಡಳು ಅವಳು.
ಮುಂಗುರುಳ ಹಾರಲು ಬಿಟ್ಟು
ಸೆರಗಿಗೂ ಸ್ವಾತಂತ್ರ್ಯ ಕೊಟ್ಟು,
ಜತೆಗೆ ಮನಕೂ ರೆಕ್ಕೆ ಕಟ್ಟಿ,
ಎತ್ತಿಕೋ
ಎಂದು ಕಾಲಪ್ಪಿದ ಅಲೆ
ಗಳಿಗೆ
ಕವನ ಜೋಗುಳ
ದ ಗುಟುಕು ಕೊಡುತ್ತಲೇ
ಕಡಲಿಗೆ ಹಾಯಿಯೇರಿಸಿ
ಯಾನ ಹೊರಡುವ
ಸನ್ನಾಹದಲ್ಲಿದ್ದಳು.
ನನಗೆ ದೇವತೆ ಸಿಕ್ಕಿದ್ದಳು.
ಶತಶತಮಾನಗಳಿಗೊಮ್ಮೆ ಬರುವ
ಸುಮುಹೂರ್ತ ಅದು.
ಗಡಬಡಿಸಿ ಎದೆ
ಗೂಡಲ್ಲಿ ಗುಡಿ
ಕಟ್ಟಿ ದೇವತೆಯನು
ಪ್ರತಿಷ್ಟಾಪಿಸಿ
ಬಿಟ್ಟೆ.
ಇಂದು ನನ್ನೆದೆಯೊಂದು
ಅಗಾಧ ಕಡಲು,
ಕಡಲಲ್ಲೊಂದು
ಬೆಳ್ಳನ್ನ ಬಿಳೀ ಹಾಯಿದೋಣಿ,
ದೋಣಿಯಲ್ಲಿ ದೇವತೆ.
ನನ್ನ ಉಸಿರೀಗ ಅನು
ದಿನವೂ ಅನಂತ
ಕಾವ್ಯಯಾನ.
ಪ್ರೇಮಶೇಖರ

ತುಂಬಾ ಚಂದದ, ಕವನ.
ಇಷ್ಟವಾಯಿತು
ತಮಗೆ ಧನ್ಯವಾದಗಳು
Dear Sri Premashekara,
Your poem “kadalu kareda galige” is a beautiful poem. It has pushed me literally, perhaps from a deep slumber, to wake up and think of my own poetry! May be I may…! However, thanks for reciting a beauty of a song.
ಚಂದದ ಕವಿತೆ, ಪ್ರೇಮ ಕವಿತೆ
ತಮಗೆ ಧನ್ಯವಾದಗಳು
ಸರ್, ನೀವು ಕವನವನ್ನು ಬರೆದ ದಿನಾಂಕವನ್ನು ನಮೂದಿಸಬೇಕು, ಇಂತಹ ಕವನಗಳಿಗೆ ಅದು ಅವಶ್ಯ ಫೋಟೋ ನೋಡಿ ಕವನ ಓದಿ ಗಲಿಬಿಲಿಗೊಳ್ಳಬಾರ೮ು, ಓದುಗ.
ಹಹ್ಹಹ್ಹಾ
ಆಹಾ….. ಎಷ್ಟು ಚೆನ್ನಾದ ಕವಿತೆ….
ಧನ್ಯವಾದಗಳು ವಿದ್ಯಾಶ್ರೀ
ಚೆಂದ ಕವಿತೆ
ತಮಗೆ ಧನ್ಯವಾದಗಳು ಮ್ಯಾಮ್
ಅತ್ಯಂತ ಮನೋಜ್ಞ ಆಹ್ಲಾದಕರವಾದ ಸುಂದರ ಕವನ
ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿತು, ಮೀನಾಕ್ಷಿ ಮ್ಯಾಮ್.
ಕಥೆ ಓದಿದ್ದೇನೆ. ಕವಿತೆಯೂ ಅಷ್ಟೇ ಅರ್ಥಪೂರ್ಣವಾಗಿ ಮೂಡಿಬಂದಿದೆ ಸರ್.
ತಮಗೆ ತುಂಬ ಧನ್ಯವಾದಗಳು
ಕಡಲ ದಂಡೆಯಲ್ಲಿ ಏಕಾಂಗಿಯಾಗಿ ಕಡಲ ಸೊಬಗು ಸವಿಯುವವನಿಗೆ ಕಡಲಂತ ಬದುಕನ್ನು ಕರೆದು ಕೊಟ್ಟು ಕವಿಯ ಎದೆಯನ್ನು ತುಂಬಿದವಳು ಆ ಕಡಲ ದೇವತೆ… ನಿಮ್ಮ ಬಾಳ ದೇವತೆ .. ಆಹಾ ಕವಿತೆಯೇ ನೀನೆಷ್ಟು ಚೆಂದ