ಲೇಖನ
ಪ್ರತಿಭಾ ಪಲಾಯನ ನಿಲ್ಲಲಿ
ಭಾರತ ದೇಶವು ಇಡೀ ಜಗತ್ತಿನ ಭೂಪಟದಲ್ಲಿಯೇ ರಾರಾಜಮಾನವಾಗಿರಲು ಕಾರಣ ನಮ್ಮ ದೇಶದ ಕಲೆ,ಸಾಹಿತ್ಯ,ಸಂಸ್ಕೃತಿ,ನಾಗರಿಕತೆ,ಸಹಬಾಳ್ವೆ, ಸಹಮತ, ಸಿರಿ ಸಂಪತ್ತು, ವಾಯುಗುಣ, ಅನೇಕಾನೇಕ ಸಂಪನ್ಮೂಲಗಳ ಆಗರವಾಗಿದ್ದರಿಂದಲೇ ಭಾರತ ಹೆಮ್ಮೆಯ ರಾಷ್ಟ್ರವಾಗಿ ಕಂಗೊಳಿಸುತ್ತಿದೆ.ಅದೆಲ್ಲಕ್ಕಿಂತ ಹೆಚ್ಚಾಗಿ ಭಾರತದಲ್ಲಿರುವ ಶ್ರೇಷ್ಠ ಪ್ರತಿಭೆಗಳಿಂದ ದೇಶವು ಅನಾದಿಕಾಲದಿಂದಲೂ ಜಗದ್ವಿಖ್ಯಾತಿ ಪಡೆಯುತ್ತಾ ಬಂದಿದೆ.ಆರ್ಯಭಟ, ಶ್ರೀನಿವಾಸ ರಾಮಾನುಜನ್, ಸಿ.ವಿ.ರಾಮನ್,ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ ರಂತಹ ಅನೇಕಾನೇಕ ಅಪ್ರತಿಮ ಪ್ರತಿಭೆಗಳು ಈ ದೇಶದ ಮಣ್ಣಿನ ಹೆಮ್ಮೆ.ಇವರಂತಹ ಲಕ್ಷಾಂತರ ಪ್ರತಿಭೆಗಳಿಗೆ ಭಾರತಮಾತೆ ದಿನೇ ದಿನೇ ಜನ್ಮಕೊಡುತ್ತಿದ್ದಾಳೆ.ಆದರೆ ಆ ಪ್ರತಿಭೆಗಳ ಸೇವೆ ನಮ್ಮ ರಾಷ್ಟಕ್ಕೆ ಅರ್ಪಿತವಾಗುತ್ತಿಲ್ಲ,ಸಿಗುತ್ತಿಲ್ಲ ಎನ್ನುವುದೊಂದು ದೊಡ್ಡ ದುರಂತವೇ ಸರಿ.
ಅಧಿಕೃತ ಸಮೀಕ್ಷೆಯೊಂದರ ಪ್ರಕಾರ “ಅಮೇರಿಕಾದ ಶೇ.೩೭ ವೈದ್ಯರು, ಶೇ.೩೩ ನಾಸಾ ವಿಜ್ಣಾನಿಗಳು, ಶೇ.೩೯ ರಷ್ಟು ಸಾಫ್ಟವೇರ್ ತಂತ್ರಜ್ಞರು ಭಾರತೀಯ ಸಂಜಾತರಾಗಿದ್ದಾರೆ” ಎಂಬ ಆಶ್ಚರ್ಯಕರ ವಿಷಯವು ದಿಗ್ಬ್ರಮೆಯನ್ನುಂಟು ಮಾಡುತ್ತಿದೆ. ನಮ್ಮ ದೇಶದ ಈ ಪ್ರತಿಭೆಗಳು ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವದರಿಂದಲೇ ಅಮೇರಿಕಾ ಬಲಾಢ್ಯ ರಾಷ್ಟ್ರವಾಗಿದೆ. ಅಮೇರಿಕಾ ಮಾತ್ರವಲ್ಲ ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಬಾರತೀಯ ಸಂಜಾತರು ತಮ್ಮ ಸೇವೆ ಸಲ್ಲಿಸುತ್ತಲಿದ್ದಾರೆ. ಮಹತ್ವದ ಈ ಸೇವೆ ನಮ್ಮ ದೇಶಕ್ಕೆ ಯಾಕಿಲ್ಲ ಎಂಬ ಪ್ರಶ್ನೆ ನಮ್ಮನ್ನೆಲ್ಲಾ ಸಹಜವಾಗಿ ಕಾಡುತ್ತಿದೆಯಲ್ಲವೇ?
ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶದಲ್ಲಿ ಆರ್ಥಿಕ ಮುಗ್ಗಟ್ಟು ಒಂದು ಕಾರಣವಿರಬಹುದು. ಹಣದಾಸೆಗಾಗಿಯೋ ಅಥವಾ ಈ ದೇಶದಲ್ಲಿ ಪ್ರತಿಭೆಗಳಿಗೆ ಅವಕಾಶ ಇಲ್ಲವೆಂಬುದಕ್ಕಾಗಿಯೋ ಏನೋ ಪ್ರತಿಭೆಗಳ ಪಲಾಯನವಾಗುತ್ತಲೇ ಇದೆ.ವಿದೇಶಗಳಲ್ಲಿರುವ ಭಾರತೀಯ ಸಂಜಾತರು ಸ್ವದೇಶದಲ್ಲಿರುವ ತಮ್ಮ ಕುಟುಂಬಕ್ಕೆ ಹಣ ರವಾನೆ ಮಾಡುವುದರಲ್ಲಿ ವಿಶ್ವದಲ್ಲಿಯೇ ನಂ.೧ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್ ಇತ್ತಿಚೆಗೆ ಸಾಕ್ಷಿಸಮೇತ ಧೃಡಿಕರಿಸಿದೆ. ಈ ವರ್ಷವೊಂದರಲ್ಲಿಯೇ ೪೨೨೫ ಶತಕೋಟಿ ರೂ.ಗಳು ವಿದೇಶದಿಂದ ನಮ್ಮ ದೇಶಕ್ಕೆ ಬಂದಿದೆ ಎಂಬ ಅಂಶವನ್ನು ನೋಡಿದಾಗ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಭಾರತಿಯ ದ್ಯೆತ್ಯ ಪ್ರತಿಭೆಗಳ ಪಲಾಯನ ಎಷ್ಟಿದೆ ಎಂಬುದು ಗೊತ್ತಾಗುತ್ತದೆಯಲ್ಲವೇ? ಈ ದೇಶದ ಪ್ರತಿಭೆಗಳು ಇಲ್ಲಿಯೇ ಸೇವೆ ಸಲ್ಲಿಸಿದರೆ ಭಾರತ ಶ್ರೀಮಂತ ರಾಷ್ಟ್ರವಾಗಿ, ಅಭಿವೃದ್ಧಿಶೀಲ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯವಿದೆ.ಅಷ್ಟೇ ಅಲ್ಲ ಈ ದೇಶದ ಏಳ್ಗೆಗೆ ಸಹಕಾರ ಕೂಡಾ ಸಿಕ್ಕಂತಾಗುತ್ತದೆ.ಈ ನೆಲದ ಪ್ರತಿಭೆಗಳು ಜಗತ್ತಿನಲ್ಲಿಯೇ ಶ್ರೇಷ್ಠರು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ.
ಆದ್ದರಿಂದ ಸರ್ಕಾರಗಳು ಕೂಡಾ ಪ್ರತಿಭೆಗಳತ್ತ ಗಮನ ಹರಿಸಿ,ಇಲ್ಲಿಯೇ ಯೋಗ್ಯ ನೆಲೆಯನ್ನು ಕಂಡುಕೊಳ್ಳುವಂತೆ ಪ್ರೋತ್ಸಾಹಿಸಬೇಕಾಗಿದೆ.ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಹುಡುಕಿ, ಆರ್ಥಿಕವಾಗಿ ಹೆಚ್ಚಿನ ಸಹಾಯ, ಸಹಕಾರ ಕೊಟ್ಟು ಪ್ರೋತ್ಸಾಹ ನೀಡಿದರೆ ಖಂಡಿತವಾಗಿಯೂ ಪ್ರತಿಭಾ ಪಲಾಯನ ನಿಲ್ಲುತ್ತದೆ. ಅಂದಾಗ ಮಾತ್ರ ದೇಶದ ಆರ್ಥಿಕತೆ ಸದೃಢವಾಗಿ ಭಾರತವು ಬಲಾಡ್ಯ ರಾಷ್ಟವಾಗಿ ಹೊರಹೊಮ್ಮುತ್ತದೆ ಎಂಬುವದರಲ್ಲಿ ಸಂದೇಹವೇ ಇಲ್ಲ.ಇಂತಹ ಒಂದು ಪರಿಣಾಮಕಾರಿ ಸಂದೇಶವನ್ನು ಎಲ್ಲರಿಗೂ ತಲುಪಿಸುವ ಕಾರ್ಯಕ್ಕೆ ಕೈ ಜೋಡಿಸೋಣ..! ಒಗ್ಗಟ್ಟಾಗಿ ದೇಶದ ಹಿತ ಕಾಪಾಡೋಣ ಬನ್ನಿ….! ಎಲ್ಲರೂ ಒಂದಾಗೋಣ..!
***********************************
ಶ್ರೀನಿವಾಸ. ಎನ್.ದೇಸಾಯಿ
ಧನ್ಯವಾದಗಳು ಸರ್,
ನನ್ನ ಹೆಮ್ಮೆಯ ಭಾರತದ ಬಗ್ಗೆ ಲೇಖನ ಪ್ರಕಟಿಸಿದ ಪತ್ರಿಕಾ ಬಳಗಕ್ಕೆ ತುಂಬು ಹೃದಯದ ಧನ್ಯವಾದಗಳು…