ವಾರದ ಕವಿತೆ

ಕವಿತೆ

ನಿದ್ದೆ ಬರುತ್ತಿಲ್ಲ!

ಕಾತ್ಯಾಯಿನಿ ಕುಂಜಿಬೆಟ್ಟು

ನಿದ್ದೆ ಬರುತ್ತಿಲ್ಲ!
ಆದರೆ…
ನಿದ್ದೆ ಮಾಡದಿದ್ದರೆ
ಒಳಗಿರುವ ಆತ್ಮಿಣಿ ಅಲಂಕರಿಸಿಕೊಂಡು
ಶತಪಥ ಸುತ್ತುತ್ತಾಳೆ ಪಂಜರದ ಗಿಳಿಯಂತೆ
ಹೊರಹಾದಿ ಅರಸುತ್ತ!

Cry Girl art print – Marcy Very Much

ಆಗ…
ಪಕ್ಕದಲ್ಲಿರುವ ಪುರುಷಾಕಾರ
ಲಂಘಿಸಿ ರಾವಣನಾಗುತ್ತದೆ
ನನ್ನನ್ನು ಅಪಹರಿಸಿ ಅಶೋಕವನದಲ್ಲಿಡಲು!
ಅಥವಾ…
ಗುಟುರು ಹಾಕುತ್ತ ರಕ್ಕಸನಾಗುತ್ತದೆ
ಹೊತ್ತೊಯ್ದು ಏಳುಕೋಟೆಯೊಳಗೆ
ಬಂಧಿಸಿಡಲು!

ನಿದ್ದೆಯೇ ಬಾರದಿದ್ದರೆ
ನಾನು ಸೀತೆಯಾಗಬೇಕಾಗುತ್ತದೆ!
ಆಗ…
ಕನಸುಗಳನ್ನು ಹತ್ತುತಲೆಗಳ
ಇಪ್ಪತ್ತು ಕಣ್ಣುಗಳು
ನೋಟದಲ್ಲೇ ಬೂದಿ ಮಾಡುತ್ತವೆ
ಹತ್ತು ಮೂಗುಗಳು ಇಪ್ಪತ್ತು ಕಿವಿಗಳು
ಕಿಟಕಿ ಕಿಂಡಿಗಳಾಗಿ
ಹೋದೆಯ ಪಿಶಾಚಿ ಎಂದರೆ
ಬಂದೆ ನಾ ಗವಾಕ್ಷಿಯಲ್ಲಿ! ಎಂದರಚುತ್ತ
ಹತ್ತು ದಳಬಾಯಿಗಳು
ಕೋಟೆಯ ಮಹಾದ್ವಾರಗಳಾಗಿ
ಅಶೋಕವನದ ಮರಗಳನ್ನು
ಹೊರದೂಡುತ್ತವೆ
ಅವು ಎಲೆಗಳ ಕಣ್ಣುಗಳನ್ನು
ಗಾಳಿಗೆ ಮುಚ್ಚಿ ತೆರೆಯುತ್ತ
ಕಣ್ಸನ್ನೆಯಲ್ಲೇ
ಕೋಟೆಯ ಹೊರಗಿಂದಲೇ
ಬಾ ಬಾ ಎಂದು ಬಳಿ
ಕರೆಯುತ್ತವೆ

ಶೋಕಿಸಲು ಅಶೋಕವನದ
ಆ ಮರ ಇಲ್ಲವಾದರೆ
ಸೀತೆ ಸೀತೆಯೇ ಅಲ್ಲ!
ರಾಮರಾಮರಾಮರಾ… ಎನ್ನುತ್ತ
ಶೋಕಿಸಲು ಹೆಣ್ಣಿಗೆ
ರಾಮನಂಥದ್ದೇ ಮರವೂ ಬೇಕು… ಕಾರಣ!
ರಾವಣನಂಥ ಕೋಟೆಯೂ… ಪರಿಣಾಮ!

ಒಂದುವೇಳೆ ಸೀತೆಯಾಗದಿದ್ದರೆ…
ಏಳುಸುತ್ತಿನ ಕೋಟೆಯಲ್ಲಿ ರಾಕ್ಷಸ
ಸೆರೆಹಿಡಿದ ಅನಾಮಿಕ ರಾಜಕುಮಾರಿಯಂತೆ
ಒಳಗೇ ಬಾಯ್ಬಿಟ್ಟು ರೋಧಿಸುತ್ತ
ಆತ ಏಳು ಕಡಲಾಚೆ ಗಿಳಿಯೊಳಗೇ ತನ್ನ ಜೀವವನ್ನು
ಬಚ್ಚಿಟ್ಟು ಮೊಸಳೆಯಂತೆ ಕೋಟೆಬಾಗಿಲಲ್ಲೇ ನಿದ್ರಿಸುವಾಗ
ನಿದ್ದೆಯೇ ಬಾರದ ನಾನು
ಇದುವರೆಗೂ ಕಣ್ಣಲ್ಲೇ ಕಂಡಿರದ ರಾಜಕುಮಾರನನ್ನು
ಕಾಯುತ್ತ ಕಂಬನಿಯ ಕಡಲಲ್ಲಿ
ಬಂಡೆಯಂತೆ ಈಜುತ್ತಿರಬೇಕು!
ಅಜ್ಜಿಯು ಬೊಚ್ಚುಬಾಯಲ್ಲಿ ಕಟ್ಟಿದ ದಂತ
ಕತೆಯಲ್ಲಿ ಉಳಿಯುವ ನಾಸ್ತಿತ್ವದ
ಅನಾಮಧೇಯ ಪಾತ್ರವದು!

ನಿದ್ದೆಯೇ ಬಾರದಿದ್ದರೆ…
ಏನಾದರೊಂದು ಆಗಲೇಬೇಕಾಗುತ್ತದೆ!
ರಾಮಾಯಣದ ಸೀತೆಯಾದರೆ
ಕೋಟೆಯಾಚಿನ ಅಶೋಕವನದಲ್ಲಿ
ಇಡೀ ಲೋಕಕ್ಕೇ ಕಾಣುವ ಹಾಗೆ
ರಾಮಾ ರಾಮಾ ಸೀತಾರಾಮಾ ಎಂದು
ಬಾಯ್ಬಿಟ್ಟು ಎದೆಬಡಿದು ರೋಧಿಸುತ್ತ
ಮಹಾನಾರೀ ಪತಿವೃತಾ
ಶಿರೋಮಣಿಯಂತೆ
ಕೊರಳ ತಾಳಿ ಹೆರಳ ಚೂಡಾಮಣಿಯನ್ನು
ಪದೇ ಪದೇ ಕಣ್ಣಿಗೊತ್ತಿಕೊಳ್ಳುತ್ತ
ಅಶೋಕವನದ ನೆರಳಲ್ಲಿ
ಶೋಕ ಕವನವಾಗಬಹುದು
ಸೀತೆಯ ಕವನ!
ಆದರೆ ಶೀರ್ಷಿಕೆ… ಸೀತಾಯಣವಲ್ಲ ರಾಮಾಯಣ!
ರಾಮಾಯಣದ ಸೀತೆ… ಗಂಡು ವಾಲ್ಮೀಕಿ
ನುಡಿಸಿದಂತೆ ನುಡಿಯುವ ಹೆಣ್ಣು ಸೀತೆ!
ರಾಮನು ಗೆದ್ದ ಸೊತ್ತು ಸೀತೆ!
ರಾಮಾ ರಾಮಾ ಅನ್ನುತ್ತಲೇ ಹೋಮಾಗ್ನಿ ಸುತ್ತಿ
ಅಯೋಧ್ಯಾ ಪ್ರವೇಶ
ಅಲ್ಲಿಂದ ವನಪ್ರವೇಶ… ಕಾಡ್ಗಿಚ್ಚು!
ಅಲ್ಲಿಂದ ಲಂಕಾಗ್ನಿ
ಅಗ್ನಿಯಿಂದ ಅರಮನೆ
ಅರಮನೆಯಿಂದ ಕಾನನ
ಕಾನನದಿಂದ ಅವನಿ..
ಕಾವ್ಯದಿಂದ ಕಾವ್ಯ… !ಅಗ್ನಿ ತಪ್ಪುವುದೇ ಇಲ್ಲ!

ಮಂಥರೆಯ ಜಲಪಾತ್ರೆಯಲ್ಲೇ
ಚಂದ್ರನನ್ನು ಪಡೆದು ರಾಮಚಂದ್ರನಾದವನಿಗೆ
ಬಾಳಿಡೀ ಸುಳ್ಳಲ್ಲೇ ನಿಜದ ಭ್ರಮೆ!
ನಿದ್ದೆಯೇ ಬಾರದಿದ್ದರೆ…
ಭ್ರಮಾಯಣವೇ ಶುರುವಾಗುತ್ತದೆ!
ಸೀತೆ ಮಿಥಿಲೆಯ ಜನಕನ ನೇಗಿಲ ಬಾಯಿಗೆ ಸಿಕ್ಕು
ಕೊನೆಗೆ ರಾಮನ ಬದಿಯಲ್ಲಿ ಸ್ಥಾಪಿತ ಮೂರ್ತಿಯಾಗಿ
ಸುಳ್ಳಲ್ಲೇ ನಿಜವಾಗುತ್ತಾಳೆ…
ಅಶ್ವಮೇಧ ಯಾಗದ ಹೊಗೆಯಲ್ಲಿ
ನಹುಷ ಯಯಾತಿ ಪುರುವಂಶದ
ಯುದ್ಧ ಹಿಂಸೆಗಳ ನೆತ್ತರ ಪುಣ್ಯತೀರ್ಥದಲ್ಲಿ
ಮಿಂದು ಗಂಗೆಯಾಗುತ್ತಾಳೆ!

ನಿದ್ದೆಯೇ ಬರುತ್ತಿಲ್ಲ!
ಓಹ್! ಏನಾಶ್ಚರ್ಯ! ಅಗ್ನಿ! ಅಗ್ನಿ!
ವಾಲ್ಮೀಕಿ ರಾಮಾಯಣದ
ಅಗ್ನಿಕುಂಡದ ಅಗ್ನಿದಿವ್ಯದಿಂದೆದ್ದ ಸೀತೆಯು…
ಕುವೆಂಪು ರಾಮಾಯಣದರ್ಶನಂನ
ಹೊಸದರ್ಶನದ ಅಗ್ನಿಯೊಳಗೆ
ರಾಮನೊಂದಿಗೇ ಪ್ರವೇಶಿಸಿ
ಅವನು ಅವಳು ಬೇಧವಳಿದು
ಎದೆಯ ಅಗ್ನಿಕುಂಡದಿಂದೆದ್ದು ಬಂದೇಬಿಟ್ಟರಲ್ಲ! ಅದ್ವೈತ!

ಇನ್ನಾದರೂ ನಿದ್ದೆ ಮಾಡಬೇಕು!
ಅಯ್ಯೋ! ನನ್ನ ಎದೆಯನ್ನೇ ಸೀಳಿಕೊಂಡು ಹೊರಹೊಮ್ಮುತ್ತಿದೆ
ತುಂಬು ಬಸುರಿಯ ಅರಣ್ಯರೋಧನ!
ರಾಮದೇವರೇ!
ಉತ್ತರ ರಾಮಚರಿತಕ್ಕೆ ಉತ್ತರ?
ಅಲ್ಲೇ ನಿಲ್ಲು ಸೀತೇ!
ಹೆಣ್ಣಿನ ಪಾತ್ರವನ್ನು ಇನ್ನು ಹೆಣ್ಣೇ ಬರೆಯಬೇಕು!

***********************************

2 thoughts on “ವಾರದ ಕವಿತೆ

  1. ಡಾ,ಕಾತ್ಯಾಯಿನಿ ಕುಂಜಿಬೆಟ್ಟು ಅವರು ಕನ್ನಡ ಕಾವ್ಯಕ್ಷೇತ್ರಕ್ಕೆ ಅತ್ಯುತ್ತಮ ಕವನಗಳನ್ನು ನೀಡಿದ್ದಾರೆ .. ಆ ಅತ್ಯುತ್ತಮ ಕವನಗಳ ಸಾಲಿಗೆ ಈಕವಿತೆಯೂ ಸೇರುತ್ತದೆ… ಪುರಾಣ ಪ್ರತೀಕಗಳನ್ನು ಬಳಸಿ ರಚಿಸಿರುವ ಈ ಕವಿತೆಯು ಸ್ತ್ರೀ ಯರ ಸ್ಥಿತಿಗತಿಗಳನ್ನು ವಿವರಿಸುವುದಲ್ಲದೆ ಪುರುಷ ಪ್ರಧಾನ ವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಎಂತಹ ಪುರುಷೋತ್ತಮರು ಬೇಕು ಎಂಬುದನ್ನು ‘ರಾಮ’ನನ್ನು ಸಂಕೇತವಾಗಿಸಿಕೊಂಡು ಕವನದ ಆಶಯವನ್ನು ಬೆಳೆಸುತ್ತಾ ಹೋಗುವುದರಿಂದ ಕಾವ್ಯಾನುಭವ ಓದುಗರಿಗೆ ಗಾಢವಾದ ಅನುಭವವಾಗಿ ತಟ್ಟುತ್ತದೆ ……ಇಂತಹ ಉತ್ತಮ ಕವನಕ್ಕಾಗಿ ಕಾತ್ಯಾಯಿನಿಯವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು

  2. ಇಂಥ ಪ್ರತಿಭಾನ್ವಿತ ಕವಿಯಿತ್ರಿಯನ್ನು ಪಡೆದ ಕನ್ನಡಿಗರು ಹೆಮ್ಮೆ ಪಡಬೇಕು ಇಲ್ಲಿ ಯಾವುದೇ ಮೆಚ್ಚುಗೆಯ ಪದಗಳನ್ನು ಬರೆದರೂ ಕವಿತೆಯ ಮುಂದೆ ಸೋಲುತ್ತವೆ
    ನಿಜ ಇಂಥ ಉತ್ತಮ ಕವಿತೆಯನ್ನು ಕಾವ್ಯಲೋಕಕ್ಕೆ ಕೊಟ್ಟ
    ಕಾತ್ಯಾಯಿನಿ ಮೇಡಂ ಗೆ ಅಭಿನಂದನೆಗಳನ್ನು ಹೇಳಲೇ ಬೇಕು

Leave a Reply

Back To Top