ಸ್ಮಿತಾಭಟ್ ಕಾವ್ಯಗುಚ್ಛ
ನಿರಂತರ
ಈಗೀಗ ಒಲವಾಗುವದಿಲ್ಲ
ಅವನ ಮೇಲೆ
ಮುನಿಸು ಕೂಡಾ,,
ಹೇಗಿದ್ದೀ ಎಂದು ಕೇಳದಿರೂ
ಕೇಳದೇ ಹೋದರೂ
ಅಂತಹ ವ್ಯತ್ಯಾಸವೇನಿಲ್ಲ,
ಸಿಡಿಮಿಡಿ ಬಹಳ-
ದಿನ ಉಳಿಯುವುದಿಲ್ಲ
ಪ್ರೀತಿ ಆಗಾಗ-
ಹುಟ್ಟಿದ್ದು ಗೊತ್ತೇ ಆಗುವದಿಲ್ಲ.
ಇಣುಕಿಣುಕಿ ನೋಡುವ ರಸಿಕತೆಯಿಲ್ಲ
ತಿರುಗಿ ನೋಡುವ ಆತುರವೂ ಇಲ್ಲ
ಉಪಸ್ಥಿತಿ ಅನುಪಸ್ಥಿತಿಯಲ್ಲಿ
ಬದಲಾವಣೆ ಇಲ್ಲ.
ಎತ್ತಿಟ್ಟ ಸಾಲೊಂದು
ಓದದೇ ಹೋಗುತ್ತಾನವ,
ಬರೆಯದೇ ಇಟ್ಟ ಹಾಡಿಗೆ
ರಾಗ ಹುಡುಕಿ ಗುನುಗಿಕೊಳ್ಳುವಾಗ
ಕದ್ದು ಕೇಳುವ ನವಿರು
ಅರಿತೂ ಅರಿಯದೇ ಆತುಕೊಳ್ಳುವ ಬೆರಗು
ನೀ ನನ್ನೊಳಗಿರುವದಕ್ಕೆ
ನಾ ನಿನ್ನೊಳಗಿರುವದಕ್ಕೆ
ಸಾಕ್ಷಿ ಆಗಾಗ ಸಿಗುತ್ತದೆ
ಮತ್ತದು ಅಧಿಕಾರವೂ
ಮಾತೊಗೆದು ಹೋಗುವಾಗ ಸಣ್ಣ ಮೌನ
ಮರಳಿ ಬರುವಾಗ ಎಲ್ಲ ದಮನ
ಸವೆದ ದಾರಿಯಲೂ ಗರಿಕೆ
ತಲೆಯೆತ್ತುತ್ತಲೇ ಇರುತ್ತದೆ.
ಸಂಪೂರ್ಣ ಸಮ್ಮೋಹನ
ಗೊಂಡ ಹಾಡೊಂದು
ಆಗಾಗ ಅಪರಿಚಿತವಾಗುತ್ತಲೇ ಇರುತ್ತದೆ
ನೋವುಗಳಿಗೆ ಒಡ್ಡಿಕೊಂಡಷ್ಟೂ
ಗಟ್ಟಿಯಾಗುತ್ತೇವೆಂಬುದು
ನಾವೇ ಗೀಚಿದ ಬರಹಕ್ಕೆ ಶರಾ ಬರೆದಂತೆ.
ಎಂದೂ ಮುಗಿಯದ ನರಳಿಕೆಗೆ
ಅಳುವ ಮನಸಿಗೂ ಸಣ್ಣ ಅಸಹನೆ
ಸಹಿಸಿದಷ್ಟೂ ಸಹನೆ ಜಾಸ್ತಿ ಹೌದು
ಸೀದು ಹೋಗಿದ್ದು ಮಾತ್ರ ಮನಸು..
ಶಾಂತ ಕೊಳದಲಿ ಕಲ್ಲೊಗೆದು
ಇಣುಕುವ ಪ್ರವೃತ್ತಿ ಇಂದು ನಿನ್ನೆಯದಲ್ಲ.
ಮೌನ ಕೊಲ್ಲುವ ಹತ್ಯಾರ;
ಮಾತು ಇರಿಯುವ ಹತ್ಯಾರ;
ಹೂತಿಟ್ಟ ಕನಸಿಗೆ ಕಾಮನಬಿಲ್ಲು-
ಕಟ್ಟುವಾಗ ದಟ್ಟ ಮೋಡ;
ಸಿಗದ ನಕ್ಷತ್ರಕ್ಕೆ ದಿನವೂ ಎಣಿಕೆ,
ಬಾವಿಯಲಿ ಬಿದ್ದ ಚಂದ್ರನಿಗೆ ಮುಗಿಯದ ಹರಕೆ.
ಎತ್ತಿಟ್ಟುಕೊಂಡಿದ್ದೆಲ್ಲ ಆಪತ್ತಿನೊಳಗಿಲ್ಲ.
ಆಪ್ತಭಾವದೊಳಗೆ ಬರದೇ ಹೋದದ್ದು!?
ಸಹಿಸಿಕೊಂಡಿದ್ದೂ ಸಹಿತವಲ್ಲ.
ಅಳತೆಗೋಲೇ ಇಲ್ಲದ ಅನಾದರ
ಚುಕ್ಕಿ ಇಟ್ಟಾಗಲೇ ಮುಗಿದು ಬಿಡಬೇಕು ಸಾಲು.
ಮುಳ್ಳು ಕಿತ್ತಮೇಲೂ ಚುಚ್ಚುವ ನೋವು,
ಬೇಕಂತಲೇ ಹಾಕಿಸಿಕೊಂಡ ಹಚ್ಚೆ,
ಅಳಿದೂ ಉಳುಯುವ ತೊಳಲಾಟ
ಕೊಡವಿಕೊಳ್ಳಲೂ ಒಂದು ಘಟ್ಟಿತನ ಬೇಕು..
ಕೂಡುವ ದಾರಿ*
ವಿಶಾಲವಾಗಿ ಹರಡಿದ ಮರದ ಬುಡದಲ್ಲಿ
ದಾರಿಗಳು ಸಂದಿಸುತ್ತಿದ್ದವು.
ನಿತ್ಯ ಬರುವವರೂ ಮರದ ಸುತ್ತ ಕುಳಿತು
ದಣಿವಾರಿಸಿಕೊಂಡು ಮುಂದುವರಿದು
ಸಾಗುತ್ತಿತ್ತು ದಾರಿ.
ಎಷ್ಟೊಂದು ಸಮಸ್ಯೆ ಗಳನ್ನು ಕೇಳುತ್ತಿತ್ತು
ಆ ಮರ ಮತ್ತು ಅದಕ್ಕಾತುಕೊಂಡ ದಾರಿ!
ನನಗಾಗಿ ಕಾಯುತ್ತಿದ್ದ ನೀನು.
ನಿನಗಾಗಿಯೇ ಕಾಯುತ್ತಿದ್ದ ನಾನು.
ಈ ಕೂಡುವ ದಾರಿಯಲಿ ಕೂಡದೇ ಸಾಗಿ
ಸಂಧಿಸುವ ದಿನಗಳು ಹುಟ್ಟಿ ಕೊಳ್ಳಲೇ ಇಲ್ಲ!
ಅಲ್ಲಿಯೇ ಹುಟ್ಟಿ ಗರಿ ಗೆದರಿದ ಭಾವಗಳಿಗೆ
ಗೂಡಿನಲಿದ್ದ ಮೊಟ್ಟೆಯಷ್ಟು ಬೆಚ್ಚಗಿನ ಭಾವ.
ಈಗಲ್ಲಿ ಕವಲುಗಳು ಬಹಳ ಒಡೆದಿದೆ.
ಗುರುತುಗಳಿಗೆಲ್ಲ ತೇಪೆ ಹಾಕಿದಂತೆ
ಮೆತ್ತಿಕೊಂಡ ಟಾರು
ಮರಕ್ಕೆ ಕೆತ್ತಿದ ಗೆರೆಗಳು ನಿಧಾನವಾಗಿ ಮುಚ್ಚಿತ್ತಿದೆ.
ನೆಲಕ್ಕೆ ಅಂಟಿಕೊಂಡ ಮೊಟ್ಟೆಯ ಜೀವ
ಸಂಧಿಸುವ ಕಾಲುದಾರಿ
ಬೆನ್ನು ಮಾಡಿ ನಿಂತ ಭಾವ
ವೃತ್ತವೊಂದು ಸುತ್ತುವರಿದು
ಎತ್ತ ಸಾಗಿದರೂ
ಒಂದು ದಾರಿ ಚಾಚಿಕೊಳ್ಳುತ್ತದೆ.
ಮತ್ತದರ ಗಮ್ಯ
ನಡೆದೇ ಅರಿಯಬೇಕಿದೆ!
*****************************************
,
**************************************************
ಚಂದದ ಭಾವ..
Thanku sujatkka,
ಚೆನ್ನಾಗಿದೆ ಸ್ಮಿತಾ
Thanku Smita G
ಅಭಿನಂದನೆಗಳು
ಧನ್ಯವಾದಗಳು ಸರ್