ಕವಿತೆ
ನಿನ್ನ ನಿರೀಕ್ಷೆಯಲ್ಲೇ..
ನೀ.ಶ್ರೀಶೈಲ ಹುಲ್ಲೂರು
ಜೊತೆಯಿದ್ದವರೆಲ್ಲ
ಹೋದರು ಮುಂದೆ ಮುಂದೆ
ನಾನುಳಿದೆ ನಿನ್ನ ನಿರೀಕ್ಷೆಯಲ್ಲೇ…
ನೀನು ಬಂದೇ ಬರುವೆ ಎಂಬ
ಭಾಷೆ ಇತ್ತಲ್ಲ ಹೇಗೂ..
ನಿರ್ಗಮಿಸಿದ ದಿನಕರ
ಇಣುಕಿದ ಚಂದ್ರ ನೀಲಾಗಸದಿ
ನಕ್ಷತ್ರಗಳೆಲ್ಲ ಸಾಕ್ಷಿಯಾದವು
ಮಿನುಗಿತು ಬೆಳ್ಳಿಚುಕ್ಕಿಯೂ
ಹುಂಜಗಳೆಲ್ಲ ಕೂಗು ಹೊಡೆದವು
ಕೋಗಿಲೆಯ ಕುಹೂ ಕುಹೂ
ಆಗಲೂ ನಾ ನಿನ್ನ ನಿರೀಕ್ಷೆಯಲ್ಲೇ..
ದೇವ , ದೇವಲೋಕ
ದಯೆ ತೋರಲಿಲ್ಲ
ನಿಜಕ್ಕೂ ನೀ ಬರಲೇ ಇಲ್ಲ
ಇಳೆಯಲಿ ಮೈದಳೆಯಿತು
ಹೊಸತು ಹೊಂಬೆಳಕು
ನಿನ್ನ ನೆನಪಲಿ ಮೊಳೆತು
ಕುಡಿಯೊಡೆದವು ಕಂಬನಿ
ತುಂಬಿದೆದೆಯ ಶಿಖರಾಗ್ರ
ದ ಮೇಲಿಂದಿಳಿದ ಕಣ್ಣ
ಹನಿ ಕಣಿವೆಯ ದಾಟಿ
ನೆಲವನಪ್ಪಿತು ಥಟ್ಟನೆ
ಎದೆ ಮೇಲೊರಗಿದ
ಸೆರಗಿಗೂ ತೇವ ಭಾಗ್ಯ
ಆಗಲೂ ನೀನು ಬರಲಿಲ್ಲ
ಆಗಸದಿ ಹೊಳೆಯ
ತೊಡಗಿತು ಮಿಂಚು ಫಳಫಳ
ನಡುಗತೊಡಗಿತು
ಭೂಮಿ ಬಾನು ಗಡ ಗಡ
ಅಷ್ಟ ದಿಕ್ಕುಗಳಲೂ
ಕಿವಿಗಡಚಿಕ್ಕುವ ಸದ್ದು
ನೀರಿನ ಹನಿಗಳೊಂದಿಗೆ
ಆಲಿಕಲ್ಲುಗಳ ಸುರಿಮಳೆ
ಬಿರುಗಾಳಿಗೆ ನಡು ಮುರಿದು
ಕೊಂಡವು ಟೊಂಗೆಗಳು
ಆಗಲೂ ಸಹ ನಾ
ನಿನ್ನ ನಿರೀಕ್ಷೆಯಲ್ಲೇ..
ಜೋರಾದ ಗಾಳಿ ಮಳೆಗೆ
ಕಪ್ಪರಿಸಿ ಬೀಳತೊಡಗಿದವು
ನೆನೆದ ಗೋಡೆಗಳು ಧೊಪ್ಪನೆ
ತುಂಬತೊಡಗಿತು ನೀರು
ಹೊಲ ಗದ್ದೆ ತೋಟಗಳಲ್ಲಿ
ನದಿಗೂ ಪ್ರಳಯದ ಮಹಾಪೂರ
ದೇವ,ದೇವಲೋಕ
ದಯೆ ತೋರಲಿಲ್ಲ ಆಗಲೂ..
ನನ್ನ ಕಾಲಡಿಯ ನೆಲ
ಕುಸಿಯತೊಡಗಿತು
ಮೆಲ್ಲ ಮೆಲ್ಲಗೆ..
*************************************