‘ಕಾಗೆ ಮುಟ್ಟಿದ ನೀರು’

ಪುಸ್ತಕ ಪರಿಚಯ

ನಾನುಕಂಡಂತೆ

‘ಕಾಗೆಮುಟ್ಟಿದನೀರು

        ಆಫೀಸಿನ ಕೆಲಸ ಮುಗಿಸಿ, ಬರುತ್ತಾ ದಾರಿಯ ನಡುವೆ ಸಿಗುವ ‘ನವಕರ್ನಾಟಕ’ದಲ್ಲಿ ಪುಸ್ತಕ ಖರೀದಿಸಿದವಳೇ ಮನೆಗೆ ಬಂದೆ. ಮನೆವಾರ್ತೆ, ಮಕ್ಕಳ ಉಸಾಬರಿ, ಊಟ ಮತ್ತೆಲ್ಲಾ ಮುಗಿಸಿ ಪುಸ್ತಕ ಕೈಯಲ್ಲಿ ಹಿಡಿದೆ. 

      ಅದೇನು ಪುಸ್ತಕ ಓದಿದೆನಾ ಅಥವಾ ‘ಬೆಟ್ಟದ ಹೂ’ ಸಿನೆಮಾ ಪುನಃ ಕಂಡೆನಾ ಗೊತ್ತಾಗದಂತಹ ಭಾವ! ಪುಸ್ತಕದ ಆರಂಭ ಇರುವುದೇ ಹಾಗೆ. ಬಹಳ ಆಪ್ತವಾಗುವಂತೆ. ಕಾಡು, ಮನೆ, ಇಲಿ-ಹಾವು, ಅಪ್ಪ-ಅಮ್ಮ, ಶಾಲೆ, ಗುರುಗಳು, ನೆಂಟರು, ಬಡತನ, ಪುಟಾಣಿ ಹುಡುಗನೊಬ್ಬ ಆಸೆ ಕಂಗಳಿಂದ ಕಾಣುವ ಪುಟ್ಟ ಪುಟ್ಟ ವಿವರಗಳು…   ಅರವತ್ತರ ವಯಸ್ಸಲ್ಲಿ ಮಾಗಿ ಮಗುವಾಗಿ ನೆನಪಿನ ಹಾದಿಯಲ್ಲಿ ಹಿಂದಿರುಗಿ ಉತ್ಪ್ರೇಕ್ಷೆ ಇಲ್ಲದೆ ಸುಮ್ಮಗೆ ಅಡ್ಡಾಡಿ ಬರುವುದು ಇದೆಯಲ್ಲಾ… ಆ ಸುಖ ನಮ್ಮದೂ ಆಗುವ ಆಪ್ತ ಆರಂಭ ಪುಸ್ತಕದಲ್ಲಿದೆ. ಇದನ್ನು ಕೇವಲ ವಿವರಣೆ ಎನ್ನಲೇ? ವರ್ಣನೆ ಎನ್ನಲೇ? ಗೊಂದಲವಾಗುತ್ತೆ. 

   ಆರಂಭದ ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ತೆರೆದಿಡುವ ಹೂ ಪಕಳೆಗಳಂತಹ ಮೃದುತ್ವದ ಬಾಲ್ಯದನುಭವಗಳು, ಕಂಡ ವ್ಯಕ್ತಿತ್ವ ಶ್ರೇಷ್ಠತೆಗಳು, ಕಟ್ಟಿಕೊಡುವ ಕತೆಗಳು ಭಾರೀ ಹಿಡಿಸುತ್ತವೆ. ಆದರೆ, ಮಂಡ್ಯ ಎಂಬ ಅಪ್ಪಟ ಬಯಲು ನೆಲದ ನನ್ನಂತಹವರಿಗೆ ಗುಡ್ಡ ಬೆಟ್ಟ ಹತ್ತಿಳಿಯುತ್ತಾ ಕಾಡು- ಮೇಡು ಅಲೆದಾಡುತ್ತಾ ಸಿಗುವ ಊರುಗಳು ಹೇಗಿರಬಹುದೆಂಬ ಕುತೂಹಲ ಮೂಡುತ್ತದೆ. ಅದರ  ಹೊರತು ನನ್ನೂರಿನಂತೆ ರಸ್ತೆ ಬದಿಗೇ ಸಿಕ್ಕಿಬಿಡುವ ಊರುಗಳಂತಿಲ್ಲದ ಪರಮಲೆ, ವಾಟೆಕಜೆ, ಕಳ್ಮಕಾರಿ,  ಹೊಪ್ಪಳೆ, ಕಮಿಲ, ಬಂಟಮಲೆ, ಬಿಳಿಮಲೆ, ಏನೇಕಲ್ಲು, ಪಂಜ, ಕರ್ಮಜೆ, ಕರಿಮಲೆ, ಎಲಿಮಲೆ, ಬಂಗಾಡಿ, ಕೂತ್ಕುಂಜ, ಸಂಪಾಜೆ… ಊಫ್!! ಇವೆಲ್ಲಾ ಅರ್ಥವಾಗದ ಚಿದಂಬರ ರಹಸ್ಯ ಹೊದ್ದುಕೊಂಡು ನಿಬಿಡ ಕಾನನದೊಳಗೆ ಲೀನವಾಗಿರುವ ಹಾರುವ ಓತಿಕ್ಯಾತದಂತೆ ಕಾಣುವ ಊರುಗಳಾಗುತ್ತವೆ. ಒಮ್ಮೆಯಾದರೂ ಅವನ್ನೆಲ್ಲಾ ತೀರಾ ಸಮೀಪ ಅನುಭವಿಸಿ ಬರಬೇಕೆನ್ನುವಂತೆ ಹುಚ್ಚು ಹಿಡಿಸುತ್ತವೆೆ. 

     ಬಾಲ್ಯದ ವಿವರಣೆಗಳು ಆಪ್ತವಾಗುತ್ತಾ ಆಗುತ್ತಾ ಮಂತ್ರಮುಗ್ಧತೆಯಲ್ಲಿ ಕಳೆದು ಹೋಗುತ್ತಿರುವಾಗಲೇ ಕಾಲ ಮಾಗುವುದೇ ತಿಳಿಯದು. ಆಮೇಲಿನದ್ದೆಲ್ಲಾ ಓದು- ಉದ್ಯೋಗ, ಏಳು-ಬೀಳಿನ ವ್ಯಾಪಾರ. ಕನ್ನಡ ಸಾಹಿತ್ಯ ಲೋಕದ ವ್ಯವಹಾರಗಳು, ವಿಶ್ವವಿದ್ಯಾಲಯವೊಂದರ ಕಟ್ಟುವಿಕೆಯ ಪರಿಶ್ರಮ, ಹಿರಿಯರ ಅನುಚಿತ ನಡೆ ಇವೆಲ್ಲಾ ಹಸಿಹಸಿಯಾಗಿಯೇ ದಾಖಲಾಗಿರುವುದು ಇಷ್ಟೊತ್ತಿಗಾಗಲೇ  ನಾಡಿನ ಸಾಹಿತ್ಯ- ಸಾಂಸ್ಕೃತಿಕ ಲೋಕದಲ್ಲಿ ತಳಮಳ ಹುಟ್ಟಿಸಬೇಕಿತ್ತು. ಬಹು ಚರ್ಚೆಗೆ ಗ್ರಾಸವಾಗಬೇಕಿತ್ತು. ಆದರೆ ಲೋಕ ಇರುವುದೇ ಹೀಗೆ ನಮ್ಮ ಬೇಳೆ ಬೆಂದರೆ ಸಾಕೆನ್ನುವ ಲೋಕಜ್ಞಾನ ಪ್ರಾಪ್ತವಾಗಿರುವ ನಾಡವರಾಗಿರುವ ನಾವು ಅದೆಷ್ಟು ಜಡ್ಡುಗಟ್ಟಿದವರೆನ್ನುವುದು ತಿಳಿದುಕೊಂಡು ತೆಪ್ಪಗಿರಬೇಕಾಗಿದೆಯಲ್ಲ ಎಂದು ಸಂಕಟವಾಗುತ್ತದೆ.

 

      ‘ಚದುರಿ ಬಿದ್ದ ಆತ್ಮದ ತುಣುಕುಗಳ’ನ್ನು ಆಯ್ದು ಕೊಂಡು ಎದೆಗಾನಿಸಿಕೊಳ್ಳುತ್ತಿರುವಾಗಲೇ ಥಟ್ಟನೆ ನಾನೊಂದು ಪ್ರವಾಸ ಕಥನವನ್ನೋ, ಸಾಹಸಗಾಥೆಯನ್ನೋ ಓದುತ್ತಿರುವಂತೆ ಭಾಸವಾಗುತ್ತದೆ. ಒಂದು ನಿರ್ದಿಷ್ಟ ತಾರ್ಕಿಕ ಆಲೋಚನೆಯನ್ನು ಹೊಂದಿದ ವ್ಯಕ್ತಿಯೊಬ್ಬರು ಕೆಲವಾರು  ಆಪ್ತ ಸಮಾನಮನಸ್ಕರೊಡನೆ ಸೇರಿ ಮಾಡುವ ಸಾಂಸ್ಥಿಕ  ಸಂಘಟನೆಯ ಕೆಲಸವು ಸಂತಸ ತರುತ್ತದೆ. ಅದರಲ್ಲೂ ನಮ್ಮ ಕನ್ನಡದ ನೆಲದ ವಿಚಾರಗಳು ನಾಡಿನ ಎಲ್ಲೆ ಮೀರಿ ದೆಹಲಿ, ಅಮೇರಿಕ, ಬೆಲ್ಜಿಯಂ, ಜಪಾನು, ಹೊನಲುಲು ಮೊದಲಾದೆಡೆಗಳಲ್ಲಿ ವಿವಿಧ ರೂಪಗಳಲ್ಲಿ ಬಿತ್ತರವಾದ ಬಗೆಗಳು ದಾಖಲಾದ ವಿವರಗಳನ್ನು ಓದುವಾಗ ಹೆಮ್ಮೆಯ ಭಾವ ಸ್ಫುರಿಸುತ್ತದೆ. 

            ಇಡೀ ಪುಸ್ತಕದ ಸ್ವರೂಪ ಹೀಗೆಯೇ ಎಂದು ನಿರ್ಣಾಯಕವಾಗಿ ಹೇಳಲು ಬಾರದಂತಹ ವಿಶಿಷ್ಟವಾದ ಕೃತಿ. ಸೊಗಸಾದ ನಿರೂಪಣೆ. ಹಲವು ಬಗೆಯಲ್ಲಿ ಕನ್ನಡ ನಾಡು- ನುಡಿ, ರಾಜಕೀಯ- ಸಾಂಸ್ಕೃತಿಕ- ಸಾಮಾಜಿಕ ಸ್ಥಿತ್ಯಂತರಗಳ ದಾಖಲೀಕರಣದಂತೆ ಭಾಸವಾಗುತ್ತದೆ. ಹಾಗೆಯೇ ಕೋಮುವಾದ, ಜಾತೀಯತೆ, ಬಡತನ, ಪಕ್ಷಪಾತ ಮೊದಲಾದನ್ನು ಕುರಿತು ಒತ್ತುಕೊಡದೆ, ಹೇಳಿಯೂ ಹೇಳದಂತೆ ಮಾಡಿರುವ ಲೇಖಕರ ಒಂದು ರೀತಿಯ ಜಾಗೃತ ಸ್ಥಿತಪ್ರಜ್ಞತೆಯು ಕಾಡದೇ ಬಿಡುವುದಿಲ್ಲ. 

     ನಮ್ಮ ನಡುವೆ ಲೋಕಜಾಗೃತಿಯಂತಿರುವ ಹಿರಿಯರಾದ ಶ್ರೀ ಪುರುಶೋತ್ತಮ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಅನ್ನು ಮನೆಗೆ ಕೊಂಡುತಂದ ದಿನವೇ ಓದಿ ಮುಗಿಸಿದಾಗ ರಾತ್ರಿ ೧:೩೦ ದಾಟಿತ್ತು. ಇತ್ತೀಚೆಗೆ ನನ್ನಿಂದ ಇಷ್ಟು ಮಾತ್ರ ಒಂದೇ ಗುಕ್ಕಿಗೆ ಓದಿಸಿಕೊಂಡ ಕೃತಿ ಇದು. 

           ಎಲ್ಲಾ ಓದಿಯಾದ ಮೇಲೆ ಪುಸ್ತಕದ ಹಲವಾರು ವಿಷಯಗಳು ದಟ್ಟವಾಗಿ ಕಾಡುತ್ತಲಿವೆಯಾದರೂ ತೀವ್ರವಾಗಿ ಉಳಿದದ್ದು ಮಾತ್ರ ಮೂರು ವಿಚಾರಗಳು.

 

೧. ನಿಗದಿಪಡಿಸಿದ ದಿನದಂದು ಗಂಡುಮಗುವಿನೊಡನೆ ಗಂಡನ ಮನೆಗೆ ಹಿಂದಿರುಗದೆ, ಮಳೆ ಕಡಿಮೆಯಾದ ಮೇಲೆ ಗಂಡನ ಮನೆಗೆ ಹಿಂದಿರುಗಿದ ಹಸಿಬಾಣಂತಿಯನ್ನು ಮನೆಯೊಳಗೆ ಸೇರಿಸಿಕೊಳ್ಳದೆ ಹಸುಗುಸನ್ನು ಮಾತ್ರ ಉಳಿಸಿಕೊಂಡದ್ದು,ಆದರೆ  ಆ ಬಾಣಂತಿ ಅನಂತರ ಏನಾದರೆಂದು ತಿಳಿಯದೇ ಹೋದದ್ದು…

೨. ಕಾಡ ನಡುವೆ ಶಾಲೆಗೆ ಹೋಗಿ ಬರುತ್ತಿದ್ದ ಮಗುವನ್ನು ಹೊಳೆ ದಾಟಿಸಿಕೊಳ್ಳಲು ಬರುಬೇಕಿದ್ದ ಅಮ್ಮ ಕಾಗೆ ಮುಟ್ಟಿದ್ದಕ್ಕೆ ಬರಲಾರದೇ ಹೋದದ್ದು. ಮತ್ತು ಆ ಮಗು ಇಡೀ ರಾತ್ರಿ ನಿಬಿಡ ಕಾಡಿನೊಳಗೆ ಅಮ್ಮನ ಬರುವಿಕೆಯನ್ನು ನಂಬಿ ಕಾದದ್ದು…

೩. ಹೃದಯವನ್ನು ಎಂದೋ ಕೊಟ್ಟಿದ್ದ ಪತ್ನಿ ಕಿಡ್ನಿ ಕೊಟ್ಟದ್ದು… 

ವಸುಂಧರಾ ಕದಲೂರು

2 thoughts on “‘ಕಾಗೆ ಮುಟ್ಟಿದ ನೀರು’

  1. ನಾನೂ ಓದಿದ ಮತ್ತು ನನಗೆ ಕಾಡಿದ ಪುಸ್ತಕ.ಬಹಳ ಚೆಂದಕ್ಕೆ ವಿಶ್ಲೇಷಿಸಿರುವಿ.ವಸುಂಧರಾ..

Leave a Reply

Back To Top