ವಿಶಾಲಾ ಆರಾಧ್ಯ ಕಾವ್ಯಗುಚ್ಛ
ಬುದ್ಧನೊಂದಿಗೊಂದು ದಿನ
ನಿನ್ನಂತಾಗಲೂ
ನಾನೇನು ಮಾಡಬೇಕು ?
ಕತ್ತಲ ಬದುಕಿನಿಂದೊಡನೆ
ನಡೆದುಬಿಡಲೇ?
ಓ..ಓಹ್
ಎಂದಾದರೂ ಉಂಟೆ ಬುದ್ಧ ?
ಯಶೋಧರೆ ಏನಾದರೂ ನಿನ್ನ ಬಿಟ್ಟು ರಾಹುಲನ ದಾಟಿ ಬಂದಿದ್ದರೆ
ಕಥೆ ಏನಾಗಿರುತ್ತಿತ್ತು..??
ನೀನೇನೋ ಸಿದ್ಧಾರ್ಥನಿಂದ
ಬುದ್ಧನಾಗಿ ಹೋದೆ
ಯಶೋಧರೆಗೆಂತೆಂಥಹ ಪದವಿ
ಬಿರುದು ವಿಜೃಂಭಿಸುತ್ತಿದ್ದವು
ಬಲ್ಲೆ ಏನು?
ಸಾಧ್ವಿ ಸೀತೆಯ ಶೀಲಕೆ ಬೆಂಕಿಯಿತ್ತ ಜನ
ಸಾವಿತ್ರಿಯ ಸೋಲಿಸೆ ನಿಂದಸಿದ ಯಮ
ಕೃಷ್ಣೆಗೆ ಹೊರಗಿನರಲ್ಲ ಅರಮನೆಯಲೇ
ಅಂಬರವ ಹರಿದ ಬಣ!
ಯಶೋಧರೆಯ ಬೇರಾವ ಅಗ್ನಿನುಡಿಗೀಡು
ಮಾಡುತ್ತಿದ್ದರೋ..
ನಿನಗೆ ಒಮ್ಮೆಯಾದರೂ ಪತ್ನಿ ಬೇಡ..!
ಪುತ್ರನ ನೆನಪೇನಾದರೂ ಸುಳಿಯಿತೇ?
ಊರಿಗೇ ಬೆಳಕಿತ್ತ ಪುಣ್ಯಾತ್ಮ ನೀನು
ಒಳಗೊಳಗೇ ನೀನು ಕತ್ತಲಾಗಲಿಲ್ಲವೇ? ದೀಪದ ಕೆಳಗಿನ ಕತ್ತಲಂತೆ..!!
ಎಲ್ಲೆ
ದೇವರು ದಿಕ್ಕರಿಸಿ ಗಡಿಪಾರಾಗಿದ್ದಾನೆ
ಮಾಡಿದ ಸೈಟು ಬೇಡಿದ ಕಾರು
ಮಾಡಿದ ಕಾರುಬಾರೆಲ್ಲಾ
ಅವನ ಕೃಪೆಯೇ !
ಗೋಡೆಯಲಿ ಇದ್ದಾಗ
ಅಮ್ಮ ಅಪ್ಪನೇ ಗುರುವೇ ಎಂದು
ವಾರ ಮಾಡಿ ಪಕ್ಷ ಮಾಡಿ ಬೇಡಿ ಕಾಡಿ ಪಡೆದವರೇ .!
ಕಾಯಿ ಹೊಡೆದು ಹಣ್ಣನಿತ್ತು
ದೀಪ ಧೂಪ ಹಚ್ಚಿ ಇಟ್ಟು ವಸ್ತ್ರ ದಕ್ಷಿಣೆಗಳನಿಟ್ಟು
ಕೈ ಜೋಡಿಸಿ ಬೇಡಿದವರೇ..!
ಅವನಿಗಾಗಿ ಜಾತ್ರೆ ಮಾಡಿ
ಅವನ ಹೆಸರಲೇ ಯಾತ್ರೆ ಮಾಡಿ
ದಂಡಿ ದಂಡಿ ದಂಡವಿಟ್ಟು
ಹರಕೆ ಹೊತ್ತು ಉರುಳಿ ಬಂದು ದೀರ್ಘ ದಂಡ ಹಾಕಿದವರೇ ..!
ಅಂಬರಕ್ಕೇ ಅಂಬರವನಿತ್ತು
ದಯಾಮಯಿಗೇ ದಯೆ ತೋರಿ
ನೆಲೆಯಾದವನಿಗೇ ಗುಡಿಯ ಕಟ್ಟಿ
ಮನೋಹರನಿಗೇ ಉಪಚಾರ ಮಾಡಿ ಕಡೆಗೊಂದು ದಿನ
ಮಾಸಿದನೆಂದೋ ಪಟ ಪಸುಗೆಯಾಯಿತೆಂದೋ
ಮನೆಯಾಚೆ ತಳ್ಳಿ ಜಗನ್ನಾಥನನ್ನೇ
ಅನಾಥಗೊಳಿಸಿದ ಮನುಜ ಭಕ್ತಿಗೇನೆಂಬೆ?
ಕುದಿ
ಕುದಿಯುವ ಹೂವಿನ ಹೃದಯಗಳಲಿ
ನಗುವಿನ ಆವಿಯ ಚಿತ್ರಣ ತೋರಿಕೆ
ಅಂತರಂಗದ ಕತ್ತಲಾಮಿಷ ಕೋಣೆಗೆ
ಬಹಿರಂಗದಿ ಕಾಣುವ ಬೆಳಕಿನ ಜವನಿಕೆ
ಹೂವಿನ ಹುಡುಗನು ಕಟ್ಟುವ ನೂಲಲೇ
ಕೊರಳುಸಿರಿನ ಇರಿತದ ಮತ್ಸರವಿಹುದು
ಕಸಾಯಿಕಾನೆಯ ಕಟುಕನ ಕಣ್ಣಲೂ
ಕರುಣೆಯ ಕರುಳಿನ ಕರೆಯಿರಬಹುದು
ಕಣ್ಣಿಗ್ಹಬ್ಬವಾಗೋ ಅಂದದ ಕಡಲೊಳು
ಜೀವ ತೆಗೆಯುವ ಸುಂದರ ಜಲಚರ
ಕಸವನೇ ನುಂಗಿದ ಕೆಸರಿನ ಹೊಂಡದಿ
ಪೂಜೆಗೆ ಒದಗುವ ಕಮಲದ ಹಂದರ
ಸುಂದರ ಗೋಕುಲ ವೃಂದಾವನದಿ ಗೂಡೊಳಗೊಂದು ವ್ಯಾಘ್ರ ನುಗ್ಗಿದೆ
ಅಂದದೊಂದಿಗೆ ಚಂದದ ಮನದಿ
ಮನದೊಳಗೆ ವಿಷವನೇ ಬಸಿದಿದೆ
————-
*********************
ಮೂರು ಕವನಗಳೂ ಚೆನ್ನಾಗಿವೆ. “ಬುದ್ಧನೊಂದಿಗೊಂದು ದಿನ” ವಿಶೇಷವಾಗಿ ಇಷ್ಟವಾಯಿತು.
ಶಬುದಗಳ ಶಕ್ತಿ ಅಮೋಘ