ಅರ್ಪಣಾ ಮೂರ್ತಿ ಕಾವ್ಯಗುಚ್ಛ

ಅರ್ಪಣಾ ಮೂರ್ತಿ ಕಾವ್ಯಗುಚ್ಛ

heart candy

ಕವಿತೆ-ಒಂದು

One small wild flower. One small wild daisywheel flower - macro shot stock photos

ಸದ್ದುಗದ್ದಲದ
ಬೀದಿಯ ಬದಿಯ
ಬೇಲಿಯ ಹೂ
ಅರಳುವ ಸದ್ದಿಗೆ
ಕಿವಿಯಾಗುವ
ಉತ್ಸುಕತೆ,
ಹೂ ಬಾಡಿದಷ್ಟೂ
ಚಿಗುರುತಿದೆ,

ಹರಿವ
ನದಿಗಳೆಲ್ಲದರ ಗಮ್ಯ
ಸಾಗರವೇ ಆಗಬೇಕಿಲ್ಲ,
ಸಮುದ್ರ ಸೇರುವ
ಮೊದಲೇ
ಭುವಿಯೊಳಗೆ ಇಂಗಿದ
ಅದೆಷ್ಟೋ ನದಿಗಳ
ಆರ್ದ್ರತೆಯ ಗುರುತುಗಳು
ಕಾಲ್ಮೆತ್ತಿವೆ,

ಮೈಸುತ್ತಿದ ನೂಲು
ತೆರಣಿಯ ಹುಳವ
ನುಂಗಲೇಬೇಕಿಲ್ಲ,
ರೇಷಿಮೆಯ
ರೆಕ್ಕೆಯಂಟಿಸಿಕೊಂಡ
ಚಿಟ್ಟೆ
ಹೂವಿನ ತೆಕ್ಕೆಯಲಿ
ನಾಚಿದ ಬಣ್ಣ
ಹೂದಳದ ಮೈಗಂಟಿದೆ,

ಕತ್ತಲಿಗಂಟಿದ
ಕನಸುಗಳೆಲ್ಲ
ಕಣ್ಣೊಳಗುಳಿಯುವುದಿಲ್ಲ,
ಕನಸು ನುಂಗಿದ
ಅದೆಷ್ಟೋ ಹಗಲುಗಳು
ನನಸಿಗೆ ಮುಖ ಮಾಡಿ
ನಿಂತಿವೆ….


ಕವಿತೆ-ಎರಡು

ನದಿ ತುಂಬಿ ಹರಿದರೆ
ಬಯಲಿಗೆ ನೆಲೆಯೆಲ್ಲಿ,
ಬತ್ತಬೇಕು
ಬರಿದಾಗಬೇಕು
ಬಯಲಾಗಬೇಕು,
ಬರದ ಬದುಕಿನ ಒಳಗೂ
ಇಳಿಯಬೇಕು,

Vintage Valentines Card - Sunlight On Two Heart In Love

ಧರೆ ಕಾದು ಕರಗದೆ
ಮಳೆಯ ಸೊಗಸೆಲ್ಲಿ,
ಕಾಯಬೇಕು
ಕಾದು ಕರಗಬೇಕು,
ಮುಗಿಲೇರಿ ಹನಿಕಟ್ಟಿ
ಹನಿಯಬೇಕು
ಇಳೆ ತಣಿಯಬೇಕು,

ಇರುಳು ಕವಿಯದೆ
ಹುಣ್ಣಿಮೆಗೆ ಹೊಳಪೆಲ್ಲಿ,
ಕಪ್ಪು ಕತ್ತಲ ನೆಪವು
ಕಣ್ಣ ಕಟ್ಟಬೇಕು,
ರೆಪ್ಪೆ ಮುಟ್ಟಬೇಕು
ಕನಸು ಹುಟ್ಟಬೇಕು…


ಕವಿತೆ-ಮೂರು

ಉಸಿರುಗಟ್ಟಿದ
ಮರುಭೂಮಿಯಲಿ
ಬಿರುಗಾಳಿಯ
ಹುಡುಕುವ
ಬರಡು
ಮರಳ ಹಾಸು
ಚಿಲುಮೆ ನೀರನು
ಗುಟುಕಿಸಿ
ಉಸಿರ ಹಿಡಿದು
ತಂಪು ಗಾಳಿಯ
ಕಾಯುವುದೂ
ಒಲವೇ,

ಹಾಯಿದೋಣಿ
ಹಾಯಲಿಲ್ಲ
ನಿಂತ ನೀರ ಕಡಲಲಿ,
ಅಲೆಗಳ ನೆಪವೊಡ್ಡಿ
ಸೆಳೆದೊಯ್ಯುವ
ಕಡಲ ಸಂಚಿಗೆ
ನಿಂತು
ಮುನಿಯುವುದೂ
ಒಲವೇ,

ಬೆಳಕು ಮಲಗುವಾಗ
ಎಚ್ಚರಾದ ಇರುಳು,
ಚುಕ್ಕಿಗಳ ಬದಿಗಿರಿಸಿ
ಚಂದಿರನ ಹುಡುಕುವ
ಕತ್ತಲ ಮೌನದ
ನೀರವತೆಯೂ
ಒಲವೇ…….

*********************************

8 thoughts on “ಅರ್ಪಣಾ ಮೂರ್ತಿ ಕಾವ್ಯಗುಚ್ಛ

  1. ಈ ನೆಲದೊಡಲಲ್ಲಿ
    ಎಷ್ಟೋ
    ಮಹಾಮಹಿಮರ
    ಹೆಜ್ಜಗುರುತುಗಳಿದ್ದರೂ
    ಯಾಕೋ
    ನನ್ನೆದೆಯ
    ಮೇಲೆ
    ಬುದ್ದನ ಪಾದಗಳ
    ಮೃದು
    ಮೆತ್ತನೆಯ
    ಸ್ಪರ್ಶವೆ ಆಪ್ತ- ಕವಿತೆ ೧

    ಅಳಿಸಲಾಗದ ಲಿಪಿಯ ಬರೆಯಬಾರದು

    ಇಳೆ
    ಮಳೆ
    ಬೆರತರೆ
    ಚಿಗರು
    ಇಳೆ
    ಮಳೆ
    ಮೊರೆತರೆ
    ????????????? – ಕವಿತೆ ೨

    ಕೇಳಿದ್ದೆಲ್ಲವ
    ಕೊಡಿಸುವುದು
    ಒಲವಾದರೆ
    ನಿರಾಕರಿಸಿ
    ಬದುಕಿನ
    ಅರ್ಥವನುಣ್ಣುವಂತೆ
    ಮಾಡುವದು
    ಒಲವಲ್ಲವೆ

    1. ಇಳೆ
      ಮಳೆ…
      ಮೊರೆತರೆ..
      ಚಿಗುರ..ಮರೆತಂತೆ..!!!
      ಚಿಗುರಿಲ್ಲದ..
      ಬದುಕು..
      ಚಿರ..ನಿದ್ರೆಗೆ…ಜಾರಿದಂತೆ…!!

  2. ಮನಮುಟ್ಟುವಂತಿದೆ ನಿಮ್ಮ ಕವಿತೆ. ಅಜ್ಞಾನದ ಕಂಬಳಿ ಹೊದ್ದು ಮಲಗಿದ್ದವನಿಗೆ ಬಡಿದೆಬ್ಬಿಸಿದೆ ಈ ನಿಮ್ಮ ಕವನ.

Leave a Reply

Back To Top