ಲಕ್ಷ್ಮಿ ಪಾಟೀಲ್ ಕಾವ್ಯಗುಚ್ಛ

ಹನಿ ಹನಿ ಟ್ರ್ಯಾಪ್ —

ಮೆಸೇಜು ವಾಟ್ಸಾಪು ಫೇಸ್ಬುಕ್ಕು
ಮುಂತೆಲ್ಲ ಮಾಧ್ಯಮಗಳ ತಿಪ್ಪಿಗುಂಡಿಗೆಸೆಯಲು
ಮೋಹಕ ಪಲ್ಲಕ್ಕಿಯೊಳಗೆ ಶೃಂಗಾರಗೊಳಿಸಿದ ಹೆಣ ಬೀಳಿಸಲು ಗುಟು ಗುಟು ಸುರೆ ಕುಡಿಸಿ
ಪೋಸ್ಟ್ ಮಾರ್ಟಮ್ಮನ
ಕುಟುಕು ಕಾರ್ಯಾಚರಣೆ ನಡೆಸಿ
ಹನಿ ಟ್ರ್ಯಾಪ್ ಹಾಸಿ ಮಲಗಿಸಿದ್ದಾರೆ
ನಿದ್ದೆ ಎಚ್ಚರ ಅಳು ನಗು ಮಾತಿನ ಸರಸ ವಿರಸ ಕಲ್ಪನೆಗಳ ವಿಹಾರ ವಿಕಾರ ಎಲ್ಲ ಮಾತ್ರೆಗಳ ಡಬ್ಬ ಹತ್ತಿರವೇ ಇಟ್ಟು ಹನಿಟ್ರ್ಯಾಪ್
ದಿಂಬಿಗೊರಗಿಸಿ ಮಲಗಿಸಿದ್ದಾರೆ
ಮಾತ್ರೆಗಳ ಮೂಸಿನೋಡಿದರಷ್ಟೇ ಸಾಕಿಲ್ಲಿ
ಸತ್ತ ನರನಾಡಿಗಳ ಸುತ್ತ ಉಳಿದಿರುವ
ಜೀವವೊಂದು ಅನಾಥವಾಗಿಸಲು
ನರಿಜಪದ ಭಂಟರಲ್ಲಿ ಸುಳಿದು ಸುತ್ತಿ
ಹತ್ತಿರ ಬಂದು ಸಂದಿ ಗೊಂದಿ ಹಾದು
ಮನೆ ಕಚೇರಿ ಎಲ್ಲೆಲ್ಲೂ ಜೊತೆ ಬಂದು
ಎಂಥ ಬಲ ಕದಿಯುವರು
ವಾಸನೆ ತಿಳಿದು ಒಳ ಸೇರಿದ ಕಳ್ಳಗಿವಿಗಳು
ಗಾಳಹಾಕಿ ಹಿಡಿವ ರಣ ಹದ್ದುಗಳು
ಎಂಜಲು ನೆಕ್ಕಿ ಜೊಲ್ಲಿಗೆ ಬೊಗಸೆಚಾಚಿ
ಕಾಸಿಗೆ ಕೈಚೀಲ ಹಿಡಿದ ನಿಶಾಚರಿಗಳು
ಮೋಹನ ಮೋಹಿನಿಯರ ದಂಡುಪಾಳ್ಯ
ತಂತ್ರ ಮಂತ್ರಗಾರರ ವೇಷಧಾರಿಗಳು
ಪ್ರತಿಭೆ ಕಾಯಕಗಳ ರುಂಡ ಹಾರಿಸಿ
ಕೀರ್ತಿಗರಿಗಳ ಗಾಳಿಪಟವಾಗಿಸಿ
ಕತೆಕಟ್ಟಿ ಬಣ್ಣ ಮೆತ್ತಿಸಿ ಎದೆಯೊಡೆದು ನೀರಾಗಿಸಿ
ಕಣ್ಣೀರು ತುಳುಕಿಸಿ ಕರಿನೆತ್ತರ ಕಕ್ಕಿಸಿ
ಕುಡಿದ ರಕ್ತ ಪಿಪಾಸುಗಳು
ದೂರ ಕಣ್ಣಿಟ್ಟಿವೆ ಎಲ್ಲ ಹನಿ ಹನಿ ಟ್ರ್ಯಾಪ್
ಗಟ್ಟಿ ತಿಮಿಂಗಿಲಗಳು ಸ್ಟಾರ್ ಫಿಶ್ಗಳು ಬಲೆ ಹರಿದು
ಅಬ್ಬರದ ಅಲೆಗಳಿಗೆ ಜಗ್ಗದೇ ಜಿಗಿದು
ಕಳ್ಳ ಬೆಕ್ಕುಗಳ ಬಾಲ ಸುಟ್ಟು ಥಕ ಥಕ
ಕುಣಿಸಿದ್ದಾರೆ ಈಗಷ್ಟೇ ಇಲ್ಲೆಲ್ಲೊ ಅವಿತಿದ್ದ
ನನ್ನೊಳಗಿನ ಕುಸುಮಬಾಲೆಯಾಗಿದ್ದ ಕವಿತೆ
ಬೆಂಕಿಜ್ವಾಲೆಯಾಗಿದ್ದಾಳೆ ಎಲ್ಲ ಹನಿ ಹನಿ ಟ್ರ್ಯಾಪ್
ನಾದಗಾಮಿಗಾಮಿನಿಿ–

ಸುಲಭದಲಿ ಒಲಿಯದು ಒಲುಮೆಗಾನ
ತೊತ್ತಾದರಷ್ಟೇ ಒಲವುಗಾನ
ನೆನಪಾಗಿ ಹೊರಟಂತೆ.ನಿನ್ನನ್ನೇ ಮರೆತೆ
ಒಲುಮೆ ಸಂಗೀತಕೆ ಕಾಮನಬಿಲ್ಲು
ಕಟ್ಟಲು ಹೊರಟೆ
ಸಂಜೆ ಸಂಗೀತ ಮೃದಂಗ ಮೇಳಕೆ
ಭಾವ ಕಡಲಿಗೆ ಭಾರ ಇಳಿಸಲು
ರಾಗದೊಡೆಯನಿದಿರು ಒಡಲು
ಇಳುಹಲು ಹೊರಟೆ
ಸಂಗೀತ ಸುಂದರನಲ್ಲಿ ಶರಣೆಂದು ನಿಂದಂತೆ
ಗುರು ಹೇಳಿದಂತೆ ಶ್ರುತಿ ಹಿಡಿಯಲು ಹೊರಟೆ
ಗಾನ ಗಂಧರ್ವನಿಗೆ ಒಲಿದು ಹೊರಟೆ
ಕಲೆಗೆ ತೊತ್ತಾಗಲು ಕಲೆಯ ಆಳಾಗಲು ಹೊರಟೆ
ಸಂಗೀತ ಸಾಧಕನ ನೆರಳಾಗಿ
ಯಕ್ಷಲೋಕದ ಗಂಧರ್ವಕನ್ಯೆಯಾಗಲು ಹೊರಟೆ
ಸಪ್ತಸ್ವರದ ನಾದ ಹೊಮ್ಮಿಸಲು ಹೊರಟೆ
ಶರಧಿಯಲಿ ಮುಳುಗಿದರೆ ಮೇಲೇರಿ ಬರದಂತೆ
ಸಾಗರದ ಒಡಲಿಗೆ ಕಿವಿಗೊಟ್ಟು ಹೊರಟೆ
ಅಮೃತಧಾರೆಯ ಅಮೃತಮತಿ !
ಲೋಕದೆಲ್ಲೆಯ ವಿಷ ನೋಡದೇ ಹೊರಟೆ
ಕಲೆಯೊಳಗೆ ಕಲೆಯಾಗಲು ಹೊರಟೆ
ಮಧುಬನಕೆ ಅಮೃತಕಲಶ ಹೊತ್ತು ಹೊರಟೆ
ಕಲೆಯ ಸಾರ್ವಭೌಮತ್ವ ಸಾರಲು ಹೊರಟೆ
ಸುಖದ ನಶ್ವರತೆ ಅರಿಯಲು ಹೊರಟೆ
ಬದುಕಿನ ಸತ್ವ ಬರೆಯಲು ಹೊರಟೆ
ಕಲಾಕಾರರಂತೆ ಬದುಕಲು ಹೊರಟೆ
ಯಶೋಧರತ್ವ ಅಳಿಯಲು ಹೊರಟೆ
ಸಾಗರದ ಸೆರಗು ಸೇರಲು
ಭೂಮಿಯ ಹಂಗು ಹರಿದು ಹೊರಟೆ
ನಾದನಡೆಯ ಅಮೃತಮತಿ
ನಾದಗಂಧವಾಗಲು ಹೊರಟೆ
ಭೂಮಿ ತಾಪ —

ನಾನಿಲ್ಲಿ ತಪ್ಪು ಮಾಡಿದರೆ
ಆ ಸೂರ್ಯನಿಗೆ ಕೆಂಡದಂತ ಕೋಪವಂತೆ
ಹೆದರೆ ಆ ಭಂಡನ ಕೆಂಡ ಕೋಪಕ್ಕೆ
ನನ್ನೊಳಗಿನ ಬೆಳಗು ಕಳೆಯದ ತನಕ
ಅವನೇಕೆ ತಪ್ಪು ಮಾಡುತ್ತಾನಂತೆ
ಪೂರ್ವದಲ್ಲಿ ಹುಟ್ಟುವುದು
ಪಶ್ಚಿಮದಲ್ಲಿ ಸಾಯುವುದು
ಅದಕ್ಕೂ ನಾನೇ ಕಾರಣವಂತೆ
ಪೆದ್ದನ ಸಿದ್ಧ ಉತ್ತರ
ಅವನ ಹುಟ್ಟಿಗೆ ನಾನ್ಹೇಗೆ ಹೊಣೆ
ಅವನ ಸಾವಿಗೂ ನಾನೇಕೆ ಚಿತೆ
ಬೇಕೇ ಬೇರೆಯವರ ಕಾಯುವುದಕ್ಕೆ
ಜೀವಮಾನದ ತಪಸ್ಸು
ಇವನ ಕತ್ತಲು ಬೆಳಕಿನ
ಕಾಲಜ್ಞಾನ ಹಿಡಿತಕ್ಕೆ
ನನ್ನ ರೂಪ ನನಗೇ ನೋಡಲಾಗದೆ
ಉರುಳುತ್ತಿದ್ದೇನೆ ಚಕ್ರವಾಗಿ
ವಿರಾಮಶೂನ್ಯಳಾಗಿ
ಅವನ ತಪ್ಪಿಗೆ ನನಗೆ ಶಿಕ್ಷೆ
ಇಲ್ಲಿ ನಾ ಹೆತ್ತ ಹೆಣ್ಣುಗಳ ಶಾಪ
ನಾನೇ ಹೊತ್ತು ನೊಂದಿದ್ದೇನೆ
ಅವನ ತಪ್ಪಿಗೆ ನಾ ಉರಿಯುತ್ತಿದ್ದೇನೆ
ಪ್ರಳಯಕ್ಕಾಗಿ ಕಾಯುತ್ತಿದ್ದೇನೆ
*************************************
ಧನ್ಯವಾದಗಳು ಮಧು ಸರ್
ತಿದ್ದುಪಡಿ –ಶೀರ್ಷಿಕೆ -ನಾದಗಾಮಿನಿ