ಕಾವ್ಯಯಾನ

ನಿಮ್ಮ ಹಾಗೆ ಬರೆಯಲಾಗುವುದಿಲ್ಲ

ವಿ.ಎಸ್.ಶಾನಬಾಗ್

ನನಗೆ ನಿಮ್ಮ ಹಾಗೆ ಬರೆಯಲಾಗುದಿಲ್ಲ
ನಿಮ್ಮ ಬಗ್ಗೆ ನೀವು ಬರೆದ ಹಾಗೆ
ನನ್ನ ಬಗ್ಗೆ ನನಗೆ ಬರೆಯಲಾಗುವುದಿಲ್ಲ
ನೀವು ಹೇಳಿದಹಾಗೆ
ನಿಮ್ಮ ಸ್ನೇಹಕ್ಕೆ ಬರೆದಿದ್ದನೆಲ್ಲ
ಒರೆಸಿ ಹಾಕಿದೆ ಎಲ್ಲ

ಅವನು ಅವಳ ಹಳೆಯ ಪ್ರೀತಿ
ಒಂದಾಗಿ ಮತ್ತೆ ಮತ್ತೆ ಬೇರೆಯಾದ ರೀತಿ
ಎಲ್ಲ ಎಲ್ಲ ಎಲ್ಲ ಅನುರಾಗಕ್ಕೆ
ಅವಳನ್ನು ಕೂಡಲಾಗುವುದಿಲ್ಲ
ಅವನನ್ನು ಕಳೆಯಲಾಗುವುದಿಲ್ಲ
ಇವರ ಬಗ್ಗೆನೀವು ಬರೆದಹಾಗೆ
ನನಗೆ ಬರೆಯಲಾಗುವುದಿಲ್ಲ
ಪ್ರೀತಿಗೆ ಎಲ್ಲ

ಅವ ಅವಳ ನೆನೆದ ಹಾಗೆ
ಅವಳು ಅವನು ನಡೆದಹಾಗೆ
ಒದ್ದೆ ನಿಂತ ಅವರನ್ನು ಕವಿತೆಯಲ್ಲಿ
ಕರೆಯಲಾಗುವುದಿಲ್ಲ
ಆದ್ದರಿಂದ ನಿಮ್ಮ ಹಾಗೆ
ಬರೆಯಲಾಗುವುದಿಲ್ಲ
ಪ್ರೀತಿಗೆ ಎಲ್ಲ

ಆದ್ದರಿಂದ ನಾನು ನಿಮ್ಮ
ಗುಂಪಿನಲ್ಲಿ ಸಲ್ಲ
ನೀವು ಬರೆದದ್ದೇ ಕವಿತೆ
ತೆರೆದದ್ದೇ ಕಥೆ
ತಾಳೆಯಾಗದಿದ್ದರೂ ಯೋಚನೆ, ರೂಪಕ
ಕೂರಿಸಿ ಶಬ್ಧಗಳ ಜಾತಕ
ಪೀತಿಯಲ್ಲಿ ಕೂಡಿದ ಕ್ಷಣಗಳ
ಶಬ್ದಗಳಲ್ಲಿ ತುಂಬಿಸಲಾಗುವುದಿಲ್ಲ
ಎಲ್ಲ ಅನುರಾಗಕೆ ಸಲ್ಲ

ನಿಮ್ಮದೇ ಆದ ನುಡಿಕಟ್ಟುಗಳಿಂದ
ನೀವೆಲ್ಲ ಕವಿತೆಯಬಗ್ಗೆ ಹೇಳುತ್ತಲೇ ಇರುವಾಗ
ನಿಮ್ಮನ್ನು ಕೇಳಿದ್ದು ಹೆಚ್ಚು,
ಬರೆದದ್ದು ಬರೇ ಹುಚ್ಚು

ಅವನು ಅವಳ ಬಗ್ಗೆ ಸದಾ ಬರೆಯುವ ನಿಮ್ಮ
ಕಾವ್ಯ,ಲಯ,ಉಪಮೆ ರೂಪಕ ಪ್ರತಿಮೆ ಪ್ರತಿಭೆ
ಬೆನ್ನಲ್ಲೇ ಹೊತ್ತ ನಿಮಗೆ
ನಿಮ್ಮದೇ ನುಡಿಕಟ್ಟು ಹೇಳಿದ್ದೆಲ್ಲ ಕವಿತೆ
ನೀವು ಬರೆದದ್ದನ್ನೆಲ್ಲ ಪ್ರಕಟಿಸುವವು ಎಲ್ಲ
ನಿಮ್ಮ ಹಾಗೆ ಬರೆದರೂ ಓದುವವರಿಲ್ಲ
ಪ್ರೀತಿಗೆ ಎಲ್ಲ

ನಮ್ಮಂತೆ ಕವಿತೆಯೂ ಪ್ರೀತಿಯಲ್ಲಿ
ಪ್ರಕಟವಾಗುತ್ತವೆ ಕೆಲವರದು ಖಾಸಗಿ
ಸಾರ್ವಜನಿಕವಾಗಲು ಸಲ್ಲ
ಆದ್ದರಿಂದಲೇ ನಿಮ್ಮ ಹಾಗೆ ಬರೆಯುವುದಿಲ್ಲ
ನಿಮ್ಮ ಸಲ್ಲದ ಪ್ರೀತಿಗೆ ಎಲ್ಲ

***********************

Leave a Reply

Back To Top