ಕಾವ್ಯಯಾನ

ಇಳೆಯ ಸ್ವಗತ

ಕಲಾ ಭಾಗ್ವತ್

ಹಕ್ಕಿ ಹಾರಾಡಿ
ಗೂಡ ಸೇರುವ ಸಂಜೆ
ಚಿಲಿಪಿಲಿಗಳ ಸದ್ದು ಗದ್ದಲ

ತಾನೇ ಗೆದ್ದೆನೆಂಬ ದಣಿವು
ಹಿಗ್ಗಿ ಹಿಂದಿಕ್ಕಿ ಓಡಿಹುದು
ಕರುಳ ಕುಡಿಗಳ ಸಿದ್ಧಿ ಸಂಭ್ರಮದ
ಕಥೆಗಳಿಗೆ..
ಮೆಲುದನಿಯಲೇ ಉತ್ತರ
ಒಳಗೊಳಗೆ ಏರು ಎತ್ತರ!

ಪಿಸುಮಾತಿನ ರಸಘಳಿಗೆ,
ಕುಸುರಿ ಮಾಡಿದೆ ಕನಸ,
ಪಡುವಣದ ಕೆಂಪಂಚಿನಲಿ..
ಹೋಗಿಯೇ ಬಿಟ್ಟ
ನಾಳೆ ಬರುವೆನೆಂದು!
ಇಲ್ಲೀಗ ಕಗ್ಗತ್ತಲು..

ಕೈಯೊಂದು ಚಾಚಿತು ಬಾ
ಎಂದು ಬೆಳಕ ತೋರಲು..
ಆಹಾ.. ಎಂತಹ ಶುಭ್ರ !
ಎಂದಿನಂತಲ್ಲ ಇಂದು..

ಮಾಸಕೊಮ್ಮೆಯಾದರೂ
ಮರೆಯಾದರೇ ಚಂದ
ಈ ಚಂದ್ರಮ..
ಮರುದಿನ ತುಸು ಮಾತ್ರ ನೋಡಲು.
ಪುಟ್ಟ ಮಗುವಿಗೆ
ಬೇಕಲ್ಲವೇ ಊಟದಾಟಕೆ?
ಕರುಣೆಯೋ, ಒಲುಮೆಯೋ..
ಇಣುಕಿದರೆ ಸೆಳವೊಂದಿಹುದು

ದಿನದಂತ್ಯದ ಶಾಂತ, ಹಸಿತ
ಅವನ ಮೊಗವೊಂದೇ ಸಾಕು
ಹಂಚಿಕೊಳ್ಳಲು ಸಿಹಿ-ಕಹಿಯ

ಬೆಳಗಾದರೆ ಬಂದೇ ಬಿಡುವನವನು
ಬಡಿದೆಬ್ಬಿಸಲು
ಮಾತಿಗೆ ತಪ್ಪದೆ,
ಮೂಡಣವ ರಂಗೇರಿಸಿ..
ತಿಳಿಗೊಳದಲಿ ತೋರಿ ಪ್ರತಿಬಿಂಬ
ಹಸಿರಿಗಷ್ಟೇ ಕೇಳುವುದು
ಕಿವಿಯಲೂದಿದ
ಉಸಿರಿನ ಸ್ವರ..
ಯಾಕೆ ಆಯಾಸ?

ಮುಸುಕ ಸರಿಸಿ, ಮುಖವರಳಿಸಿ
ಹಸಿ ಕನಸಲಿ ಸ್ವಾಗತಿಸಲೇ
ಮತ್ತೆ ಸಂಜೆಯ?..

************************************

9 thoughts on “ಕಾವ್ಯಯಾನ

  1. ಸಂಗಾತಿ ಬಳಗಕ್ಕೆ ಹಾಗೂ ಪ್ರೋತ್ಸಾಹಿಸಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು.

Leave a Reply

Back To Top