ಮೂರು ಸಂಜೆ
ಫಾಲ್ಗುಣ ಗೌಡ ಅಚವೆ.
ಮೋತಿ ಗುಡ್ಡದ ಬಂಡೆಗಳ ಮೇಲೆ
ಕುಳಿತ ಮೋಡಗಳು ಎಂಥದೋ
ಪಿಸುಮಾತನಾಡುತ್ತ ಅಲ್ಲೇ ಕೆಳಗೆ
ಹೈಗರ ಹುಡುಗಿಯರು ಅಬ್ಬಿಯ ನೀರು ಬೆರೆಸಿ ಮೀಯುವ ಚಂದ
ನೋಡುತ್ತಿವೆ.
ಸದಾ ವಿಪ್ರಲಂಭ ಶ್ರಂಗಾರದ ಕೊಮಣೆ ಮಾಡುತ್ತ
ಮಂಗಟ್ಟೆ ಹಕ್ಕಿಗಳು ಆಕಾಶದೆತ್ತರಕ್ಕೆ ಹಾರುತ್ತ ಹಾರುತ್ತ ಹನಿಮೂನು ಮೂಡಿನಲ್ಲಿ ಸುಖದ ಮೂರೇ ಗೇಣು ಬಾಕಿ.
ಗುಮ್ಲೆಗದ್ದೆಯಿಂದಿಳಿದು ಬರುವ ವಿಭೂತಿ
ಯಾಣದ ಭೈರವೇಶ್ವರನ ಬೂದಿ ತೊಳೆದು ರಾಶಿ ರಾಶಿ ಕಟ್ಟಿಗೆಗಳ ಮೇಲೇರಿ ಗಂಗಾವಳಿಯ ಸಮುದ್ರದಲಿ
ಮೀಯುತ್ತದೆ.
ಅಶ್ಲೇಷಾ ಮಳೆಗೆ ಹುತ್ತದಿಂದೆದ್ದ
ಅಣಬೆಗಳ ಕೊಡೆ ಹಿಡಿದು ಇರುವೆಗಳು ಮೊಟ್ಟೆಯನ್ನು ಹೊಟ್ಟೆಯಡಿ ಹೊತ್ತು ಹೊಸ ಮನೆಗೆ ಶಿಪ್ಟಾಗುತ್ತಿವೆ.
ಅಟ್ಟದ ಗೋಣಿಚೀಲದ ಮೇಲೆ ವಾರ್ಷಿಕೋತ್ಸವ ಆಚರಿಸಿಕೊಂಡ ಬೆಕ್ಕಿನ ಸಂಸಾರ ಸೀಮಂತ ಕಾರ್ಯಕ್ರಮದ ತಯಾರಿಯಲ್ಲಿವೆ.
ಒಂದೇ ಸವನೆ ಹೊಯ್ಯುವ ಜಡಿಮಳೆಯ ಹೊಳೆಗೆ ತೇಲಿ ಬಂದ ಹೈಗರ ತೋಟದ ತೆಂಗಿನ ಕಾಯಿಗಳು ನೀರಕುಳಿ ಸಣಕೂಸನ ಪಾಲಾಗಿವೆ.
ಮಣಕನ ಗುಂಡಿಯಲ್ಲಿ ಗಾಳ ಹಾಕುವುದು
ಸಂಕ ಕಟ್ಟುವುದು
ಹಳ್ಳ ಹಾಯುವುದು
ಹಾಲ್ಟಿಂಗ್ ಬಸ್ಸು ಹಳ್ಳದಚ್ಚಿಗೆ ನಿಲ್ಲುವುದರ ಜೊತೆ
ಪುಲೋಟು ಮನೆಯಿಂದ ಒಣ ಜಬ್ಬಿನ ಸಾರಿನ ಕಮ್ಮಗಿನ ಅದಮ್ಯ ಗಂಧ ಒಂದೇ ಸವನೆ
ಮೂಗಿಗೆ ಬಡಿಯುತ್ತಿದೆ.
ಮಕ್ಕಳು ಮನೆಯ ಮೂಲೆಯಲ್ಲೆಲ್ಲೋ ಕೂಡಿಟ್ಟ ಗೇರುಬೀಜದ ಸುಟ್ಟ ಸೊನೆಯ ಘಾಟು
ಇಡೀ ಊರಿಗೆ ಬಿತ್ತರಿಸಿದೆ.
ಮಳೆ ಮಾತ್ರ ಹೊಯ್ಯುತ್ತಲೇ ಇದೆ
ಆಕಾಶಕ್ಕೆ ಓಝೋನಿನಂತ ತೂತು ಬಿದ್ದಹಾಗೆ!
************************************
ಚೆಂದದ ಕವಿತೆ
ತವರು ನೆನಪಾಗುತಿದೆ
ಹೈಗರ ಹುಡುಗಿಯರು ಅಬ್ಬಿಯ ನೀರು ಬೆರೆಸಿ ಮೀಯುವ ಚೆಂದ ನೋಡಿದ ಕವಿ
ಎಲ್ಲರಿಗೂ ಧನ್ಯವಾದಗಳು..
ಸೊಗಸಾದ ಸಾಮಾಜಿಕ ಚಿತ್ರಣ