ಕಥಾಯಾನ

ಕನ್ನಡದ ಇಲಿ

ವಸುಂಧರಾ ಕದಲೂರು

ಅಮ್ಮನ ಕೈ ಹಿಡಿದು ಹಾಲಿನ ಬೂತಿನ ಬಳಿ ನಿಂತಿದ್ದ ಕಿಶೋರನಿಗೆ ಪಕ್ಕದ ಮೋರಿಯಿಂದ ಏನೋ ಚಲಿಸುತ್ತಿರುವುದು ಕಂಡಿತು. 

        ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದವನೇ ಪುನಃ ಆ ಕಡೆಗೇ ನೋಡತೊಡಗಿದ. ಪುಳುಪುಳನೆ ಪುಳಕ್ಕೆಂದು ಬಿಲದಿಂದ ಹೊರಬಂದ ಇಲಿಯೊಂದು ಕಸದ ಡಬ್ಬದ  ಹೊರಗೆ ಚೆಲ್ಲಿದ್ದ ಹಾಲಿನ ಕವರ್ ಅನ್ನು ಸ್ವಲ್ಪ ಎಳೆಯಿತು. 

     ಬರೀ ಟಾಮ್ ಅಂಡ್ ಜರ್ರಿ ಕಾರ್ಟೂನಿನಲ್ಲಿ ಇಲಿ ನೋಡಿ ಗೊತ್ತಿದ್ದ ಕಿಶೋರ ನಿಜವಾದ ಇಲಿ ನೋಡಿ ಪುಳಕಿತನಾಗಿ ಬಿಟ್ಟ. ‘ಮಮ್ಮೀ ಸೀ… ದೇರ್ ಇಸ್ ಅ ‍ರ‍್ಯಾಟ್…!’ ಜೋರಾಗಿ ಕೈ ಜಗ್ಗಿದ.

     ಕೋವಿಡ್ ನ ಸಲುವಾಗಿ ಮುಂದಿನ ವಾರ ಪೂರ  ಲಾಕ್ ಡೌನ್ ಎಂದು ಅನೌನ್ಸ್ ಮಾಡಿದ್ದರಿಂದ ಗಡಿಬಿಡಿಯಿಂದ ಮನೆಗೆ ಅಗತ್ಯದ ಸಾಮಾನು – ಸರಂಜಾಮು, ಸೊಪ್ಪು-  ತರಕಾರಿ, ಬೇಳೆ, ಮಾತ್ರೆ ಇತ್ಯಾದಿ ಇತ್ಯಾದಿ ಕೊಳ್ಳುತ್ತಾ ಗಡಿಬಿಡಿಯಿಂದ ಕೆಲಸ ಮಾಡಿಕೊಂಡಿದ್ದ ಕಿಶೋರನ ಅಮ್ಮ ಸುನಂದಾ ಹಾಲಿನ ಬೂತಿನ ಉದ್ದ ಕ್ಯೂ ನಲ್ಲಿ ನಿಂತಿದ್ದರೂ ‘ಮತ್ತೇನು ಬೇಕಿದೆ?’ ಎಂದು ಒಂದೇ ಸಮನೆ ಮನಸ್ಸಿನಲ್ಲೇ ಪ್ರಶ್ನಮ ಕೇಳಿಕೊಳ್ಳುತ್ತಿದ್ದಳು. 

    ಕಿಶೋರ ಕೈ ಜಗ್ಗುತ್ತಿದ್ದಂತೇ, ವಾಸ್ತವಕ್ಕೆ ಬಂದವಳೇ ‘ಏನ್ ಪುಟ್ಟಾ?’ ಎಂದು ಮಗನ ಮುಖ ನೋಡಿದಳು. 

    ‘ ಮಮ್ಮಾ ದೇರ್ ಇಸ್ ಅ ‍‍‍ರ‍್ಯಾಟ್! ಇಟ್ ವಾಸ್ ಸೋ ಕ್ಯೂಟ್…. !’ ಎಂದು ತಾನು ಕಂಡದ್ದು ಎಷ್ಟು ಕ್ಯೂಟ್ ಎನ್ನುವ ವಿಚಾರವನ್ನು ಕಣ್ಣಿನಲ್ಲೇ ಬಿಂಬಿಸುತ್ತಾ ಅಷ್ಟೇ ಮೋಹಕವಾದ ಉದ್ವೇಗದಿಂದ ಹೇಳಿದನು. 

     ಸುನಂದಾ, ‘ಎಲ್ಲಿ ಕಂಡೆ? ನನಗೂ ತೋರ್ಸು’ ಮಗನ ಉತ್ಸಾಹಕ್ಕೆ ತನ್ನ ಬೆರಗನ್ನೂ ಸೇರಿಸುತ್ತಾ ಕೇಳಿದಳು. 

       ‘ದೇರ್, ದೇರ್, ಇನ್ ಸೈಡ್ ದ ಹೋಲ್ ಮಮ್ಮಾ…! ವೇಯ್ಟ್ ಇಟ್ ವಿಲ್ ಕಮ್ಸ್ ಔಟ್..’ ಎಂದು ಕಸದ ಬುಟ್ಟಿಯ ಪಕ್ಕದಲ್ಲಿದ ಮೋರಿಯ ಬಳಿಯಿದ್ದ ಸಣ್ಣ ಬಿಲದತ್ತ ಕೈ ತೋರಿದ. 

   ಅಷ್ಟರಲ್ಲಿ ಆ ಇಲಿ ಪುನಃ ತನ್ನ ಪುಟ್ಟ ಚೂಪು ಮುಖ ಹೊರ ಮಾಡಿ ಒಂದೆರಡು ಕ್ಷಣ ಅವಲೋಕಿಸಿ ಬುಳಕ್ಕನೆ ಒಳ ಹೋಗಿ ಪುಳಕ್ಕನೆ ಹೊರಬಂದು ಯಾರೋ ಮುಕ್ಕಾಲುವಾಸಿ ತಿಂದು ಎಸೆದು ಹೋಗಿದ್ದ ಬಿಸ್ಕೆಟ್ಟಿನ ತುಂಡನ್ನು ಕಚ್ಚಿಕೊಂಡು ಬಿಲ ಸೇರಿತು. ಅದರತ್ತಲೇ ಕೈ ತೋರುತ್ತಾ.., ‘ಸೋ ಫಾಸ್ಟ್ , ಸೋ ಕ್ವಿಕ್…!!  ಹೌ ಕೆನ್ ಇಟ್ ಮೂವ್ಸ್  ಸೋ ಫಾಸ್ಟ್ ಮಮ್ಮಾ..?’ ಎಂದು ತಡೆರಹಿತನಾಗಿ ಕೇಳಿದನು.

                  ಕಿಶೋರನ ಪ್ರಶ್ನೆಗಳಿಗೆ ಸುನಂದಾ ಉತ್ತರಿಸಲು ತೊಡಗಬೇಕು ಎನ್ನುವಾಗಲೇ ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬಣ್ಣದಲ್ಲಿ ಬರೆದ ಖಾಲಿ ಬಾಕ್ಸಿನಲ್ಲಿ ನಿಲ್ಲುವ ಸರದಿ ಅವಳಿಗೆ ಬಂದಿತು. 

8 Interesting Facts About Rats | Britannica

       ಮಗುವಿನ ಕೈ ಹಿಡಿದು ಬಾಕ್ಸಿನೊಳಗೆ ಬಂದು ನಿಂತ ಸುನಂದಾ, ಗಲ್ಲದ ಮೇಲೆ ಜಾರಿದ್ದ ಮಗನ ಮಾಸ್ಕನ್ನು ಆತನ ಮೂಗು- ಬಾಯಿಯನ್ನು ಮುಚ್ಚುವಂತೆ ಸರಿಪಡಿಸಿದಳು. 

   ‘ಕಿಶೋರ್,  ನೀನು ಕೇಳೋ ಪ್ರಶ್ನೆಗೆಲ್ಲಾ ಉತ್ತರ ಹೇಳ್ತೀನಿ. ಆದ್ರೆ ನೀನು ಕನ್ನಡದಲ್ಲಿ ಮಾತನಾಡ್ಬೇಕು ಆಯ್ತಾ?’ ಎನ್ನುತ್ತಾ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳು’ ಎಂದಳು. 

   ‘ವಾಟ್ ಇಸ್ ರ‍್ಯಾಟ್ ಇನ್ ಕನ್ನಡ?!’ ಯೋಚನೆಯಲ್ಲಿ ಮಗ್ನನಾಗಿದ್ದ ಕಿಶೋರನು ‘ಪ್ಲೀಸ್ ಯೂಸ್ ದ ಸ್ಯಾನಿಟೈಸರ್ ಬಿಫೋರ್ ಎಂಟರಿಂಗ್ ದ ಶಾಪ್ ಮ್ಯಾಡಂ’ ಎಂದು ಹೇಳಿದ ಅಂಗಡಿಯವನ ಮಾತು ಕೇಳಿ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ?’ ಅನ್ನೋದನ್ನು ಮರೆತು ಅಮ್ಮನನ್ನು ನೋಡಿದ.

              **********

6 thoughts on “ಕಥಾಯಾನ

  1. ಒಂದು ಇಲಿಯ ಮೂಲಕ ಸಾದರ ಪಡಿಸುತ್ತಾ ಹೋದ ಕತೆಯ ಹಿಂದಿನ ಮೊನಚು ಹಿಡಿಸಿತು ವಸುಂಧರಾ

  2. ಈಗಿನ ಪೀಳಿಗೆ ಕನ್ನಡತನದಿಂದ ದೂರವಾಗುತ್ತಿರುವುದಕ್ಕೆ ನೋವಿದೆ ವಸುಂದರಾ ಇಂಗ್ಲೀಷ್ಎಂಬ ಸಮೂಹ ಸನ್ನಿ ರೋಗದಿಂದ ಹೊರ ಬರಬೇಕು ಅದು ಮನೆಯಿಂದಲೇ ಪ್ರಾರಂಭ ವಾಗಬೇಕು ಧನ್ಯವಾದಗಳು

  3. ಕಥಾಯಾನದ ಕಥೆಯೊಳಗೆ ಅಡಗಿರುವ ಕನ್ನಡ ಅಭಿಮಾನ, ಕನ್ನಡವನ್ನು ಉಳಿಸಿ ಬೆಳೆಸಬೇಕು ಎನ್ನುವುದನ್ನು ಸಾರುತ್ತಿದೆ. ಕಥಾಯಾನದ ಕಥೆ ತುಂಬಾ ಸೊಗಸಾಗಿದೆ ಮೇಡಂ.

Leave a Reply

Back To Top