ಕಾವ್ಯಯಾನ

ನದಿ ಈಗ ದಿಕ್ಕು ಬದಲಿಸಿದೆ

ಸ್ಮಿತಾ ಅಮೃತರಾಜ್.ಸಂಪಾಜೆ.

Body of Water and Green Field Under Blue Sky Photo

ಜುಳು ಜುಳೆಂದು ಹರಿಯುವ
ನನ್ನೂರಿನ ತಿಳಿನೀರಿನ ನದಿ
ಈಗ ಕೆನ್ನೀರ ಕಡಲು.

ತಪ್ಪನ್ನೆಲ್ಲಾ ಒಪ್ಪಿಕೊಂಡಂತೆ
ತೆಪ್ಪಗೆ ಹರಿಯುತ್ತಿದ್ದ ನದಿ..

ಒಣಗಿದೆದೆಯ ಮೇಲೆ ಮೊಗೆದು
ತಣಿಯುವಷ್ಟು ತೇವವನ್ನು
ನಮಗಾಗಿಯೇ ಕಾಪಿಡುತ್ತಿದ್ದ ನದಿ..

ಅಂಗಳದ ತುದಿಯವರೆಗೂ ಬಂದು
ಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ..

ಹೌದು! ಇದುವೇ ನದಿ
ಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆ
ನೆಲದ ಎದೆಯೊಡೆದು ಸೆಲೆ ಸಿಡಿದು
ಸಾವಿರ ನದಿಯಾಗಿ ಒಸರಿ ಹರಿದವು
ರಕ್ತ ಕಣ್ಣೀರ ಕೋಡಿ.

ದಿಕ್ಕಾಗಿದ್ದ ನದಿ ತಾನೇ
ದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗ
ನಾನೋ ದಿಕ್ಕು ಕಾಣದೆ ದಿಕ್ಕೆಟ್ಟು
ನದಿ ಹರಿಯುವ ದಿಕ್ಕಿಗೆ ಮುಖ ಮಾಡುವುದ
ನಿಲ್ಲಿಸಿದ್ದೇನೆ.

ಈಗ ನದಿ ತಿಳಿಯಾಗಿದೆ
ಮುಖ ನೋಡಿಕೊಳ್ಳಬಹುದು ಎನ್ನುತ್ತಾರೆ
ಮುಖವಾಡ ಹಾಕಲು ನದಿಗೂ ಸಾಧ್ಯವಾ..?
ನನಗೆ ದಿಗಿಲಾಗುತ್ತಿದೆ.

************************************

10 thoughts on “ಕಾವ್ಯಯಾನ

  1. ಬಹಳ ಚೆನ್ನಾಗಿದೆ ಸ್ಮಿತಾ.. ಒಂದು ಲಹರಿ ಓದಿದ ಹಾಗನ್ನಿಸ್ತು.

  2. ಸ್ಮಿತಾ ಅವರೇ,
    ತುಂಬಾ ಒಳ್ಳೆಯ ಕವನ.
    ಅರ್ಥ ನದಿ ಕವಿತೆ.

  3. ಮುಖವಾಡ ಹಾಕಲು ನದಿಗೂ ಸಾಧ್ಯವಾ..
    ನನಗೆ ದಿಗಿಲಾಗುತ್ತde
    Waw ಸ್ಮಿತಾ ವಂಡರ್ಫುಲ್ ಕವಿತೆ

  4. ಕವಿತೆ ಧ್ವನಿಪೂರ್ಣ…. ನದಿಗೆ ಮುಖವಾಡ ಇದೆ ಎಂಬ ಸಾಲು ಕವಿತೆಗೆ ಕಸುವು ದಕ್ಕಿಸಿದೆ. ನದಿ ಮತ್ತು ಮನುಷ್ಯ ಬೇರೆ ಬೇರೆ ಅಲ್ಲ.‌ ಅದೇ ಕವಿಯ ಒಳನೋಟಕ್ಕೆ ದಕ್ಕಿರುವ ಧ್ವನಿ…

Leave a Reply

Back To Top