ಪುಸ್ತಕ ಸಂಗಾತಿ

ಬೀಳದ ಗಡಿಯಾರ.

ಕೃತಿಯ ಹೆಸರು: ಬೀಳದ ಗಡಿಯಾರ.
ಪ್ರಕಟಣೆ: 2018
ಬೆಲೆ: 90ರೂ.
ಪ್ರಕಾಶಕರು: ಪ್ರೇಮ  ಪ್ರಕಾಶನ, ಮೈಸೂರು-570029

ಡಾ. ಬಸು ಬೇವಿನಗಿಡದ ಅವರ “ಬೀಳದ ಗಡಿಯಾರ”

ಹಿಂದೆಲ್ಲ ಕೆಲವು ಮನೆಗಳಲ್ಲಿ ಎಷ್ಟು ಗಂಟೆಯಾಗಿದೆಯೋ ಅಷ್ಟುಸಲ ಢಣ್ ಢಣ್ ಎಂದು ಗಂಟೆ ಹೊಡೆಯುವ ಗಡಿಯಾರಗಳಿದ್ದವು. ಅಂತಹ ಗಡಿಯಾರ ಆಗ ಮಕ್ಕಳಾಗಿದ್ದ ನಮಗೆ ಆಕರ್ಷಣೆಯ ಕೇಂದ್ರವಾಗಿತ್ತು. ಹನ್ನೆರಡು ಗಂಟೆಯಾಗುವಾಗ ಅದು ಹನ್ನೆರಡುಸಾರಿ ಗಂಟೆ ಬಾರಿಸುವುದರಿಂದ ಅದನ್ನು ಕೇಳಲು ಗಡಿಯಾರದ ಮುಂದೆ ಕಾತುರದಿಂದ ನಿಂತಿರುತ್ತಿದ್ದುದೂ ಇದೆ. ಆದರೆ ಹಾಗೇ ಮುಂದುವರಿದು ಹದಿಮೂರು, ಹದಿನಾಲ್ಕು ಹೀಗೆ ಗಂಟೆ ಹೊಡೆಯುತ್ತ ದಿನದ ಮುಕ್ತಾಯದಲ್ಲಿ ಇಪ್ಪತ್ನಾಲ್ಕು ಗಂಟೆ ಹೊಡೆಯುವ ಗಡಿಯಾರವಿದ್ದರೆ… ಚನ್ನಾಗಿತ್ತು ಎಂದೆಲ್ಲಾ ಅನಿಸಿದ್ದಿದೆ. ಆದರೆ ನಾನು ಇಲ್ಲಿ ಹೇಳ ಹೊರಟಿರುವುದು “ಬೀಳದ ಗಡಿಯಾರದ” ಮಕ್ಕಳ ಕಥಾ ಸಂಕಲನದ ಕುರಿತು. ಬೀಳದ ಗಡಿಯಾರ ಹಾಗಂದರೇನು, ಅದು ಹೇಗೆ ಬೀಳದೇ ಇರಲು ಸಾಧ್ಯ… ಎಂದೆಲ್ಲಾ ಮಕ್ಕಳಾದವರು ಯೋಚಿಸಿಯೇ ಯೋಚಿಸುತ್ತಾರೆ. ಅಂತಹ ಕುತೂಹಲದ ಶೀರ್ಷಿಕೆಯ ಕಥಾಸಂಕಲನ ರೂಪಿಸಿದವರು ಡಾ. ಬಸು ಬೇವಿನಗಿಡದ ಅವರು.

ಬಸು ಬೇವಿನಗಿಡದ ಅವರು ಈಗ ಧಾರವಾಡ ಆಕಾಶವಾಣಿಯ ಮುಖ್ಯಸ್ಥರು. ಅವರ ಮಕ್ಕಳ ಸಾಹಿತ್ಯದ ಕುರಿತಾದ ಅಧ್ಯಯನ, ಮಕ್ಕಳಿಗಾಗಿ ಅವರು ಬರೆದ “ನಾಳೆಯ ಸೂರ್ಯ” ಹಾಗೂ “ಓಡಿ ಹೋದ ಹುಡುಗ” ಮಕ್ಕಳ ಕಾದಂಬರಿಗಳು ಗಳಿಸಿದ ಜನಪ್ರಿಯತೆ, ಮಕ್ಕಳ ಮೇಲಿನ ಪ್ರೀತಿ ಇವೆಲ್ಲ ನಮಗೆ ಹೆಚ್ಚು ಆಪ್ತತೆಯನ್ನು ಉಂಟು ಮಾಡುತ್ತದೆ. ನಾಡಿನ ನಾಮಾಂಕಿತ ಕಥೆಗಾರ, ಕವಿ, ವಿಮರ್ಶಕರಾಗಿರುವ ಬಸು ಅವರು ಮಕ್ಕಳಿಗಾಗಿಯೂ ಬರೆಯುತ್ತ ಎಲ್ಲರೊಂದಿಗೆÀ ಸ್ನೇಹ ಪರತೆಯನ್ನು ವಿಸ್ತರಿಸಿಕೊಂಡಿದ್ದಾರೆ.

ಹಾಂ, ನಾನು ಬೀಳದ ಗಡಿಯಾರದ ಕುರಿತು ಹೇಳುತ್ತಿದ್ದೆ. ಗಡಿಯಾರ ಬೀಳದಂತೆ ಮೊಳೆ ಜಡಿದಿದ್ದಾರಾ, ಮಕ್ಕಳು ಬೀಳಿಸಲು ಸಾಧ್ಯವಾಗದ ಹಾಗೆ ಅವರಿಗೆ ಸಿಗದಂತೆ ಮೇಲೆ ಇಟ್ಟಿದ್ದಾರಾ, ಏನದು ಎಂಬುದು ಮಕ್ಕಳ ಪ್ರಶ್ನೆ. ನಮ್ಮದೂ ಆಗಬುದು. ಮೊಬೈಲ, ನೀರಿನ ಜಗ್ಗು ಒಡೆದು ಹಾಕಿರುವ, ಪಾಟಿ ಚೀಲ ರೊಂಯ್… ಎಂದು ಎಸೆದುಬಿಡುವ ಗಂಗಾಧರ ಎನ್ನುವ ಹುಡುಗ ಬೀಳದ ಗಡಿಯಾರ ಕಥೆಯಲ್ಲಿ ಇದ್ದಾನೆ. ಅವನು ಏನೆಲ್ಲಾ ಮಾಡಿದ ಹಾಗೂ ಅವನ ಜಗತ್ತಿನ ಸುತ್ತ ಮಕ್ಕಳ ಬಾಲ್ಯ ಹಾಗೂ ಹಿರಿಯರ ಕಷ್ಟ ಮತ್ತು ಖುಷಿ ಹೇಗೆಲ್ಲಾ ಹರಡಿಕೊಂಡಿದೆ ಎಂಬುದನ್ನು ನಾವು ಕಥೆ ಓದಿಯೇ ತಿಳಿಯ ಬೇಕು.

ಬಸು ಅವರು ಕಥೆಗಳ ಟೈಟಲ್ ಒಂದುರೀತಿ ಕುತೂಹಲ ಕೆರಳಿಸುವಂತೆ ಇಡುವುದರಲ್ಲಿ ಸಹಜತೆಯನ್ನು ಗಳಿಸಿದ್ದಾರೆ. ಅದು ಕಥೆಗಳಿಗೆ ಸರಿಯಾಗಿಯೇ ಇರುತ್ತದೆ. ಎರಡನೇ ಕಥೆ ‘ಮಾತಾಡದ ಮರ’. ಮರ ಮಾತಾಡದು ಎಂದು ನಮಗೆ ಗೊತ್ತು. ಆದರೆ ಆರೀತಿ ಏಕೆ ಬರೆದರು, ಮರ ಮಾತಾಡುತ್ತಿತ್ತೆ ಎಂಬೆಲ್ಲ ಪ್ರಶ್ನೆಗಳು ಏಳ ತೊಡಗುತ್ತವೆ. ಮುಗ್ಧ ಬಾಲಕನೊಬ್ಬ ಅಮ್ಮನೊಂದಿಗೆ ಜಗಳ ಮಾಡಿ ಕಾಣೆಯಾಗಿದ್ದ ತನ್ನ ಅಪ್ಪನನ್ನು ಹುಡುಕುತ್ತ ಸಾಗುವುದು ಈ ಕಥೆಯಲ್ಲಿ ಇದೆ. ಅಪ್ಪ ಕಲ್ಲಾಗಿ ಕುಳಿತಿರುವುದನ್ನು ಕಾಣುವ ಬಾಲಕನ ಮುಂದೆ ಅಪ್ಪ ಅಥವಾ ಬುಟ್ಟಿ ತುಂಬಿದ ಬಂಗಾರದ ಆಯ್ಕೆ ತೆರೆದುಕೊಳ್ಳುವ ಸಂದರ್ಭ ಇದೆ. ಆದರೆ ತನಗೆ ಅಪ್ಪ ಅಮ್ಮನೇ ಮುಖ್ಯ ಎನ್ನುವ ಶುದ್ಧ ಹೃದಯದ ಬಾಲಕ ಬಂಗಾರವನ್ನು ತಿರಸ್ಕರಿಸುತ್ತಾನೆ. ಜೀವ ಪಡೆದ ಅಪ್ಪ ಬಂಗಾರದ ಆಸೆಯಲ್ಲಿ ಮಗನನ್ನು ಕಳೆದುಕೊಳ್ಳುವ ಸಂಗತಿ ಇದೆ. ಇಲ್ಲೆಲ್ಲಾ ಮಕ್ಕಳ ಮುಗ್ಧತೆ, ಜೀವ ಪ್ರೀತಿ, ಮನದ ವಿಶಾಲತೆ ಜೊತೆಗೆ ದೊಡ್ಡವರ ಆಸೆ ಹಾಗೂ ಸ್ವಾರ್ಥಪರತೆ ಅನಾವರಣವಾಗುತ್ತದೆ.

ಹಳ್ಳಿಯ ಬದುಕಿನ ಚಿತ್ರಣದೊಂದಿಗೆ ಬಂದ ‘ದನಗಳು ಮಾತಾಡಿದ್ದು’ ಕಥೆ ಆಪ್ತವಾಗುತ್ತದೆ. ಇಲ್ಲಿ ಬಾಲಕನೊಬ್ಬ ತಾದಾತ್ಮ್ಯತೆಯಿಂದ ದನಗಳನ್ನು ಕಾಯುತ್ತ, ಪ್ರೀತಿಸುತ್ತ, ಅವರ ನಡೆಗಳಿಗೆ ಪ್ರತಿಕ್ರಿಯಿಸುತ್ತ ಸಂವಹನ ನಡೆಸುದೆಲ್ಲ ಇದೆ. ಮಕ್ಕಳಿರಲಿ ದೊಡ್ಡವರಿರಲಿ ತಾವು ಪರಿಸರದೊಂದಿಗೆ ಎಷ್ಟೋ ಸಾರಿ ಸಂವಾದ ನಡೆಸುತ್ತಾರೆ. ಬೆಕ್ಕು-ನಾಯಿಗಳೊಂದಿಗೆ, ದನಗಳೊಂದಿಗೆ, ತಮ್ಮ ಹೊಲ-ತೋಟಗಳೊಂದಿಗೆ ಮಾತಾಡುತ್ತ ಅದರ ಭಾವ ಮನಸ್ಸಿಗಿಳಿಸಿಕೊಳ್ಳುದೆಲ್ಲವನ್ನು ಈ ಕಥೆ ನಮಗೆ ಪರೋಕ್ಷವಾಗಿ ಹೇಳುತ್ತ ಆಪ್ತವಾಗಿ ಬಿಡುತ್ತದೆ.

‘ಅಲ್ಲಪ್ಪ’ ಕಥೆಯಲ್ಲಿ ತನ್ನ ಹೆಸರಿನಿಂದಾಗಿ ಮುಜುಗರಕ್ಕೊಳಗಾಗುವ ಬಾಲಕನ ತುಮುಲ ವ್ಯಕ್ತವಾಗಿದೆ. ಹಳ್ಳಿಗಳಲ್ಲಿ ಇಡುವ ಗ್ರಾಮೀಣ ಸೊಗಡಿನ ಹೆಸರುಗಳಿಂದಾಗಿ ಕೆಲವೊಂದುಸಾರಿ ಮಕ್ಕಳ ಮಧ್ಯದಲ್ಲಿ ಕೀಟಲೆಗೆ, ಅಪಹಾಸ್ಯಕ್ಕೆ ಒಳಗಾಗುವ ಸಂದರ್ಭಗಳಿರುತ್ತವೆ. ಇಲ್ಲೂ ಅಲ್ಲಪ್ಪ ಎನ್ನುವ ಬಾಲಕ ಅಂತಹುದೇ ನೋವು ಅನುಭವಿಸುತ್ತಾನೆ. ಆದರೆ ಪ್ರಬಂಧ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದಾಗ ಅಲ್ಲಪ್ಪ ಪ್ರಸಿದ್ಧನಾಗಿ ಅವನ ಹೆಸರೂ ಎಲ್ಲರ ಪ್ರೀತಿಯ ಹೆಸರಾಗಿ ಮಾರ್ಪಡುತ್ತದೆ. ಹೆಸರಿನ ಕುರಿತು ಚಿಂತಿಸುವುದಕ್ಕಿಂತ ನಾವು ಮಾಡುವ ಕಾರ್ಯವೇ ಮುಖ್ಯವಾಗುತ್ತದೆ ಹಾಗೂ ಹೆಸರಿನ ಕುರಿತು ಚಿಂತೆಪಡುವ, ಹೆಸರನ್ನು ಬದಲಾಯಿಸುವ ಅಗತ್ಯವಿಲ್ಲ ಎಂಬುದನ್ನು ಕಥೆ ಸೊಗಸಾಗಿ ನಿರೂಪಿಸಿದೆ.

‘ಬೆಳದಿಂಗಳು ಬೇಡಿದ ಬಾಲಕ’ ಇನ್ನೊಂದು ಕಥೆ. ಇಲ್ಲಿ ಹಳ್ಳಿಯ ಬದುಕು ಅನುಭವಗಳೆಲ್ಲ ಹೇಗೆ ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆ ಉಂಟಾಗಲು ಕಾರಣವಾಗುತ್ತವೆ ಎನ್ನುವುದನ್ನು ಹೇಳಲಾಗಿದೆ. ಹಿಟ್ಟು ಮುಕ್ಕುವ ಹುಡುಗ, ದೊಡ್ಡವರ ಹೋಮವರ್ಕ ಕಥೆಗಳು ಕೂಡಾ ಮಕ್ಕಳ ಸುತ್ತಲಿನವೇ ಆಗಿದ್ದು ಮಕ್ಕಳ ಲೋಕ ಹೇಗೆಲ್ಲ ವಿಸ್ತರಿಸಿಕೊಂಡಿವೆ ಎಂಬುದೇ ಆಗಿವೆ. ಅಜ್ಜನೊಬ್ಬ ಬ್ಯಾಗ ರಿಪೇರಿ ಮಡುವ ಹುಡುಗನೊಂದಿಗೆ ಹೊಂದಿದ್ದ ಸಂಬಂಧ, ಆ ಬಡ ಹುಡುಗನಿಗೆ ಉಂಟಾಗುವ ತೊಂದರೆ, ಅಜ್ಜ ಅವನಿಗಾಗಿ ಪರಿತಪಿಸುವುದು, ವೃದ್ಧಾಪ್ಯದಲ್ಲಿಯ ನಮ್ಮ ನಡವಳಿಕೆಗಳು ಸುತ್ತಲಿನವರಿಗೆ ಹೇಗೆಲ್ಲಾ ಅನಿಸುತ್ತದೆ ಎಂಬುದೆಲ್ಲ ಹೇಳುವ ‘ಬ್ಯಾಗ ರಿಪೇರಿ’ ಕಥೆ ಮನಸ್ಸಿನಲ್ಲಿ ಉಳಿಯುತ್ತದೆ.

ಬಸು ಅವರು ಚಿತ್ರಿಸುವ ಗ್ರಾಮೀಣ ಚಿತ್ರಣವಾಗಲಿ, ಪೇಟೆಯ ಬಡ ಮಕ್ಕಳ ಬದುಕಾಗಲಿ, ಮುದುಕರ ಸಂಕಷ್ಟಗಳಾಗಲಿ, ಮಕ್ಕಳ ಮುಗ್ಧತೆಯಾಗಲಿ ಎಲ್ಲವೂ ಸಹಜವೆಂಬಂತೆ ಹೇಳುವ ನಿರೂಪಣೆ ಬಹಳ ಆಪ್ತವಾಗುತ್ತದೆ. ಅಲ್ಲಿ ಬರುವ ಫ್ಯಾಂಟಸಿ ಕೂಡಾ ನಮ್ಮ ಮುಂದೆ ನಡೆಯುತ್ತಿರುವ ಘಟನೆಯಂತೇಯೇ ಕಾಣುತ್ತದೆ.

ಪಂಚ ತಂತ್ರ, ನೀತಿ ಕಥೆ, ಜನಪದ ಕಥೆಗಳಿಂದ ಆವರಿಸಿಕೊಂಡಿದ್ದ ಕನ್ನಡ ಮಕ್ಕಳ ಕಥಾ ಲೋಕ ಹೊಸ ಹರಿವನ್ನು ಕಾಣುತ್ತಿದೆ. ಬಸು ಅವರ ಕಥೆಗಳು ಈ ಹೊಸ ಹರಿವಿನ ಬಹು ಮುಖ್ಯ ಕಥೆಗಳಾಗಿವೆ. ವಾಸ್ತವ ಹಾಗೂ ಗ್ರಾಮೀಣ ಬದುಕಿನ ಬಹು ಸುಂದರ ಮಕ್ಕಳ ಲೋಕದೊಂದಿಗೆ ಬಸು ಅವರು ಅನುಸಂಧಾನ ಹೊಂದುವುದೇ ನಮಗೆಲ್ಲ ಬಹಳ ಖುಷಿ. ಹೊಸ ಸಂವೇದನೆಯ ಈ ಕಥೆಗಳನ್ನು ತಾವೆಲ್ಲ ಓದ ಬೇಕು, ಡಾ. ಬಸು ಬೇವಿನಗಿಡದ ಅವರು ಮತ್ತಷ್ಟು ಕಥೆಗಳನ್ನು ಬಿಚ್ಚಿಕೊಳ್ಳುತ್ತ ಕನ್ನಡದ ಮಕ್ಕಳ ಕಥಾಲೋಕ ವಿಸ್ತರಿಸುವ ಪಾಲುದಾರರಾಗಿಯೇ ಇರಬೇಕು ಎನ್ನುವುದು ನಮ್ಮ ಆಶಯ.

*****************************************

ತಮ್ಮಣ್ಣ ಬೀಗಾರ.

4 thoughts on “ಪುಸ್ತಕ ಸಂಗಾತಿ

  1. ಬಹಳ ಸೊಗಸಾಗಿ ಬರೆದಿದ್ದೀರಿ ಸರ್ ಪುಸ್ತಕ ಓದಿದಂತೆ ಆಗುತ್ತದೆ ನಿರೂಪಣಾ ಶೈಲಿ ಇಷ್ಟವಾಯ್ತು ಸರ್ ಇಬ್ಬರಿಗೂ ಅಭಿನಂದನೆಗಳು

  2. ನಿರೂಪಣೆಯ ಶೈಲಿ ಉತ್ತಮವಾಗಿ ಮೂಡಿಬಂದಿದೆ ಓದಿ ಖುಷಿ ಆಯ್ತು ಅಭಿನಂದನೆಗಳು ಸರ್

Leave a Reply

Back To Top