ಕಾವ್ಯಯಾನ

ವ್ಯತ್ಯಾಸ

ಪ್ರಮೀಳಾ ಎಸ್.ಪಿ.

ಎದೆಯ ಮೇಲೊಮ್ಮೆ ಕಿವಿಯಿಡು
ನಿನ್ನೆಸರೇ ನನ್ನುಸಿರಲಿ
ಎಂದಿದ್ದವ
ಗೊರಕೆ ಸದ್ದುಸಹಿಸಲಾರೆ
ದೂರ ಮಲಗುವೆಯಾ
ಎನ್ನುತ್ತಿದ್ದಾನೆ

ಬೈಕ್ ಮೇಲೆ ನಿನ್ನಬಾಡಿ
ಲೈಟ್ ವೈಟ್,ಹಾರೀಯೆ
ಎಂದಿದ್ದವ
ಕಾರಿಗೂ ಮುಂಬಾರ
ಹಿಂದೆ ಕೂರುವೆಯಾ
ಎನ್ನುತ್ತಿದ್ದಾನೆ.

ನಿನ್ನ ಮುಡಿಗೆ ಮಲ್ಲಿಗೆ
ತಂದಿರುವೆ ಮುಡಿಯಲೇ ಬೇಕು
ಎಂದಿದ್ದವ
ಮಾರೀಗ ರೂಪಾಯಿ ನೂರು
ಖಾಲಿ ಜಡೆಯೆ ಚೆನ್ನ
ಎನ್ನುತ್ತಿದ್ದಾನೆ

ಮಸಾಲೆ ದೋಸೆ ನಿನ್ನಿಷ್ಟ
ತಿನ್ನು ನೀ ಎಷ್ಟಾದರೂ
ಎಂದಿದ್ದವ
ಅನ್ನ ಸಕ್ಕರೆ ಬೇಡ
ಸಿರಿಧಾನ್ಯ ತಿನ್ನಲಾರೆಯಾ
ಎನ್ನುತ್ತಿದ್ದಾನೆ.

ಸೀರೆಯಲಿ ನೀ ಸುಂದರಿ
ಕಡು ನೀಲಿ ನಿನಗಂದ
ಎಂದಿದ್ದವ
ಕಪ್ಪನೆ ಮೈ ಬಣ್ಣದವಳಿಗೆ
ಅದ್ಯಾವ ಸೀರೆಯಾದರೇನು
ಎನ್ನುತ್ತಿದ್ದಾನೆ

ನಿನ್ನ ಮಾತೆ ಎನೆಗೆ
ಕೇಳಿದಷ್ಟು ಇಂಪು,
ಮನವೆಲ್ಲ ತಂಪು ಎಂದಿದ್ದವ
ನಾಯಿ ಬೊಗಳಿದ
ಸದ್ದು ಮಾತು ನಿಲ್ಲಿಸುವೆಯಾ
ಎನ್ನುತ್ತಿದ್ದಾನೆ.

ಕೇಳುವುದಾದರೂ ಯಾರಿಗೆ
ನಾನು,ಪ್ರಶ್ನೆಗಳನು….?
ಇರುವುದಾದರೂ ಯಾರು
ಉತ್ತರಿಸಲು?

ಬರೆಯಲೇನಿದೆ ಬಿಳಿ
ಹಾಳೆಯ ಮೇಲೆ….
ಕಡಿಮೆಯಾಗಿದ್ದು ಪ್ರೀತಿಯೇ

ಯಾರಿಗೆ
ಕೇಳಲಿ?
ಹೇಳಲಿ?

=======

Leave a Reply

Back To Top