ದಾರಾವಾಹಿ ಆವರ್ತನ ಅದ್ಯಾಯ-16 ಈಶ್ವರಪುರ ಪೇಟೆಯ ಸಿಟಿ ಕೋ-ಆಪರೇಟಿವ್ ಬ್ಯಾಂಕಿನಲ್ಲಿ ಚಿನ್ನವನ್ನು ಅಡವಿಟ್ಟು ಹಣ ಪಡೆದ ಗೋಪಾಲ ಸೀದಾ ಶಂಕರನ ಸೈಟಿಗೆ ಬಂದು ನಿಂತ. ಶಂಕರ ತನ್ನ ಮೇಸ್ತ್ರಿ ಸುಬ್ರಾಯನೊಡನೆ ಕಟ್ಟಡ ಕಾಮಗಾರಿಯ ಮಾತುಕತೆಯಲ್ಲಿದ್ದ. ಸ್ವಲ್ಪಹೊತ್ತಿನಲ್ಲಿ ಮೇಸ್ತ್ರಿಯನ್ನೂ ಕೂಲಿಯಾಳುಗಳನ್ನೂ ಕೆಲಸಕ್ಕೆ ತೊಡಗಿಸಿ ಗೋಪಾಲನತ್ತ ಬಂದ. ಗೋಪಾಲ, ಶಂಕರ ಹೇಳಿದ್ದಷ್ಟು ಹಣವನ್ನು ಕೊಟ್ಟು ಗುಜಿರಿಯನ್ನು ಕೊಂಡ. ಬಳಿಕ ತಾನು ಹೇಳಿದ ಜಾಗದ ವಿಷಯವಾಗಿ ಅವನೇನಾದರೂ ಮಾತಾಡುತ್ತಾನೋ ಎಂದು ಕಾದ. ಆದರೆ ಶಂಕರ ಬೇಕೆಂದೇ ಆ ವಿಷಯವನ್ನು ಮರೆತಂತೆ ನಟಿಸಿದ. ಆದ್ದರಿಂದ ಗೋಪಾಲನೇ ಮಾತೆತ್ತಿದ. ‘ಶಂಕರಣ್ಣ, ನಿನ್ನೆ ನೀವು ನನಗೊಂದು ಜಾಗ ತೋರಿಸುತ್ತೇನೆ ಅಂದಿದ್ದಿರಿ ನೆನಪುಂಟಾ…?’ ಎಂದ ವಿನಯದಿಂದ. ‘ಓಹೋ, ಹೌದಲ್ಲವಾ ಮಾರಾಯ. ನೀನು ನಿನ್ನೆ ಆ ಬಗ್ಗೆ ಮಾತಾಡಿ ಹೋಗಿದ್ದಿ. ಆದರೆ ಈ ನನ್ನ ಸಾವಿರ ವ್ಯವಹಾರ ತಾಪತ್ರಯವಿದೆಯಲ್ಲ ಅದೆಲ್ಲವನ್ನೂ ಮರೆಸಿ ಬಿಡುತ್ತದೆ ನೋಡು!’ ಎಂದ ಶಂಕರ ಗತ್ತಿನಿಂದ. ‘ಪರ್ವಾಗಿಲ್ಲ ಶಂಕರಣ್ಣ, ನಿಮ್ಮ ವ್ಯವಹಾರ ನಮ್ಮ ಹಾಗೆ ಸಣ್ಣದಾ…!’ ಎಂದು ಗೋಪಾಲನೂ ಅವನ ಹುಸಿ ಮರೆವನ್ನು ಸಮರ್ಥಿಸಿದ. ‘ಹ್ಞೂಂ ಹೌದು. ಅದಿರಲಿ, ನಿನ್ನೆ ನಾನು ಜಾಗದ ವಿಷಯ ಹೇಳಿದ್ದೆನಲ್ಲ ಅದು ಇಲ್ಲೇ ಬುಕ್ಕಿಗುಡ್ಡೆಯಲ್ಲಿದೆ. ಕೆಲವು ವರ್ಷಗಳ ಹಿಂದೆ ಅಲ್ಲೊಂದು ದೊಡ್ಡ ಮದಗದ ಪಕ್ಕದ ಗುಡ್ಡೆಯೊಂದನ್ನು ಪರ್ಚೆಸ್ ಮಾಡಿ ಐದಾರು ಸೆಂಟ್ಸ್ಗಳ ಲೇಔಟ್ ಮಾಡಿಸಿದ್ದೆ. ಅದರ ಒಂದು ಕೊನೆಯಲ್ಲಿ ನಾಲ್ಕು ಸೆಂಟ್ಸಿನಷ್ಟಗಲದ ಸೈಟೊಂದು ಉಳಿದುಬಿಟ್ಟದೆ ನೋಡು. ಒಳ್ಳೆಯ ಜಾಗ ಮಾರಾಯ ಅದು. ಆ ವಠಾರಕ್ಕೆ ‘ಭಾಗೀವನ’ ಅಂತ ನನ್ನ ಅಮ್ಮನ ಹೆಸರಿಟ್ಟಿದ್ದೇನೆ. ಅದರ ಪಕ್ಕದಲ್ಲಿ ಒಂದು ಚಂದದ ಹಾಡಿಯೂ ಇದೆ. ಯಾರಾದರೂ ನಿನ್ನಂಥ ಬಡವರಿಗೋ ಅಥವಾ ನನ್ನ ಕೂಲಿಯಾಳುಗಳಿಗೋ ಆದಷ್ಟು ಕಡಿಮೆ ಬೆಲೆಗೆ ಕೊಟ್ಟರಾಯ್ತೆಂದುಕೊಂಡಿದ್ದೆ. ನೀನು ಕೇಳಿದ್ದು ಒಳ್ಳೆಯದಾಯ್ತು. ಆ ಮದಗವೂ ವರ್ಷವಿಡೀ ತುಂಬಿರುತ್ತದೆ. ಹಾಗಾಗಿ ಬರೇ ಎಂಟು, ಹತ್ತು ಅಡಿಯಷ್ಟು ಆಳದ ಬಾವಿ ತೋಡಿದರೂ ಬೊಂಡದಂಥ ನೀರು ಸಿಗುತ್ತದೆ. ಈಗ ಅಲ್ಲಿ ಸೆಂಟ್ಸ್ಗೆ ಮೂರು ಲಕ್ಷ ನಡಿತಾ ಇದೆ!’ ಎಂದ ಶಂಕರ ಎತ್ತಲೋ ನೋಡುತ್ತ. ಶಂಕರ, ‘ಜಾಗ ಇದೆ ಮಾರಾಯಾ!’ ಎಂದಾಕ್ಷಣ ಗೋಪಾಲನಿಗೆ ಕುಣಿದಾಡಿ ಬಿಡುವಷ್ಟು ಸಂತೋಷವಾಯಿತು. ಆದರೆ ಅವನ ಬೆಲೆ ಕೇಳಿದಾಕ್ಷಣ ಎದೆಯೊಮ್ಮೆ ಧಸಕ್ ಎಂದಿತು. ಗೋಪಾಲನ ಮುಖ ಒಮ್ಮೆಲೇ ಕಳೆಗುಂದಿದ್ದನ್ನು ಓರೆಗಣ್ಣಿನಿಂದ ಗ್ರಹಿಸಿದ ಶಂಕರ, ‘ಅರೆರೇ, ಬೆಲೆ ಕೇಳಿ ಹೆದರಿ ಬಿಟ್ಟಿಯಾ ಮಾರಾಯಾ…? ಅಲ್ಲಿ ಸೆಂಟ್ಸಿಗೆ ಅದೆಷ್ಟು ಲಕ್ಷ ನಡೀತಾ ಇದ್ದರೂ ನೀನು ಅಷ್ಟೆಲ್ಲ ಕೊಡಬೇಕಾಗಿಲ್ಲವನಾ…!’ ಎಂದು ನಗುತ್ತ ಸಮಾಧಾನಿಸಿದ. ಆಗ ಗೋಪಾಲ ಮರಳಿ ಯಥಾಸ್ಥಿತಿಗೆ ಬಂದ. ‘ಹೌದಾ ಶಂಕರಣ್ಣ. ಹಾಗಾದರೆ ಸರಿ. ನಿಮ್ಮನ್ನು ನನ್ನ ಪಾಲಿನ ದೇವರು ಅಂತಲೇ ಭಾವಿಸಿದ್ದೇನೆ. ನನ್ನ ಕುಟುಂಬಕ್ಕೊಂದು ಸಣ್ಣ ಗೂಡು ಕಟ್ಟಲು ನೀವು ಜಾಗ ತೋರಿಸಿದ್ದು ಅಮೃತ ಕುಡಿದಷ್ಟು ನೆಮ್ಮದಿಯಾಯ್ತು. ಹಾಗೆಯೇ ಒಂದು ಸರಿಯಾದ ರೇಟನ್ನೂ ಹೇಳಿಬಿಡಿ. ಎಷ್ಟು ಕೊಡಬೇಕು ನಾನು…?’ ‘ನೋಡು ಗೋಪಾಲ, ನೀನಾಗಿರುವುದರಿಂದ ಸೆಂಟ್ಸಿಗೆ ಬರೇ ಒಂದು ಲಕ್ಷ ಕೊಟ್ಟರೆ ಸಾಕು. ನಾಲ್ಕು ಸೆಂಟ್ಸಿಗೆ ನಾಲ್ಕು ಲಕ್ಷ ಅಷ್ಟೇ! ಯಾವಾಗ ದುಡ್ಡು ರೆಡಿ ಮಾಡುತ್ತೀಯೋ ಆವಾಗ ನಿನ್ನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಡುತ್ತೇನೆ’ ಎಂದು ಶಂಕರ ಸಲೀಸಾಗಿ ಹೇಳಿಬಿಟ್ಟ. ಆದರೆ ಗೋಪಾಲ ಮತ್ತೆ ಆತಂಕಕ್ಕೆ ಬಿದ್ದ. ಹಾಗಾಗಿ ತನ್ನ ಕಷ್ಟಕಾರ್ಪಣ್ಯಗಳನ್ನೂ ಮತ್ತು ಮುತ್ತಯ್ಯನ ಕಿರಿಕಿರಿಯನ್ನೂ ಬಗೆಬಗೆಯಿಂದ ಶಂಕರನಿಗೆ ವಿವರಿಸಿದ. ಆದ್ದರಿಂದ ಶಂಕರ ಕರುಣೆ ಉಕ್ಕಿದವನಂತೆ ನಟಿಸುತ್ತ ಸೆಂಟ್ಸಿಗೆ ಮತ್ತೂ ಹತ್ತು ಸಾವಿರ ರೂಪಾಯಿ ಕಡಿಮೆ ಮಾಡಿದ. ಅದರಿಂದ ಗೆಲುವಾದ ಗೋಪಾಲ, ಒಂದು ವಾರದೊಳಗೆ ಹಣ ಹೊಂದಿಸಿಕೊಂಡು ಬರುವುದಾಗಿ ಅವನಿಗೆ ಮಾತುಕೊಟ್ಟು ಗುಜರಿಯನ್ನು ರಿಕ್ಷಾ ಟೆಂಪೊವೊಂದಲ್ಲಿ ತುಂಬಿಸಿಕೊಂಡು ಹಿಂದಿರುಗಿದ. ಈಶ್ವರಪುರದ ಪೇಟೆಯ ದೊಡ್ಡ ಅಂಗಡಿಯೊಂದಕ್ಕೆ ಗುಜರಿಯನ್ನು ಮಾರಿ ಒಂದಷ್ಟು ಲಾಭಾಂಶ ಗಳಿಸಿ, ಆತುರದಿಂದ ಮನೆಗೆ ಧಾವಿಸಿದ. ಆಹೊತ್ತಿನಲ್ಲಿ ರಾಧಾ ತೋಟದಲ್ಲಿ ಮಡಲು, ತಪ್ಪರಿಕೆ ಹೆಕ್ಕಿ ರಾಶಿ ಹಾಕುತ್ತಾ ಇದ್ದವಳು ಗಂಡನನ್ನು ಕಂಡು, ಏನೀವತ್ತು ಇಷ್ಟು ಬೇಗ ಬಂದುಬಿಟ್ಟರು…? ಎಂದು ಯೋಚಿಸಿದಳು. ಅಷ್ಟರಲ್ಲಿ ಗೋಪಾಲ ಅಂಗಳದಲ್ಲಿ ಸೈಕಲ್ ನಿಲ್ಲಿಸಿ, ಹೆಂಡತಿ ತೋಟದಲ್ಲಿ ದುಡಿಯುತ್ತಿರುವುದನ್ನು ಕಂಡ. ಮರುಕ್ಷಣ ಅವನ ಮನಸ್ಸು ಹಿಂಡಿತು. ಛೇ! ಇವಳೊಬ್ಬಳು ಪಾಪದ ಹೆಣ್ಣು, ದಿನನಿತ್ಯ ಮನೆಯಲ್ಲೂ ಹೊರಗೂ ಎಷ್ಟೊಂದು ದುಡಿಯುತ್ತಾಳೆ! ಆದರೆ ನನ್ನನ್ನು ಮದುವೆಯಾಗಿ ಬಂದ ನಂತರ ಒಂದು ದಿನವೂ ಇವಳನ್ನು ಸುಖವಾಗಿಡಲು ನನ್ನಿಂದ ಸಾಧ್ಯವಾಗಿಲ್ಲ. ಇನ್ನು ಮುಂದೆ ಸ್ವಂತ ಮನೆಯಾದ ಮೇಲಾದರೂ ಚೆನ್ನಾಗಿ ನೋಡಿಕೊಳ್ಳಬೇಕು!-ಎಂದು ಯೋಚಿಸಿ ಸಮಾಧಾನ ತಂದುಕೊಂಡ. ‘ಹೇ, ರಾಧಾ ಕೆಲಸ ಮಾಡಿದ್ದು ಸಾಕು ಮಾರಾಯ್ತೀ… ಸ್ವಲ್ಪ ಇಲ್ಲಿ ಬಾ!’ ಎಂದು ಅಕ್ಕರೆಯಿಂದ ಕರೆದ. ಅಷ್ಟು ಕೇಳಿದ ಅವಳು, ‘ಹ್ಞೂಂ ಬಂದೆ ಮಾರಾಯ್ರೇ…!’ ಎಂದುತ್ತರಿಸಿ ಸೆರಗಿನಿಂದ ಬೆವರೊಸಿಕೊಳ್ಳುತ್ತ ಬಂದಳು. ಗೋಪಾಲ ಕೈಕಾಲು ಮುಖಕ್ಕೆ ನೀರೆರೆದುಕೊಂಡು ಒಳಗೆ ಹೋಗಿ ಗೋಡೆಗೊರಗಿ ಕುಳಿತ. ರಾಧಾಳೂ ಬಂದು ಗಂಡನೆದುರು ಕುಳಿತುಕೊಂಡಳು. ‘ನಿನಗೊಂದು ಸಂತೋಷದ ಸುದ್ದಿ ಉಂಟು ಮಾರಾಯ್ತೀ…!’ ‘ಹೌದಾ, ಎಂಥದದು…?’ ‘ಕೊನೆಗೂ ನಿನ್ನ ಹಠಕ್ಕೂ, ದಿನಾ ನಾವು ದೇವರೊಡನೆ ಪ್ರಾರ್ಥಿಸಿಕೊಂಡದ್ದಕ್ಕೂ ಪ್ರತಿಫಲವೆಂಬಂತೆ ಜಾಗವೊಂದು ಸಿಕ್ಕಿದ ಹಾಗಾಯ್ತು ಮಾರಾಯ್ತಿ!’ ಎಂದ ಉತ್ಸಾಹದಿಂದ. ಅಷ್ಟು ಕೇಳಿದ ರಾಧಾಳಿಗೆ ನಿಂತ ನಿಲುವಿನಲ್ಲೇ ಕೊಪ್ಪರಿಗೆ ಸಿಕ್ಕಷ್ಟು ಸಂತೋಷವಾಯಿತು. ‘ಹೌದಾ ಮಾರಾಯ್ರೇ…ಯಾವ ಊರಲ್ಲಿ? ನಾವದನ್ನು ನೋಡಲು ಹೋಗುವುದು ಯಾವಾಗ…?’ ಎಂದಳು ಆತುರದಿಂದ. ‘ಸದ್ಯದಲ್ಲೇ ಹೋಗುವ. ಆದರೆ ಅದಕ್ಕಿಂತ ಮೊದಲು ಮೂರು ಲಕ್ಷದ ಅರವತ್ತು ಸಾವಿರ ರೂಪಾಯಿ ಆಗಬೇಕು. ಎಲ್ಲಿಂದ ಹೊಂದಿಸುವುದು ಮಾರಾಯ್ತೀ?’ ಎಂದ ದುಗುಡದಿಂದ. ‘ಅಷ್ಟೇ ತಾನೇ ಆಗುತ್ತದೆ ಬಿಡಿ!’ ಎಂದು ರಾಧಾ ನಿಶ್ಚಿಂತೆಯಿಂದ ಅಂದಾಗ ಗೋಪಾಲನಿಗೆ ಅಚ್ಚರಿಯಾಯಿತು. ‘ಆಗುತ್ತದೆ ಎಂದರೆ ಏನರ್ಥ…! ನೀನು ಕೂಡಿಟ್ಟಿದ್ದೀಯಾ…?’ ಎಂದ ಒರಟಾಗಿ. ‘ಅಯ್ಯೋ ಅಷ್ಟೊಂದು ಹಣ ಕೂಡಿಡಲು ನಮ್ಮಿಂದ ಸಾಧ್ಯವಿದೆಯಾ ಮಾರಾಯ್ರೇ…?’ ಎಂದಳವಳು ನಗುತ್ತ. ಅವಳ ನಗು ಕಂಡ ಗೋಪಾಲನಿಗೆ ತನ್ನ ಆತಂಕವನ್ನವಳು ಗೇಲಿ ಮಾಡುತ್ತಿದ್ದಾಳೆಂದೆನ್ನಿಸಿ ರೇಗಿಬಿಟ್ಟಿತು. ‘ಹಾಗಾದರೆ ಯಾರು ನಿನ್ನಪ್ಪ ಕೊಡುತ್ತಾರಾ…?’ ಎಂದ ಉಡಾಫೆಯಿಂದ. ‘ಅರೆರೇ, ಅಪ್ಪ ಯಾಕೆ ಕೊಡಬೇಕು ಮಾರಾಯ್ರೇ? ಜಾಗವನ್ನು ನೀವು ಅವರ ಹೆಸರಿಗೆ ಬರಿತೀರಾ? ನಮಗೆ ಬೇಕಿದ್ದರೆ ನಾವೇ ಮಾಡಿಕೊಳ್ಳಬೇಕಪ್ಪಾ!’ ಎಂದು ಮತ್ತೂ ತುಂಟ ನಗುತ್ತ ಬೀರುತ್ತ ಅಂದವಳು, ‘ಇಷ್ಟಕ್ಕೆಲ್ಲಾ ಕೋಪಿಸಿಕೊಂಡರೆ ಹೇಗೆ ಮಾರಾಯ್ರೇ? ಮೊನ್ನೆ ತಾನೇ ನಾವಿಬ್ಬರು ಅದರ ಬಗ್ಗೆ ಮಾತಾಡಿ ನಿರ್ಧರಿಸಿದ್ದನ್ನು ಇಷ್ಟು ಬೇಗ ಮರೆತು ಬಿಟ್ರಾ…?’ ಎಂದು ಹುಸಿ ಮುನಿಸಿನಿಂದ ಕೇಳಿದಳು. ಆಗ ಗೋಪಾಲನಿಗೆ ಅಂದಿನ ಮಾತುಕತೆಯೆಲ್ಲ ನೆನಪಾಯಿತು. ‘ಓಹೋ… ಹೌದಲ್ಲವ ಮಾರಾಯ್ತೀ!’ ಎಂದು ಪೆಚ್ಚಾಗಿ ನಕ್ಕ. ಹೀಗೆ ಸಂಕಷ್ಟವನ್ನೂ ಪ್ರೀತಿ ಮತ್ತು ಅನ್ಯೋನ್ಯತೆಯಿಂದ ಎದುರಿಸುತ್ತ ಬಾಳುತ್ತಿದ್ದ ಗೋಪಾಲ ದಂಪತಿ ಶಂಕರನ ಜಾಗ ಕೊಳ್ಳುವ ವಿಚಾರದಲ್ಲಿ ಮರುದಿನವೇ ಕಾರ್ಯಪ್ರವೃತ್ತರಾದರು. ಗೋಪಾಲ, ತನ್ನ ಮದುವೆಯಲ್ಲಿ ಹೆಣ್ಣಿನ ಕಡೆಯವರು ಉಡುಗೊರೆಯಾಗಿ ನೀಡಿದ್ದ ಚಿನ್ನ ಚೈನನ್ನೂ ಮತ್ತು ತಾನು ಚಿನ್ನದಂಗಡಿಯ ‘ಲಕ್ಕಿ ಡ್ರಾ’ಕ್ಕೆ ತಿಂಗಳು ತಿಂಗಳು ಕಟ್ಟುತ್ತ ಹೆಂಡತಿಗೂ ಮಗಳಿಗೂ ಮಾಡಿಸಿ ಹಾಕಿದ್ದ ಆಭರಣಗಳನ್ನೂ ಕೂಡಿಸಿ ಅದರ ಮೊತ್ತವನ್ನು ಲೆಕ್ಕ ಹಾಕಿದ. ಆದರೂ ಸಾಲುವುದಿಲ್ಲ ಎಂದೆನ್ನಿಸಿತು. ಕೊನೆಯದಾಗಿ ಮಗಳ ಕಿವಿಯಲ್ಲಿ ಉಳಿದಿದ್ದ ಸಣ್ಣ ಓಲೆಗಳನ್ನೂ ಬಿಚ್ಚಿಕೊಂಡು ಹೋಗಿ ಮಾರಿ ಒಂದಷ್ಟು ಹಣ ಹೊಂದಿಸಿದ. ಇತ್ತ ರಾಧಾ ಒಂದೂವರೆ ಲಕ್ಷ ರೂಪಾಯಿಯನ್ನು ತನ್ನ ‘ಸ್ತ್ರೀಶಕ್ತಿ’ ಸಂಘದಿಂದ ಸಾಲ ಪಡೆದು ಗಂಡನ ಕೈಯಲ್ಲಿಟ್ಟಳು. ಆದ್ದರಿಂದ ಗೋಪಾಲ, ಇನ್ನು ಹೆಂಡತಿಯೊಂದಿಗೆ ಜಾಗ ನೋಡಲು ಹೋಗಿ ಅವಳಿಗೆ ಹಿಡಿಸಿದ ಮೇಲೆ ಅದನ್ನು ಕೊಳ್ಳುವುದೆಂದು ನಿರ್ಧರಿಸಿದ. ಆವತ್ತು ಮಕ್ಕಳು ಶಾಲೆಗೆ ಹೋದ ಕೂಡಲೇ ಶಂಕರನಿಂದ ಅನುಮತಿ ಪಡೆದು ರಾಧಾಳನ್ನು ಸೈಕಲ್ಲಿನಲ್ಲಿ ಕುಳ್ಳಿರಿಸಿಕೊಂಡು ಜಾಗ ನೋಡಲು ಬುಕ್ಕಿಗುಡ್ಡೆಯತ್ತ ಹೊರಟ. ಅಂಬಾಗಿಲಿಗೆ ಬಂದು ವೆಂಕಟ್ರಾಯರ ಸಣ್ಣ ದಿನಸಿ ಅಂಗಡಿಯಲ್ಲಿ ರಾಧಾಳಿಗೆ ಕೋಲ್ಡ್ಡ್ರಿಂಕ್ಸ್ ಕುಡಿಸಲು ಸೈಕಲ್ ನಿಲ್ಲಿಸಿದ. ಗೋಪಾಲ ದಂಪತಿ ಅಪರೂಪಕ್ಕೆ ಒಟ್ಟಿಗೆ ಸವಾರಿ ಹೊರಟಿರುವುದನ್ನು ಕಂಡ ತಮಾಷೆ ಸ್ವಭಾವದ ವೆಂಕಟ್ರಾಯರು, ‘ಓಹೋ ಏನು ಗೋಪಾಲ ಅರ್ಧಾಂಗಿಯ ಸಮೇತ ಚಕ್ರದ ಕುದುರೆ ಹತ್ತಿದ್ದಿಯಾ! ಎಲ್ಲಿಗೆ ಪ್ರಯಾಣ…?’ ಎಂದು ಹಾಸ್ಯ ಮಾಡಿ ನಕ್ಕರು. ಅವರ ಮಾತಿಗೆ ರಾಧಾ ನಾಚಿಕೊಂಡಳು. ಗೋಪಾಲ ನಗುತ್ತ, ‘ಒಂದೊಳ್ಳೆಯ ಕೆಲಸಕ್ಕೆ ಹೊರಟಿದ್ದೇವೆ ವೆಂಕಟ್ರಾಯರೇ, ನಿಮ್ಮ ಆಶೀರ್ವಾದ ಬೇಕು!’ ಎಂದ ನಮ್ರನಾಗಿ. ‘ಓಹೋ, ಹೌದಾ…! ಹಾಗಾದರೆ ಎಲ್ಲಿಗೆ ಅಂಥ ಕೇಳಿದ್ದು ತಾಪ್ಪಾಯ್ತು ನೋಡು. ಆಗಲಿ, ನೀವು ಹೊರಟಿರುವ ಕಾರ್ಯವು ಹದವಾದ ಹಣ್ಣಾಗಲಿ ಅಂತ ಹರಸುತ್ತೇನೆ. ಹೋಗಿಬನ್ನಿ!’ ಎಂದು ಕೈಯೆತ್ತಿ ಹಾರೈಸಿದರು. ‘ಅಷ್ಟಾದರೆ ಸಾಕು ವೆಂಕಟ್ರಾಯರೇ…!’ ಎಂದು ಕೈಮುಗಿದ ಗೋಪಾಲ, ‘ಎರಡು ಕೋಲ್ಡ್ ಕೊಡಿ’ ಎಂದ ನಗುತ್ತ. ಅವರು ಯಾವುದೋ ಎರಡು ಬಾಟಲಿಗಳನ್ನು ಫ್ರೀಡ್ಜ್ನಿಂದ ತೆಗೆದುಕೊಟ್ಟರು. ರಾಧಾ, ವೆಂಕಟ್ರಾಯರಿಗೆ ಬೆನ್ನುಮಾಡಿ ನಿಂತುಕೊಂಡು ಪಾನೀಯ ಕುಡಿದು ಬಾಟಲಿಯನ್ನು ಗಂಡನ ಕೈಗಿಟ್ಟಳು. ಗೋಪಾಲನೂ ಕುಡಿದು ಬಾಟಲಿಗಳನ್ನು ಮೇಜಿನ ಮೇಲಿಟ್ಟು ದುಡ್ಡುಕೊಟ್ಟು ವೆಂಕಟ್ರಾಯರಿಗೆ ನಮಸ್ಕರಿಸಿ ಮತ್ತೆ ಹೆಂಡತಿಯನ್ನು ಕೂರಿಸಿಕೊಂಡು ಹೊರಟವನು ಕಾಲು ಗಂಟೆಯಲ್ಲಿ ಬುಕ್ಕಿಗುಡ್ಡೆಗೆ ಬಂದು ತಲುಪಿದ. ಸುಮಾರು ದೂರದಿಂದಲೇ ಭಾಗೀವನ ಬಡಾವಣೆಯು ಎದ್ದು ಕಾಣುತ್ತಿತ್ತು. ಆ ವಠಾರದ ತುಂಬಾ ವಿವಿಧ ಮಾದರಿಯ ತಾರಸಿ ಸೌಧಗಳೂ, ಎರಡಂತಸ್ತಿನ ಸುಂದರ ಬಂಗಲೆಗಳೂ ತಲೆಯೆತ್ತಿ ನಿಂತಿದ್ದವು. ರಾಧಾ ಗೋಪಾಲರು, ಆ ವಿಶಾಲ ಪ್ರದೇಶದಲ್ಲಿ ತಮ್ಮದೆಂಬ ಜಾಗವೊಂದು ಎಲ್ಲಿದೆ? ಎಂದು ಹುಡುಕುತ್ತ ಸಮೀಪ ಹೋದರು. ಶಂಕರ ಹೇಳಿದಂತೆ ಬಡಾವಣೆಯ ಪೂರ್ವದಿಕ್ಕಿನ ಮೂಲೆಯೊಂದರಲ್ಲಿ ಸಣ್ಣ ಜಾಗವೊಂದು ಖಾಲಿಯಿತ್ತು. ಇಬ್ಬರೂ ಅತ್ತ ಹೋಗಿ ಜಾಗವನ್ನೂ ಅದರ ಸುತ್ತಲಿನ ಪರಿಸರವನ್ನೂ ತವಕದಿಂದ ಪರೀಕ್ಷಿಸಿದರು. ರಾಧಾಳಿಗೆ ಜಾಗವು ತುಂಬಾ ಹಿಡಿಸಿತು. ಇಷ್ಟೊಂದು ಶ್ರೀಮಂತ ವಠಾರದಲ್ಲಿ ಯಾರ ತಂಟೆ ತಕರಾರೂ ಇಲ್ಲದ ಮತ್ತು ಸಮತಟ್ಟಾದ ಜಮೀನೊಂದು ದೊರಕಿದ್ದು ತಮ್ಮ ಅದೃಷ್ಟವೇ ಸರಿ! ಎಂದುಕೊಂಡ ಅವಳು ಖುಷಿಪಟ್ಟಳು. ಸೆಂಟ್ಸಿಗೆ ಕಡಿಮೆಯೆಂದರೂ ಎರಡು ಲಕ್ಷ ಬೆಲೆ ಬಾಳುವ ಇಂಥ ಸೈಟನ್ನು ಅಷ್ಟು ಕಡಿಮೆ ಬೆಲೆಗೆ ನೀಡಿದ ಶಂಕರನಲ್ಲಿ ಬಡ ರಾಧಾ ಗೋಪಾಲರಿಗೆ ನಿರಾಕಾರ ಬ್ರಹ್ಮನೇ ಕಾಣಿಸಿದ್ದ! ಗಂಡಹೆಂಡತಿ ಗೆಲುವಿನಿಂದ ಮನೆಗೆ ಹಿಂದಿರುಗಿದರು. ಜಾಗವನ್ನು ಕೊಂಡರಾಯಿತೇ? ಅದರಲ್ಲಿ ವಾಸಿಸಲು ಸಣ್ಣದೊಂದು ಗುಡಿಸಲು ಮತ್ತು ನೀರಿಗೊಂದು ಬಾವಿಯೂ ಬೇಡವೇ? ಅಷ್ಟನ್ನು ಮಾಡಲು ಇನ್ನೊಂದಷ್ಟು ರೂಪಾಯಿಗಳೂ ಬೇಕು! ಆದರೆ ಅದನ್ನು ಹೇಗೆ, ಎಲ್ಲಿಂದ ಹೊಂದಿಸುವುದಪ್ಪಾ…?’ ಎಂಬ ಮತ್ತೊಂದು ಚಿಂತೆಯಲ್ಲಿ ಮುಳುಗಿದ್ದ ಗೋಪಾಲನ ಕೈಗೆ ಅದೇ ಹೊತ್ತಲ್ಲಿ ರಾಧಾ ಕಾಗದದ ಸಣ್ಣದೊಂದು ಪೊಟ್ಟಣವನ್ನು ತುರುಕಿಸಿದಳು. ಅವನು ಅಚ್ಚರಿಯಿಂದ ಅವಳನ್ನು ದಿಟ್ಟಿಸುತ್ತ ಪೊಟ್ಟಣವನ್ನು ಬಿಚ್ಚಿದ. ಆದರೆ ಆ ವಸ್ತುವನ್ನು ಕಂಡವನ ಮನಸ್ಸು ನೋವಿನಿಂದ ಹಿಂಡಿತು. ಮದುವೆಯ ನಿಯಮದಂತೆ ತಾನು ಅಭಿಮಾನದಿಂದ ಮಾಡಿಸಿ ತನ್ನವಳ ಕೊರಳಿಗೆ ಕಟ್ಟಿದ್ದ ಎರಡು ಪವನಿನ ಕರಿಮಣಿ ಸರವಾಗಿತ್ತದು. ಹೆಂಡತಿಯನ್ನು ವಿಷಾದದಿಂದ ನೋಡಿದವನು, ‘ಏನಿದು ರಾಧಾ…?’ ಎಂದ ಆತಂಕದಿಂದ. ‘ಕಾಣುವುದಿಲ್ಲವಾ? ನೀವು ಕಟ್ಟಿದ ಕರಿಮಣಿ ಮಾರಾಯ್ರೇ! ಕೊಂಡು ಹೋಗಿ ಅಡವಿಟ್ಟು ಅಥವಾ ಮಾರಿ ಬಂದ ಹಣದಿಂದ ಕೆಲಸ ಆರಂಭಿಸಿ. ಮನೆಯೊಂದು ಆದ ಮೇಲೆ ಕರಗಿ ಹೋದ ಚಿನ್ನಾಭರಣವನ್ನೆಲ್ಲ ಮತ್ತೆ ಮಾಡಿಸಿಕೊಂಡರಾಯ್ತು!’ ಎಂದು ಹಗುರವಾಗಿ ಅಂದಳು. ಆದರೂ ಅದನ್ನು ತೆಗೆದುಕೊಳ್ಳಲು ಗೋಪಾಲನ ಮನಸ್ಸು ಒಪ್ಪಲಿಲ್ಲ. ಆದರೆ ಅದನ್ನು ಬಿಟ್ಟು ಅವನಿಗೆ ಬೇರೆ ದಾರಿಯೂ ಕಾಣಲಿಲ್ಲ. ಆದ್ದರಿಂದ ಮರುಮಾತಾಡದೆ ತೆಗೆದುಕೊಂಡು ಹೋಗಿ ಅಡವಿಟ್ಟು ಹಣಪಡೆದ. ದುಡ್ಡು
ಅಂಕಣ ಸಂಗಾತಿ, ಕೇರಿ ಕೊಪ್ಪಗಳ ನಡುವೆ
ಬಸ್ಸು ಅಂಕೋಲೆಯ ಬಸ್ ನಿಲ್ದಾಣದಲ್ಲಿ ಬಂದು ನಿಲ್ಲುವ ಹೊತ್ತಿಗೆ ಸರಿಯಾಗಿ ಸುತ್ತಲಿನ ಬೇಲೇಕೇರಿ, ಭಾವಿಕೇರಿ, ಕಣಗಿಲ ಮುಂತಾದ ಊರುಗಳಿಂದಲೂ ಬಸ್ಸುಗಳು ಬಂದು ನಿಲ್ಲುತ್ತಿದ್ದವು. ಎಲ್ಲ ಬಸ್ಸುಗಳಲ್ಲಿಯೂ ಅಷ್ಟಿಷ್ಟು ಕಾಲೇಜು ವಿದ್ಯಾರ್ಥಿಗಳು ಇರುತ್ತಿದ್ದರು. ಎಲ್ಲರೂ ಕೂಡಿಯೇ ಕಾಲೇಜಿನವರೆಗೆ ಕಾಲ್ನಡಿಗೆಯಲ್ಲಿ ನಡೆಯುವಾಗ ಇಂದಿನ ‘ದಿನಕರ ದೇಸಾಯಿ ರಸ್ತೆ’ ಅಕ್ಷರಶಃ ಜಾತ್ರೆ ಹೊರಟಂತೆ ಕಾಣುತ್ತಿತ್ತು

