ಅನುವಾದಿತ ಕಥೆ ಕಾಡಿನಲ್ಲಿ ಕಾಡಿದ ಭೂತ ಇಂಗ್ಲೀಷ್ ಮೂಲ: ಆರ್.ಕೆ.ನಾರಾಯಣ್ ಬಹಳ ವರ್ಷಗಳ ಹಿಂದೆ ನಡೆದ ಘಟನೆ. ನೀವು ನಂಬುತ್ತೀರೋ ಇಲ್ಲವೋ ನನಗೆ ಗೊತ್ತಿಲ್ಲ ಆದರೆ ಘಟನೆ ನಡೆದುದು ಮಾತ್ರ ಸತ್ಯ. ನಾನು ಆಗ ಕಾರಿನಲ್ಲಿ ಹೋಗುತ್ತಿದ್ದೆ. ಆಗ ನನ್ನ ಕಾರಿನ ಚಾಲಕ ದಾಸಪ್ಪ ತುಂಬ ಸಭ್ಯವಾದ ವ್ಯಕ್ತಿ. ಆದರೆ ಆ ದಿನ ಅವನು ಯಾಕೆ ಹಾಗೆ ವರ್ತಿಸಿದನೋ ಗೊತ್ತಿಲ್ಲ. ಅವನು ತುಂಬಾ ಕುಡಿದಿದ್ದಿರಬಹುದು. ಏನೇ ಆಗಲಿ, ನಿಮ್ಮ ಕುತೂಹಲಕ್ಕಾಗಿ ಈ ಕಥೆಯನ್ನು ಹೇಳುತ್ತೇನೆ ಕೇಳಿ. ಆ ದಿನ ನಾನು ಕುಂಬಳೂರಿಗೆ ಹೋಗಿ ಕೆಲಸವನ್ನು ಮುಗಿಸಿಕೊಂಡು ಬರಬೇಕಾಗಿತ್ತು. ಅದಕ್ಕಾಗಿ ಒಂದು ಕಾರನ್ನು ಬಾಡಿಗೆಗೆ ಹಿಡಿದು ಮಾಲ್ಗುಡಿಯಿಂದ ಸುಮಾರು ಐವತ್ತು ಮೈಲಿ ದೂರದಲ್ಲಿರುವ ಕುಂಬಳೂರಿಗೆ ಹೋಗಿ, ಅಲ್ಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದೆ. ನಾನು ಹೊರಡುವಾಗ ಸುಮಾರು 9:00 ಗಂಟೆ ರಾತ್ರಿ ಆಗಿತ್ತು. ನಾನು ಬೇಡವೆಂದರೂ ಕಾರಿನ ಚಾಲಕ ಕಾರನ್ನು ಸ್ವಲ್ಪ ವೇಗವಾಗಿಯೇ ನಡೆಸುತ್ತಿದ್ದ. ನನ್ನ ಕಾರಿನ ಚಾಲಕ ದಾಸಪ್ಪ ಸುಮಾರು 25 ವರ್ಷದ ಯುವಕ. ಆತನು ತುಂಬಾ ನಂಬಿಕಸ್ತ ಹಾಗೂ ನನಗೆ ಪ್ರಿಯವಾದ ಚಾಲಕ. ನನಗೆ ವಾಹನದ ಅವಶ್ಯಕತೆ ಇದ್ದಾಗಲೆಲ್ಲ ನಾನು ಅವನ ಕಾರನ್ನೇ ಬಾಡಿಗೆಗೆ ತೆಗೆದುಕೊಂಡು ಹೋಗುತ್ತಿದ್ದೆ. ಅವನು ನನ್ನ ಕೆಲಸ ಕಾರ್ಯಗಳಿಗೆ ತುಂಬಾ ಚೆನ್ನಾಗಿ ಹೊಂದಿಕೊಂಡಿದ್ದ. ಕೆಲವೊಮ್ಮೆ ಗಂಟೆಗಳ ಕಾಲ ನನಗಾಗಿ ಕಾಯಬೇಕಾಗಿ ಬಂದರೂ ಸ್ವಲ್ಪವೂ ತಕರಾರು ಮಾಡದೇ ಕಾಯುತ್ತಾ ಕುಳಿತಿರುತ್ತಿದ್ದ. ಕಾರನ್ನು ಕೂಡ ತುಂಬಾ ನಿಧಾನವಾಗಿ ನಡೆಸುತ್ತ ಬಾಡಿಗೆದಾರರಿಗೆ ಯಾವ ರೀತಿಯ ಮುಜುಗರವಾಗದಂತೆ ನೋಡಿಕೊಳ್ಳುತ್ತಿದ್ದ. ಹಾಗಾಗಿ ನಾನು ಯಾವಾಗಲೂ ಅವನ ಕಾರನ್ನು ಉಪಯೋಗಿಸುತ್ತಿದ್ದೆ. ನಾವು ಆ ದಿನ ಹೊರಟು ಆ ಸ್ಥಳಕ್ಕೆ ಬಂದಾಗ ಸುಮಾರು 11 ಗಂಟೆ ರಾತ್ರಿಯಾಗಿತ್ತು. ಕರಾಳ ಕಾರ್ಗತ್ತಲು ಆವರಿಸಿದ್ದು ಪ್ರಯಾಣ ಮಾಡುವಾಗ ಏಕೋ ಒಂದು ತರದ ಭಯ ಉಂಟಾಗುತ್ತಿತ್ತು. ಸುತ್ತಮುತ್ತಲ ಪ್ರದೇಶದಗಳಲ್ಲೆಲ್ಲ ಜನರು ನಿದ್ದೆಯಲ್ಲಿ ಮುಳುಗಿಹೋಗಿದ್ದರು. ಆಕಾಶದಲ್ಲಿ ಕಾಣಿಸುವ ಅಲ್ಲೊಂದು ಇಲ್ಲೊಂದು ನಕ್ಷತ್ರಗಳ ಬೆಳಕನ್ನು ಬಿಟ್ಟು ಇನ್ನೇನು ಕಾಣಿಸುತ್ತಿರಲಿಲ್ಲ. ಹಿಂಭಾಗದ ಸೀಟಿಗೆ ಒರಗಿ ಕುಳಿತಿದ್ದ ನನಗೆ ಕಾರು ಚಲಿಸುವ ಸಪ್ಪಳವೊಂದನ್ನು ಬಿಟ್ಟು ಇನ್ನೇನು ಕೇಳಿಸುತ್ತಿರಲಿಲ್ಲ. ಹಾಗೆಯೇ ನಿದ್ದೆಯ ಮಂಪರು ಬಂದು ನನ್ನನ್ನು ಆವರಿಸಿತ್ತು. ಇದ್ದಕ್ಕಿದ್ದಂತೆ ಬಂದ ದಾಸಪ್ಪನ ಕಿರುಚಾಟದಿಂದ ನನಗೆ ತಕ್ಷಣವೇ ಎಚ್ಚರವಾಯಿತು. “ಹೇ ಮುದುಕ, ನಿನಗೇನು ತಲೆ ಕೆಟ್ಟಿದೆಯೇ? ಪ್ರಾಣ ಕಳೆದುಕೊಳ್ಳಬೇಕೆಂದು ತೀರ್ಮಾನಿಸಿದ್ದೀಯಾ? ಸಾಯಲು ನಿನಗೆ ಬೇರೆ ಯಾವ ಸ್ಥಳವೂ ಸಿಗಲಿಲ್ಲವೇ?” ಎನ್ನುತ್ತ ಕಾರನ್ನು ಆ ದಟ್ಟವಾದ ಕಾಡಿನ ಮಧ್ಯದಲ್ಲಿ ನಿಲ್ಲಿಸಿದ ತಕ್ಷಣವೇ ಎಚ್ಚೆತ್ತ ನಾನು ಗಡಿಬಿಡಿಯಿಂದ, “ಏನಪ್ಪಾ ಸಮಾಚಾರ? ಕಾರನ್ನು ಏಕೆ ನಿಲ್ಲಿಸಿದೆ?” ಎಂದು ಕೇಳಿದೆ. “ನೋಡಿ ಸರ್, ಅಲ್ಲಿ ಆ ಮುದುಕ ನನ್ನ ಕಾರಿಗೆ ಅಡ್ಡ ಬರುತ್ತಿದ್ದಾನೆ. ಅವನಿಗೆ ಜೀವ ಹೆಚ್ಚಾಗಿದೆ ಎಂದು ಕಾಣಿಸುತ್ತದೆ. ತಾನು ಏನು ಮಾಡುತ್ತಿರುವೆ ಎಂಬ ಪ್ರಜ್ಞೆ ಇದ್ದಂತಿಲ್ಲ.” ಎನ್ನುತ್ತ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದ. ಅವನು ಹೇಳಿದ ದಿಕ್ಕಿನಲ್ಲಿ ನಾನು ಗಮನವಿಟ್ಟು ವೀಕ್ಷಿಸಿದೆ. ಆದರೆ ಅವನು ಹೇಳಿದಂತೆ ನನಗೆ ಯಾವ ವ್ಯಕ್ತಿಯೂ ಕಾಣಿಸಲಿಲ್ಲ. ಹಾಗಾಗಿ ನಾನು, “ಏನಪ್ಪಾ, ನೀನು ಯಾರ ಬಗ್ಗೆ ಹೇಳುತ್ತಿದ್ದೀಯ? ಯಾರೂ ಕಾಣಿಸುತ್ತಿಲ್ಲವಲ್ಲ? ಎಂದು ಕೇಳಿದೆ. “ನೋಡಿ ಅಲ್ಲಿ, ಅಲ್ಲಿ ಅವನು ಓಡುತ್ತಿದ್ದಾನೆ” ಎನ್ನುತ್ತ ಕಾರಿನ ಮುಂಭಾಗದ ದಿಕ್ಕಿನಲ್ಲಿ ತೋರಿಸತೊಡಗಿದೆ ಆದರೆ ಅವನು ಹೇಳಿದ ದಿಕ್ಕಿನಲ್ಲಿ ನನಗೆ ಏನೂ ಕಾಣಿಸಲಿಲ್ಲ. ಆದರೂ ನಾನು ಟಾರ್ಚನ್ನು ತೆಗೆದುಕೊಂಡು ಕಾರಿನಿಂದ ಕೆಳಗಿಳಿದು, ಅವನು ಹೇಳಿದ ದಿಕ್ಕಿನಲ್ಲಿ ಪರೀಕಿಸ್ಷಿದೆ. ಅವನು ಹೇಳಿದ ದಿಕ್ಕಿನಲ್ಲಿ ಒಂದು ದೇವಸ್ಥಾನ ಕಾಣಿಸುತ್ತಿತ್ತು. ಅದೊಂದು ಪಾಳು ಬಿದ್ದ ದೇವಸ್ಥಾನವಾಗಿದ್ದು ಗೋಡೆಗಳೆಲ್ಲ ಶಿಥಿಲಗೊಂಡಿದ್ದವು. ಅದರ ಹತ್ತಿರ ಯಾರೂ ಹೋಗುವಂತಿರಲಿಲ್ಲ. ಅದರ ಬಾಗಿಲು ನೋಡಿದರೆ ತೆಗೆದು ಎಷ್ಟೋ ದಿವಸಗಳಾದಂತೆ ಕಾಣಿಸುತ್ತಿತ್ತು. ನೂರಾರು ವರ್ಷಗಳಿಂದ ಅದರಲ್ಲಿ ಯಾರೂ ವಾಸವಾಗಿರುವ ಸಾಧ್ಯತೆ ಇದ್ದಂತೆ ಕಾಣಿಸುತ್ತಿರಲಿಲ್ಲ. ಹಾಗಾಗಿ ನಾನು ದಾಸಪ್ಪನ ಕಡೆಗೆ ತಿರುಗಿ, “ದಾಸಪ್ಪ, ಅದೊಂದು ಪಾಳು ಬಿದ್ದ ದೇವಸ್ಥಾನ. ಅದರಲ್ಲಿ ಯಾರೂ ಇದ್ದಂತೆ ಕಾಣಿಸುವುದಿಲ”್ಲ “ಇಲ್ಲ ಸರ್, ಒಬ್ಬ ಮುದುಕ ಅಲ್ಲಿಂದ ಈಗ ತಾನೇ ಬಾಗಿಲು ತೆಗೆದುಕೊಂಡು ಬಂದಿದ್ದಾನೆ. ನೋಡಿ, ನೋಡಿ, ಅಲ್ಲೇ ನಿಂತಿದ್ದಾನೆ. ಬೇಕಾದರೆ ಅವನ ಬಳಿ ದೇವಸ್ಥಾನದ ಬಾಗಿಲನ್ನು ತೆಗೆಯಲು ಹೇಳಿ ನೋಡೋಣ” ಒಂದಕ್ಕೊಂದು ಸಂಬಂಧವಿಲ್ಲದ ಅವನ ಉತ್ತರವನ್ನು ಕೇಳಿ ನನಗೆ ಬೇಸರವಾಯಿತು. “ದಾಸಪ್ಪ, ತುಂಬಾ ಹೊತ್ತಾಯಿತು, ನಡಿ ಹೋಗೋಣ” ಎಂದೆ. ನಾವಿಬ್ಬರೂ ವಿಷಯವನ್ನು ಅಲ್ಲಿಗೇ ಬಿಟ್ಟು ಕಾರನ್ನು ಹತ್ತಿ ಕುಳಿತುಕೊಂಡೆವು.. ಆತನು ತನ್ನ ಕೀಯನ್ನು ತೆಗೆದುಕೊಂಡು ಕಾರನ್ನು ಸ್ಟಾರ್ಟ್ ಮಾಡತೊಡಗಿದ. “ಸಾರ್, ಈ ವ್ಯಕ್ತಿ ನಮ್ಮ ಜೊತೆಗೆ ಕಾರಿನಲ್ಲಿ ಸ್ವಲ್ಪ ದೂರ ಬರುವನಂತೆ. ಇಲ್ಲೇ ಮುಂದಿನ ತಿರುವಿನಲ್ಲಿ ಇಳಿದುಕೊಳ್ಳುವನಂತೆ . ಅವನನ್ನು ಕರೆದುಕೊಂಡು ಹೋಗೋಣವೇ?” ಎಂದು ಕೇಳಿದ “ನೀನು ಯಾರ ಬಗ್ಗೆ ಹೇಳ್ತಿದ್ದೀಯಾ?’ ನಾನು ಆಶ್ಚರ್ಯದಿಂದ ಕೇಳಿದೆ. “ಇಲ್ಲೇ ಕುಳಿತಿದ್ದಾನಲ್ಲ ಅಜ್ಜ, ಇವನ ಬಗ್ಗೆಯೇ ನಾನು ಹೇಳುತ್ತಿರುವುದು” ಎನ್ನುತ್ತ ದಾಸಪ್ಪ ತನ್ನ ಸೀಟಿನ ಎಡಭಾಗದ ಜಾಗವನ್ನು ತೋರಿಸಿದ. “ದಾಸಪ್ಪ ನಿನಗೇನಾಗಿದೆ? ಈ ದಿನ ಏನಾದರೂ ಸ್ವಲ್ಪ ಹೆಚ್ಚಾಗಿ ಕುಡಿದಿದ್ದೀಯಾ?” “ಕ್ಷಮಿಸಿ ಸರ್, ನಾನು ಇಡೀ ಜೀವಮಾನದಲ್ಲಿ ಒಂದೇ ಒಂದು ಹನಿ ಮಾದಕ ದ್ರವ್ಯವನ್ನೂ ಸೇವಿಸಿಲ್ಲ” ಎನ್ನುತ್ತಾ ತನ್ನ ಎಡಭಾಗಕ್ಕೆ ತಿರುಗಿ, “ಅಜ್ಜ, ತಪ್ಪು ತಿಳಿದುಕೊಳ್ಳಬೇಡ, ಯಜಮಾನರು ಏಕೋ ನಿನ್ನನ್ನು ಕರೆದುಕೊಂಡು ಹೋಗುವುದು ಬೇಡ ಎಂದು ಹೇಳುತ್ತಿದ್ದಾರೆ” ಎಂದ. “ಏನು ದಾಸಪ್ಪ, ನಿನ್ನಷ್ಟಕೆ ನೀನೇ ಮಾತನಾಡಿಕೊಳ್ಳುತ್ತಿದ್ದೀಯ?” ಎಂದು ನಾನು ಆಶ್ಚರ್ಯದಿಂದ ಕೇಳಿದೆ. “ಸರ್, ನೀವು ಹೇಳುವುದು ಸರಿ ಈ ರೀತಿ, ರಾತ್ರಿ ಹೊತ್ತಿನಲ್ಲಿ ದಾರಿಹೋಕರನ್ನೆಲ್ಲ ಕಾರಿನಲ್ಲಿ ಕರೆದುಕೊಂಡು ಹೋಗುವುದು ಸರಿಯಲ್ಲ” “ದಾಸಪ್ಪ, ನಿನಗೆ ಆರೋಗ್ಯ ಸರಿ ಇಲ್ಲ ಎಂದು ಕಾಣುತ್ತಿದೆ. ಏಕೋ ಏನೇನೋ ಮಾತನಾಡುತ್ತಿದ್ದೀಯ” ಎಂದು ನಾನು ಅವರ ಮೇಲಿನ ಕರುಣೆಯಿಂದ ಕೇಳಿದೆ. “ನಿನಗೆ ಕಾರನ್ನು ಚಾಲನೆ ಮಾಡಲು ಸಾಧ್ಯವಾಗುತ್ತದೆಯೋ, ಇಲ್ಲವೋ, ಬೇಕಾದರೆ ನಾನು ಸಹಾಯ ಮಾಡುತ್ತೇನೆ” ಎಂದೆ. “ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ಸರ್, ಯಾಕೋ ನನಗೆ ಬಹಳ ಸುಸ್ತಾದಂತಿದೆ.” ಎನ್ನುತ್ತಾ ಅವನು ಹಾಗೇ ಸೀಟಿಗೆ ಒರಗಿಕೊಂಡು ಕಣ್ಣು ಮುಚ್ಚಿದ. ನಂತರ ಜೋರಾಗಿ ಅಳಲು ಪ್ರಾರಂಭಿಸಿದ. ಆಮೇಲೆ ಇದ್ದಕ್ಕಿದ್ದಂತೆ ಬೆನ್ನು ಬಗ್ಗಿಸಿ ಗೂನುಬೆನ್ನಿನವನಂತೆ ವರ್ತಿಸತೊಡಗಿದ. ತಕ್ಷಣವೇ ಕಾರಿನಿಂದ ಕೆಳಗಿಳಿದ ನಾನು ಮುಂಬಾಗಕ್ಕೆ ಹೋಗಿ ಬಾಗಿಲು ತೆಗೆದು ಅವನತ್ತ ನೋಡಿದೆ. ಅಲ್ಲಿ ದಾಸಪ್ಪನನ್ನು ಬಿಟ್ಟು ಇನ್ನಾರೂ ಕಾಣಿಸಲಿಲ್ಲ. ಆಗ ಅವನು ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದ. ತನ್ನ ಎರಡು ಕೈಗಳಿಂದ ಕಣ್ಣನ್ನು ಉಜ್ಜಿಕೊಳ್ಳುತ್ತ ಗೂನು ಬೆನ್ನಿನ ಮುದುಕನಂತೆ ವರ್ತಿಸುತ್ತಿದ್ದ. ನಾನು ಅವನ ಆರೋಗ್ಯವನ್ನು ವಿಚಾರಿಸುವ ದೃಷ್ಟಿಯಿಂದ, “ಏನಪ್ಪಾ, ಈಗ ಹೇಗಿದ್ದೀಯ ಆರೋಗ್ಯವಾಗಿದ್ದೀಯ ತಾನೇ? ಎಂದು ಕೇಳಿದೆ. “ಹ! ಹ! ಆರೋಗ್ಯ, ಈ ವಯಸಿನಲ್ಲಿ ಇನ್ನೆಂತಹ ಆರೋಗ್ಯ ಸ್ವಾಮಿ” ಎಂದು ಹೇಳುವಾಗ ಅವನ ಧ್ವನಿಯೇ ಬದಲಾದಂತೆ ಕಾಣುತ್ತಿತ್ತು. “ಏಕಪ್ಪ, ನಿನ್ನ ಧ್ವನಿಯೇ ಬದಲಾದಂತೆ ಕಾಣುತ್ತಿದೆ.” “ನನ್ನ ಧ್ವನಿ ಇದ್ದಂತೇ ಇದೆ ಸ್ವಾಮಿ, ಹೇಗೆ ತಾನೇ ಬದಲಾವಣೆಯಾಗಲು ಸಾಧ್ಯ? ಎಂಬತ್ತು ವರ್ಷವಾದ ವ್ಯಕ್ತಿಗೆ ಇದಕ್ಕಿಂತಲೂ ಉತ್ತಮವಾದ ಕಂಠ ಇರಲು ಸಾಧ್ಯವೇ” “ಅಂದರೆ ನಿನಗೆ 80 ವರ್ಷವಾಗಿದೆಯೇ?” “ಅದರಲ್ಲಿ ಯಾವ ಅನುಮಾನವೂ ಇಲ್ಲ. ನನಗಾಗಲೇ 80 ವರ್ಷ ದಾಟಿ ಹೋಗಿದೆ” “ಯಾಕೆ? ನಿಮ್ಮ ಈ ಕಾರನ್ನು ಡ್ರೈವ್ ಮಾಡಲು ಯಾರು ಚಾಲಕರು ಸಿಕ್ಕಿಲ್ಲವೇ?” “ಯಾರೂ ಸಿಗದಿದ್ದರೆ ನಾನು ದೇವಸ್ಥಾನಕ್ಕೆ ತಿರುಗಿ ಹೋಗುತ್ತೇನೆ. ಏಕೆಂದರೆ ನನಗೆ ಬಹಳ ದೂರ ನಡೆಯಲು ಸಾಧ್ಯವಾಗುವುದಿಲ್ಲ” “ನೀನು ಡ್ರೈವ್ ಮಾಡದೇ ಇದ್ದರೆ ಈ ಕಾರನ್ನು ತೆಗೆದುಕೊಂಡು ಹೋಗುವುದಾದರೂ ಹೇಗೆ? ನಾನು ಬೇರೆ ಡ್ರೈವರನ್ನು ಹುಡುಕಬೇಕು. ಅದು ಹೇಗೆ ಸಾಧ್ಯ?” “ಈ ಹೊಸ ಮಾದರಿಯ ಗಾಡಿಗಳನ್ನು ನಡೆಸುವುದು ಹೇಗೆ ಎಂಬುದು ಆ ಭಗವಂತನಿಗೇ ಗೊತ್ತು. ನನ್ನ ಇಡೀ ಜೀವಮಾನದಲ್ಲಿ ಎರಡು ಎತ್ತಿನ ಗಾಡಿಗಳನ್ನು ಬಿಟ್ಟರೆ, ಬೇರೆ ಯಾವ ರೀತಿಯ ವಾಹನಗಳನ್ನೂ ಚಲಿಸಿ ಗೊತ್ತಿಲ್ಲ” “ನಾನು ನಿಮ್ಮನ್ನು ಒಂದು ಪ್ರಶ್ನೆ ಕೇಳಲೇ?” “ಕೇ ಳ ಪ್ಪ ಕೇಳು, ಅದೇನು ನಿನ್ನ ಪ್ರಶ್ನೆ” “ನಮ್ಮ ಪ್ರಜೆಗಳೆಲ್ಲ ಎಲ್ಲಿಗೆ ಹೋಗಿದ್ದಾರೆ?” , “ಯಾವ ಪ್ರಜೆಗಳ ಬಗ್ಗೆ ನೀನು ಕೇಳುತ್ತಿದ್ದೀಯ?” “ಈ ರಾಜ್ಯದಲ್ಲಿ ವಾಸಿಸುತ್ತಿದ್ದ ಸಾವಿರಾರು ಮಂದಿ ಪ್ರಜೆಗಳು, ಎಲ್ಲಿಗೆ ಹೋಗಿದ್ದಾರೆ? “ಹೌದು, ಇತ್ತೀಚಿನ ದಿನಗಳಲ್ಲಿ ಯಾರೂ ಕಾಣಿಸುತ್ತಿಲ್ಲ. ಎಲ್ಲರೂ ಎಲ್ಲಿ ಹೋಗಿದ್ದಾರೋ ಗೊತ್ತಿಲ್ಲ. ದೇವಸ್ಥಾನದಲ್ಲಿ ದೇವರ ದರ್ಶನ ಮಾಡಲೂ ಸಹ ಯಾರೂ ಬರುತ್ತಿಲ್ಲ. ಈ ರಾಜ್ಯದ ಮಹಾರಾಜನು ಕೂಡ ದೇವರು ದರ್ಶನಕ್ಕಾಗಿ ಬರುತ್ತಿಲ್ಲ. ಹಿಂದಿನ ದಿನಗಳಲ್ಲಾದರೆ ವರ್ಷಕ್ಕೆ ಒಂದು ಬಾರಿಯಾದರೂ ರಾಜ ಬಂದೇ ಬರುತ್ತಿದ್ದ” “ಯಾವ ರಾಜನ ಬಗ್ಗೆ ನೀನು ಹೇಳುತ್ತಿರುವುದು?” ನಾನು ಕೇಳಿದಾಗ, ಅವನಿಗೆ ಒಮ್ಮೆಲೇ ನನ್ನ ಮೇಲೆ ಸಿಟ್ಟು ಬಂದಂತೆ ಕಾಣಿಸಿತು. “ಹುಚ್ಚುಹುಚ್ಚಾಗಿ ಏನನ್ನೋ ಮಾತನಾಡಬೇಡ. ನಾನು ಹೋಗುತ್ತೇನೆ ಎನ್ನುತ್ತಾ ಅವನು ಬಾಗಿಲಿನ ಮೇಲೆ ಹಾಗೆಯೇ ಬಾಗಿದ”. ನಂತರ ಸಾವರಿಸಿಕೊಂಡು, “ನನ್ನ ಬಗ್ಗೆ ನಿನಗೆ ಏನೂ ಗೊತ್ತಿಲ್ಲ ಎಂದು ಕಾಣಿಸುತ್ತಿದೆ.” ಎಂದು ಹೇಳುತ್ತಾ ನನ್ನನ್ನು ಪಕ್ಕಕ್ಕೆ ತಳ್ಳಿ ಕಾರಿನಿಂದ ಕೆಳಗಿಳಿದ ಹೀಗೆ ಇಳಿದವನು ಗೂನು ಬೆನ್ನಿನವನ ರೀತಿಯಲ್ಲಿ ಬಾಗಿ ನಡೆಯುತ್ತಾ ದೇವಸ್ಥಾನದ ಕಡೆಗೆ ಹೊರಟ. ನನಗೆ ಏನು ಮಾಡಬೇಕೆಂದೇ ಗೊತ್ತಾಗಲಿಲ್ಲ. ನಾನೂ ಅವನ ಜೊತೆಯಲ್ಲಿ ದೇವಸ್ಥಾನದ ಕಡೆಗೆ ಹೊರಟೆ. ದೇವಸ್ಥಾನದ ಬಳಿಗೆ ಹೋಗಿ ನಿಂತ ಅವನು ನನ್ನ ಕಡೆಗೆ ತಿರುಗಿ ನೋಡುತ್ತಾ, “ಹೋಗು, ಹೋಗು, ಇಲ್ಲಿಂದ ಹೊರಟು ಹೋಗು, ನನಗೆ ನಿನ್ನ ಸಹವಾಸ ಸಾಕಾಗಿ ಹೋಗಿದೆ” ಎಂದು ಆರ್ಭಟಿಸಿದ. ದಾನಪ್ಪ ಎಂದೂ ಈ ರೀತಿ ಮಾತನಾಡಿದುದನ್ನು ನಾನು ನೋಡಿರಲಿಲ್ಲ. ಹಾಗಾಗಿ ನಾನು, “ದಾಸಪ್ಪ ನಿನಗೇನಾಗಿದೆ? ಯಾಕೆ ಹೀಗೆ ವಿಚಿತ್ರವಾಗಿ ಆಡುತ್ತಿದ್ದೀಯ?” ಎಂದು ನಾನು ನಿಧಾನವಾಗಿ ಕೇಳಿದೆ. “ಇಲ್ಲಿ ದಾಸಪ್ಪ ಎನ್ನುವವರು ಯಾರೂ ಇಲ್ಲ. ಆಗಿನಿಂದ ‘ದಾಸಪ್ಪ, ದಾಸಪ್ಪ, ದಾಸಪ್ಪ’ ಎಂದು ಅರಚುತ್ತಿದ್ದೀಯಲ್ಲ, ನನ್ನನ್ನು ಹೆಸರಿಡಿದು ಕರಿ, ಇಲ್ಲದಿದ್ದರೆ ಇಲ್ಲಿಂದ ಹೊರಟುಹೋಗು ಬರಬೇಡ, ನನ್ನನ್ನು ಹಿಂಬಾಲಿಸಿ ಬರಬೇಡ” ಎಂದು ಮತ್ತೊಮ್ಮೆ ಘರ್ಜಿಸಿದ. “ನಿನ್ನ ಹೆಸರೇನು? ಹೇಳಪ್ಪ” “ನನ್ನ ಹೆಸರು ಕೃಷ್ಣಭಟ್ಟ , ಇನ್ನು ಮುಂದೆ ನನ್ನನ್ನು ಕೃಷ್ಣಭಟ್ಟ ಎಂದೇ ಕರೆಯುಬೇಕು, ಗೊತ್ತಾಯಿತೇ?.” “ಈ ಊರಿನಲ್ಲಿ ಹೋಗಿ ಯಾರನ್ನು ಬೇಕಾದರೂ ಕೇಳು. ಎಲ್ಲರಿಗೂ ನನ್ನ ಪರಿಚಯ ಇದೆ