ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಕರೋನ ಕರೋನಾ.. ವಾಣಿ ಮಹೇಶ್ ಅತ್ತ ಹೋಗ್ ಬ್ಯಾಡಿ ಕರೋನಾ ಐತೆ ಇತ್ತ ಬರ್ ಬ್ಯಾಡಿ ಕರೋನಾ ಐತೆ ಎತ್ತಾ ಹೋದ್ರೂನೂ ಪೋಲೀಸು ಕಾಟ ಎತ್ತಾ ಬಂದ್ರೂನೂ ವೈದ್ಯರಾ ಕಾಟ ಏನು ಮಾಡೋದಪ್ಪ… ಹೆಂಗಿರೋದಪ್ಪಾ..? ಮನೆಯಲ್ಲಿ ಕುಂತೂ.. ನಿಂತೂ.. ಸಾಕಾಗೋಗೈತೆ.. ಅಯ್ಯೋ ಸಾಕಾಗೋಗೈತೆ // ಪಕ್ಕದಾ ಮನೆಯಾ ಇಣುಕಿ ನೋಡಲೂ ಭಯವಾಗುತೈತೆ ಯಾಕೋ.. ಏನೋ.. ಬಂದಾ.. ಕೆಮ್ಮು ನೋಡಿದಾ ಜನ ದೂರ ಸರಿಸಿಯೇ ಬಿಟ್ಟರಲ್ಲ!!! ಅಯ್ಯೋ ಓಡಾಡ್ಸಿ ಬಿಟ್ಟರಲ್ಲ..!! ಬೆಳಗಿಂದಾ.. ಮೈ ಬೆಚ್ಗೆ.. ಊರೆಲ್ಲಾ ಸುತ್ತೋಕೆ ಹೋಗಿದ್ನಲ್ಲ ಇರೋಕಾಗದೆ.. ಮನೆಯಲ್ಲಿ ಇರೋಕಾಗದೆ ಬಂದೇ ಬುಟೈತೆ ಕರೋನಾ.. ಕರೋನಾ… ಅದೆಂಥಾ ಕರೋನಾ.. ಅಟ್ಟಾಡ್ಸಿ ಬಿಡ್ತಲ್ಲ .. ಸಾಕಾಗಿ ಬಿಡ್ತಲ್ಲ..// ಚುಚ್ಚಿ ಚುಚ್ಚಿ ಮೈಯ್ಯೆಲ್ಲ ತೂತು ಮೈತುಂಬಾ ಮಾಸ್ಕು ಗೀಸ್ಕು ಹಾಕಿ ಉಸಿರಾಟ ನಿಂತೇ ಹೋಯ್ತಲ್ಲ ಮಲುಗ್ದಲ್ಲೇ ಮಲಗ್ಬೇಕಲ್ಲ… ಏನು ಮಾಡೋದಪ್ಪ.. ಬೀದೀಗೇ.. ಬಂದ ತಪ್ಪಿಗೆ ಅನುಭವಿಸಬೇಕಾಯ್ತಲ್ಲ ಹೇಳಿದ್ನ ಕೇಳಿದ್ರೆ ಇಂಗಾಯ್ತಿರ್ನಿಲ್ವಲ್ಲ..// *******

ಕಾವ್ಯಯಾನ Read Post »

ಅಂಕಣ ಸಂಗಾತಿ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ ಮುಚ್ಚಿದ ಬಾಗಿಲು-ತೆರೆಯದ ಕಿಟಕಿ ಭಾಗ-7 ಸಮಾನತೆಯೋ ಸಹಬಾಳ್ವೆಯೋ? ಲಾಕ್ ಡೌನ್ ಶುರುವಾದಾಗಿನಿಂದ ಕಿಟಕಿ ಬಾಗಿಲುಗಳು ಸದಾ ಮುಚ್ಚಿಯೇ ಇದ್ದರೂ ಅದೆಲ್ಲಿಂದ ಬರುತ್ತದೆಯೋ ಇಷ್ಟೊಂದು ಧೂಳು ಎನ್ನುತ್ತಾ ಗೊಣಗಾಡಿಕೊಂಡು ಸ್ವಚ್ಛತಾ ಕಾರ್ಯ ಶುರು ಮಾಡಿದೆ.  ಅಷ್ಟರಲ್ಲಿ ಒಬ್ಬ ಗೆಳತಿ ಪೋನ್ ಮಾಡಿದಳು. ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಮನೆಯ ಎಲ್ಲಾ ಕೆಲಸ ಮುಗಿದು ಹೋಗುತ್ತದೆಯೆ ಈಗ. ನನ್ನ ಗಂಡನೂ ಮನೆಯಲ್ಲಿಯೇ ಇರುವುದರಿಂದ  ಅರ್ಧ ಮನೆಕೆಲಸ ಅವನಿಗೆ ತಗುಲಿ ಹಾಕ್ತೇನೆ… ನೀನೂ ಹಾಗೇ ಮಾಡು… ಎಂದಳು!. ‘ಮಹರಾಯ್ತಿ ನಮ್ಮ ಮನೆಯವರು ಆಫೀಸಿಗೆ ಹೋಗುತ್ತಾ ಇದ್ದಾರೆ’ ಎಂದೆ. ಮುಂದೆ  ವಿಷಯ ಬದಲಾಯಿತು. ಇಂದು ಸಮಾನತೆ ಸಾಧಿಸುವುದೆಂದರೆ ಅನೇಕರು  ಪತಿ ಪತ್ನಿ ಮನೆಗೆಲಸವನ್ನು ಅರ್ಧರ್ಧ ಮಾಡುವುದು ಎಂಬಂತೆ ನಡೆದುಕೊಳ್ಳುವುದನ್ನು ನೋಡಿ ನನಗೆ ನಗುವೂ, ವಿಷಾಧವೂ ಒಟ್ಟಿಗೇ ಆಗುತ್ತದೆ. ( ಕೆಲವು ಯುವ ದಂಪತಿಗಳು ಇದೇ ವಿಷಯದಲ್ಲಿ ಕಾದಾಡಿ ವಿವಾಹ ವಿಚ್ಛೇದನಕ್ಕೂ ಮುಂದಾಗಿದ್ದಾರೆ) ಇಬ್ಬರೂ ತಿಳುವಳಿಕೆಯಿಂದ ಹಾಗೆ ಕೆಲಸ ಮಾಡಿದರೆ ಸಂತೋಷ, ಒಳ್ಳೆಯದು. ಹಾಗಲ್ಲದಿದ್ದರೆ ದೈಹಿಕ ಮಾನಸಿಕ, ಬೌದ್ದಿಕ ಆಧಾರದ ಮೇಲೆ ಮನೆಕೆಲಸದ ಹಂಚಿಕೆ ಮಾಡಿಕೊಂಡರಾಯ್ತು ಅಷ್ಟೇ. ಸುಖವಾಗಿ, ಸಂತೋಷವಾಗಿ ಬದುಕುವುದು ಮುಖ್ಯ. ಈ ಸಮಯದಲ್ಲಿ ಗಂಡಸರನೇಕರು ಮನೆಗೆಲಸ ಕಲಿಯುತ್ತಿದ್ದೇವೆ.. ಪತ್ನಿಯರ ಕಷ್ಟವನ್ನು ಅರಿಯುತ್ತಿದ್ದೇವೆ ಎಂದು ಪತ್ರಿಕೆಗಳಲ್ಲಿ ಫೇಸ್ ಬುಕ್ಕಿನಲ್ಲಿ ಕೆಲವು ಗಂಡಸರು ಬರೆದುಕೊಳ್ಳುತ್ತಿದ್ದಾರೆ.  ಇನ್ನೂ ಕೆಲವರು ಟೈಂಪಾಸಿಗಾಗಿ ಹೆಂಡತಿಗೆ ಬೈಯುವುದು, ಹೊಡೆಯುವುದು, ಚಿತ್ರಹಿಂಸೆ ಕೊಡುವುದು… ಮಾಡುತ್ತಿದ್ದಾರೆ. .. ಸಾವು ನಮ್ಮ ಸುತ್ತಲೂ ಗಿರಕಿ ಹೊಡೆಯುತ್ತಿದೆಯೇನೋ ಎಂದು ಭ್ರಮಿಸುವ ಈ ಹೊತ್ತಿನಲ್ಲಿಯೂ ಜಗಳಗಳು ಬೇಕಾ?  ಒಂದೈದು ನಿಮಿಷ ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮಗೆ ಯಾರ ನೆನಪು ಬಂದು ಮನಸ್ಸು ಕೃತಜ್ಞತೆಯಿಂದ ನಮಿಸುತ್ತದೆ ಎಂಬುದನ್ನು ಗಮನಿಸಿ. ಆಗ ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಜೊತೆಗಿದ್ದ, ನಿಮ್ಮನ್ನು ಸಂಕಷ್ಟದಿಂದ ಪಾರು ಮಾಡಿದವರ ನೆನಪು ಬರುತ್ತದೆ.. ಈ ಕಷ್ಟ ಕಾಲದಲ್ಲಿ  ಹೆಂಡತಿ ಗಂಡನಿಗೆ ಅಥವಾ  ಗಂಡ ಹೆಂಡತಿಗೆ ಸಹಾಯ ಸಹಕಾರ ನೀಡಿ ಬದುಕಬೇಕು. ಆಗ  ಕಷ್ಟ ಕಳೆದರೂ ಜೀವನಪರ್ಯಂತ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಪ್ರೀತ್ಯಾದರಗಳು ಇಮ್ಮಡಿಯಾಗುತ್ತವೆ. ಒಂದೆರಡು ತಲೆಮಾರಿನ ಹಿಂದಿನವರ ಬದುಕನ್ನು ಗಮನಿಸಿದರೆ ಮುಂಬಾಗಿಲಿಗೆ ಗಂಡಸರು ಯಜಮಾನರಾದರೆ ಹಿಂಬಾಗಿಲಿಗೆ ಮಹಿಳೆಯರು ಯಜಮಾನ್ತಿಯರಾಗಿದ್ದರು. ಗಂಡಸರ ಕಾರಬಾರು ಗಂಡಸರಿಗೆ. ಹೆಂಗಸರ ಪಾರುಪತ್ಯ ಹೆಂಗಸರಿಗೆ. ಅದೂ ಬಂದು ಬಗೆಯ ಹೊಂದಾಣಿಕೆಯೇ ಆಗಿತ್ತಲ್ಲವೇ? ಅದಕ್ಕೆ ಸಹಬಾಳ್ವೆ ಎನ್ನಬಹುದು… ******** ಮುಂದುವರಿಯುವುದು… ಮಾಲತಿ ಹೆಗಡೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ Read Post »

ಕಾವ್ಯಯಾನ

ಕಾವ್ಯಯಾನ

ಅಂತಿಮಯಾತ್ರೆ ಹರೀಶ ಕೋಳಗುಂದ ಉಸಿರು ಬಿಗಿ ಹಿಡಿದಿದೆ, ಎದೆಬಡಿತ ಕ್ಷೀಣ. ಕೆಲವೇ ಸಮಯ ಬಾಕಿ. ಪಸೆಯಾರಿದ ಗಂಟಲಿಗೆ ಕಡೆಯ ಬಯಕೆ, ಗುಟುಕು ಗಂಗಾಜಲ ಮಾತ್ರ. ಮತ್ತೇನೂ ಬೇಡ. ಉರಿವ ಹಣತೆಯ ಸೊಡರು ಬೀಸುಗಾಳಿಗೆ ತುಯ್ದಾಟ….! ಕಾಲ ಮೀರುತ್ತಿದೆ, ಸಾಸಿವೆಯ ಸಾಲಕ್ಕೆ ಹೋದವಳು ಇನ್ನೂ ಮರಳಿಲ್ಲ, ದಾರಿಯಲಿ ಬುದ್ಧ ಸಿಕ್ಕಿರಬೇಕು. ಕಾಲವಶದಲ್ಲಿ ಸಾವಿತ್ರಿಯೂ ಲೀನ. ಪುರುದೇವನ ವರ್ತಮಾನವೂ ಇಲ್ಲ. ಕಣ್ಣು ಕವಿಯುತ್ತಿದೆ, ಚಾಚಿ ಮಲಗಿದ ದೇಹ ಅಸಾಧ್ಯ ಭಾರ. ಸುತ್ತ ಕತ್ತಲೆಯ ಕೂಪ, ಏಕಾಂಗಿ ಭಾವ, ಹಠಾತ್ತನೆ ಯಾರದೋ ಚೀತ್ಕಾರ, ಯಾರೋ ನಕ್ಕಂತೆ, ಅತ್ತಂತೆ, ಹೆಸರಿಡಿದು ಕರೆದಂತೆ, ಕೈಹಿಡಿದು ಜಗ್ಗಿದಂತೆ, ಭ್ರಮೆ-ವಾಸ್ತವ ಇಹ -ಪರಗಳ ನಡುವೆ ತಾಕಲಾಟ, ಅವ್ಯಕ್ತ ಆತಂಕ….! ಯಶೋಧರನ ಹಿಟ್ಟಿನ ಹುಂಜಕ್ಕೂ ಉಂಟು ಬೆಂತರನ ಕಾವಲು. ಭೀಷ್ಮ ಇಚ್ಛಾಮರಣಿ. ಅಂಗಾಧಿಪತಿಗೆ ಕವಚ-ಕುಂಡಲಗಳ ರಕ್ಷೆ. ಸುಯೋಧನನಿಗೋ ವಜ್ರಕಾಯದ ದೀಕ್ಷೆ. ನರನ ಬಾಳು.. ಕಾವ, ಕೊಲುವ, ನಗಿಸಿ ಅಳಿಸುವ, ಕುಣಿಸಿ, ನಲಿಸಿ, ಆಡಿಸಿ, ಗೆಲಿಸಿ ಸೋಲಿಸಿ, ಇದ್ದು ಇಲ್ಲವಾಗಿಸುವ, ಕಾಣದ ಕೈಗಳ ಪಗಡೆಯಾಟ…! ಇನ್ನು ನಿಮಿಷಗಳನೆಣಿಸುವುದಷ್ಟೇ ಕೆಲಸ… ಹೊಸ್ತಿಲಾಚೆಯ ಸುದೀರ್ಘ ಮೌನ ಕೈ ಬೀಸಿ ಕರೆಯುತ್ತಿದೆ. ಸಿದ್ಧನಾಗಲೇಬೇಕಿದೆ, ಬಿದಿರುಯಾನ ಕಟ್ಟಿಟ್ಟ ಬುತ್ತಿ… ಪಯಣ ಸ್ವರ್ಗಕ್ಕೋ ನರಕಕ್ಕೋ ತಿಳಿಯದು, ಈಗಲೇ ಅರ್ಜಿ ಹಾಕುವೆ. ಛೇ… ಎಲ್ಲಿಗಾದರೇನು….? ನಭಕೇರಿದ ಆಯುಷ್ಯಚಪ್ಪರದ ಮುದಿಹಣ್ಣೆಲೆ ಉದುರಿ ಮಣ್ಣಾಗಲೇಬೇಕು. ಹಸಿರು ಚಿಗುರಿಗೆ ಎಡೆಯಾಗಲೇಬೇಕು. ಪರಿವರ್ತನೆ ಜಗದ ನಿಯಮ… ಅದೋ….. ಅಲೆ ಅಲೆಯಾಗಿ ತೇಲಿ ಬರುತ್ತಿದೆ, ಅಲ್ಲಮನ ತಮಟೆಯ ಸದ್ದು ಶೂನ್ಯತ್ವದಾಳದಿಂದ. ಜತೆಗೆ ಬಸವನ ಉಕ್ತಿ ಮರಣವೇ ಮ…..ಹಾ……ನ…….ವ……..ಮಿ. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಶಾಯರಿಗಳು ಮರುಳಸಿದ್ದಪ್ಪ ದೊಡ್ಡಮನಿ (ಕೂದಲಾ)                                                                            ನಿನ್ನ ಕೂದಲ ಹಾಂಗ ಹಗೂರಕ ನಿನ್ನ ಗಲ್ಲಕ್ಕ ಹಾರಿಕೊತ ಮುತ್ತಿಡತಾವು ಅವು ಎಷ್ಟು ಪುಣ್ಯಾ ಮಾಡ್ಯಾವು. ನೀ ಬಾಚಿ ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ಹುಚ್ಚು ಬಿಡಬೇಕು ಅವನ್ನೋಡಿದ ಹರೇದ ಹುಡುಗರಿಗೆ ಹುಚ್ಚು ಹಿಡಿ ಬೇಕು.  ಕಟ್ಟಿದ ಮುಡಿ ಬಿಚ್ಚಿ ಜಾಡಿಸಿದರ ನವಿಲು ಕುಣದಂಗಕ್ಕೈತಿ ನವಿಲಿನ ಕುಣತಕ್ಕ ನನಗರ ಒಂದ್ ನಮೂನಿ ಆಕ್ಕೈತಿ. ನಿನ್ನ ಮುಂಗುರುಳು ಎಷ್ಟು ಚಂದ ಮುಖದ ಮ್ಯಾಗ ಹಾರಾಡತಾವು ಅವುಕ ಸಲಿಗಿ ಕೊಟ್ಟಿ ಅಂತ ಕಾಣತೈತಿ ಎಲ್ಲೆಂದ್ರಲ್ಲಿ ನಿನ್ನ ಗಲ್ಲಕ್ಕ ಮುತ್ತಿಡತಾವು. ********

ಕಾವ್ಯಯಾನ Read Post »

ಇತರೆ

ಬಸವ ಜಯಂತಿ

ಬಸವ ಜಯಂತಿ ಜಾತಿಯನ್ನು ೧೨ ನೆಯ ಶತಮಾನದಲ್ಲಿಯೇ ಕಾಯಕ ಸೂಚಕವಾಗಿಸಿದ ಬಸವಣ್ಣ..! ನಾಳೆ ದಿನಾಂಕ ೨೬ ರಂದು ಬಸವಣ್ಣನವರ ಜಯಂತಿ. ಆ ನೆಪದಲ್ಲಿ ಈ ಲೇಖನ… ಬಸವೇಶ್ವರ ( ಬಸವ ಅಥವಾ ಬಸವಣ್ಣನವರು) ಲಿಂಗಾಯತ ಧರ್ಮದ ಸ್ಥಾಪಕರು. ಬಸವಣ್ಣನವರು ೧೨ ನೆಯ ಶತಮಾನದ ಭಕ್ತಿ ಪಂಥದ ಪ್ರಮುಖರಲ್ಲಿ ಒಬ್ಬರು. ಬಸವಣ್ಣನವರು ಮತ್ತು ಶಿವಶರಣರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ ಮೊದಲಾದ ನೂರಾರು ಶರಣರು ವಚನಗಳ ಮೂಲಕ ಭಕ್ತಿಪಥ ಮತ್ತು ಜೀವನದ ಬಗ್ಗೆ ಹೊಸ ದೃಷ್ಟಿ ಬೀರಿದರು… ಬಸವಣ್ಣನವರು ೧೧೩೪ ರಲ್ಲಿ ಈಗಿನ ಬಿಜಾಪುರ ಜಿಲ್ಲೆಯಲ್ಲಿರುವ ಬಸವನ ಬಾಗೇವಾಡಿ ಗ್ರಾಮದಲ್ಲಿ (ಬಸವಣ್ಣನವರ ತಾಯಿಯ ತವರು ಮನೆಯಾದ ಇಂಗಳೇಶ್ವರ ಗ್ರಾಮದಲ್ಲಿ ಜನಿಸಿದರು ಎಂಬ ಪ್ರತೀತ ಇದೆ.) … ಶ್ರೀ ಮಾದರಸ ಮತ್ತು ಮಾದಲಾಂಬಿಕೆ ದಂಪತಿಗಳಿಗೆ ಜನಿಸಿದವರು ಬಸವೇಶ್ವರರು. ಬಸವಣ್ಣ ಚಿಕ್ಕಂದಿನಿಂದಲೂ ವೈದಿಕ ಸಂಸ್ಕೃತಿಯ ಕರ್ಮಾಚರಣೆರಳ ವಿರೋಧಿಯಾಗಿದ್ದರು. ಅಕ್ಕ ನಾಗಮ್ಮ ಮತ್ತು ಭಾವ ಶಿವಸ್ವಾಮಿಯ ಜೊತೆಯಲ್ಲಿ ಬಾಲ್ಯವನ್ನು ಕಳೆದರು. ಅವರ ೮ನೇ ವಯಸ್ಸಿನಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಬಸವಣ್ಣನವರಿಗೆ ಜನೀವಾರ ಹಾಕಲು ಬಂದಾಗ, ಬಸವಣ್ಣನವರು ತನಗಿಂತ ಹಿರಿಯಳಾದ ಅಕ್ಕ ನಾಗಮ್ಮನಿಗೆ ಕೊಡಲು ಕೇಳುತ್ತಾನೆ, ಆಗ ಇದು ಪುರುಷರಿಗೆ ಮಾತ್ರ ಕೂಡುವಂತಹುದು ಆದ್ದರಿಂದ ಅಕ್ಕನಿಗೆ ಕೋಡಲು ಬರುವುದಿಲ್ಲ ಅಂತ ನುಡಿದಾಗ, ಬಸವಣ್ಣ ಪುರುಷ/ಮಹಿಳೆ ಅಸಮಾನತೆಯನ್ನು ವಿರೋಧಿಸಿ ಮನೆಯಿಂದ ನಿರ್ಗಮಿಸಿ ಕೂಡಲಸಂಗಮಕ್ಕೆ ಹೊರಡುತ್ತಾರೆ… ಧಾರ್ಮಿಕ ಬೆಳವಣಿಗೆ— ಬಸವೇಶ್ವರರು ಹನ್ನೆರಡು ವರ್ಷಗಳ ಕಾಲ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡುತ್ತಾ ಕಳೆದರು. ಅವರ ದೃಷ್ಟಿಯಲ್ಲಿ ದೇವನು ಒಬ್ಬ ಮತ್ತು ಅವನು ಮಾನವಲ್ಲಿದ್ದಾನೆ ಹೊರತು ಗುಡಿ-ಗುಂಡಾರಗಳಲ್ಲಿ ಅಲ್ಲ. ಕೆಲಸ ಮಾಡಿ ಜೀವನ ನಡೆಸಬೇಕು, ಆಲಸಿ ಜೀವನ ಸಲ್ಲ. ಸುಳ್ಳು ಹೇಳುವುದು, ವಂಚಿಸುವುದು, ಕೊಲೆ-ಸುಲಿಗೆ ಮಾಡುವುದು, ಪ್ರಾಣಿಬಲಿ ನೀಡುವುದು, ಪರಧನ ಹರಣ, ಪರಸ್ತ್ರೀ ವ್ಯಾಮೋಹ ಹೊಂದುವುದು ಘೋರ ಅಪರಾಧವಾಗಿದೆ ಎಂದು ಬಸವಣ್ಣ ಸಾರಿದರು. ಕೆಲಸದಲ್ಲಿ ಮೇಲು ಅಥವಾ ಕೀಳು ಎಂಬುದಿಲ್ಲ. ಪುರುಷನಂತೆ ಮಹಿಳೆಗೂ ವಿದ್ಯಾಭ್ಯಾಸದ ಮತ್ತು ತನ್ನ ಜೀವನವನ್ನು ರೂಪಿಸಿಕೊಳ್ಳುವ ಹಕ್ಕಿದೆ. ಹೀಗೆ ಸಮಾನತೆ, ಕಾಯಕ, ದಾಸೋಹ ತತ್ವಗಳನ್ನು ಸ್ವೀಕರಿಸುವ ಮತ್ತು ಆಚರಿಸುವ ಯಾರು ಬೇಕಾದರೂ ಶಿವಶರಣರಾಗಬಹುದು ಎಂದು ಬಸವಣ್ಣನವರು ಸಾರಿದರು. ಪೊಳ್ಳು ದೇವರುಗಳನ್ನು ಸ್ತುತಿಸುತ್ತಿದ್ದ ಮತ್ತು ಪುರೋಹಿತಶಾಹಿಯಿಂದ ನಿರಂತರವಾಗಿ ವಂಚನೆಗೊಳಗಾಗುತ್ತಿದ್ದ ಜನತೆಗೆ ಬಸವಣ್ಣನವರು ಹೊಸ ಜೀವನ ನೀಡಿದರು. ಜಾತಿ, ಮತ, ಲಿಂಗಗಳ ಭೇದವನ್ನು ತಿರಸ್ಕರಿಸಿದ ಬಸವಣ್ಣನವರು ಸಾಮಾಜಿಕ ಕ್ರಾಂತಿಗೆ ಕಾರಣವಾದರು. ಬಸವಣ್ಣನವರನ್ನು ಜಗಜ್ಯೋತಿ ಬಸವೇಶ್ವರ, ಕ್ರಾಂತಿಯೋಗಿ ಬಸವಣ್ಣ, ಭಕ್ತಿ ಭಂಡಾರಿ ಬಸವಣ್ಣ ಎಂದೂ ಕರೆಯಲಾಗುತ್ತದೆ. ಮಾನವಿಯತೆ. ಕಾಯಕ ನಿಷ್ಟೆ ಧರ್ಮದ ಬುನಾದಿಯಾಗಬೇಕು ಎಂದು ಬಲವಾಗಿ ನಂಬಿದ್ದ ಬಸವಣ್ಣ ತಮ್ಮ ವಚನಗಳ ಮೂಲಕ ಕಾಯಕವೇ ಕೈಲಾಸ, ದಯವೇ ಧರ್ಮದ ಮೂಲವಯ್ಯ, ಅಯ್ಯ ಎಂದರೆ ಸ್ವರ್ಗ ಎಲವೋ ಎಂದರೆ ನರಕ ಎಂದು ಸಾರುವ ಮೂಲಕ ತಮ್ಮ ಮಾನವಾತಾವಾದಕ್ಕೆ ಸಾಹಿತ್ಯದ ಸ್ಪರ್ಶ ನೀಡಿದರು… ಕನ್ನಡ ಸಾಹಿತ್ಯಕ್ಕೆ ವಚನಗಳ ಮೂಲಕ ಅಪೂರ್ವ ಕೊಡುಗೆ ಅಪಾರ. ಇದುವರೆಗೆ ಸುಮಾರು 1500 ವಚನಗಳನ್ನು ಸಂಗ್ರಹಿಸಿಡಲಾಗಿದೆ. ಬಸವಣ್ಣನವರ ಪ್ರೇರಣೆಯಿಂದ ಹರಿಜನ ಮತ್ತು ಬ್ರಾಹ್ಮಣ ಕುಟುಂಬಗಳ ನಡುವೆ ನಡೆದ ವಿವಾಹ ಕಲ್ಯಾಣದ ಕ್ರಾಂತಿಗೆ ಮುನ್ನುಡಿಯಾಯಿತು… ಇವರು ಷಟ್ ಸ್ಥಲ ವಚನ, ಕಾಲಜ್ಞಾನವಚನ, ಮಂತ್ರಗೋಪ್ಯ, ಶಿಖಾರತ್ನ ವಚನ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಈ ಕುರಿತಂತೆ ಕನ್ನಡ, ತೆಲುಗು, ಸಂಸ್ಕೃತ, ತಮಿಳು, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಪುರಾಣಗಳು ರಚನೆಯಾಗಿವೆ… ಬಾಗೇವಾಡಿ ಕಪ್ಪಡಿಸಂಗಮ, ಕಲ್ಯಾಣ ಪಟ್ಟಣಗಳಲ್ಲಿ ಇವರ ಸ್ಮಾರಕಗಳಿವೆ. ಬೆಳಗಾಂ ಜಿಲ್ಲೆಯ ಅರ್ಜುನವಾಡದ ಶಿಲಾ ಶಾಸನದಲ್ಲಿ ಉಲ್ಲೇಖಿತವಾಗಿರುವ ಸಂಗನಬಸವ ಎಂಬ ಹೆಸರು ವಚನಕಾರ ಬಸವಣ್ಣನವರದ್ದೇ ಎಂದು ವಿದ್ವಾಂಸರು ಊಹಿಸಿದ್ದಾರೆ… ಸಾಮಾಜಿಕ ಸಮಾನತೆ– “ಇವನಾರವ ಇವನಾರವ ಇವನಾರವ ನೆಂದಿನಸದಿರಯ್ಯಾ ಇವನಮ್ಮವ ಇವನಮ್ಮವ ಇವನಮ್ಮವ ನೆಂದಿನಸಯ್ಯಾ ಕೂಡಲಸಂಗಮದೇವಾ ನಿಮ್ಮ ಮಹಾಮನೆಯ ಮಗನೆಂದನಿಸಯ್ಯ.” ಶೂದ್ರರಾದ ರೈತಾಪಿ ಜನರು, ಕಾಯಕಜೀವಿಗಳು, ಮಹಿಳೆಯರು ಮತ್ತು ಪಂಚಮರು ಈ ದೇಶದಲ್ಲಿ ಸಹಸ್ರಾರು ವರ್ಷಗಳಿಂದ ಮನುಧರ್ಮದ ಪುರುಷ ಪ್ರಧಾನವಾದ ವರ್ಣ ವ್ಯವಸ್ಥೆಯಿಂದಾಗಿ ಪಡಬಾರದ ಕಷ್ಟಪಟ್ಟಿದ್ದಾರೆ. ಮೇಲ್ವರ್ಗ ಮತ್ತು ಮೇಲ್ಜಾತಿಯ ಅನುತ್ಪಾದಕ ಪುರುಷರಿಗಾಗಿಯೇ ಬದುಕಿನ ಎಲ್ಲ ಸುಖಭೋಗಗಳು ಮೀಸಲಾಗಿದ್ದವು. ಇವರು ಮಾತ್ರ ಜನಿವಾರ ಧರಿಸುವ ಹಕ್ಕನ್ನು ಪಡೆದಿದ್ದರು. ಜನಿವಾರ ಧರಿಸುವ ಬ್ರಾಹ್ಮಣ ಓದಿರಬಹುದು, ಬರೆದಿರಬಹುದು ಆದರೆ ಕಾಯಕಜೀವಿಯಾಗಿ ಉತ್ಪಾದನೆಯಲ್ಲಿ ತೊಡಗಿಲ್ಲ. ಉತ್ಪಾದನೆಯ ಅನುಭವದಿಂದ ಬರುವ ಜ್ಞಾನವನ್ನು ಹಿಂದಿನ ಕಾಲದಲ್ಲಿ ಅವನೆಂದೂ ಪಡೆಯಲಿಲ್ಲ. ಕ್ಷತ್ರಿಯ ಕಾದಿರಬಹುದು ಆದರೆ ಉತ್ಪಾದನೆಯಲ್ಲಿ ತೊಡಗಲಿಲ್ಲ. ವೈಶ್ಯ ವಸ್ತುಗಳ ಮಾರಾಟ ಮಾಡಿರಬಹುದು, ಕೃಷಿಭೂಮಿಯ ಒಡೆಯನೂ ಆಗಿರಬಹುದು ಆದರೆ ಸ್ವತಃ ಉತ್ಪಾದನೆ ಮಾಡಲಿಲ್ಲ. ಈ ಮೂರೂ ವರ್ಣದವರಿಗೂ ಜನಿವಾರ ಇದೆ. ಆದರೆ ಉತ್ಪಾದನೆಯಲ್ಲಿ ತೊಡಗಿದ ಕಾಯಕಜೀವಿಗಳಿಗೆ ಮತ್ತು ಪಂಚಮರಿಗೆ ಜನಿವಾರ ಇಲ್ಲ. ಯಾರಿಗೆ ಜನಿವಾರ ಇತ್ತೋ ಅವರು ದುಡಿಯದೇ ಸುಖಜೀವನವನ್ನು ಅನುಭವಿಸಿದರು. ಯಾರಿಗೆ ಜನಿವಾರ ಇದ್ದಿದ್ದಿಲ್ಲವೊ ಅವರು ದುಡಿದೂ ಕಷ್ಟ ಜೀವನವನ್ನು ಅನುಭವಿಸಿದವರು. ಅಂತೆಯೆ ಬಸವಣ್ಣನವರು ಕಟ್ಟಕಡೆಯ ಮನುಷ್ಯನ ಕಡೆಗೆ ಬಂದರು ಈ ಅನ್ಯಾಯದ ವಿರುದ್ಧ ಸಿಡಿದೆದ್ದರು. “ಜಾತಿ ಸಂಕರ ವಾದ ಬಳಿಕ ಕುಲವನರಸುವರೆ” ಎಂದು ಪ್ರಶ್ನಿಸಿ ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು. ವಿವಿಧ ಕಾಯಕಗಳ ಶೂದ್ರರಿಗೆ, ಮಹಿಳೆಯರಿಗೆ ಮತ್ತು ಪಂಚಮರಿಗೆ ಮೊದಲ ಬಾರಿಗೆ ಶಿಕ್ಷಣ ನೀಡುವ ವ್ಯವಸ್ಥೆ ಮಾಡಿದರು. ಅವರೆಲ್ಲ ಅನುಭವ ಮಂಟಪದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಭಾರತದಲ್ಲಿ ವಿವಿಧ ಜಾತಿಗಳ ಕಾಯಕಜೀವಿಗಳು ಮೊದಲ ಬಾರಿಗೆ ಜಾತಿಯನ್ನು ಮೀರಿ ಒಂದು ವರ್ಗವಾಗಿದ್ದು ಶರಣಸಂಕುಲದಲ್ಲಿ ಎಂಬುದು ಹೆಮ್ಮೆಯ ವಿಚಾರವಾಗಿದೆ. ಅವರೆಲ್ಲ ತಮ್ಮ ಕಾಯಕಗಳ ಹೆಸರುಗಳನ್ನು ಅಭಿಮಾನದಿಂದ ಉಳಿಸಿಕೊಂಡರು. ಆದರೆ ಆ ಕಾಯಕಗಳ ಒಳಗೆ ಇದ್ದ ಜಾತಿವಿಷವನ್ನು ಹೊರಹಾಕಿದರು. ಹೀಗೆ ಶರಣರಲ್ಲಿ ಸಮಗಾರ, ಮಾದಾರ, ಮೇದಾರ, ಡೋಹರ, ಅಂಬಿಗ ಮುಂತಾದ ಪದಗಳು ಜಾತಿ ಸೂತಕವನ್ನು ಕಳೆದುಕೊಂಡು ಕಾಯಕ ಸೂಚಕಗಳಾಗಿ ಉಳಿದವು..! ********** ಕೆ.ಶಿವು.ಲಕ್ಕಣ್ಣವರ

ಬಸವ ಜಯಂತಿ Read Post »

ಕಾವ್ಯಯಾನ

ಅನುವಾದ ಸಂಗಾತಿ

ಇನ್ನಿಲ್ಲ ಕ್ಲೀಷೆಗಳು ಮೂಲ: ಆಕ್ತೇವಿಯೋ ಪಾಜ಼್  ಕನ್ನಡಕ್ಕೆ: ಮೇಗರವಳ್ಳಿ ರಮೇಶ್ ಸು೦ದರ ಮುಖಸೂರ್ಯನಿಗೆ ದಳ ಬಿಚ್ಚಿ ಕೊಳ್ಳುವ ಡೈಸಿ ಹೂವಿನ ಹಾಗೆನೀನೂ ತೆರೆ ನಿನ್ನ ಮುಖವನ್ನು ನನಗೆಪುಟಗಳನು ತೆರೆದ೦ತೆ ಪತ್ರಿಕೆಯ ಒಳಗೆ. ಸಮ್ಮೋಹಕ ಮುಗುಳು ನಗೆಯಓ, ನಿಯತಕಾಲಿಕೆಯ ಸು೦ದರಿಮರುಳಾಗಿ ಬಿಡುವರು ಮ೦ದಿ ನಿನ್ನ ಮೋಡಿಗೆ. ಎಷ್ಟು ಕವನಗಳು ಹುಟ್ಟಿಕೊ೦ಡಿಹವು ನಿನಗಾಗಿ?ಎಷ್ಟು ಜನ “ಡಾ೦ಟೆ” ಗಳು ಬರೆದಿಹರು ನಿನಗಾಗಿ?ಓ, ಬಿಯಾಟ್ರಿಸ್,ಕಾಡುವ ನಿನ್ನ ಮಾಯೆಸೃಜಿಸುವುದು ಭ್ರಮೆ. ಆದರಿ೦ದು, ಮತ್ತೊ೦ದು ಕ್ಲೀಷೆಯಲಿಬರೆಯುವುದಿಲ್ಲ ಈ ಕವಿತೆ ನಿನಗಾಗಿಇಲ್ಲ, ಇನ್ನಿಲ್ಲ ಕ್ಲೀಷೆ. ಯಾರ ಸೌ೦ದರ್ಯಅವರ ಮೋಹಕತೆಯಲ್ಲಿದೆಯೋಯಾರ ಸೌ೦ದರ್ಯಅವರಬುಧ್ಧಿಮತ್ತೆಯಲ್ಲಿದೆಯೋಯಾರ ಸೌ೦ದರ್ಯಅವರ ಸದ್ಗುಣಗಳಲ್ಲಿದೆಯೋಯಾರ ಸೌ೦ದರ್ಯಕೃತಕವಲ್ಲವೊಅ೦ಥ ಹೆ೦ಗಸರಿಗೆ ಇದೋಅರ್ಪಿಸಿದ್ದೇನೆ ಈ ಕವಿತೆಯನ್ನು. ಪ್ರತಿ ದಿನ ಬೆಳಿಗ್ಗೆ ಹೊಸ ಕಥೆಯೊ೦ದಿಗೆ ಏಳುವಶಹಜಾದೆಯ೦ಥ ಹೆ೦ಗಸರೆನಿಮಗಾಗಿ ಈ ಕವಿತೆ.ಬದಲಾವಣೆಯ ಬಯಸಿ ಹಾಡುವ೦ಥ ಕಥೆಗಾಗಿಈ ಕವಿತೆಯುದ್ಧವನ್ನು ಆಶಿಸುವ ಕಥೆಗಾಗಿಈ ಕವಿತೆ. ಸಮ್ಮಿಳಿತ ದೇಹಗಳ ಪ್ರೀತಿಗಾಗಿ ಯುದ್ಧಹೊಸ ಹಗಲು ಹುಟ್ಟಿಸಿದ ಉದ್ರೇಕಕ್ಕಾಗಿ ಯುಧ್ಧನಿರ್ಲಕ್ಷಿತ ಹಕ್ಕುಗಳಿಗಾಗಿ ಯುದ್ಧಅಥವಾ ಕೇವಲ ಒ೦ದು ರಾತ್ರಿಯಉಳಿವಿಗಾಗಿ ಯುದ್ಧ. ಹೌದು, ನೋವಿನ ಲೋಕದಲ್ಲಲೆದಾಡುತ್ತಿರುವ ಹೆಣ್ಣುಗಳೆನಿಮಗಾಗಿ ಈ ಕವಿತೆಕರಗುತ್ತಲೇ ಇರುವ ಜಗದ ಹೊಳೆವ ತಾರೆಗಳೇನಿಮಗಾಗಿ ಈ ಕವಿತೆಸಾವಿರದೊ೦ದು ರಾತ್ರಿ ಹೋರಾಡಿದ ವನಿತೆಯರೇನಿಮಗಾಗಿ ಈ ಕವಿತೆನನ್ನ ಹೃದಯದ ಗೆಳತೀನಿನಗಾಗಿ ಈ ಕವಿತೆ. ನಾನಿನ್ನು ನೋಡುವುದಿಲ್ಲ ನಿಯತಕಾಲಿಕೆಗಳನ್ನಬದಲು ವೀಕ್ಷಿಸುತ್ತೇನೆ ರಾತ್ರಿಯನ್ನಮತ್ತದರ ಹೊಳೆವ ನಕ್ಷತ್ರಗಳನ್ನ. ಹಾಗಾಗಿ ಇನ್ನಿಲ್ಲ ಬಿಡಿ ಕ್ಲೀಷೆಗಳುಹಳೆ ಮದ್ಯದ ಆ ಶೀಷೆಗಳು! *******

ಅನುವಾದ ಸಂಗಾತಿ Read Post »

ಅನುವಾದ

ಅನುವಾದ ಸಂಗಾತಿ

ನಿನ್ನ ಹಾಡು ಮೂಲ: ರಬೀಂದ್ರ ನಾಥ ಟಾಗೋರ್ ಕನ್ನಡಕ್ಕೆ: ಡಾ.ಪ್ರಸನ್ನ ಹೆಗಡೆ ನೀ ಹಾಡುವಾ ಪರಿಯ ನಾನರಿಯೆ ನನ್ನೊಡೆಯಾ ಬೆರಗಿನಿಂ ನಾ ಕುಳಿತು ಪೇಳ್ವೆ ಜಿಯಾ,,,ಪೇಳ್ವೆ ಜಿಯಾ ನಿನ್ನ ಹಾಡಿನಾ ಕಿರಣ ಬೆಳಗುತಿದೆ ಜಗವನ್ನು ಬಾನಿನಿಂ ಬಾನಿಗೆ ಹರಿಸಿ ಉಸಿರು ಆ ಹಾಡಜೀವಸೆಲೆ ಅಡೆತಡೆಯ ಪುಡಿಮಾಡಿ ದೈರ್ಯದಿಂ ಮುಂದಕ್ಕೆ ನುಗ್ಗುತಿಹುದು….ನುಗ್ಗುತಿಹುದು ನಿನ್ನ ಹಾಡಕೂಡೆಂದು ಕೂಗುತಿದೆ ಎನ್ನೆದೆಯು ಆದರದು ಬರಿವ್ಯರ್ಥ ದ್ವನಿಗಾಗಿ ನಾನು ಒರಲುತಿಹೆನು ನಾ ನುಡಿವೆ ಬರಿನುಡಿಯ ಹಾಡಾಗ ಆ ನುಡಿಯು ಕೈಚೆಲ್ಲಿ ಕಣ್ಣೀರ ಸುರಿಸುತಿಹೆನು…ಸುರಿಸುತಿಹೆನು ಅಹ! ದಣಿಯೆ ಎನ್ನ ದಣಿಯೆ ನಿನ್ನಹಾಡಿನಾ ಅನಂತ ಬಲೆಯಲ್ಲಿ ಎನ್ನೆದೆಯ ಹಿಡಿದೆಳೆದು ಬಂದಿಸಿರುವೆ….ಬಂದಿಸಿರುವೆ. ********

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಎ. ಹೇಮಗಂಗಾ ಸ್ಫಟಿಕದಂತೆ ಸದಾ ನಿರ್ಮಲ ಹೃದಯದವನು ನನ್ನ ರಾಜಕುಮಾರ ಕನಕದಂತೆ ಸದಾ ಹೊಳೆಯುವ ರೂಪದವನು ನನ್ನ ರಾಜಕುಮಾರ ಸವಿಮಾತಿನಲಿ ಮೊಗ್ಗು ಮನಸ ಅರಳಿಸಿದವನು ನನ್ನ ರಾಜಕುಮಾರ ಕಿರುನಗೆಯಲಿ ಮೋಡಿ ಮಾಡುತ ಚಿತ್ತ ಕಲಕಿದವನು ನನ್ನ ರಾಜಕುಮಾರ ಬೆಂಗಾಡಾದ ಬಾಳಲಿ ಚೈತ್ರ ಮೂಡಿಸಿದವನು ನನ್ನ ರಾಜಕುಮಾರ ಒಲವಿನಾರಾಧನೆಯೇ ತಪವೆಂದು ತೋರಿದವನು ನನ್ನ ರಾಜಕುಮಾರ ಸಪ್ತಪದಿಯಲಿ ಒಂದಾಗಿ ಸಗ್ಗವನೇ ಸೃಜಿಸಿದವನು ನನ್ನ ರಾಜಕುಮಾರ ಮಧುರ ಮಿಲನದ ನಶೆಯಲಿ ಮೈ ಮರೆಸಿದವನು ನನ್ನ ರಾಜಕುಮಾರ ತೋಳಬಂಧನದಿ ಪಿಸುಮಾತುಗಳ ಉಸುರಿದವನು ನನ್ನ ರಾಜಕುಮಾರ ಕೊರಳಿಗೆ ಅಗಣಿತ ಮುತ್ತಿನ ಹಾರ ಹೆಣೆದವನು ನನ್ನ ರಾಜಕುಮಾರ ಮೌನದಿರುಳಲಿ ಕಂಗಳಲೇ ಎಲ್ಲ ಹೇಳಿದವನು ನನ್ನ ರಾಜಕುಮಾರ ಬೇಕೆಂದ ಕ್ಷಣದಿ ಅಧರ ಮಧುರಸ ಉಣಿಸಿದವನು ನನ್ನ ರಾಜಕುಮಾರ ತಾಯ್ತನದ ಅಮಿತ ಸುಖವ ನೀಡಿ ನಲಿದವನು ನನ್ನ ರಾಜಕುಮಾರ ಕಷ್ಟವಿರಲಿ ಸುಖವಿರಲಿ ಹಿಡಿದ ಕೈ ಬಿಡದವನು ನನ್ನ ರಾಜಕುಮಾರ ಮುಂದಿನ ಜನ್ಮಕೂ ಜೊತೆ ಬರುವೆನೆಂದವನು ನನ್ನ ರಾಜಕುಮಾರ ಜೇನ ಸಿಹಿಯ ಪ್ರೀತಿ ಅಕ್ಷಯಪಾತ್ರೆಯಾದವನು ನನ್ನ ರಾಜಕುಮಾರ ವಿಧಿ ಆಣತಿಯಂತೆ ಮರಳಿ ಬಾರದೂರ ಸೇರಿದವನು ನನ್ನ ರಾಜಕುಮಾರ ಜೀವಕ್ಕೆ ಜೀವವಾಗಿ ಕಾಡುವ ನೆನಪಾಗಿ ಉಳಿದವನು ನನ್ನ ರಾಜಕುಮಾರ ******

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಮೂಲ: ನಿಝಾರ್ ಖಬ್ಬಾನಿ ಕನ್ನಡಕ್ಕೆ: ಡಾ.ಗೋವಿಂದ ಹೆಗಡೆ ಆ ಮೀನಿನಂತೆ ನಾನು ಚುರುಕು ಮತ್ತು ಹೇಡಿ ಪ್ರೇಮದಲ್ಲಿ ನೀನು ನನ್ನಲ್ಲಿನ ಸಾವಿರ ಹೆಣ್ಣುಗಳ ಸಾಯಿಸಿದೆ ಮತ್ತು-ರಾಣಿಯಾದೆ ಚಿಂತಿಸಬೇಡ ನನ್ನ ಮಧು ಖನಿಯೇ ನೀನಿದ್ದೀ ನನ್ನ ಕವಿತೆಗಳಲ್ಲಿ ನನ್ನ ಪದಗಳಲ್ಲಿ ವರುಷಗಳು ಉರುಳಿ ಮುದಿಯಾಗಬಹುದು ಆದರೆ ನನ್ನ ಪುಟಗಳಲ್ಲಿ ನೀನು ಚಿರ ಯೌವನೆ ಈಗಲೂ ನೀನು ನಾನು ಹುಟ್ಟಿದ ದಿನವನ್ನು ಕೇಳುವೆ ಹಾಗಿದ್ದರೆ ಬರೆದುಕೋ-ನಿನಗೆ ಗೊತ್ತಿಲ್ಲದಿರುವುದನ್ನು ಎಂದು ನೀನು ಪ್ರೇಮವನ್ನು ಅರುಹಿದೆಯೋ ಅಂದೇ ನನ್ನ ಜನ್ಮದಿನ! ***********

ಅನುವಾದ ಸಂಗಾತಿ Read Post »

ಇತರೆ

ಅಪ್ಪಟ ಕನ್ನಡದ ವಿನಯ

ಅಪ್ಪಟ ಕನ್ನಡದ ವಿನಯ ಮಲ್ಲಿಕಾರ್ಜುನ ಕಡಕೋಳ . ನಿನ್ನೆ ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ಮುತ್ತಿನಹಾರ, ಎಂಬ ಕಸ್ತೂರಿಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ ವಿನಯಶೀಲ ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ. ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು ಬಡತನ. ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಂದ ಬಳುವಳಿಯಾಗಿ ಬಂದುದು ಅಭಿಜಾತ ಅಭಿನಯ. ಗುಬ್ಬಿ ಕಂಪನಿಯಲ್ಲಿ ತಂದೆಯ ಪಾತ್ರಾಭಿನಯ ಕಂಡು, ಕಲಿತು ಕೃಷ್ಣಲೀಲೆ ನಾಟಕದ ಬಾಲಪಾತ್ರದೊಂದಿಗೆ ರಂಗಭೂಮಿ ಪ್ರವೇಶ. ಗುಬ್ಬಿಕಂಪನಿ, ಸುಬ್ಬಯ್ಯನಾಯ್ಡು ಕಂಪನಿಯ ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ರಂಗಾಭಿನಯ ತಿಳಿನೀರು ಕುಡಿದಂತೆ ಒಲಿದು ಬಂದುದು. ಮೇರುನಟನಾಗಿ ಬದುಕಿನುದ್ದಕ್ಕೂ ಡಾ. ರಾಜ್ ಬಾಳಿದ್ದು ವಿನಯವಂತಿಕೆ. ಅದು ಕನ್ನಡದ ವಿನಯ ಮತ್ತು ಅನನ್ಯತೆಯ ಅನುಸಂಧಾನ. ಸಿನೆಮಾದಲ್ಲಿ ಯಥೇಚ್ಛ ಅವಕಾಶಗಳಿದ್ದಾಗಲೂ ವೃತ್ತಿ ಕಂಪನಿ ನಾಟಕಗಳನ್ನು ರಾಜಕುಮಾರ ಮರೆಯಲಿಲ್ಲ. ಬನಶಂಕರಿ ಜಾತ್ರೆಯಲ್ಲಿ ಸಾಹುಕಾರ, ಬೇಡರ ಕಣ್ಣಪ್ಪ ನಾಟಕಗಳ ಪ್ರದರ್ಶನ. ಬನಶಂಕರಿಯಲ್ಲಿ ರಾಜಕುಮಾರ ಜತೆಗೆ ಚಿತ್ರಬ್ರಹ್ಮ ನಾಮಾಂಕಿತ ಜಿ. ವಿ. ಅಯ್ಯರ್, ಹಾಸ್ಯರಸಋಷಿ ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆದವಾನಿ ಲಕ್ಷ್ಮಿದೇವಿ, ಪಂಡರೀಬಾಯಿ, ಮೈನಾವತಿ, ಹೀಗೆ ಅನೇಕ ರಂಗದಿಗ್ಗಜರು ಸೇರಿ ಮದ್ರಾಸ ಚಲನಚಿತ್ರ ಕಲಾವಿದರ ಸಂಘದಿಂದ ನಾಟಕಗಳ ಪ್ರದರ್ಶನ. ಆ ಕಾಲದಲ್ಲಿ ರಾಮಸಾಗರದ ಹನುಮಂತಪ್ಪ, ಡಾವಣಗೇರಿಯ ಆರ್. ಜಿ. ಶಿವಕುಮಾರ್ ಬನಶಂಕರಿ ಜಾತ್ರೆಯಲ್ಲಿ ಗುತ್ತಿಗೆ ಮೇಲೆ ಕ್ಯಾಂಪ್ ಮಾಡಿಸುತ್ತಿದ್ದರು. ನೆನಪಿರಲಿ ಈಗಿನ ಗುತ್ತಿಗೆದಾರರ ಕಲ್ಚರಲ್ ಮಾಫಿಯಾ ಅವರದಾಗಿರಲಿಲ್ಲ. ಅಭಿಮಾನಿಗಳನ್ನು ದೇವರೆಂದು ಕರೆದ ಕನ್ನಡದರತ್ನ ಡಾ. ರಾಜಕುಮಾರ ಅವರಂತಹ ಮಹಾನ್ ರಂಗಚೇತನ ಕನ್ನಡ ವೃತ್ತಿರಂಗಭೂಮಿಯಿಂದ ಬಂದವರೆಂಬ ಹೆಮ್ಮೆನಮ್ಮದು. ಅಂಥವರು ಬದುಕಿದ ರಂಗಭೂಮಿಯ ಆತ್ಮಗೌರವ ಕಟ್ಟುನಿಟ್ಟಾಗಿ ಕಾಪಾಡೋಣ ಎಂಬ ರಂಗಸಂಕಲ್ಪ ಅವರ ಜನ್ಮದಿನದಂದು ಮಾಡೋಣ. ***********

ಅಪ್ಪಟ ಕನ್ನಡದ ವಿನಯ Read Post »

You cannot copy content of this page

Scroll to Top