ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಗಝಲ್

ಗಝಲ್ ಸ್ಮಿತಾ ರಾಘವೇಂದ್ರ ನಟನೆಯೋ ನಿಜವೋ ನಂಟನ್ನು ಹುಸಿಯಾಗಿಸಬೇಡ ಬಳ್ಳಿಯ ಬೇರು ಚಿವುಟಿ ಚಿಗುರೆಲೆ ಹುಡುಕಬೇಡ ತುಪ್ಪದಂಥ ಒಲವಲ್ಲಿ ಉಪ್ಪು ಬೆರೆಸುವುದು ಸುಲಭ ಒಪ್ಪು ತಪ್ಪುಗಳ ಬರಿದೆ ಕೆದಕೆದಕಿ ಕೆಡಿಸಬೇಡ ಹೊಟ್ಟೆಯೊಳಗಿನ ಕಿಚ್ಚು ಉರಿದು ಸುಟ್ಟಿದೆ ಸೆರಗನ್ನು ಸಿಹಿ ಕೊಡುವ ನೆಪದಿ ಸವಿಯ ಸೂರೆ ಮಾಡಬೇಡ ಹಸಿರೆಲೆಯಾಗೇ ಬಹುದಿನ ಇರಲಾಗದು ನಿಜ ಹಣ್ಣಾಗುವ ಮೊದಲೇ ಹಿಸಿದು ಉದುರಿಸಬೇಡ ಹುತ್ತವ ಬಡಿಬಡಿದು ಹಾವು ಸಾಯಿಸುವ ಭ್ರಮೆಬೇಡ ಯಾವ ಹುತ್ತದಲಿ ಯಾವ ಹಾವೋ ಕೈಹಾಕಬೇಡ ಎಷ್ಟು ಅರಿತರೇನು ಸೋಗಿನ ಸ್ನೇಹಗಳ “ಸ್ಮಿತ”ವೇ ಪರಿವೆಯೇ ಇಲ್ಲದೇ ಕೈ ಕೊಡವಿ ನಡೆದಾಗ ಕೊರಗಬೇಡ *******************************************

ಗಝಲ್ Read Post »

ಇತರೆ

ಲಹರಿ

ಇಂದು ಬಾನಿಗೆಲ್ಲ ಹಬ್ಬ ಚಂದ್ರಪ್ರಭ ಬಿ. ಇಂದು ಬಾನಿಗೆಲ್ಲ ಹಬ್ಬ… ಕಳೆದ ದಶಕದ ಸಿನಿಮಾ ಹಾಡೊಂದರ ಈ ಸಾಲು ಮುಂದುವರಿದಂತೆ ಗಾಳಿ ಗಂಧ, ಭೂಮಿ, ಪುಷ್ಪ ಕುಲ, ಸುಮ್ಮನಿರದ ಮನಸು, ಓಡುತಿರುವ ವಯಸು, ಉಸಿರಿಗೆ ಉಕ್ಕುವ ಎದೆ,ಮರಳು..ಕಡಲು..ಅಪ್ಪುವಲೆ – ಎಲ್ಲಕ್ಕೂ ಇಂದು ಹಬ್ಬ ಎಂದು ಬಣ್ಣಿಸುತ್ತದೆ. ತನ್ನ fast beat (ದೃತ್ ಲಯ) ನಿಂದಾಗಿ ಇಡೀ ಗೀತೆಯೇ ಕಿವಿಗೆ ಹಬ್ಬವಾಗುವ ವಿಶಿಷ್ಟ ಹಾಡು ಇದು. ಒಂದರ್ಥಲ್ಲಿ ಹೀಗೆ ಮನಸ್ಸು ಖುಷಿಯಿಂದ ಕುಪ್ಪಳಿಸಿ ತನ್ನಷ್ಟಕ್ಕೆ ತಾನೇ ಸಾಲೊಂದನ್ನು ಗುನುಗತೊಡಗುವ ಗಳಿಗೆಯೇ ಅವರವರ ಪಾಲಿನ ಹಬ್ಬ. ಇನ್ನು ಕಾಲಕಾಲಕ್ಕೆ ಆಗಮಿಸುವ ಹಬ್ಬಗಳದೂ ಒಂದು ಸೊಬಗು, ಸೊಗಸು. ಬಹುತ್ವ ಪ್ರಧಾನವಾಗಿರುವ ಭಾರತದ ನೆಲದಲ್ಲಿ ಹೆಜ್ಜೆ ಹೆಜ್ಜೆಗೆ ಭಾಷೆ, ವೇಷ, ಉಡುಪು,ಆಹಾರ – ಪದ್ಧತಿ ಇತ್ಯಾದಿ ಎಲ್ಲದರಲ್ಲಿ ಅಭೂತಪೂರ್ವ ಬದಲಾವಣೆ ಕಂಡು ಬರುತ್ತದೆ. ಅಂತೆಯೇ ಈ ನೆಲದ ಮಕ್ಕಳು ಆಚರಿಸುವ ಹಬ್ಬಗಳಲ್ಲೂ ವೈವಿಧ್ಯತೆಯದೇ ಕಾರುಬಾರು. ಬಹುತೇಕ ಹಬ್ಬಗಳು ಋತುಮಾನಕ್ಕೆ ಅನುಗುಣವಾಗಿ ಬರುವಂಥವುಗಳಾಗಿವೆ. ಬಿರು ಬಿಸಿಲ ಬೇಸಗೆ ಕರಗಿ ಮೋಡ ಮಳೆಯಾಗುವ ಹೊತ್ತಲ್ಲಿ ಆಗಮಿಸುವುದು ಶ್ರಾವಣ. ಅಂಬಿಕಾತನಯದತ್ತರ “ಶ್ರಾವಣ ಬಂತು ನಾಡಿಗೆ ಬಂತು ಬೀಡಿಗೆ ಬಂತು ಕಾಡಿಗೆ…” ಗೀತೆಯನ್ನು ಕೇಳತೊಡಗಿದರೆ ಮುಗಿಲ ಸೆರೆಯಿಂದ ಮುಕ್ತವಾದ ಮಳೆ ಧಾರೆ ಧಾರೆಯಾಗಿ ಇಳೆಯನ್ನೆಲ್ಲ ತೋಯಿಸುತ್ತಿರುವಂತೆ ಭಾಸವಾಗುತ್ತದೆ. ವೈಶಾಖದ ಧಗೆಯಲ್ಲಿ ಬಿರುಕು ಬಿಟ್ಟ ಭುವಿ ವರ್ಷ ಧಾರೆಗೆ ಮೈತೆರೆದು ಬೆಟ್ಟ, ಬಯಲು,ನದಿ,ಕಣಿವೆ,ಗಿಡ ಮರ, ಪ್ರಾಣಿ ಪಕ್ಷಿ – ಎಲ್ಲವೆಂದರೆ ಎಲ್ಲರಿಗೂ ತೊಯ್ದು ತೊಪ್ಪೆಯಾಗುವ ಸಂಭ್ರಮ. ಹದಗೊಳಿಸಿದ ತನ್ನ ಭೂಮಿಯನ್ನು ಉತ್ತಿ ಬಿತ್ತಲು ಅಣಿಯಾಗುವ ರೈತ ಬಂಧು. ಸಾಲು ಸಾಲಾಗಿ ಬರುವ ಹಬ್ಬಗಳನ್ನು ಆಚರಿಸುವ ಸಡಗರದಲ್ಲಿ ಅವ್ವಂದಿರು.. ಗುಡಿ ಗುಂಡಾರಗಳಲ್ಲಿ ವಿಶೇಷ ಪೂಜೆ, ಅಲಂಕಾರ, ತೇರೆಳೆವ ಸಂಭ್ರಮ. ನಾಡಿಗೆ ದೊಡ್ಡದೆಂಬ ಹೆಗ್ಗಳಿಕೆಯ ನಾಗರ ಪಂಚಮಿ. ಜೀಕುವ ಜೋಕಾಲಿ, ಬಗೆ ಬಗೆಯ ಉಂಡಿ ತಂಬಿಟ್ಟು, ಹೋಳಿಗೆ. ಪಂಚಮಿಯನ್ನು ಹಿಂಬಾಲಿಸಿ ಬರುವ ಗಣೇಶ ಚತುರ್ಥಿ. ಅಬಾಲ ವೃದ್ಧರಾದಿ ಎಲ್ಲರಿಗೂ ಬೆನಕನನ್ನು ಅತಿಥಿಯಾಗಿ ಕರೆತಂದು ಕೂಡ್ರಿಸುವ, ಪೂಜಿಸುವ, ಮರಳಿ ಮತ್ತೆ ಕಳಿಸಿಕೊಡುವ ಸಂಭ್ರಮ. ಹೋಳಿಗೆ, ಕಡುಬು, ಮೋದಕಗಳ ಜತೆಗೆ ಪಟಾಕಿ ಸುಡುವ, ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಆಮೋದ ಪ್ರಮೋದ. ತಕ್ಕ ಮಟ್ಟಿಗೆ ಮಳೆ ಸುರಿದಿದ್ದಾದರೆ ರೈತನ ಮೊಗದಲ್ಲೂ ಒಂದು ಹೊಸ ಕಳೆ, ಭರವಸೆ. ಕಾಳು ಕಡಿ ತಕ್ಕೊಂಡು ಗೋಧಿ, ಜೋಳ ಬಿತ್ತಲು ಕಾಯುವ ಸಮಯದಲ್ಲಿ ನವರಾತ್ರಿ ಸಡಗರ. ದೇವಿ ಆರಾಧನೆ, ಪುರಾಣ ಪುಣ್ಯ ಕಥಾ ಶ್ರವಣ..ಮಹಾನವಮಿ, ವಿಜಯದಶಮಿ. ಗೋಧಿ ಹಚ್ಚ ಹಸಿರಿನಿಂದ ಕಂಗೊಳಿಸುವ ಹೊತ್ತಲ್ಲಿ ಸಾಲು ದೀಪಗಳ ಹೊತ್ತು ತರುವ ದೀಪಾವಳಿ. ಶ್ರಾವಣದ ಮೋಡಗಳೆಲ್ಲ ಚದುರಿ ಕಾರ್ತೀಕದ ಬೆಳಕಿನ ಗೂಡುಗಳ ಹಾವಳಿ. ಹೊಸ ಬಟ್ಟೆ ಖರೀಸುವ, ಸುಣ್ಣ ಬಣ್ಣ ಬಳಿದು ಮನೆ ಸಿಂಗರಿಸುವ, ಬಗೆ ಬಗೆ ಭಕ್ಷ್ಯ ಭೋಜ್ಯ ತಯಾರಿಸುವ, ಆ ಪೂಜೆ ಈ ಪೂಜೆ, ಅಂಗಡಿಗಳ ಹೊಸ ಖಾತೆಯ ಲೆಕ್ಕ, ಮಿತ್ರರು, ಬಂಧುಗಳನ್ನು ಭೇಟಿ ಮಾಡುವ, ಆನಂದಿಸುವ ರಸ ಗಳಿಗೆ. ಗೌರಿ ಹುಣ್ಣಿಮೆ, ಎಳ್ಳಮಾವಾಸ್ಯೆ, ಸಂಕ್ರಾಂತಿಯ ಸುಗ್ಗಿ ವೈಭವ. ‌ಚರಗ ಚೆಲ್ಲುವ ವಿಶಿಷ್ಟ ಆಚರಣೆ. ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ರೈತ ಬಂಧುಗಳ ಅಪರೂಪದ ನಡೆ. ಎಳ್ಳು ಹೋಳಿಗೆ, ಸೇಂಗಾ ಹೋಳಿಗೆ, ಸಜ್ಜಿ ರೊಟ್ಟಿ, ಕಾರೆಳ್ಳು ಚಟ್ನಿ, ತರಾವರಿ ಪಲ್ಯಗಳನ್ನು ಬುತ್ತಿ ಕಟ್ಟಿಕೊಂಡು ಬೆಳೆಯ ನಡುವೆ ಕುಳಿತು ಉಣ್ಣುವ, ತೆನೆಗಟ್ಟಿದ ಕಾಳುಗಳನ್ನು ಸುಟ್ಟು ಸಿಹಿ ತೆನೆ ಸವಿಯುವ ಅನನ್ಯ ಕಾಲ. ಪ್ರಕೃತಿಯಲ್ಲೂ ಬದುಕಿನಲ್ಲೂ ಸಂಕ್ರಮಣವನ್ನು ಅರಸುವ ಮನುಜ ಸಹಜ ಹುಡುಕಾಟ. ಹಿಂಬಾಲಿಸುವ ತೆನೆ ಕಟ್ಟುವ ಹಬ್ಬ, ಕಾಮ ದಹನದ ಹೋಳೀ ಹುಣ್ಣಿಮೆ, ಪೂಜೆ ಉಪವಾಸದ ಶಿವರಾತ್ರಿ.. ಚೈತ್ರಾಗಮನ. ಎಲೆ ಉದುರಿ ಹೊಸ ಚಿಗುರು, ಮುಗುಳು ನಗುವಾಗ ಕೋಗಿಲೆಯ ಗಾನವೂ ಮಾವಿನ ಸವಿಯೂ ಬೆರೆತು ಹಿತವಾಗುವ ಬೇಸಗೆ. ಯುಗಾದಿಯ ಸಂದರ್ಭದಲ್ಲಿ ಬಾಳ್ವೆಯಲ್ಲಿ ಸಿಹಿ ಕಹಿ ಸಮ್ಮಿಲನದ ಸಂಕೇತವಾಗಿ ಬೇವು ಬೆಲ್ಲದ ಸವಿಯುಣ್ಣುವ ಸಡಗರ.‌ ಉರುಳುತ್ತ ಉರುಳುತ್ತ ಋತು ಚಕ್ರವೊಂದು ಪೂರ್ಣಗೊಂಡು ಮತ್ತೆ ಹೊಸ ನಿರೀಕ್ಷೆಗಳೊಂದಿಗೆ ಬದುಕಿನ ಬಂಡಿ ಎಳೆವ ಜೀವಗಳು. ಪ್ರತಿಯೊಂದು ಹಬ್ಬಕ್ಕೂ ಒಂದು ವೃತ್ತಾಂತ, ಕತೆಯ ಹಿನ್ನಲೆ, ಅಧ್ಯಾತ್ಮಿಕತೆಯ ಲೇಪನ. ಅದೆಂತೇ ಇರಲಿ. ಈ ಹಬ್ಬಗಳು ಇರಲೇಬೇಕೆ? ಕಾಸಿಗೆ ಕಾಸು ಕೂಡಿಸಿ ಸಾಲ ಮಾಡಿ ಹಬ್ಬ ಆಚರಿಸುವುದು ತರವೆ? ಇದ್ದವರದು ಒಂದು ಕತೆಯಾದರೆ ಇಲ್ಲದವರ ಪಾಡು ಏನು? ಇತ್ಯಾದಿ ಪ್ರಶ್ನೆ ಸಾಲು ಕಾಡುವುದು ನಿಜ. ಇರುವವರು ಇಲ್ಲದವರು, ಮಿತ್ರರು ಶತ್ರುಗಳು, ಬೇಕಾದವರು ಬೇಡದವರು – ಎಲ್ಲರೂ ಒಬ್ಬರು ಇನ್ನೊಬ್ಬರಿಗೆ ಕೊಟ್ಟು ತೆಗೆದುಕೊಂಡು ಜೀವನ ಸಹ್ಯವಾಗುವಂತೆ ಮಾಡುವ ಅವಕಾಶ ಒದಗಿಸುವುದು ಹಬ್ಬಗಳು. ತನ್ನಂತೆ ಪರರ ಬಗೆವ ಹೃದಯಗಳಿಗೆ ಕೈಯೆತ್ತಿ ಕೊಡಲು ಹಬ್ಬದ ನೆಪ ಬೇಕಿಲ್ಲ. ಆದರೆ ಪ್ರೇರಣೆಯಿರದೇ ಹಂಚಿಕೊಳ್ಳಲು ಒಪ್ಪದ ಜೀವಗಳಿಗೆ ಹಬ್ಬಗಳೇ ಬರಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ ಯಾವ ಆಯಾಮದಲ್ಲಿದ್ದರೂ ಬದುಕಿನ ಏಕತಾನತೆಯನ್ನು ನೀಗಲು ಹಬ್ಬಗಳು ಬರಬೇಕು. ಬದುಕಿಗೆ ಬಣ್ಣ ತುಂಬಿ ಬದುಕು ಹೆಚ್ಚೆಚ್ಚು ಸಹ್ಯ ಆಗುವಂತೆ ಮಾಡಲು ಹಬ್ಬಗಳು ಬೇಕು. ನಮ್ಮ ನಮ್ಮ ನಡುವಿನ ಗೋಡೆಗಳ ದಾಟಿ, ಅಹಮ್ಮಿನ ಕೋಟೆ ಒಡೆದು ಸೇತುವೆ ಕಟ್ಟಲು ಹಬ್ಬಗಳೇ ಬರಬೇಕು. ಮತ್ತೆ ಮತ್ತೆ ಬರುವ ಯುಗದ ಆದಿ ಎಲ್ಲ ಜೀವಿಗಳಿಗೂ ಚೈತನ್ಯದಾಯಿನಿ. ಹಳತನ್ನು ಕಳಚಿಕೊಂಡು ಹೊಸತಿಗೆ ತೆರೆದುಕೊಳ್ಳಲು ಹಪಾಪಿಸುವ ಜೀವಗಳ ಒಳ ತುಡಿತ. ಮತ್ತೊಂದು ಬೇಸಗೆ..ಮತ್ತೆ ಮಳೆಗಾಲ..ಉಕ್ಕುವ ನದಿ, ಕೆರೆ ತೊರೆಗಳು.. ಬರಗಾಲದ ಬವಣೆ.. ಜಲ ಪ್ರಳಯ, ಹನಿ ನೀರಿಗೆ ಹಾಹಾಕಾರ – ಎಲ್ಲವುಗಳನ್ನು ದಾಟುತ್ತ ದಾಟುತ್ತ ಮತ್ತೆ ಮತ್ತೆ ಬಂದು ಬದುಕಿಗೆ ಬಣ್ಣ ತುಂಬುವ, ಜೀವಸೆಲೆಯಾಗುವ ಹಬ್ಬಗಳದೇ ಒಂದು ಬಗೆ. ತನ್ನೊಳಗಿನ ಒಲವು ನಲಿವು, ಮಿಡಿತ ತುಡಿತಗಳಿಗೆ ಸಾಕ್ಷಿಯಾಗುವ ಜೀವ ಕಡು ತಾಪದಲ್ಲಿ ರೋಧಿಸುವಂತೆಯೇ ನಲಿವಿನಲ್ಲಿ ಹಾಡಲು ತೊಡಗುವುದು ಕೂಡ ಹಬ್ಬದ ಮಾದರಿಯೇ. ಈ ಬರಹದ ಆರಂಭದಲ್ಲಿ ನಿರೂಪಿಸಿರುವಂತೆ ಜೀವ ಕುಣಿದು ಕುಪ್ಪಳಿಸಲು ತೊಡಗಿದೆಯೆಂದರೆ ಹೃದಯದಲ್ಲಿ ನೂರು ವೀಣೆಗಳ ಸ್ವರ ಮೀಟಿದೆ ಎಂತಲೇ ಅರ್ಥ. ನಗುವು ಸಹಜದ ಧರ್ಮ ನಗಿಸುವುದು ಪರ ಧರ್ಮ| ನಗುವ ಕೇಳುತ ನಗುವುದತಿಶಯದ ಧರ್ಮ|| ನಗುವ ನಗಿಸುವ ನಗಿಸಿ ನಗುತ ಬಾಳುವ ವರವ| ಮಿಗೆ ನೀನು ಬೇಡಿಕೊಳೊ ಮಂಕುತಿಮ್ಮ|| ನಕ್ಕು ಹಗುರಾಗದೇ ಸಾಗದ ಬದುಕನ್ನು ಸಹನೀಯವಾಗಿಸಿಕೊಳ್ಳಲು ಮಂದಹಾಸವನ್ನು ಧರಿಸುವುದೇ ಇರುವ ಒಂದೇ ದಾರಿ.. ಹೆಜ್ಜೆ ಹೆಜ್ಜೆಯಲ್ಲಿ ಜತೆಯಾಗುವ ಕವಿ ಸಾಲುಗಳೊಂದಿಗೆ ಸಾಗುವಾಗ ಮತ್ತೆ ಮತ್ತೆ ನೆನಪಾಗುವವು ಇಂಥವೇ ಸಾಲು.. ಜಗವೆಲ್ಲ ನಗುತಿರಲಿ ಜಗದಳುವು ನನಗಿರಲಿ ನಾ ನಕ್ಕು ಜಗವಳಲು ನೋಡಬಹುದೆ? ನಾನಳಲು ಜಗವೆನ್ನನೆತ್ತಿಕೊಳದೆ? (ಈಶ್ವರ ಸಣಕಲ್) ನಿಮ್ಮ ತುಟಿಯ ಮೇಲೊಂದು ನಗು ಮೂಡಿದ ಕ್ಷಣ ನಿಮಗೂ ಹಬ್ಬ..ನಿಮ್ಮ ಸುತ್ತಲೂ ಇರುವವರಿಗೂ ಹಬ್ಬ.. **********

ಲಹರಿ Read Post »

ಕಾವ್ಯಯಾನ

ಕಾವ್ಯಯಾನ

ಮಣ್ಣಾಗುವ ಮುನ್ನ ಮರವಾಗುವೆ ಪ್ಯಾರಿಸುತ ನನ್ನೆಲ್ಲ ಪ್ರೀತಿ ಮಣ್ಣಾಗುವ ಮುನ್ನ ನೀ ಬಂದು ಬೀಜವ ನಡು ಇಂದಲ್ಲ, ನಾಳೆ ಎಂದಾದರೊಮ್ಮೆ ಮೊಳೆಕೆ ಬಿಡುವದು ನೋಡು ಹಸಿರಾಗಿ ಚಿಗುರಲಿ,ಮರವಾಗಿ ಬೆಳೆಯಲಿ ನಾ ಆರೈಕೆ ಮಾಡುವೆ ಬಿಡು ಹಿಂತಿರುಗಿ ನೋಡದೆ, ಮರು ಏನು ಹೇಳದೆ ಹೊಸದಾರಿ ಹಿಡಿದುಬಿಡು ಹೀಗೊಮ್ಮೆ ಬೈದುಬಿಡು, ನೆನಪಲ್ಲೆ ಕೊಂದುಬಿಡು ದೇಹಕ್ಕೆ ಉಸಿರೆ ಆಸರೆಯಂತೆ ಉಸಿರಂತೆ ಇದ್ದವಳು ನೀ ಹೋದ ಮೇಲೆ ಈ ದೇಹವೀಗ ಶವದಂತೆ ನೋಡು ನೀ ಬಂದು ಸುಟ್ಟರು ಇಲ್ಲವೇ, ಮಣ್ಣಲ್ಲಿ ಹೂತರು, ಅಲ್ಲಿ ಒಂದು ಬೀಜವ ನಡು ಮೊಳಕೆ ಬಿಡುವದು, ಮರವಾಗಿ ನಿಲ್ಲುವದು ನೋಡು…!! ತಾರೆಗಳೆಲ್ಲ ಮರುಗುವದು ನೋಡಲಾರೆ ಆಕಾಶ ಕೈಬೀಸಿ ಕರೆದರೂ ಹೋಗಲಾರೆ ಕಳೆಗುಂದ ಚಂದ್ರನ ಮುಖವನು ನೋಡಲಾರೆ ನೀ ನನ್ನ ಕ್ಷೇಮಿಸಿಬಿಡು, ಮರವಾಗಿ ಉಳಿಯಲು ಅವಕಾಶ ನೀಡಿಬಿಡು ನನ್ನ ಶವದ ಜೊತೆ ಬೀಜವ ಎಸಿದುಬಿಡು ಮರವಾಗಿ ನಿಲ್ಲುವದು ನೋಡು….!! ನೆರಳರಿಸಿ ಬರುವ , ಪ್ರೇಮಿಗಳಿಗೆ ತೊಟ್ಟಿಲು ಆಗುವೆ ಕಥೆಗಳನ್ನು ಕೇಳುವೆ ಹಾಡನ್ನು ಹೇಳುವೆ ಅವರಾದರು ಮನಬಿಚ್ಚಿ ಪ್ರೀತಿಸಲಿ, ಅಲ್ಲಿಯಾದರು ಪ್ರೀತಿಯು ಉಳಿಯಲಿ ನೀ ಬಂದು ಬೀಜವ ಎಸೆದು ಬಿಡು ಮರವಾಗಿಯೇ ಉಳಿಯುವೆ ನೋಡು….!! ****** ತಾರೆಗಳೆಲ್ಲ ಮರುಗುವದು ನೋಡಲಾರೆ ಆಕಾಶ ಕೈಬೀಸಿ ಕರೆದರೂ ಹೋಗಲಾರೆ ಕಳೆಗುಂದ ಚಂದ್ರನ ಮುಖವನು ನೋಡಲಾರೆ ನೀ ನನ್ನ ಕ್ಷೇಮಿಸಿಬಿಡು, ಮರವಾಗಿ ಉಳಿಯಲು ಅವಕಾಶ ನೀಡಿಬಿಡು ನನ್ನ ಶವದ ಜೊತೆ ಬೀಜವ ಎಸಿದುಬಿಡು ಮರವಾಗಿ ನಿಲ್ಲುವದು ನೋಡು….!! ನೆರಳರಿಸಿ ಬರುವ , ಪ್ರೇಮಿಗಳಿಗೆ ತೊಟ್ಟಿಲು ಆಗುವೆ ಕಥೆಗಳನ್ನು ಕೇಳುವೆ ಹಾಡನ್ನು ಹೇಳುವೆ ಅವರಾದರು ಮನಬಿಚ್ಚಿ ಪ್ರೀತಿಸಲಿ, ಅಲ್ಲಿಯಾದರು ಪ್ರೀತಿಯು ಉಳಿಯಲಿ ನೀ ಬಂದು ಬೀಜವ ಎಸೆದು ಬಿಡು ಮರವಾಗಿಯೇ ಉಳಿಯುವೆ ನೋಡು….!!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹರೆಯದ ಹಬ್ಬ ಗೌರಿ.ಚಂದ್ರಕೇಸರಿ. ಹಣ್ಣೆಲೆಗಳೆಲ್ಲ ಉದುರಿ ಹೊಸತೊಂದು ಚಿಗುರಿಗೆ ಹಾದಿ ಮಾಡಿಕೊಟ್ಟಿವೆ ಎಳೆಯ ಹಸಿರ ಹೊದ್ದು ತೂಗಿ ತೊನೆದಾಡುವ ಪ್ರಕೃತಿಗೆ ಮತ್ತೊಂದು ಹುಟ್ಟಿನ ಸಡಗರ, ಸಂಭ್ರಮ. ದುಂಬಿ, ಚಿಟ್ಟೆಗಳ ಝೇಂಕಾರ ಬಾನಾಡಿಗಳ ಚಿಲಿಪಿಲಿ ವಾಲಗ ಸಮಷ್ಠಿಗೆಲ್ಲ ಬಿಡುವಿಲ್ಲದ ಕಾಯಕ ಮೊದಲ ಬಾರಿ ಅರಳಿ ನಿಂತ ಕುವರಿಯಂತೆ ವಧು ಧರಿಸಿದ ನಾಚಿಕೆಯಂತೆ ಇಳೆಗೆಲ್ಲ ಹರೆಯದ ಹಬ್ಬ. ಸಿಂಗಾರಗೊಂಡ ಪ್ರಕೃತಿಗೆ ಭುವಿಯೆಲ್ಲ ಹಸಿರ ತಳಿರ ತೋರಣ ಅರಳಿ ನಿಂತ ಸುಮಗಳ ಅಕ್ಷತೆ ರಂಗೇರಿದ ಕೆನ್ನೆ ತುಂಬ ಸರ‍್ಯನೆರಚಿದ ಚೈತ್ರದೋಕುಳಿ.

ಕಾವ್ಯಯಾನ Read Post »

ಅಂಕಣ ಸಂಗಾತಿ

ಜ್ಞಾನಪೀಠ ವಿಜೇತರು

ಮಾಸ್ತಿ ವೆಂಕಟೇಶ ಅಯ್ಯಂಗಾರ್ ‘ಕನ್ನಡದ ಆಸ್ತಿ’ ಮಾಸ್ತಿ ವೆಂಕಟೇಶ ಅಯ್ಯಂಗಾರ್..! ‘ಕನ್ನಡದ ಆಸ್ತಿ’ ಎಂದೇ ಪರಿಗಣಿತರಾದರು ‘ಶ್ರೀನಿವಾಸ’ ಕಾವ್ಯನಾಮದ ಮಾಸ್ತಿ ವೆಂಕಟೇಶ ಅಯ್ಯಂಗಾರ್ಯರು..! ಅವರು ಹುಟ್ಟುವ ಕಾಲಕ್ಕೆ ಮನೆಯಲ್ಲಿ ಬಡತನವಿತ್ತು. ಒಂದು ಕಾಲಕ್ಕೆ ಶ್ರೀಮಂತಿಕೆಯಿಂದ ವಿಜೃಂಭಿಸಿದ ಕುಟುಂಬ ಅವರ ಪೂರ್ವಿಕರದು. ಮಾಸ್ತಿ ವೆಂಕಟೇಶ ಅಯ್ಯಂಗಾರ್ “ಪೆರಿಯಾತ್” ಎಂದರೆ ದೊಡ್ಡ ಮನೆಯವರು. ಅವರ ವಿದ್ಯಾಭ್ಯಾಸ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಜರುಗಿತು… ತಿರುಮಲ್ಲಮ್ಮ ದಂಪತಿಗಳಿಗೆ ೮-೬-೧೮೯೧ರಲ್ಲಿ ಜನಿಸಿದರು. ಪ್ರೌಢವಿದ್ಯಾಭ್ಯಾಸವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲೂ, ಮೈಸೂರು. ಮೈಸೂರಿನ ಮಹಾರಾಜ ಕಾಲೇಜಿನಿಂದ ಪ್ರಥಮ ದರ್ಜೆಯಲ್ಲಿ ಎಫ್.ಎ. ಪದವಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ೧೯೧೨ರಲ್ಲಿ ಬಿ.ಎ. ಮತ್ತು ೧೯೧೩ರಲ್ಲಿ ಎಂ.ಸಿ.ಎಸ್. ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದರು. ಮುಂದೆ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಎಂ.ಎ. (ಇಂಗ್ಲಿಷ್) ಪದವಿ ಪಡೆದರು. ಇವರು ೧೯೧೪ರಲ್ಲಿ ಮೈಸೂರು ಸರ್ಕಾರದ ಅಸಿಸ್ಟೆಂಟ್ ಕಮೀಷನರ್ ಆಗಿ ಕೆಲಸಕ್ಕೆ ಸೇರಿದರು. ಸರ್ ಎಂ. ವಿಶ್ವೇಶ್ವರಯ್ಯನವರ ಕೈಕೆಳಗೆ ಕೆಲಸ ಮಾಡಿದ ಮಾಸ್ತಿ ಅವರು ಸಬ್ ಡಿವಿಜನ್ ಆಫೀಸರ್ (೧೯೨೭) ಮ್ಯಾಜಿಸ್ಟ್ರೇಟ್ ಮತ್ತು ಕಂಟ್ರೋಲರ್ (೧೯೩0) ಡೆಪ್ಯುಟಿ ಕಮೀಷನರ್ (೧೯೩೪) ಎಕ್ಸೈಜ್ ಕಮೀಷನರ್ (೧೯೪0) ಮೊದಲಾದ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ೧೯೪೩ ಸ್ವಇಚ್ಛೆಯಿಂದ ಸರ್ಕಾರಿ ಸೇವೆಯಿಂದ ನಿವೃತ್ತರಾದರು… ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (೧೯೪೩-೪೮), ಅಧ್ಯಕ್ಷರಾಗಿ (೧೯೫0-೬೪) ಸೇವೆ ಸಲ್ಲಿಸಿರುವ ಇವರು ‘ಜೀವನ’ ಮಾಸಪತ್ರಿಕೆಯನ್ನು ೨೫ ವರ್ಷ ಪ್ರಕಟಿಸಿದರು. ಕನ್ನಡ ಏಕೀಕರಣಕ್ಕೆ ಶ್ರಮಿಸಿದರು. ಸಹಾಯನಿಧಿ ಮೂಲಕ ಕನ್ನಡ ಲೇಖಕರನ್ನು ಬೆಳಕಿಗೆ ತಂದರು. ಪಿಇಎನ್ ಸಂಸ್ಥೆಯ ಉಪಾಧ್ಯಕ್ಷರಾಗಿ (೧೯೬೪) ಆಯ್ಕೆಯಾಗಿದ್ದರು. ೧೯೪೨ರಲ್ಲಿ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು. ಅನೇಕ ಅಖಿಲ ಭಾರತ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ ಮಾಸ್ತಿಯವರು… ಮೈಸೂರು ಮಹಾರಾಜರು ರಾಜಸೇವಾ ಪ್ರಸಕ್ತ ಬಿರುದನ್ನು ೧೯೪೨ರಲ್ಲಿ ನೀಡಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್(೧೯೫೬), ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ(೧೯೬೮), ವರ್ಧಮಾನ ಪ್ರಶಸ್ತಿ (೧೯೮೩), ಮೈಸೂರು ವಿಶ್ವವಿದ್ಯಾನಿಲಯದ ಡಾಕ್ಟರೇಟ್(೧೯೭೭), ಭಾರತೀಯ ಜ್ಞಾನಪೀಠ ಪ್ರಶಸ್ತಿ (೧೯೮೩), ಕರ್ನಾಟಕ ಸರ್ಕಾರದ ಸನ್ಮಾನ (೧೯೮೪), ನಾಡಿನ ನಾನಾ ಸಂಸ್ಥೆಗಳಿಂದ ನೂರಾರು ಸನ್ಮಾನ, ಪ್ರಶಸ್ತಿ, ಗೌರವಗಳು ಮಾಸ್ತಿ ಅವರಿಗೆ ಸಂದಿವೆ… ಕನ್ನಡ ಸಣ್ಣಕತೆಗಳ ಜನಕರೆಂದೇ ಖ್ಯಾತಿ ಹೊಂದಿದ ಮಾಸ್ತಿ ಅವರು ನೂರಕ್ಕೂ ಮೀರಿ ಕೃತಿಗಳನ್ನು ವಿವಿಧ ವಿಷಯಗಳ ಮೇಲೆ ರಚಿಸಿ ಕನ್ನಡವನ್ನು ಬೆಳೆಸಿದವರಲ್ಲಿ ಒಬ್ಬರಾಗಿದ್ದಾರೆ. ಇಲ್ಲಿ ಅವರ ಕೆಲವು ಕೃತಿಗಳನ್ನು ಉದಾಹರಿಸಿದೆ… ಮಾಸ್ತಿ ಕನ್ನಡಿಗರಿಗೆ ಒಂದು ಆದರ್ಶ. ಎಂಥ ಕಷ್ಟ ಕಾಲದಲ್ಲೂ ಅವರು ಜೀವನವನ್ನೆದುರಿಸಿದರು. ಸಾಹಿತ್ಯ ರಚಿಸಿದಂತೆಯೇ ಸಾಹಿತ್ಯ ಪೋಷಕರಾದರು. ಜಿ ಪಿ ರಾಜರತ್ನಂ, ದ ರಾ ಬೇಂದ್ರೆಯಂತಹವರಿಗೆ ಅವರು ಆದರ್ಶರಾಗಿದ್ದರು. 1910 ರಲ್ಲಿ ಬರೆದ ‘ರಂಗನ ಮದುವೆ’ ಎಂಬ ಸಣ್ಣ ಕಥೆಗಳ ಸಂಗ್ರಹದಿಂದ ಹಿಡಿದು ಅವರು ನಿಧನರಾಗುವುದಕ್ಕೆ ಕೆಲವೇ ತಿಂಗಳುಗಳ ಹಿಂದೆ ಪ್ರಕಟವಾದ ‘ಮಾತುಗಾರ ರಾಮಣ್ಣ’ ಎಂಬ ಕೃತಿಯವರೆಗೆ ಅವರು ರಚಿಸಿದ ಕೃತಿಗಳ ಸಂಖ್ಯೆ ೧೨೩… ಇದರಲ್ಲಿ ಸಣ್ಣಕತೆಗಳು, ಕಾದಂಬರಿಗಳು, ನಾಟಕಗಳು, ವಿಮರ್ಶೆಗಳು, ಪ್ರಬಂಧಗಳು, ಧಾರ್ಮಿಕ ಕೃತಿಗಳು, ಅನುವಾದ, “ಜೀವನ” ಎಂಬ ಅವರೇ ನಡೆಸುತ್ತಿದ್ದ ಪತ್ರಿಕೆಯಲ್ಲಿ ಬರೆದ ಸಂಪಾದಕೀಯ ಲೇಖನಗಳು, ಕವಿತೆಗಳ ಸಂಗ್ರಹ, ಕಾವ್ಯ ಸೇರಿವೆ. 20ನೆಯ ಶತಮಾನದ ಆರಂಭದ ಕಾಲದಲ್ಲಿ ಕನ್ನಡ ಭಾಷೆಗೆ ಹೇಳಿಕೊಳ್ಳುವಂಥ ಪ್ರೋತ್ಸಾಹವಿರಲಿಲ್ಲ. ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಸಾಹಿತ್ಯದಲ್ಲಿ ಗಮನಾರ್ಹ ಕೆಲಸವಾಗಬೇಕಾಗಿದ್ದ ಕಾಲದಲ್ಲಿ ಮಾಸ್ತಿ ಸಾಹಿತ್ಯ ರಚನೆಯ ಕೆಲಸವನ್ನು ಕೈಗೊಂಡರು… ಮಾಸ್ತಿ ಬರೆದ ಕಾದಂಬರಿಗಳು ಎರಡು. ಜ್ಞಾನಪೀಠ ಪ್ರಶಸ್ತಿ ಗಳಿಸಿದ ಕೃತಿ ‘ಚಿಕವೀರ ರಾಜೇಂದ್ರ’ – ಕೊಡಗಿನ ಕಡೆಯ ರಾಜ ಚಿಕವೀರ ರಾಜೇಂದ್ರನನ್ನು ಕುರಿತದ್ದು, ಮತ್ತೊಂದು “ಚನ್ನಬಸವನಾಯಕ”. “ಭಾವ” – ಮಾಸ್ತಿ ಅವರ ಆತ್ಮಕಥೆ ಇರುವ ಮೂರು ಸಂಪುಟಗಳ ಗ್ರಂಥವಾಗಿದೆ… ಸಣ್ಣ ಕತೆಗಳ ಸಂಗ್ರಹ.– ಸಣ್ಣಕತೆಗಳು (೫ ಸಂಪುಟಗಳು). ರಂಗನ ಮದುವೆ. ಮಾತುಗಾರ ರಾಮಣ್ಣ. ನೀಳ್ಗತೆ.– ಸುಬ್ಬಣ್ಣ (೧೯೨೮). ಶೇಷಮ್ಮ(೧೯೭೬). ಕಾವ್ಯ ಸಂಕಲನಗಳು– ಬಿನ್ನಹ, ಮನವಿ(೧೯೨೨). ಅರುಣ(೧೯೨೪). ತಾವರೆ(೧೯೩೦). ಸಂಕ್ರಾಂತಿ(೧೯೬೯). ನವರಾತ್ರಿ(೫ ಭಾಗ ೧೯೪೪-೧೯೫೩) ಚೆಲುವು, ಸುನೀತ. ಮಲಾರ. ಶ್ರೀರಾಮ ಪಟ್ಟಾಭಿಷೇಕ (ಖಂಡಕಾವ್ಯ). ಜೀವನ ಚರಿತ್ರೆ.– ರವೀಂದ್ರನಾಥ ಠಾಕೂರ(೧೯೩೫). ಶ್ರೀ ರಾಮಕೃಷ್ಣ(೧೯೩೬). ಪ್ರಬಂಧ– ಕನ್ನಡದ ಸೇವೆ(೧೯೩೦). ವಿಮರ್ಶೆ (೪ ಸಂಪುಟ ೧೯೨೮-೧೯೩೯). ಜನತೆಯ ಸಂಸ್ಕೃತಿ(೧೯೩೧). ಜನಪದ ಸಾಹಿತ್ಯ(೧೯೩೭). ಆರಂಭದ ಆಂಗ್ಲ ಸಾಹಿತ್ಯ(೧೯೭೯). ನಾಟಕಗಳು.– ಶಾಂತಾ, ಸಾವಿತ್ರಿ, ಉಷಾ (೧೯೨೩). ತಾಳೀಕೋಟೆ(೧೯೨೯). ಶಿವಛತ್ರಪತಿ(೧೯೩೨). ಯಶೋಧರಾ(೧೯೩೩). ಕಾಕನಕೋಟೆ(೧೯೩೮). ಲಿಯರ್ ಮಾಹಾರಾಜ. ಚಂಡಮಾರುತ, ದ್ವಾದಶರಾತ್ರಿ. ಹ್ಯಾಮ್ಲೆಟ್. ಶೇಕ್ಸ್ ಪಿಯರ್ ದೃಶ್ಯಗಳು ೧,೨,೩. ಪುರಂದರದಾಸ. ಕನಕಣ್ಣ. ಕಾಳಿದಾಸ. ಅಜ್ಜನದಾರಿ, ಭಟ್ಟರಮಗಳು, ವಿಮಲಾ ಮರಿಯಾನ್. ಬಾನುಲಿ ದೃಶ್ಯಗಳು. ಕಾದಂಬರಿಗಳು.– ಚೆನ್ನಬಸವ ನಾಯಕ(೧೯೫೦). ಚಿಕವೀರ ರಾಜೇಂದ್ರ(೧೯೫೬). ಆತ್ಮಚರಿತ್ರೆ.– ಭಾವ. ಹೀಗೆ ಅನೇಕಾನೇಕ ಕೃತಿಗಳ ರಚನೆಯೊಂದಿಗೆ ಮಾಸ್ತಿ‌‌ ವೆಂಕಟೇಶ ಅಯ್ಯಂಗಾರ್ ಅವರು ಬದುಕಿ‌ ಬಾಳಿದರು..! — ಕೆ.ಶಿವು.ಲಕ್ಕಣ್ಣವರ ಕೆ.ಶಿವು ಲಕ್ಕಣ್ಣವರ

ಜ್ಞಾನಪೀಠ ವಿಜೇತರು Read Post »

ಇತರೆ

ಪ್ರಸ್ತುತ

ಮೊಬೈಲ್ ಬಳಕೆ ಹರೀಶಬಾಬು ಬಿ. ಮೊಬೈಲ್ ಬಳಕೆಯಿಂದ ಮಾನವನಿಗೆ ಉಂಟಾಗುತ್ತಿರುವ ಪರಿಣಾಮ ಅಷ್ಟು ಇಷ್ಟಲ್ಲ. ಇಂದಿನ ಗಣಕಯಂತ್ರ ಯುಗದಲ್ಲಿ ಎಲ್ಲವೂ ಅಂತರ್ಜಾಲ ಆಧಾರಿತ ಗಣಕಯಂತ್ರದ ಕೆಲಸಳಾಗಿವೆ. ದಿನೇ ದಿನೇ ತಂತ್ರಜ್ಞಾನ ಬಳಕೆ ಹೆಚ್ಚಾಗುತ್ತಾ ಹೋದ ಕಾರಣದಿಂದ ಮಾನವನ ಬರವಣಿಗೆ ಮತ್ತು ಮಾನವ ಮಾಡುವ ಕೆಲಸಗಳು ಕಮ್ಮಿ ಆಗಿವೆ. ಆದ ಕಾರಣದಿಂದ ಎಲ್ಲರೂ ಗಣಕ ಯಂತ್ರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿರಲೇ ಬೇಕಾದ ಸಂತತಿ ಈ ಗಣತಂತ್ರ ಯುಗದ ಜನರಿಗೆ ಎದುರಾಗಿದೆ. ಮೊದಲು ಪ್ರತಿಯೊಂದು ಕಛೇರಿಗಳಲ್ಲಿಯೂ ಹಿಂದೆ ಬರವಣಿಗೆ ವ್ಯವಹಾರ ಹೊಂದಿತ್ತು ಆದರೆ ಇವತ್ತು ಆ ಸೌಲಭ್ಯ ಕಣ್ಣುಮರೆಯಾಗಿದೆ.ಇದರಿಂದ ಜನತೆಗೆ ಅನುಕೂಲ ಅನಾನುಕೂಲ ಎರಡು ಉಂಟಾಗಿದೆ. ಈ ಗಣತಂತ್ರ ಯುಗ ದಿನ ದಿನಕ್ಕೂ ರಂಗು ಹೇರುತ್ತಿದ್ದ ಕಾರಣದಿಂದ ಇಡೀ ಪ್ರಪಂಚವೇ ಗಣತಂತ್ರಮಯವಾಗಿದೆ . ಗಣಕಯಂತ್ರದಲ್ಲಿ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಅರಿತ ಈ ಜನತೆ ಅದರ ಸೇವೆಗಳನ್ನು ಅಂಗೈಯಲ್ಲಿ ನೋಡುವಾಗೆ ಸ್ಮಾಟ್ ಪೋನ್ ಬಳಕೆ ಕಂಡು ಕೊಂಡರು. ಎಲ್ಲಾ ಸೌಲಭ್ಯಗಳು,ಸೇವೆಗಳನ್ನು ಮತ್ತು ವ್ಯವಹಾರವನ್ನು ಈ ಜಂಗಮಗಂಘೆಯಲ್ಲಿಯೇ ನಡೆಸಲು ಪ್ರಯತ್ನಸಿದರು ಎಲ್ಲಾ ಸೇವೆಗಳು ಸರಾಗವಾಗಿ ಮತ್ತು ಸುಲಭವಾಗಿ ಸೇವೆಗಳು ದೊರೆಯುವ ಕಾರಣಾತರದಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಮೊಬೈಲ್ ಬಳಕೆ ಹೇರಳವಾಗಿ ಬೆಳೆಯಿತು. ಬಳಕೆಯನ್ನು ನಾನ ಉಪಯೋಗಕ್ಕೆ ಬಳಸುತ್ತಾ ಹೋದಂತೆ ಎಲ್ಲಾ ಗಣತಂತ್ರ ಯುಗದಲ್ಲಿ ಗಣಕಯಂತ್ರದ ಬಳಕೆ ಗಣನೀಯವಾಗಿ ಇಳಿಕೆಯಾಗುತ್ತಾ ಎಲ್ಲಾ ಸೇವೆಗಳು ಮೊಬೈಲ್ ನಲ್ಲಿ ದೊರೆಯುವಂತೆ ತಂತ್ರಜ್ಞಾನವನ್ನು ವಿಜ್ಞಾನಿಗಳು ಸೃಷ್ಟಿಸಿದರು . ಎಲ್ಲಾ ಸೇವೆಗಳು ಇದರಲ್ಲೇ ದೊರೆಯುವ ಕಾರಣದಿಂದ ಅಂಗೈಯಲ್ಲಿ ಇಡೀ ಪ್ರಪಂಚದ ಹಾಗು ಹೋಗುಗಳು ಮತ್ತು ಬ್ಯಾಕಿಂಗ್, ಪೋಸ್ಟ್ ,ಮಾಹಿತಿ ವ್ಯವಸ್ಥೆ ಮತ್ತು ದಿನನಿತ್ಯದ ಚಟುವಟಿಕೆಗಳು ಮತ್ತು ಇನ್ನೂ ಇತರೆ ಕಾಯ೯ಗಳ ಬಳಕೆಯಲ್ಲಿ ತುಂಬಾ ಅನುಕೂಲಕರವಾದ ಸೌಲಭ್ಯ ಒದಗಿಸುವ ತಂತ್ರಜ್ಞಾನ ಸಿಕ್ಕಿತು. ಯಾವುದೇ ಒಂದು ವಸ್ತುವಿನ ಬಳಕೆ ನಿಯಮಿತವಾಗಿ ಇದ್ದರೆ ಅದರಿಂದ ನಮಗೆ ಅನುಕೂಲವೂ ಉಂಟು ಮತ್ತೆ ನಮ್ಮ ಜೀವನಕ್ಕೆ ಉಳಿತೇ ಅದನ್ನು ವೈಪರೀತವಾಗಿ ಬಳಸಿದರೆ ಅದರ ಪರಿಣಾಮಕ್ಕೆ ನಾವೆ ಹೊಣೆಗಾರರು. ಇತ್ತೀಚಿನ ದಿನಗಳಲ್ಲಿ ಇಂದು ಒಂದು ರೀತಿಯ ಮಾರಕವಾಗಿ ಬೆಳೆಯುತ್ತಾ ಬಂದು ಇದೆ ಈ ಸ್ಮಾಟ್೯ ಫೋನ್ ಬಳಕೆ. ದಿನೇ ದಿನೇ ತಂತ್ರಜ್ಞಾನ ಹೆಚ್ಚುತ್ತಾ ಹೋದಂತೆ ಮೊಬೈಲ್ ಬಳಕೆಯೂ ಕೂಡ ಹೆಚ್ಚಾಗುತ್ತ ಹೋದಂತೆ ಎಲ್ಲಾ ಅದರ ಪರಿಣಾಮ ಜನರ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಾ ಬಂದು ಇದೆ. ಶಾಲಾ ಕಾಲೇಜಿನಿಂದ ಹಿಡಿದು ಒಬ್ಬ ಬಹುದೊಡ್ಡ ನೌಕರಿ ಉದ್ಯಮಿವರೆಗೂ ಈ ಸ್ಮಾಟ್ ಪೋನ್ ಬಳಕೆಯ ಪರಿಣಾಮ ತುಂಬಾ ಅಗಾದವಾಗಿದೆ. ಎಲ್ಲಾ ಸೇವೆಗಳು ಇದರಲ್ಲೇ ಸಿಗುತ್ತಿರುವುದರಿಂದ ಈ ಬಳಕೆ ವೈಪರೀತವಾಗಿದೆ. ನೆಟ್ ಬ್ಯಾಕಿಂಗ್ ಸೇವೆ ಮೊಬೈಲ್ ನಲ್ಲಿಯೇ ದೊರೆಯುತ್ತಿರುವ ಗೂಗಲ್ ಪೇ,ಪೋನ್ ಪೇಗಳಿಂದ ಎಷ್ಟೋ ಉದ್ಯಮಿಗಳು ನೌಕರರು ತಿಂಗಳು ಗಟ್ಟಲೇ ದುಡಿದು ಸಂಪಾದಿಸಿದ ಲಕ್ಷ ಲಕ್ಷ ಹಣವನ್ನು ಕಳೆದುಕೊಂಡು ಇದ್ದಾರೆ .ತಂತ್ರಜ್ಞಾನ ಹೆಚ್ಚಾದ ಕಾರಣದಿಂದ ಎಲ್ಲೆಡೆಯೂ ಈ ಬ್ಯಾಕಿಂಗ್ ವ್ಯವಸ್ಥೆ ಬಳಕೆ ಹೆಚ್ಚು ಪ್ರಗತಿಯಲ್ಲಿ ಇದೆ. ಇದರಿಂದ ಹಣ ದೋಚೊ ಖದೀಮರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಳವಾಗಿದೆ. ನಾವು ದಿನನಿತ್ಯ ದೃಶ್ಯ ಮಾಧ್ಯಮ ಮತ್ತು ದಿನ ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ರೆಡಿಯೋದಲ್ಲಿ ಕೇಳುತ್ತಾ ಇದ್ದೀವಿ ಗೂಗಲ್ ಪೇ ಮತ್ತು ಪೋನ್ ಪೇ ಗಳಿಂದ ಬಿಲ್ ಪಾವತಿ ಮಾಡಿಸಿಕೊಳ್ಳುವ ನೆಪದಲ್ಲಿ ನಮ್ಮ ಬ್ಯಾಂಕ್ ಖಾತೆಯ ಹಣವನ್ನು ದೋಚಿದ್ದಾರೆ ಎಂದು ಇದೇ ಸಮಸ್ಯೆಯ ಬಗ್ಗೆ ಪೋಲಿಸ್ ಮೊರೆ ಹೊದ ಎಷ್ಟು ಜನರು ಇದ್ದಾರೆ. ಮೊಬೈಲ್ ಬಳಕೆಯಿಂದಾ ಉಂಟಾಗುತ್ತಿರುವ ನಷ್ಟ ಈ ಸಮಾಜಕ್ಕೆ ಅಷ್ಟು ಇಷ್ಟಲ್ಲ ಅದರ ಉಪಯೋಗಿಂತಲೂ ಅದರ ಅನಾನುಕೂಲದ ಪರಿಣಾಮವೇ ಹೆಚ್ಚು ಭರಿಸುತ್ತಿದೆ ಈ ಸಮಾಜ. ಹುಟ್ಟುವ ಪ್ರತಿಯೊಂದು ಕೂಸು ಕೂಡ ಜಂಗಮಗಂಘೆಯಲ್ಲಿ ಕಲಿಯುತ್ತಾ ನಲಿಯುತ್ತಾ ಆಡುತ್ತಾ ಬೆಳೆಯುತ್ತಾ ಬಂದಿದೆ. ತಂದೆ ತಾಯಿಗಳು ಮಗುವಿನ ನಿಮಾ೯ಪಕರು ಅವರ ಭವಿಷ್ಯಕ್ಕೆ ಮಾರಕವಾಗುವ ರೀತಿಯಲ್ಲಿ ಈ ಸ್ಮಾಟ್೯ ಪೋನ್ ಬಳಕೆ ಅವರಿಗೆ ತೋರಿಸಿ ಅವರ ಜೀವನಕ್ಕೆ ಬಹುದೊಡ್ಡ ಪಿಡುಕು ಉಂಟು ಮಾಡುತ್ತಿದ್ದಾರೆ. ಏನ್ ತಿಳಿಯದ ಮಗುವಿಗೆ ಇವರು ಈ ಜಂಗಮಗಂಘೆ ಕೊಟ್ಟು ಅವರ ಭವಿಷ್ಯದ ಹಾದಿಗೆ ಅಡಚಣೆಯನ್ನು ಉಂಟು ಮಾಡುತ್ತಾರೆ.ಹಾಗೆಯೇ ಅವರು ಎಷ್ಟೇ ಅಲ್ಲದೇ ಇನ್ನೂ ಬುದ್ದಿವಂತ ಹಾಗೂ ವಯಸ್ಕರು ಕೂಡ ಈ ಜಂಗಮಗಂಘೆ ಎಂಬಾ ಪೀಡೆಯಿಂದಾ ಹಾಳುಗುತ್ತಾದ್ದಾರೆ. ಈ ಮೊಬೈಲ್ ಎಂಬ ಪೀಡೆ ಕೆಲವು ಜೀವಗಳನ್ನೇ ಬಲಿ ತೆಗೆದುಕೊಳ್ಳುತ್ತಾ ಬಂದು ಇದೆ. ಪ್ರೀತಿ ವಿಷಯದಲ್ಲಿ ಮೊಬೈಲ್ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಕಾಣದೂರಿನ ಚಂದಮಾಮಗಳಿಗೆ ತನ್ನ ಊರಿನ ಚಂದಮಾಮನಾಗೆ ಕಾಣಿಸುವಂತೆ ಪರಿಚಯ ಮಾಡುತ್ತದೆ ಈ ಮೊಬೈಲ್. ಕಾಣದೂರಿನ ಚಂದಮಾಮಗಳಿಗೆ ಪ್ರೀತಿಯಲ್ಲಿ ಪೋನ್ ಮೆಸೆಜ್ಗಳು ಬೀಗರು ಪಾತ್ರದಲ್ಲಿ ಈ ಮೊಬೈಲ್ ಹೊಂದಿದೆ. ಎಲ್ಲೋ ಹುಟ್ಟಿ ಬೆಳೆದ ಈ ಪ್ರೀತಿಗೆ ಮೊಬೈಲ್ ಸೂತ್ರದಾರಿಯಾಗಿ ಕೆಲಸ ಮಾಡುತ್ತದೆ. ಪ್ರೀತಿ ಎಂಬಾ ಡ್ರಾಮದಲ್ಲಿ ಸಂಗೀತ ನಿರ್ದೇಶಕರಾಗಿ ಈ ಮೊಬೈಲ್ ಪಾತ್ರವಹಿಸುತ್ತದೆ. ಸಿನೆಮಾ,ಮೋಜು, ಮಸ್ತಿ ,ಪಾಟಿ೯,ಬರ್ತಡೇ, ದೇವಾಲಯ, ಇನ್ನೂ ಮುಂತಾದವುಗಳಿಗೆ ಕರೆಯ್ಯೋಲೆ ಕಳಿಸುವ ಆಹ್ವಾನ ಪತ್ರಿಕೆಯ ಪಾತ್ರವನ್ನು ಈ ಮೊಬೈಲ್ ನಿವ೯ಹಿಸುತ್ತದೆ. ಪ್ರಿಯತಮೆ ಮತ್ತು ಪ್ರಿಯಕರನ ನಡುವೆ ಒಂದು ರೀತಿಯ ಮಧ್ಯವರ್ತಿಯಾಗಿ ಬಹು ಮುಖ್ಯವಾಗಿ ಕಾಯ೯ನಿವ೯ಹಿಸುತ್ತದೆ. ಭಯಕರವಾದ ಪ್ರೀತಿ ರಹಸ್ಯಗಳಲ್ಲಿ ಸಲ್ಲದ ಕಾಯ೯ಗಳು ಅಗತ್ಯಕ್ಕೆ ಸಮಯಕ್ಕೆ ತಕ್ಕಂತೆ ನಡೆಯದೇ ಹೋದಾಗ ಕೊನೆಗೆ ಜವರಾಯನ ಪಾತ್ರವಾಗಿಯು ಕೂಡ ಈ ಮೊಬೈಲ್ ನಿವ೯ಹಿಸುತ್ತದೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆಯಿಂದ ಹೋದ ಪ್ರಾಣಗಳೆಷ್ಟೋ. ಟ್ರಾಫಿಕ್ನಲ್ಲಿ ಮೊಬೈಲ್ ಬಳಕೆ ಮಾಡುತ್ತಾ ಚಾಲನೆ ಮಾಡುವ ಸಮಯದಲ್ಲಿ ಅರಿವು ಇಲ್ಲದೇ ಅಪಘಾತಕ್ಕೆ ಒಳಪಟ್ಟು ಮೃತಪಟ್ಟ ಸವಾರರು ಎಷ್ಟು? ಅವಘಾತದಿಂದ ನರಳುತ್ತಿರುವವರು ಎಷ್ಟು? ದಿನೇ ದಿನೇ ಇದರಿಂದ ಸಾವಿಗೀಡಾದವರ ಸಂಖ್ಯೆ ಹೆಚ್ಚಾಗುತ್ತಾ ಹೋಗಿದೆ. ವಾಹನ ಚಾಲನೆ ಮಾಡುವಾಗ ಮೊಬೈಲ್ ಬಳಕೆಯನ್ನು ಮತ್ತು ಪ್ರಯಾಣದ ಬ್ಯಾಸರವನ್ನು ನೀಗಲು ಇಯರ್ರ್ಪೋನ್ ಗಳಿಂದ ಸಂಗೀತವನ್ನು ಆಲಿಸುತ್ತಾ ಅಥವಾ ಬೇರೊಬ್ಬರ ಬಳೀ ಪೋನ್ ನಲ್ಲಿ ಮಾತನಾಡುತ್ತ ಪ್ರಯಾಣ ಮಾಡಬೇಕಾದರೆ ಹಿಂದೆ ಬರುವಂತಹ ವಾಹನಗಳ ಶಬ್ಧ ಸರಿಯಾಗಿ ಚಾಲಕನಿಗೆ ಕೇಳಿಸದ ಕಾರಣದಿಂದ ನಾವು ಓವರ್ಟೇಕ್ ಮಾಡಲು ಅಥವಾ ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಬದಲಾಗುವಾಗ ಹಿಂದಿನ ವಾಹನಗಳ ಶಬ್ಬ ನಮಗೆ ಕೇಳಿಸಿಕೊಳ್ಳದೇ ಸರಕ್ಕನೆ ನಮ್ಮ ವಾಹನವನ್ನು ಒಂದು ಭಾಗದಿಂದ ಇನ್ನೋಂದು ಭಾಗಕ್ಕೆ ತಿರುಗಿಸುತ್ತೇವೆ ಆಗ ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ಹತೋಟಿಗೆ ಬರದೆ ನಮ್ಮ ಮೇಲೆ ಹರಿದು ಬಿಡುತ್ತವೆ ಆಗ ನಾವು ಸಾವನ್ನಪ್ಪಬೇಕಾಗುತ್ತದೆ. ಮತ್ತು ಪಾದಚಾರಿಗಳು ಮೊಬೈಲ್ ಗೇಮ್,ಮೆಸೆಜ್,ವಿಡಿಯೋ ನೋಡುವ ಪರಿಯಲ್ಲಿಯೇ ರಸ್ತೆಗಳನ್ನು ದಾಟುತ್ತಾರೆ ಅವರಿಗೆ ಮುಂದೆ ಹಿಂದೆ ಬರುವ ವಾಹನಗಳ ಬಗ್ಗೆ ಅರಿವೆ ಇರುವುದಿಲ್ಲ. ಹಿಂದಿನಿಂದ ರಭಸವಾಗಿ ಬಂದ ವಾಹನಗಳು ಚಾಲಕನ ನಿಯಂತ್ರಣಕ್ಕೆ ಬಾರದೇ ಪಾದಚಾರಿಗಳ ಮೇಲೆ ಹರಿದು ಬಿಡುತ್ತವೆ. ಬದುಕ ಸಾವುಗಳ ನಡುವೆ ಹೋರಾಟ ಮಾಡುತ್ತಾ ಜೀವನ ಕಳೆಯಬೇಕು ಆಗುತ್ತದೆ ಆದ್ದರಿಂದ ಇವು ಈ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸೂಕ್ತವಾದ ರೀತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ಈ ಮೊಬೈಲ್ ಬಳಕೆ ಮಾಡಿಕೊಂಡು ಆರಾಮಾಗಿ ಜೀವನ ನಡೆಸುವುದು ಮಾನವ ಜೀವನಕ್ಕೆ ಒಳಿತು. ಇನ್ನೂ ಕೆಲವರು ಮೊಬೈಲ್ ನಲ್ಲಿ ಸಿಗುವ ನಾನ ಬಗೆಯ ಅನಪೇಕ್ಷಿತ ಮಾಹಿತಿಯನ್ನು ತಿಳಿದುಕೊಂಡು ಅವರ ಮನಸ್ಸಿನ ಮೇಲೆ ಮಾನಸಿಕ ಒತ್ತಡವನ್ನು ತಂದುಕೊಳ್ಳುತ್ತಾರೆ. ಮತ್ತೆ ಮೊಬೈಲ್ ನಲ್ಲಿ ಬರುವ ಆಶೀಲಕರವಾರ ವಿಡಿಯೋ ಮತ್ತು ಪೋಟೋ ನಾನ ಬಗೆಯ ಮನರಂಜನೆ ಕಾಯ೯ಗಳನ್ನು ನೋಡಿ ಅವರ ಮನದಲ್ಲಿ ಕಾಮುಕತೆಯ ಹೆಚ್ಚಾಗುವ ಸಂತತಿಗಳು ಕೂಡ ಹೆಚ್ಚಾವ ಸಾಧ್ಯತೆಗಳೂ ಕೂಡ ಇವೆ. ಮನದಲ್ಲಿ ಕಾಮುಕ ಮಾನೋಭಾವ ಹೆಚ್ಚಾಗಿ ಸಮಾಜದಲ್ಲಿ ನಾನ ಅಹಿತಕರ ಚಟುವಟಿಕೆಗಳಿಗೆ ಎಡೆಮಾಡಿಕೊಡುತ್ತಿದೆ ಈ ಮೊಬೈಲ್ ನಲ್ಲಿ ದೊರೆಯುವ ಕೆಲವು ಸನ್ನಿವೇಶಗಳು. ಮೊಬೈಲ್ ಬಳಕೆ ಹೆಚ್ಚಾಗಿ ಬಳಸುತ್ತಿರುವುದರಿಂದ ಅವರ ಅರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತ. ಮಾನವರಲ್ಲಿನ ಏಕಾಗ್ರತೆ ಮಟ್ಟ, ನೆನಪಿನ ಶಕ್ತಿ,ದೃಷ್ಟಿ ದೋಷ ಮತ್ತು ಬುದ್ದಿ ಶಕ್ತಿ ಎಲ್ಲವನ್ನೂ ಕಳೆದುಕೊಳ್ಳತ್ತಾ ಇದ್ದಾರೆ. ಇನ್ನೂ ಕೆಲವರು ವೈಪರೀತ್ಯ ಸ್ಟಾರ್ಟ್ ಪೋನ್ ಬಳಕೆಯಿಂದ ಬುದ್ದಿ ಮಾದ್ಯರು ಹಾಗಿರುವ ಕೆಲವು ಸನ್ನಿವೇಶಗಳನ್ನು ನಾವು ಈ ಸಮಾಜದಲ್ಲಿ ನೋಡುತ್ತಿದ್ದೇವೆ.ಒಟ್ಟಾರೆ ನಾವು ಮೊಬೈಲ್ ಅನ್ನು ಒಳ್ಳೆಯತನವಾಗಿ ಬಳಸಿಕೊಂಡರೇ ನಮ್ಮ ವೃತ್ತಿಪರ ಜೀವನಕ್ಕೂ ಮತ್ತು ಸಾಮಾಜಿಕ ಜೀವನಕ್ಕೂ ಅನುಕೂಲವಿದೆ .ಕೆಟ್ಟದಕ್ಕೆ ಬಳಸಿಕೊಂಡರೇ ಖಂಡಿತವಾಗಿಯೂ ಕೆಟ್ಟಪರಿಣಾಮಗಳು ಬೀರುವ ಸಾಧ್ಯತೆಗಳು ಹೆಚ್ಚಿರುತ್ತವೆ .ಎಷ್ಟು ಕೆಟ್ಟ ಪರಿಣಾಮಗಳು ಇವೆಯೋ ಎಷ್ಟೋ ಒಳ್ಳೆ ಅನುಕೂಲಗಳು ಸಹಾ ಇವೆ. ಬಳಕೆಯ ಆಯ್ಕೆ ಬಳಕೆಗಾರ ಕೈಯಲ್ಲಿ ಇರುತ್ತದೆ ಒಳ್ಳೆಯದಕ್ಕೆ ಬಳಸಿ ಜ್ಞಾನ ಸಂದಾದನೆಗೆ ಅನುಕೂಲ ಕಲ್ಪಿಸಿಕೊಳ್ಳಿ ನಿಮ್ಮ ಅಮೂಲ್ಯವಾದ ಜೀವನದಲ್ಲಿ. “ ಮೊಬೈಲ್ ಬಳಕೆ ಮಿತವಿರಲಿ ಜೀವನಕ್ಕೆ ಒಳಿತಾಗಿರಲಿ “ ********

ಪ್ರಸ್ತುತ Read Post »

ಕಾವ್ಯಯಾನ

ಕಾವ್ಯಯಾನ

ಇಂತಿಷ್ಟೇ ಮನವಿ. ಮಧುಸೂದನ ಮದ್ದೂರು ಕನಸಲು ನೀ ಕಾಡುವೆ ಇಪ್ಪತ್ತು ವರುಷದ ಬಳಿಕ ಬಂದ ಓಲೆಯಂತೆ… ಓಲೆಯನ್ಬು ಬಿಚ್ಚಲು ಒಲೆಯಲ್ಲಿ ಕಾದು ಕಾದಬೆಚ್ಚಗಿನ ನೆನಪುಗಳು ನೆನಪುಗಳ ಬೆನ್ನಟ್ಟಲು ಮಾಯಜಿಂಕೆ ಬೆನ್ನಟ್ಟಿದಂತೆ.. ಬೆನ್ನಟ್ಟುತ್ತ ಬೆವರುತಾ ಬೇಸರಿಸಿ ಕೂರಲು ಸೋತನೆಂಬ ಅಪಮಾನದ ಕುದಿ… ಕುದಿ ಹೃದಯವಿದು ಕಾಯಿಸದೇ ಬಂದು ಬಿಡು ನನ್ನದೆಗೆ ನಿನ್ನುಡುಗ ಗಿಡುಗ ಇನ್ನೂ ಕಾಯಲಾರ… ಕಾದು ಸಂಭ್ರಮಿಸಲು ವಯಸ್ಸು ಮೀರಿದೆ ಬೆಳ್ಳಿಗೂದಲು ಇಣುಕಿವೆ.. ಇಣುಕಿದ ಬೆಳ್ಳಿಗೂದಲಿನಲ್ಲೂ ನಿನ್ನ ಬಂಗಾರದ ನೆನಪು ಒಸರಿವೆ.. ಬಂದು ಬಿಡು ಈ ಪ್ರೇಮ ಫಕೀರನ ಎದೆಯೊಮ್ಮೊಮ್ಮೆ ಹೊಕ್ಕಿಬಿಡು ಹಳೆಯ ನೆನಪುಗಳ ತೂರಿಬಿಡು.. ಇಂತಿಷ್ಟೆ ಮನವಿ….. ******

ಕಾವ್ಯಯಾನ Read Post »

ಇತರೆ

ಪ್ರವಾಸ ಕಥನ

ಮರೀನ್ ಡ್ರೈವ್ ಎಂಬ ಮೋಹಕ ತಾಣ ಸ್ಮಿತಾ ರಾಘವೇಂದ್ರ ಮರೀನ್ ಡ್ರೈವ್ ಎಂಬ ಮೋಹಕ ತಾಣ ಮೊದಲ ಬಾರಿಗೆ ಮುಂಬೈಗೆ ಭೇಟಿ ಕೊಡುತ್ತಿರುವ ನನಗೆ.. ಮುಂಬೈ ಜನ ಜೀವನ ನೋಡಬೇಕು ಎಂಬ ತೀವ್ರವಾದ ತುಡಿತವಿತ್ತು.. ಯಾಕೆಂದರೆ ಕಾಯ್ಕಿಣಿ, ಮತ್ತು ಚಿತ್ತಾಲರ ಕಥೆಗಳಿಂದ ಮುಂಬೈ ನಗರಿಯ ಪೂರ್ಣ ಚಿತ್ರಣವೊಂದು ನನ್ನ ಮನಃಪಟಲದೊಳಗೆ ಗಿರಕಿ ಹೊಡೆಯುತ್ತಲೇ ಇತ್ತು.. ಬಿಡದೇ ಕಾಡಿದ ಕಥೆಗಳ ಎಳೆ ಹಿಡಿದು ಕಳೆದು ಹೋದ ಮಗುವೊಂದು ತಾಯಿ ಹುಡುಕುವಂತೆ. ಬೆರಗು ಮತ್ತು ಆಸೆ ಕಂಗಳಲ್ಲಿ, ಇಡೀ ನಗರ ಬ್ಯಾಟರಿ ಹಿಡಿದು ಹುಡುಕುವ ಉಮೇದು ಹೊಂದಿದ್ದೆ. ಯಾವುದೇ ವೆಹಿಕಲ್ ಬಳಸದೇ ರೈಲು ಮತ್ತು ನಡಿಗೆಯ ಮೂಲಕ ಸುತ್ತಿ ಸುತ್ತಿ ಒಂದಿಷ್ಟು ಸಂತ್ರಪ್ತಭಾವ. ಎಂದಿಗೂ ನಿದ್ರೆ ಮಾಡದ ನಗರ, ಪ್ರತಿ ಕನಸನ್ನು ಜೀವಂತಗೊಳಿಸುವ ನಗರ, ರಾತ್ರಿಯೆಲ್ಲಾ ಪಾರ್ಟಿ ಮಾಡುವ ನಗರವೂ ​​ಹೌದು! ಮುಂಬಯಿಯಲ್ಲಿನ ರಾತ್ರಿಜೀವನವು ಯಾರನ್ನಾದರೂ ಬೆಚ್ಚಿ ಬೀಳುವಷ್ಟು ಬೆರಗುಗೊಳಿಸುತ್ತದೆ, . ಚಂದ್ರನು ಅಂತಿಮವಾಗಿ ವಿದಾಯ ಹೇಳುವ ಸಮಯಕ್ಕೆ ನಕ್ಷತ್ರಗಳು ಹೊರಬಂದ ಕ್ಷಣದಿಂದಲೇ, ಮುಂಬೈಯ ರಾತ್ರಗಳು ಬಹಳಷ್ಟು ಸೋಜಿಗ ವಾಗಿ ತೋರುತ್ತದೆ. ರಿಕ್ಷಾವಾಲಾ ಹತ್ತಿರ ಕೇಳಿದ್ವಿ ಇಲ್ಲಿ ಮರೀನ್ ಡ್ರೈವ್ ಅಂತ ಇದೆಯಲ್ಲ ಅದೆಲ್ಲಿ ಇದೆ,ಅಂದಿದ್ದಕ್ಕೆ ಅಯ್ಯೋ,, ಅದಾ!! ಅಲ್ಲಿ ಬರೀ ಜೋಡಿ ಜೀವಗಳೇ ಇರೋದು ನೋಡೋಕೆ ಅಂತ ಏನಿಲ್ಲ ಅಲ್ಲಿ ಅವರಾಡುವ ಮಂಗಾಟ ನೋಡೋಕೆ ಸಿಗುತ್ತೆ ಅಷ್ಟೇ.. ಅಂತ ಮೂಗು ಮುರಿದು ಮುಗುಳ್ನಕ್ಕಿದ್ದ.. ಅಮಿತಾಬ್ ಬಚ್ಚನ್ ತನ್ನ ಆರಂಭಿಕ ದಿನಗಳನ್ನು ಮುಂಬೈನಲ್ಲಿ ಮೆರೈನ್ ಡ್ರೈವ್‌ನಲ್ಲಿ ಬೆಂಚ್ ಮೇಲೆ ಮಲಗಿದ್ದನೆಂದು ಎಲ್ಲೋ ತಿಳಿದುಕೊಂಡ ನನಗೆ ಅದನ್ನು ನೋಡಲೇ ಬೇಕಾಗಿತ್ತು.. ಮತ್ತು ಇಲ್ಲಿ ಚಿತ್ರೀಕರಿಸಲಾದ ಚಲನಚಿತ್ರಗಳಾದ ಮುಕದ್ದಾರ್ ಕಾ ಸಿಕಂದರ್, ಸಿಐಡಿ , ವೇಕ್ ಅಪ್ ಸಿಡ್,ಹೀಗೇ ಅನೇಕ ಚಿತ್ರ ಗಳು ಸಾಗರ ಭಾವಪೂರ್ಣ ಉಪಸ್ಥಿತಿಯನ್ನು ಮನಸುರೆಗೊಳ್ಳುವಂತೆ ಚಿತ್ರೀಕರಿಸಿದ್ದು ನೋಡಿದ್ದೆ. ಅವೆಲ್ಲ ಸೆಳೆತಗಳು ಒಟ್ಟುಗೂಡಿ ನನ್ನ ಆ ಪ್ರದೇಶದ ಹೆಬ್ಬಾಗಿಲಿಗೆ ತಂದು ನಿಲ್ಲಿಸಿತ್ತು. ಮರೀನ್ ಡ್ರೈವ್ ಸಮುದ್ರದ ಅಭಿಮುಖವಾಗಿರುವ, ಜಗತ್ತಿನ ಪ್ರಸಿದ್ಧ ಚೌಪಾಟಿ ಕಡಲತೀರ. . ಇಲ್ಲಿನ ಮುಸ್ಸಂಜೆ ಹಾಗೂ ಬೆಳಕು, ಕಡಲ ತೀರದ ನೈಸರ್ಗಿಕ ಸೌಂದರ್ಯದ ನೋಟವನ್ನು ಒದಗಿಸುತ್ತವೆ. ರಥವೇರಿಬರುವ ರವಿ ಸದ್ದಿಲ್ಲದೇ ಕಡಲಿನ ಜೊತೆಗೆ ಸರಸ ಸಲ್ಲಾಪದಲ್ಲಿ ತೊಡಗುತ್ತಾನೆ..ರಾತ್ರಿ ಪೂರ್ತಿ ಮಡಿಲೊಳಗೆ ಮಲಗಿದವನ ಇಂಚಿಂಚೇ ಹುರಿದುಂಬಿಸಿ ಕಳುಹಿಸುತ್ತಿರುವಂತೆ ಭಾಸವಾಗುತ್ತದೆ.. ದಿನವೆಲ್ಲ ದಣಿದ ಅದೇ “ಇನ”ನ ಮತ್ತೆ ಬಾಚಿ ಮಡಿಲೊಳಗೆ ಹುದುಗಿಸಿಕೊಳ್ಳುವ ಕಡಲ ಪ್ರಕ್ರಿಯೆಗೆ ನೋಡುತ್ತ ಕುಳಿತವರೂ ನಾಚಿ ನೀರಾಗಿ ಪ್ರೀತಿ ಹಂಚಿಕೊಳ್ಳುತ್ತಾರಾ?! ಅದಕ್ಕೆ ಇಲ್ಲಿ ಪ್ರೇಮಿಗಳ ಕಲರವ ಜಾಸ್ತಿಯಾ ಅಂತನ್ನಿಸುತ್ತದೆ.. ಮುಂಬೈನ ಸಾಂಪ್ರದಾಯಿಕವಾಗಿ ಬಾಗಿದ ಕರಾವಳಿ ಬೌಲೆವಾರ್ಡ್‌ನ ಮೆರೈನ್ ಡ್ರೈವ್ ಅನ್ನು ಬೀದಿ ದೀಪಗಳ ಹೊಳೆಯುವ ದಾರದಿಂದಾಗಿ ಕ್ವೀನ್ಸ್ ನೆಕ್ಲೆಸ್ ಎಂದು ಕರೆಯತ್ತಾರೆ.ನಿಜಕ್ಕೂ ಇದು ಮುತ್ತಿನ ಹಾರದಂತೆ ಕಂಗೊಳುಸುತ್ತದೆ.. ರಾತ್ರಿಯ ಈ ಕಡಲ ತೀರದ ನೋಟ ವರ್ಣನೆಗೆ ಸಿಕ್ಕುವಂತಹದ್ದಲ್ಲ.. ಬೀಸಿ ಬರುವ ಅಲೆಯ ನಡುವೆ ಹೊಳೆವ ಮುತ್ತಿನ ಹಾರ. ಮೈ ಮನಗಳ ಮುದ ನೀಡಿ ಎಂತಹ ನೋವನ್ನೂ ಕಡಲು ಒಮ್ಮೆ ಕಸಿದುಕೊಂಡು ಬಿಡುತ್ತದೆ.. ಪಕ್ಕದಲ್ಲಿ ಕುಳಿತ ನಮ್ಮೆಜಮಾನ್ರ ಹೆಗಲಮೇಲೆ ನಾನೂ ತಣ್ಣಗೆ ಕೈ ಏರಿಸಿದ್ದೆ ಆಗಲೇ ಪುಟ್ಟ ಮಗುವೊಂದು ಗುಲಾಬಿ ಹೂಗಳ ಗುಚ್ಚವನ್ನೇ ಹಿಡಿದು ತಗೊಳಿ ಸರ್ ಅನ್ನುತ್ತ ನಮ್ಮ ಹತ್ತಿರ ಬಂದು ನಿಂತಿತ್ತು.. ಅರೇ ಈಗ್ಯಾಕೆ ಗುಲಾಬಿ ಎನ್ನುವಂತೆ ಪುಟ್ಟ ಪೋರನ ದಿಟ್ಟಿಸಿದರೆ ಪ್ರಪೋಸ್ ಮಾಡೋಕೆ ಅನ್ನೋದೇ.. ತಗೊಳ್ಳಲು ಕೈ ಚಾಚಿದರು. ಯಾರಿಗೆ ಅಂದೆ, ಯಾರಿಗಾದರೂ ಆಗುತ್ತೆ ಅಂದಾಗ ನಾನು ಕಣ್ಣಿಟ್ಟು ಆ ಪೋರನ ಓಡಿಸಿದ್ದೆ.. ಅವನು ಕೈಯೊಳಗೆ ಹೂವು ಇಟ್ಟೇ ಹೋಗಿದ್ದ.. ನನಗೆ ಆಶ್ಚರ್ಯ ವಾಗಿದ್ದು ಆ ಪುಟ್ಟ ಹುಡುಗನ ಬುದ್ದಿವಂತಿಕೆ ಮತ್ತು ವ್ಯಾಪಾರೀ ಗುಣ.. ಹೂ ಗುಚ್ಛವನ್ನು ಹಿಡಿದು ಸುಮ್ಮನೇ ಅತ್ತಿಂದಿತ್ತ ಓಡಾಡುತ್ತಾನೆ ಅಷ್ಟೇ.. ಕುಳಿತು ಇಷ್ಟಿಷ್ಟೇ ನುಲಿಯುತ್ತಿದ್ದ ಆಸಾಮಿಗೆ ತಗೊಳಿ ಅಂತ ಒತ್ತಾಯ ಮಾಡತೊಡಗಿದ.. ಅರೇ ಎಂತಹ ಚಾಲಾಕಿ ಪೋರ ಯಾರಿಗೆ ಯಾವ ಸಮಯದಲ್ಲಿ ಹೂವು ಬೇಕು ಅಂತ ನಿಖರವಾಗಿ ಊಹಿಸಿ ಮಾರಾಟಮಾಡುವ ಅವನ ಜಾಣತನಕ್ಕೆ ದಂಗಾಗಿದ್ದೆ. ಬದುಕು ಎಲ್ಲವನ್ನೂ ಕಲಿಸುತ್ತೆ.ಅವನು ಯಾವ ಸೈಕಾಲಜಿ ಸ್ಟಡಿ ಮಾಡಿಲ್ಲ ಆದರೆ ಆ ಪುಟ್ಟ ಪ್ರಪಂಚದೊಳಗೆ ಜೀವನಾನುಭವ ಕರಾರುವಕ್ಕಾಗಿದೆ ಅನ್ನುಸಿತು.. ಅವನು ಕೆಂಪು ಗುಲಾಬಿ ಖರೀದಿಸಿದ್ದೂ ಆಯ್ತು ಈ ಪರಿಯ ಜನ ಜಂಗುಳಿಯ ಜಾತ್ರೆಯಂತ ಜಾಗದಲ್ಲಿ ಅದೆಂತ ಏಕಾಂತ ಬಯಸಿ ಬರುತ್ತಾರೆ ಎನ್ನುವದು ಅರ್ಥವೇ ಆಗಲಿಲ್ಲ.. ಬಹುಶಃ ದಟ್ಟ ಬಯಲಿನಲ್ಲಿ ಸಾಗರಾಭಿಮುಖವಾಗಿ ಕುಳಿತಾಗ ಸಾಗರದಂತೆ ಭಾವಗಳೂ ಉಕ್ಕುತ್ತವೆಯೇನೋ.. ಅಳುವ ಕಂಗಳು.ಸಂತೈಸುವ ಕೈಗಳು. ಜಗಳವಾಡುವ ಬಾಯಿಗಳು,ಸೋಲುವ ಮನಸುಗಳು,ಕ್ರಷ್ ಆಗುವ ಹೃದಯಗಳು, ಮುದ್ದಾಡುವ ದೇಹಗಳು.. ಶೂನ್ಯ ದಿಟ್ಟಿಸುವ ಒಂಟಿ ಜೀವಗಳು,, ಅಲ್ಲಿ ಎಲ್ಲವೂ ನಡೆಯುತ್ತದೆ.. ರವಿಯ ಉದಯ ಕಾಲದಿಂದ ಅಂತ್ಯ ಕಾಲದವರೆಗೂ ನಿರಾತಂಕವಾಗಿ ಕುಳಿತು ನಿರಾಳವಾಗಿ ಹೋಗುತ್ತಾರೆ. ಮಧ್ಯ ಮಧ್ಯ ಬರುವ ನಮ್ಮಂತ ಪ್ಯಾಮಿಲಿಗಳು ಕೇವಲ ಪೋಟೊ ಕ್ಕೆ ಪೋಸ್ ಕೊಟ್ಟು ಹೋಗುತ್ತಿರ್ತಾರೆ ಅಷ್ಟೇ.. ಬೆನ್ನಿಗೆ ಕಣ್ಣಿಲ್ಲವೆಂದು ಕುಳಿತೇ ಇರುವ ಜೀವಗಳಿಗೆ ನೋ ಟೆನ್ಷನ್…ಅಲ್ಲಿ ಉಕ್ಕುವ ಶರಧಿ ಓಕುಳಿಯಾಡುವ ಸೂರ್ಯ, ರಂಗೇರುವ ಜೀವಗಳು ಅಷ್ಟೇ ಪ್ರಪಂಚ ಅಲ್ಲಿ ಯಾರು ಯಾರನ್ನೂ ನೋಡುವದೇ ಇಲ್ಲ ಪ್ರತಿಯೊಬ್ಬರಿಗೂ ಅವರದ್ದೇ ಅವಶ್ಯಕತೆಗಳು. ಪಬ್ಲಿಕ್ ನಲ್ಲಿ ಒಮ್ಮೆ ಪ್ರೀತಿ ಮಾಡ್ಬೇಕು ಅನ್ನುವ ಛೋಟೀ ಸಿ ಆಸೆಯನ್ನು ಮದುವೆಯಾದವರೂ ಅವರವರ ಸಂಗಾತಿ ಜೊತೆಗೇ ತೀರಿಸಿಕೊಳ್ಳಬಹುದು.. ಶುದ್ಧ ಪ್ರೇಮಿಗಳ ಭಾವೋದ್ವೇಗದ ವಿಶಾಲ ಬಯಲುದಾಣ ಈ ಮರೀನ್ ಡ್ರೈವ್ ಎಂಬ ಮೋಹಕ ಜಾಗ.. ಕುಳಿತಷ್ಟೂ ಹೊತ್ತೂ ಹೊಸ ಹೊಸ ಅನುಭವಗಳ ಜೊತೆಗೆ ಪ್ರಕೃತಿ ಸೌಂದರ್ಯ ವನ್ನೂ ಭರಪೂರ ಸವಿಯಬಹುದು. ಮಕ್ಕಳಿಂದ ವಯೋವೃದ್ಧರವರೆಗೂ ನಿರ್ಭಿಡೆಯಾಗಿ ಮುದಗೊಳ್ಳುವ ಜಾಗ.. ವಿಶೇಷವಾಗಿ ರವಿವಾರದಂದು ನೂರಾರು ಬೀದಿ ಮಾರಾಟಗಾರರು ಹೆಸರುವಾಸಿ ಬೀದಿ ತಿನಿಸುಗಳಾದ ಭೇಲ್ ಪುರಿ, ಪಾನಿ ಪುರಿ, ಸ್ಯಾಂಡ್ ವಿಚ್, ಫಾಲೂದಾ ಮೊದಲಾದವುಗಳನ್ನು ಸವಿಯಬಹುದು. ******

ಪ್ರವಾಸ ಕಥನ Read Post »

You cannot copy content of this page

Scroll to Top