ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಸಮಬಾಳು ಸಹಬಾಳ್ವೆ ಸಮತೆಯ ರೀತಿ ಗಣತಂತ್ರ ವೆಂದರೆ ಶಾಂತಿ ಸಹಿಷ್ಣುತೆ ಸಹನೆ ಪ್ರೀತಿ ಗಣತಂತ್ರವೆಂದರೆ ಪಾರತಂತ್ರ್ಯದ ಕತ್ತಲು ಅಳಿದರಷ್ಟೇ ಸಾಕೇ ಸ್ವಯಮಾಡಳಿತ-ಸಂವಿಧಾನದ ಕ್ರಾಂತಿ ಗಣತಂತ್ರವೆಂದರೆ ಎಷ್ಟೊಂದು ವೇಷ ಭಾಷೆ ಸಂಸ್ಕೃತಿ ವೈವಿಧ್ಯಗಳು ಎಲ್ಲರೆದೆ ಹೂಗಳನು ಪೋಣಿಸುವ ನೀತಿ ಗಣತಂತ್ರವೆಂದರೆ ಸಮಾನ ಆಶೋತ್ತರಗಳು ಸುರಾಜ್ಯದ ಕನಸು ಎಲ್ಲರ ಮುಗಿಲುಗಳ ವಿಸ್ತರಿಸುವ ಪ್ರಣತಿ ಗಣತಂತ್ರವೆಂದರೆ ಹೊರಗಿನ ಶತ್ರುಗಳ ಜೊತೆಗೆ ಒಳಗಿನ ವಿಕೃತಿಗಳು ಹುಸಿಗಳ ಮೀರುವ ನಿಜ ಬದುಕಿನ ಕಾಂತಿ ಗಣತಂತ್ರವೆಂದರೆ ನಮ್ಮ ರಾಷ್ಟ್ರ ನಮ್ಮ ಜೀವ ಭಾವ ಸದಾ ಜಾಗೃತ ಎಲ್ಲ ಸ್ವರಗಳನು ಬೆಸೆಯುವ ಸಮಶ್ರುತಿ ಗಣತಂತ್ರವೆಂದರೆ *************** ಡಾ.ಗೋವಿಂದ ಹೆಗಡ ೆ

ಕಾವ್ಯಯಾನ Read Post »

ಅಂಕಣ ಸಂಗಾತಿ

ಹೊತ್ತಾರೆ

ಅಮೇರಿಕಾದಿಂದ ಅಶ್ವಥ್ ಬರೆಯುತ್ತಾರೆ ಅಶ್ವಥ್ ಅಕ್ಕಯ್ಯನೆಂಬ ಯಶೋಧೆ ನಾನು ಆಗತಾನೇ ಬೈಕಿನಿಂದಿಳಿದು ಹೆಲ್ಮೆಟ್ ತೆಗೆಯುತ್ತಿದ್ದೆ. ಹೊಲದ ಕಡೆ ಹೊರಟಿದ್ದ ರಂಗಪ್ಪಣ್ಣ ನನ್ನನ್ನು ನೋಡಿ ತಕ್ಷಣ ಗುರುತಿಸಲಾಗದೇ, ಹಾಗೆಯೇ ಸ್ವಲ್ಪ ಹೊತ್ತು ನಿಂತರು. “ ಓಹೋಹೋಹೋಹೋ… ಏನ್ ಅಳಿಮಯ್ಯಾ, ಅಪ್ರೂಪದಂಗೆ….. ಎಷ್ಟೊಂದ್ ವರ್ಷ ಆಗಿತ್ತಲ್ಲ ನಿಮ್ಮನ್ನ ನೋಡಿ, ಹಾಂ?” ಅಂತ ತನ್ನದೇ ರಾಗದಲ್ಲಿ ರಂಗಪ್ಪಣ್ಣ ಮಾತಾಡಿಸಿ ಹೆಗಲಮೇಲೆ ಹೊತ್ತಿದ್ದ ನೇಗಿಲನ್ನೂ ಇಳಿಸದಂತೆ ಹಾಗೆಯೇ ನೋಡುತ್ತಾ ನಿಂತರು. “ಏನ್ ಮಾಡೋದು ರಂಗಪ್ಪಣ್ಣ? ಹೊಟ್ಟೆಪಾಡು, ಊರುಬಿಟ್ಟು ಊರಿಗೆ ಹೋದ ಮೇಲೆ ಅಪರೂಪವೇ ಆಗಬೇಕಲ್ಲ” ಎನ್ನುತ್ತಾ, ನಾನು ಅವರಿದ್ದ ಕಡೆ ನಡೆದು, ಊರಲ್ಲಿದ್ದಾಗ ಮಾತನಾಡುವ ಧಾಟಿಯಲ್ಲಿಯೇ ಸ್ವಲ್ಪ ದೈನ್ಯತೆಯಿಂದ ಹೇಳಿದೆ. ಊರಲ್ಲಿರುವಾಗ ನಾನು ಚಡ್ಡಿ ಹಾಕಿ ಗೋಲಿ, ಬುಗುರಿಗಳನ್ನು ಆಡುತ್ತಿದ್ದ ವಯಸ್ಸು. ಆಗೆಲ್ಲ ರಂಗಪ್ಪಣ್ಣನಂತಹವರು ನಮ್ಮನ್ನು ಚಿಕ್ಕವರಾಗಿ ನೋಡಿ ಮಾತನಾಡಿಸಿದ್ದವರು, ಇದ್ದಕ್ಕಿದ್ದ ಹಾಗೆಯೇ ಗೌರವದಿಂದ ನೀವು, ತಾವು, ಹೇಗಿದ್ದೀರಾ ಅಂದರೆ ಅದು ಅಷ್ಟಾಗಿ ಸ್ವಾಭಾವಿಕವೆನಿಸುತ್ತಿರಲಿಲ್ಲ. ಯಾವ ಕಾರಣಕ್ಕಾಗಿ ಗುಣವಿಶೇಷಣವನ್ನು ಸೇರಿಸಿದಂತೆ ಗೌರವಿಸುತ್ತಿದ್ದಾರಿವರು ಅನ್ನಿಸಿ ಇರಿಸುಮುರಿಸೆನಿಸಿತು. “ಏನೋ, ಚೆನ್ನಾಗಿದಿಯೇನಪ್ಪಾ ಒಟ್ನಲ್ಲಿ? ಯಾವ್ದೋ ದೂರುದ್ ದೇಶಕ್ ಹೋದೆ ಅಂತ ಕೇಳಿದ್ದೆ” “ಹುಂ, ನಾನ್ ಚೆನ್ನಾಗಿದ್ದೀನಿ ನೀವೆಲ್ಲ ಚೆನ್ನಾಗಿದ್ದೀರಲ್ಲ? ಬರ್ತಿದ್ದ ಹಾಗೇ ಊರು ಬದಲಾಗಿರುವುದು ಗೊತ್ತಾಗುತ್ತೆ. ಅಲ್ಲಿ ಹಲಸಿನ ಮರ ಇಲ್ಲ, ಇಲ್ಲಿ ಕರಿಬೇವಿನ ಗಿಡ ಇಲ್ಲ, ಇನ್ನು ಆ ಮೂರು ಮನೆಗಳು ಹೊಸದಾಗಿ ಕಟ್ಟಿರೋದು” ಎನ್ನುತ್ತಾ ಸುತ್ತ ಕೈಯಾಡಿಸಿದೆ. ಅಷ್ಟರಲ್ಲಿ ಪಕ್ಕದ ಮನೆಯ ಜಗುಲಿ ಮೇಲೆ ಕುಳಿತು ಮಾತನಾಡುತ್ತಿದ್ದ ಮೂರ್ನಾಲ್ಕು ಜನ, ನಮಗೆ ಮರೆಯಾಗಿದ್ದವರಲ್ಲಿ ಒಬ್ಬರು ನಮ್ಮ ಕಡೆ ಇಣುಕಿ… “ಯಾವಾಗ್ ಬಂದ್ಯಪ್ಪಾ, ಬಾರೋ ಈ ಕಡೀಕೆ” ಅಂದರು. “ಈಗತಾನೇ ಬರ್ತಿದ್ದೀನಿ. ರಂಗಪ್ಪಣ್ಣ ನೋಡಿ ನಿಂತುಕೊಂಡ್ರು. ಮಾತಾಡಿಸ್ತಿದ್ದೆ” ಅಷ್ಟರಲ್ಲಿ ರಂಗಪ್ಪಣ್ಣ, “ಸರಿ, ಇರ್ತಿಯಾ ಒಂದೆರಡು ದಿನಾ ಇಲ್ಲ ಈಗ್ಲೇ ಬಂಡಿ ತೆಗಿತೀಯಾ? ಹೊಲ್ತಾಕ್ ಹೋಗಬೇಕು. ಕೆಲ್ಸ ಮುಗಿಸಿ ಬತ್ತೀನಿ. ಸಿಕ್ತಿಯಲ್ಲಾ? ಬಾ ಮತ್ತೆ ನಮ್ಮನೆ ಕಡೀಕೆ” ಅಂದರು. “ ಇಲ್ಲ, ಹೀಗೇ ಎಲ್ಲರನ್ನೂ ನೋಡಿ ಹೊರಟುಬಿಡ್ತೀನಿ ರಂಗಪ್ಪಣ್ಣ. ಕೆಲಸ ಜಾಸ್ತಿಯಿದೆ ಈ ಸಾರ್ತಿ. ಮತ್ತೆ ಮುಂದಿನ ವರ್ಷ ಬಿಡುವು ಮಾಡ್ಕೊಂಡು ಬಂದಾಗ ಒಂದೆರಡು ದಿನ ಇರೋ ಪ್ಲಾನ್ ಮಾಡ್ತೀನಂತೆ. ನೀವು ಹೊರಡಿ, ನೇಗಿಲು ಹೊತ್ಕೊಂಡು ಎಷ್ಟೊತ್ತು ನಿಂತ್ಕೊಂಡಿರ್ತಿರಾ” ಅಂದೆ. “ ಸರಿ ಬತ್ತಿನಪ್ಪಾ, ಹಿಂಗ್ ಬಂದ್ ಹಂಗ್ ಹೋಯ್ತೀಯಾನ್ನು? ಇನ್ನು ಮಾತೆತ್ತಿದ್ರೆ ಮುಂದಿನವರ್ಷ ಅಂತೀಯ. ಹೆಂಗೋ ಚೆನ್ನಾಗಿರು. ಬರ್ಲಾ?” “ಆಗಲಿ, ಸಿಗ್ತೀನಿ ಮತ್ತೆ” ಅಷ್ಟರಲ್ಲಿ ಜಗುಲಿಯ ಮೇಲಿದ್ದವರೆಲ್ಲಾ ಒಮ್ಮೆ ಇಣುಕಿಯಾಯ್ತು. ಇನ್ನು ನಾನು ಅಲ್ಲಿಗೇ ಹೋಗಿ “ಚೆನ್ನಾಗಿದ್ದೀರಾ ಎಲ್ಲರೂ?” ಅಂದೆ. “ನಾವೆಲ್ಲ ಇದ್ಹಂಗೇ ಇದೀವಿ, ನಮ್ದೇನೂ ಹೊಸಾದಿಲ್ಲ. ಅದೇ ಹಳೇದು ಊರಲ್ಲಿ, ನಿನ್ ಸಮಾಚಾರ ಹೇಳಪ್ಪಾ” ಅಂದವರೇ, ಒಬ್ಬೊಬ್ಬರೂ ನನ್ನನ್ನು ವಿಚಾರಿಸಿಕೊಂಡರು, ಎಲ್ಲಿದ್ದೀನಿ, ಏನು ಕೆಲಸ, ಎಷ್ಟು ಸಂಬಳ, ದೂರದೇಶದ ಸಂಪಾದನೆ ನಮ್ಮ ದೇಶದ ಎಷ್ಟು ರೂಪಾಯಿಗೆ ಸಮ.. ಹೀಗೆ ತಮ್ಮ ಕುತೂಹಲ ಇರುವುದನ್ನೆಲ್ಲಾ ಕೇಳುತ್ತಾ ಮಾತು ಮುಂದುವರಿಸಿದರು. ಅಷ್ಟರಲ್ಲಿ ಫೋನ್ ರಿಂಗಾಯಿತು. ಯಾವುದೋ ಗೊತ್ತಿಲ್ಲದ ನಾಲ್ಕಂಕಿಯ ನಂಬರು. ಫೋನ್ ರಿಸೀವ್ ಮಾಡದೇ ಹಾಗೆಯೇ ಕಟ್ ಮಾಡಿದೆ. “ಅಲ್ಲೆಲ್ಲೇ!… ನೋಡ್ರಲೇ, ರಾಜಣ್ಣನ ಇಟ್ಕಂಡವ್ನೆ ಫೋನಲ್ಲಿ… ಇನ್ನೂ ನೆನಪೈತಾ ಇಲ್ಲಿಂದೆಲ್ಲಾ? ಹಳೇ ಪಿಚ್ಚರೆಲ್ಲ ನೋಡ್ತೀಯಾ ಅನ್ನು” ಅಂದರು. “ನಾನೂ ನಿಮ್ ತರಾನೇ ಕನ್ನಡದವನೇ ಅಲ್ವಾ? ನಿಮ್ಮ ಜೊತೆಯಲ್ಲೇ ಭಾನುವಾರ ನಾಲಕ್ ಗಂಟೆಗೆ ಬರೋ ಬ್ಲಾಕ್ ಅಂಡ್ ವೈಟ್ ಸಿನಿಮಾ, ಮತ್ತೆ ವಿಸಿಪಿ ತಂದು ನೋಡ್ತಿದ್ದ ಸಿನಿಮಾ.. ಇವೆಲ್ಲ ಹೆಂಗ್ ಮರೆಯಕ್ಕಾಗುತ್ತೆ? ಆ ಮಟ್ಟಿಗೆ ಮರೆವು ಬಂದ್ರೆ ನನ್ನನ್ನೇ ನಾನು ಮರೆಯುವಂಥಾ ಯಾವುದೋ ಖಾಯಿಲೆ ಬಂದಿದೆ ಅಂತಲೇ ಅರ್ಥ” ಅಂದೆ. ಮಾತು ಹಾಗೆಯೇ ಇನ್ನೂ ಸುಮಾರು ಹತ್ತು ಹದಿನೈದು ನಿಮಿಷ ಮುಂದುವರಿಯಿತು. ಅಲ್ಲಿಯವರೆಗೂ ಜಗುಲಿಯ ಮೇಲೆ ಕೂತಿದ್ದವರ ಜೊತೆ ಮಾತನಾಡುತ್ತಾ ಒಂದೇ ಕಡೆ ಇದ್ದವನನ್ನು ನಿಂಗಪ್ಪಮಾವನ ಮನೆ ಅತ್ತೆ ನಾನು ಬಂದು ಮಾತನಾಡುತ್ತಿದ್ದು ನೋಡಿದವರೇ ಟೀ ಮಾಡಿ ತಂದು, “ಚೆನ್ನಾಗಿದಿಯೇನಪ್ಪಾ? ನಾವೆಲ್ಲಾ ಜ್ಞಾಪಕದಲ್ಲಿದ್ದೀವಾ” ಅನ್ನುತ್ತಾ ಟೀ ಮುಂದೆ ಹಿಡಿದರು. “ನಾನು ಟೀ ಕುಡಿಯಲ್ಲ… ಇಷ್ಟೊತ್ತಲ್ಲಿ ಯಾಕ್ ಮಾಡಾಕ್ ಹೋದ್ರಿ ಅತ್ತೆ, ಎಲ್ಲಿ ಒಂಚೂರ್ ಕೊಡಿ” ಅಂತ ಒಂದು ಗ್ಲಾಸ್ ನಿಂದ ಇನ್ನೊಂದಕ್ಕೆ ಅರ್ಧದಷ್ಟು ಸುರಿದು ಸ್ವಲ್ಪವೇ ಹಿಡಿದು ನಿಂತೆ. ಹಾಗೆ ತಿರುಗುತ್ತಲೇ ಜಗುಲಿಯ ತುದಿಯಲ್ಲಿ ಒಂದು ಮುಖ ನನ್ನನ್ನೇ ದಿಟ್ಟಿಸುತ್ತಾ ನಿಂತಿದೆ. “ಅಕ್ಕಯ್ಯಾ!!! ನೀನ್ ಯಾವಾಗಿಂದ ನಿಂತಿದ್ದಿಯಾ ಇಲ್ಲಿ “ ಅನ್ನುತ್ತಲೇ, ಸರಸರನೆ ಟೀ ಹೀರಿ ಗ್ಲಾಸ್ ಹಾಗೆಯೇ ಇರಿಸಿ ಬರ್ತೀನಿ ಮತ್ತೆ ಅಂದವನೇ, ಅಕ್ಕಯ್ಯನ ಕಡೆ ದೌಡಾಯಿಸಿದೆ. “ನೋಡ್ತಾನೆ ಇದಿನಿ, ಈಗ ತಿರುಗ್ತಾನಾ, ಈಗ ತಿರುಗ್ತಾನಾ ಅಂತ ಆಗ್ಲಿಂದಾ… ಮರೆತೇ ಹೋದಂಗಾಗಿ ಮನೆ ಕಡೆ ಬರದೇ ಹೋದರೆ ಅಂತ ಕಾಯ್ತಾ ಇದಿನಿ ಕಾಣಪ್ಪಾ… ದೊಡ್ಡೋವರಾಗಿದ್ದೀರಾ ಈಗ, ನಾವೆಲ್ಲಾ ಕಾಣುಸ್ತೀವಾ ನಿಮ್ ಕಣ್ಣಿಗೆ?” ಅನ್ನುವ ತನ್ನದೇ ಸ್ವಂತಿಕೆಯ ಆಕ್ರಮಣಕಾರಿ ಚುಚ್ಚುಮಾತು ಬಿಸಾಕಿದರು ಅಕ್ಕಯ್ಯ. ಅಕ್ಕಯ್ಯನೆಂದರೆ ನನ್ನ ತಾಯಿಗಿಂತಲೂ ಹಿರಿಯ ಆದರೆ ನನ್ನ ಅಜ್ಜಿಗಿಂತ ಕಿರಿಯ ಜೀವ. ಬಂಡೆಕೊಪ್ಪಲು ಅವರ ತವರಾದ್ದರಿಂದ ಕೊಪ್ಪಲು ಅಕ್ಕಯ್ಯ ಅಂತಲೇ ಕರೆಯುತ್ತಿದ್ದೆವು. ಅಕ್ಕಯ್ಯನೆಂದರೆ ನನ್ನ ಓರಗೆಯಿಂದ ಶುರುವಾಗಿ ನನಗಿಂತಲೂ ಹದಿನೈದು ವರ್ಷ ಚಿಕ್ಕ ವಯಸ್ಸಿನ ನನ್ನ ಮಾವನ ಮಕ್ಕಳೆಲ್ಲರಿಗೂ ಅವರು ಅಕ್ಕಯ್ಯನೇ… ನಾನು ಚಿಕ್ಕ ಮಗುವಾಗಿದ್ದಾಗಿನ ನನ್ನ ಜೀವನದ ಚಿತ್ರವನ್ನು ಅಕ್ಕಯ್ಯನಷ್ಟು ಸವಿಸ್ತಾರವಾಗಿ ಕ್ಷಣಕ್ಷಣವನ್ನೂ ಎಳೆಯಾಗಿ ಇನ್ಯಾರೂ ಹೇಳಿಲ್ಲ, ಹೇಳಲಾರರೂ ಕೂಡ. ನಾವು ಬೆಳೆಯುತ್ತಿದ್ದ ವಯಸ್ಸಿನಲ್ಲಿ ಅಮ್ಮ ಅಜ್ಜಿಯರ ಜೊತೆ ಇದ್ದಷ್ಟೇ ಹೊತ್ತು ಅಕ್ಕಯ್ಯನ ಜೊತೆಯೂ ಇರುತ್ತಿದ್ದೆವು. ಅಕ್ಕಯ್ಯನಿಗೆ ಸ್ವಂತ ಮನೆ ಅಂತ ಇದ್ದರೂ, ಹೆಚ್ಚಾಗಿ ನಮ್ಮ ಮನೆಯಲ್ಲಿಯೇ ಇರುತ್ತಿದ್ದರು. ಕೆಲಸಗಳಲ್ಲೂ ನಮ್ಮ ಮನೆಯವರ ಹಾಗೆಯೇ ಎಲ್ಲದಕ್ಕೂ ಜೊತೆಯಾಗಿದ್ದವರು. ಮದುವೆಯಾದ ಒಂದು ವರ್ಷದೊಳಗೇ ಅವರ ಪತಿ ತೀರಿಕೊಂಡರಂತೆ. ಆ ಕೊರಗಿನಲ್ಲೇ ಇದ್ದ ಗರ್ಭಿಣಿ ಅಕ್ಕಯ್ಯನಿಗೆ ಹುಟ್ಟಬೇಕಾದ ಮಗುವೂ ಜೀವವಿಲ್ಲದೇ ಹುಟ್ಟಿತ್ತಂತೆ. ವಿಧಿಯ ಆ ಎರಡು ದೊಡ್ಡ ಪೆಟ್ಟುಗಳು, ಆಕೆಯ ಏಕತಾನತೆಯ ನೋವು ಮರೆಯುವುದಕ್ಕಾಗಿಯೋ ಏನೋ, ನಮ್ಮೆಲ್ಲರನ್ನೂ ತನ್ನ ಮಕ್ಕಳಂತೆಯೇ ಪ್ರೀತಿಯಿಂದ ನೋಡುತ್ತಿದ್ದರು ಅಕ್ಕಯ್ಯ. ಹಿರಿಯ ವಯಸ್ಸಿನವರಾದರೂ, ಸೋದರಮಾವಂದಿರು, ಅಮ್ಮ ಅಕ್ಕ ಎಲ್ಲ ಕರೆಯುವ ಹಾಗೆಯೇ ಕೊಪ್ಪಲು “ಅಕ್ಕಯ್ಯ” ಎನ್ನುವ ಹೆಸರು ನಮಗೂ ರೂಢಿಯಾಗಿತ್ತು. ಅಂಥಾ ಅಕ್ಕಯ್ಯ ಇದ್ದಕ್ಕಿದ್ದ ಹಾಗೆಯೇ ನನ್ನನ್ನು ನೋಡಿ “ಎಲಾ ಇವನಾ ನನ್ನನ್ನು ಹುಡುಕಿಕೊಂಡು ಓಡಿ ಬರಬೇಕಾದವನು, ಜಗುಲಿ ಮೇಲೆ ಸಿಕ್ಕವರ ಜೊತೆ ಮಾತಾಡುತ್ತಾ ಕೂತುಕೊಂಡಿದಾನಲ್ಲ” ಅನ್ನುವ ಕೋಪವನ್ನು ಮುಖದಲ್ಲಿ ಆಗಲೇ ಧರಿಸಿಯಾಗಿತ್ತು. “ಅಯ್ಯೋ, ಈಗತಾನೇ ಬಂದಿದಿನಲ್ಲ ಅಕ್ಕಯ್ಯ, ಊರಿಗೆ ಬಂದು ನಿನ್ನನ್ನು ವಿಚಾರಿಸದೇ ಹೋಗೋಕಾಗುತ್ತಾ, ಅದೇನ್ ತಮಾಷೆನಾ?” ಅಂದವನೇ ಅಕ್ಕಯ್ಯನಿಗಿಂತ ಮೊದಲೇ ದಾಪುಗಾಲಿಡುತ್ತಾ ಅಕ್ಕಯ್ಯನ ಮನೆಯ ಕಡೆ ಹೊರಟೆ. ಅಕ್ಕಯ್ಯನ ಮನೆ ಬಾಗಿಲು ಮುಂದೆ ಬಂದು ಹಾಗೆಯೇ ನಿಂತೆ…. ಹಳೆಯ ಚಿತ್ರಗಳೆಲ್ಲ ಒಮ್ಮೆಲೇ ತಲೆಯಲ್ಲಿ ಮಿಂಚಿದಂತಾಗಿ ಮುಗುಳ್ನಗೆಯನ್ನಷ್ಟೇ ಮುಖದ ಮೇಲಿರಿಸಿಕೊಂಡು ಅಕ್ಕಯ್ಯನನ್ನೂ ನೋಡುತ್ತಾ ಹಾಗೆಯೇ ನಿಂತೆ… ನಗುವಾಗಲೀ ಅಳುವಾಗಲೀ ಅಕ್ಕಯ್ಯನ ಬಳಿ ಅದನ್ನು ಬಚ್ಚಿಡುವಷ್ಟು ನಾಟಕವನ್ನು ಅಕ್ಕಯ್ಯನ ಮುಂದೆಯೇ ಎಂದೂ ನಾನು ಮಾಡಲಾಗುವುದಿಲ್ಲ. ಯಾಕೆ ಅಂದರೆ ಅಕ್ಕಯ್ಯನೇ ಹೇಳುವ ಹಾಗೆ ಗೇಣುದ್ದ ಇದ್ದವನಾಗಿನಿಂದ ಹೈಸ್ಕೂಲು ತಲುಪುವ ತನಕ ಅವರ ಕಣ್ಣೆದುರಲ್ಲೇ ಬೆಳೆದಿದ್ದ ನನಗೆ ವಯಸ್ಸು ಎಷ್ಟೇ ಆದರೂ ಅಕ್ಕಯ್ಯನ ಕಣ್ಣುತಪ್ಪಿಸುವಂತಹ ನಟನೆ ನನ್ನ ಅನುಭವಕ್ಕೆ ನಿಲುಕಲಾಗದ್ದು. ನಿಂತಿದ್ದವನನ್ನೇ ಮತ್ತೆ ದಿಟ್ಟಿಸಿ, “ನೋಡು, ನೋಡು, ಊದಪ್ಪಾ… ಇಲ್ಲೇ ಮಂಡಿಹಾಕಿ ತೆವುಳ್ತಾ ಇದ್ದೆ, ಇಲ್ಲೇ ಕೂತ್ಕಂಡು ಚೌಕಾಬಾರಾ ಆಡಿದ್ದೆ, ಬೆಳೆದಿದ್ದಿಯಾ ಅಂತ ಈಗ ನಗಾಡ್ತೀಯೇನಾ ಊದಪ್ಪಾ?” “ಅದಲ್ಲ ಅಕ್ಕಯ್ಯ ಅಂತ ತಾಳಲಾರದೇ ಮುಗುಳ್ನಗೆಯನ್ನು ಜೋರು ನಗೆಯಾಗಿಯೇ ಪರಿವರ್ತಿಸಿ, ನಾನು ಎಷ್ಟು ಬೆಳೆದಿದ್ದೀನಿ ಅಂತ ನನಗೇ ಗೊತ್ತಿರಲಿಲ್ಲವಲ್ಲಾ… ನಿನ್ನ ಮನೆಯ ಬಾಗಿಲು ಮುಂದೆ ನಿಂತಾಗಲೇ ಅದರ ವ್ಯತ್ಯಾಸ ಕಾಣ್ತಾ ಇರೋದು. ಅದಕ್ಕೇ ಹಾಗೆ ನಕ್ಕೆ” ಅಂದೆ. “ಹೂಂ ಕನಪ್ಪಾ, ಗಳಾ ಬೆಳ್ಕಂಡಂಗೆ ಬೆಳ್ಕಂಡಿದಿಯಾ. ನನ್ ಬಾಗ್ಲು ನಿನ್ಹಂಗೇ ಬೆಳೆಯಕ್ಕಿಲ್ಲವಲ್ಲಾ, ಹುಶಾರಾಗಿ ನೋಡ್ಕಂಡ್ ಬಾರೋ ಮಾರಾಯ, ಏಟ್ ಗೀಟ್ ಮಾಡ್ಕಂಡು ಮತ್ತೆ ನನಗೆ ಯೋಚ್ನೆ ಹತ್ತಿಸ್ಬ್ಯಾಡ” ಅಂದರು. ಮನೆ ಮುಂದೆ ನಿಂತವನೇ ಹಾಗೆಯೇ ಒಂದು ನಿಮಿಷ ಸುತ್ತ ಗಮನಿಸುತ್ತಾ ನಿಂತೆ… ಬಾಗದೇ ಇದ್ದರೆ ಮೇಲಿನ ಅರ್ಧ ಬಾಗಿಲು ಕಾಣುತ್ತಿರಲೇ ಇಲ್ಲ. ಮನೆಯ ಮಾಳಿಗೆಯ ತುದಿ ನನಗೆ ಕಣ್ಣಿನ ಎತ್ತರಕ್ಕೆ ಇದೆ. ಮನೆಯಲ್ಲಿ ಏನೂ ಬದಲಾವಣೆಯಾಗಿಲ್ಲ… ಇದ್ದ ಹಾಗೆಯೇ ಇದೆ.. ಅದೇ ಹೆಂಚು. ಅದೇ ಮಾಳಿಗೆ. ನೆಲಕ್ಕೆ ಊತುಹೋಗಿರುವುದೇನೋ ಎಂದು ಅನುಮಾನಿಸುವಷ್ಟು ಚಿಕ್ಕದೆನಿಸುತ್ತಿತ್ತು. “ಎಷ್ಟೊತ್ತ್ ನೋಡಿದ್ರೂ ಅಷ್ಟೇ ಬಾರಪ್ಪಾ… ನೀನ್ ಬಂದಿದಿಯಾ ಅಂತ ಏನ್ ಬೆಳೆಯಾದಿಲ್ಲ ಮನೆ” ಅಂದಿದ್ದೇ ಚಾಪೆಯನ್ನು ಹಾಸಿ ಕೂರುವುದಕ್ಕೆ ರೆಡಿ ಮಾಡಿದರು ಅಕ್ಕಯ್ಯ. ಅರ್ಧಕ್ಕಿಂತಲೂ ಹೆಚ್ಚು ಬಾಗಿ ದೇಗುಲದ ಗರ್ಭಗುಡಿಗೆ ತಲುಪುವ ಪೂಜಾರಿಯ ಭಂಗಿಯಲ್ಲಿ ಒಳಗೆ ಹೊಕ್ಕೆ… ಒಳಗೆ ಹೋಗಿ ನಿಂತರೂ… ಸರಿಯಾಗಿ ತಲೆಯ ಮೇಲೆ ಅರ್ಧ ಇಂಚಿನಷ್ಟೇ ಅಂತರ. ನಡುವೆ ಇರುವ ಅಟ್ಟದ ಗಳುಗಳು ತಲೆಗೆ ಅಡ್ಡಲಾಗುವಂತಿದ್ದವು… “ಅಕ್ಕಯ್ಯ ಇಲ್ನೋಡು… ಈ ಗೋಡೆಯಷ್ಟು ಎತ್ತರ ಇದ್ದೆ ಮೊದಲು… ಆಮೇಲೆ ಈ ಗೋಡೆಯಷ್ಟು ಇದ್ದೆ. ಈಗ ನೋಡಿದರೆ ಅಟ್ಟವನ್ನೇ ಹೊತ್ಕೊಂಡಿದೀನಿ ಅನ್ನುವಷ್ಟು ಬೆಳೆದಿದಿನಿ, ಅಲ್ವಾ?” ಎನ್ನುತ್ತಾ ಮನೆಯೊಳಗೆ ಕಾಲಿಡುತ್ತಲೇ ಎಡಬದಿಗೆ ಸಿಕ್ಕ ಎರಡೂವರೆ ಅಡಿಯ ಅಡ್ಡಗೋಡೆ, ಮೂರೂವರೆ ನಾಲ್ಕಡಿಯಷ್ಟಿದ್ದು ಅಡುಗೆ ಮನೆಯನ್ನು ಬೇರ್ಪಡಿಸಿದ್ದ ಇನ್ನೊಂದು ಗೋಡೆಯನ್ನು ತೋರಿಸಿದೆ. “ಅಲ್ವಾ ನೋಡು ಮತ್ತೆ… ಅನ್ನ ತಟ್ಟೆಗೆ ಹಾಕಿದರೆ, ಇಲ್ಲ್ ಜಾಗ ಐತೆ ಇಲ್ಲಿಗೂ ಹಾಕು… ಅಲ್ಲಿ ಖಾಲಿ ಕಾಣ್ತದೆ ಅಲ್ಲಿಗೂ ಹಾಕು… ತುಪ್ಪ ಎಲ್ಲಿ? ಅಂತಿದ್ದೆ .. ತುಪ್ಪ ಇಲ್ಲದಿದ್ರೆ ಊರೆಲ್ಲ ಒಟ್ಟು ಮಾಡ್ತಿದ್ದೆ… ತಿನ್ತಾ ಇದ್ದ ಮೂರು ತುತ್ತಿಗೆ ಇಡೀ ತಟ್ಟೆ ಅನ್ನವನ್ನೆಲ್ಲ ಕಲಸಿ ಬೇರೆಯವರಿಗೆ ಪ್ರಸಾದ ಕೊಡ್ತಾ ಇದ್ದೆ. ಬೆಳೀದೇ ಇನ್ನೇನಾಗ್ತೀಯಪ್ಪಾ… ಇದ್ಯಾವುದಾದ್ರೂ ಗೊತ್ತಿರ್ತದಾ ನಿಂಗೆ… ಅನ್ನ ಹೋಗ್ಲಿ, ರೊಟ್ಟಿ, ಅದೂ ದೊಡ್ಡದೇ ಆಗಬೇಕು ಒಂಚೂರು ಮುರೀದೇ ಇರೋ ರೌಂಡಾಗಿರೋದು… ಅದರ ಮೇಲೆ ಬೆಣ್ಣೆಯಿಲ್ಲದಿದ್ದರೆ ಮತ್ತೆ ಗೊಳೋ ಅಂತಾ ಇದ್ದೆ! ಹಬ್ಬ ಅಂತ ಕಿವಿಗೆ ಬೀಳದ ಹಾಗೆ ನೋಡ್ಕೋಬೇಕಾಗಿತ್ತು ಕಣಾ ನಿಂಗೆ. ಹಬ್ಬ ಅಂದರೆ ಅದರ ಹಿಂದೆಲೇ ಬರ್ತಾ ಇದ್ದೆ ಪಾಯಸ ಎಲ್ಲಿ ಅಂತ. ಒಂದು ದಿನ ಎರಡು ದಿನಕ್ಕೆ ಮುಗಿತಾ ಇರಲಿಲ್ಲ. ವಾರವೆಲ್ಲಾ ಆಗಬೇಕಾಗಿತ್ತು ಪಾಯಸ. ಕೊನೆಕೊನೆಗೆ ನೀನು ರಚ್ಚೆಹಿಡಿಯೋದು ತಾಳಲಾರದೇ ಅನ್ನ ಬಸಿದ ಗಂಜಿಗೇ ಚೂರು ಬೆಲ್ಲ ಬೆರೆಸಿ ಅದನ್ನೇ ಪಾಯಸ ಅಂತಾ ಸಮಾಧಾನ ಮಾಡ್ತಾ ಇದ್ದೋ. ಇನ್ನ ಗಿಣ್ಣು ಮಾಡಿದರೆ ಒಂದು ಬೇಸಿನ್ನು ನಿನಗೇ ಅಂತಾನೇ ಕಾಯಿಸಬೇಕಾಗಿತ್ತು. ತುಂಡು ಮಾಡಿ ಕೊಟ್ಟರೆ ಅದಕ್ಕೂ ರಂಪ ಮಾಡ್ತಾಯಿದ್ದೆ. ಒಂದ್ ಕೂದಲೆಳೆಯಷ್ಟೂ ಹೆಚ್ಚು ಕಮ್ಮಿ ಆಗಂಗಿರಲಿಲ್ಲ. ನಾವು ಮೂರ್ನಾಲ್ಕು ಜನ ಸುತ್ತ ಇದ್ದರೂ ಅಳದ ಹಾಗೆ ನೋಡ್ಕೋಳೋಕಾಗಲ್ಲ ಅಂತ ನಿಮ್ಮ ಮಾವಂದಿರು ನಮಗೇ ಬೈಯ್ತಾ ಇದ್ದರು. ಒಂದಾ ಎರಡಾ ನಿನ್ನ ಹಟಾ? ಅಯ್ಯಪ್ಪಾ… ನಾವೆಲ್ಲ ಇದ್ದರು ಎಲ್ಲರಿಗೂ ಸುಸ್ತಾಗಿಸಿರುವಿಯಲ್ಲೋ ಮಾರಾಯಾ! ಒಂದೊಂದ್ ಸಲ ನಾನೆಂಗೋ ನಿಭಾಯಿಸಿದಿನಿ.. ನಿಮ್ಮಕ್ಕ, ನಿಮ್ಮಮ್ಮ (ತಾಯಿಯೇ ಅಕ್ಕ, ಅಜ್ಜಿ ಅಮ್ಮ). ನಿಮ್ಮಮ್ಮಂಗೆ ಅವರ ಮಕ್ಕಳೂ

ಹೊತ್ತಾರೆ Read Post »

ಇತರೆ

ಪ್ರಸ್ತುತ

ವಿವೇಕಾನಂದರ ಆಶಯ ಗಣೇಶಭಟ್ ಶಿರಸಿ ಸ್ವಾಮಿ ವಿವೇಕಾನಂದರ ಆಶಯಗಳು ವಾಸ್ತವವಾಗುವ ಬಗೆ…… ಪ್ರತಿವರ್ಷದಂತೆ ಈ ವರ್ಷವೂ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಅವರ ಫೋಟೊ ಇಟ್ಟು, ಹೂ ಹಾಕಿ, ಅವರ ಆದರ್ಶಗಳನ್ನು ಪಾಲಿಸಿ ಎಂದು ಭಾಷಣಗಳ ಸುರಿಮಳೆಯೂ ಆಯಿತು. ಆದರೆ, ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ವಾಸ್ತವವಾಗಿಸುವ ಬಗೆ ಹೇಗೆಂದು ಯಾವೊಬ್ಬ ಭಾಷಣಕಾರರೂ ಹೇಳಲಿಲ್ಲ. ಅವರ ಹೆಸರಿನಲ್ಲಿ ತಮ್ಮ ಸಂಘಟನೆಗಳನ್ನು ಬಲಪಡಿಸಿಕೊಳ್ಳುತ್ತಿರುವವರೂ ಸಹ ಸ್ವಾಮೀಜಿಯ ಉನ್ನತ ಆದರ್ಶಗಳನ್ನು ಭೂಮಿಗಿಳಿಸುವ ವ್ಯವಹಾರಿಕ ಚಿಂತನೆಯ ಕುರಿತಾಗಿ ಎಂದೂ ಹೇಳುವುದಿಲ್ಲ. ಯಾಕೆಂದರೆ, ವಿವೇಕಾನಂದರ ವಿಶ್ವೈಕ್ಯ ದೃಷ್ಟಿಕೋನವನ್ನು ಸಂಕುಚಿತ ರೂಪದಲ್ಲಿ ಪ್ರಸ್ತುತಪಡಿಸಿ, ತಮ್ಮ ಬೇಳೆ ಬೇಯಿಸಿಕೊಳ್ಳುವವರೇ ಹೆಚ್ಚು. ಸ್ವಾಮಿ ವಿವೇಕಾನಂದ ಆಶಯಗಳು ಆಧ್ಯಾತ್ಮ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ವ್ಯಕ್ತಿ ಮತ್ತು ಸಮಷ್ಠಿಯ ಸರ್ವತೋಮುಖ ಅಭಿವೃದ್ಧಿಯ ಕುರಿತು ಅವರು ಹೇಳುತ್ತಿದ್ದರು. ಅವರ ಮಾತಿನಲ್ಲೇ ಹೇಳುವುದಾದರೆ ‘ನಾವು ಬೇಕಾದಷ್ಟು ಅತ್ತಿರುವೆವು, ಇನ್ನು ಸಾಕು. ನಿಮ್ಮಕಾಲಿನ ಮೇಲೆ ನಿಂತು ಪುರುಷ ಸಿಂಹರಾಗಿ. ಪುರುಷ ಸಿಂಹರನ್ನು ಮಾಡುವ ಧರ್ಮ, ಅಂತಹ ಸಿದ್ಧಾಂತ ನಮಗಿಂದು ಬೇಕಾಗಿದೆ. ಸರ್ವತೋಮುಖವಾದ ಪುರುಷ ಸಿಂಹರನ್ನು ಮಾಡುವ ವಿದ್ಯಾಭ್ಯಾಸ ಇಂದಿನ ಅಗತ್ಯತೆ’. ಮುಂದುವರಿದು ಸ್ವಾಮೀಜಿ ಹೇಳುತ್ತಾರೆ. ‘ಗಿಳಿಯಂತೆ ಮಾತನಾಡುವುದೊಂದು ನಮ್ಮ ಬಾಳಿನ ಚಾಳಿಯಾಗಿದೆ. ಏನನ್ನೂ ಅನುಷ್ಠಾನಕ್ಕೆ ತರುವುದಿಲ್ಲ. ಶಾರೀರಿಕ ದುರ್ಬಲತೆಯೇ ಇದಕ್ಕೆ ಕಾರಣ. ಇಂತಹ ದುರ್ಬಲ ಮಿದುಳು ಏನನ್ನೂ ಸಾಧಿಸಲಾರದು. ನಾವು ಅದನ್ನು ಪುಷ್ಟಿಗೊಳಿಸಬೇಕು. ಮೊದಲು ನಮ್ಮ ಯುವಕರು ಬಲಿಷ್ಠರಾಗಬೇಕು. ಅನಂತರ ಧರ್ಮ. ನಿಮ್ಮಬಾಹುಗಳ ಮಾಂಸಖಂಡದಲ್ಲಿ ಸ್ವಲ್ಪ ಶಕ್ತಿಯಿದ್ದರೆ ನೀವು ಗೀತೆಯನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ’. ಹಸಿದ ಹೊಟ್ಟೆಗೆ ಧರ್ಮೋಪದೇಶ ಮಾಡುವುದನ್ನು ವಿವೇಕಾನಂದರು ಒಪ್ಪುವುದಿಲ್ಲ. ಭಾರತದ ಉದ್ದಗಲಕ್ಕೂ ಓಡಾಡಿದ, ಪ್ರಪಂಚದ ಹಲವು ದೇಶಗಳನ್ನು ನೋಡಿದ ಸ್ವಾಮೀಜಿಯವರು ಹೇಳುತ್ತಿದ್ದುದು, ‘ಶಕ್ತಿಯೇ ಪ್ರಪಂಚದ ಮಹಾ ವ್ಯಾಧಿಗೆ ದಿವ್ಯೌಷಧ. ಶ್ರೀಮಂತರ ದಬ್ಬಾಳಿಗೆಗ ತುತ್ತಾದಾಗ ದೀನರಿಗೆ ಬೇಕಾಗಿರುವುದೇ ಶಕ್ತಿ ಸಂಜೀವಿನಿ. ಜ್ಞಾನಿಗಳ ಉಪಟಳಕ್ಕೆ ತುತ್ತಾದಾಗ ಅಜ್ಞಾನಿಗಳಿಗೆ ಬೇಕಾಗಿರುವುದು ಶಕ್ತಿ ಸಂಜೀವಿನಿ’. ವಿವೇಕಾನಂದರು ಹೇಳುತ್ತಾರೆ ‘ಬಡವರ ಗೋಳಿಗೆ ಯಾರ ಹೃದಯ ರಕ್ತಸುರಿಸುವುದೋ ಅವನನ್ನು ಮಹಾತ್ಮನೆಂದು ಕರೆಯುತ್ತೇನೆ. ಇಲ್ಲದೇ ಇದ್ದರೆ ಅವನು ದುರಾತ್ಮ. ಎಲ್ಲಿಯವರೆಗೆ ಉಪವಾಸದಲ್ಲಿ, ಅಜ್ಞಾನದಲ್ಲಿ ಕೊಟ್ಯಾನುಕೋಟಿ ಭಾರತೀಯರು ನರಳುತ್ತಿರುತ್ತಾರೋ ಅಲ್ಲಿಯವರೆಗೂ , ದೀನದ ದುಡಿತದಿಂದ ಕೃತವಿದ್ಯನಾದ ಪ್ರತಿಯೊಬ್ಬ ಭಾರತೀಯನೂ ಕುಲಘಾತುಕನೆಂದು ಹೇಳುತ್ತೇನೆ’ ಸ್ವಾಮೀಜಿಯವರ ಈ ಮಾತನ್ನು ಇಂದಿನ ನೇತಾರರು, ಮಠಾಧೀಶರು, ಉದ್ಯಮಪತಿಗಳು ಗಮನಿಸಬೇಕಿದೆ. ಸಮಾಜದಲ್ಲಿ ನಡೆಯುತ್ತಿರುವ ಆರ್ಥಿಕ ಶೋಷಣೆಗೆ ನಾವು ಅನುಸರಿಸುತ್ತಿರುವ ಬಂಡವಾಳವಾದಿ ವ್ಯವಸ್ಥೆಯೇ ಕಾರಣ. ಬಂಡವಾಳಶಾಹಿಗಳಿಗೇ ಅನುಕೂಲವಾಗುವ ರೀತಿಯಲ್ಲಿ ಕಾನೂನು ರೂಪಿಸುತ್ತಿರುವ, ಹೂಡಿಕೆದಾರರಿಂದಲೇ ದೇಶದ ಉದ್ದಾರವೆಂಬಂತೆ ವರ್ತಿಸುವ ನೇತಾರರಿಗೆ ಈ ವಿಷಯ ಅರ್ಥವಾದರೂ, ಅವರ ಸ್ವಾರ್ಥ ಮನೋಭಾವದಿಂದಾಗಿ ಜನಪರ ನಿರ್ಣಯಗಳನ್ನು ಕೈಗೊಳ್ಳಲಿಲ್ಲ. ಹಿಂದಿನ ಜನ್ಮದ ಪಾಪ, ಪುಣ್ಯಗಳಿಂದಲೇ ಬಡವ, ಶ್ರೀಮಂತರಾಗುತ್ತಾರೆಂಬ ತಪ್ಪು ಕಲ್ಪನೆಯನ್ನು ಮಠಾಧೀಶರು, ಪುರೋಹಿತಶಾಹಿಗಳು ಪ್ರಚಾರ ಮಾಡಿ ಜನರನ್ನು ಅಜ್ಞಾನದ ಕೂಪಕ್ಕೆ ತಳ್ಳುತ್ತಿದ್ದಾರೆ. ದೇಶದ ಭೌಗೋಳಿಕ ಗಡಿಯ ಕುರಿತಾದ ಘೋಷಣೆಗಳೇ ದೇಶಭಕ್ತಿಯೆಂದು ಪ್ರಚಾರಮಾಡುವ ಹುಸಿ ರಾಷ್ಟ್ರಾಭಿಮಾನಿಗಳು ದೇಶವಾಸಿಗಳನ್ನು ಪ್ರೀತಿಸಲಾರದೇ ಜಾತಿ, ಮತ, ಪಂಥಗಳ ಆಧಾರದಲ್ಲಿ ದ್ವೇಷ ಹಬ್ಬಿಸಿ, ತಮ್ಮ ಸ್ವಾರ್ಥ ಸಾಧಿಸಿಕೊಳ್ಳುತ್ತಿದ್ದಾರೆ. ವಿವೇಕಾನಂದರ ಉಪನ್ಯಾಸಗಳನ್ನು ಓದಿ, ಸರಿಯಾಗಿ ಅರ್ಥ ಮಾಡಿಕೊಳ್ಳುವುದರಿಂದ ಹುಸಿ ದೇಶ ಭಕ್ತರ ಅಂದಾಭಿಮಾನಿಗಳ ಕಣ್ತೆರೆಯಬಲ್ಲದು. ಸ್ವಾಮೀಜಿ ಹೇಳುತ್ತಾರೆ, ‘ಮಗು ! ಯಾವ ದೇಶವಾಗಲಿ, ವ್ಯಕ್ತಿಯಾಗಲಿ ಮತ್ತೊಬ್ಬನನ್ನು ದ್ವೇಷಿಸಿ ಬಾಳಲಾರದು. ಮ್ಲೇಚ್ಛರೆಂಬ ಪದವನ್ನು ಕಂಡು ಹಿಡಿದು ಹೊರಗಿನವರೊಂದಿಗೆ ಸಂಪರ್ಕವನ್ನು ನಿಲ್ಲಿಸಿದ ದಿನದಿಂದಲೇ ಭಾರತದ ಭಾಗ್ಯ ಅವನತಿಗೆ ಇಳಿಯಿತು’. ಮತೀಯ ದ್ವೇಷದ ಭಾವೋನ್ಮಾದದಲ್ಲಿ ನರಳುತ್ತಿರುವವರು ಗಮನಿಸಲೇಬೇಕಾದ ಹೇಳಿಕೆ ಇದು. ಆಧ್ಯಾತ್ಮವೆಂದರೆ ವಿಕಾಸವೆಂದು ಸ್ವಾಮೀಜಿ ಹೇಳುತ್ತಿದ್ದರು. ಗುಡಿ, ಮಸೀದಿ, ಚರ್ಚುಗಳಲ್ಲೇ ಭಗವಂತನನ್ನು ಹುಡುಕುವವರಿಗಾಗಿ ಅವರು ಎಚ್ಚರಿಸಿದ ಪರಿ, ‘ಮನುಷ್ಯನು ಒಂದು ಚೈತನ್ಯ ಎಂದು ತಿಳಿಯುವ, ಅನುಭವಿಸುವ ಧೈರ್ಯ ನಮಗೆ ಬೇಕು… ನಾವೇ ಜಗದೀಶ್ವರ ಸ್ವರೂಪಿಗಳೆಂದು ತಿಳಿದು ದೇವರಿಗಾಗಿ ಅಲ್ಲಿ, ಇಲ್ಲಿ ಹುಚ್ಚರÀಂತೆ ಹುಡುಕಾಡುವುದನ್ನು ಬಿಟ್ಟು ಬಿಡುವುದು ಒಳ್ಳೆಯದು…ಹುಚ್ಚು ಹುಡುಕಾಟಗಳನ್ನು ಕೈ ಬಿಟ್ಟು ನಾಟಕದ ಪಾತ್ರಧಾರಿಯಂತೆ ಈ ವಿಶ್ವ ನಾಟಕದಲ್ಲಿ ನಿಮ್ಮ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿರಿ’. ‘ಎಲ್ಲವನ್ನೂ ಭಗವಂತನೆಂದೇ ತಿಳಿದು, ಎಲ್ಲರಲ್ಲೂ ಭಗವಂತನನ್ನೇ ಕಾಣುತ್ತಾ ನಿಮ್ಮ ಕರ್ತವ್ಯಗಳನ್ನು ಮಾಡಬೇಕು.. ಎಲ್ಲದರಲ್ಲೂ ಭಗವಂತನೇ ತುಂಬಿರುವಾಗ ಆತನನ್ನು ಪ್ರತ್ಯೇಕವಾಗಿ ಕಾಣಲು ನಾವೆಲ್ಲಿಗೆ ಹೋಗಬೇಕು?… ಪ್ರತಿಯೊಬ್ಬ ಜೀವಿಯಲ್ಲೂ ದೇವನಿದ್ದಾನೆ.. ಈ ಜೀವ ಸೇವೆಯೇ ದೇವ ಸೇವೆ.” ಆಧ್ಯಾತ್ಮದ ಬದುಕೇ ಮಾನವ ಧರ್ಮವೆಂಬುದು ವಿವೇಕಾನಂದರ ಅಭಿಪ್ರಾಯವಾಗಿತ್ತು. ಅವರ ಉಪನ್ಯಾಸಗಳಲ್ಲಿ ಅವರು ಬಳಸುತ್ತಿದ್ದ ಧರ್ಮ ಶಬ್ದದ ಅರ್ಥವನ್ನು ಈ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಆದರೆ, ಸ್ವಾರ್ಥಿಗಳು, ಧರ್ಮ ಶಬ್ದವನ್ನು ಮತ ಅರ್ಥಾತ್ ನಂಬಿಕೆ, ಆಚರಣೆಗಳಿಗೇ ಸೀಮಿತಗೊಳಿಸಿ ವ್ಯಾಖ್ಯಾನಿಸುತ್ತಿದ್ದಾರೆ. ಬದುಕಿನ ಸರ್ವಸ್ತರಗಳನ್ನು, ದೃಷ್ಟಿಕೋನವನ್ನು ಆಧ್ಯಾತ್ಮೀಕರಣಗೊಳಿಸಬೇಕೆಂದು ಸ್ವಾಮೀಜಿ ಬಯಸಿದ್ದರು. ‘ರಾಜಕೀಯ ಮತ್ತು ಸಾಮಾಜಿಕ ವಿಷಯಗಳಿಂದ ಭರತಖಂಡವನ್ನು ತುಂಬುವುದಕ್ಕಿಂತ ಮುಂಚೆ ಆಧ್ಯಾತ್ಮಿಕ ಭಾವನೆಯ ಮಳೆಗರೆಯಿರಿ.. ಮಠಗಳಿಂದ , ಕಾನನಗಳಿಂದ, ತಮಗೆ ಮೀಸಲಾಗಿವೆ ಎಂದು ಭಾವಿಸಿದ ಕೆಲವು ಜನರಿಂದ ಆಧ್ಯಾತ್ಮ ಜ್ಞಾನವನ್ನು ಹೊರಗೆ ತಂದು ಎಲ್ಲರಿಗೂ ಪ್ರಚಾರ ಮಾಡಬೇಕು ಎಂಬುದು ಅವರ ಹೇಳಿಕೆ. ಆರ್ಥಿಕ ಕ್ಷೇತ್ರವೇ ಇರಲಿ, ಸಾಮಾಜಿಕ ಕ್ಷೇತ್ರವೇ ಆಗಿರಲಿ. ಎಲ್ಲವೂ ಆಧ್ಯಾತ್ಮೀಕರಣಗೊಳ್ಳಬೇಕೆಂಬುದು ಅಂದರೆ ಎಲ್ಲವೂ ಪರಮಾತ್ಮನ ಅಭಿವ್ಯಕ್ತಿ ಎಂಬ ಭಾವನೆ ಮೂಡುವಂತಾಗಬೇಕು. ಸ್ವಾಮಿ ವಿವೇಕಾನಂದರ ಆಶಯ. ಸಮಾಜ ಸುಧಾರಣೆ ರಾಜಕೀಯವನ್ನೂ ಅವುಗಳ ಮೂಲಕ ಹೇಗೆ ನಮ್ಮ ಆಧ್ಯಾತ್ಮಿಕ ಸಂಪತ್ತನ್ನು ಹೆಚ್ಚಿಸಬೇಕೆಂಬುದನ್ನು ಲಕ್ಷದಲ್ಲಿಟ್ಟುಕೊಂಡು ಬೋಧಿಸಬೇಕೆಂದು ಅವರು ಹೇಳುತ್ತಿದ್ದರು. ‘ಸಮಾಜದ ಸರ್ವ ಸದಸ್ಯರಿಗೂ ಸಂಪತ್ತು, ವಿದ್ಯಾಭ್ಯಾಸ ಅಥವಾ ಜ್ಞಾನ ಸಂಪಾದನೆಗೆ ಏಕ ಪ್ರಕಾರದ ಅವಕಾಶಗಳಿರಬೇಕು. ಎಲ್ಲ ವಿಷಯಗಳಲ್ಲಿ ಸ್ವಾತಂತ್ರ್ಯವಿರಬೇಕು. ಎಲ್ಲರೂ ಮೋಕ್ಷದ ಕಡೆಗೆ ನಡೆಯುವಂತಾಗಬೇಕು’ ಎನ್ನುತ್ತಿದ್ದರು ಸ್ವಾಮೀಜಿ. ‘ಮನುಷ್ಯರಿಗೆ ದೈಹಿಕವಾಗಿ ಮತ್ತು ವಸ್ತು ಮೂಲಕವಾಗಿ ನೆರವು ನೀಡಿ ಅವರ ಭೌತಿಕ ಅವಶ್ಯಕತೆಗಳನ್ನು ಪರಿಹರಿಸುವುದು ನಿಜವಾಗಿಯೂ ದೊಡ್ಡ ಕೆಲಸ’À.. ನಮ್ಮ ಎಲ್ಲಾ ರೀತಿಯ ಕ್ರಿಯೆಗಳಿಗೂ ಆಧ್ಯಾತ್ಮಿಕತೆಯೇ ಭದ್ರವಾದ ನೈಜ ತಳಪಾಯ…ಆಧ್ಯಾತ್ಮಿಕ ಶಕ್ತಿಯಿಲ್ಲದ ಮನುಷ್ಯನ ಭೌತಿಕ ಅವಶ್ಯಕತೆಗಳು ಸರಿಯಾಗಿ ಪೂರೈಸಲ್ಪಡಲಾರವು’ ಎಂಬುದು ಸ್ವಾಮೀಜಿಯವರ ಸ್ಪಷ್ಟ ಅಭಿಪ್ರಾಯ. ವಿವೇಕಾನಂದರು ವೇದಾಂತದ ಒಣ ಉಪದೇಶವನ್ನು ನೀಡುತ್ತಿರಲಿಲ್ಲ. ಕ್ರಾಂತಿಕಾರಿ ವಿಚಾರಗಳನ್ನು ಹೊಂದಿದ್ದರು. ‘ಮೋಕ್ಷವನ್ನು ಪಡೆಯುವುದು ಪ್ರತಿಯೋರ್ವ ಮನುಷ್ಯನ ಹಕ್ಕು. ಈ ವಿಕಾಸ ಪಥದ ಸ್ವಾತಂತ್ರ್ಯವನ್ನು ತಡೆಯುವ ಎಲ್ಲ ರೀತಿಯ ಸಾಮಾಜಿಕ ಕಟ್ಟುಪಾಡುಗಳು ಹಾನಿಕಾರಕ. ಅಂತಹ ಕಟ್ಟುಪಾಡುಗಳನ್ನು ಆದಷ್ಟು ಬೇಗ ಕಿತ್ತೆಸೆಯಬೇಕು. ವಿಕಾಸ ಪಥದಲ್ಲಿ ಮುನ್ನಡೆಯಲು ಸಹಕಾರಿಯಾದ ಎಲ್ಲ ರೀತಿಯ ಸಾಮಾಜಿಕ ವ್ಯವಸ್ಥೆಗಳನ್ನೂ, ಸಂಸ್ಥೆಗಳನ್ನೂ ಬಲಪಡಿಸಬೇಕು’ ಎನ್ನುವುದು ಅವರ ವಿಚಾರಧಾರೆ. ವಿವೇಕಾನಂದರು ಯಾವುದೇ ನಿರ್ದಿಷ್ಟವಾದ ಆರ್ಥಿಕ ಸಿದ್ಧಾಂತವನ್ನು ಅಥವಾ ಆರ್ಥಿಕ ನೀತಿಯನ್ನು ನೀಡಲಿಲ್ಲವಾದರೂ ಅವರ ಆಶಯಗಳನ್ನು ಆಧ್ಯಾತ್ಮಿಕ ಸಮಾಜವಾದವೆಂದು ಹೇಳುತ್ತಾರೆ. ಇಂದು ಪ್ರಚಲಿತವಿರುವ ಆರ್ಥಿಕ ಚಿಂತನೆಗಳು ಮತ್ತು ವಾದಗಳು ವಿವೇಕಾನಂದರ ಆಶಯಗಳನ್ನು ಪೂರ್ತಿಗೊಳಿಸುವ ಸಾಮಥ್ರ್ಯ ಹೊಂದಿವೆಯೇ ಎಂದು ಗಮನಿಸಬೇಕಿದೆ. ಕಮ್ಯುನಿಸಂ ವಿಚಾರಧಾರೆಯಲ್ಲಿ ಆಧ್ಯಾತ್ಮಿಕತೆಗೆ ಸ್ಥಾನವೇ ಇಲ್ಲ. ಮಾನವನನ್ನು ಹೆಚ್ಚು ಕಡಿಮೆ ಆರ್ಥಿಕ ಪಶುವೆಂಬ ಗ್ರಹಿಕೆಯ ಆಧಾರದ ಮೇಲೆ ರೂಪಿತವಾದ ಸಿದ್ಧಾಂತವದು. ಮಾನವನ ಭೌತಿಕ ಅಸ್ತಿತ್ವವನ್ನೇ ಸರ್ವಸ್ವವೆಂದು ಪರಿಗಣಿಸಿದ ಕಮ್ಯುನಿಸಂ , ಮಾನವರ ಕನಿಷ್ಠ ಅಗತ್ಯತೆಗಳನ್ನೂ ಪೂರೈಸಲಾರದೇ ವಿಫಲಗೊಂಡು, ತಿರಸ್ಕøತಗೊಂಡಿರುವುದು ಇತಿಹಾಸ. ಬಂಡವಾಳವಾದಿ ಚಿಂತನೆಗಳ ಆಧಾರವೇ ಮಾನವನ ಸ್ವಾರ್ಥ ಮತ್ತು ಲಾಭಗಳಿಕೆಯ ಹೆಚ್ಚಳ. ಆಧ್ಯಾತ್ಮವನ್ನು ಮತ, ಪಂಥಗಳ ಚೌಕಟ್ಟಿಗೆ ಬಂಧಿಸಿ, ಸ್ವಾರ್ಥ ಸಾಧನೆಯಲ್ಲಿ ಬೆಂಬಲಿಸುವ ವಿಚಾರಧಾರೆಯಿದು. ಮಾನವನ ಸೃಷ್ಟಿಯಲ್ಲದ, ಎಲ್ಲರಿಗೂ ಸಲ್ಲಬೇಕಾದ ಭೌತಿಕ ಸಂಪತ್ತನ್ನು ಕೆಲವರದೇ ಹಕ್ಕು ಎಂದು ಸಾಧಿಸುವ ಚಿಂತನೆಯ ಬಂಡವಾಳವಾದ ಆಧ್ಯಾತ್ಮಿಕ ಬದುಕಿಗೆ ಬಹುದೂರ. ಜನರಲ್ಲಿ ಸುಖಲೋಲುಪತೆಯನ್ನು ಹೆಚ್ಚಿಸಿ ಉನ್ನತ ಆದರ್ಶಗಳಿಂದ ವಿಮುಖರನ್ನಾಗಿಸಿ, ಪ್ರತಿಭಟನೆ ಮನೋಭಾವವನ್ನೇ ಚಿವುಟಿ ಹಾಕುವ, ಬಂಡವಾಳವಾದೀ ವ್ಯವಸ್ಥೆಯಿಂದ ಆಧ್ಯಾತ್ಮಿಕ ಸ್ವಾತಂತ್ರ್ಯದ ಹರಣವಾಗುತ್ತಿರುವುದು ಜನಸಾಮಾನ್ಯರ ಗಮನಕ್ಕೂ ಬರುತ್ತಿಲ್ಲ. ಸಂಪತ್ತಿನ ಗಳಿಕೆ ಮತ್ತು ಸಂಗ್ರಹಣೆಯೇ ಬದುಕಿನ ಪರಮ ಧ್ಯೇಯವೆಂಬ ಮಿಥ್ಯೆಯನ್ನೇ ಪ್ರಚಾರ ಮಾಡಿ ನಂಬಿಸಿ, ಮಾನವರ ಸೂಕ್ಷ್ಮ ಅಸ್ತಿತ್ವದ ಅಭಿವ್ಯಕ್ತಿಗಳಿಗೆ ಅವಕಾಶ ನೀಡದ ಬಂಡವಾಳವಾದ ವಾಸ್ತವದಲ್ಲಿ ಮಾನವ ವಿರೋಧಿ. ಬಂಡವಾಳಶಾಹಿಗಳು ನಡೆಸುವ ಮತೀಯ ಆಚರಣೆ, ನೀಡುವ ಧನ, ದೇಣಿಗೆಗಳು ತಾವು ಮಾಡುತ್ತಿರುವ ಶೋಷಣೆಯನ್ನು ಮುಚ್ಚಿಕೊಂಡು, ಜನರನ್ನು ದಾರಿ ತಪ್ಪಿಸುವ ಕುತಂತ್ರಗಳು ಜನರನ್ನು ಮತೀಯ ಉನ್ಮಾದಕ್ಕೊಳಪಡಿಸಿ ಪರಸ್ಪರರು ಹೊಡೆದಾಡಿಕೊಂಡಿರುವಂತೆ ಮಾಡಲು ರಾಜಕಾರಣಿಗಳಿಗೆ ಧನ ಬೆಂಬಲ ನೀಡುತ್ತಿರುವವರೂ ಇದೇ ಬಂಡವಾಳಶಾಹಿಗಳು. ಬುದ್ಧಿಜೀವಿಗಳನ್ನು ಹಣದಿಂದ ಖರೀದಿಸಿ, ತಮ್ಮ ಕಾರ್ಯವೈಖರಿಗೆ, ಬೌದ್ಧಿಕ ಸಮರ್ಥನೆ ಪಡೆದು ಜನರು ತಾವು ಒಳಗಾಗಿರುವ ಶೋಷಣೆಯ ಅರಿವಾಗದಂತೆ ಮಾಡುತ್ತಿರುವ ಬಂಡವಾಳವಾದದಿಂದ ಸಮಾಜದ ಆಧ್ಯಾತ್ಮಿಕ ಪ್ರಗತಿಗೆ ಮಾರಕವಾಗುತ್ತಿದೆ. ಇನ್ನುಳಿದಂತೆ ಸಮಾಜವಾದ, ಮಿಶ್ರ ಆರ್ಥಿಕನೀತಿ ಮುಂತಾದವು ಎಡಬಿಡಂಗಿ ಚಿಂತನೆಗಳು. ಇವೆಲ್ಲವೂ ಬಂಡವಾಳವಾದಿ ಚಿಂತನೆಯ ವಿವಿಧ ರೂಪಗಳು ಮಾತ್ರ. ಈ ಎಲ್ಲಾ ಸಿದ್ಧಾಂತಗಳು ಪ್ರತಿಪಾದಿಸುವದು ಜನಾಧಿಕಾರ ಮೊಟಕುಗೊಳಿಸುವ ಕೇಂದ್ರೀಕೃತ ಅರ್ಥವ್ಯವಸ್ಥೆಯನ್ನು. ಪ್ರತಿಯೋರ್ವ ವ್ಯಕ್ತಿಗೂ ದುಡಿಮೆಯ ಅವಕಾಶವಿರಬೇಕು. ದುಡಿಮೆಯ ಪ್ರತಿಫಲದಿಂದ ತನ್ನ ಹಾಗೂ ಅವಲಂಬಿತರ ಜೀವನದ ಕನಿಷ್ಠ ಅಗತ್ಯತೆಗಳಾದ ಆಹಾರ, ವಸ್ತ್ರ, ವಸತಿ, ಶಿಕ್ಷಣ, ಔಷದೋಪಚಾರಗಳನ್ನು ಪೂರೈಸಿಕೊಳ್ಳುವ ಅವಕಾಶವಿರಲೇಬೇಕು. ಇದು ಸಾಧ್ಯವಾಗುವುದು ಸಹಕಾರಿ ರಂಗದ ಜನಾಧಿಕಾರದ ವಿಕೇಂದ್ರೀಕೃತ ಅರ್ಥನೀತಿಯಿಂದ ಮಾತ್ರ. ಅಂತಹ ಆರ್ಥಿಕ ಸಿದ್ಧಾಂತವೇ ಶ್ರೀ ಪ್ರಭಾತ್ ರಂಜನ್ ಸರ್ಕಾರರಿಂದ 1959ರಲ್ಲಿ ಪ್ರತಿಪಾದಿಸಲ್ಪಟ್ಟ ಪ್ರಗತಿಶೀಲ ಉಪಯೋಗ ತತ್ವ – ಸಂಕ್ಷಿಪ್ತದಲ್ಲಿ ಪ್ರಉತ. ಪ್ರತಿಯೋರ್ವ ವ್ಯಕ್ತಿಗೂ ಜೀವನದ ಕನಿಷ್ಠ ಅಗತ್ಯತೆಗಳ ಪೂರೈಕೆಯನ್ನು ಖರೀದಿ ಶಕ್ತಿಯ ಮೂಲಕ ನೀಡಲೇಬೇಕೆಂಬ ಉದ್ದೇಶವೆಂದರೆ ಪ್ರತಿಯೋರ್ವನೂ/ಳೂ ತನ್ನ ಜೀವನದ ಗುರಿಯಾದ ಪೂರ್ಣತ್ವವನ್ನು ಪಡೆಯಲು ಅವಕಾಶ ನೀಡುವದಾಗಿದೆÀಯೆಂದು ಪ್ರಉತ ಹೇಳುತ್ತಿದೆ. ಪ್ರಉತದ ಆಧಾರವೇ ಆಧ್ಯಾತ್ಮಿಕತೆ. ಪ್ರಉತವೆಂದರೆ ಬರೀ ವಿಚಾರಧಾರೆ ಅಥವಾ ಒಣ ಸಿದ್ಧಾಂತವಲ್ಲ. ವಿಕೇಂದ್ರೀಕೃತ ಅರ್ಥವ್ಯವಸ್ಥೆಯ ಸ್ಪಷ್ಟ ಚಿತ್ರಣದೊಂದಿಗೆ ಅದನ್ನು ಕಾರ್ಯಾನುಷ್ಠಾನಗೊಳಿಸುವ ವಿಧಿ, ವಿಧಾನಗಳನ್ನು ಅದು ಒಳಗೊಂಡಿದೆ. ‘ಪವಿತ್ರ ಭಾವನೆಯಿಂದ ಜ್ವಲಿಸುತ್ತಾ, ಜಗದೀಶ್ವರನಲ್ಲಿ ಅಚಲ ಶೃದ್ಧೆಯಿಂದ, ಕಲ್ಲಿನ ಕೋಟೆಯಂತೆ ದೃಢರಾಗಿ, ಶೋಷಿತರ , ಪತಿತರ, ದೀನದರಿದ್ರರ ಬಗೆಗೆ ದಯಾ ಭಾವನೆಯಿಂದ , ಸಿಂಹದಂತೆ ಧೈರ್ಯಸ್ಥರಾಗಿ ಸಾವಿರಾರು ಮಂದಿ ಸ್ತ್ರೀ ಪುರುಷರು ಸರ್ವಮೋಕ್ಷದ, ಸರ್ವ ಸಹಾಯದ ಸಿದ್ಧಾಂತವನ್ನು, ಸರ್ವೋಧ್ಧಾರದ, ಸರ್ವಸಮಾನತೆಯ ವಿಚಾರಗಳನ್ನು ಸಾರುತ್ತಾ ಈ ದೇಶದ ಉದ್ದಗಲಗಳಲ್ಲಿ ಸಂಚಾರ ಮಾಡಲಿದ್ದಾರೆ’ ಎಂಬ ವಿವೇಕಾನಂದರ ಆಶಯವನ್ನು ಸಾಕಾರಗೊಳಿಸುವ ಶಕ್ತಿ ಪ್ರಉತ ಸಿದ್ಧಾಂತಕ್ಕಿರುವುದನ್ನು ನಾನು ಮನಗೊಂಡಿದ್ದೇನೆ. ***********

ಪ್ರಸ್ತುತ Read Post »

ಕಾವ್ಯಯಾನ

ಗಝಲ್ ಸಂಗಾತಿ

ಗಝಲ್ ಡಾ.ಗೋವಿಂದ ಹೆಗಡೆ ನಿನ್ನ ಕಣ್ಣೋಟ ತಾಕಿ ಇಲ್ಲಿ ಬೆಳಕು ಹರಿದಿದೆ ನಿನ್ನ ಕರಸ್ಪರ್ಶದಲ್ಲಿ ಪುಲಕ ಹೊನಲಾಗಿದೆ ಮಿಂಚು ಗೂಳಿ ಮೈಯನಿಡೀ ಉತ್ತು ಬಿತ್ತಿದೆ ಫಸಲು ಹೇಗಿರಬಹುದು ಕಾತರ ಕುಡಿಯಾಗಿದೆ ಎಂತಹ ಕರಿ ದುಗುಡ ಮಡುವಾಗಿತ್ತಿಲ್ಲಿ ನಿನ್ನ ಕೈ ಸೋಕಿದ್ದೇ ತಡ ಎಲ್ಲ ಬದಲಾಗಿದೆ ಸುಧೆಯನುಂಡವರು ಮಾತ್ರ ಅಮರರೇನು ನೀನು ತಂದ ಅನುರಾಗಕ್ಕೆ ಸಾವೆಲ್ಲಿದೆ ಹಿಗ್ಗನ್ನು ಬಿತ್ತಿ ಸುಗ್ಗಿ ಮಾಡುವ ರೀತಿ ನಿನ್ನದೇ ಸೌದಾಮಿನಿ ನೀನು ಈಗ ಕಣಜ ತುಂಬಿದೆ ************

ಗಝಲ್ ಸಂಗಾತಿ Read Post »

ಅಂಕಣ ಸಂಗಾತಿ

ಅವ್ಯಕ್ತಳ ಅಂಗಳದಿಂದ

ಅರಿವು ಅವ್ಯಕ್ತ ಎಲ್ಲಾ ಮಕ್ಕಳ ರಿಸಲ್ಟ್ ಗಳು ಒಂದಾದಮೇಲೊಂದು ಮೆಸೇಜ್ ಗಳಾಗಿ ನನ್ನ ಬಳಿ ಬರುತ್ತಿವೆ, ಕೆಲವು ಮೆಸೇಜ್ ಗಳು, ಕೆಲವು ಮುಖಗಳು, ಪ್ರಸನ್ನತೆಯ ಅಲೆಗಳು, ಸ್ವೀಟಿನ ಡಬ್ಬಗಳು, ಕೃತಜ್ಞತೆಗಳು,ಕಥೆಗಳು ಒಂದಾದಮೇಲೊಂದು ಸಿಹಿ ಸುದ್ದಿಗಳು ಎಳೆ ಎಳೆಯಾಗಿ ಹರಿದುಬಂದರೆ ನನಗೆ ಮಾತ್ರ ಮನಸ್ಸಿನಲ್ಲೊಂದು ಆತಂಕ! ಮುಖದಲ್ಲಿ ನಗುವಿದ್ದರೂ ಬಾಯಿ ತುಂಬಾ ಆಶೀರ್ವಾದಗಳಿದ್ದರೂ ಅವಳ ರಿಸಲ್ಟ್ ಏನಾಯ್ತು?! ಇನ್ನೂ ವಿಷಯ ಬರಲಿಲ್ಲವಲ್ಲ ಎಂಬುದು ಮಾತ್ರ ಮನಸಲ್ಲಿ ಬೇರೂರಿತ್ತು. ಬರುವ ಮಕ್ಕಳನ್ನೆಲ್ಲಾ ಕೇಳುವುದು “ಅವಳ ರಿಸಲ್ಟ್ ಏನಾಯ್ತು?” “ಯಾರಿಗಾದರೂ ಸಿಕ್ಕಿ ದ್ಲಾ.?”. “ಅವಳ ರಿಜಿಸ್ಟರ್ ನಂಬರ್ ಏನು……?” ಮಧ್ಯಾಹ್ನದೊತ್ತಿಗೆ ಅವಳಮ್ಮ ಫೋನ್ ಮಾಡಿದರು, ಕೆಲವೊಂದರಲ್ಲಿ ಬಹಳ ಒಳ್ಳೆ ಅಂಕ ಬಂದಿದೆ ಕನ್ನಡ ಮಾತ್ರ ಉಳಿದಿದೆ, ಧನ್ಯವಾದಗಳ ಒಂದು ಅಲೆ. ನನ್ನ ಮನದಲ್ಲಿ ಎಲ್ಲಿಲ್ಲದ ಸಂತೋಷ ಸದ್ಯ ಈ ಮಗು ಪಾರಾಗಿಬಿಟ್ಟಳು. ನಾನು ಮನೆಯೊಳಗೆ ಹೋಗಿ ಎರಡು ದ್ರಾಕ್ಷಿಗಳನ್ನು ಬಾಯಿಗೆ ಹಾಕಿ ಕೃಷ್ಣನಿಗೆ ಒಂದು ನಮಸ್ಕಾರ ಹಾಕಿ ಅಲ್ಲಿದ್ದ ಮಕ್ಕಳಿಗೆ ಪಾಠ ಮಾಡುವ ಕೆಲಸ ಮುಂದುವರಿಸಿದೆ. ಅವಳು ನನ್ನ ಬಳಿ ಬಂದ ದಿನ ಇನ್ನೂ ಹಸನಾಗಿ ಮನದಲ್ಲಿ ನನಗಿದೆ. 10ನೇ ತರಗತಿಗೆ ನನ್ನ ಬಳಿ ಕಲಿಯಲು ಬಂದವಳು ಒಂದೇ ಒಂದು ಸಾಲು ಓದಲೂ ಬಹಳ ಕಷ್ಟ.. ಅತೀ ಮುಗ್ದೆ. ತುಂಬಾ ಭಯ. ಮುಖದಲ್ಲಿ ನಗು ಇದ್ದರೂ ಕಣ್ಣಲ್ಲಿ ಏನೋ ಭಯ. ಮಾತೇ ಆಡುತ್ತಿರಲಿಲ್ಲ. ‘ಹೃದಯವನ್ನೇ ಯಾರೋ ಹಿಸುಕಿ ಬಿಟ್ಟಿದ್ದಾರೆ’ ಅನ್ನಿಸಿಬಿಟ್ಟಿತ್ತು.. ಓದಲು ಬರುವುದಿಲ್ಲ, ಬರೆಯುವ ಶೈಲಿ ಅರ್ಥವೇ ಆಗುತ್ತಿಲ್ಲ, ಹೆದರಿಕೆ ಮಿತಿಮೀರಿದ್ದು…. ಏನು ಮಾಡಲಿ ಈ ಹುಡುಗಿಗೆ ಎಂದು ಆಲೋಚಿಸುತ್ತಿದ್ದೆ. ದಿನಾ ನನ್ನ ಬಳಿ ಕೂಡಿಸಿಕೊಂಡು ಅವಳಲ್ಲಿ ಏನು ಕತೆಗಳಿವೆ ಎಂದು ವಿಶ್ಲೇಷಣೆ ಮಾಡುವುದು ನನ್ನ ಕೆಲಸವಾಗಿತ್ತು. ನನಗೆ ಸಹಕಾರ ಕೊಡಲು ಇನ್ನೂ ಮೂರು ಅದೇ ಮನೋಭಾವನೆ ಇರುವ ಹುಡುಗಿಯರು ನನ್ನ ಬಳಿ ಬರುತ್ತಿದ್ದರು ಅವರ ಸಹಾಯದಿಂದ ಹುಡುಗಿಯ ಎಲ್ಲಾ ಲಕ್ಷಣಗಳನ್ನು ಪದರಪದರವಾಗಿ ಬಿಚ್ಚತೊಡಗಿದೆ. ಆಶ್ಚರ್ಯವೆಂದರೆ ಓದಲೇ ಬರದ ಹುಡುಗಿ ಅದು ಹೇಗೆ ಯಾವ ಮೆಂಟಲ್ ಎಬಿಲಿಟಿ ಪುಸ್ತಕದಲ್ಲಿಯೂ ವಿವರಣೆ ಇಲ್ಲದೆ ಹಾಗೆ ಬರೆಯುತ್ತಿದ್ದಾಳೆ. ನನಗೆ ಒಂದು ಕುತೂಹಲ… ಓದಲು ಬರದವಳು ಹೇಗೆ ಬರೆಯುತ್ತಾಳೆ?! ಕೇಳಿದರೆ ಹೇಳುತ್ತಾಳೆ…. “ನನಗೆ ಬೇರೆ ಶಿಕ್ಷಕಿಯೊಬ್ಬಳು ಬೆತ್ತದಲ್ಲಿ ಬಿಡುತ್ತಿದ್ದಳು, ನನ್ನನ್ನು ಗಮನಿಸುತ್ತಲೇ ಇರಲಿಲ್ಲ…ಜಗತ್ತಿನ ಭಯಕ್ಕೆ ನಾನು ಹೇಗೋ ಬರೆಯುವುದನ್ನು ಕಲಿತೆ” ಎನ್ನುತ್ತಾಳೆ. ತನ್ನ ಮೊದಲ ಕ್ಲಾಸಿನಿಂದ ಹತ್ತನೇ ಕ್ಲಾಸಿನವರೆಗೆ ಒಂದು ಹುಡುಗಿಗೆ …..ನಿನಗೆ ಓದಲು ಬರೆಯಲು ಬರುವುದಿಲ್ಲ ಆಗೋದಿಲ್ಲ ಎಂದರೆ ಯಾರಿಗೂ ಹೇಳಿಕೊಳ್ಳಲಾಗದ ಎಷ್ಟು ಕಸಿವಿಸಿ ಪಟ್ಟಿರಬಹುದು. ನಮ್ಮ ಶೈಕ್ಷಣಿಕ ಸಮಾಜದಲ್ಲಿ ಮಕ್ಕಳು ಓದುತ್ತಿಲ್ಲ, ಬರೆಯುತ್ತಿಲ್ಲ, ಅಂಕಗಳಿಸುತ್ತಿಲ್ಲ, ಪಾಠ ಕೇಳುತ್ತಿಲ್ಲ, ಓದುತ್ತಿಲ್ಲ, ಬರೆಯುತ್ತಿಲ್ಲ, ಇತ್ಯಾದಿ, ಇತ್ಯಾದಿ…… ಕಾರಣಗಳನ್ನು ಕೊಡುವವರೇ ಹೊರತು ಕಾರಣದ ಮೂಲ ಸಮಸ್ಯೆಯನ್ನು ಹುಡುಕುವವರು ಬಹಳ ವಿರಳ . ತಂದೆ-ತಾಯಿಯೂ ಅಸಹಾಯಕರಂತೆ ಒದ್ದಾಡುವರು. ಇಲ್ಲವಾದರೆ ಮಕ್ಕಳನ್ನು ಶಿಕ್ಷಿಸುವರು……. ಈ ಹುಡುಗಿಗೆ ಇದ್ದ ಸಮಸ್ಯೆ ‘ಅಕ್ಷರ ಜ್ಞಾನವೇ ಇಲ್ಲ’. ಅಕ್ಷರಗಳನ್ನು ಚಿತ್ರಗಳಂತೆ ಜೋಡಿಸಿ ಜೋಡಿಸಿ ಬರೆಯುತ್ತಿದ್ದಳು ಅಕ್ಷರ ಜ್ಞಾನವಿಲ್ಲದವರು ಚಿತ್ರಗಳಂತೆ ಜೋಡಿಸಿ ಅಂಕಗಳನ್ನು ಹೇಗೆ ತೆಗೆಯಬಲ್ಲರು….. ಬರುತ್ತಿದ್ದದ್ದು ಮೂರು-ನಾಲ್ಕು ಅಂಕ. ಆದರೂ ನನಗೆ ಅದು ಬಹಳ ಹೆಮ್ಮೆಯ ವಿಷಯ. ಅಕ್ಷರ ಜ್ಞಾನವಿಲ್ಲದೆ ಅಂಕ ಪಡೆದವಳು, ಅಕ್ಷರಗಳು ಬಂದಮೇಲೆ ಅಕ್ಷರಗಳನ್ನು ಜೋಡಿಸಿ ಪದಗಳನ್ನು ಜೋಡಿಸಿ ಸ್ವಚ್ಛವಾಗಿ ವಾಕ್ಯ ಮಾಡಲಿಕ್ಕೆ ಕಲಿತರೆ ಅವಳು ಇನ್ನಷ್ಟು ಒಳ್ಳೆಯ ಅಂಕ ಪಡೆಯಬಹುದು…… ಒಳ್ಳೆ ಚಿತ್ರಗಾರಳು ಹಾಗಾಗಿ ಬದುಕುಳಿದಳು, ಕೂಡುವುದು- ಕಳೆಯುವುದು- ಗುಣಿಸುವುದು- ಬಾಗಿಸೋದು, ಅದೆಲ್ಲ ಆರಾಮಾಗಿ ಮಾಡ್ತಿದ್ಲು. ಹಾಗಾಗಿ, ಈ ಜನಗಳ ಮಧ್ಯದಲ್ಲಿ ಹೇಗೋ ಒಂದು ಹಂತದವರೆಗೆ ಜಸ್ಟ್ ಪಾಸ್ ಆಗಿದ್ಳು. ನನ್ನ ಮುಂದೆ ಒಂದಲ್ಲ ಹಲವಾರು ಚಾಲೆಂಜ್ ಗಳು…. ಅವಳಲ್ಲಿದ್ದ ಭಯ ಹೋಗಿಸಬೇಕು, ಅಷ್ಟೇ ಅಲ್ಲ ಹತ್ತಾರು ಜನರ ಎದುರು ಧೈರ್ಯವಾಗಿ ಸ್ಪಂದಿಸುವ ವ್ಯಕ್ತಿತ್ವ ರೂಪಿಸಬೇಕು, ಅವಳು ಸರಿಯಾದ ರೀತಿಯಲ್ಲಿ ಓದುವುದು ಬರೆಯುವುದು ಕಲಿಯಬೇಕು, ಮುಂದಿನ ಭವಿಷ್ಯಕ್ಕೆ ಒಂದು ದಾರಿ ಮಾಡಬೇಕು, ಅವಳ ನಗುವಿನ ಹಿಂದೆ ಇದ್ದ ನೋವುಗಳನ್ನು ಶಮನ ಮಾಡಬೇಕು. “ಮನಸ್ಸು ಮೆದುಳಿನ ಸರಿಯಾದ ಸ್ಪಂದನ ವಿದ್ದರೆ ಸಮಸ್ಯೆಗಳ ಅರಿವು ಅದರ ಶಮನಕ್ಕೆ ನಾಂದಿ ಯಾಗುವುದು.”( ಮುಂದುವರೆಯುವುದು …….) ***************

ಅವ್ಯಕ್ತಳ ಅಂಗಳದಿಂದ Read Post »

You cannot copy content of this page

Scroll to Top