ದಾರಾವಾಹಿ ಆವರ್ತನ ಅದ್ಯಾಯ–52 ಶಂಕರನೂ, ಸುರೇಂದ್ರಯ್ಯನೂ ಆವತ್ತೇ ಗುರೂಜಿಯವರ ಮನೆಗೆ ಹೊರಟು ಬಂದುದರಿಂದ ಗುರೂಜಿಯವರು ಅವರೊಡನೆ ಗಂಭೀರವಾಗಿ ಮಾತುಕತೆಗಿಳಿದರು. ‘ನೋಡಿ ಸುರೇಂದ್ರಯ್ಯ, ನಮ್ಮ ಇವತ್ತಿನವರೆಗಿನ ಅನುಭವದಲ್ಲಿ ನಮ್ಮ ಯಾವ ಶುಭಕಾರ್ಯದಲ್ಲೂ ಇಂಥದ್ದೊಂದು ಅಪಶಕುನ ನಡೆದದ್ದಿಲ್ಲ. ನಿಮ್ಮ ಆ ಜಾಗದಲ್ಲಿ ಏನೋ ಊನವಿದೆ ಅಂತ ನಮಗಾವತ್ತೇ ಗೊತ್ತಾಗಿತ್ತು. ಅದನ್ನು ಆ ಹೊತ್ತು ನಿಮ್ಮೆಲ್ಲರ ಗಮನಕ್ಕೂ ತಂದಿದ್ದೆವು. ಅಲ್ಲದೇ ಆ ಘಟನೆ ನಡೆದ ಮರುದಿನವೇ ಅಂಜನವಿಟ್ಟೂ ನೋಡಿದೆವು. ಅದರಿಂದ ಒಂದು ವಿಷಯ ಸ್ಪಷ್ಟವಾಯಿತು. ಏನೆಂದರೆ ಅಲ್ಲೊಂದು ದೊಡ್ಡ ದೋಷದ ಛಾಯೆ ಸಂಚರಿಸುತ್ತಿದೆ! ಆದರೆ ಅದು ನಿಮಗೆ ಸಂಬಂಧಿಸಿದ್ದು. ಆದ್ದರಿಂದ ನೀವೀಗ ನಮ್ಮ ಈ ಪವಿತ್ರವಾದ ಧಾರ್ಮಿಕ ಸ್ಥಳದಲ್ಲಿ ಕುಳಿತಿದ್ದೀರಿ. ಇಲ್ಲಿ ಸತ್ಯವನ್ನೇ ಹೇಳಬೇಕು ನೀವು. ಸುಳ್ಳು ಹೇಳಿದರೆ ಎಲ್ಲರಿಗೂ ಆಪತ್ತು ಕಟ್ಟಿಟ್ಟದ್ದು!’ ಎಂದು ಗುರೂಜಿಯವರು ಖಡಕ್ಕಾಗಿ ಹೇಳಿದರು. ಅದರಿಂದ ಸುರೇಂದ್ರಯ್ಯ ಕಕ್ಕಾಬಿಕ್ಕಿಯಾದರು. ‘ಅರೇ, ನೀವೇನು ಹೇಳುತ್ತಿದ್ದೀರಿ ಗುರೂಜಿ…, ನಮಗೆ ಸಂಬಂಧಿಸಿದ ದೋಷವೇ…? ಅದೇನೆಂದು ಅರ್ಥವಾಗಲಿಲ್ಲ. ಸ್ವಲ್ಪ ಬಿಡಿಸಿ ಹೇಳಿದರೆ ಒಳ್ಳೆಯದಿತ್ತು…!’ ‘ಹೌದು ಸುರೇಂದ್ರಯ್ಯ, ಮೊನ್ನೆ ನಡೆದ ಅಪಘಾತಕ್ಕೆ ನೀವೇ ಕಾರಣ!’ ಎಂದು ಗುರೂಜಿಯವರು ಮತ್ತೆ ಒತ್ತಿ ಹೇಳಿದರು. ಆಗ ಸುರೇಂದ್ಯಯ್ಯ ಇನ್ನಷ್ಟು ಬಿಳಿಚಿಕೊಂಡರು. ‘ಇಲ್ನೋಡಿ ಸುರೇಂದ್ರಯ್ಯ, ಗಾಬರಿಯಾಗದೆ ಮಾತಾಡಿ. ನೀವು ಯಾವತ್ತಾದರೂ ನಿಮ್ಮ ಮನೆತನದ ಪಿಲಿಚೌಂಡಿ (ಹುಲಿ ಚಾಮುಂಡಿ)ಗೆ ಏನಾದರೂ ಸೇವೆ ಕೊಡುತ್ತೇವೆಂದು ಸಂಕಲ್ಪಿಸಿಕೊಂಡಿದ್ದುಂಟಾ? ಸರಿಯಾಗಿ ಜ್ಞಾಪಿಸಿಕೊಂಡು ಹೇಳಿ ನೋಡುವಾ!’ ಎಂದರು ಗುರೂಜಿ. ಈಗ ಸುರೇಂದ್ರಯ್ಯ ಸಂಭಾಳಿಸಿಕೊಂಡು ಯೋಚಿಸಿದರು. ಬಳಿಕ ತಟ್ಟನೆ, ‘ಹೌದು ಗುರೂಜಿ ಹೇಳಿಕೊಂಡಿದ್ದೆವು. ಆದರೆ ನಾವಲ್ಲ, ನಮ್ಮ ತಂದೆಯವರಿದ್ದ ಕಾಲದಲ್ಲಿ ಅವರು ಒಂದು ಹರಕೆ ಕಟ್ಟಿಕೊಂಡದ್ದು ನೆನಪಿದೆ. ಆದರೇನು ಮಾಡುವುದು? ಆ ಕಾಲದಲ್ಲಿ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಹರಕೆ ಮರೆತು ಹೋಯಿತು. ಆದರೆ ಆ ಬಂಡೆ ಮಾರಾಟವಾದರೆ ಅಪ್ಪನ ಹರಕೆ ತೀರಿಸಿ ಅವರಿಗೂ ಅಜ್ಜನಿಗೂ ಎರಡು ಗುಂಡಗಳನ್ನು ಕಟ್ಟಿಸಬೇಕೆಂದು ನಾವು ಅಂದುಕೊಂಡಿದ್ದೆವು!’ ಎಂದು ಸಮಜಾಯಿಸಿ ನೀಡಿದರು. ಆಗ ಗುರೂಜಿಯವರ ಮುಖದಲ್ಲಿ ಗೆಲುವು ಕಾಣಿಸಿತು. ‘ಅದೇ ಮತ್ತೆ…! ಅಂಜನದಲ್ಲಿ ಆ ಸಂಗತಿ ನಮಗೆ ಸುಣ್ಣದ ಬೊಟ್ಟಿಟ್ಟಷ್ಟು ಸ್ಪಷ್ಟವಾಗಿ ಕಂಡು ಬಂತು!’ ಎಂದು ನಗುತ್ತ ಹೇಳಿದ ಗುರೂಜಿಯವರು ಶಂಕರನತ್ತ ಹೆಮ್ಮೆಯಿಂದ ದಿಟ್ಟಿಸಿ ಅರ್ಥಗರ್ಭಿತವಾಗಿ ನಕ್ಕರು. ಅಷ್ಟು ಕೇಳಿದ ಶಂಕರನಿಗೂ ಸಮಾಧಾನವಾಯಿತು. ಅದರ ಸೂಚನೆಯಾಗಿ ಅವನು ತನ್ನ ತಲೆಯನ್ನೊಮ್ಮೆ ಜೋರಾಗಿ ಕೊಡವಿಕೊಂಡು ಇನ್ನಷ್ಟು ನೆಟ್ಟಗೆ ಕುಳಿತ. ‘ಅಲ್ಲ ಸುರೇಂದ್ರಯ್ಯ, ನೀವು ಆ ಪಿಲಿಚೌಂಡಿಯನ್ನು ಅದೇ ಬಂಡೆಯ ಜಾಗದಿಂದಲೇ ನಿಮ್ಮ ಮನೆಗೆ ಕರೆದುಕೊಂಡು ಹೋದದ್ದಲ್ಲವಾ…?’ ಎಂದು ಗುರೂಜಿಯವರು ಮತ್ತೆ ಕೇಳಿದರು. ‘ಹೌದು ಗುರೂಜಿ. ಅದರ ಕಥೆಯನ್ನು ಆವತ್ತು ಶಂಕರಣ್ಣನಿಗೂ ಹೇಳಿದ್ದೆವು…!’ ಎಂದರು ಸುರೇಂದ್ರಯ್ಯ ಅಮಾಯಕರಂತೆ. ‘ಆದರೆ ಸುರೇಂದ್ರಯ್ಯ, ಆವತ್ತು ಆ ಶಕ್ತಿ ನಿಮ್ಮ ಹಿರಿಯರ ಭಕ್ತಿಗೆ ಒಲಿದು ನಿಮ್ಮ ಮನೆಗೆ ಬಂದಿದ್ದೇನೋ ನಿಜ. ಆದರೆ ಕಾಲಕ್ರಮೇಣ ನಿಮ್ಮ ಕುಟುಂಬದಲ್ಲಿ ಹುಟ್ಟಿದ ಮನಸ್ತಾಪ ಮತ್ತು ಒಡಕಿನಿಂದಾಗಿ ಅವರೆಲ್ಲ ಆ ದೈವವನ್ನು ಮರೆತುಬಿಟ್ಟರು. ಹಾಗಾಗಿ ಕೊನೆಕೊನೆಗೆ ಆ ದೇವತೆಗೆ ನೀರು ನೆರಳಿಲ್ಲದಂತಾಯಿತು. ಆದ್ದರಿಂದ ಅದು ಒಮ್ಮೆ ನಿಮ್ಮ ಕುಟುಂಬದ ಮೇಲೆಯೇ ರೋಸಿ ಮರಳಿ ತನ್ನ ಮೂಲಸ್ಥಾನವನ್ನು ಸೇರಿಕೊಂಡಿರುವುದು ನಿಮಗೆ ಗೊತ್ತುಂಟಾ? ಆನಂತರ ನಿಮ್ಮ ಹಿರಿಯರಾಗಲಿ, ನೀವಾಗಲಿ ಆ ಬಗ್ಗೆ ದರ್ಶನ ನಡೆಸಿ ಅವಳ ಕುಂದು ಕೊರತೆಗಳನ್ನು ಕೇಳಲೇ ಇಲ್ಲವಲ್ಲ!’ ಎಂದು ಗುರೂಜಿಯವರು ಒರಟಾಗಿ ಹೇಳಿದರು. ಅಷ್ಟು ಕೇಳಿದ ಸುರೇಂದಯ್ಯ ಮತ್ತೆ ಅಶಾಂತರಾದರು. ಓಹೋ ಹೀಗಾ ವಿಷಯ…? ಅದಕ್ಕೇ ಇರಬೇಕು ಕೆಲವು ಕಾಲದಿಂದ ನಾವು ಮುಟ್ಟಿದ್ದೆಲ್ಲವೂ ಶನಿ ಹಿಡಿದಂತೆ ಹಾಳಾಗುತ್ತಿರುವುದು! ಎಂದು ಯೋಚಿಸಿದವರು, ಖಂಡಿತಾ ಹೌದು. ಯಾಕೆಂದರೆ ಇಂಥ ಮಹಾಜ್ಞಾನಿಯ ಮಾತುಗಳೆಂದೂ ಸುಳ್ಳಾಗಲಿಕ್ಕಿಲ್ಲ! ಎಂದುಕೊಂಡರು. ‘ಇದ್ದರೂ ಇರಬಹುದು ಗುರೂಜೀ. ನಮ್ಮ ಕುಟುಂಬದ ಹತ್ತು ಹಲವು ತಾಪತ್ರಯಗಳ ಮಧ್ಯೆ ನಾವ್ಯಾರೂ ಇದನ್ನು ಗಮನಿಸಲು ಹೋಗಲೇ ಇಲ್ಲ ನೋಡಿ!’ ಎಂದು ವಿಷಾದ ವ್ಯಕ್ತಪಡಿಸಿದರು. ಆಗ ಗುರೂಜಿಯವರಿಗೆ ರೇಗಿಬಿಟ್ಟಿತು. ‘ಅರೆರೇ…! ಇರಬಹುದು ಎಂದರೇನು ಸುರೇಂದ್ರಯ್ಯ…? ನಾವೇನು ಸುಳ್ಳು ಹೇಳುತ್ತಿದ್ದೇವೆಂದಾ ನಿಮ್ಮ ಮಾತಿನರ್ಥ…?’ ಎಂದು ಕಹಿಯಾಗಿ ಪ್ರಶ್ನಿಸಿದರು. ಸುರೇಂದ್ರಯ್ಯ ಬೆಚ್ಚಿಬಿದ್ದವರು, ‘ಅಯ್ಯಯ್ಯೋ ನಾವೆಲ್ಲಿ ಹಾಗೆ ಹೇಳಿದೆವು ಗುರೂಜೀ…? ಖಂಡಿತಾ ನಮ್ಮಿಂದಲೇ ತಪ್ಪಾಗಿರುವುದು ಹೌದು. ಅದನ್ನು ಒಪ್ಪಿಕೊಳ್ಳುತ್ತೇವೆ!’ ಎಂದರು ತಟ್ಟನೆ. ‘ಹಾಗೆ ಹೇಳಿ ಮತ್ತೇ…! ನಾವು ಹೇಳುತ್ತಿರುವುದು ಅಕ್ಷರಶಃ ಸತ್ಯ ಸುರೇಂದ್ರಯ್ಯ. ನಮ್ಮ ತುಳುವರ ನಂಬಿಕೆಯಲ್ಲಿ ಹುಲಿ ಅಂದರೆ ಯಾವುದರ ಸಂಕೇತ ಹೇಳಿ…?’ ‘ಹುಲಿಯೆಂದರೇ…? ಮತ್ತ್ಯಾವುದು ಚೌಂಡಿಯಲ್ಲವಾ ಗುರೂಜೀ…!’ ‘ಓಹೋ ಹೌದಾ. ನಿಮಗೂ ಗೊತ್ತುಂಟಾ…?’ ‘ಗೊತ್ತಿಲ್ಲದೆ ಏನು, ನಮ್ಮ ಹಿರಿಯರೂ ಹಾಗೆಯೇ ನಂಬಿಕೊಂಡು ಬಂದವರಲ್ಲವಾ. ನಮ್ಮ ಮಹಿಷಮರ್ದಿನಿಯ ವಾಹನವೂ ಹುಲಿಯೇ ಅಲ್ಲವಾ…?’ ‘ಓಹೋ ಹೌದಾ…ಸರಿ. ಹಾಗಾದರೆ ಮೊನ್ನೆ ನಮ್ಮ ನಾಂದಿಪೂಜೆಯನ್ನು ಕೆಡಿಸಿ ಸಿಕ್ಕಸಿಕ್ಕದವರ ಮೇಲೆಲ್ಲ ಕೋಪ ತೋರಿಸಿದವರು ಯಾರಿರಬಹುದು? ಆ ಮೂಕ ಪ್ರಾಣಿಗಳು ಅಂಥದ್ದೊಂದು ಆಕ್ರಮಣವನ್ನು ನಿಮ್ಮೂರಲ್ಲಿ ಈ ಹಿಂದೆ ಬೇರೆ ಯಾರ ಮೇಲಾದರೂ ನಡೆಸಿದ್ದು ನಿಮಗೆ ಗೊತ್ತುಂಟೋ…?’ ಅಷ್ಟು ಕೇಳಿದ ಸುರೇಂದ್ರಯ್ಯನಿಗೆ ಗುರೂಜಿಯವರ ಮಾತಿನರ್ಥ ಮೆಲ್ಲನೆ ಹೊಳೆಯತೊಡಗಿತು. ಆದ್ದರಿಂದ ಅವರು ತಟ್ಟನೆ ಯೋಚನೆಗೆ ಬಿದ್ದರು. ಹೌದಲ್ಲವಾ…! ನಮಗೆ ತಿಳಿದಮಟ್ಟಿಗೆ ಆ ಕಾಡುಗುಡ್ಡೆಯಲ್ಲಿರುವ ಕೆಲವು ಚಿಟ್ಟೆಹುಲಿಗಳು ಊರಿನ ಒಂದೆರಡು ಕಡೆ ನಾಯಿ, ಕೋಳಿ ಮತ್ತು ಅಪರೂಪಕ್ಕೊಮ್ಮೆ ಸಣ್ಣಪುಟ್ಟ ದನ ಕರುಗಳನ್ನೆಲ್ಲಾದರೂ ಹಿಡಿದು ಗೋಣು ಮುರಿದು ಕೊಂಡು ಹೋಗಿದ್ದುಂಟು ಬಿಟ್ಟರೆ ಅವೆಂದೂ ಜನರ ಮೇಲೆ ದಾಳಿ ಮಾಡಿದಂಥ ಘಟನೆಗಳು ನಡೆದದ್ದಿಲ್ಲ! ಎಂದುಕೊಂಡವರು, ‘ಇಲ್ಲ, ಇಲ್ಲ ಗುರೂಜಿ. ಅವು ಬಹಳ ಹಿಂದಿನಿಂದಲೂ ನಮ್ಮ ಆಸುಪಾಸು ಬದುಕುತ್ತಿವೆಯಾದರೂ ಜನರಿಗೆ ಯಾವುದೇ ಹಾನಿ ಮಾಡಿದ ಸಂಗತಿಗಳಿಲ್ಲ!’ ಎಂದ ಸುರೇಂದ್ರಯ್ಯನಿಗೆ ತಕ್ಷಣ ಇನ್ನೊಂದು ವಿಷಯವೂ ಮನಸ್ಸಿಗೆ ಬಂದು, ‘ಅಂದರೇ…? ಓಹೋ…,ಈಗ ಅರ್ಥವಾಯಿತು ಗುರೂಜೀ. ಆ ಚೌಂಡಿಯೇ ನಮ್ಮ ಮೇಲೆ ಕೋಪಿಸಿಕೊಂಡಿದ್ದಾಳೆಂದು ತಾನೇ ತಮ್ಮ ಮಾತಿನರ್ಥ…?’ ‘ಹೌದು ಸುರೇಂದ್ರಯ್ಯ. ಈಗ ನೀವು ಸರಿಯಾಗಿ ಊಹಿಸಿದ್ದೀರಿ. ಅದಕ್ಕಾಗಿಯೇ ಅವಳೂ ನಮ್ಮವನೊಬ್ಬನ ಪ್ರಾಣಾಹುತಿ ಪಡೆದಿರುವುದು!’ ಎಂದು ಗುರೂಜಿಯವರು ತಮ್ಮ ಕಣ್ಣಗುಡ್ಡೆಗಳನ್ನು ಭ್ರೂಮಧ್ಯೆ ಸರಿಸಿಕೊಂಡು ಇಹದ ಇರುವನ್ನೇ ಮರೆತಂತೆ ಅಂದರು. ‘ಅಯ್ಯಯ್ಯೋ ಗುರೂಜಿ, ನಮ್ಮಿಂದ ಬಹಳ ದೊಡ್ಡ ಪ್ರಮಾದವಾಗಿ ಬಿಟ್ಟಿದೆಯಲ್ಲ. ಅವಳನ್ನು ಸಮಾಧಾನಿಸಲು ನಾವೇನು ಮಾಡಬೇಕೆಂಬುದನ್ನೂ ನೀವೇ ತಿಳಿಸಬೇಕು!’ ಎಂದು ಸುರೇಂದ್ರಯ್ಯ ತೀವ್ರ ವಿಚಲಿತರಾಗಿ ಅಂದರು. ಸುರೇಂದ್ರಯ್ಯನ ಶರಣಾಗತಿಯನ್ನು ಗಮನಿಸಿದ ಗುರೂಜಿಯವರ ಕಣ್ಣಗುಡ್ಡೆಗಳು ಮರಳಿ ಯಥಾಸ್ಥಿತಿಗೆ ಬಂದವು. ‘ಸಮಯ ಇನ್ನೂ ಮಿಂಚಿಲ್ಲ ಸುರೇಂದ್ರಯ್ಯ. ಬರುವ ತಿಂಗಳು ಪುಷ್ಯ ಹುಣ್ಣಿಮೆ. ಆ ದೇವಿಯನ್ನು ಒಲಿಸಿಕೊಳ್ಳಲು ಬಹಳ ಒಳ್ಳೆಯದಿನ. ಆವತ್ತು ಅವಳ ದರ್ಶನಸೇವೆಯನ್ನು ಇಟ್ಟುಕೊಂಡು, ನಿಮ್ಮ ಹಿರಿಯರು ಅವಳ ಸಂತೃಪ್ತಿಗಾಗಿ ಹೇಳಿಕೊಂಡಿದ್ದಂಥ ಹರಕೆಯನ್ನು ತೀರಿಸುವುದಾಗಿ ಅವಳೊಡನೆ ಬೇಡಿಕೊಳ್ಳಿ. ಅಲ್ಲಿಯತನಕ ಅವಳು ಆ ಬಂಡೆಯನ್ನು ಯಾರೀಗೂ ಬಿಟ್ಟುಕೊಡುವುದಿಲ್ಲ! ಒಂದುವೇಳೆ ಆ ಮೇಲೆಯೂ ಅವಳು ಒಪ್ಪದಿದ್ದರೆ ಮತ್ತೆ ಅವಳನ್ನು ಹೇಗೆ ಮಣಿಸಬೇಕೆಂದು ನಮಗೂ ಗೊತ್ತಿದೆ ಹಾಗೂ ನಮ್ಮ ಶಕ್ತಿ ಏನೆಂದು ಅವಳಿಗೂ ಚೆನ್ನಾಗಿ ತಿಳಿದಿದೆ ಸುರೇಂದ್ರಯ್ಯ! ಹಾಗಾಗಿ ನೀವು ಧೈರ್ಯದಿಂದ ನಾವು ಹೇಳಿದ ಕೆಲಸವನ್ನು ಮಾಡಿ ಮುಗಿಸಿ!’ ಎಂದು ಗುರೂಜಿಯವರು ವ್ಯಂಗ್ಯವಾಗಿ ನಗುತ್ತ ಆಜ್ಞಾಪಿಸಿದರು. ತಾವು ದೇವರನ್ನೂ ಮಣಿಸಬಲ್ಲಂಥ ವಿಶೇಷ ಶಕ್ತಿಯುಳ್ಳವರು ಎಂಬ ಅಹಂಕಾರವು ಗುರೂಜಿಯ ಮಾತುಗಳಲ್ಲಿ ತುಂಬಿ ತುಳುಕಿದ್ದನ್ನು ಕಂಡ ಸುರೇಂದ್ರಯ್ಯನಿಗೂ ಆ ಶಕ್ತಿಯ ಮೇಲೆ ಅವರಂಥದ್ದೇ ಹಗುರಭಾವನೆಯೊಂದು ಮೂಡಿಬಿಟ್ಟಿತು. ಆದ್ದರಿಂದ, ‘ಆಯ್ತು ಗುರೂಜಿ, ತಾವು ಹೇಳಿದಂತೆಯೇ ನಡೆದುಕೊಳ್ಳುತ್ತೇವೆ. ಒಟ್ಟಾರೆ ನಮ್ಮ ಬದುಕಿಗೆ ಚಿನ್ನದ ಗಣಿಯಂತಿರುವ ಆ ಬಂಡೆಯನ್ನು ಮಾತ್ರ ನಾವು ಯಾರೀಗೂ ಮತ್ತು ಯಾವ ಶಕ್ತಿಗೂ ಬಿಟ್ಟುಕೊಡುವುದಿಲ್ಲ!’ ಎಂದು ಕಠೋರ ನಿರ್ಧಾರದಿಂದ ಹೇಳಿದವರು ಗುರೂಜಿ ಮತ್ತು ಶಂಕರನಿಂದ ಬೀಳ್ಗೊಂಡು ಮನೆಗೆ ಹಿಂದಿರುಗಿದರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ
ದಾರಾವಾಹಿ ಆವರ್ತನ ಅದ್ಯಾಯ–50 ಚಿಟ್ಟೆಹುಲಿಗಳ ದಾಳಿಯ ನಂತರ ಗುರೂಜಿಯವರು ಸುರೇಂದ್ರಯ್ಯನ ಮನೆಯಿಂದ ಹೊರಡುವ ಮುನ್ನ ಎಲ್ಲರನ್ನೂ ಒಂದೆಡೆ ಸೇರಿಸಿ, ಇಲ್ಲಿ ನಡೆದ ಘಟನೆಯನ್ನು ಎಲ್ಲರೂ ಗೌಪ್ಯವಾಗಿಡಬೇಕೆಂದು ಕಟ್ಟಪ್ಪಣೆ ಮಾಡಿದ್ದರು. ಅದಕ್ಕೆ ಎಲ್ಲರೂ,‘ಹ್ಞೂಂ! ಆಯ್ತು ಗುರೂಜೀ…!’ಎಂದು ಒಪ್ಪಿದ್ದರು. ಆದರೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿದ ಕೂಡಲೇ ಗುಟ್ಟು ರಟ್ಟಾಗಿಬಿಟ್ಟಿತು. ಕಾನೂನು ನಿಯಮದಂತೆ ವೈದ್ಯರು ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದರು. ಬಳಿಕ ಆ ಸುದ್ದಿಯು ಕಾಳ್ಗಿಚ್ಚಿನಂತೆ ಎತ್ತೆತ್ತಲೋ ಹರಿದಾಡುತ್ತ ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗೂ ಹಾಗೂ ಮುಖ್ಯವಾಗಿ ಅರಣ್ಯ ಇಲಾಖೆಗೂ ತಲುಪಿಬಿಟ್ಟಿತು. ಆದ್ದರಿಂದ ಮರುದಿನ ಬೆಳಿಗ್ಗೆ ಮಾಧ್ಯಮಗಳೆಲ್ಲ ಸುರೇಂದ್ರಯ್ಯನ ಮನೆಗೆ ದೌಡಾಯಿಸಿದವು. ಬೆಳ್ಳಂಬೆಳಗ್ಗೆ ತಮ್ಮ ಮನೆಯ ಮುಂದೆ ಜಮಾಯಿಸಿದ ಸುದ್ದಿವಾಹಿನಿಗಳ ದಂಡನ್ನು ಕಂಡ ಸುರೇಂದ್ರಯ್ಯ ದಂಗಾಗಿಬಿಟ್ಟರು. ಆದರೂ ಗುರೂಜಿಯವರ ಆಜ್ಞೆಯಂತೆ ಘಟನೆಯ ವಿವರವನ್ನು ಯಾರಿಗೂ ನೀಡಲು ನಿರಾಕರಿಸಿದರು. ಆದರೆ ಕೆಲವು ಚಾಣಾಕ್ಷ ಪತ್ರಕರ್ತರು ಅರಣ್ಯ ಕಾಯ್ದೆಯ ಕುರಿತು ಖಡಕ್ಕಾಗಿ ಮಾತಾಡಿ ಅವರನ್ನು ಹೆದರಿಸಿದರು. ಆಗ ಸುರೇಂದ್ರಯ್ಯ ಮಂಕಾದರು. ಅದೇ ಸಮಯವನ್ನು ಬಳಸಿಕೊಂಡ ಮಾಧ್ಯಮಗಳೂ ಅವರ ಮೇಲೆ ಇನ್ನಿಲ್ಲದಂತೆ ಒತ್ತಡ ಹೇರಿದವು. ಅದರಿಂದ ಅಶಾಂತರಾದ ಸುರೇಂದ್ರಯ್ಯ ವಿಧಿಯಿಲ್ಲದೆ ಅವರೊಡನೆ ಘಟನಾಸ್ಥಳದತ್ತ ನಡೆದರು. ಅಷ್ಟರಲ್ಲಿ ಕಾರ್ಗಲ್ಲು ವಲಯಾರಣ್ಯಾಧಿಕಾರಿ, ಮಲೆ ಮಾದೇವಪ್ಪನವರು ಮತ್ತು ಉಪ ವಲಯಾರಣ್ಯಾಧಿಕಾರಿ ಅಮರೇಶರೂ ತಮ್ಮ ಸಿಬ್ಬಂದಿವರ್ಗದೊಂದಿಗೆ ಒಂದಿಬ್ಬರು ಅರಿವಳಿಕೆ ತಜ್ಞರನ್ನೂ ಕರೆದುಕೊಂಡು ಹುಲಿ ಹಿಡಿಯುವ ಬೋನಿನ ಸಮೇತ ಸ್ಥಳಕ್ಕಾಗಮಿಸಿದರು. ಬಹಳ ಹಿಂದಿನಿಂದಲೂ ಆ ಪ್ರದೇಶದಲ್ಲಿ ವಿವಿಧ ಜಾತಿಯ ಕಾಡುಪ್ರಾಣಿಗಳು ವಾಸಿಸುತ್ತಿದ್ದುದಕ್ಕೆ ಅರಣ್ಯ ಇಲಾಖೆಯಲ್ಲೂ ದಾಖಲೆಯಿತ್ತು. ಆದರೆ ಆ ಗ್ರಾಮದಲ್ಲಿ ಜನವಸತಿಗಳು ವಿರಳವಿದ್ದುದರಿಂದಲೂ ಅಲ್ಲಿನ ಜನರಿಗೂ ಮತ್ತವರ ಸಾಕುಪ್ರಾಣಿಗಳಿಗೂ ಅಲ್ಲಿನ ವನ್ಯಪ್ರಾಣಿಗಳಿಂದ ಅಲ್ಲಿಯವರೆಗೆ ಯಾವುದೇ ಹಾನಿ, ಅಪಾಯಗಳು ಸಂಭವಿಸಿದಂಥ ದೂರು ದುಮ್ಮಾನಗಳು ಇಲಾಖೆಯಲ್ಲಿ ದಾಖಲಾಗಿರದಿದ್ದುದರಿಂದಲೂ ಅವರು ಕೂಡಾ ಆ ಕುರಿತು ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಇವತ್ತು,‘ಆ ಮೃಗಗಳು ಏಕಾಏಕಿ ಊರವರ ಮೇಲೆ ದಾಳಿ ಮಾಡಿಬಿಟ್ಟಿವೆ!’ಎಂಬ ಸುಳ್ಳು ಪುಕಾರು ಊರಿನವರಿಗೂ ಮತ್ತು ಅರಣ್ಯ ಇಲಾಖೆಗೂ ಒಟ್ಟಿಗೆ ತಲುಪಿತ್ತು. ಆದ್ದರಿಂದ ಆಗಷ್ಟೇ ದಕ್ಷಿಣ ಕರ್ನಾಟಕದಿಂದ ವರ್ಗವಾಗಿ ಬಂದಿದ್ದ ಮಲೆ ಮಾದೇವಪ್ಪನವರು ಚುರುಕಾಗಿ ಆ ಪ್ರಾಣಿಗಳನ್ನು ಹಿಡಿಯುವ ಕಾರ್ಯಚರಣೆಗಿಳಿದರು. ಆದರೆ ಅವರು ತಮ್ಮ ಸಿಬ್ಬಂದಿಗಳನ್ನೇ ಅಂಥ ಅಪಾಯಕ್ಕೆ ತಳ್ಳಲು ತಯಾರಿರಲಿಲ್ಲ. ಹಾಗಾಗಿ ಅವರು ಬಂಡೆ ಒಡೆಯಲು ಬಂದಿದ್ದ ತಮಿಳು ಯುವಕರನ್ನೇ ಮುಂದೆ ಕರೆದರು. ‘ಏನ್ರಪ್ಪಾ ನಿನ್ನೆ ಘಟನೆ ನಡೆಯುವಾಗ ನೀವೆಲ್ಲರೂ ಇಲ್ಲೇ ಇದ್ದಿರಿ ಅಂತ ನಮಗೆ ಮಾಹಿತಿ ಬಂದಿದೆ. ಆದರೆ ನೀವೆಲ್ಲ ಇಲ್ಲಿಯವರಂತೆ ಕಾಣುತ್ತಿಲ್ಲವಲ್ಲ! ಎಲ್ಲಿನವರು ನೀವೆಲ್ಲ? ಇಲ್ಲಿಗ್ಯಾಕೆ ಬಂದಿದ್ದೀರಿ? ನಿಮ್ಮನ್ನು ಕರೆಯಿಸಿದವರು ಯಾರು…?’ಎಂದು ಯುವಕರ ಮೇಲೆ ಒಂದೇ ಸಮನೆ ಪ್ರಶ್ನೆಗಳನ್ನೆಸೆದರು. ಆಗ ಆ ಅಮಾಯಕ ಯುವಕರಿಗೆ ದಢೂತಿ ದೇಹದ ಆ ಅಧಿಕಾರಿಯನ್ನು ಕಂಡು ಮತ್ತು ಅವರ ಪಾಟಿ ಸವಾಲನ್ನೂ ಕೇಳಿ ಭಯದಿಂದ ಕೈಕಾಲು ನಡುಗಿತು. ಅದರಿಂದ ಪಟ್ಟನೆ ಏನುತ್ತರಿಸಬೇಕೆಂದು ತಿಳಿಯದ ಅವರೆಲ್ಲ ಒಬ್ಬರ ಮುಖವನ್ನೊಬ್ಬರು ನೋಡುತ್ತ,‘ಅಯ್ಯಯ್ಯೋ ಶಣ್ಮುಗಾ… ನಮ್ಮೂರಲ್ಲೇ ತಿಂಗಳಿಗೊಂದು ಕೋವಿಲ್(ದೇವಸ್ಥಾನ)ತಲೆಯೆತ್ತುತ್ತ ಕೈತುಂಬಾ ಗೆಲಸವಿರುವಾಗ ಈ ನಮ್ಮ ಮುಖಂಡನ ಮಾತು ಕಟ್ಟಿಕೊಂಡು ಇಂಥ ಊರಿಗೆ ಬಂದು ಈ ಹಾಳು ಬಂಡಿಗಲ್ಲು ಒಡೆಯುವ ಅವಸ್ಥೆ ನಮಗ್ಯಾಗೆ ಬೇಕಿತ್ತಪ್ಪಾ…! ನಿನ್ನೆ ಹುಲಿಗಳ ಬಾಯಿಯಿಂದ ತಪ್ಪಿಸಿದ ನೀನೇ ಇವತ್ತು ಈ ಗರ್ನಾಟಕ ಪೊಳೀಸರ (ಅರಣ್ಯ ಮತ್ತು ಪೊಲೀಸು ಸಮವಸ್ತ್ರಗಳ ಬಗ್ಗೆ ಅವರಿಗೆ ತಿಳಿದಿರಲಿಲ್ಲ) ಕೈಗೂ ಸಿಕ್ಕಿಸಿಬಿಟ್ಟೆಯಲ್ಲ ಸರವಣಾ…!’ಎಂದು ಕೊರಗುತ್ತ ನಿಂತುಬಿಟ್ಟರು. ಅಷ್ಟರಲ್ಲಿ ಅವರಲ್ಲೊಬ್ಬ ಯುವಕ ಸ್ವಲ್ಪ ಧೈರ್ಯ ಮಾಡಿದವನು, ‘ಹ್ಞೂಂ ಅಯ್ಯಾ ಇದ್ದೆವು. ನಮ್ಮ ಮೇಸ್ತ್ರಿ ನಮ್ಮನ್ನು ಇಲ್ಲಿಗೆ ಗೆಲಸಕ್ಕೆಂದು ಕರ್ಕೊಂಡು ಬಂದಿದ್ದ. ನಾವು ಮದ್ರಾಸಿನವರು…!’ ಎಂದು ತನ್ನ ಅರೆಬರೆ ಕನ್ನಡದಲ್ಲಿ ಅಳುಕುತ್ತ ಹೇಳಿದ. ‘ಓಹೋ ಹೌದಾ…?’ಎಂದ ಮಾದೇವಪ್ಪನವರು ಏನೋ ಯೋಚನೆಗೆ ಬಿದ್ದರು. ಬಳಿಕ ಅದನ್ನು ಆಮೇಲೆ ನೋಡಿಕೊಳ್ಳೋಣವೆಂದುಕೊಂಡವರು,‘ಒಳ್ಳೆಯದಾಯ್ತು ಬಿಡ್ರಪ್ಪಾ… ನಿನ್ನೆಯ ಘಟನೆಯನ್ನು ನೀವೆಲ್ಲರೂ ಕಂಡಿದ್ದೀರಿ ಅಂದ ಮೇಲೆ ಮುಗಿಯಿತು. ನಮಗೂ ಸಾಕ್ಷಿ ಬೇಕಿತ್ತು. ನಿನ್ನೆ ಗಾಯಗೊಂಡವರಿಗೆ ಮತ್ತು ಅವರಲ್ಲಿ ಯಾವನಾದ್ರೂ ಸತ್ತುಗಿತ್ತು ಹೋದನೆಂದರೆ ಅವನ ಕುಟುಂಬಕ್ಕೆ ಸರಕಾರದಿಂದ ಪರಿಹಾರವನ್ನೂ ಕೊಡಿಸಬೇಡವೇನ್ರಯ್ಯಾ…?’ಎಂದು ನಗುತ್ತ ಹೇಳಿದರು. ಬಳಿಕ, ‘ಹೌದೂ, ಒಟ್ಟು ಎಷ್ಟು ಲಿಯೋಪರ್ಡ್ಗಳಿದ್ದುವಪ್ಪಾ…?’ ಎಂದರು ಕುತೂಹಲದಿಂದ. ಆ ಯುವಕನಿಗೆ ಸಾಹೇಬರ ಇಂಗ್ಲಿಷ್ ಅರ್ಥವಾಗದೆ,‘ಲ್ಯಾಪಾಡ್ರು ಅಲ್ಲ್ರಯ್ಯಾ… ಉಳಿಗಲು, ಚುಟ್ಟೆ ಉಳಿಗಲು. ಎರಡು ದೊಡ್ಡವು ಇನ್ನೆರಡು ಸಣ್ಣವು. ದೊಡ್ಡವೆರಡೂ ನಮ್ಮೇಲೇ ಬಿದ್ದುವಯ್ಯಾ…!’ಎಂದ ಆತಂಕದಿಂದ. ಅವನ ವಿವರಣೆ ಕೇಳಿದ ಮಾದೇವಪ್ಪನವರಿಗೂ ನೆರದವರಿಗೂ ಗೊಳ್ಳೆಂದು ನಗು ಬಂತು. ಅದನ್ನು ಕಂಡ ಆ ಯುವಕನಿಗೇನೂ ಅರ್ಥವಾಗದೆ ತಮ್ಮ ತಂಡದವರನ್ನು ಪಿಳಿಪಿಳಿ ನೋಡಿದ. ಆಗ ಅವರೂ ಕಕ್ಕಾಬಿಕ್ಕಿಯಾದರು. ‘ಹೌದಾ, ಹುಲಿಗಳಾ! ಸರಿ, ಸರಿ. ಇವತ್ತು ಅವನ್ನು ಬಿಡೋದು ಬೇಡ. ಹಿಡಿದು ಕೊಂಡೊಯ್ದು ದೂರದ ಅಭಯಾರಣ್ಯಕ್ಕೆ ಬಿಟ್ಟುಬಿಡೋಣ. ಆದರೆ ಅದಕ್ಕೀಗ ನಿಮ್ಮ ಸಹಾಯವೂ ಬೇಕಲ್ವೇ…?’ ಮಾದೇವಪ್ಪನವರು ನಗುತ್ತ ಅಂದರು. ಅಷ್ಟು ಕೇಳಿದ್ದೇ ಆ ಯುವಕರ ತಂಡವು ಹುಮ್ಮಸ್ಸಿನಿಂದ ಮುಂದೆ ಬಂತು. ಅವರ ಮುಗ್ಧತೆ ಕಂಡ ಮಾದೇವಪ್ಪನವರಿಗೆ ಒಂದುಕ್ಷಣ ಅಯ್ಯೋ ಪಾಪವೇ! ಎಂದೆನಿಸಿತು. ಆದರೆ ಮರುಕ್ಷಣ ತಮ್ಮ ಸಿಬ್ಬಂದಿಯ ಕುರಿತೂ ಯೋಚಿಸಿದವರು ಕರುಣೆಯನ್ನು ಬದಿಗೊತ್ತಿ ಮಂದಹಾಸ ಬೀರುತ್ತ ತಮ್ಮಿಬ್ಬರು ಸಿಬ್ಬಂದಿಗಳನ್ನು ಮತ್ತು ಅರಿವಳಿಕೆ ತಜ್ಞರನ್ನೂ ಕರೆದು ಅವರೊಂದಿಗೆ ಬಂಡೆಗಳತ್ತ ಕಳುಹಿಸಿಕೊಟ್ಟರು. ತಮಿಳು ಯುವಕರ ದಂಡೊಂದು ಮುಂದೆಯೂ, ಇಲಾಖೆಯ ಮಂದಿ ಹಿಂದೆಯೂ ಪರೇಡ್ ನಡೆಸುವಂತೆ ಬಂಡೆಗಳತ್ತ ನಡೆದರು. ಅಷ್ಟರಲ್ಲಿ ಆ ಕಾರ್ಯಚರಣೆಯ ರೋಚಕ ದೃಶ್ಯಗಳನ್ನು ಸೆರೆಹಿಡಿದು ತಂತಮ್ಮ ಚಾನೆಲ್ಗಳಲ್ಲಿ ಬಿತ್ತರಿಸುವ ಕಾತರದಲ್ಲಿದ್ದ ಕೆಲವು ಮಾಧ್ಯಮದವರೂ ಅವರ ಹಿಂದೆ ಹೊರಟರು. ಆದರೆ ಮಾದೇವಪ್ಪನವರು ಅವರಿಗೆ ಅನುಮತಿ ಕೊಡಲಿಲ್ಲ. ಅದರಿಂದ ನಿರಾಶರಾದ ಅವರು ಮತ್ತೆ ಸುರೇಂದ್ರಯ್ಯನನ್ನು ಹಿಡಿದುಕೊಂಡರು. ‘ನಿನ್ನೆ ನಡೆದ ಭೀಕರ ಘಟನೆಗೆ ಕಾರಣವೇನು? ಯಾಕಾಗಿ ಇಲ್ಲಿ ಪೂಜಾ ವಿಧಿಗಳನ್ನು ನಡೆಸಿದಿರಿ? ಈ ಜಾಗ ಖಾಸಗಿಯೋ ಅಥವಾ ಸರಕಾರದ್ದೋ? ಇಂಥ ಅರಣ್ಯ ಪ್ರದೇಶದಲ್ಲಿ ಯಾವ ಕೆಲಸಕಾರ್ಯಗಳನ್ನು ನಡೆಸಬೇಕಿದ್ದರೂ ಅರಣ್ಯ ಇಲಾಖೆ ಮತ್ತು ಭೂಕಂದಾಯ ಇಲಾಖೆಗಳ ಅನುಮತಿ ಪಡೆಯುವುದು ಕಡ್ಡಾಯ. ಹೀಗಿರುವಾಗ ನೀವು ಅದನ್ನು ಪಡೆದುಕೊಂಡಿದ್ದೀರಾ…?’ಎಂದು ಸುರೇಂದ್ರಯ್ಯ ಕಕ್ಕಾಬಿಕ್ಕಿಯಾಗುವಂಥ ಪ್ರಶ್ನೆಗಳನ್ನೆಸೆದರು. ಆದರೂ ಸುರೇಂದ್ರಯ್ಯನ ಅಷ್ಟು ಬೇಗ ಸೋಲೊಪ್ಪಿಕೊಳ್ಳುವ ಕುಳವಲ್ಲ. ಆದ್ದರಿಂದ ಅವರು ಸಂಭಾಳಿಸಿಕೊಂಡು,‘ನೀವು ಒಬ್ಬೊಬ್ಬರಾಗಿ ಒಂದೊಂದು ಪ್ರಶ್ನೆಗಳನ್ನು ಕೇಳಿದರೆ ಉತ್ತರಿಸಬಹುದು. ಅದುಬಿಟ್ಟು ಎಲ್ಲರೂ ಒಟ್ಟಾಗಿ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಕಡ್ಡಿ ಗೀರುವಂತೆ ವರ್ತಿಸಿದರೆ ನಾವು ಯಾರಿಗೇನು ಹೇಳಲೀ…!’ಎಂದು ತಾವೂ ಸಿಡುಕಿದರು. ಆಗ ಮಾಧ್ಯಮದವರೂ ತಮ್ಮ ಗಡಿಬಿಡಿಯನ್ನು ಹತ್ತಿಕ್ಕಿಕೊಂಡರು.‘ನೋಡೀ… ಮೊದಲನೆಯದಾಗಿ ನಾವು ಹೇಳುವುದೇನೆಂದರೆ ಈ ಜಮೀನು ನಮ್ಮ ಅಜ್ಜ, ಮುತ್ತಜ್ಜನ ಕಾಲದಿಂದಲೂ ನಮಗೇ ಸೇರಿದ್ದು. ಇದರ ಪಟ್ಟೆಯೂ ಈಗ ನಮ್ಮ ಹೆಸರಿನಲ್ಲೇ ಇದೆ. ಜಮೀನು ನಮ್ಮದೆಂದ ಮೇಲೆ ಬಂಡೆಯೂ ನಮ್ಮದೇ ಅಲ್ಲವಾ? ಅಷ್ಟಲ್ಲದೇ ನಮ್ಮ ಹಿರಿಯರ ಕಾಲದಿಂದಲೂ ಈ ಬಂಡೆಗಳೊಳಗೆ ನಮ್ಮ ದೈವ ಭೂತಗಳು ನೆಲೆಸಿದ್ದವು ಮತ್ತು ಈಗಲೂ ಇವೆ. ಆದ್ದರಿಂದ ಅವುಗಳಿಗೆ ಹಮ್ಮಿಕೊಂಡಿದ್ದ ಪೂಜೆಯೊಂದನ್ನು ಮಾಡಲು ಏಕನಾಥ ಗುರೂಜಿಯವರನ್ನು ಕರೆಯಿಸಿದ್ದೆವು. ಅವರದನ್ನು ನಡೆಸುತ್ತಿದ್ದ ಹೊತ್ತಿಗೇ ಆ ಹಾಳು ಪ್ರಾಣಿಗಳು ನಮ್ಮೆಲ್ಲರ ಮೇಲೆ ದಾಳಿ ಮಾಡಿದವು. ಆದರೂ ದೇವರ ದಯೆಯಿಂದ ಗುರೂಜಿಯವರಿಗೇನೂ ತೊಂದರೆಯಾಗಿಲ್ಲ. ಅದು ನಮ್ಮ ಪುಣ್ಯ!’ ಎಂದು ವಿಷಾದ ತೋರ್ಪಡಿಸುತ್ತ ವಿವರಿಸಿದರು. ‘ಹಾಗಾದರೆ ಈ ಕಲ್ಲು ಒಡೆಯುವ ಜನರೆಲ್ಲ ಯಾಕೆ ಬಂದರು?’ ಪತ್ರಕರ್ತನೊಬ್ಬ ತಟ್ಟನೇ ಪ್ರಶ್ನಿಸಿದ. ಆಗ ಸುರೇಂದ್ರಯ್ಯನೂ ಅವಕ್ಕಾದವರು, ‘ಅದು, ಅದೂ… ಅವರು ಬಂಡೆ ಒಡೆಯಲು ಬಂದವರು!’ ಎಂದು ಧೈರ್ಯದಿಂದ ಹೇಳಿಯೇಬಿಟ್ಟರು. ‘ಹೌದಾ…! ಯಾವ ಬಂಡೆ? ಅದನ್ನು ತೆರವುಗೊಳಿಸಲು ಸಂಬಂಧಪಟ್ಟ ಇಲಾಖೆಗಳ ಅನುಮತಿ ಸಿಕ್ಕಿದೆಯಾ…?’ ಎಂದು ಮತ್ತದೇ ಪ್ರಶ್ನೆಗಳು ಕೇಳಿ ಬಂದವು. ‘ಹೌದು! ಅದರ ಬಗ್ಗೆ ನಾವು ಇಲ್ಲಿನ ಪಂಚಾಯತ್ ಆಫೀಸಿಗೆ ಹದಿನೈದು ದಿನಗಳ ಮುಂಚೆಯೇ ಅರ್ಜಿ ಕೊಟ್ಟಿದ್ದೆವು. ಅವರು ಬಂದು ನೋಡಿಯೂ ಹೋಗಿದ್ದಾರೆ. ಆದರೆ ಅವರ ಲಿಖಿತ ಅನುಮತಿ ಸಿಕ್ಕಿದ ನಂತರವೇ ಕೆಲಸ ಆರಂಭವಾಗುವುದು!’ಎಂದು ಖಡಕ್ಕಾಗಿ ಉತ್ತರಿಸಿದ ಸುರೇಂದ್ರಯ್ಯ,‘ಹ್ಞಾಂ! ಇನ್ನೊಂದು ಮಾತು. ಅದನ್ನೂ ನಿಮಗೀಗಲೇ ಹೇಳಿಬಿಡುತ್ತೇವೆ. ನಮ್ಮ ಈಶ್ವರಪುರದ ಬುಕ್ಕಿಗುಡ್ಡೆ ಎಲ್ಲರಿಗೂ ಗೊತ್ತಿರಬಹುದಲ್ಲವಾ? ಅಲ್ಲೊಂದು ಕಡೆ ಕಾರಣಿಕದ ನಾಗ ಪರಿವಾರ ದೈವಗಳಿಗೆ ನಿರ್ಮಿಸಬೇಕೆಂದಿರುವ ದೇವಸ್ಥಾನಕ್ಕೆ ನಾವು ಈ ಬಂಡೆಯನ್ನು ದಾನವಾಗಿ ಕೊಟ್ಟಿದ್ದೇವೆ!’ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಸಡ್ಡು ಹೊಡೆವಂತೆ ಉತ್ತರಿಸಿದರು. ಸುರೇಂದ್ರಯ್ಯನ ಬಾಯಿಯಿಂದ,‘ಕಾರಣಿಕ’ ಮತ್ತು ‘ನಾಗ’ ಎಂಬ ಎರಡು ಪದಗಳು ಹೊರಗೆ ಬಿದ್ದ ಕೂಡಲೇ ಪತ್ರಕರ್ತರಲ್ಲಿ ಅನೇಕರು ತಣ್ಣಗಾದರು. ಅಷ್ಟೊತ್ತಿಗೆ ಚಿಟ್ಟೆಹುಲಿ ಹಿಡಿಯಲು ಹೋಗಿದ್ದ ತಂಡವೂ ಹಿಂದಿರುಗಿ ಬಂದಿತು. ಬಂದವರು, ಅರಣ್ಯಾಧಿಕಾರಿಗಳೊಡನೆ ಗೌಪ್ಯವಾಗಿ ಮಾತಾಡಿದರು. ಪತ್ರಕರ್ತರೂ ದೃಶ್ಯ ಮಾಧ್ಯಮದವರೂ ಸುರೇಂದ್ರಯ್ಯನನ್ನು ಬಿಟ್ಟು ಅವರನ್ನು ಮುತ್ತಿಕೊಂಡರು. ಅಷ್ಟರಲ್ಲಿ ಅಮರೇಶನಿಂದ ಕಾರ್ಯಾಚರಣೆಯ ಮಾಹಿತಿ ಪಡೆದುಕೊಂಡ ಮಹಾದೇವಪ್ಪನವರು ಮಾಧ್ಯಮದವರನ್ನು ಉದ್ದೇಶಿಸಿ ಮಾತಾಡತೊಡಗಿದರು,‘ನಮ್ಮ ತಂಡವು ಇಡೀ ಬಂಡೆಗಳ ಎಡೆಎಡೆಗಳನ್ನೂ ಶೋಧಿಸಿ ನೋಡಿತು. ಅಲ್ಲೆಲ್ಲೂ ಯಾವ ಪ್ರಾಣಿಗಳೂ ಸಿಗಲಿಲ್ಲ. ಬಹುಶಃ ಅವುಗಳು ನಮ್ಮನ್ನು ಕಂಡು ಓಡಿ ಹೋಗಿರಬಹುದು. ಆದರೆ ಅವು ಬಹಳಷ್ಟು ಕಾಲದಿಂದ ಇಲ್ಲಿಯೇ ವಾಸವಿದ್ದುವು ಎಂಬುದು ನಮ್ಮ ತಜ್ಞರಿಗೆ ತಿಳಿದು ಬಂದಿದೆ. ಆದರೂ ಯಾರೂ ಗಾಬರಿಪಡುವ ಅಗತ್ಯವಿಲ್ಲ. ಯಾಕೆಂದರೆ ಆ ಪ್ರಾಣಿಗಳು ಹ್ಯೂಮನ್ ಹಂಟರ್ಗಳಲ್ಲ. ಅಂದರೆ ನರಭಕ್ಷಕಗಳಲ್ಲ! ಅವುಗಳ ನೆಲೆಯ ಹತ್ತಿರ ಬೆಂಕಿ ಕಾಣಿಸಿಕೊಂಡಿದ್ದರಿಂದ ಅವು ಹೆದರಿ ದಾಳಿ ನಡೆಸಿರುವ ಸಾಧ್ಯತೆಯಿದೆ. ಆ ಬಗ್ಗೆಯೂ ಸೂಕ್ತ ತನಿಖೆ ನಡೆಸಲಾಗುವುದು!’ಎಂದವರ ದೃಷ್ಟಿ ಒಂದುಕ್ಷಣ ಸುರೇಂದ್ರಯ್ಯನತ್ತ ಹೊರಳಿ ಮತ್ತೆ ಟಿವಿ ಕ್ಯಾಮರಾಗಳತ್ತ ನೆಟ್ಟಿತು. ಅದನ್ನು ಗ್ರಹಿಸಿದ ಸುರೇಂದ್ರಯ್ಯ ಒಳಗೊಳಗೇ ಚಡಪಡಿಸಿದರು. ‘ಇಂದಲ್ಲ ನಾಳೆ ಆ ಪ್ರಾಣಿಗಳು ಮರಳಿ ಬರಬಹುದು. ಆಗ ಅವುಗಳನ್ನು ಸುರಕ್ಷಿತವಾಗಿ ಹಿಡಿದು ಅಭಯಾರಣ್ಯಕ್ಕೆ ವರ್ಗಾಯಿಸುವ ವ್ಯವಸ್ಥೆಯನ್ನು ಇಲಾಖೆ ಮಾಡುತ್ತದೆ. ಅದಕ್ಕೆ ಇಲ್ಲಿನ ಸಾರ್ವಜನಿಕರ ಸಹಾಯವೂ ಬೇಕಾಗುತ್ತದೆ. ಇನ್ನು ಮುಂದೆ ಕೆಲವು ಕಾಲ ಈ ಬೋನು ಇಲ್ಲೇ ಇರುತ್ತದೆ. ಆ ಪ್ರಾಣಿಗಳಿಂದ ದಾಳಿಗೊಳಗಾದವರಿಗೆ ಸದ್ಯದಲ್ಲೇ ಪರಿಹಾರ ಮಂಜೂರು ಮಾಡಲಾಗುವುದು!’ಎಂದು ಆಶ್ವಾಸನೆಯಿತ್ತರು. ನಡೆದ ಭಯಾನಕ ಘಟನೆಯೊಂದರ ಸಾರಾಂಶವನ್ನು ರಾಜ್ಯ ಮತ್ತು ದೇಶದಾದ್ಯಂತ ಎಪ್ಪತ್ತೆರಡು ಗಂಟೆಗಳ ಕಾಲ ಎಡೆಬಿಡದೆ ರೋಚಕವಾಗಿ ಬಿತ್ತರಿಸುತ್ತ ತಂತಮ್ಮ ವಾಹಿನಿಗಳ ಟಿ.ಆರ್.ಪಿ. ಹೆಚ್ಚಿಸಿಕೊಳ್ಳುವುದರೊಂದಿಗೆ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯ ಸಲುವಾಗಿಯೂ ತಮ್ಮ ವೀಕ್ಷಕರಲ್ಲಿ ಅರಿವು ಮೂಡಿಸಬೇಕೆಂಬ ಧಾವಂತದಲ್ಲಿದ್ದ ಕೆಲವು ಮಾಧ್ಯಮಗಳ ಉತ್ಸಾಹಕ್ಕೆ ಸಮಸ್ಯೆಯೊಂದು ಬಿಸಿಯೇರುವ ಮುನ್ನವೇ ಟುಸ್ಸೆಂದದ್ದು ನಿರಾಶೆ ಮೂಡಿಸಿತು. ಆದ್ದರಿಂದ ಅವರೆಲ್ಲ ತಮಗೆ ಸಿಕ್ಕಷ್ಟು ಸುದ್ದಿಯನ್ನೇ ಸೆರೆ ಹಿಡಿದುಕೊಂಡವರು ಅದಕ್ಕೆ ಒಬ್ಬೊಬ್ಬರು ಒಂದೊಂದು ರೀತಿಯ ರೂಪಾರ್ಥಗಳನ್ನು ನೀಡುತ್ತ ತಂತಮ್ಮ ವೀಕ್ಷಕರನ್ನು ಮನರಂಜಿಸುವ ಯೋಚನೆಯಿಂದ ಹಿಂದಿರುಗಿದರು. ಮಾಧ್ಯಮದವರು ಹೊರಡುತ್ತಲೇ ಸುರೇಂದ್ರಯ್ಯ, ಅರಣ್ಯಾಧಿಕಾರಿ ಮತ್ತು ಸಿಬ್ಬಂದಿವರ್ಗವನ್ನು ಅಭಿಮಾನದಿಂದ ಮನೆಗೆ ಕರೆದೊಯ್ದರು. ನೆರೆಮನೆಯ ಕೆಲಸದವನನ್ನು ಕರೆದು ಸೀಯಾಳ ಕೊಯ್ಯಲು ಸೂಚಿಸಿದವರು, ‘ಬನ್ನಿ ಬನ್ನೀ ಸಾರ್ ಒಳಗೆ ಬನ್ನಿ ಕುಳಿತುಕೊಳ್ಳಿ…!’ ಎಂದು ಆದರದಿಂದ ಕರೆದು ಕುಳ್ಳಿರಿಸಿಕೊಂಡರು. ಬಳಿಕ ತಮ್ಮ ಮನೆ ಕೆಲಸದವಳನ್ನು ಕರೆದು ಏನೋ ಪಿಸುಗುಟ್ಟಿದರು. ಅವಳು ತಲೆಯಾಡಿಸಿ ಹೋದವಳು ಹರಿವಾಣದ ತುಂಬಾ ಕದಳಿ ಬಾಳೆಹಣ್ಣುಗಳನ್ನು ತಂದು ಟಿಪಾಯಿ ಮೇಲಿಟ್ಟು ಹೋದಳು. ಅಷ್ಟರಲ್ಲಿ ಸೀಯಾಳವೂ ಬಂತು. ಸುಮಾರು ಎರಡು ಗಂಟೆಯಿಂದ ಸುಡುಬಂಡೆಗಳ ಹತ್ತಿರದ ಮತ್ತಿ ಮರದ ನೆರಳಲ್ಲಿ ನಿಂತುಕೊಂಡು ಬಿಸಿಲಿನ ಝಳಕ್ಕೆ ಬಾಯಾರಿಬಿಟ್ಟಿದ್ದ ಮಾದೇವಪ್ಪನವರಿಗೂ ಸಿಬ್ಬಂದಿಗಳಿಗೂ ಸಿಹಿಯಾದ ಸೀಯಾಳವು ಅಮೃತದಂತೆನ್ನಿಸಿ ಸುರೇಂದ್ರಯ್ಯನ ಒತ್ತಾಯಕ್ಕೆಂಬಂತೆ ಒಬ್ಬೊಬ್ಬರು ಎರಡೆರಡು ಸೀಯಾಳಗಳನ್ನು ಹೊಟ್ಟೆಗಿಳಿಸಿ ಬಾಳೆಹಣ್ಣುಗಳನ್ನೂ ತಿಂದು ನೆಮ್ಮದಿಯ ಉಸಿರುಬಿಟ್ಟರು. ಇಲಾಖೆಯವರು ತಮ್ಮ ಆತಿಥ್ಯ ಸ್ವೀಕರಿಸಿದ ಮೇಲೆ ಸುಂದರಯ್ಯ ಮೆಲ್ಲನೇ,‘ಸಾರ್ ಆ ಬಂಡೆ ಮತ್ತು ಆಸುಪಾಸಿನ ಕಾಡುಗಳನ್ನು ಸದ್ಯದಲ್ಲೇ ತೆಗೆಯಬೇಕೆಂದಿದ್ದೇವೆ. ಅದಕ್ಕೆ ನಿಮ್ಮ ಇಲಾಖೆಯ ಒಪ್ಪಿಗೆ ಮತ್ತು ಸಹಕಾರ ಎರಡೂ ಬೇಕಾಗುತ್ತದೆ. ಅದನ್ನು ನೀವು ಕೊಟ್ಟರೆ ಬಹಳ ಉಪಕಾರವಾಗುತ್ತದೆ. ಆದರೆ ಅದಕ್ಕೆ ಪ್ರತಿಯಾಗಿ ನಾವು ತಮ್ಮನ್ನೂ ಮತ್ತು ಇಲಾಖೆಯನ್ನೂ ಸಂದರ್ಭೋಚಿತವಾಗಿ ಸತ್ಕರಿಸುವುದನ್ನು ಮರೆಯುವುದಿಲ್ಲ!’ ಎಂದು ವಿನಂತಿಸಿದರು. ಸುರೇಂದ್ರಯ್ಯನ ಸಜ್ಜನಿಕೆಗೆ ಮನಸೋತ ಮಹಾದೇವಪ್ಪನವರು,‘ಆಯ್ತು ಆ ಬಗ್ಗೆ ನೀವೇನೂ ಚಿಂತಿಸಬೇಡಿ ಸುಂದರಯ್ಯನವರೇ. ಆದರೆ ಇನ್ನು ಮುಂದೆ ಅಲ್ಲಿ ನೀವು ಯಾವ ಕೆಲಸ ನಡೆಸುವುದಿದ್ದರೂ ಇಲಾಖೆಗೆ ತಿಳಿಸಿ ಅನುಮತಿ ಪಡೆದೇ ಮುಂದುವರೆಯಬೇಕು. ಆಗ ಒಬ್ಬಿಬ್ಬರು ಸಿಬ್ಬಂದಿಗಳು ನಿಮ್ಮ ಜೊತೆಗಿದ್ದು ಸಹಕರಿಸುತ್ತಾರೆ. ಇಲ್ಲದಿದ್ದಲ್ಲಿ ನಿಮಗಾಗದವರು ಯಾರಾದರೂ ಬಂದು ನಿಮ್ಮ ಮೇಲೆ ದೂರು ಕೊಟ್ಟರೆ ನಾವು ಅನಿವಾರ್ಯವಾಗಿ ನಿಮ್ಮ ಮೇಲೆ ಆಕ್ಷನ್ ತೆಗೆದುಕೊಳ್ಳಬೇಕಾಗುತ್ತೆ!’ ಎಂದೂ ಎಚ್ಚರಿಸಿದರು. ಅಷ್ಟು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಭಯಪಟ್ಟರು. ಅದನ್ನು ಗಮನಿಸಿದ ಮಹಾದೇವಪ್ಪನವರು,‘ಸರಿ ಸುರೇಂದ್ರಯ್ಯ, ನಾವಿನ್ನು ಹೊರಡುತ್ತೇವೆ. ಹಾಗೆಯೇ ನಿನ್ನೆ ನಡೆದ ಘಟನೆಯ ವಿಚಾರಣೆಗೆ ಸಂಬಂಧಿಸಿ ನೀವು ಕಛೇರಿಗೆ ಬಂದು ಹೇಳಿಕೆ ಬರೆದು ಕೊಡಬೇಕಾಗುತ್ತದೆ. ಮುಂದಿನದ್ದನ್ನು ಅಲ್ಲೇ ಕುಳಿತು ಮಾತಾಡೋಣ!’ಎಂದು ನಗುತ್ತ ಆಜ್ಞಾಪಿಸಿದರು. ಅವರ ನಗುವನ್ನು ಕಂಡ ಸುರೇಂದ್ರಯ್ಯ ಒಮ್ಮೆಲೇ ಗೆಲುವಾಗಿ,‘ಆಯ್ತು, ಆಯ್ತು ಸಾರ್ ಈಗಲೇ ಹೊರಟೆ…!’ ಎಂದು ಉಟ್ಟಬಟ್ಟೆಯಲ್ಲೇ ಅವರೊಂದಿಗೆ ಹೊರಟುಬಿಟ್ಟರು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ
ಧಾರಾವಾಹಿ ಆವರ್ತನ ಅದ್ಯಾಯ-49 ಗುರೂಜಿಯವರ ತಂಡದ ಹಲವರ ಮೇಲೆ ಚಿಟ್ಟೆಹುಲಿಗಳು ಭೀಕರ ದಾಳಿ ನಡೆಸಿದ ಪರಿಣಾಮವಾಗಿ ಮೂವರು ಮಾರಣಾಂತಿಕವಾಗಿ ಗಾಯಗೊಂಡರು. ಹೆಣ್ಣು ಚಿಟ್ಟೆಹುಲಿಯ ಕೈಗೆ ಮೊದಲು ಸಿಲುಕಿದವನು ತಂಗವೇಲು. ಅದು ಅವನ ಮುಖವನ್ನೂ, ಕೆಳತುಟಿಯನ್ನೂ ಹರಿದು ಬಲಗೈಯ ಮಾಂಸಖಂಡವನ್ನು ಸೀಳಿ ಹಾಕಿತ್ತು. ಅದನ್ನು ಕಂಡರೆ ಅವನು ಮುಂದೆಂದೂ ಬಂಡೆ ಒಡೆಯುವ ಕೆಲಸಕ್ಕೆ ನಾಲಾಯಕ್ಕು ಎಂಬಂತೆ ತೋರುತ್ತಿತ್ತು. ಗಂಡು ಚಿರತೆಯ ಬಲವಾದ ಪಂಜದ ಹೊಡೆತವೊಂದು ಶಿಲ್ಪಿಗಳ ಮುಖಂಡ ಶರವಣನ ಹಿಂತಲೆಗೆ ಅಪ್ಪಳಿಸಿತ್ತು. ಅದರಿಂದ ಅವನ ಬುರುಡೆಯ ಮೇಲ್ಪದರವು ಆಮೆಯ ಚಿಪ್ಪಿನಂತೆ ಕಿತ್ತು ನೇತಾಡುತ್ತಿತ್ತು. ನಂತರ ಆ ಕ್ರೋಧ ತುಂಬಿದ ಮೃಗಗಳ ಆಕ್ರಮಣಕ್ಕೆ ಸಿಲುಕಿದ್ದು ಗುರೂಜಿಯ ಆಪ್ತ ಸಹಾಯಕ ರಾಘವ. ಆ ಪ್ರಾಣಿಗಳೆರಡೂ ಸೇರಿ ಅವನನ್ನು ಅಟ್ಟಾಡಿಸಿ ಹಿಡಿದು ಕಚ್ಚಿ ಹರಿದು ಅರೆಜೀವಗೊಳಿಸಿ ಮಾಯವಾಗಿದ್ದವು. ಆ ಬಂಡೆ ಸಮೂಹದೊಳಗೆ ಅನಾದಿಕಾಲದಿಂದಲೂ ಹುಲಿ, ಚಿಟ್ಟೆಹುಲಿ, ಕಾಡುಹಂದಿ ಮತ್ತಿತರ ವನ್ಯಜೀವಿಗಳು ವಾಸಿಸುತ್ತಿದ್ದುದನ್ನು ಸುರೇಂದ್ರಯ್ಯ ತಮ್ಮ ಹಿರಿಯರ ಕಾಲದಿಂದಲೂ ಕೇಳುತ್ತ ಬಂದಿದ್ದರು. ಅಲ್ಲದೇ ತಾವೂ ಅನೇಕ ಬಾರಿ ನೋಡಿದ್ದರು. ಹಾಗಾಗಿ ಅವರು ಅವುಗಳ ಮೊದಲ ಗರ್ಜನೆಯಿಂದಲೇ ವಿಷಯವನ್ನು ಗ್ರಹಿಸಿ ಕಂಬಿ ಕೀಳಲಿದ್ದರು. ಆದರೆ ಅದೆಲ್ಲೋ ದೂರದಿಂದ ಕೇಳಿಸಿದಂತೆ ಭಾಸವಾಗಿದ್ದರಿಂದ ಧೈರ್ಯ ತಂದುಕೊಂಡು ನಿಂತಿದ್ದರು. ಆದರೆ ಅವುಗಳ ಎರಡನೆಯ ಆರ್ಭಟವು ಅವರನ್ನೂ, ಗುರೂಜಿಯವರನ್ನೂ ಮತ್ತುಳಿದವರನ್ನೂ ಒಂದೇ ಉಸಿರಿಗೆ ಅಲ್ಲಿಂದ ಓಡಿ ಹೋಗುವಂತೆ ಪ್ರಚೋದಿಸಿತ್ತು. ಆದ್ದರಿಂದ ಚಿಟ್ಟೆಹುಲಿಗಳ ಪ್ರಥಮ ದರ್ಶನದಿಂದಲೇ ತಾವೆಲ್ಲ ಪುನೀತರಾದೆವು ಎಂದುಕೊಂಡ ಸುಮಾರು ಮಂದಿ ಬಂದ ದಾರಿಯಲ್ಲೇ ಕಾಲ್ಕಿತ್ತಿದ್ದರು. ಸುಮಾರು ದೂರ ಓಡಿದ ಹೋದ ಅವರೆಲ್ಲ ಒಂದು ಕಡೆ ಬಯಲು ಪ್ರದೇಶದಲ್ಲಿ ಕುಳಿತು ಸಂಭಾಳಿಸಿಕೊಂಡರು. ಆಗ ಅವರಿಗೆ ತಮ್ಮ ತಂಡದಲ್ಲಿ ಮೂವರು ಕಾಣೆಯಾಗಿದ್ದುದು ಗಮನಕ್ಕೆ ಬಂತು. ಗುರೂಜಿ ಮತ್ತು ಸುರೇಂದ್ರಯ್ಯ ಗಾಬರಿಯಾದರು. ಆದರೆ ಸುರೇಂದ್ರಯ್ಯನ ಭಯವು ತಟ್ಟನೆ ಆ ಪ್ರಾಣಿಗಳ ಮೇಲಿನ ಕೋಪವಾಗಿ ಮಾರ್ಪಟ್ಟುಬಿಟ್ಟಿತು.‘ಹೇ, ಎಲ್ಲರೂ ಇಲ್ಲಿ ಬನ್ನಿರನಾ…! ಕೂಡಲೇ ಮನೆಗೆ ಹೋಗಿ ಕತ್ತಿ, ಸೋಂಟೆ, ಹಾರೆ, ಪಿಕಾಸಿ ಅಂತ ನಿಮ್ಮ ಕೈಗೆ ಏನೇನೆಲ್ಲ ಸಿಗುತ್ತದೋ ಎಲ್ಲವನ್ನೂ ಹೊತ್ತು ತನ್ನಿ! ಈ ಇಡೀ ಜಾಗ ಎಷ್ಟೋ ತಲೆಮಾರಿನಿಂದಲೂ ನಮ್ಮದೇ ಮನೆತನಕ್ಕೆ ಸೇರಿದ್ದು! ಹೀಗಿರುವಾಗ ಆ ದರ್ವೇಶಿ ಪ್ರಾಣಿಗಳು ನಮ್ಮ ಹಂಗಿನಲ್ಲೇ ಬದುಕುತ್ತಿರುವುದಲ್ಲದೇ ನಮ್ಮ ಮೇಲೆಯೇ ದಾಳಿ ಮಾಡುವ ಮಟ್ಟಕ್ಕೆ ಬಂದುಬಿಟ್ಟವಾ…? ಇಲ್ಲ, ಇವತ್ತು ಅವುಗಳನ್ನು ಅಟ್ಟಾಡಿಸಿ ಹಿಡಿದು ಕೊಂದು ಹಾಕದಿದ್ದರೆ ನಮಗೆ ನಿದ್ರೆಯೇ ಹತ್ತಲಿಕ್ಕಿಲ್ಲ. ಹ್ಞೂಂ, ಹೊರಡಿ!’ ಎಂದು ಸುರೇಂದ್ರಯ್ಯ ರೊಚ್ಚಿಗೆದ್ದು ಅಬ್ಬರಿಸಿದರು. ಅಷ್ಟು ಕೇಳಿದ್ದೇ ತಡ ಒರಟುಗಲ್ಲಿನಂಥ ತಮಿಳು ತರುಣರ ತಂಡವು ರೋಷದಿಂದ ಸಿಡಿದೆದ್ದು ಸುರೇಂದ್ರಯ್ಯನ ಮನೆಯತ್ತ ಧಾವಿಸಿ ಹೋಗಿ ಬಗೆಬಗೆಯ ಹತ್ಯಾರುಗಳನ್ನು ಝಳಪಿಸುತ್ತ ಹಿಂದಿರುಗಿತು. ಅವರನ್ನು ಕಂಡ ಸುರೇಂದ್ರಯ್ಯನ ಕೆಚ್ಚು ಇಮ್ಮಡಿಯಾಯಿತು. ಆದ್ದರಿಂದ ಅವರೊಂದಿಗೆ ಕೂಡಿ ಬಂಡೆಗಳತ್ತ ಧಾವಿಸಿದರು. ಆದರೆ ಗುರೂಜಿ ಮತ್ತು ಶಂಕರ ತಾವು ಕುಳಿತಲ್ಲಿಂದ ಮಿಸುಕಾಡಲಿಲ್ಲ.ಓಟದ ಹೋರಿಗಳಂತಿದ್ದ ಯುವಕರ ಗುಂಪು ಕಣ್ಮರೆಯಾಗುತ್ತಲೇ ಗುರೂಜಿಯವರು ಶಂಕರನನ್ನು ವಿಷಾದದಿಂದ ದಿಟ್ಟಿಸಿದವರು ಮೆಲ್ಲನೆ ಕಣ್ಣು ಮುಚ್ಚಿ ಧ್ಯಾನಸ್ಥರಾದರು. ಆಹೊತ್ತು ಅವರ ಮನಸ್ಸಿನಲ್ಲಿ ಹೋಮ ಕುಂಡದೆದುರು ನಡೆದ ಭೀಕರ ದೃಶ್ಯವೇ ಕುಣಿಯುತ್ತಿತ್ತು. ಆ ಮೃಗಗಳು ತಮ್ಮ ರೌದ್ರಾವತಾರದಿಂದ ಹೋಮಕುಂಡವನ್ನೂ ಮತ್ತವರು ಸಾಧಿಸಲು ಹೊರಟಿದ್ದ ಮಹತ್ಕಾರ್ಯವನ್ನೂ ಕೆಲವೇ ಕ್ಷಣದೊಳಗೆ ಧೂಳಿಪಟ ಮಾಡಿಬಿಟ್ಟಿದ್ದವು. ತಾವು ಇಷ್ಟೊಂದು ನೇಮನಿಷ್ಠೆಯಿಂದ ಕೈಗೊಂಡ ಕಾರ್ಯಕ್ಕೂ ಇಂಥ ವಿಘ್ನವೊಂದು ಬಂದಪ್ಪಳಿಸಲು ಕಾರಣವೇನು? ಎಂಬ ವಿಚಾರವು ಅವರನ್ನು ತೀಕ್ಷ್ಣವಾಗಿ ಕಾಡುತ್ತಿತ್ತು. ಆ ಕುರಿತೇ ಯೋಚಿಸಿದವರ ವ್ಯಾಪಾರ ಬುದ್ಧಿಗೆ ತಟ್ಟನೆ ಒಂದು ಸಂಗತಿಯೂ ಹೊಳೆಯಿತು. ಆದರೆ ಅದನ್ನು ತಮ್ಮದೇ ಕಾಲ್ಪನಿಕ ಲೆಕ್ಕಾಚಾರದ ಒರೆಗೆ ಹಚ್ಚುತ್ತ ಮಥಿಸತೊಡಗಿದರು. ಆದ್ದರಿಂದ ಅವರ ಆಲೋಚನೆ ಹೀಗೆ ಸಾಗಿತು: ಅಲ್ಲಾ, ತಮ್ಮ ವಿಶೇಷ ಪೂಜಾ ಕೈಂಕರ್ಯದ ಮಧ್ಯೆಯೇ ಆ ವ್ಯಾಘ್ರಗಳು ತಾಂಡವವಾಡಿದ್ದರ ಅರ್ಥವೇನು? ಅದೂ ಜೋಡಿ ಹುಲಿಗಳು! ‘ಹುಲಿ’ ಎಂದರೆ ಚಾಮುಂಡಿಯ ವಾಹನ ಅಲ್ಲವಾ? ಅಲ್ಲದೆ ಮತ್ತೇನು! ಅಯ್ಯೋ ದೇವರೇ…! ಹಾಗಾದರೆ ಅವು ಸಾಮಾನ್ಯ ಮೃಗಗಳಲ್ಲ, ದೈವಸಂಭೂತ ಶಕ್ತಿಗಳೇ! ತಾವು ಒಂದು ಕ್ಷಣವಾದರೂ ಅವುಗಳನ್ನು ಸೂಕ್ಷ್ಮವಾಗಿಯೇ ನೋಡಿದ್ದೇವೆ. ಮರಿಗಳೊಂದಿಗೆ ಇದ್ದುದು ದೊಡ್ಡ ಹುಲಿ. ಅದು ಹೆಣ್ಣು. ಇನ್ನೊಂದು ಅದಕ್ಕಿಂತಲೂ ಸ್ವಲ್ಪ ದೊಡ್ಡದು. ಅದು ಗಂಡಿರಬೇಕು ಎಂದುಕೊಂಡವರು ತಮ್ಮ ಯೋಚನೆಯನ್ನು ಮತ್ತಷ್ಟು ಹರಿಯಬಿಟ್ಟರು. ದೊಡ್ಡ ಹುಲಿ… ಸಣ್ಣ ಹುಲಿ. ಸಣ್ಣ ಹುಲಿ… ದೊಡ್ಡ ಹುಲಿ. ದೊಡ್ಡ ಹುಲಿ… ಸಣ್ಣ ಹುಲಿ…! ಎಂದು ಮನಸ್ಸಿನಲ್ಲೇ ಮರಳಿ ಮರಳಿ ಪಠಿಸತೊಡಗಿದರು. ಆಗ ಅವರಿಗೆ ತಾವು ಹುಡುಕುತ್ತಿದ್ದ ಉತ್ತರವೊಂದು ತಟ್ಟನೆ ಮಿಂಚಿಬಿಟ್ಟಿತು. ಹೌದು ಇಂದಿನ ವಿಘ್ನದ ಮೂಲವೇನೆಂಬುದು ಈಗ ಸ್ಪಷ್ಟವಾಯಿತು. ಆ ಕ್ರೂರ ಪ್ರಾಣಿಗಳು ಯಾವುದರ ಸಂಕೇತ? ಮತ್ತ್ಯಾವುದರದ್ದು, ಹುಲಿ ಚಾಮುಂಡಿಯದ್ದಲ್ಲವಾ. ಹೌದು ಅದೇ ಸರಿ. ಆದರೆ ಇನ್ನೊಂದು…? ಅದು ಚಾಮುಂಡಿಯ ಬಂಟನಲ್ಲವಾ! ಅಂದರೆ, ಪಿಲಿಚೌಂಡಿ ಮತ್ತದರ ಬಂಟ!ಓಹೋ, ಹೀಗಾ ಕಥೆ! ಹಾಗಾದರೆ ಇವತ್ತಿನ ಅವಾಂತರಕ್ಕೆ ಬೇರೆ ಯಾರೂ ಅಲ್ಲ. ಸುರೇಂದ್ರಯ್ಯನೇ ಕಾರಣ! ಆ ದೈವಗಳಿಗೆ ಅವರೋ ಅಥವಾ ಅವರ ಕುಟುಂಬಸ್ಥರೋ ಯಾವತ್ತೋ ಹೇಳಿಕೊಂಡಿದ್ದ ಹರಕೆಯೋ ಪೂಜೆಯೋ ಬಾಕಿಯಿರಬೇಕು. ಅದಕ್ಕೇ ಇರಬೇಕು ಅವುಗಳು ನಮ್ಮ ಕಣ್ಣ ಮುಂದೆಯೇ ಮಾರಣಹೋಮಕ್ಕಿಳಿದದ್ದು! ಅಂದರೆ ಅವುಗಳ ಧಾಂದಲೆಯ ಅರ್ಥ, ದೈವ ನರ್ತನ ಸೇವೆ ಬಾಕಿಯಿದೆ ಎಂದಾ? ಅಯ್ಯೋ, ಪರಮಾತ್ಮಾ…ಅಲ್ಲದೆ ಮತ್ತೇನು? ಖಂಡಿತಾ ಹೌದು. ಆದರೆ ಆ ಮೂರ್ಖ ಸುರೇಂದ್ರಯ್ಯ ಇದನ್ನು ಒಪ್ಪದಿರಬಹುದಲ್ಲ! ಎಂದು ತುಸು ಚಿಂತಿತರಾದರು. ಕೊನೆಯಲ್ಲಿ, ಒಪ್ಪಲಿ ಬಿಡಲಿ, ತಾವು ಅವರಿಂದ ಈ ಕೆಲಸವನ್ನು ಮಾಡಿಸಲೇಬೇಕು. ಆ ಮೂಲಕ ಆ ಶಕ್ತಿಗಳ ಕೋಪವನ್ನೂ ತಣಿಸಬೇಕು. ಅದೇನಾದರೂ ತೊಂದರೆಯಿಲ್ಲ. ತಾವು ಸಂಕಲ್ಪಿಸಿಕೊಂಡಿರುವ ದೊಡ್ಡ ಯೋಜನೆಯೊಂದು ಕೈಗೂಡಲೇಬೇಕು. ಅದಕ್ಕಾಗಿ ತಾವು ಎಂಥ ಕಾರ್ಯಕ್ಕಾದರೂ ಸಿದ್ಧ! ಎಂದು ನಿರ್ಧರಿಸಿದ ಗುರೂಜಿಯವರು ನಿಧಾನವಾಗಿ ಕಣ್ಣು ತೆರೆದರು.ಅದೇ ಹೊತ್ತು ಶಂಕರನೂ ಚಿಟ್ಟೆಹುಲಿಗಳ ದಾಳಿಯ ಬಗ್ಗೆಯೇ ಯೋಚಿಸುತ್ತಿದ್ದವನು, ಓ ದೇವರೇ…! ಒಂದುವೇಳೆ ಆ ಪ್ರಾಣಿಗಳ ಕೈ, ಬಾಯಿಗೆ ತಾನೇನಾದರೂ ಸಿಲುಕುತ್ತಿದ್ದರೆ ಗತಿಯೇನಾಗುತ್ತಿತ್ತು? ಇಡೀ ಜೀವಮಾನದ ಸಾಧನೆಯೆಲ್ಲಾ ಮಣ್ಣುಮುಕ್ಕಿ ಹೋಗುತ್ತಿತ್ತು! ಆದರೆ ಅಂಥದ್ದೊಂದು ಅನಾಹುತದಿಂದ ತನ್ನನ್ನೂ ಗುರೂಜಿಯವರನ್ನೂ ಕಾಪಾಡಿದ್ದು ಮಾತ್ರ ಬುಕ್ಕಿಗುಡ್ಡೆಯ ಆ ನಾಗದೇವನೇ ಹೊರತು ಬೇರೆ ಯಾರೂ ಅಲ್ಲ! ಎಂದುಕೊಂಡವನು ದೀನನಾಗಿ ಆಕಾಶದತ್ತ ಕೈಯೆತ್ತಿ ಮುಗಿದ. ಅಷ್ಟರಲ್ಲಿ ಗುರೂಜಿಯವರೂ ಕಣ್ಣು ಬಿಟ್ಟಿದ್ದನ್ನೂ, ಅವರ ಮಂದಹಾಸವನ್ನೂ ಕಂಡವನು ಸ್ವಲ್ಪ ಗೆಲುವಾದ.‘ಶಂಕರ, ಈಗಿನ ಅನಾಹುತಕ್ಕೆ ಕಾರಣವೇನೆಂದು ತಿಳಿದುಬಿಟ್ಟಿತು ಮಾರಾಯಾ!’ ಎಂದು ಗುರೂಜಿಯವರು ಹೆಮ್ಮೆಯಿಂದ ಹೇಳಿದರು. ಆಗ ಶಂಕರ ತಬ್ಬಿಬ್ಬಾಗಿ, ‘ಹೌದಾ ಗುರೂಜಿ ಏನು…?’ ಎಂದ ವಿಸ್ಮಯದಿಂದ.‘ಇದೆಲ್ಲವೂ ಆ ಸುರೇಂದ್ರಯ್ಯನಿಂದಾದ ಲೋಪದೋಷಗಳು ಮಾರಾಯಾ…! ಅವರೇ ಇದಕ್ಕೆಲ್ಲ ಹೊಣೆ!’ ಎಂದರು ಬೇಸರದಿಂದ. ಆದರೆ ಶಂಕರನಿಗೆ ಅರ್ಥವಾಗಲಿಲ್ಲ. ಅವನು ಅವರನ್ನು ಪ್ರಶ್ನಾರ್ಥಕವಾಗಿ ನೋಡಿದ.ಅತ್ತ, ಅದೇ ಹೊತ್ತಿಗೆ ಸುರೇಂದ್ರಯ್ಯನ ತಂಡವೂ ಕ್ರೂರವಾಗಿ ಬೊಬ್ಬಿಡುತ್ತ, ಅರಚುತ್ತ ಬಂಡೆಗಳತ್ತ ತಲುಪಿತು. ಆದರೆ ಅಲ್ಲಿನ ದೃಶ್ಯವನ್ನು ಕಂಡ ಎಲ್ಲರೂ ದಿಗ್ಮೂಢರಾಗಿಬಿಟ್ಟರು. ಆದರೂ ಅವರಲ್ಲಿ ಕೆಲವರು ಸಂಭಾಳಿಸಿಕೊಂಡು, ರಕ್ತದ ಮಡುವಿನಲ್ಲಿ ಬಿದ್ದವರತ್ತ ಧಾವಿಸಿ ಆರೈಕೆಯಲ್ಲಿ ತೊಡಗಿದರು. ಉಳಿದವರು ತೀವ್ರ ಉನ್ಮತ್ತರಾಗಿ ಊಳಿಡುತ್ತ ಮೃಗಗಳನ್ನು ಹುಡುಕುತ್ತ ಬಂಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿದರು. ಆ ಜನರ ಧಾಂದಲೆಗೆ ಬಂಡೆಗಳೆಡೆಗಳಲ್ಲಿ ನಿದ್ರಿಸುತ್ತಿದ್ದ ನೂರಾರು ಬಾವಲಿಗಳೂ, ಗೂಬೆಗಳೂ ಬೆಚ್ಚಿಬಿದ್ದು ಅರಚುತ್ತ ದಿಕ್ಕುಗೆಟ್ಟು ಹಾರತೊಡಗಿದವು. ಆದರೆ ಅವರ ಅದೃಷ್ಟಕ್ಕೆ ಆ ಮೃಗಗಳು ಅದಾಗಲೇ ಅಲ್ಲಿನ ತಮ್ಮ ನಿವಾಸವನ್ನು ತೊರೆದು ದೂರದ ದಟ್ಟ ಅರಣ್ಯದತ್ತ ಹೊರಟು ಹೋಗಿಯಾಗಿತ್ತು. ಅವುಗಳನ್ನು ಹುಡುಕಾಡಿ ಸುಸ್ತಾದ ಸುರೇಂದ್ರಯ್ಯನೂ ಮತ್ತವರ ತಂಡವೂ ನಿರಾಶರಾಗಿ ಹಿಂದಿರುಗಿದರು. ನಂತರ ಗಾಯಗೊಂಡವರನ್ನು ಹೊತ್ತುಕೊಂಡು ಹೋಗಿ ಗುರೂಜಿಯವರ ಮತ್ತು ಶಂಕರನ ಕಾರಿನಲ್ಲಿ ಹಾಕಿಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿಗೆ ಗುರೂಜಿಯವರ ಬಂಡೆ ಕಡಿಯುವ ನಾಂದಿ ಕಾರ್ಯವು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು.(ಮುಂದುವರೆಯುವುದು) ಗುರುರಾಜ್ ಸನಿಲ್
ಧಾರಾವಾಹಿ ಆವರ್ತನ ಅದ್ಯಾಯ-48 ಇತ್ತ ಚೂರೂ ಶ್ರಮವಿಲ್ಲದೆ ಪ್ರಥಮ ಪ್ರಯತ್ನದಲ್ಲಿಯೇ ದೊಡ್ಡ ಏಕಶಿಲೆಯೊಂದು ದೊರೆತ ಸಂತೋಷದ ಸುದ್ದಿಯನ್ನು ಶಂಕರ ಕೂಡಲೇ ಹೋಗಿ ಗುರೂಜಿಯವರಿಗೆ ತಿಳಿಸಿದ. ಒಂದು ಲಕ್ಷ ಬೆಲೆಯ ತನ್ನ‘ಆಪಲ್’ ಮೊಬೈಲ್ನಲ್ಲಿ ಕ್ಲಿಕ್ಕಿಸಿ ತಂದಿದ್ದ ಬಂಡೆಯ ಕೆಲವು ಫೋಟೋಗಳನ್ನೂ ಬೆರಳಿನಿಂದ ಗೀಚಿ ಗೀಚಿ ತೋರಿಸುತ್ತ ತಾನು ಹಿಡಿದ ಕೆಲಸದಲ್ಲಿ ತನ್ನ ಬದ್ಧತೆ ಮತ್ತು ಕೌಶಲ್ಯವೆಂಥದ್ದು ಎಂಬುದನ್ನು ಅವರಿಗೆ ಮನವರಿಕೆ ಮಾಡಿಸತೊಡಗಿದ. ಬಂಡೆಯ ಚಿತ್ರಗಳನ್ನೂ ಶಂಕರನ ಕೆಲಸದ ಉತ್ಸಾಹವನ್ನೂ ಕಂಡ ಗುರೂಜಿಯವರಿಗೆ ಅವನ ಮೇಲಿನ ಅಭಿಮಾನವು ದುಪ್ಪಟ್ಟಾಗಿದ್ದರೊಂದಿಗೆ ತಮ್ಮ ಬಹುದೊಡ್ಡ ಕನಸೊಂದು ಸದ್ಯದಲ್ಲೇ ನನಸಾಗಲಿದ್ದುದನ್ನೂ ನೆನೆದವರ ಆನಂದವು ಇಮ್ಮಡಿಯಾಯಿತು. ಆದ್ದರಿಂದ ಅವರು,‘ಶಂಕರಾ, ಈ ಕೆಲಸದಲ್ಲಿ ನಾವು ಗೆದ್ದುಬಿಟ್ಟೆವು ಮಾರಾಯಾ! ಇದೊಂದು ಮಹತ್ಕಾರ್ಯ ನಮ್ಮಿಂದ ನಡೆದುಬಿಟ್ಟಿತೆಂದರೆ ಮುಂದೆ ನಮ್ಮನ್ನ್ಯಾರೂ ಹಿಡಿಯುವಂತಿಲ್ಲ ನೋಡು. ಆಮೇಲೆ ಜೀವನಪರ್ಯಾಂತ ನಿಶ್ಚಿಂತೆಯಿಂದ ಬಾಳಬಹುದು. ದೇವಸ್ಥಾನ ಕಟ್ಟುವ ಮತ್ತು ಬನದ ಜೀರ್ಣೋದ್ಧಾರಕ್ಕೆ ತಗುಲುವ ಖರ್ಚುವೆಚ್ಚವನ್ನೆಲ್ಲ ನಮ್ಮ ದುಬೈ ಮತ್ತು ಮುಂಬೈಯ ಭಕ್ತಾದಿಗಳೇ ಪೂರೈಸುವ ಭರವಸೆಯನ್ನು ಕೊಟ್ಟಿದ್ದಾರೆ. ಹಾಗಾಗಿ ಆ ಕೆಲಸವನ್ನು ಯಶಸ್ವಿಯಾಗಿ ನೆರವೇರಿಸುವುದಷ್ಟೇ ನಮಗುಳಿದಿರುವ ಜವಾಬ್ದಾರಿ!’ಎಂದು ಹೆಮ್ಮೆಯಿಂದ ಹೇಳಿದರು. ಆದರೆ ಅತ್ತ ಶಂಕರನಲ್ಲೂ ಅಂಥದ್ದೇ ಲೆಕ್ಕಾಚಾರವೊಂದು ನಡೆಯುತ್ತಿತ್ತು. ಗುರೂಜಿಯವರ ಈ ಪ್ರಾಜೆಕ್ಟಿನಿಂದ ಒಂದೈದು ಕೋಟಿಯಾನ್ನಾದರೂ ತನ್ನ ಶ್ರಮಕ್ಕೆ ತಾನು ಹೊಡೆಯಲೇಬೇಕು! ಎಂದು ಅವನು ಯೋಚಿಸುತ್ತಿದ್ದ. ಆದುದರಿಂದ ಗುರೂಜಿಯ ಮಾತಿಗೆ, ‘ಹೌದು ಹೌದು ಗುರೂಜಿ, ನಿಮ್ಮ ಆಶೀರ್ವಾದ ಇರುವವರೆಗೆ ನಿಮ್ಮೊಂದಿಗೆ ನಾನೂ ಗೆದ್ದಂತೆಯೇ ಸರಿ!’ ಎಂದು ನಮ್ರನಾಗಿ ಹೇಳಿದ. ‘ಆ ವಿಷಯದಲ್ಲಿ ನಿನಗೆ ಯಾವತ್ತಿಗೂ ಸಂಶಯ ಬೇಡ ಶಂಕರ. ನಮ್ಮ ಕಷ್ಟಕಾಲದಲ್ಲಿ ನೀನೂ ನಮ್ಮ ಕೈಹಿಡಿದು ನಡೆಸಿದವನು ಎನ್ನುವುದನ್ನು ನಾವಿನ್ನೂ ಮರೆತಿಲ್ಲ!’ ಎಂದು ಅವನನ್ನು ಪ್ರೀತಿಯಿಂದ ದಿಟ್ಟಿಸಿದರು. ‘ಅಯ್ಯೋ, ಅದೆಲ್ಲ ದೇವರಿಚ್ಛೆಯಿರಬೇಕು ಗುರೂಜಿ. ಆವತ್ತು ನನ್ನ ಶೀಂಬ್ರಗುಡ್ಡೆಯ ಜಾಗದ ಆ ಒಂದು ಸನ್ನಿವೇಶದಲ್ಲಿ ನೀವಲ್ಲದಿದ್ದರೆ ನನ್ನ ಅವಸ್ಥೆ ದೇವರೇ ಗತಿ ಎಂಬಂತಾಗುತ್ತಿತ್ತು! ಹಾಗಾಗಿ ಇನ್ನು ಮುಂದೆಯೂ ನಾನು ನೀವು ಹೀಗೆಯೇ ಇರಬೇಕೆಂದು ನನ್ನಾಸೆ!’ಎಂದು ಶಂಕರ ಕೈಮುಗಿದು ಹೇಳಿದ. ಆಗ ಗುರೂಜಿಯವರು ಕಿರುನಗುತ್ತ ತಮ್ಮ ಬಲ ಹಸ್ತವನ್ನೆತ್ತಿ,‘ತಥಾಸ್ತು’ಎಂಬಂತೆ ಅವನನ್ನು ಹರಸಿದರು. ಬಳಿಕ ಶಂಕರ ಅವರಿಂದ ಬೀಳ್ಗೊಂಡು ಹಿಂದಿರುಗಿದ. *** ಬಂಡೆ ಕಡಿಯಲು ಮತ್ತದರ ಕೆತ್ತನೆಯ ಕೆಲಸಕ್ಕೆ ಶಿಲ್ಪಿಗಳನ್ನು ತಮಿಳುನಾಡಿನಿಂದಲೇ ಕರೆದು ತರಲು ಶಂಕರ ನಿರ್ಧರಿಸಿದ. ಗುರೂಜಿಯವರು ತಿಳಿಸಿದ ಶುಭಗಳಿಗೆಯಲ್ಲಿ ತಂಗವೇಲುವಿನೊಂದಿಗೆ ತನ್ನ ಕಾರಿನಲ್ಲೇ ಮದ್ರಾಸಿಗೆ ಪ್ರಯಾಣ ಬೆಳೆಸಿದ. ಅಲ್ಲಿ ತಂಗವೇಲುವಿನ ಸಂಬಂಧಿಕ ಶಿಲ್ಪಿಗಳ ತಂಡವೊಂದನ್ನು ಭೇಟಿಯಾದ. ಕೆಲವು ಹೊತ್ತಿನ ಮಾತುಕಥೆಯ ನಂತರ ಅವರಿಂದ ವ್ಯವಹಾರವನ್ನು ಕುದುರಿಸಿದ ಮತ್ತು ಸ್ವಲ್ಪ ಹಣವನ್ನು ಮುಂಗಡ ಕೊಟ್ಟು ಮುಂದಿನ ವಾರದೊಳಗೆ ತನ್ನೂರಿಗೆ ಬರುವಂತೆ ಸೂಚಿಸಿ ಹಿಂದಿರುಗಿದ. ಊರಿಗೆ ಬಂದವನು ಆ ಕೆಲಸಗಾರರಿಗೆ ತಮ್ಮ ವಠಾರದಲ್ಲೇ ವಸತಿ ಸೌಲಭ್ಯವನ್ನು ಕಲ್ಪಿಸಲು ಸುರೇಂದ್ರಯ್ಯನಿಗೆ ಸೂಚಿಸಿದ. ಶಂಕರನ ಆಣತಿಯಂತೆ ಕೂಡಲೇ ಹಿರಿಯ ಶಿಲ್ಪಿಗಳ ಮತ್ತು ಯುವ ಕೆಲಸಗಾರರ ಮೂವತ್ತು ಮಂದಿಯಿಂದ ಕೂಡಿದ ದೊಡ್ಡ ತಂಡವೊಂದು ತಮಿಳುನಾಡಿನಿಂದ ಈಶ್ವರಪುರಕ್ಕೆ ಬಂದಿಳಿಯಿತು. ತಂಗವೇಲು ಅವರನ್ನು ಕರೆದುಕೊಂಡು ಹೋಗಿ ಉಳಿದುಕೊಳ್ಳುವ ವ್ಯವಸ್ಥೆಯನ್ನು ಮಾಡಿದ. ಇತ್ತ ಗುರೂಜಿಯವರು ತಮ್ಮ ಪಂಚಾಂಗದ ಪ್ರಕಾರ ಆ ಬಂಡೆಗಳನ್ನು ಒಡೆಯಲು ಶುಭದಿನವೊಂದನ್ನು ಗೊತ್ತುಪಡಿಸಿದರು. ಅದೊಂದು ಹುಣ್ಣಿಮೆಯ ದಿನ ಬೆಳಿಗ್ಗೆ ಗುರೂಜಿಯವರು ತಮ್ಮ ಕೆಲವು ಸಹಾಯಕರನ್ನೂ ಮತ್ತು ಬಂಡೆ ತೆರವಿನ ನಾಂದಿಯ ಪೂಜಾ ಸಾಮಾಗ್ರಿಗಳನ್ನೂ ಹಾಗೂ ಬುಕ್ಕಿಗುಡ್ಡೆಯ ಜೀರ್ಣೋದ್ಧಾರ ಸಮಿತಿಯ ಕೆಲವು ಪ್ರಮುಖರನ್ನೂ, ಶಂಕರನನ್ನೂ ಕರೆದುಕೊಂಡು ತಮ್ಮ ಐಷಾರಾಮಿ ಕಾರುಗಳಲ್ಲಿ ಹೊರಟು ಸುರೇಂದ್ರಯ್ಯನ ಮನೆಗೆ ಆಗಮಿಸಿದರು. ಅಲ್ಲಿಂದ ಅವರನ್ನು ಕೂಡಿಕೊಂಡು ದೊಡ್ಡ ಗುಂಪಾಗಿ ಬಂಡೆಗಳತ್ತ ಕಾಲು ನಡಿಗೆಯಲ್ಲಿ ಹೊರಟರು. ಅವರು ಹೋಗುತ್ತಿದ್ದ ಸುಮಾರು ಅಗಲದ ಕಾಲುದಾರಿಯ ಇಕ್ಕೆಲಗಳಲ್ಲೂ ಕಿಲೋಮೀಟರ್ ದೂರದವರೆಗೆ ದಟ್ಟ ಕಾಡು ಬಾನೆತ್ತರಕ್ಕೆ ಬೆಳೆದು ನಿಂತಿತ್ತು. ಗುರೂಜಿಯವರು ಗಂಭೀರವಾಗಿ ನಡೆಯುತ್ತಿದ್ದರು. ಸ್ವಲ್ಪದೂರ ಬಂದ ನಂತರ ಆಯಾಸ ಪರಿಹರಿಸಿಕೊಳ್ಳಲು ಒಂದುಕಡೆ ಕೆಲವುಕ್ಷಣ ನಿಂತುಕೊಂಡರು. ಅಷ್ಟರಲ್ಲಿ ಅವರ ಎಡ ಮಗ್ಗುಲಿನ ದಟ್ಟ ಪೊದೆಯೊಂದು ಇದ್ದಕ್ಕಿದ್ದಂತೆ ಧರಧರನೇ ಕಂಪಿಸತೊಡಗಿತು. ಅದನ್ನು ಕಂಡ ಎಲ್ಲರಿಗೂ ಅಳುಕೆದ್ದಿತು. ಮುಂದಿನ ಕ್ಷಣ ಆ ಪೊದರು ಇನ್ನೂ ಜೋರಾಗಿ ಕುಣಿಯತೊಡಗಿತು. ಯಾವುದೋ ಕ್ರೂರ ಪ್ರಾಣಿಗಳು ತೀಕ್ಷ್ಣವಾಗಿ ಹೋರಾಡುವಂತೆ ಅದು ನಜ್ಜುಗುಜ್ಜಾಗತೊಡಗಿತು. ಆದರೆ ಆ ಪೊದೆಯೊಳಗೆ ಯಾವುದೇ ಪ್ರಾಣಿಗಳು ಇರುವ ಸುಳಿವು, ಸೂಚನೆ ಯಾರೀಗೂ ಕಾಣಿಸಲಿಲ್ಲ! ಆದ್ದರಿಂದ ಎಲ್ಲರೂ ತಟ್ಟನೆ ಭಯದಿಂದ ಓಡಲನುವಾದರು. ಅಷ್ಟರಲ್ಲಿ ಸುರೇಂದ್ರಯ್ಯ ಎಚ್ಚೆತ್ತವರು,‘ಹೇ, ಹೇ…ಯಾರೂ ಹೆದರಬೇಡಿ ನಿಲ್ಲಿ ನಿಲ್ಲೀ…!’ ಎಂದು ಏರುಧ್ವನಿಯಲ್ಲಿ ಅರಚಿದವರು,‘ಆ ಪೊದೆಯೊಳಗೆ ಬಹುಶಃ ಕಾಟಿ (ಕಾಡುಕೋಣ)ಗಳೋ, ಕಾಡುಹಂದಿಗಳೋ ಇರಬೇಕು. ಅವು ನಮ್ಮನ್ನು ಕಂಡು ಹೆದರಿ ಓಡಿ ಹೋಗುವ ರಭಸಕ್ಕೆ ಪೊದೆ ಪುಡಿಯಾಗಿರಬೇಕಷ್ಟೆ. ಅವುಗಳಿಂದ ನಮಗೇನೂ ತೊಂದರೆಯಿಲ್ಲ!’ ಎಂದು ಧೈರ್ಯ ಹೇಳಿದರು. ಆಗ ಎಲ್ಲರೂ ನೆಮ್ಮದಿಯ ಉಸಿರುಬಿಟ್ಟರು. ಆದರೆ ಗುರೂಜಿಯವರ ಪರಿಸ್ಥಿತಿ ಹದಗೆಟ್ಟಿತ್ತು. ಇತ್ತೀಚೆಗೆ ಕೆಲವು ಕಾಲದಿಂದ ಅವರನ್ನು ಆಗಾಗ ಸುಖಾಸುಮ್ಮನೆ ಕಾಡುತ್ತಿದ್ದಂಥ ‘ಫೋಬಿಯಾ’ ಎಂಬ ಅಸಹಜ ಭಯವೊಂದು ಈಗ ಇದ್ದಕ್ಕಿದ್ದಂತೆ ಅವರನ್ನು ಆವರಿಸಿಕೊಂಡಿತು! ಹಾಗಾಗಿ ಅವರು ಸುರೇಂದ್ರಯ್ಯನ ಮಾತನ್ನು ಲೆಕ್ಕಿಸದೆ ಒಂದೇ ಉಸಿರಿಗೆ ದಾಪುಗಾಲಿಕ್ಕುತ್ತ ಮುಂದೆ ಓಡತೊಡಗಿದರು. ಇತ್ತ ತಮ್ಮ ಗುರೂಜಿಯವರು ಮುಂದೆ ಧಾವಿಸುತ್ತಿದ್ದುದನ್ನು ಕಂಡ ಅವರ ಸಹಾಯಕರೂ, ಶಂಕರನೂ ಮತ್ತಿತರರೆಲ್ಲ ಅವರಿಗಿಂತ ದುಪ್ಪಟ್ಟು ವೇಗದಲ್ಲಿ ಮುಂದುವರೆಯತೊಡಗಿದರು. ಸುಮಾರು ದೂರ ನಡೆದು ಬಂದ ಗುರೂಜಿಯವರ ಬೊಜ್ಜು ಮೈಯಲ್ಲಿ ಬೆವರು ಧಾರೆಯಾಗಿ ಹರಿದು ಮೈಯೆಲ್ಲ ತೊಯ್ದುಬಿಟ್ಟಿತು. ಆದರೂ ನಿಲ್ಲಲ್ಲು ಧೈರ್ಯವಿಲ್ಲದೆ ಮತ್ತಷ್ಟು ದೂರ ಸಾಗಿದರು. ಕಾಡು ಕಳೆದು ಶುಭ್ರಾಕಾಶ ಕಾಣತೊಡಗಿದ ಮೇಲೆ ಸ್ವಲ್ಪ ಸ್ಥಿಮಿತಕ್ಕೆ ಬಂದರು. ಅಲ್ಲೊಂದು ಕಡೆ ದಾರಿಯ ಪಕ್ಕದಲ್ಲಿದ್ದ ಇಳಿಜಾರಾದ ಪಾದೆಯ ಮೇಲೆ ಕಣ್ಣುಮುಚ್ಚಿ ಕುಳಿತು ನಾಲ್ಕೈದು ಬಾರಿ ದೀರ್ಘ ಶ್ವಾಸೋಚ್ಛ್ವಾಸ ಮಾಡುತ್ತ ಸುಧಾರಿಸಿಕೊಳ್ಳಲು ಹೆಣಗಿದರು. ಬಳಿಕ ಸಹಜಸ್ಥಿತಿಗೆ ಬಂದರು. ಆಗ ಅವರಿಗೆ ತಮ್ಮ ಭಯವನ್ನು ನೆನೆದು ಅವಮಾನವೆನಿಸಿತು. ಆದ್ದರಿಂದ ಅದನ್ನು ಮರೆಮಾಚುವುದಕ್ಕಾಗಿ ತಮ್ಮ ಹಿಂಬಾಲಕರನ್ನುದ್ದೇಶಿಸಿ ಮಾತಾಡತೊಡಗಿದರು. ‘ಇಲ್ಲಿ ನೋಡಿ, ಎಲ್ಲರೂ ತಾಳ್ಮೆಯಿಂದ ನಮ್ಮ ಮಾತನ್ನು ಕೇಳಿಸಿಕೊಳ್ಳಿ!’ ಎಂದು ಆತಂಕದಿಂದ ಹೇಳಿದರು. ಆಗ ಎಲ್ಲರೂ ಅವರತ್ತ ಗಮನ ಹರಿಸಿದರು. ‘ನಾವೀಗ ನಡೆದು ಬರುತ್ತಿದ್ದಾಗ ಆ ಪೊದೆಯೊಳಗೆ ಇದ್ದದ್ದು ಕಾಡು ಮೃಗಗಳಲ್ಲ!’ ಎಂದು ಮಾತು ನಿಲ್ಲಿಸಿದರು. ಅಷ್ಟರಲ್ಲಿ ಸ್ವಲ್ಪ ಹತೋಟಿಗೆ ಬಂದಿದ್ದ ಜನರು ಕೂಡಾ ಅವರ ಮಾತು ಕೇಳಿ ಮತ್ತೆ ಭಯಗೊಂಡು,‘ಮುಂದೇನು…!?’ಎಂಬಂತೆ ಅವರನ್ನು ದಿಟ್ಟಿಸಿದರು.‘ಅಲ್ಲಿದ್ದುದು ದುಷ್ಟಶಕ್ತಿಗಳು ಅಂತ ನಮ್ಮ ಗಮನಕ್ಕೆ ಬಂದಿದೆ! ಆದ್ದರಿಂದಲೇ ಅವುಗಳಿಂದ ಯಾರೀಗೂ ತೊಂದರೆಯಾಗಬಾರದು ಅಂತ ನಾವು ಸ್ವಲ್ಪ ಜೋರಾಗಿ ನಡೆದು ಬಂದೆವಷ್ಟೆ!’ ಎಂದರು ಗಂಭೀರವಾಗಿ. ಅಷ್ಟು ಕೇಳಿದ ಎಲ್ಲರೂ ಬಿಳಿಚಿಕೊಂಡರು. ‘ಆದರೂ ಯಾರು ಕೂಡಾ ಹೆದರುವ ಅಗತ್ಯವಿಲ್ಲ! ಅವುಗಳನ್ನು ಈ ಪ್ರದೇಶದಿಂದಲೇ ದೂರ ಓಡಿಸುವಂಥ ವಿಶೇಷ ಪೂಜೆಯೊಂದನ್ನು ನಾವು ಪ್ರಥಮವಾಗಿ ನೆರವೇರಿಸುತ್ತೇವೆ. ಆ ನಂತರ ನೀವೆಲ್ಲರೂ ಈ ಪರಿಸರದಲ್ಲಿ ನಿರ್ಭಯವಾಗಿ ಓಡಾಡಬಹುದು!’ ಎಂದರು ಗತ್ತಿನಿಂದ. ಆಗ ಎಲ್ಲರೂ ಗೆಲುವಾದರು. ನಂತರ ಗುರೂಜಿಯವರು ಅಲ್ಲಿಂದೆದ್ದು ನಡೆದವರು ತುಸುಹೊತ್ತಲ್ಲಿ ಬಂಡೆ ಸಮೂಹದ ಹತ್ತಿರ ಬಂದರು. ಶಂಕರನ ಸೂಚನೆಯಂತೆ ಸುರೇಂದ್ರಯ್ಯ ಹಿಂದಿನ ದಿನವೇ ಅಲ್ಲಿ ವಿಶಾಲವಾದ ಮಡಲಿನ ಚಪ್ಪರವನ್ನು ಹಾಕಿಸಿದ್ದರು. ಗುರೂಜಿಯವರ ಸಹಾಯಕರು ಅಲ್ಲೊಂದು ಕಡೆ ಬಂಡೆಯ ಮೇಲೆ ಹೋಮ ಕುಂಡವನ್ನು ಸ್ಥಾಪಿಸಿದರು. ಪೂಜಾ ಸಾಮಾಗ್ರಿಗಳನ್ನು ಜೋಡಿಸಿ ಹೋಮಕ್ಕೆ ಅಣಿಗೊಳಿಸಿದರು. ಗುರೂಜಿಯವರು ಅಲ್ಲಿ ಹತ್ತಿರವಿದ್ದ ಕೊಳವೊಂದಕ್ಕೆ ಹೋಗಿ ಸ್ನಾನ ಮುಗಿಸಿ ಮಡಿಯುಟ್ಟು ಬಂದು ಹೋಮಕ್ಕೆ ಕುಳಿತರು. ವಿಶೇಷ ಮಂತ್ರದ ಮೂಲಕ ಕುಂಡಕ್ಕೆ ಅಗ್ನಿಸ್ಪರ್ಶ ಮಾಡಿ ತಮ್ಮ ಗೊಗ್ಗರು ಕಂಠದಿಂದ ಮಂತ್ರೋಚ್ಛಾರಣೆಗೆ ತೊಡಗಿದರು. ವಿವಿಧ ಸಮಿಧೆಗಳು ಮತ್ತು ನಾಟಿ ದನದ ತುಪ್ಪವೂ ಅಗ್ನಿದೇವನಿಗೆ ಯಥೇಚ್ಛವಾಗಿ ಆಹುತಿಯಾಗತೊಡಗಿದವು. ಅಗ್ನಿದೇವನು ಹೋಮಾರಂಭದಲ್ಲಿ ಸಣ್ಣದಾಗಿ ಕಾಣಿಸಿಕೊಂಡವನು ಗುರೂಜಿಯವರು ಎಡೆಬಿಡದೆ ಅರ್ಪಿಸುತ್ತಿದ್ದ ಪ್ರಿಯವಸ್ತುಗಳನ್ನೆಲ್ಲ ಆಪೋಷನಗೈಯ್ಯುತ್ತ ಎತ್ತರೆತ್ತರಕ್ಕೆ ಮೈದಳೆದು ಕೋಮಲವಾಗಿ ನರ್ತಿಸತೊಡಗಿದ. ಕ್ರಮೇಣ ತನ್ನ ಶುಭ್ರ ವಿರಾಟರೂಪವನ್ನೂ ಪ್ರದರ್ಶಿಸತೊಡಗಿದ. ಅಗ್ನಿಯ ವೈಭೋಗವನ್ನು ಕಂಡ ಗುರೂಜಿಯವರ ಹುಮ್ಮಸ್ಸು ಹೆಚ್ಚಿತು. ಹಾಗಾಗಿ ಅವರಿಂದ ಇನ್ನಷ್ಟು ಉನ್ಮತ್ತ ಮಂತ್ರೋಚ್ಛಾರಗಳು ಧಾರೆಧಾರೆಯಾಗಿ ಹರಿಯತೊಡಗಿದವು. ಆದರೆ ಅಷ್ಟರಲ್ಲಿ ಅಗ್ನಿಯು ತಟ್ಟನೆ ತನ್ನ ಜ್ವಾಲೆಯನ್ನು ಅಡಗಿಸಿಬಿಟ್ಟ! ಮರುಕ್ಷಣ ಹೋಮಕುಂಡದಲ್ಲಿ ದಟ್ಟ ಹೊಗೆ ಏಳಲಾರಂಭಿಸಿತು. ಅದು ಆಕಾಶದೆತ್ತರಕ್ಕೆ ಹರಡಿ ಸುತ್ತಲಿನ ಪರಿಸರವನ್ನು ಆವರಿಸಿಬಿಟ್ಟಿತು. ಅ ದರಿಂದ ಗುರೂಜಿಯವರು ತುಸು ವಿಚಲಿತರಾದರಾದರೂ, ಮಂತ್ರೋಚ್ಚಾರಣೆಯ ಧ್ಯಾನದಲ್ಲಿ ತಾವು ತುಪ್ಪವನ್ನು ತುಸು ಹೆಚ್ಚು ಸುರಿದುದೇ ಬೆಂಕಿ ನಂದಲು ಕಾರಣವೆಂದು ಭಾವಿಸಿದರು. ಹಾಗಾಗಿ ಮರಳಿ ಮಂತ್ರೋಚ್ಛರಿಸುತ್ತ ಸಮಿಧೆಯನ್ನು ಎಸೆಯತೊಡಗಿದರು. ಆಗ ಅಗ್ನಿಯು ಮತ್ತೆ ಉರಿಯತೊಡಗಿದ. ಆದರೆ ಸ್ವಲ್ಪಹೊತ್ತಿನಲ್ಲಿ ಮರಳಿ ಕಣ್ಣುಮುಚ್ಚಾಲೆಯಾಡಿದ. ಮತ್ತೆ ಹೊಗೆ ತುಂಬಿಕೊಂಡಿತು. ಈಗಲೂ ಗುರೂಜಿಯವರು ತಮ್ಮ ಹಿಂದಿನ ಪ್ರಕ್ರಿಯೆಯನ್ನೇ ಪುನಾರಾವರ್ತಿಸಿದರು. ಆದರೂ ಮಬ್ಬು ಕಳೆಯಲಿಲ್ಲ. ಸ್ವಲ್ಪಹೊತ್ತಿನಲ್ಲಿ ಅಲ್ಲಿ ಎಲ್ಲರಿಗೂ ಉಸಿರುಗಟ್ಟುವಂಥ ವಾತಾವರಣವೊಂದು ಸೃಷ್ಟಿಯಾಯಿತು. ಆದರೆ ಅತ್ತ ಅಗ್ನಿದೇವನ ಆ ಬಗೆಯ ವರ್ತನೆಯ ಉದ್ದೇಶವನ್ನು ತಟ್ಟನೆ ಅರ್ಥೈಸಿಕೊಂಡ ನಿಸರ್ಗದತ್ತವಾದ ಮೃಗೀಯಶಕ್ತಿಯೊಂದು ರಪ್ಪನೆ ಎಚ್ಚೆತ್ತುಕೊಂಡಿತು. ಮರುಕ್ಷಣ ಆ ದೈತ್ಯ ಬಂಡೆಗಳೆಡೆಯಿಂದ ಮೈನಡುಗಿಸುವಂಥ ಭೀಕರ ಘರ್ಜನೆಯೊಂದು ಮೊಳಗಿತು. ಆ ಆರ್ಭಟಕ್ಕೆ ಎಲ್ಲರೂ ಹೌಹಾರಿಬಿಟ್ಟರು. ಅಷ್ಟೊತ್ತಿಗೆ ಹೊಗೆಯೂ ಮಾಯವಾಗಿ ಹೋಮಕುಂಡದಲ್ಲಿ ಮತ್ತೆ ಶುಭ್ರಾಗ್ನಿ ಪ್ರತ್ಯಕ್ಷವಾದ. ಆದರೆ ಈಗ ಅವನು ತನ್ನ ವಕ್ರವಕ್ರವಾದ ಭಂಗಿಯಲ್ಲಿ ವ್ಯಂಗ್ಯವಾಗಿ ಕುಣಿಯತೊಡಗಿದ. ಆದರೂ ಸುತ್ತಲಿನ ಪರಿಸರವು ನಿಚ್ಚಳವಾಗಿ ಕಾಣತೊಡಗಿತು. ಅದರ ಬೆನ್ನಿಗೆ ಬಂಡೆಗಳ ಕಮರಿನಿಂದ ಮರಳಿ ಜೋಡಿ ಆರ್ಭಟಗಳು ಮೊಳಗಿದವು. ಮತ್ತೆ ಎಲ್ಲರೂ ಭೀತಿಯಿಂದ ಓಡಲನುವಾದರು. ಆದರೆ ಕಾಲ ಮಿಂಚಿತ್ತು. ಸುಮಾರು ಒಂದು ಮೀಟರ್ ಎತ್ತರದ, ಆರು ಅಡಿಗಿಂತಲೂ ನೀಳ ಮತ್ತು ಬಲಿಷ್ಠವಾದ ಎರಡು ಚಿಟ್ಟೆಹುಲಿಗಳು ಬಂಡೆಯೆಡೆಯಿಂದ ತಮ್ಮ ಮರಿಗಳೊಂದಿಗೆ ಧಾವಿಸಿ ಹೊರಗೆ ಬಂದವು ಹಾಗೂ ತಮ್ಮ ವಲಯಕ್ಕೆ ಅಕ್ರಮವಾಗಿ ಪ್ರವೇಶಿಸಿದ ಮಾನವಜೀವಿಗಳನ್ನು ಕಂಡು ತೀವ್ರ ಕೋಪಗೊಂಡು ಕ್ಷೀಣಸ್ವರದಲ್ಲಿ ಅರಚಿ ತಮ್ಮ ಮರಿಗಳಿಗೇನೋ ಸಂಜ್ಞೆ ಮಾಡಿದವು. ಅದನ್ನು ಅರಿತ ಅವು ತಟ್ಟನೆ ಕಣ್ಮರೆಯಾದವು. ಮುಂದಿನಕ್ಷಣ ಆ ಮೃಗಗಳು ಮಿಂಚಿನ ವೇಗದಲ್ಲಿ ಹೋಮ ಕುಂಡದತ್ತ ನುಗ್ಗಿದವು ಸಿಕ್ಕಸಿಕ್ಕವರನ್ನು ಕಚ್ಚಿ ಸಿಗಿದು ಸೀಳುತ್ತ ಮುಂದುವರೆದುವು. ಅವುಗಳ ಮಾರಣಾಂತಿಕ ದಾಳಿಗೆ ಸಿಲುಕಿದವರ ಬೊಬ್ಬೆ, ಆರ್ತನಾದಗಳು ಮುಗಿಲು ಮುಟ್ಟಿದವು. ಸುಮಾರು ಹೊತ್ತು ಅದೇ ಬಗೆಯಿಂದ ದಾಂಧಲೆಯೆಬ್ಬಿಸಿದ ಆ ಪ್ರಾಣಿಗಳು ಬಳಿಕ ಹಠತ್ತಾಗಿ ಕಣ್ಮರೆಯಾಗಿಬಿಟ್ಟವು! (ಮುಂದುವರೆಯುವುದು) ಗುರುರಾಜ್ ಸನಿಲ್
ಧಾರಾವಾಹಿ ಆವರ್ತನ ಅದ್ಯಾಯ-47 ತಂಗವೇಲುವಿನೊಂದಿಗೆ ಬಂಡೆಯ ಸಮೂಹವನ್ನು ನೋಡುತ್ತ ಕೊರಕಲು ದಾರಿಯಲ್ಲಿ ಫರ್ಲಾಂಗು ಮುಂದೆ ಸಾಗಿದ ಶಂಕರನಿಗೆ ಆ ರಸ್ತೆಯ ಅಂತ್ಯದಿಂದ ಸುಮಾರು ನೂರು ಗಜ ದೂರದಲ್ಲಿ ಎರಡು, ಮೂರು ಶತಮಾನಗಳಷ್ಟು ಹಳೆಯದಾದ ತುಂಡುಪ್ಪರಿಗೆಯ ಮನೆಯೊಂದು ಕಾಣಿಸಿತು. ಅದನ್ನು ಕಂಡ ತಂಗವೇಲು, ‘ಸಂಗರಣ್ಣ ಅದೇ ಮನೆ ಸುಘೇಂದ್ರಯ್ಯನವರ್ದು…!’ ಎಂದು ಗೆಲುವಿನಿಂದ ತೋರಿಸಿದ. ಆದ್ದರಿಂದ ಶಂಕರ ಅಲ್ಲೇ ಒಂದು ಕಡೆ ಕಾರು ನಿಲ್ಲಿಸಿ ಇಳಿದವನು ಕಾರನ್ನೊಮ್ಮೆ ಬೇಸರದಿಂದ ದಿಟ್ಟಸಿದ. ತನ್ನ ಹೊಚ್ಚ ಹೊಸ ಕಾರು ಆ ಕೊರಕಲು ರಸ್ತೆಯ ಒರಟು ಕಲ್ಲುಗಳ ಮೇಲೆ ಹರಿದು ಓಲಾಡುತ್ತ ನಿಮಿಷಕ್ಕೊಮ್ಮೆ ಎಗರಿ ಬೀಳುತ್ತ ಬರುತ್ತಿದ್ದಾಗಲೇ ಅವನ ಹೊಟ್ಟೆಯೊಳಗೆ ಅವಲಕ್ಕಿ ಕುಟ್ಟಿದಂಥ ಹಿಂಸೆಯಾಗುತ್ತಿತ್ತು. ಈಗ ಅದಕ್ಕೆ ಮೆತ್ತಿಕೊಂಡಿದ್ದ ಧೂಳನ್ನೂ ಕಂಡವನು, ‘ಥೂ! ಥೂ! ಎಂಥ ಸಾವು ಮಾರಾಯ ಇದು. ಹೊಸ ಕಾರಿಡೀ ಧೂಳುಮಯವಾಗಿಬಿಟ್ಟಿದೆ ನೋಡು…!’ ಎಂದು ತಂಗವೇಲುವೇ ಅದಕ್ಕೆ ಕಾರಣ ಎಂಬಂತೆ ಸಿಡುಕಿದ. ಅದಕ್ಕವನು ‘ಹ್ಹಿಹ್ಹಿಹ್ಹಿಹ್ಹಿ…! ಊರಿಗೆ ಹೋಗಿ ಗ್ಯಾರೇಜಿಗೆ ಬಿಟ್ಟರಾಯ್ತು ಸಂಗರಣ್ಣಾ…!’ ಎಂದು ಹಲ್ಲು ಗಿಂಜಿ ಮುಂದೆ ನಡೆದ. ಆಗ ಶಂಕರನಿಗೆ ಮತ್ತಷ್ಟು ಉರಿಯಿತು. ಆದರೂ ವಿಧಿಯಿಲ್ಲದೆ ಅವನನ್ನು ಹಿಂಬಾಲಿಸಿದ. ಇಬ್ಬರೂ ಸುರೇಂದ್ರಯ್ಯನ ಮನೆಯಂಗಳಕ್ಕೆ ಬಂದು ನಿಂತರು. ‘ಸಾವುಗಾರ್ರೇ… ಸಾವುಗಾರ್ರೇ…!’ ಎಂದು ತಂಗವೇಲು ಧ್ವನಿಯೆತ್ತಿ ಕೂಗಿದ. ಶಂಕರ ಆ ಮನೆಯನ್ನೂ ಸುತ್ತಲಿನ ವಠಾರವನ್ನೂ ಗಮನಿಸತೊಡಗಿದ. ಒಂದುಕಾಲದಲ್ಲಿ ನೂರಾರು ಮಂದಿ ಅವಿಭಕ್ತವಾಗಿ ಬಾಳಿ ಬದುಕಿದ ಮನೆಯದು ಎಂಬುದು ಅದನ್ನು ಕಟ್ಟಿದ ಶ್ರೀಮಂತ ಕಲಾತ್ಮಕತೆಯಿಂದಲೇ ತಿಳಿಯುತ್ತಿತ್ತು. ಆದರೆ ಈಗ ಆ ಮನೆಯಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಬದುಕಿದ್ದು, ಅದರ ಹೆಚ್ಚಿನ ಭಾಗಗಳು ಶಿಥಿಲಗೊಂಡು ಒಂದೆರಡು ಭಾಗದ ಗೋಡೆಗಳು ಕುಸಿದುಬಿದ್ದಿದ್ದವು. ಸುತ್ತಲಿನ ತೆಂಗು, ಅಡಿಕೆ ತೋಟ ಮತ್ತು ಹೊಲಗದ್ದೆಗಳು ದುಡಿಯುವವರಿಲ್ಲದೆ ಹಡಿಲು ಬಿದ್ದು ದಶಕಗಳೇ ಕಳೆದಂತಿದ್ದವು. ನೆಟ್ಟಗೆ ನಿಲ್ಲಲಾಗದ ಮುದಿ ನಾಯಿಗಳೆರಡು ತಮ್ಮ ದುರ್ಬಲ ದೊಂಡೆಗಳಿಂದ ಊಳಿಡುವಂತೆ ಕರ್ಕಶವಾಗಿ ಬೊಗಳಿದವು, ಅಪರಿಚಿತರ ಸುಳಿವನ್ನು ಮನೆಯವರಿಗೆ ತಿಳಿಸಿ ತಮ್ಮ ಕೆಲಸವಾಯಿತೆಂಬಂತೆ ಮರಳಿ ಕಣ್ಣುಮುಚ್ಚಿ ಮುದುಡಿಕೊಂಡವು. ಸ್ವಲ್ಪಹೊತ್ತಿನಲ್ಲಿ ಬಣ್ಣ ಮಾಸಿದ ಕಾವಿ ಲುಂಗಿಯುಟ್ಟಿದ್ದ, ಐವತ್ತೈದರ ಆಸುಪಾಸಿನ ಡೊಳ್ಳು ಹೊಟ್ಟೆಯ ಕಂದು ಮೈಬಣ್ಣದ ದಢೂತಿ ವ್ಯಕ್ತಿಯೊಬ್ಬರು ಹಳೆಯ ಬೈರಾಸೊಂದನ್ನು ಹೆಗಲಿಗೇರಿಸಿಕೊಂಡು ಬಾಯಿ ತುಂಬ ಎಲೆಯಡಿಕೆ ಜಗಿಯುತ್ತ ಪಡಸಾಲೆಗೆ ಬಂದರು. ಅಂಗಳದಲ್ಲಿ ನಿಂತಿದ್ದ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಅಲ್ಲೇ ಗೋಡೆಯ ಹೊರ ಮೂಲೆಗೆ ವೀಳ್ಯದೆಂಜಲನ್ನು ಪಿಚಕ್ಕನೇ ಉಗುಳುತ್ತ ತಂಗವೇಲುವಿನ ಗುರುತು ಹಿಡಿದರು. ‘ಓಹೋ, ತಂಗವೇಲುವಾ ಮಾರಾಯಾ…ಬನ್ನಿ ಬನ್ನಿ ಒಳಗೆ ಬನ್ನಿ. ಎಷ್ಟು ಕಾಲವಾಯ್ತಾ ನಿನ್ನನ್ನು ನೋಡಿ…! ಆವತ್ತೊಮ್ಮೆ ಬಂದು ಹೋದವನದ್ದು ಮತ್ತೆ ಪತ್ತೆಯೇ ಇಲ್ಲ ನೋಡು…!’ ಎಂದು ನಗುತ್ತ ಅಂದವರು, ‘ಹೌದೂ ಇವರು ಯಾರು ಸಾಹುಕಾರ್ರು…?’ ಎಂದು ಶಂಕರನೆಡೆಗೆ ದಿಟ್ಟಿಸುತ್ತ ಗತ್ತಿನಿಂದ ಕೇಳಿದರು. ಅವರು, ‘ಸಾಹುಕಾರ್ರು…!’ ಎಂದಾಕ್ಷಣ ಶಂಕರನ ದೇಹವು ತಾನಿದ್ದುದಕ್ಕಿಂತಲೂ ಕೆಲವಿಂಚು ಎತ್ತರಕ್ಕೆ ಸೆಟೆದುನಿಂತಿತು. ‘ಹ್ಹೆಹ್ಹೆಹ್ಹೆ… ಏನು ಮಾಡುವುದು ಸಾವುಗಾರ್ರೇ ಗಿರಾಕಿ ಸಿಗಬೇಕಲ್ಲ…!’ ಎಂದ ತಂಗವೇಲು ಶಂಕರನತ್ತ ತಿರುಗಿ, ‘ಇವರು ನಮ್ಮ ಧಣಿ ಸಂಗರಣ್ಣ ಅಂತ. ದೊಡ್ಡ ಬಿಲ್ಡರ್ರು ಮತ್ತು ಭಾರೀ ದೊಡ್ಡ ಗುಳ (ಕುಳ) ಸಾವುಗಾರ್ರೇ!’ ಎಂದು ನಗುತ್ತ ಹೇಳಿ ತಾನೂ ಅವನನ್ನು ಉಬ್ಬಿಸಿದ. ಶಂಕರ ತಂಗವೇಲುವಿನೆಡೆಗೂ ಮೆಚ್ಚುಗೆಯ ನಗು ಹರಿಸಿದ. ಅಷ್ಟು ತಿಳಿದ ಸುರೇಂದ್ರಯ್ಯ ಶಂಕರನಿಗೆ ಗೌರವದಿಂದ ನಮಸ್ಕರಿಸಿ ಕುಳಿತುಕೊಳ್ಳಲು ಹಳೆಯ ಕುಸುರಿ ಚಿತ್ತಾರವಿದ್ದ ಕುರ್ಚಿಯನ್ನು ತೋರಿಸಿದವರು, ಕೆಲಸದವಳನ್ನು ಕೂಗಿ ಕರೆದು ಕಾಫಿ ತರಲು ಸೂಚಿಸಿ ಅವರೊಂದಿಗೆ ಮಾತುಕತೆಗಿಳಿದರು. ತಂಗವೇಲುವೇ ಮೊದಲು ಮಾತಾಡಿದ. ‘ಸಾವುಗಾರ್ರೇ, ನಮ್ಮ ಶರವಣನ ದಯೆಯಿಂದ ನಿಮ್ಮ ಹಿರಿಯರಾಸೆ ಕೈಗೂಡುವ ಕಾಲ ಬಂದೇಬಿಟ್ಟಿತು ನೋಡಿ. ಸಂಗರಣ್ಣನಿಗೆ ನಿಮ್ಮ ಬಂಡಿಗಲ್ಲು ಬೇಕಂತೆ!’ ಎಂದವನು, ‘ಮುಂದಿನದ್ದನ್ನು ನೀವೇ ಮಾತಾಡಿಕೊಳ್ಳಿ!’ ಎಂಬಂತೆ ಶಂಕರನ ಮುಖ ನೋಡಿದ. ಆದ್ದರಿಂದ ಶಂಕರ ಮೊದಲು ಏಕನಾಥ ಗುರೂಜಿಯವರನ್ನೂ ಮತ್ತವರ ಜ್ಯೋತಿಷ್ಯದ ಶಕ್ತಿಯನ್ನೂ ಹೊಗಳುತ್ತ ಅವರನ್ನು ಪರಿಚಯಿಸಿದ. ಬಳಿಕ ಅವರೀಗ ನಿರ್ಮಿಸಲು ಹೊರಟಿರುವ ದೇವಸ್ಥಾನದ ವಿಚಾರವನ್ನು ಅವರಿಗೆ ವಿವರಿಸಿ, ‘ಗುರೂಜಿಯವರದ್ದು ಇದೊಂದು ದೊಡ್ಡ ಸಾಧನೆಯಾಗಲಿದೆ ಸುರೇಂದ್ರಯ್ಯನವರೇ. ಅದರಿಂದ ನಮ್ಮೂರಿಗೂ ಬಹಳ ಒಳ್ಳೆಯದಾಗಲಿದೆ. ಹಾಗಾಗಿ ಆವೊಂದು ಉತ್ತಮ ಕೆಲಸಕ್ಕೆ ನಿಮ್ಮ ಬಂಡೆಗಳು ನಮಗೆ ಬೇಕು. ಕೊಡಬಹುದಾ…?’ ಎಂದು ಗಂಭೀರವಾಗಿ ಕೇಳಿದ. ಅವನ ಮಾತು ಕೇಳಿದ ಸುರೇಂದ್ರಯ್ಯನಿಗೆ ತಾವು ಕುಳಿತ ನೆಲದಡಿಯಲ್ಲೇ ಕೊಪ್ಪರಿಗೆಯೆದ್ದಷ್ಟು ಸಂತೋಷವಾಯಿತು. ಆದರೂ ತೋರಿಸಿಕೊಳ್ಳದೆ ಕೆಲವು ಕ್ಷಣ ಗಂಭೀರವಾಗಿ ಯೋಚಿಸುವಂತೆ ನಟಿಸಿದರು. ಬಳಿಕ, ‘ಬಂಡೆಯನ್ನೇನೋ ಕೊಡಬಹುದು ಸಾವುಕಾರ್ರೇ…, ಆದರೆ ನಮ್ಮ ಹಿರಿಯರದ್ದೊಂದು ಸಣ್ಣ ಆಸೆಯಿದೆ. ಏನೆಂದರೆ ನಮ್ಮ ಬಂಡೆಯಿಂದ ಕಟ್ಟುವ ದೇವಸ್ಥಾನದಲ್ಲಿ ಯಾವುದಾದರೂ ಒಂದು ದೈವದ ಅಥವಾ ದೇವರ ಮೂರ್ತಿಯು ಇದೇ ಶಿಲೆಯಿಂದ ಕೆತ್ತನೆಯಾಗಿ ಅಲ್ಲಿ ಪೂಜೆಗೊಳ್ಳಬೇಕು ಎಂಬುದು. ನಿಮ್ಮ ಗುರೂಜಿಯವರು ಇದಕ್ಕೆ ಒಪ್ಪುತ್ತಾರಾ…?’ ಎಂದು ಅನುಮಾನದಿಂದ ಪ್ರಶ್ನಿಸಿದರು. ಅಷ್ಟು ಕೇಳಿದ ಶಂಕರನಿಗೆ ಪಕ್ಕನೆ ಏನೂ ತೋಚಲಿಲ್ಲ. ಆದ್ದರಿಂದ, ‘ಈ ವಿಷಯವನ್ನು ಮಾತ್ರ ನಾನು ಗುರೂಜಿಯವರೊಡನೆ ಕೇಳಿಯೇ ಹೇಳಬೇಕಾಗುತ್ತದೆ ಸುರೇಂದ್ರಯ್ಯ!’ ಎಂದವನು, ‘ಹೌದು, ನಿಮ್ಮ ಹಿರಿಯ ಆ ಆಸೆಗೆ ಕಾರಣವೇನು?’ ಎಂದ ಕುತೂಹಲದಿಂದ. ಅದನ್ನೇ ನಿರೀಕ್ಷಿಸುತ್ತಿದ್ದ ಸುರೇಂದ್ರಯ್ಯ, ‘ಆ ಕಥೆಯನ್ನು ನಿಮಗೆ ಸ್ವಲ್ಪ ಹೇಳಬೇಕು ನೋಡಿ. ಆದರೆ ಅದಕ್ಕಿಂತ ಮೊದಲು ಆ ಬಂಡೆಗಳ ವಿಶೇಷವನ್ನೂ ಹೇಳುತ್ತೇವೆ ಕೇಳಿ. ನಮ್ಮ ಮುತ್ತಜ್ಜನ ಕಾಲದಿಂದಲೋ ಅಥವಾ ಅವರ ಮುತ್ತಜ್ಜದಿಂದಿರ ಕಾಲದಿಂದಲೋ ಎಂಬುದು ಸರಿಯಾಗಿ ಗೊತ್ತಿಲ್ಲ, ಒಟ್ಟಾರೆ ಅಷ್ಟೊಂದು ಪ್ರಾಕಿನಿಂದಲೂ ಆ ಬಂಡೆಕಲ್ಲು ನಮ್ಮ ಜಾಗದಲ್ಲಿತ್ತಂತೆ. ಆದರೆ ಆವಾಗ ಕೇವಲ ಒಂದೇ ಬಂಡೆಯಿದ್ದದ್ದು ಕಾಲಕ್ರಮೇಣ ಬೆಳೆಯುತ್ತ ಹೋಯಿತಂತೆ. ಒಮ್ಮೆ ರಾತ್ರೋರಾತ್ರಿ ಎರಡು ಭಾಗವಾಗಿಬಿಟ್ಟಿತಂತೆ! ಅಷ್ಟಾಗಿ ಕೆಲವು ವರ್ಷಗಳ ನಂತರ ಮತ್ತೆ ಮೂರು ಭಾಗವಾಗಿದ್ದು ಬರಬರುತ್ತ ಮತ್ತಷ್ಟು ಸೀಳಿ, ಒಡೆದುಕೊಳ್ಳುತ್ತ ಬಂದದ್ದು ಒಂದೊಂದು ಬಂಡೆಗೂ ಒಂದೊಂದು ಪ್ರಾಣಶಕ್ತಿ ಬಂದು ಬಂಡೆಗಳ ದೊಡ್ಡದೊಂದು ಸಂಸಾರವೇ ಆಗಿಬಿಟ್ಟಿತಂತೆ. ಹೀಗಾಗಿ ಆ ಬಂಡೆಗಳ ನಡುವೆ ಪಿಲಿಚೌಂಡಿ ಮತ್ತು ಪಂಜುರ್ಲಿ ದೈವಗಳು ಬಂದು ನೆಲೆಸಿದ್ದಾವೆ ಎಂದೊಮ್ಮೆ ನಮ್ಮ ಹಿರಿಯರಿಗೆ ‘ದೈವದರ್ಶನ’ ಸೇವೆಯಲ್ಲಿ ತಿಳಿದು ಬಂದಿತಂತೆ. ಅಷ್ಟು ತಿಳಿದ ಅವರು ಆ ಶಕ್ತಿಗಳನ್ನು ಭಯಭಕ್ತಿಯಿಂದ ಈ ಮನೆಗೆ ಕರೆದುಕೊಂಡು ಬಂದು ನೆಲೆಗೊಳಿಸಿ ಕಾಲಕಾಲಕ್ಕೆ ಅವುಗಳನ್ನು ವೈಭವದಿಂದ ಪೂಜಿಸಿಕೊಂಡು ಬಂದರು. ಆ ಶಕ್ತಿಗಳು ನೆಲೆಯಾಗಿದ್ದಂಥ ಆ ಬಂಡೆಗಳಿಗೂ ದೈವಶಕ್ತಿ ಇರುತ್ತದೆ. ಹಾಗಾಗಿ ಅದರದ್ದೊಂದು ತುಂಡು ಕಲ್ಲಾದರೂ ದೈವ, ದೇವರ ಮೂರ್ತಿಯಾಗಿ ಪೂಜೆಯಾಗಬೇಕೆನ್ನುವುದು ನಮ್ಮ ಹಿರಿಯರ ಸಂಕಲ್ಪ!’ ಎಂದು ಸುರೇಂದ್ರಯ್ಯ ವಿವರಿಸಿದರು. ‘ಓಹೋ ಹೀಗಾ ವಿಷಯ…? ಹಾಗಾದರೆ ಅವರು ಸರಿಯಾಗಿಯೇ ಯೋಚಿಸಿದ್ದಾರೆ ಬಿಡಿ!’ ಎಂದು ಶಂಕರ ಅವರ ಮಾತನ್ನು ಸಮರ್ಥಿಸಿದ. ‘ಆ ಬಂಡೆಗಳಿಗೆ ನಾವು ಹೇಳುತ್ತಿದ್ದ ರೇಟಿಗಿಂತಲೂ ಎರಡರಷ್ಟು ಹೆಚ್ಚು ಕೊಟ್ಟು ಅದನ್ನು ಕೊಳ್ಳಲು ಇಲ್ಲಿನ ತುಂಬಾ ಜನ ಕ್ರಷರ್ ಮಾಲಿಕರು ಬಹಳ ವರ್ಷಗಳಿಂದ ಬಂದು ಹೋಗುತ್ತಲೇ ಇದ್ದಾರೆ ಸಾಹುಕಾರ್ರೇ. ಮೊನ್ನೆ ಮೊನ್ನೆಯಷ್ಟೇ ನಮಗೆ ಬಹಳ ಪರಿಚಯವಿದ್ದ ಇಲ್ಲಿನೊಬ್ಬ ದೊಡ್ಡ ಉದ್ಯಮಿ ರವೀಂದ್ರಯ್ಯ ಅಂತ ಬಂದಿದ್ದರು. ಆದರೆ ನಾವು ಅವರಿಗೂ ‘ಸದ್ಯ ಮಾರುವ ಯೋಚನೆಯಿಲ್ಲ. ಇದ್ದರೆ ಹೇಳುತ್ತೇವೆ!’ ಎಂದು ಕಳುಹಿಸಿದ್ದೆವು. ಈ ಸಲ ಬಹುಶಃ ನಿಮ್ಮ ಮೂಲಕವೇ ನಮ್ಮ ಹಿರಿಯರ ನಂಬಿಕೆಯು ಈಡೇರುವ ಕಾಲ ಬಂದಿದೆ ಅಂತ ತೋರುತ್ತದೆ!’ ಎಂದು ಸುರೇಂದ್ರಯ್ಯ ನಗುತ್ತ ಹೇಳಿದರು. ‘ಆಯ್ತು ಸುರೇಂದ್ರಯ್ಯನವರೇ, ಈ ವಿಷಯ ಗುರೂಜಿಯವರಲ್ಲಿ ಮಾತಾಡಿ ಒಪ್ಪಿಸುವ ಜವಾಬ್ದಾರಿ ನನ್ನದು. ಈಗ ವ್ಯವಹಾರದ ಮಾತಾಡುವ. ನೀವು ಸರಿಯಾದ ಒಂದು ರೇಟು ಹೇಳಿದರೆ ಒಳ್ಳೆಯದಿತ್ತು!’ ಎಂದ ಶಂಕರ. ಆಗ ಸುರೇಂದ್ರಯ್ಯ ಮತ್ತೆ ಗಂಭೀರವಾದವರು ಕೆಲವು ಕ್ಷಣದ ಬಳಿಕ, ‘ನೋಡಿ ಸಾಹುಕಾರ್ರೇ, ನಾವು ಬಂಡೆ ಮಾರಿ ಅದರಿಂದಲೇ ಬದುಕಲು ಹೊರಟವರೇನಲ್ಲ. ಅದನ್ನೀಗಲೇ ಹೇಳಿ ಬಿಡುತ್ತೇವೆ. ಯಾಕೆಂದರೆ ನಮ್ಮ ಹಿರಿಯರು ಬಿಟ್ಟು ಹೋದ ಆಸ್ತಿಯೇ ನಮ್ಮ ಇನ್ನೆರಡು, ಮೂರು ತಲೆಮಾರಿಗಾಗುವಷ್ಟಿದೆ. ಆದರೂ ಆ ಬಂಡೆಗಳನ್ನು ಮಾರಲು ಒಂದು ಮುಖ್ಯ ಕಾರಣವಿದೆ. ನಮ್ಮ ಈ ಮನೆಯನ್ನೂ ಇದರ ಅವಸ್ಥೆಯನ್ನೂ ನೀವು ಗಮನಿಸಿರಬಹುದು. ಅರಮನೆಯಂಥ ಇದನ್ನು ರಿಪೇರಿ ಮಾಡಿಸುವುದೆಂದರೆ ಸಣ್ಣ ಮಾತೇನಲ್ಲ. ಆ ಬಂಡೆಗಳನ್ನು ಮಾರಿ ಈ ಮನೆಯನ್ನು ಈಗ ಇರುವ ರೀತಿಯಲ್ಲೇ ಚಂದ ಮಾಡಿ ರಿಪೇರಿ ಮಾಡಿಸಿ ಇನ್ನೊಂದಷ್ಟು ವರ್ಷ ಇದರ ವೈಭವವನ್ನು ಉಳಿಸಿಕೊಳ್ಳಬೇಕೆಂಬುದು ನಮ್ಮ ತಂದೆಯವರ ಮತ್ತು ನಮ್ಮಿಚ್ಛೆಯೂ ಹೌದು! ಅದಕ್ಕೆ ಒಂದು ಅಂದಾಜಿನ ಪ್ರಕಾರ ಒಂದು ಕೋಟಿಯತನಕ ಖರ್ಚು ಬೀಳಬಹುದು. ನಮ್ಮ ಬಂಡೆಗೂ ನೀವು ಅಷ್ಟೇ ಕೊಟ್ಟರೆ ಸಾಕು!’ ಎಂದು ಸಲೀಸಾಗಿ ಅಂದರು. ಆದರೆ ಶಂಕರನಿಗೆ ಅದೇನೂ ಅಷ್ಟೊಂದು ದೊಡ್ಡ ಮೊತ್ತವೆಂದು ಅನ್ನಿಸಲಿಲ್ಲ. ಆದರೆ ಅವನು ಒಂದು ಹುಲ್ಲು ಕಡ್ಡಿಯನ್ನು ಕೂಡಾ ಹತ್ತು ಬಾರಿ ಚೌಕಾಶಿ ಮಾಡದೆ ಕೊಂಡುಕೊಳ್ಳುವ ಜಾಯಮಾನದವನಲ್ಲ. ಆದ್ದರಿಂದ, ‘ಓ ದೇವರೇ…! ನೀವೆಂಥದು ಮಾರಾಯ್ರೇ ಒಟ್ಟಾರೆ ಒಂದು ರೇಟು ಹೇಳಿ ಬಿಡುವುದಾ…? ಛೇ! ಛೇ! ಅದು ಸಿಕ್ಕಾಪಟ್ಟೆ ಜಾಸ್ತಿಯಾಯಿತು ಬಿಡಿ. ಅಷ್ಟೆಲ್ಲ ಕೊಡಲು ಸಾಧ್ಯವಿಲ್ಲ. ಯಾಕೆಂದರೆ ಆ ದೇವಸ್ಥಾನವನ್ನು ಕಟ್ಟುವುದಕ್ಕೆ ನಾವು ಕೂಡಾ ನಾಗದೇವರ ಭಕ್ತಾದಿಗಳಿಂದಲೇ ಹಣವನ್ನು ಒಟ್ಟು ಮಾಡುವವರು ಸುರೇಂದ್ರಯ್ಯ! ಅಂಥ ಪವಿತ್ರವಾದ ದುಡ್ಡನ್ನು ನಮಗೆ ಖುಷಿ ಬಂದ ಹಾಗೆ ಖರ್ಚು ಮಾಡಲಿಕ್ಕಾಗುತ್ತದಾ ಹೇಳಿ…? ನೀವು ಕೂಡಾ ಅದೇ ದೃಷ್ಟಿಯಿಂದ ಒಂದಷ್ಟು ಕಡಿಮೆ ಮಾಡಿ ಹೇಳಬೇಕು ನೋಡಿ!’ ಎಂದು ಖಡಕ್ಕಾಗಿ ಹೇಳಿದ. ಅವನ ಮಾತಿನ ವರಸೆಯನ್ನು ಕೇಳಿದ ಸುರೇಂದ್ರಯ್ಯ ಒಳಗೊಳಗೇ ಬೆಚ್ಚಿದವರು, ಛೇ, ಛೇ!…ವ್ಯಾಪಾರವೆಲ್ಲಿ ಕೈತಪ್ಪುತ್ತದೋ…? ಎಂದುಕೊಂಡು ಮತ್ತಷ್ಟು ಯೋಚಿಸುವಂತೆ ನಟಿಸಿದರು. ಕೊನೆಯಲ್ಲಿ, ‘ಆಯ್ತು ಸಾಹುಕಾರ್ರೇ, ನೀವು ಆ ನಾಗನ ಹೆಸರು ಹೇಳಿದ ಮೇಲೂ ನಾವು ನಮ್ಮ ಹಿಡಿದ ಮುಷ್ಟಿ ಬಿಚ್ಚದಿದ್ದರೆ ಅರ್ಥ ಉಂಟಾ ಹೇಳಿ? ಇಬ್ಬರಿಗೂ ಚರ್ಚೆ ಬೇಡ. ಒಂದೇ ಮಾತು, ನಾವು ಹೇಳಿದ ಮೊತ್ತದಲ್ಲಿ ಐದು ಲಕ್ಷ ಕಡಿಮೆ ಮಾಡುತ್ತೇವಷ್ಟೇ. ತೊಂಬತ್ತೈದಕ್ಕೆ ವ್ಯಾಪಾರ ಮುಗಿಸಿಬಿಡುವ ಏನಂತೀರಾ…?’ ಎಂದು ನಗುತ್ತ ಅಂದರು. ಅಷ್ಟಕ್ಕೆ ಶಂಕರನ ಮುಖದಲ್ಲೂ ನಗು ಮೂಡಿತು. ಅಲ್ಲಿಗೆ ವ್ಯವಹಾರದ ಮಾತುಕಥೆಯೂ ಮುಗಿಯಿತು. ತಂಗವೇಲುವೂ ಖುಷಿಯಾದ. ಆದರೆ ಅವನು, ವ್ಯಾಪಾರ ಹೇಗೂ ಕುದುರಿತು. ಆದರೆ ಇನ್ನು ಇವರಿಬ್ಬರ ಕಡೆಯಿಂದ ತನಗೆಷ್ಟೆಷ್ಟು ಕಮಿಷನ್ ಸಿಗುತ್ತದೋ…? ಎಂಬ ಆತಂಕದಿಂದ ಚಡಪಡಿಸಿದ. ಅದನ್ನು ಗಮನಿಸಿದ ಸುರೇಂದ್ರಯ್ಯ, ‘ತಂಗವೇಲು, ನೀನು ಮಂಡೆಬಿಸಿ ಮಾಡಬೇಡ ಮಾರಾಯ. ನಿಮ್ಮ ಕಡೆಯಿಂದ ಹಣ ನಮಗೆ ಸಂದಾಯವಾಗುತ್ತಲೇ ನಿನ್ನ ಕಮಿಷನ್ನೂ ನಿನ್ನ ಕೈ ಸೇರುತ್ತದೆ!’ ಎಂದಾಗ ತಂಗವೇಲು ಗೆಲುವಾದವನು, ‘ಹಾಗಾದರೆ ನಿಮ್ಮದು ಯಾವಾಗ ಶಂಗರಣ್ಣಾ…?’ ಎಂಬಂತೆ ಅವನನ್ನು ದಿಟ್ಟಿಸಿದ. ಆದರೆ ಅಷ್ಟರಲ್ಲಿ ಶಂಕರ ತಟ್ಟನೆ ಅವನಿಂದ ಮುಖ ತಿರುಗಿಸಿ ಎದ್ದು ಕಾರಿನತ್ತ ಹೋದವನು ಗುರೂಜಿಯವರ ಪ್ರಸಾದವನ್ನೂ ಮತ್ತು ಒಂದು ಲಕ್ಷ ರೂಪಾಯಿಯನ್ನೂ ತಂದು, ‘ತಗೊಳ್ಳಿ ಸುರೇಂದ್ರಯ್ಯ, ಇದು ಗುರೂಜಿಯವರು ಕೊಟ್ಟ ಪ್ರಸಾದ. ಮತ್ತಿದು ಅಡ್ವಾನ್ಸು. ಉಳಿದ ಹಣವನ್ನು ಬಂಡೆ ಕಡಿದು ಮುಗಿದ ಕೂಡಲೇ ಚುಕ್ತಾ ಮಾಡುತ್ತೇವೆ. ಅದಕ್ಕೊಂದು ಅಗ್ರಿಮೆಂಟು ಕೂಡಾ ಮಾಡಿಕೊಳ್ಳುವ!’ ಎಂದು ಗತ್ತಿನಿಂದ ಅಂದವನು, ಠಸ್ಸೆ ಪೇಪರನ್ನು ಅವರ ಮುಂದಿಟ್ಟ. ಒಂದು ಲಕ್ಷವನ್ನು ನೋಡಿದ ಸುರೇಂದ್ರಯ್ಯ ತಾವು ಕಾಣುತ್ತಿರುವುದು ಕನಸೋ ನನಸೋ…? ಎಂಬ ಅನುಮಾನಕ್ಕೆ ಬಿದ್ದು ನೋಟಿನ ಕಂತೆಯನ್ನೊಮ್ಮೆ ನಯವಾಗಿ ಮುಟ್ಟಿ ನೋಡಿದವರು, ಶಂಕರನ ಪತ್ರಕ್ಕೆ ಅವನು ತೋರಿಸಿದಲ್ಲಿ ಸಹಿ ಎಳೆದು ಅವರನ್ನು
ಧಾರಾವಾಹಿ ಆವರ್ತನ ಅದ್ಯಾಯ-45 ಡಾ. ನರಹರಿಯು ಗೋಪಾಲನನ್ನು ಆಸ್ಪತ್ರೆಗೆ ಕರೆದೊಯ್ದ ಬಳಿಕ ಅಲ್ಲಿಂದ ಹೊರಟ ಸುಮಿತ್ರಮ್ಮನ ತಲೆಯಲ್ಲಿ ತಮ್ಮ ಮನೆಯ ದಾರಿಯುದ್ದಕ್ಕೂ ನರಹರಿಯ ಮಾತುಗಳೇ ತಿರುಗುತ್ತಿದ್ದವು. ಯಾವುದನ್ನು ನಂಬಬೇಕು? ಯಾರನ್ನು ನಂಬಬೇಕು? ಈ ನರಹರಿ ಹೇಳುವ ಮಾತಿನಲ್ಲೂ ಸತ್ಯವಿದೆ ಎಂದುಕೊಂಡರೆ ಗುರೂಜಿಯವರ ವೇದಾಂತವು ಬೇರೊಂದು ಕಥೆಯನ್ನು ಹೇಳುತ್ತದೆಯಲ್ಲ! ಇವುಗಳಲ್ಲಿ ಯಾವುದು ಸರಿ, ಯಾವುದು ಸತ್ಯ? ಇಂಥ ಹತ್ತು ಹಲವು ನಂಬಿಕೆಗಳು ಹಾಗು ಪೂಜೆ, ಪುನಸ್ಕಾರಗಳ ವಿಚಾರಗಳಲ್ಲಾಗಲೀ ಅಥವಾ ಕುಟುಂಬದ, ಸಾಮಾಜದ ಯಾವುದೇ ವಿಷಯಗಳಲ್ಲಾಗಲೀ ಗಂಡಸರಿಗಿಂತ ಹೆಂಗಸರೇ ಯಾಕೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ? ಇಂಥ ಸಂಗತಿಗಳ ಬಗ್ಗೆ ಗಂಡಸರಲ್ಲಿ ಇರುವಷ್ಟು ಧೈರ್ಯ ಮತ್ತು ಉದಾಸೀನದ ಬುದ್ಧಿಯು ನಾವು ಹೆಂಗಸರಲ್ಲಿ ಯಾಕಿಲ್ಲ…? ಅಥವಾ ಇದ್ದರೂ ಆ ಮನಸ್ಥಿತಿಯನ್ನು ತೋರಿಸಿಕೊಳ್ಳಲು ನಾವೇ ಹೆದರುತ್ತಿದ್ದೇವೋ ಹೇಗೇ…? ನನ್ನ ಹಿರಿಯರ ಕಾಲದಿಂದಲೂ ನಾನು ನೋಡುತ್ತ ಬಂದಿದ್ದೇನೆ, ತಮ್ಮ ಕುಟುಂಬದ ಯಾವುದೇ ತೊಂದರೆ, ತಾಪತ್ರಯಗಳಿರಲಿ ಅಥವಾ ಜಾತಿ ಮತ ಧರ್ಮಕ್ಕೆ ಸಂಬಂಧಿಸಿದ ಆಚಾರ ವಿಚಾರಗಳೇ ಇರಲಿ ಎಲ್ಲದಕ್ಕೂ ನನ್ನಂಥ ಹೆಂಗಸರೇ ಹೆಚ್ಚುಹೆಚ್ಚಾಗಿ ಬಲಿಯಾಗುತ್ತ ಒದ್ದಾಡುತ್ತಾರೆ. ಯಾವುದೇ ಒಂದು ನಂಬಿಕೆ ಅಥವಾ ಮೂಢ ವಿಚಾರಗಳನ್ನೇ ಆಗಲಿ ಯಾರಾದರೂ ನಮ್ಮ ಕಣ್ಣಿಗೆ ಕಟ್ಟುವಂತೆ, ಮನಸ್ಸಿಗೆ ಮುಟ್ಟುವಂತೆ ವಿವರಿಸುತ್ತ ಹೋದರೆಂದರೆ ಅವರಾಡುವ ಸಂಗತಿಯ ಸತ್ಯಾಸತ್ಯತೆಯನ್ನು ಚೂರೂ ತರ್ಕಿಸಲು, ಸ್ವಂತ ಬುದ್ಧಿಯಿಂದ ನಿರ್ಧರಿಸಲು ಹೋಗದೆ ಅಂಥವರನ್ನು ನಾವು ಕಣ್ಣುಮುಚ್ಚಿ ನಂಬುತ್ತ ಅವರ ಬಲೆಗೆ ಬೀಳುತ್ತೇವೆ ಯಾಕೆ? ಅಂದರೆ ನನ್ನಂಥವರಿಗೆ ಸ್ವತಂತ್ರವಾಗಿ ಯೋಚಿಸುವ, ನಿರ್ಧರಿಸುವ ಶಕ್ತಿಯೇ ಇಲ್ಲವೆಂದಾ ಈ ಜನರ ಯೋಚನೆ…?- ಎಂದೆಲ್ಲ ಅಶಾಂತಿಯಿಂದ ಚಿಂತಿಸುತ್ತ ನಡೆಯುತ್ತಿದ್ದ ಸುಮಿತ್ರಮ್ಮನ ಒಳಮನಸ್ಸಿನಲ್ಲಿ ಕೊನೆಗೆ ನರಹರಿಯ ವಿಚಾರಗಳೇ ಸ್ವಲ್ಪ ಮಟ್ಟಿಗೆ ಗೆಲುವು ಸಾಧಿಸಿದಂತೆ ತೋರುತ್ತಿತ್ತು. ಹೌದು, ಹೌದು. ನರಹರಿ ನನಗಿಂತ ಕಿರಿಯ ವಯಸ್ಸಿನವನು ಎನ್ನುವುದೇನೋ ಸರಿ. ಆದರೆ ಅವನು ಹೇಳಿದ್ದರಲ್ಲಿ ಬಹಳ ಅರ್ಥವೂ ಇದೆ ಎಂದೆನ್ನಿಸುತ್ತದೆ. ಅದನ್ನೆಲ್ಲ ತಾಳ್ಮೆಯಿಂದ ವಿಚಾರ ಮಾಡುವಾಗ ಗೊಂದಲ ಕಳೆದು ಮನಸ್ಸು ಹಗುರವಾಗುತ್ತದೆ. ಹಾಗಾದರೆ ಆ ನಾಗರಹಾವಿನ ವಿಷಯದಲ್ಲಿ ತಾವು ಈವರೆಗೆ ಅಂದುಕೊಂಡಿದ್ದೆಲ್ಲ ಬರೇ ಭ್ರಮೆಯಾ…? ತಮ್ಮ ಮುತ್ತಜ್ಜನ ಕಾಲದಿಂದಲೂ ಅವರೆಲ್ಲ ನಂಬಿಕೊಂಡು ಬಂದಿದ್ದು, ‘ಕಲಿಯುಗದಲ್ಲಿ ಕಣ್ಣಿಗೆ ಕಾಣುವ ದೇವರು ಎಂದರೆ ನಾಗರಹಾವು ಮಾತ್ರವೇ!’ ಎಂದಲ್ಲವಾ! ಹಾಗಾದರೆ ನನ್ನ ಮನೆಯೊಳಗೆ ಬಂದ ಆ ಹಾವು ನರಹರಿಯ ಪ್ರಕಾರ ಕೇವಲ ಒಂದು ಸರೀಸೃಪವೆಂದಾದರೆ ನಮ್ಮ ಹಿರಿಯರು ನಂಬಿ, ಪೂಜಿಸಿಕೊಂಡು ಬಂದಂಥ ಆ ನಾಗನೆಂಬ ಶಕ್ತಿ ಯಾವುದು…? ಎಂದು ಆಳವಾಗಿ ಮತ್ತು ಧೈರ್ಯವಾಗಿ ಯೋಚಿಸಿದರು. ಆದರೆ ತಟ್ಟನೆ ಅವರಿಗೆ ಉತ್ತರ ಸಿಗದಿದ್ದಾಗ ಮತ್ತೆ ಪೂರ್ವಾಗ್ರಹಿತ ಗೊಂದಲಕ್ಕೇ ಬಿದ್ದರು. ಅದೇ ತಳಮಳದಿಂದ ಮನೆಗೆ ಬಂದು ಬಾಗಿಲು ತೆಗೆದು ಇನ್ನೇನು ಒಳಗಯಿಡಬೇಕು ಎಂಬಷ್ಟರಲ್ಲಿ ಮತ್ತೊಂದು ಆಘಾತ ಅವರನ್ನಪ್ಪಳಿಸಿತು! ಈ ಹಿಂದೆ ಎರಡು ಬಾರಿ ಮನೆಯೊಳಗೆ ಬಂದು ಸುಮಿತ್ರಮ್ಮನನ್ನು ನಖಶಿಕಾಂತ ಬೆದರಿಸಿ ಹೋಗಿದ್ದ ಅದೇ ಸರ್ಪವು ಇವತ್ತು ಅವರ ಮನೆಯೊಳಗೆ, ಮುಖ್ಯ ದ್ವಾರದ ಗೋಡೆಯ ಮೂಲೆಯಲ್ಲಿ ಮೈಯೊಡ್ಡಿ ಮಲಗಿತ್ತು. ಆದರೆ ಸುಮಿತ್ರಮ್ಮನ ಆಕಸ್ಮಿಕ ಪ್ರವೇಶದಿಂದ ಬೆಚ್ಚಿಬಿದ್ದು ಎದ್ದ ಹಾವು ಇಂದು ಕೂಡಾ ತನ್ನ ಅತೀ ಸಮೀಪದಲ್ಲಿ ಅವರನ್ನು ಕಂಡದ್ದು ದಿಕ್ಕು ತೋಚದೆ ಭೀಕರವಾಗಿ ಬುಸುಗುಟ್ಟುತ್ತ ಹೆಡೆಯೆತ್ತಿ ನಿಂತುಬಿಟ್ಟಿತು. ಹಾವನ್ನು ಕಂಡ ಸುಮಿತ್ರಮ್ಮನಿಗೆ ಕಣ್ಣು ಕತ್ತಲಿಟ್ಟಿತು. ಜೋರಾಗಿ ಚೀರಿ ಅಂಗಳಕ್ಕೆ ಜಿಗಿದರು. ಅದನ್ನು ಕಂಡ ಹಾವು ಇನ್ನಷ್ಟು ಕಂಗಾಲಾಗಿ ಸರ್ರನೇ ಹೆಡೆಯನ್ನು ಮಡಚಿ ಉಸಿರುಗಟ್ಟುವಂತಿದ್ದ ತನ್ನ ಉಬ್ಬಿದ ಹೊಟ್ಟೆಯನ್ನು ಕಷ್ಟಪಟ್ಟು ಎಳೆದುಕೊಂಡು ಸರಸರನೇ ಹೊರಗೆ ಹರಿದು ಕಣ್ಮರೆಯಾಯಿತು. ಹಾವು ಹೊರಟು ಹೋದುದನ್ನು ಕಂಡ ಸುಮಿತ್ರಮ್ಮ ತೆಂಗಿನ ಕಟ್ಟೆಯ ಮೇಲೆ ಕುಸಿದು ಕುಳಿತು ಅಳತೊಡಗಿದರು. ಸ್ವಲ್ಪಹೊತ್ತಲ್ಲಿ ಸಮಾಧಾನಗೊಂಡವರಿಗೆ ಆ ಹಾವಿನ ಹೊಟ್ಟೆಯು ಉಬ್ಬಿದ್ದುದು ಕಣ್ಣ ಮುಂದೆ ಸುಳಿಯಿತು. ತಟ್ಟನೆ ಏನೋ ಅನುಮಾನ ಬಂದು ಗಡಿಬಿಡಿಯಿಂದೆದ್ದು ಒಳಗೆ ಧಾವಿಸಿದರು. ಆದರೆ ಅಲ್ಲಿನ ದೃಶ್ಯವನ್ನು ಕಂಡು ಕಂಗಾಲಾದರು! ‘ವಯಸ್ಸಾದ ಅಪ್ಪ ಅಮ್ಮನಿಂದ ತಾನೂ, ತಮ್ಮನೂ ಸಂಸಾರ, ದುಡಿಮೆ ಅಂತ ಯಾವಾಗಲೂ ದೂರವೇ ಇರುತ್ತೇವೆ. ಆದ್ದರಿಂದ ಅವರಿಗೆ ನಮ್ಮ ನೆನಪು ಬಂದಾಗಲೆಲ್ಲ ಈ ಬೆಕ್ಕಿನ ಮೂಲಕವಾದರೂ ಸ್ವಲ್ಪ ನೆಮ್ಮದಿ ಕಾಣಲಿ!’ ಎಂದುಕೊಂಡು, ಮುಂಬೈಯಲ್ಲಿದ್ದ ಸುಮಿತ್ರಮ್ಮನ ಮಗಳು ಹೊರ ದೇಶದ ತಳಿಯೊಂದರ ಮರಿಯನ್ನು ಹದಿನೈದು ಸಾವಿರ ರೂಪಾಯಿ ಕೊಟ್ಟು ತಂದು ಹೆತ್ತವರಿಗೆ ಪ್ರೀತಿಯಿಂದ ಉಡುಗೊರೆ ನೀಡಿದ್ದಳು. ಸುಮಿತ್ರಮ್ಮನೂ ಅದನ್ನು ಬಹಳ ಅಕ್ಕರೆಯಿಂದ ಸಾಕಿ ಬೆಳೆಸಿದ್ದರು. ಅಂಥ ಬೆಕ್ಕು ಇವತ್ತು ಅವರ ಕಣ್ಣಮುಂದೆಯೇ ಮಲಮೂತ್ರ ವಿಸರ್ಜನೆ ಮಾಡಿಕೊಂಡು ಸತ್ತುಬಿದ್ದಿತ್ತು! ಅದಕ್ಕೆ ಹಾವು ಕಚ್ಚಿರುವುದು ಖಚಿತವಾಗಿ ದುಃಖದಿಂದ ಅವರ ಕರುಳು ಹಿಂಡಿದಂತಾಗಿ ಅದನ್ನು ಪ್ರೀತಿಯಿಂದ ಎತ್ತಿಕೊಳ್ಳಲು ಮನಸ್ಸು ತುಡಿಯಿತು. ಆದರೆ ಹಾವು ಕಚ್ಚಿದ್ದನ್ನು ನೆನೆದವರಿಗೆ ಅದನ್ನು ಮುಟ್ಟಲೇ ಭಯವಾಯಿತು. ರಪ್ಪನೆ ಬೆಕ್ಕಿನ ಕಳೇಬರದ ಪಕ್ಕ ಕುಸಿದು ಕುಳಿತು, ‘ಅಯ್ಯಯ್ಯೋ ದೇವರೇ…!’ ಎಂದು ಗೋಳಿಟ್ಟರು. ಅಷ್ಟರಲ್ಲಿ ಬೆಕ್ಕಿನ ಮರಿಗಳ ನೆನಪಾಯಿತು. ಅಳುತ್ತಲೇ ಅವುಗಳ ಕೋಣೆಗೆ ಓಡಿದರು. ಅಲ್ಲಿ ಎರಡು ದಿನಗಳ ಹಿಂದಷ್ಟೇ ಕಣ್ಣು ಬಿಟ್ಟಿದ್ದ ಮೂರು ಮರಿಗಳಲ್ಲಿ ಎರಡು ಮರಿಗಳು ಕಾಣೆಯಾಗಿದ್ದವು! ಒಂದು ಮರಿ ಮಾತ್ರ ಯಾವುದರ ಪರಿವೆಯೂ ಇಲ್ಲದೆ ಗಾಢ ನಿದ್ದೆಯಲ್ಲಿತ್ತು. ಅದನ್ನು ಕಂಡು ಮತ್ತೊಮ್ಮೆ ರೋಧಿಸಿದರು. ಮರುಕ್ಷಣ ಅವರಿಗೆ ಆ ಹಾವನ್ನು ಬೆನ್ನಟ್ಟಿ ಹೋಗಿ ಹಿಡಿದು ಚಚ್ಚಿ ಕೊಲ್ಲುವಷ್ಟು ಕೋಪ ಉಕ್ಕಿತು. ಆದರೆ ಅದು ಸಾಧ್ಯವಿರಲಿಲ್ಲವಾದ್ದರಿಂದ, ‘ಆ ಹಾವಿನ ಸಂತಾನವೂ ನಿಸ್ಸಂತಾನವಾಗಿ ಹೋಗಲಿ…!’ ಎಂದು ಶಪಿಸಿದರು. ಅಷ್ಟರಲ್ಲಿ ಅವರಿಗೊಂದು ಸಂಗತಿ ಹೊಳೆಯಿತು. ಅಂದರೆ, ಇಷ್ಟು ದಿನಗಳಿಂದ ಆ ಹಾವು ನನ್ನ ಬೆಕ್ಕಿನ ಮರಿಗಳನ್ನು ತಿನ್ನುವುದಕ್ಕಾಗಿಯೇ ಹಠ ಹಿಡಿದು ಒಳಗೆ ಬರುತ್ತಿದ್ದುದಾ…? ಎಂದು ಯೋಚಿಸಿದವರಿಗೆ ಒಮ್ಮೆಲೇ ಆಘಾತವಾಯಿತು! ಅಯ್ಯೋ, ಪರಮಾತ್ಮಾ…! ಇಂಥದ್ದೊಂದು ಹಾಳು ಸರೀಸೃಪವನ್ನೂ ತಾನು ದೇವರು ದಿಂಡರು ಅಂತ ಅಂದುಕೊಂಡಿದ್ದಲ್ಲದೇ ಅದನ್ನೇ ಊರಿಡೀ ಜಾಗಟೆ ಬಾರಿಸಿಕೊಂಡು ತಿರುಗಾಡಿದೆನಲ್ಲಾ…? ಎಂದೆನ್ನಿಸಿ ನಾಚಿಕೆ, ಅವಮಾನದಿಂದ ಹಿಡಿಯಾದರು. ಆದರೆ ಮರುಕ್ಷಣ, ‘ಛೇ, ಛೇ! ತಪ್ಪು ತಪ್ಪು! ಅಷ್ಟು ಬೇಗ ಯಾವ ನಿರ್ಧಾರಕ್ಕೂ ಬರಬೇಡ ಸುಮಿತ್ರಾ!’ ಎಂದು ಅವರೊಳಗೆ ಯಾರೋ ಜೋರಾಗಿ ಗದರಿಸಿದಂತಾಯಿತು. ಹಾಗಾಗಿ ಮರಳಿ ಭಯವೋ, ಪಶ್ಚಾತ್ತಾಪವೋ ತಿಳಿಯದೆ ನೊಂದುಕೊಂಡರು. ಬಳಿಕ ಮತ್ತೆ, ಯಾಕೆ, ಯಾಕೆ ಅಂದುಕೊಳ್ಳಬಾರದು? ಆ ಹಾವು ನಿಜಕ್ಕೂ ದೇವರ ಹಾವೇ ಆಗಿದ್ದಿದ್ದರೆ ತಾನು ತನ್ನ ಮಗುವಿಂತೆ ಸಾಕಿ ಬೆಳೆಸಿದ ಬೆಕ್ಕನ್ನು ಕಚ್ಚಿ ಸಾಯಿಸಿ ಅದರ ಮರಿಗಳನ್ನೂ ಕೊಂದು ತಿಂದು ಹೋಗುತ್ತಿತ್ತಾ…? ಎಂದು ಕೋಪದಿಂದ ಅವುಡುಗಚ್ಚಿದರು. ಮತ್ತೆ ಯೋಚನೆ ಬಂತು. ಅಯ್ಯೋ ಭಗವಂತಾ…! ನಮ್ಮ ಹಿರಿಯರು ಅನಾದಿಕಾಲದಿಂದಲೂ ನಾಗದೇವರು ಎಂದು ಪೂಜಿಸುತ್ತ ಬಂದಿರುವ ಹಾವೊಂದು ಬೆಕ್ಕಿನ ಮರಿಗಳನ್ನೂ ತಿನ್ನುತ್ತದಾ…!? ಥೂ, ಥೂ, ಏನಿದು ಅಸಹ್ಯ! ಇಂಥ ಹಾವಿನ ಬಗ್ಗೆಯೂ ತಾನು ಬೇಡದಿದ್ದನ್ನೆಲ್ಲ ಊಹಿಸಿಕೊಂಡು ಅದೇ ಸಂಶಯವನ್ನು ನಿವಾರಿಸಿಕೊಳ್ಳಲು ಆ ಕಳ್ಳ ಗುರೂಜಿಯಲ್ಲಿಗೂ ಹೋಗಿ ಬಂದೆನಲ್ಲ…! ಆ ಮನುಷ್ಯನಾದರೂ ಏನು ಮಾಡಿದ? ಬಣ್ಣಬಣ್ಣದ ಮಾತಾಡಿ ನಮ್ಮಿಂದ ಲಕ್ಷಗಟ್ಟಲೆ ಸುಲಿದವನು ಈಗ ಮತ್ತೆ ನಾಗಬನ ಜೀರ್ಣೋದ್ಧಾರದ ಹೆಸರಿನಲ್ಲೂ ಊರಿನವರನ್ನೆಲ್ಲ ನುಣ್ಣಗೆ ಬೋಳಿಸಲು ಹೊರಟಿದ್ದಾನೆ ಅವಿವೇಕಿ! ಎಂದು ಗುರೂಜಿಯ ಮೇಲೂ ಕಿಡಿಕಾರಿದರು. ಆದರೆ ಬಳಿಕ, ಥೂ! ತಾನಾದರೂ ಮಾಡಿದ್ದೇನು? ಹಾವು ಮನೆಯೊಳಗೆ ಹೊಕ್ಕಿದ್ದನ್ನು ವಠಾರವಿಡೀ ಟಾಂ! ಟಾಂ! ಮಾಡಿಕೊಂಡು ಬಂದೆನಲ್ಲದೇ ಅದೇ ವಿಚಾರವಾಗಿ ಆ ಬಡಪಾಯಿ ರಾಧಾಳ ಕುಟುಂಬವನ್ನೂ ಅನಾವಶ್ಯಕವಾಗಿ ನೋಯಿಸಿಬಿಟ್ಟೆ. ಪಾಪ ಅವರು ಯಾರಿಗೇನು ಅನ್ಯಾಯ ಮಾಡಿದ್ದರು!’ ಎಂದು ತೊಳಲಾಡುತ್ತ ಕಣ್ಣೀರಿಟ್ಟರು. ಆದರೂ ವಯಸ್ಸಾದ ಅವರ ಮನಸ್ಸು ಅಷ್ಟುಬೇಗನೇ ತಮ್ಮ ಪೂರ್ವಿಕರ ನಂಬಿಕೆ ಮತ್ತು ಸಂಪ್ರದಾಯಗಳನ್ನು ನಿರಾಕರಿಸಲು ಒಪ್ಪಲಿಲ್ಲ. ಆದ್ದರಿಂದ ಈ ಸರೀಸೃಪಜೀವಿಯು ನಾಗನಲ್ಲದಿದ್ದರೇನಾಯ್ತು? ನಮ್ಮವರು ತಲೆತಲಾಂತರದಿಂದ ಪೂಜಿಸಿಕೊಂಡು ಬಂದಂಥ ಆ ನಾಗಶಕ್ತಿಯೊಂದನ್ನು ಮನುಷ್ಯ ಮಾತ್ರನಿಂದ, ‘ಇಲ್ಲ!’ ಎನ್ನಲು ಸಾಧ್ಯವಿದೆಯಾ? ಆ ದೈವಶಕ್ತಿಯು ಖಂಡಿತಾ ಇದೆ. ಅಷ್ಟು ತಿಳಿಯದೆ ನಮ್ಮ ಹಿರಿಯರು ಅವನನ್ನು ನಂಬಿ ಪೂಜಿಸಿಕೊಂಡು ಬಂದಿದ್ದಾರಾ…? ಏನೇ ಇರಲಿ. ನಮ್ಮ ಸನಾತನ ಸಂಪ್ರದಾಯವನ್ನು ನಾವು ಎಂದಿಗೂ ಮರೆಯಬಾರದು ಮತ್ತು ಬಿಟ್ಟುಕೊಡಲೂಬಾರದು. ಇನ್ನು ಮುಂದೆ ತಾನು ಆಚರಿಸುವ ಪೂಜೆ ಪುನಸ್ಕಾರಗಳೇನಿದ್ದರೂ ಆ ಅವ್ಯಕ್ತಶಕ್ತಿ ನಾಗದೇವನಿಗೆಂದೇ ಭಾವಿಸಿದರಾಯ್ತು ಎಂದು ಯೋಚಿಸಿ ಸ್ವಲ್ಪ ಸಮಾಧಾನಚಿತ್ತರಾದ ಸುಮಿತ್ರಮ್ಮ ಕೂಡಲೇ ಗಂಡನಿಗೆ ಕರೆ ಮಾಡಿ ಅಳುತ್ತ ವಿಷಯ ತಿಳಿಸಿದರು. (ಮುಂದುವರೆಯುವುದು) ಗುರುರಾಜ್ ಸನಿಲ್
ಧಾರಾವಾಹಿ ಆವರ್ತನ ಅದ್ಯಾಯ-44 ಏಕನಾಥರು ಒಂದು ಕಾಲದಲ್ಲಿ ತಮ್ಮನ್ನು ಕಾಡುತ್ತಿದ್ದಂಥ ದಟ್ಟದಾರಿದ್ರ್ಯವನ್ನು ಮೀರಿ ಬೆಳೆದಿದ್ದರು. ಹಾಗಾಗಿ ಅಂದು, ‘ಹೊಟ್ಟೆಪಾಡಿಗೊಂದು ಉದ್ಯೋಗ!’ ಎಂದಿದ್ದ ಅವರ ಆ ಬೀಜಮಂತ್ರದ ಅರ್ಥವು ಈಗ ಸಂಪೂರ್ಣ ಬದಲಾಗಿ, ‘ಆಗರ್ಭ ಶ್ರೀಮಂತಿಕೆ ಮತ್ತು ಸಾಮಾಜಿಕ ಪ್ರತಿಷ್ಠೆಯೇ ತಮ್ಮ ಜೀವನದ ಪರಮೋಚ್ಛ ಗುರಿ!’ ಎಂದಾಗಿತ್ತು. ಆದ್ದರಿಂದ ತಮ್ಮ ಹಠಯೋಗದಂಥ ಜೀವನಶೈಲಿಯಿಂದ ತಾವು ಅಂದುಕೊಂಡಂತೆಯೇ ಭರ್ಜರಿ ಯಶಸ್ಸು ಗಳಿಸಿದ್ದರು. ಆವತ್ತು ಒಂದು ಹೊತ್ತಿನ ತುತ್ತಿಗೂ ಗತಿಯಿಲ್ಲದ ಕಾಲದಲ್ಲಿ ಏನೇನು ಬಯಸಿದ್ದರೋ ಅವೆಲ್ಲವೂ ಇಂದು ಅವರ ಪಾದಗಳ ಬಳಿ ಬಂದು ಬಿದ್ದಿದ್ದವು. ಮುಖ್ಯವಾಗಿ ಲಕ್ಷ್ಮಿದೇವಿಯ ಕಟಾಕ್ಷವು ಅವರ ಮೇಲೆ ಇನ್ನಿಲ್ಲದಂತೆ ಆಗಿತ್ತು! ಹಾಗಾಗಿ ಈಗ ಅವರ ಬಳಿ ಲೆಕ್ಕವಿಲ್ಲದಷ್ಟು ಹಣವಿದೆ. ಅಳತೆಗೆ ಮೀರಿದಷ್ಟು ಆಸ್ತಿಯಿದೆ. ಎರಡೋ ಮೂರೋ ವಿದೇಶಿ ಕಾರುಗಳಿವೆ. ಶಂಕರನದಕ್ಕಿಂತಲೂ ದೊಡ್ಡ ಬಂಗಲೆಯಿದೆ. ಊರಿನ ಕೆಲವಾರು ಕಡೆ ಎಕರೆಗಟ್ಟಲೆ ಜಮೀನು ಕೊಂಡಿದ್ದಾರೆ. ಸಮಾಜ ಮತ್ತು ಸರಕಾರದ ಮಾನ್ಯತೆ ಪಡೆಯಲೆಂಬಂತೆ ಉಗ್ರಾಣಿಬೆಟ್ಟಿನಲ್ಲಿ ಕೊಂಡಿದ್ದ ಒಂದೂವರೆ ಎಕರೆ ತೋಟವನ್ನು ಕೋಮಲದೇವಿ ಎಂಬ ಸಮಾಜ ಸೇವಕಿಯ ‘ಕರುಣಾಳು ಬಾ ಬೆಳಕೇ!’ ಎಂಬ ವೃದ್ಧಾಶ್ರಮಕ್ಕೆ ಬಾಡಿಗೆಯಿಲ್ಲದೆ ಕೊಟ್ಟಿದ್ದಾರೆ. ಊರ ಪರವೂರ ಜನಾಭಿವೃದ್ಧಿ ಮತ್ತು ಧಾರ್ಮಿಕಾಭಿವೃದ್ಧಿ ಚಟುವಟಿಕೆಗಳಿಗೆ ಮನಸೋಇಚ್ಛೆ ದಾನಧರ್ಮಗಳನ್ನು ಮಾಡುತ್ತ ಬಂದಿದ್ದಾರೆ. ಅಂದು ತಮ್ಮ ಪುಟಗೋಸಿ ಗೆಳೆಯ ಶಂಕರ, ‘ಗುರೂಜೀ!’ ಎಂದು ಕರೆದ ಹೆಸರಿಗೆ ತಕ್ಕಂತೆ ನಾಡಿನಾದ್ಯಂತ ಜನರ ಗೌರವಾದರಗಳಿಗೆ ಪಾತ್ರರಾಗಿದ್ದಾರೆ. ಹೀಗಿದ್ದ ಗುರೂಜಿಯವರ ಈ ಎಲ್ಲಾ ಚಟುವಟಿಕೆ ಮತ್ತು ಕಾರ್ಯಸಾಧನೆಗಳನ್ನು ಅಂತರ್ಜಾಲದ ಮೂಲಕವೇ ಕಣ್ಗಾವಲಿಟ್ಟು ಅಧ್ಯಯನ ಮಾಡುತ್ತ ಬಂದಿರುವ ಉತ್ತರ ಭಾರತದಾಚೆಗಿನ ಯಾವುದೋ ಅನಾಮಧೇಯ ವಿಶ್ವವಿದ್ಯಾಲಯವೊಂದು ತಮ್ಮ ವಿದ್ಯಾ ಸಂಸ್ಥೆಗೆ ಗುರೂಜಿಯವರು ಪ್ರೀತಿಯಿಂದ ನೀಡಿದ ಎರಡು ಲಕ್ಷ ರೂಪಾಯಿಗಳ ಉದಾರ ದೇಣಿಗೆಯ ಕೃತಜ್ಞಾರ್ಥವಾಗಿ ಅವರಿಗೆ ‘ಗೌರವ ಡಾಕ್ಟರೇಟ್’ ಪದವಿಯನ್ನೂ ನೀಡಿ ಗೌರವಿಸಿದೆ. ಹಾಗಾಗಿ ಈಗ ಜನರು ಅವರನ್ನು, ‘ಡಾಕ್ಟರ್ ಏಕನಾಥ ಗುರೂಜಿ!’ ಎಂದೂ ಕರೆಯುತ್ತಾರೆ. ಜನರ ಬಾಯಿಯಿಂದ ತಮ್ಮ ಹೆಸರನ್ನು ಆ ಮಾದರಿಯಲ್ಲಿ ಕೇಳುವಾಗ ಗುರೂಜಿಯವರಿಗೆ ತಮ್ಮ ಜನ್ಮ ಸಾರ್ಥಕವಾದಂತೆನ್ನಿಸುತ್ತದೆ. ತಾವೆಂದಾದರೂ ಈ ಮಟ್ಟದ ಯಶಸ್ಸಿನ ಶಿಖರವೇರುತ್ತೇವೆ ಎಂದು ಕನಸು ಮನಸಿನಲ್ಲಾದರೂ ಅಂದುಕೊಂಡಿದ್ದುಂಟಾ? ಇದೆಲ್ಲ ನಾವು ನಂಬಿದ ನಾಗ ಪರಿವಾರ ದೈವಗಳ ಅನುಗ್ರಹವಲ್ಲದೆ ಮತ್ತೇನು? ಎಂದು ತಮ್ಮ ಬಿಡುವಿನ ಸಮಯದಲ್ಲೆಲ್ಲ ಯೋಚಿಸುತ್ತ ಖುಷಿಯಿಂದ ತನ್ಮಯರಾಗುತ್ತಾರೆ. ಗುರೂಜಿಯವರ ಇಂಥ ಯಶಸ್ಸಿಗೆ ಶಂಕರನಂಥ ಅನೇಕ ಬಿಲ್ಡರ್ಗಳು, ಗುತ್ತಿಗೆದಾರರು, ಸಾಫ್ಟ್ವೇರ್ ಇಂಜಿನೀಯರ್ಗಳು, ವಿವಿಧ ಉದ್ಯಮಿಗಳು, ಒಂದಷ್ಟು ಪ್ರಸಿದ್ಧ ವೈದ್ಯರು, ಮನೋದುರ್ಬಲರು, ಕೊಲೆಗಡುಕರು, ವಂಚಕರು ಮತ್ತು ಅಮಾಯಕ ಬಡ ಜನರಿಂದ ಹಿಡಿದು ನಾಡಿನ ಕೆಲವಾರು ಸಚಿವರು ಹಾಗೂ ಶಾಸಕರವರೆಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿರಂತರ ಸಹಕಾರ ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ಗುರೂಜಿಯವರಿಗೆ ಇವರೆಲ್ಲರ ಮೇಲೂ ಅಪಾರ ಅಭಿಮಾನವಿದೆ. ಆದರೆ ಆವತ್ತು ತಾವು ಪೆದುಮಾಳರಿಗೆ ವಿದಾಯ ಹೇಳಿ ಮುಂಬೈಯಿಂದ ಹಿಂದಿರುಗುವಾಗ, ‘ಇಂದಲ್ಲ ನಾಳೆ ನಿಮ್ಮ ಕಣ್ಣ ಮುಂದೆ ನಿಮಗಿಂತಲೂ ಎತ್ತರಕ್ಕೆ ಬೆಳೆದು ತೋರಿಸದಿದ್ದರೆ ನನ್ನ ಹೆಸರು ಏಕನಾಥನೇ ಅಲ್ಲ. ಆ ದಿನವನ್ನು ಎಣಿಸುತ್ತಿರಿ!’ ಎಂದು ನೋವಿನಿಂದ ಶಪಥ ಮಾಡಿ ಬಂದಿದ್ದು ಇವತ್ತಿಗೂ ಅವರನ್ನು ಕಾಡುತ್ತದೆ. ಅದೇ ಕಾರಣಕ್ಕೋ ಏನೋ ಎಂಬಂತೆ ಅವರ ಹೆಸರು ಬಹಳ ಬೇಗನೇ ಮುಂಬೈ ನಗರಕ್ಕೂ ಹಬ್ಬಿತ್ತು. ಮುಂಬೈಯ ಖ್ಯಾತ ಉದ್ಯಮಿ ಯಶಪಾಲರ ಬಂಗಲೆಯಲ್ಲಿ ಕೆಲವು ವಿಶೇಷ ಹೋಮ ಹವನಗಳನ್ನು ನಡೆಸಿಕೊಡಲು ಗುರೂಜಿಯವರಿಗೆ ಆಹ್ವಾನ ಬಂದಿತು. ಅಂದು ಬೆಳಿಗ್ಗೆ ತಮ್ಮ ಕಛೇರಿಗೆ ಆಗಮಿಸಿದ ಯಶಪಾಲರನ್ನು ಕುಳ್ಳಿರಿಸಿಕೊಂಡ ಗುರೂಜಿಯವರು ನಿಧಾನವಾಗಿ ತಮ್ಮ ಪಂಚಾಂಗ ಮತ್ತು ಜ್ಯೋತಿಷ್ಯ ಪುಸ್ತಕಗಳನ್ನು ತಿರುವಿ ಹಾಕುತ್ತ ಮುಂಬೈ ಕಾರ್ಯಕ್ರಮಕ್ಕೆ ದಿನ ಗೊತ್ತುಪಡಿಸಲೂ ಮತ್ತು ಹಣಕಾಸಿನ ಚೌಕಾಶಿಗೂ ಒಂದು ಗಂಟೆ ಸಮಯವನ್ನು ವಿನಿಯೋಗಿಸಿಕೊಂಡರು. ಬಳಿಕ ಅವರನ್ನು ತೃಪ್ತಿಪಡಿಸಿ ಕಳುಹಿಸಿಕೊಟ್ಟವರು ತಮ್ಮೊಳಗೆ ಸುಪ್ತವಾಗಿ ಹೊಗೆಯಾಡುತ್ತಿರುವ ಪೆದುಮಾಳರ ಮೇಲಿನ ಸೇಡನ್ನು ಇನ್ನು ಕೆಲವೇ ದಿನಗಳಲ್ಲಿ ತೀರಿಸಿಕೊಳ್ಳಲಿಕ್ಕಿದೆ! ಎಂದುಕೊಂಡು ವಿಲಕ್ಷಣ ಖುಷಿಪಟ್ಟು ಉದ್ವೇಗಗೊಂಡರು. ಆ ದಿನವೂ ಬಂದದುಬಿಟ್ಟಿತು. ಆವತ್ತು ಅತಿಯಾದ ಚಡಪಡಿಕೆಯಲ್ಲಿದ್ದ ಗುರೂಜಿಯವರು ವಿಮಾನದ ಮೂಲಕ ಮುಂಬೈಗೆ ಹಾರಿದರು. ಯಶಪಾಲರ ಪೂಜೆಗಳನ್ನು ತರಾತುರಿಯಲ್ಲಿ ಮುಗಿಸಿಕೊಟ್ಟರು. ಅಲ್ಲೇ ಸ್ವಲ್ಪ ಕಾಲ ವಿಶ್ರಾಂತಿ ಪಡೆದು ಕೂಡಲೇ ಪೆದುಮಾಳ ಗುರುಗಳ ಮನೆಗೆ ಧಾವಿಸಿದರು. ಅಂದು ನಿರ್ಗತಿಕ ಹುಡುಗನಿಂದ ಪ್ರಾಣಿಯಂತೆ ದುಡಿಸಿಕೊಂಡು ಉಟ್ಟ ಬಟ್ಟೆಯಲ್ಲೇ ಹೊರಗೆ ದಬ್ಬಿದ ವಂಚಕ ಗುರುವಿಗೆ ಇವತ್ತು ತಮ್ಮ ಸಾಧನೆ ಮತ್ತು ಶ್ರೀಮಂತಿಕೆ ಎಂಥದ್ದೆಂಬುವುದನ್ನು ತೋರಿಸಬೇಕು. ಅದನ್ನು ನೋಡಿ ಆ ಮುದುಕ ಹಾರ್ಟ್ ಅಟ್ಯಾಕ್ ಆಗಿ ನರಳುವುದನ್ನು ತಾವು ಕಣ್ಣಾರೆ ಕಂಡು ಒಳಗೆ ಧಗಧಗಿಸುವ ಸೇಡಿನ ಜ್ವಾಲೆಯನ್ನು ತಣಿಸಿಕೊಳ್ಳಬೇಕು ಎಂದು ಯೋಚಿಸುತ್ತ ಪೆದುಮಾಳರ ಮನೆಯ ಬಾಗಿಲಿಗೆ ಬಂದು ನಿಂತು ಕರೆಗಂಟೆ ಬಾರಿಸಿದರು. ತುಸುಹೊತ್ತಿನ ನಂತರ ಮುದುಕಿಯೊಬ್ಬಳು ಮೆಲ್ಲನೆ ಬಂದು ಬಾಗಿಲು ತೆರೆದಳು. ಗುರೂಜಿಯವರನ್ನು ಪ್ರಶ್ನಾರ್ಥಕವಾಗಿ ದಿಟ್ಟಿದಳು. ಆದರೆ ಗುರೂಜಿಯವರಿಗೆ ಆಕೆ ಪೆದುಮಾಳರ ಪತ್ನಿ ಅನಸೂಯಮ್ಮ ಎಂದು ತಟ್ಟನೆ ಗುರುತು ಸಿಕ್ಕಿತು. ಆದರೆ ಆಕೆ, ‘ಯಾರು ಬೇಕಾಗಿತ್ತು… ಎಲ್ಲಿಂದ ಬಂದಿರಿ…?’ ಎಂದು ಗುರೂಜಿಯ ಗುರುತು ಹತ್ತದೆ ಪ್ರಶ್ನಿಸಿದಳು. ಆಗ ಗುರೂಜಿಯವರ ಮುಖದಲ್ಲಿ ವ್ಯಂಗ್ಯ ನಗುವೊಂದು ಹೊಮ್ಮಿತು. ಆವತ್ತು ತನ್ನ ಗಂಡನೊಂದಿಗೆ ಸೇರಿ ಈ ಮುದುಕಿಯೂ ತಮ್ಮನ್ನು ಎಷ್ಟೊಂದು ಬಗೆಯಲ್ಲಿ ಹಿಂಸಿಸುತ್ತಿದ್ದಳು! ತಮ್ಮನ್ನು ಆಜನ್ಮ ಗುಲಾಮನಂತೆ ನಡೆಸಿಕೊಂಡು ಹೊಟ್ಟೆಬಟ್ಟೆಗೂ ಸರಿಯಾಗಿ ಕೊಡದೆ ನೋಯಿಸುತ್ತಿದ್ದಳಲ್ಲ ಇವಳು! ಎಂದುಕೊಂಡವರ ಮನಸ್ಸು ಕಹಿಯಾಯಿತು. ‘ಹೌದೌದು. ನಿಮಗೆ ಹೇಗೆ ಗುರುತು ಹತ್ತೀತು ಹೇಳಿ…? ನಮ್ಮ ಏಳಿಗೆಯೇ ಆ ಮಟ್ಟಕ್ಕಾಗಿಬಿಟ್ಟಿದೆಯಲ್ಲ! ಹಾಗಾಗಿ ಯಾರೀಗೂ ಪಕ್ಕನೆ ನಮ್ಮ ಪರಿಚಯವಾಗಲಿಕ್ಕಿಲ್ಲ ಬಿಡಿ. ನಮ್ಮ ಗುರುತನ್ನು ನಾವೇ ಹೇಳಿಕೊಳ್ಳುತ್ತೇವೆ ಕೇಳಿ!’ ಎಂದು ಅಸಡ್ಡೆಯಿಂದ ಅನ್ನುತ್ತ ಅನಸೂಯಮ್ಮನ ಹಿಂದೆಯೇ ಒಳಗೆ ನಡೆದರು. ಅಷ್ಟು ಕೇಳಿದ ಆಕೆ ತಟ್ಟನೆ ಹಿಂದಿರುಗಿ ಗುರೂಜಿಯವರನ್ನು ಅವಕ್ಕಾಗಿ ದಿಟ್ಟಿಸಿದರು. ಆಗ ಗುರೂಜಿ ಮರಳಿ ಹಮ್ಮಿನಿಂದ ನಕ್ಕವರು, ‘ಅರೆರೇ, ಗಾಬರಿಯಾಗಬೇಡಿ ಅನಸೂಯಮ್ಮಾ… ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಏಕನಾಥ ಎನ್ನುವ ಒಬ್ಬ ನತದೃಷ್ಟ ಹುಡುಗ ನಿಮ್ಮ ಈ ಮನೆಯಲ್ಲಿ ಚಾಕರಿಗಿದ್ದ ನೆನಪುಂಟಾ…?’ ಎಂದು ಅವರನ್ನು ಇರಿಯುವಂತೆ ದಿಟ್ಟಿಸುತ್ತ ಕೇಳಿದರು. ಆಗ ಗುರುಪತ್ನಿಗೆ ತಟ್ಟನೆ ನೆನಪಾಯಿತು. ಆದರೆ ಮರುಕ್ಷಣ ಗುರೂಜಿಯವರ ವೇಷಭೂಷಣವನ್ನೂ ಅವರ ಮೈಕೈಯಲ್ಲಿ ನೇತಾಡುತ್ತಿದ್ದ ಚಿನ್ನಾಭರಣವನ್ನೂ ಕಂಡ ಅನಸೂಯಮ್ಮನಿಗೆ ದಿಗಿಲಾಗಿಬಿಟ್ಟಿತು! ‘ಓ ದೇವ, ದೇವಾ…, ನೀನಾ ಮಾರಾಯಾ…! ನನಗೆ ಮೊದಲು ಗುರುತೇ ಸಿಕ್ಕಲಿಲ್ಲ ನೋಡು. ನೀನೆಂಥದು ಮಾರಾಯಾ ಇಷ್ಟೊಂದು ಬದಲಾಗಿದ್ದು! ಅದೆಂಥದು ವ್ಯವಹಾರ ನಿನ್ನದು…?’ ಎಂದು ಬೊಚ್ಚು ಬಾಯಿ ಬಿಟ್ಟುಕೊಂಡು ಪ್ರಶ್ನಿಸಿದರು. ‘ವ್ಯವಹಾರವೆಂಥದು, ನಾವು ಕಲಿತ ವಿದ್ಯೆಯೇ ನಮ್ಮನ್ನು ಈ ಮಟ್ಟಕ್ಕೇರಿಸಿತು. ಹ್ಞಾಂ! ಆದರೆ ನಿಮ್ಮ ಗಂಡನಿಂದ ಕಲಿತ ಆ ಪೊಟ್ಟು ಶಾಸ್ತ್ರವಲ್ಲ. ನಾವೇ ನಮ್ಮೂರಿನಲ್ಲಿ ಅನೇಕ ವರ್ಷಗಳ ಕಾಲ ಹಠ ಹಿಡಿದು ಕಲಿತ ವಿದ್ಯೆಯಿಂದಲೇ ಇಷ್ಟೆಲ್ಲ ಆದುದು! ಅದೇನು ನಿಮ್ಮ ಗಂಡನಿಗೆ ಮಾತ್ರ ದೇವರು ದಿಂಡರ ವೈಹಿವಾಟು ಮಾಡಲು ಬರುವುದಾ? ನಮಗೆ ಸಾಧ್ಯವಿಲ್ಲವಾ… ಎಲ್ಲಿದ್ದಾರೆ ಅವರು…? ಒಮ್ಮೆ ನೋಡಬೇಕಲ್ಲ ಅವರನ್ನು. ಹೊರಗೆ ಕರೆಯಿರಿ ನೋಡುವ!’ ಎಂದು ನಂಜು ಕಾರುತ್ತ ಹೇಳಿದರು. ಗುರೂಜಿಯವರ ಅಂಥ ಅಹಂಕಾರದ ಮಾತುಗಳನ್ನು ಕೇಳಿದ ಅನಸೂಯಮ್ಮನ ಜೋಲು ಮೋರೆ ತಟ್ಟನೆ ಕಳೆಗುಂದಿತು. ಆದರೂ ಸಂಭಾಳಿಸಿಕೊಂಡು, ‘ಅಯ್ಯೋ ಮಾರಾಯಾ…ಅವರ ಕಥೆ ಏನು ಹೇಳುವುದು. ಅವರು ಚಾಪೆ ಹಿಡಿದು ಐದು ವರ್ಷವಾಗುತ್ತ ಬಂತು…!’ ಎಂದರು ದುಃಖದಿಂದ. ಅಷ್ಟು ಕೇಳಿದ ಗುರೂಜಿಯವರಿಗೆ ಒಮ್ಮೆಲೇ ನಿರಾಶೆಯಾಯಿತು. ‘ಹೌದಾ,… ಏನಾಯ್ತು, ಯಾವುದಾದ್ರೂ ಕಾಯಿಲೆಯಾ…?’ ‘ಕಾಯಿಲೆಯೋ ಕಸಾಲೆಯೋ ದೇವರೇ ಬಲ್ಲ. ಅದೊಂದು ದೊಡ್ಡ ಕಥೆ. ಹೇಳುತ್ತೇನೆ ಕುಳಿತುಕೋ. ಬಾಯಾರಿಕೆ ತಗೊಳ್ಳುತ್ತೀಯಾ…?’ ‘ಸದ್ಯಕ್ಕೇನೂ ಬೇಡ. ಗುರುಗಳಿಗೇನಾಯ್ತು ಹೇಳಿ!’ ‘ಹೇಳುತ್ತೇನೆ…’ ಎಂದ ಅನಸೂಯಮ್ಮ ಗುರೂಜಿಯೆರೆದುರು ಕುಳಿತುಕೊಳ್ಳುತ್ತ ವಿಷಯ ಆರಂಭಿಸಿದರು. ‘ಕೆಲವು ವರ್ಷಗಳ ಹಿಂದೆ ಬಾಂದ್ರಾದ ಲೇಡಿಸ್ ಬಾರೊಂದರಲ್ಲಿ ಇಬ್ಬರು ಹೆಣ್ಣು ಮಕ್ಕಳ ಅತ್ಯಾಚಾರ ಮತ್ತು ಕೊಲೆ ನಡೆಯಿತಲ್ಲ ಗೊತ್ತುಂಟಾ ನಿನಗೆ?’ ‘ಹೌದಾ…? ಇಲ್ವಲ್ಲಾ. ಯಾರು ಮಾಡಿದ್ದು…?’ ‘ಯಾರೂಂತ ಗೊತ್ತಿಲ್ಲ. ಅದನ್ನು ಮಾಡಿಸಿದ್ದು ಮಾತ್ರ ಅದೇ ಹೊಟೇಲು ಮಾಲಿಕ ಎಂಬ ಸುದ್ದಿ ಹಬ್ಬಿತ್ತು. ಅದು ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿಯಿತು. ಅವರು ಅವನ ಮೇಲೆ ಕೇಸು ಹಾಕಿದರು. ಆದರೆ ಹೊಟೇಲು ಶೇಟಿನ ದುಡ್ಡಿನ ಬಲತ್ಕಾರದ ಮುಂದೆ ಅವರ ಕೇಸು ಪುಸ್ಕಾಯಿತು. ಅದರಿಂದ ಆ ಜನರು ಹತಾಶರಾದರು. ಆದರೂ ಹಠ ಬಿಡದೆ ಅವನನ್ನು ಯಾವುದಾದರೂ ರೀತಿಯಲ್ಲಿ ಸರ್ವನಾಶ ಮಾಡಲು ಹೊರಟವರು ಇಲ್ಲಿನ ಒಬ್ಬ ದೊಡ್ಡ ಮಂತ್ರವಾದಿಯನ್ನು ಹಿಡಿದು ಅವನಿಗೆ ಭಯಂಕರ ಮಾಟ ಮಾಡಿಸಿದರಂತೆ! ಅದು ಹೊಟೇಲು ಶೇಟಿಗೂ ಗೊತ್ತಾಯಿತು. ಅವನು ಕೂಡಲೇ ಇವರ ಹತ್ತಿರ ಓಡಿ ಬಂದು ದುಃಖವನ್ನು ತೋಡಿಕೊಂಡ. ಇವರಿಗೆ ಮೊದಲೇ ಆ ಮಂತ್ರವಾದಿಯ ಮೇಲೆ ಅಸಮಾಧಾನವಿತ್ತು. ಅದೇ ನೆಪದಿಂದ ಇವರು ಕೂಡಾ ಯಾವುದೋ ಭೀಕರ ತಾಂತ್ರಿಕವಿಧಿಯೊಂದನ್ನು ಆಚರಿಸಿ, ಆ ಹೆಣ್ಣು ಹೆತ್ತವರು ಹೊಟೇಲು ಮಾಲಿಕನ ಮೇಲೆ ಪ್ರಯೋಗಿಸಿದ್ದ ಕೃತ್ರಿಮವನ್ನು ಉಚ್ಛಾಟಿಸಿಬಿಟ್ಟರು! ಆದರೆ ಈ ವಿಷಯವೂ ಅದು ಹೇಗೋ ಆ ಹೆಣ್ಣುಮಕ್ಕಳ ಹೆತ್ತವರಿಗೆ ತಿಳಿದುಬಿಟ್ಟಿತು. ಆದ್ದರಿಂದ ಆವತ್ತೊಮ್ಮೆ ಸೂರ್ಯ ಕಂತುವ ಹೊತ್ತಿನಲ್ಲಿ ಅವರು ಐದಾರು ಮಂದಿ ತಲೆಕೂದಲು ಕೆದರಿಸಿಕೊಂಡು ಮನೆಗೆ ಬಂದವರು ಅಂಗಳದಲ್ಲಿ ನಿಂತುಕೊಂಡು ನಮ್ಮನ್ನು ಹೊರಗೆ ಕರೆದು ಅಸಭ್ಯವಾಗಿ ಬೈಯ್ಯುತ್ತ ಬೊಬ್ಬೆಯಿಟ್ಟು ಅಳುತ್ತ, ‘ನಮ್ಮ ಮಕ್ಕಳ ಶೀಲವನ್ನೂ, ಅವರ ಬದುಕನ್ನೂ ಹಾಳು ಮಾಡಿದ ಆ ರಾಕ್ಷಸನೂ, ನೀನೂ ಸರ್ವನಾಶವಾಗಿ ಹೋಗುತ್ತಿರಾ ನೋಡುತ್ತಿರಿ!’ ಎಂದು ನೆಲಕ್ಕೆ ಕೈ ಅಪ್ಪಳಿಸಿ ಶಪಿಸುತ್ತ ಅಂಗಳವಿಡೀ ಹೊರಳಾಡಿ ಗಲಾಟೆಯೆಬ್ಬಿಸಿ ಹೊರಟು ಹೋದರು. ಆವತ್ತಿನಿಂದ ಇವರಿಗೇನಾಯಿತೋ? ಎಲ್ಲರೊಂದಿಗೂ ಮಾತುಕಥೆಯನ್ನು ನಿಲ್ಲಿಸಿಬಿಟ್ಟರು. ಇದಾದ ಮೇಲೆ ಸ್ವಲ್ಪ ಸಮಯದ ನಂತರ ದಿನವಿಡೀ ಮಲಗಿಕೊಂಡೇ ಇರತೊಡಗಿದರು. ಹಾಗೆ ಒಮ್ಮೆ ಮಲಗಿದವರು ಮುಂದೆ ಮಲಗಿಯೇಬಿಟ್ಟರು. ಸುಮಾರು ಬಗೆಯ ಔಷಧಿ ಉಪಚಾರಗಳನ್ನೆಲ್ಲ ಮಾಡಿಸಿದ್ದಾಯಿತು. ಏನೂ ಪ್ರಯೋಜನವಾಗಲಿಲ್ಲ!’ ಎಂದು ಅನಸೂಯಮ್ಮ ನಿಟ್ಟುಸಿರುಬಿಟ್ಟರು. ಪೆದುಮಾಳರ ಕಥೆಯನ್ನು ಕೇಳಿದ ಗುರೂಜಿಯವರ ಮನಸ್ಸಿಗೇನೋ ಒಂಥರಾ ಹಿಂಸೆಯಾಯಿತು. ಅದರ ಬೆನ್ನಿಗೆ ಆವತ್ತು ಬುಕ್ಕಿಗುಡ್ಡೆಯ ದೇವರಕಾಡಿನಲ್ಲಿ ನಂದಿಮರದ ಕೊಂಬೆಯೊಂದು ತಲೆಯ ಮೇಲೆ ಮುರಿದು ಬೀಳಲಿದ್ದಾಗ ಕಾಣಿಸಿಕೊಂಡಂಥ ಹೆದರಿಕೆಯೂ ಮತ್ತದೇ ರೀತಿಯ ಎದೆ ತಿವಿದಂಥ ನೋವೂ ಮರಳಿ ಕಾಣಿಸಿಕೊಂಡಿದ್ದರೊಂದಿಗೆ ಮೈಕೈಯೆಲ್ಲ ತಣ್ಣಗೆ ಬೆವರಿ ಉಸಿರುಗಟ್ಟಿದಂತಾಯಿತು. ಆಗ ಮತ್ತಷ್ಟು ಭಯಪಟ್ಟರು. ಆದರೆ ಮರುಕ್ಷಣ, ‘ಅರೇರೇ, ನಾವೇನು ಇವರಂತೆ ಅಮಾಯಕರ ಮೇಲೆಲ್ಲ ಮಾಟಮಂತ್ರ ಪ್ರಯೋಗಿಸಿ ಮೇಲೆ ಬಂದವರಾ…? ಅಂಥದ್ದು ಒಂದೆರಡು ಘಟನೆಗಳು ನಮ್ಮಿಂದಲೂ ನಡೆದಿರಬಹುದಾದರೂ ಅದರ ಹತ್ತು ಪಟ್ಟು ದಾನಧರ್ಮಗಳನ್ನು ಮಾಡುತ್ತ ಬಂದಿದ್ದೇವೆ. ಮತ್ತ್ಯಾಕೆ ಹೆದರಬೇಕು!’ ಎಂದು ಧೈರ್ಯ ತಂದುಕೊಂಡರು. ಆಗ ಅವರ ಹೃದಯವು ಯಥಾಸ್ಥಿತಿಗೆ ಬಂತು. ‘ಅವರೀಗ ಎಲ್ಲಿದ್ದಾರೆ…?’ ಎಂದು ಅನಸೂಯಮ್ಮನನ್ನು ಕೇಳಿದರು. ‘ಒಳಗೆ ಮಲಗಿದ್ದಾರೆ ಮಾರಾಯಾ. ನೋಡುತ್ತೀಯಾ ಬಾ. ಆದರೆ ಅವರಿಗೆ ಪಕ್ಕನೆ ಯಾರ ಗುರುತೂ ಹತ್ತುವುದಿಲ್ಲ. ಹತ್ತಿದರೂ ಮಾತಾಡುವುದಿಲ್ಲ!’ ಎಂದು ಹತಾಶೆಯಿಂದ ಹೇಳಿದ ಅನಸೂಯಮ್ಮ ಎದ್ದು ಒಳಗೆ ನಡೆದರು. ‘ಮಾತನಾಡದಿದ್ದರೆ ತೊಂದರೆಯಿಲ್ಲ. ಅವರನ್ನು ನೋಡಲೇಬೇಕೆಂಬ ದೊಡ್ಡ ಆಸೆಯಿಂದ ಬಂದಿದ್ದೇವೆ!’ ಎನ್ನುತ್ತ ಗುರೂಜಿಯವರು ಅವರನ್ನು ಹಿಂಬಾಲಿಸಿದರು. ಅಲ್ಲಿ ಒಳಕೋಣೆಯಲ್ಲಿ ಹಳೆಯ ಮಂಚದ ಮೇಲೆ ಮಲಗಿದ್ದ ಪೆದುಮಾಳರು ಎಲುಬಿನ ಚಕ್ಕಳವಾಗಿದ್ದರು. ಅವರ ಅವಸ್ಥೆಯನ್ನು ಕಂಡ ಗುರೂಜಿಯವರಿಗೆ ತೀವ್ರ ನಿರಾಶೆಯಾಯಿತು. ಏಕೆಂದರೆ ಅವರ ಯಶಸ್ಸು ಮತ್ತು ಶ್ರೀಮಂತಿಕೆಯನ್ನು ನೋಡಿ ಗುರುಗಳು ಹೊಟ್ಟೆ ಉರಿದುಕೊಂಡು ಕೊರಗಬೇಕು
ಧಾರಾವಾಹಿ ಆವರ್ತನ ಅದ್ಯಾಯ-42 ಏಕನಾಥ ಗುರೂಜಿಯವರ ಪ್ರಖ್ಯಾತಿ ಬಹಳ ಬೇಗನೇ ತಮ್ಮೂರನ್ನು ದಾಟಿ ದೂರ ದೂರದ ಊರು, ನಗರಗಳಿಗೂ ಹಬ್ಬಿತು. ಹಾಗಾಗಿ ಮುಂದೆ ಈಶ್ವರಪುರದ ಸುತ್ತಮುತ್ತದ ಕೆಲವು ಜಿಲ್ಲೆಗಳ ಹಲವಾರು ಬೃಹತ್ ನಾಗಬನಗಳು ಇವರಿಂದಲೇ ಜೀರ್ಣೋದ್ಧಾರಗೊಳ್ಳಲು ಕ್ಷಣಗಣನೆಯಲ್ಲಿದ್ದವು. ಅವನ್ನೆಲ್ಲ ಆದಷ್ಟು ಬೇಗ ಮುಗಿಸಿಬಿಡಬೇಕೆಂಬ ಆತುರ ಅವರಲ್ಲಿತ್ತು. ಆದರೆ ತಮ್ಮ ಯಶಸ್ಸನ್ನು ಮೆಚ್ಚಿ ಆಗಾಗ ಹರಿದು ಬರುವ ಅಭಿನಂದನೆ ಮತ್ತು ಪ್ರಶಸ್ತಿ ಪುರಸ್ಕಾರಗಳಂಥ ಪ್ರತಿಷ್ಠಿತ ಸಮಾರಂಭಗಳು ಹಾಗೂ ಅವುಗಳ ನಡುವೆ ತಮ್ಮ ಜೀವನೋಪಾಯದ ಧಾರ್ಮಿಕ ಚಟುವಟಿಕೆಗಳೆಲ್ಲವೂ ಕೂಡಿ ಆ ಜೀರ್ಣೋದ್ಧಾರ ಕಾರ್ಯಗಳನ್ನು ತಡೆಹಿಡಿಯುತ್ತಿದ್ದವು. ಇವೆಲ್ಲದರ ನಡುವೆ ಅವರು ಭಾಗೀವನದ ಸಮೀಪದ ದೇವರಕಾಡಿನ ಮೇಲೆ ಇಟ್ಟುಕೊಂಡಿದ್ದ ಮಹತ್ವಾಕಾಂಕ್ಷೆಯ ಕೆಲಸವೊಂದು ಹಗಲಿರುಳು ಅವರನ್ನು ಭಾದಿಸುತ್ತಿತ್ತು. ಆದ್ದರಿಂದ ಅದರ ಕುರಿತೂ ಅವರು ಸುಮ್ಮನೆ ಕುಳಿತಿರಲಿಲ್ಲ. ಸಮಯ ಸಿಕ್ಕಾಗಲೆಲ್ಲ ಆ ಕಾರ್ಯದಲ್ಲಿ ತೊಡಗುತ್ತಿದ್ದರು. ಆ ಹಾಡಿ ಮತ್ತದರ ಸುತ್ತಮುತ್ತಲಿನ ಪ್ರದೇಶವು ಬಹಳ ಹಿಂದೆ ಅಲ್ಲಿ ವಾಸಿಸುತ್ತಿದ್ದ ಶೀನಯ್ಯ ಎಂಬವನ ಕುಟುಂಬಕ್ಕೆ ಸೇರಿದ್ದೆಂದೂ ಅವರಲ್ಲಿ ಬಹುತೇಕರು ಎಲ್ಲೆಲ್ಲೋ ಹಂಚಿ ಹೋಗಿದ್ದು ಸದ್ಯ ಆ ಅರಣ್ಯದ ಹತ್ತಿರದ ಹಳೆಯ ಮನೆಯಲ್ಲಿ ಅವನ ಕುಟುಂಬದ ಇಬ್ಬರು ಹಿರಿಯರು ಮಾತ್ರವೇ ಉಳಿದಿರುವರೆಂದೂ ಆ ಮನೆತನದ ನಾಗ, ಪರಿವಾರ ದೈವಗಳು ಅನಾದಿ ಕಾಲದಿಂದಲೂ ಆ ಮನೆಯ ಸಣ್ಣ ಕೋಣೆಯಲ್ಲಿ ಪೂಜೆಗೊಳ್ಳುತ್ತಿವೆಯೆಂದೂ ರಾಘವನ ಗುಪ್ತ ಅಧ್ಯಯನದಿಂದ ಗುರೂಜಿಯವರಿಗೆ ತಿಳಿದು ಬಂದಿತ್ತು. ಹಾಗಾಗಿ ಆ ಬೃಹತ್ತ್ ಅರಣ್ಯವನ್ನು ತೆರವುಗೊಳಿಸಿ ಅಲ್ಲಿ ಭವ್ಯವಾದ ನಾಗನ ದೇವಸ್ಥಾನವೊಂದನ್ನು ನಿರ್ಮಿಸಬೇಕು ಮತ್ತದರ ಸಮೀಪದ ಮದಗವನ್ನು ನಾಗ ದೇವಳಕ್ಕೆ ಸಂಬಂಧಿಸಿದ ಸುಂದರ ಪುಷ್ಕರಣಿಯನ್ನಾಗಿ ಮಾರ್ಪಡಿಸಿ ಆ ಕ್ಷೇತ್ರವನ್ನು ಬಹಳ ಕಾರಣಿಕದ ಪುಣ್ಯಭೂಮಿಯನ್ನಾಗಿ ಮಾಡಬೇಕೆಂಬ ವಿಶೇಷ ಯೋಜನೆಯು ಗುರೂಜಿಯವರೊಳಗೆ ನಿರಂತರ ಮಥಿಸುತ್ತಲೇ ಇತ್ತು. ಆ ದೇವರ ಕಾಡಿನಲ್ಲಿ ತಾವು ಸ್ಥಾಪಿಸಬೇಕಾದ ನಾಗ ದೇವಸ್ಥಾನದ ಕುರಿತ ತಮ್ಮ ಆಕಾಂಕ್ಷೆಯನ್ನು ಸಿದ್ಧಿಸಿಕೊಳ್ಳಬೇಕಾದ ಮಾರ್ಗೊಪಾಯದ ಚಿತ್ರಣವನ್ನೂ ಹಾಗೂ ಅದಕ್ಕೆ ಬೇಕಾದ ಸೂಕ್ತ ನಕ್ಷೆಯನ್ನೂ ತಮ್ಮೊಳಗೆಯೇ ತಯಾರಿಸುತ್ತಿದ್ದ ಗುರೂಜಿಯವರು ಆವತ್ತೊಂದು ಶುಭಗಳಿಗೆಯಲ್ಲಿ ಆಪ್ತ ಸಹಾಯಕ ರಾಘವನನ್ನು ಕರೆದು ತಮ್ಮ ಯೋಜನೆಯನ್ನು ಅವನಿಗೆ ಕೂಲಂಕಷವಾಗಿ ವಿವರಿಸಿದರು. ಆದರೆ ಅದನ್ನು ಕೇಳಿದ ಅವನು ವಿಪರೀತ ಭಯಕ್ಕೆ ಬಿದ್ದು ಆ ಕೆಲಸಕ್ಕೆ ಸಹಕಾರ ನೀಡಲು ಹಿಂಜರಿದುಬಿಟ್ಟ. ಅದರಿಂದ ಗುರೂಜಿಯವರು ಸ್ವಲ್ಪ ನಿರಾಶರಾದರು. ಆದರೆ ಅವರು ಬೆನ್ನು ಹಿಡಿದರೆ ಬೇತಾಳನಂಥ ಸ್ವಭಾವದವರು. ಆದ್ದರಿಂದ ಅವನ ಭಯವನ್ನು ಕಂಡವರು ಮೆಲುವಾಗಿ ನಕ್ಕು, ‘ನೋಡು ರಾಘವಾ, ಇದು ನಮ್ಮ ಸ್ವಾರ್ಥಕ್ಕೋ ಅಥವಾ ಹಣದ ಲಾಭಕ್ಕೋ ಹಮ್ಮಿಕೊಂಡಿರುವ ಕಾರ್ಯವೆಂದು ಯಾವತ್ತಿಗೂ ಭಾವಿಸಬೇಡ. ಇದೇನಿದ್ದರೂ ನಮ್ಮ ಊರು ಮಾತ್ರವಲ್ಲದೇ ಇಡೀ ಲೋಕ ಕಲ್ಯಾಣಾರ್ಥವಾಗಿ ಬಹಳ ಹಿಂದೆಯೇ ನಾವು ಸಂಕಲ್ಪಿಸಿಕೊಂಡಿರುವ ಪುಣ್ಯಕಾರ್ಯವಿದು! ಅಷ್ಟಲ್ಲದೇ ಈ ದೈವೀ ಕಾರ್ಯವು ನಿನ್ನ ಹೊರತು ಬೇರೆ ಯಾರಿಂದಲೂ ಸಾಧ್ಯವಾಗುವಂಥದ್ದಲ್ಲ! ಯಾಕೆಂದರೆ ಇದಕ್ಕೆ ಅದರದ್ದೇ ಆದ ಶುದ್ಧ ನೇಮನಿಷ್ಠೆ ಮತ್ತು ಗಟ್ಟಿ ಆತ್ಮಬಲವಿರುವವರೇ ಬೇಕಾಗುತ್ತದೆ. ಅವೆಲ್ಲವೂ ನಿನ್ನಲ್ಲಿವೆ. ಆದ್ದರಿಂದಲೇ ಈ ಕೆಲಸಕ್ಕೆ ನಿನ್ನನ್ನು ಆರಿಸಿರುವುದು. ಇದನ್ನು ನೀನು ಭಕ್ತಿಯಿಂದ ಕೈಗೊಳ್ಳುತ್ತಿಯಾದರೆ ನಿನಗೆ ಯಾವ ಕಂಟಕವೂ ಬಾರದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಅಷ್ಟು ಮಾತ್ರವಲ್ಲದೇ ನೀನಿದನ್ನು ಸರಿಯಾಗಿ ನಡೆಸಿಕೊಟ್ಟೆಯೆಂದರೆ ಅದೇ ನಾಗನ ಹೆಸರಿನಲ್ಲಿ ನಿನಗೊಂದು ಐದು ಸೆಂಟ್ಸ್ ಒಳ್ಳೆಯ ಜಾಗವನ್ನೂ ಎರಡು ಸಾವಿರ ಚದರಡಿಯ ಚಂದದ ತಾರಸಿ ಮನೆಯನ್ನೂ ಉಡುಗೊರೆಯಾಗಿ ನೀಡುವ ಆಸೆ ನಮಗಿದೆ. ಯಾವುದಕ್ಕೂ ಯೋಚಿಸಿ ನೋಡು!’ ಎಂದರು ಗಂಭೀರವಾಗಿ. ಗುರೂಜಿಯವರಿಂದ ಉದುರುತ್ತಿದ್ದ ದುಬಾರಿ ನುಡಿಮುತ್ತುಗಳನ್ನು ಆಸ್ಥೆಯಿಂದ ಹೆಕ್ಕಿಕೊಳ್ಳುತ್ತಿದ್ದ ರಾಘವನಿಗೆ ನಾಗನ ಹೆಸರಿನಲ್ಲಿ ಅವರು ನೀಡುತ್ತೇವೆಂದ ಉಡುಗೊರೆಯು ತಟ್ಟನೆ ಅವನ ಭಯವನ್ನೂ ಹಿಂಜರಿಕೆಯನ್ನೂ ಹೊಡೆದೋಡಿಸಿಬಿಟ್ಟಿತು. ‘ಆಯ್ತು ಗುರೂಜಿ. ನನ್ನಿಂದ ನಾಲ್ಕು ಜನರಿಗೆ ಒಳ್ಳೆಯದಾಗುವುದಾದರೆ ತಮಗಾಗಿ ಯಾವ ಕೆಲಸ ಮಾಡಲೂ ಸಿದ್ಧ! ಎಲ್ಲವೂ ತಮ್ಮ ಮಾರ್ಗದರ್ಶನದಿಂದಲೇ ನಡೆದರೆ ಸಾಕು!’ ಎಂದು ಎದೆ ಸೆಟೆಸಿ ಒಪ್ಪಿಗೆ ಸೂಚಿಸಿದ. ಅಷ್ಟು ಕೇಳಿದ ಗುರೂಜಿಯವರ ತುಟಿಯಂಚಿನಲ್ಲಿ ವ್ಯಂಗ್ಯ ನಗುವೊಂದು ಮಿಂಚಿ ಮರೆಯಾಯಿತು. ‘ಹೌದು ರಾಘವಾ ಸರಿಯಾದ ಮಾತು. ನಾವು ಯಾವಾಗಲೂ ಹಾಗೆಯೇ ಯೋಚಿಸುತ್ತ ಜೀವನದಲ್ಲಿ ಮೇಲೆ ಬರುವುದು ಹೇಗೆಂಬುದನ್ನು ಕಲಿಯಬೇಕು. ನೀನು ನಮ್ಮೊಂದಿಗೆ ಇರುವವರೆಗೆ ನಿನ್ನ ರಕ್ಷಣೆಯ ಜವಾಬ್ದಾರಿಯೂ ನಮ್ಮದು!’ ಎಂದು ಗುರೂಜಿ ಅವನಲ್ಲಿ ಇನ್ನಷ್ಟು ಧೈರ್ಯ ತುಂಬಿದರು. ಹಾಗಾಗಿ ಅವರು ಗೊತ್ತುಪಡಿಸಿದ ಶುಭದಿನದಂದು ರಾಘವ ತನ್ನ ಕೆಲಸವನ್ನಾರಂಭಿಸಿದ. ಒಂದು ನರಪಿಳ್ಳೆಗೂ ಸುಳಿವು ಸಿಗದಷ್ಟು ಜಾಗ್ರತೆಯಿಂದ ಆ ದೇವರಕಾಡನ್ನು ಕೆಲವು ಬಾರಿ ಪ್ರವೇಶಿಸಿದವನು, ಅದರೊಳಗೆ ನಾಗಬನ ಮತ್ತು ಭೂತಸ್ಥಾನಗಳು ಇರುವ ಕುರುಹುಗಳನ್ನು ಬಹಳವೇ ಹುಡುಕಾಡಿದ. ಆದರೆ ಆ ಅರಣ್ಯದೊಳಗೆ ಅವನಿಗೆ ಅಂಥ ಯಾವ ಗುರುತುಗಳೂ ಕಾಣಿಸಲಿಲ್ಲ. ಅದರಿಂದ ತೀವ್ರ ನಿರಾಶನಾದ. ತನ್ನ ಇಂಥ ಶ್ರಮಕ್ಕೆ ಗುರೂಜಿಯವರಿಂದ ಕಡಿಮೆಯೆಂದರೂ ನಲವತ್ತು ಲಕ್ಷ ರೂಪಾಯಿಗಳಷ್ಟು ದೊಡ್ಡ ಮೊತ್ತದ ಬಹುಮಾನವು ಸಿಗುವುದರಲ್ಲಿತ್ತು. ಆದರೂ ತನ್ನ ದುರಾದೃಷ್ಟಕ್ಕೆ ಕೈತಪ್ಪಿತಲ್ಲ…! ಎಂದೂ ಕೊರಗಿದ. ಹಾಗಾಗಿ ಅವನಿಗೆ ನಾಗದೇವನ ಮೇಲೆ ವಿಪರೀತ ಕೋಪ ಬಂತು. ‘ಛೇ! ಛೇ! ಇದೇನಿದು ನಾಗದೇವಾ…! ನಿನಗೊಂದು ಭದ್ರವಾದ ನೆಲೆಯನ್ನು ಕಲ್ಪಿಸಲಿಕ್ಕಾಗಿಯೇ ನಾನೂ ಗುರೂಜಿಯವರೂ ಕೂಡಿ ಒದ್ದಾಡುತ್ತಿರುವುದು ನಿನಗೂ ಕಾಣಿಸುತ್ತಿಲ್ಲವಾ? ಹೀಗಿರುವಾಗ ನಿನ್ನ ಉದ್ಧಾರಕ್ಕೆ ನೀನೇ ಮನಸ್ಸು ಮಾಡದಿದ್ದರೆ ಹೇಗೆ ಹೇಳು…!’ ಎಂದು ಅಸಹನೆಯಿಂದ ಗೊಣಗುತ್ತ ಹಿಂದಿರುಗಿದ. ತನ್ನ ಪತ್ತೇಧಾರಿ ಕೆಲಸವು ವ್ಯರ್ಥವಾದುದನ್ನು ಗುರೂಜಿಯವರಿಗೆ ಬೇಸರದಿಂದ ವಿವರಿಸಿದ. ಆದರೆ ಆ ಸುದ್ದಿ ಕೇಳಿದ ಗುರೂಜಿಯವರಿಗೆ ಆಘಾತವಾಯಿತು. ‘ಅಯ್ಯಯ್ಯೋ… ನಾಗದೇವಾ! ಅಂಥದ್ದೊಂದು ಪುರಾತನವಾದ ಹಾಡಿಯೊಳಗೆ ನಾಗ, ದೈವಸ್ಥಾನಗಳು ಇರಲೇಬೇಕೆಂದು ತಾವು ಭಾವಿಸಿದ್ದು ಹೇಗೆ ಸುಳ್ಳಾಗಿಬಿಟ್ಟಿತು ಪರಮಾತ್ಮಾ…?’ ಎಂದು ಯೋಚಿಸಿ ತೀವ್ರ ಕಳವಳಪಟ್ಟರು. ಆಗ ಅವರನ್ನು ಇನ್ನೊಂದು ಸಂಗತಿಯೂ ತಲೆ ತಿನ್ನತೊಡಗಿತು. ದಿನನಿತ್ಯ ಒಂದಲ್ಲ ಒಂದು ವಿಧದ ತರಲೆ, ತಾಪತ್ರಯಗಳನ್ನು ತಮ್ಮಲ್ಲಿಗೆ ಹೊತ್ತು ತರುತ್ತಿರುವಂಥ ಬುಕ್ಕಿಗುಡ್ಡೆಯ ನಿವಾಸಿಗಳಿಗೂ ಮತ್ತು ಮುಖ್ಯವಾಗಿ ಭಾಗೀವನದ ಸುಮಿತ್ರಮ್ಮ ಹಾಗೂ ಶಂಕರನಿಗೂ ಅದೊಂದು ಪುರಾತನವಾದ ಕಾರಣಿಕದ ನಾಗಬನವೆಂದೂ, ಈಗ ಅಲ್ಲಿನ ದೈವದೇವರುಗಳೆಲ್ಲ ನೀರು ನೆರಳಿಲ್ಲದೆ ಹತಾಶೆಗೊಂಡು ಗ್ರಾಮದ ಮೇಲೆ ಕುಪಿತರಾಗಿದ್ದಾರೆಂದೂ ಅದರ ಸೂಚನೆಯೇ ಆ ವಠಾರದಲ್ಲಿ ನಾಗರಹಾವು ಕಾಣಿಸಿಕೊಳ್ಳುತ್ತಿರುವುದೆಂದೂ ಮತ್ತು ಆದಷ್ಟು ಬೇಗ ಅದನ್ನು ಜೀರ್ಣೋದ್ಧಾರ ಮಾಡಲೇಬೇಕೆಂದೂ ಸ್ವತಃ ನಾಗದೇವನೇ ಆಜ್ಞೆ ಮಾಡಿದ್ದಾನೆ!’ ಎಂದೂ ತಾವು ಅದೆಷ್ಟು ಬಾರಿ ತಮ್ಮ ಹೊಸ ಜ್ಯೋತಿಷ್ಯಕ್ರಮದ ಪ್ರಕಾರ ಹೇಳುತ್ತ ಬಂದಿಲ್ಲ! ಅಯ್ಯೋ ದೇವಾ…! ಇನ್ನೇನು ಮಾಡುವುದಪ್ಪಾ…? ಜನರಿಗೆ ತಮ್ಮ ಮೇಲೆ ನಂಬಿಕೆ, ಗೌರವ ಹೊರಟು ಹೋಯಿತೆಂದರೆ ಮುಂದೆ ತಮ್ಮ ಜೀವನದ ಗತಿಯೇನು? ಎಂದುಕೊಂಡ ಅವರು ತೀವ್ರ ಚಿಂತೆಗೊಳಗಾದರು. ಆದರೂ ತೋರಿಸಿಕೊಳ್ಳದೆ, ‘ಸರಿ, ಸರಿ. ಪರ್ವಾಗಿಲ್ಲ ರಾಘವ ಆ ಕುರಿತು ಇನ್ನೊಮ್ಮೆ ಮಾತಾಡುವ. ನಮ್ಮಲ್ಲಿ ಆ ಇಚ್ಛೆಯನ್ನು ಹುಟ್ಟಿಸಿದ ನಾಗನೇ ಏನಾದರೊಂದು ದಾರಿ ತೋರಿಸುತ್ತಾನೆ. ಈಗ ನೀನು ಹೋಗು…!’ ಎಂದು ತಾಳ್ಮೆಯಿಂದ ಹೇಳಿ ಅವನನ್ನು ಕಳುಹಿಸಿದರು. ಆದರೆ ಆಮೇಲೆ ಮತ್ತೆ ಅದೇ ಚಿಂತೆಗೆ ಬಿದ್ದರು. ಕೊನೆಗೂ ಅವರಿಗೊಂದು ಉಪಾಯ ಹೊಳೆಯಿತು. ಮೊದಲಿಗೆ ಅದನ್ನು ಕಾರ್ಯಗತಗೊಳಿಸಲು ಭಯಪಟ್ಟರು. ಬಳಿಕ ಗಟ್ಟಿ ಮನಸ್ಸು ಮಾಡಿದರು. ‘ಹೌದು. ತಮ್ಮ ಬಹು ಅಪೇಕ್ಷಿತವಾದ ಈ ಬೃಹತ್ತ್ ಯೋಜನೆಯೊಂದು ನೆರವೇರಬೇಕಾದರೆ ಅದೇ ಸರಿಯಾದ ಮಾರ್ಗ. ಅಷ್ಟಕ್ಕೂ ನಾವೇನು ಜನರ ಮನೆ ಮಠ ಒಡೆದು ದೇವರಕ್ಷೇತ್ರ ನಿರ್ಮಿಸಲು ಹೊರಟಿದ್ದೇವಾ, ಇಲ್ಲವಲ್ಲಾ! ಭೂಮಿಗೆ ಭಾರವಾಗಿರುವ ಒಂದಷ್ಟು ಕ್ರೂರಮೃಗಗಳೂ, ವಿಷಜಂತುಗಳೂ ಮತ್ತು ಕೆಲಸಕ್ಕೆ ಬಾರದ ಕ್ರಿಮಿಕೀಟ, ಹಕ್ಕಿಪಕ್ಷಿಗಳೂ ತುಂಬಿ ಜನರಿಗೆ ಆಗಾಗ ಹಾನಿಯಾಗುತ್ತಿರುವಂಥ ಆ ಕಗ್ಗಾಡನ್ನು ದೇವರ ಹೆಸರಿನಲ್ಲಿ ಕಡಿದು ಜೀರ್ಣೋದ್ಧಾರ ಮಾಡುವುದರಿಂದ ನಾಡಿಗೆ ಒಳ್ಳೆಯದಾಗುತ್ತದೆಯೇ ಹೊರತು ಕೆಟ್ಟದ್ದಾಗಲಿಕ್ಕಿದಿಲ್ಲ! ಆದ್ದರಿಂದ ತಾವು ಅಂದುಕೊಂಡ ಕಾರ್ಯವನ್ನು ಹೇಗಾದರೂ ಸಾಧಿಸಿ ಜನರು ತಮ್ಮ ಮೇಲಿಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲೇಬೇಕು ಎಂದು ನಿರ್ಧರಿಸಿದರು. ಆವತ್ತು ಅಮಾವಾಸ್ಯೆಯ ದಿನ. ಅಂದು ದಟ್ಟ ಕಾರ್ಗತ್ತಲ ನಡುರಾತ್ರಿಯಲ್ಲಿ ರಾಘವನನ್ನು ನಿಶ್ಶಬ್ದವಾಗಿ ಕೂರಿಸಿಕೊಂಡ ಗುರೂಜಿಯವರ ಕಾರು ಪೋರ್ಟಿಕೋದಿಂದ ಹೊರಬಿತ್ತು. ಸ್ವಲ್ಪಹೊತ್ತಿನಲ್ಲಿ ಹೂಮ್ಮಣ್ಣು ಗ್ರಾಮವನ್ನು ತಲುಪಿತು. ಅಲ್ಲಿ ಒಂದು ಕಡೆ ಸುಮಾರು ಮೂರು ಶತಮಾನಗಳಷ್ಟು ಪ್ರಾಚೀನವಾದ ದೊಡ್ಡ ನಾಗಬನವೊಂದು ಕೆಲವು ಕಾಲದ ಹಿಂದೆ ಗುರೂಜಿಯವರ ಸುಪರ್ದಿಯಲ್ಲಿಯೇ ಜೀರ್ಣೋದ್ಧಾರಗೊಂಡಿತ್ತು. ಆದರೆ ಬನಕ್ಕೆ ಸಂಬಂಧಪಟ್ಟವರು ಅಲ್ಲಿನ ಹಳೆಯ ನಾಗನ ಕಲ್ಲುಗಳನ್ನು ಇನ್ನೂ ವಿಸರ್ಜನೆ ಮಾಡಿರಲಿಲ್ಲ. ಈಗ ಮಬ್ಬು ಬೆಳಕಿನ ಬ್ಯಾಟರಿಯನ್ನು ಹಿಡಿದುಕೊಂಡ ಗುರೂಜಿಯವರು ನಿಧಾನವಾಗಿ ಆ ಬನವನ್ನು ಹೊಕ್ಕರು. ಅವರ ಹಿಂದೆ ರಾಘವನೂ ನಡುಗುತ್ತ ಹೆಜ್ಜೆ ಹಾಕಿದ. ಗುರೂಜಿಯವರು ತಮಗೆ ಬೇಕಾದ ಕೆಲವು ನಾಗನ ಕಲ್ಲುಗಳನ್ನು ಬೇಗಬೇಗನೇ ಆಯ್ದು ರಾಘವನಿಂದ ಕಾರಿನ ಡಿಕ್ಕಿಗೆ ತುರುಕಿಸಿದರು. ಬಳಿಕ ಕೂಡಲೇ ಅವರ ಕಾರು ಮಿಂಚಿನ ವೇಗದಲ್ಲಿ ಅಲ್ಲಿಂದ ಮಾಯವಾಗಿ ಭಾಗೀವನದ ಸಮೀಪದ ದೇವರಕಾಡಿನೆದುರು ಪ್ರತ್ಯಕ್ಷವಾಯಿತು. ಅಲ್ಲೊಂದು ದೈತ್ಯ ರೆಂಜೆಮರದ ಬುಡದಲ್ಲಿ ರಾಘವ ಹಿಂದಿನ ದಿನ ರಾತ್ರಿಯೇ ತೋಡಿಟ್ಟಿದ್ದ ಹೊಂಡದೊಳಗೆ ಆ ಕಲ್ಲುಗಳನ್ನು ಸಾಲಾಗಿ ಇಟ್ಟು ಯಾರಿಗೂ ಚೂರೂ ಸುಳಿವು ಸಿಗದಂತೆ ಮಣ್ಣು ಮುಚ್ಚಿ ಅದರ ಮೇಲೆ ತರಗೆಲೆಗಳನ್ನು ಹರಡಿ ಮರೆಮಾಚಿದವರು ಕ್ಷಣದಲ್ಲಿ ಮನೆಯನ್ನು ಸೇರಿದರು. ಈ ಅದ್ಭುತ ಕಾರ್ಯಸಾಧನೆ ನಡೆದ ಆರು ತಿಂಗಳ ಬಳಿಕ ಗುರೂಜಿಯವರು ಆ ದೇವರಕಾಡಿನಲ್ಲಿ ನಾಗನ ದೇವಸ್ಥಾನ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಲು ಮುಂದಾದರು. ಜಾಗದ ವಾರಸುದಾರರಾದ ಮುದಿ ಗಂಡಹೆಂಡತಿಯನ್ನೂ ಅವರ ದೂರದೂರದ ಕೆಲವು ಸಂಬಂಧಿಕರನ್ನೂ ರಾಘವನ ಮೂಲಕ ಸಂಪರ್ಕಿಸಿ ಅಲ್ಲಿನ ದೈವದೇವರುಗಳ ಕಾರಣಿಕವನ್ನು ಕಣ್ಣಾರೆ ಕಂಡಂತೆ ಅವರಿಗೆ ವಿವರಿಸಿದರು. ಅದೇ ಕಾರಣಕ್ಕೆ ಭಾಗೀವನದೊಳಗೂ ನಾಗಧೂತನು ಸುತ್ತಾಡುತ್ತಿರುವ ಉದಾಹರಣೆಯನ್ನೂ ನೀಡಿ ಅವರಲ್ಲೂ ದೋಷದ ಭೀತಿಯನ್ನು ಸೃಷ್ಟಿಸಿ ಸಜ್ಜುಗೊಳಿಸಿದರು. ಒಂದು ಶುಭದಿನದಂದು ಊರ ಮುಖ್ಯಸ್ಥರನ್ನೂ ಕಾಡಿನ ವಾರಸುದಾರರನ್ನೂ ಮತ್ತು ಭಾಗಿವನದವರನ್ನೂ ಆ ಕಾಡಿನಲ್ಲಿ ಬಂದು ಸೇರುವಂತೆ ಆಜ್ಞಾಪಿಸಿದರು. ಆ ದಿನವೂ ಬಂದಿತು. ಅಂದು ಸೂರ್ಯೋದಯವಾಗಿ ಒಂದು ಗಳಿಗೆಯ ಬಳಿಕ ಗುರೂಜಿಯವರು ಸರ್ವಸಮಸ್ತರ ಸಮ್ಮುಖದಲ್ಲಿ ದೇವರಕಾಡನ್ನು ಪ್ರವೇಶಿಸಲು ಹೊರಟು ಬಂದವರು ಕಾರಿನಿಂದಿಳಿದು ಕಾಡಿನತ್ತ ಹೆಜ್ಜೆ ಹಾಕಿದರು. ಆಗ ಅಲ್ಲಿ ವಿಲಕ್ಷಣ ವಿದ್ಯಾಮಾನವೊಂದು ಸಂಭವಿಸತೊಡಗಿತು. ಆ ಅರಣ್ಯದ ಸಮೃದ್ಧಿಯಲ್ಲೂ ಮತ್ತು ಸುತ್ತಲಿನ ಜನಜೀವನದ ಸಂರಕ್ಷಣೆಯಲ್ಲೂ ಪ್ರಮುಖ ಪಾತ್ರವಹಿಸಿರುವ ಕಟ್ಟಿರುವೆಗಳ ದೊಡ್ಡ ಕುಟುಂಬವೊಂದು ಮಿತಿಮೀರಿ ಬೆಳೆದ ತಮ್ಮ ಸಂಸಾರ ಬಾಹುಳ್ಯದಿಂದಾಗಿ ಒಂದೇ ಗೂಡಿನೊಳಗೆ ವಾಸಿಸಲಾಗದೆ ಹೊಸ ಪ್ರದೇಶಗಳಿಗೆ ವಲಸೆ ಹೋಗಲು ನಿರ್ಧರಿಸಿದ್ದವು. ಆದ್ದರಿಂದ ಅವುಗಳು ಅಂದು ಬೆಳಗ್ಗಿನಿಂದಲೇ ಶಿಸ್ತಿನ ಸಿಪಾಯಿಗಳಂತೆ ಕವಲು ಕವಲುಗಳಾಗಿ ಪ್ರಯಾಣ ಬೆಳೆಸಿದ್ದವು. ಅಲ್ಲಿನ ಹಸಿರು ಸಂರಕ್ಷಣೆಯಲ್ಲಿ ತೊಡಗಿದ್ದ ಗೆದ್ದಲ ಕುಟುಂಬವೂ ತಮ್ಮ ವಂಶೋತ್ಪತಿಗಾಗಿ ಹೊಸ ಹುತ್ತಗಳನ್ನು ಕಟ್ಟುವುದರಲ್ಲಿ ನಿರತವಾಗಿದ್ದವು. ಆ ಅಡವಿಯ ಅಸಂಖ್ಯಾತ ಕ್ರಿಮಿಕೀಟಗಳು ತಮ್ಮ ಜೀವನ ನಿರ್ವಹಣೆಯ ಮೂಲಕವೇ ವಿವಿಧ ಬಗೆಯಿಂದ ಹಸಿರು ಪರಿಸರದ ಸ್ವಚ್ಛತೆಯಲ್ಲಿತೊಡಗಿದ್ದವು. ಅನೇಕ ಜಾತಿ ಮತ್ತು ಪ್ರಭೇದಗಳ ಹಾವುಗಳು ಇಲಿ, ಹೆಗ್ಗಣ, ಕಪ್ಪೆ, ಹಲ್ಲಿ, ಅರಣೆ, ಓತಿಕ್ಯಾತ ಮತ್ತು ಉಡಗಳಂಥ ಜೀವರಾಶಿಗಳ ಚಟುವಟಿಕೆಯೂ ಅವಕ್ಕೆ ಸಂಬಂಧಿಸಿದ ಆಹಾರದ ಜೀವಿಗಳ ಕೋಲಾಹಲ, ಕಲರವಗಳೂ ಕಾಡಿನೊಳಗಿನ ಜೀವಂತಿಕೆಯನ್ನು ಸಾರುತ್ತಿದ್ದವು. ಗೊರವಂಕ, ಮಂಗಟ್ಟೆ, ನವಿಲು, ಜಿಂಕೆ, ಕಾಡುಕೋಣ, ಚಿಟ್ಟೆಹುಲಿ, ಹಂದಿ, ಬರಿಂಕಗಳಂಥ ವನ್ಯಪ್ರಾಣಿಗಳ ಕೆನೆತ, ನೆಗೆತ ಗುಟುರು ಗರ್ಜನೆಗಳು ಅರಣ್ಯದ ಮೌನಕ್ಕೆ ಹೊಸ ಮೆರುಗನ್ನು ನೀಡಿ ಮಾರ್ದನಿಸುತ್ತ ಆ ಕಾಡು ಮನೋಹರವಾಗಿ ನಳನಳಿಸುತ್ತಿತ್ತು. ಆದರೆ ಕೆಲವೇ ಕ್ಷಣದಲ್ಲಿ ಅಲ್ಲೊಂದು ಕೆಟ್ಟ ಅಪಶಕುನದ ಛಾಯೆಯೂ ಉದ್ಭವಿಸಿಬಿಟ್ಟಿತು.
ಧಾರಾವಾಹಿ ಆವರ್ತನ ಅದ್ಯಾಯ-41 ಸುಮಿತ್ರಮ್ಮ ಕೋಪದಿಂದ ಕೇಳಿದ ಪ್ರಶ್ನೆಗೆ ನರಹರಿ ತಾನು ಉತ್ತರಿಸಬೇಕೋ, ಬೇಡವೋ ಎಂಬ ಉಭಯಸಂಕಟಕ್ಕೆ ಸಿಲುಕಿದ. ಆದರೆ ಮರುಕ್ಷಣ,‘ನೀನೊಬ್ಬ ಜವಾಬ್ದಾರಿಯುತ ವೈದ್ಯನು ಹೇಗೋ ಹಾಗೆಯೇ ಪ್ರಜ್ಞಾವಂತ ನಾಗರೀಕನೂ ಹೌದು! ಆದ್ದರಿಂದ ನಿನ್ನ ಸುತ್ತಮುತ್ತದ ಅಮಾಯಕ ಜನರಲ್ಲಿ ನಿನ್ನ ಗಮನಕ್ಕೆ ಬರುವಂಥ ತಪ್ಪು ತಿಳುವಳಿಕೆಗಳನ್ನು ನಿವಾರಿಸುವುದೂ ನಿನ್ನ ಕರ್ತವ್ಯ ಎಂಬುದನ್ನು ಮರೆಯಬೇಡ!’ಎಂದು ಅವನ ವಿವೇಕವು ಎಚ್ಚರಿಸಿತು. ಹಾಗಾಗಿ ಕೂಡಲೇ ಚುರುಕಾದ. ‘ಸುಮಿತ್ರಮ್ಮ ನಿಮ್ಮ ಮತ್ತು ಊರಿನವರ ನಂಬಿಕೆಗಳು ಹಾಗೂ ಆ ಗುರೂಜಿಯವರ ಮಾತುಗಳು ಎಷ್ಟು ಸತ್ಯವೋ ಆ ಕುರಿತು ನಾನು ಮಾತಾಡುವುದಿಲ್ಲ. ಅದು ನಿಮಗೂ ಅವರಿಗೂ ಸಂಬಂಧಿಸಿದ ವಿಚಾರ. ಆದರೆ ನೀವೀಗ ಆಸಕ್ತಿಯಿಂದಲೋ, ಅಸಮಾಧಾನದದಿಂದಲೋ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದು ನನ್ನ ಧರ್ಮ. ಆ ಉದ್ದೇಶದಿಂದ ಹೇಳುತ್ತೇನೆ ಕೇಳಿ. ನಾಗರಹಾವೇ ಅಂತಲ್ಲ ಬೇರೆ ಯಾವುದೇ ಹಾವೊಂದು ನಮ್ಮ ಮನೆ ಮತ್ತು ವಠಾರದೊಳಗೆ ಪ್ರವೇಶಿಸಬೇಕಾದರೆ ಆ ಜೀವಿಗೆ ಹಸಿವು ಅಥವಾ ಬಾಯಾರಿಕೆಯಾಗಿದೆ ಮತ್ತದರ ಆಹಾರದ ಜೀವಿಗಳಾದ ಇಲಿ, ಹೆಗ್ಗಣ, ನಾಯಿಮರಿ, ಬೆಕ್ಕು, ಕೋಳಿ ಅಥವಾ ಇನ್ನಿತರ ಜೀವಿಗಳು ಹಾಗೂ ನೀರು ನಮ್ಮ ವಠಾರದಲ್ಲಿಯೇ ಇದೆ ಅಥವಾ ಆ ಹಾವು ಅಲ್ಲಿರಬಹುದಾದ ತನ್ನ ಸಂಗಾತಿಯನ್ನು ಅರಸುತ್ತಲೂ ಬಂದಿರಬಹುದು ಎಂದರ್ಥ. ಆದ್ದರಿಂದ ಯಾವುದೇ ಒಂದು ಬಡಾವಣೆಯೊಳಗೆ ಹಾವುಗಳಿಗೆ ಸಂಬಂಧಿಸಿದ ಇಂಥ ವಸ್ತುಗಳು ಇಲ್ಲವೇ ಇಲ್ಲವೆಂದಾದಲ್ಲಿ ಖಂಡಿತವಾಗಿಯೂ ಆ ಪ್ರದೇಶದಲ್ಲಿ ಯಾವ ಹಾವುಗಳೂ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೂ ಒಂದುವೇಳೆ ಕಾಣಿಸಿಕೊಂಡವೆಂದರೆ ಅದು ಪ್ರಪಂಚದ ಅದ್ಭುತಗಳಲ್ಲಿ ಒಂದೆನ್ನಬಹುದು. ನಾವೆಲ್ಲರೂ ಯೋಚಿಸಬೇಕಾದ ಇನ್ನೊಂದು ಮುಖ್ಯ ಸಂಗತಿಯೇನೆಂದರೆ ಕೇರೆಹಾವು ಅಥವಾ ಇನ್ನಿತರ ಯಾವುದೇ ಹಾವುಗಳು ನಮ್ಮ ಸುತ್ತಮುತ್ತ ಕಂಡು ಬಂದರೆ ಸ್ವಲ್ಪವೂ ತಲೆಕೆಡಿಸಿಕೊಳ್ಳದ ನಾವುಗಳು ಅದೇ ನಾಗರಹಾವೊಂದು ಕಾಣಿಸಿಕೊಂಡ ಕೂಡಲೇ ಏನೇನೋ ತಪ್ಪುನಂಬಿಕೆ ಮತ್ತು ಅರ್ಥವಿಲ್ಲದ ಭಯಕ್ಕೆ ಬಿದ್ದು ಸೋತು ಕುಗ್ಗುತ್ತೇವೆ ಯಾಕೆ…? ಈ ಪ್ರಶ್ನೆಯನ್ನು ಯಾವತ್ತಾದರೂ ನಮಗೆ ನಾವೇ ಕೇಳಿಕೊಂಡಿದ್ದುಂಟಾ…? ಇಲ್ಲ ಅಲ್ಲವೇ? ಬದಲಿಗೆ ನಾವೇನು ಮಾಡುತ್ತೇವೆಂದರೆ ಹಿಂದಿನವರು ಹೇಳುತ್ತ ಬಂದಿರುವ ಅಥವಾ ಯಾರೋ ಅಜ್ಞಾನಿಗಳು ಅಂಥ ಸಂದರ್ಭದಲ್ಲೇ ಹೆಣೆಯುವ ಕಟ್ಟುಕಥೆ ಮತ್ತು ಮೂಢನಂಬಿಕೆಗಳನ್ನೇ ನಂಬಿ ಭಯದಿಂದ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವಲ್ಲದೇ ಅದೇ ವಿಷಯವನ್ನು ಹಿಡಿದುಕೊಂಡು ಮುಂದಿನ ಜೀವನದ ಸಣ್ಣಪುಟ್ಟ ಸುಖಸಂತೋಷಗಳನ್ನೂ ಹಾಳು ಮಾಡಿಕೊಳ್ಳಲು ತೊಡಗುತ್ತೇವೆ! ಹಾಗಾಗಿ ಸುಮಿತ್ರಮ್ಮಾ ಎಲ್ಲಿಯವರೆಗೆ ನಮ್ಮಲ್ಲಿ ಯಾವುದೇ ಒಂದು ವಿಷಯದ ಕುರಿತು ಸಾಮಾನ್ಯ ಜ್ಞಾನವೇ ಇರುವುದಿಲ್ಲವೋ ಅಲ್ಲಿಯತನಕ ಅದರ ಕುರಿತ ಅಜ್ಞಾನ ಮತ್ತು ಭಯಗಳೂ ನಮ್ಮನ್ನು ಕಾಡುವುದು ಸಹಜವೇ. ಅಂಥ ಭಯ ಪೀಡಿತರಾದವರಿಗೆ ನೀವು ಹೇಳಿದ ಹಾಗೆ ಹಾವಿನ ಸಮಸ್ಯೆಯೂ ಎದುರಾಯಿತೆಂದರೆ ಅವರು ಸಂಪೂರ್ಣ ಕಂಗೆಟ್ಟುಬಿಡುತ್ತಾರೆ. ಅಂಥ ಪರಿಸ್ಥಿತಿಯಲ್ಲಿಯೇ ಆ ಅಮಾಯಕರ ದೌರ್ಬಲ್ಯವನ್ನು ಸುತ್ತಮುತ್ತಲಿನ ಅರೆಬರೆ ಜ್ಞಾನಿಗಳೋ ಅಥವಾ ಪ್ರಕೃತಿಯ ಜೀವಜಾಲ ಪ್ರಕ್ರಿಯೆಯ ಬಗ್ಗೆ ಎಳ್ಳಷ್ಟೂ ತಿಳಿವಳಿಕೆಯಿಲ್ಲದ ಜ್ಯೋತಿಷ್ಯರುಗಳೋ ಅಥವಾ ಸ್ವಯಂಘೋಷಿತ ಗುರೂಜಿ, ಬಾಬಾಗಳೋ ತಮ್ಮ ಲಾಭಕ್ಕಾಗಿ ಬಳಸಿಕೊಂಡು ತಾವೇ ಸೃಷ್ಟಿಸಿದ ಮೂಢನಂಬಿಕೆಗಳನ್ನು ಅವರೊಳಗೆ ತುರುಕಿಸುತ್ತ ಜೀವನ ಪರ್ಯಂತ ಅವರನ್ನು ಶೋಷಿಸುತ್ತಾ ಬಂದಿರುವುದು ಈಗೀಗ ದೇಶದಾದ್ಯಂತ ಕಂಡು ಬರುವ ವಿಲಕ್ಷಣ ಸಮಸ್ಯೆಯಲ್ಲವೇ!’ ಎಂದು ನರಹರಿಯು ಸುಮಿತ್ರಮ್ಮನನ್ನು ಅನುಕಂಪದಿಂದ ನೋಡುತ್ತ ವಿವರಿಸಿದ. ಆದರೆ ಆರಂಭದಲ್ಲಿ ಅವನ ಮಾತುಗಳನ್ನು ಒಲ್ಲದ ಮನಸ್ಸಿನಿಂದ ಕೇಳಿಸಿಕೊಳ್ಳುತ್ತಿದ್ದ ಸುಮಿತ್ರಮ್ಮನಲ್ಲಿ ಬಳಿಕ ವಿಚಿತ್ರ ತಳಮಳವೂ ಗೊಂದಲವೂ ಆರಂಭವಾಗಿತ್ತು. ಹಾಗಾಗಿ ಅವರು ಮೌನವಾಗಿ ಅವನ ವಿಚಾರಧಾರೆಯನ್ನು ಆಲಿಸತೊಡಗಿದ್ದರು. ಅವರ ಸ್ಥಿತಿಯನ್ನು ಗಮನಿಸಿದ ನರಹರಿಯು ಮತ್ತೆ ಮಾತು ಮುಂದುವರೆಸಿದ. ‘ನಮ್ಮ ವಠಾರದಲ್ಲೂ ಸುತ್ತಾಡುತ್ತಿರುವ ಹಾವಿನ ಕಥೆಯೂ ಇದೇ ಸುಮಿತ್ರಮ್ಮ. ಹಸಿದ ಹಾವೊಂದಕ್ಕೆ ಅದರ ಆಹಾರದ ಜೀವಿಗಳು ನೇರವಾಗಿ ಬಾಯಿಗೆ ಬಂದು ಬೀಳುತ್ತವೆಯೇ ಹೇಳಿ…? ಆ ಹಾವು ಅವುಗಳನ್ನು ಹುಡುಕಾಡಿ ಬೆನ್ನುಹತ್ತಿ ಬೇಟೆಯಾಡಿಯೇ ತಿನ್ನಬೇಕಲ್ಲವೇ. ನಾನು ಸ್ವತಃ ಕಂಡ, ಓದಿದ ಮತ್ತು ಒಂದಷ್ಟು ಉರಗತಜ್ಞರಿಂದಲೂ ತಿಳಿದುಕೊಂಡ ಮಾಹಿತಿಯ ಪ್ರಕಾರ ಇನ್ನೊಂದೆರಡು ತಿಂಗಳಲ್ಲಿ ಹಾವುಗಳ ಸಂತಾನೋತ್ಪತ್ತಿ ಕಾಲ ಆರಂಭವಾಗಲಿದೆ. ಆ ಕಾಲಕ್ಕಿಂತ ಒಂದೆರಡು ತಿಂಗಳು ಮುಂಚಿತವಾಗಿ ಹೆಚ್ಚಿನ ಪ್ರಭೇದದ ಹಾವುಗಳೆಲ್ಲ ತೀವ್ರ ಆಹಾರದ ಹುಡುಕಾಟದಲ್ಲಿ ತೊಡಗುತ್ತವೆ. ಆ ಮೂಲಕ ಅವು ಮುಂದಿನ ಎರಡು, ಮೂರು ತಿಂಗಳಿಗೆ ಬೇಕಾಗುವಷ್ಟು ಆಹಾರವನ್ನು ತಿಂದು ಕೊಬ್ಬನ್ನಾಗಿ ಪರಿವರ್ತಿಸಿಕೊಂಡು ದಷ್ಟಪುಷ್ಟವಾಗಿ ಬೆಳೆದು ವಂಶೋತ್ಪತ್ತಿಗೆ ತಯಾರಾಗುತ್ತವೆ. ಅಂಥ ಕಾಲದಲ್ಲಿ ಹಾವುಗಳ ಓಡಾಟವೂ ಹೆಚ್ಚಾಗಿರುತ್ತದೆ. ಅದೇ ಸಮಯದಲ್ಲಿ ನಾಗನಿಗೆ ಸಂಬಂಧಿಸಿದ ನಮ್ಮ ನಂಬಿಕೆ, ಆಚರಣೆಗಳಿಗೂ ಜೀವ ಬರುತ್ತದೆ. ಹಾಗಾಗಿ ಆ ನಾಗರಹಾವಿನ ವಿಷಯದಲ್ಲೂ ಯಾರ್ಯಾರೋ ಏನೇನೋ ಹೇಳಿದ್ದನ್ನೂ ಮತ್ತು ನಿಮಗೆ ನೀವೇ ಒಂದಷ್ಟು ಕಲ್ಪಿಸಿಕೊಂಡದ್ದನ್ನೂ ಕಲಸುಮೇಲೊಗರ ಮಾಡಿಕೊಂಡು ಮನಸ್ಸನ್ನು ಕೆಡಿಸಿಕೊಂಡಿದ್ದೀರಷ್ಟೆ!’ ಎಂದು ಆಪ್ತವಾಗಿ ವಿವರಿಸಿದ. ನರಹರಿಯ ಮಾತುಗಳನ್ನು ಪೂರ್ತಿಯಾಗಿ ಕೇಳಿಸಿಕೊಂಡ ಸುಮಿತ್ರಮ್ಮ ಕೊನೆಯಲ್ಲಿ ಅವನ ವಿಚಾರದಲ್ಲಿದ್ದ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಪೇಚಾಡತೊಡಗಿದರು. ಅತ್ತ ರಾಧಾಳಿಗೂ ತನ್ನ ನಂಬಿಕೆಯು ನಿಂತ ನಿಲುವಿನಲ್ಲೇ ಬುಡಮೇಲಾದುದು ಗೊಂದಲವನ್ನೂ ವಿಸ್ಮಯವನ್ನೂ ತರಿಸಿತ್ತು. ಆದರೆ ಡಾ. ನರಹರಿ ಅವರದೇ ಹಿತಚಿಂತಕನಾಗಿ ಕರುಣೆಯಿಂದ ಮಾತಾಡಿದ್ದ. ಅವಳು ಕೂಡಾ ಅವನ ಮಾತುಗಳನ್ನು ಯಾವುದೇ ವಿರೋಧವಿಲ್ಲದೆ ತಲ್ಲೀನತೆಯಿಂದ ಕೇಳಿಸಿಕೊಂಡಿದ್ದಳು. ಆದ್ದರಿಂದ ಅಷ್ಟರವರೆಗೆ ಅವಳನ್ನು ಪೀಡಿಸುತ್ತಿದ್ದ ನಾಗದೋಷವೆಂಬ ಭಯವು ಮೆಲ್ಲನೆ ಕಣ್ಮರೆಯಾಗಿ ಹಗುರ ಭಾವವು ಮೂಡಿತು. ಹಾಗಾಗಿ ಅವಳು, ‘ದೇವರೇ ನಮ್ಮನ್ನು ಕಾಪಾಡಿದೆಯಪ್ಪಾ…!’ ಎಂದು ಕಣ್ಣು ತುಂಬಿಕೊಂಡು ಮನದಲ್ಲೇ ಕೈಮುಗಿದವಳು,‘ಅಂದರೆ ಡಾಕ್ಟ್ರೇ, ನನ್ನ ಗಂಡನನ್ನು ಕಾಡುತ್ತಿರುವುದು ನಾಗದೋಷದ ತೊಂದರೆಯಲ್ಲವಾ…? ಎಂದು ಇನ್ನಷ್ಟು ಸ್ಪಷ್ಟವಾಗಿ ತಿಳಿದುಕೊಳ್ಳುವ ಆತುರದಿಂದ ಪ್ರಶ್ನಿಸುತ್ತ ಕಣ್ಣೀರೊರೆಸಿಕೊಂಡಳು. ‘ಛೇ, ಛೇ! ಅಲ್ಲಮ್ಮಾ. ಇದೊಂದು ಯಾರಿಗೂ ಬರಬಹುದಾದ ಗಂಭೀರ ಕಾಯಿಲೆ! ಆದರೂ ಹೆದರಬೇಕಾಗಿಲ್ಲ. ಇದಕ್ಕೂ ಸರಿಯಾದ ಚಿಕಿತ್ಸೆಯಿದೆ! ಎಂದು ನರಹರಿ ಮೃದುವಾಗಿ ಹೇಳಿ ಅವಳನ್ನು ಸಂತೈಸಿದ. ಮರುಕ್ಷಣ ರಾಧಾ ಅವನನ್ನು ಧನ್ಯತೆಯಿಂದ ದಿಟ್ಟಿಸಿದವಳು ತಟ್ಟನೆ ಸುಮಿತ್ರಮ್ಮನತ್ತ ಹೊರಳಿ,‘ನಮ್ಮಂಥ ಬಡವರನ್ನು ಹೀಗೆಲ್ಲ ಶೋಷಿಸಬಾರದಿತ್ತು ಸುಮಿತ್ರಮ್ಮಾ ನೀವು…!’ ಎಂಬಂತೆ ವಿಷಾದದಿಂದ ದಿಟ್ಟಿಸಿದಳು. ಅವಳ ನೋಟವನ್ನು ಕಂಡ ಸುಮಿತ್ರಮ್ಮನಿಗೆ ಅವಮಾನದಿಂದ ನಿಂತ ನೆಲವೇ ಕುಸಿದಂತಾಯಿತು. ಆದ್ದರಿಂದ ಎತ್ತಲ್ಲೋ ನೋಡುತ್ತ ನಿಂತರು. ಅದನ್ನು ಗಮನಿಸಿದ ನರಹರಿಯು,‘ಸುಮಿತ್ರಮ್ಮಾ, ನಮ್ಮ ನಾಡಿನ ಒಂದಷ್ಟು ಅಮಾಯಕ ಜನರು, ನಾಗರ ಹಾವಿಗೆ ಸಂಬಂಧಿಸಿದೆ ಎಂದು ನಂಬಿರುವ ನಾಗದೋಷ ಎಂಬ ಸಂಗತಿ ಅಥವಾ ಅಂಥದ್ದೊಂದು ನಂಬಿಕೆಯ ಕುರಿತು ನಮ್ಮ ಸನಾತನವಾದ ಯಾವ ಶಾಸ್ತ್ರಗ್ರಂಥಗಳಲ್ಲೂ ಉಲ್ಲೇಖವಿಲ್ಲಮ್ಮಾ…! ಇದು ನಮ್ಮ ನಡುವೆಯೇ ಇರುವ ಕೆಲವು ಸ್ವಾರ್ಥ ಬುದ್ಧಿಗಳು ತಮ್ಮ ತಮ್ಮ ಲಾಭಕ್ಕೋಸ್ಕರ ಸೃಷ್ಟಿಸಿರುವ ವ್ಯಾಪಾರಿ ನಂಬಿಕೆಗಳಷ್ಟೆ!’ ಎಂದು ಒತ್ತಿ ಹೇಳಿದ. ಅಷ್ಟು ಕೇಳಿದ ಸುಮಿತ್ರಮ್ಮ ಈಗ ತೀವ್ರ ಗೊಂದಲಕ್ಕೆ ಬಿದ್ದರು. ಆದರೂ ನರಹರಿಯೊಂದಿಗೆ ವಾದಿಸುವ ಶಕ್ತಿಯಾಗಲೀ, ಜ್ಞಾನವಾಗಲೀ ಇಲ್ಲದ ಅವರು,‘ಏನೋ ಡಾಕ್ಟ್ರೇ, ನನಗೊಂದೂ ಅರ್ಥವಾಗುವುದಿಲ್ಲ. ಆ ಗುರೂಜಿಯವರು ನೋಡಿದರೆ ನಾಗದೋಷದಿಂದಲೇ ನಾಗರಹಾವು ಸುತ್ತಾಡುವುದು. ಅದೇ ಕಾರಣಕ್ಕೆ ನಿಮ್ಮನ್ನು ಕಾಯಿಲೆ ಕಸಾಲೆಗಳೂ ಮತ್ತಿತರ ತೊಂದರೆಗಳೂ ಕಾಡುತ್ತಿರುವುದು. ಆ ದೋಷವನ್ನು ನಿವಾರಿಸಿಕೊಳ್ಳದಿದ್ದರೆ ಕೊನೆಯ ತನಕವೂ ನೀವೆಲ್ಲ ನರಳುತ್ತಲೇ ಸಾಯಬೇಕಾಗುತ್ತದೆ! ಅದಕ್ಕೆ ಆ ಶಾಸ್ತ್ರ ಮಾಡಿಸಿ, ಈ ಪೂಜೆ ಮಾಡಿಸಿ ಅಂತಾರೆ. ನೀವು ನೋಡಿದರೆ ಬೇರೇನೋ ಹೇಳುತ್ತಿದ್ದೀರಿ. ಯಾವುದನ್ನು ನಂಬಬೇಕೋ ಯಾವುದನ್ನು ಬಿಡಬೇಕೋ ಒಂದೂ ಅರ್ಥವಾಗುತ್ತಿಲ್ಲ. ಆದರೆ ಈಗ ಯೋಚಿಸಿದರೆ ಆ ಗುರೂಜಿಯನ್ನೂ ಊರ ಕೆಲವರ ಮಾತುಗಳನ್ನೂ ನಂಬಿಕೊಂಡು ನಾನೂ ಹೆದರಿದೆನಲ್ಲದೇ ಈ ಪಾಪದ ಹುಡುಗಿಯನ್ನೂ ಹೆದರಿಸಿಬಿಟ್ಟೆನೇನೋ ಅಂತನೂ ಅನ್ನಿಸುತ್ತದೆ. ಅಯ್ಯೋ ದೇವರೇ…!’ಎಂದು ಪಶ್ಚಾತ್ತಾಪಪಟ್ಟರು. ಅಷ್ಟು ಕೇಳಿದ ರಾಧಾಳಲ್ಲೂ ನೆಮ್ಮದಿಯ ಭಾವ ಮೂಡಿತು. ‘ಸುಮಿತ್ರಮ್ಮಾ, ಒಬ್ಬ ಮನುಷ್ಯನ ಬಹಳ ದೊಡ್ಡ ಗೆಲುವೆಂದರೆ ಅವನು ತನ್ನ ತಪ್ಪಿಗೆ ಪಡುವ ಪಶ್ಚಾತ್ತಾಪವಂತೆ! ಆದ್ದರಿಂದ ಯಾವುದೇ ಒಂದು ವಿಷಯವಿರಲಿ ಅದನ್ನು ಕುರುಡಾಗಿ ನಂಬುವುದಕ್ಕಿಂತ ಧೈರ್ಯದಿಂದ ಪ್ರಶ್ನಿಸುತ್ತ ಸ್ವಂತ ಬುದ್ಧಿ ಮತ್ತು ವಿವೇಕದಿಂದ ವಿಚಾರ ಮಾಡಿ ನೋಡಿ ಸ್ವೀಕರಿಸುವುದು ಒಳ್ಳೆಯದಲ್ಲವೇ. ನಾವೆಲ್ಲರೂ ಆ ಮನಸ್ಥಿತಿಯನ್ನು ಬೆಳೆಸಿಕೊಂಡೆವೆಂದರೆ ಆಮೇಲೆ ಯಾರೂ ನಮ್ಮನ್ನು ಮೋಸಗೊಳಿಸಲು ಸಾಧ್ಯವಿಲ್ಲ! ನಮ್ಮ ಗೋಪಾಲ ಮೆದುಳಿಗೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗಿದ್ದಾನೆ. ಈ ರೋಗ ಭಾದಿಸುವ ಮನುಷ್ಯರು ಕೆಲವೊಮ್ಮೆ ಅದರ ತೀವ್ರತೆಗೆ ಸಂಪೂರ್ಣ ಸ್ವಾಧೀನವನ್ನು ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಾರೆ. ಅವನ ವರ್ತನೆಗಳನ್ನೂ, ನಿಮ್ಮೊಳಗಿನ ನಂಬಿಕೆಗಳನ್ನೂ ಒಂದಕ್ಕೊಂದು ತಾಳೆ ಹಾಕಿ ಭ್ರಮೆಗೆ ಬಿದ್ದು ಹೆದರಿಕೊಂಡಿದ್ದೀರಷ್ಟೆ!’ ಎಂದು ಹೇಳಿದ ನರಹರಿ ರಾಧಾಳತ್ತ ತಿರುಗಿ,‘ನೋಡಮ್ಮಾ ನಿಮ್ಮ ಬಂಧುಗಳು ಯಾರಾದರಿದ್ದರೆ ಬೇಗ ಕರೆಸಿಕೊಂಡು ಇವನನ್ನು ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಿ. ಹುಷಾರಾಗುತ್ತಾನೆ!’ಎಂದು ಹೇಳಿ ಹೊರಡಲನುವಾದ. ಆದರೆ ರಾಧಾಳಿಗೆ ಭಯವಾಯಿತು.‘ಅಯ್ಯಯ್ಯೋ ಡಾಕ್ಟ್ರೇ… ಇಲ್ಲಿ ಸಮೀಪದಲ್ಲಿ ನಮ್ಮವರು ಯಾರೂ ಇಲ್ಲವಲ್ಲ ಏನು ಮಾಡಲೀ…!’ಎಂದು ಅಳತೊಡಗಿದಳು. ನರಹರಿಗೆ ಕನಿಕರವೆನಿಸಿತು.‘ಆಯ್ತಮ್ಮ ಅಳಬೇಡಿ. ಕಾರು ತರುತ್ತೇನೆ. ಅಡ್ಮಿಟ್ ಮಾಡೋಣ!’ಎಂದವನು ಕೂಡಲೇ ಮನೆಗೆ ಹೋಗಿ ಕಾರು ತಂದು ರಾಧಾಳೊಂದಿಗೆ ಗೋಪಾಲನನ್ನು ಕೂರಿಸಿಕೊಂಡು ಆಸ್ಪತ್ರೆಗೆ ಹೊರಟ. ನರಹರಿಯ ಕಾರು ಕಣ್ಮರೆಯಾಗುವವರೆಗೂ ಮರಗಟ್ಟಿ ನಿಂತು ನೆಟ್ಟದೃಷ್ಟಿಯಿಂದ ನೋಡುತ್ತಿದ್ದ ಸುಮಿತ್ರಮ್ಮ ಆಮೇಲೆ ನಿಧಾನವಾಗಿ ಮನೆಯತ್ತ ಹೆಜ್ಜೆ ಹಾಕಿದರು. ಆದರೆ ಅರ್ಥವಾಗದ ಆಲೋಚನೆ ಮತ್ತು ದ್ವಂದ್ವ ತಾಕಲಾಟಗಳಿಗೆ ಸಿಲುಕಿದ್ದ ಅವರ ಮನಸ್ಸು ಗಿಡುಗನ ದಾಳಿಯಿಂದ ನೆಲೆ ತಪ್ಪಿದ ಹಕ್ಕಿಯಂತೆ ಒದ್ದಾಡುತ್ತಿತ್ತು. ಅವರು ಅದನ್ನು ಸಹಿಸಲಾಗದೆ ಅಶಾಂತರಾಗಿ ನಡೆಯುತ್ತಿದ್ದರು. *** ಆಸ್ಪತ್ರಗೆ ಹೋಗುತ್ತಿದ್ದ ನರಹರಿಯು ರಾಧಾಳೊಡನೆ ಮಾತಿಗಾರಂಭಿಸಿದವನು, ನಮ್ಮ ಪ್ರಾಚೀನರಿಂದ ಸೃಷ್ಟಿಯಾದ ನಾಗಾರಾಧನೆ ಮತ್ತು ಅದರ ಮಹತ್ವದ ಕುರಿತು ಹಾಗೂ ಅಂಥದ್ದೊಂದು ನಿಸರ್ಗಾರಾಧನೆಯ ಆಚರಣೆಗೆ ಈಚೀಚೆಗೆ ಸೋಕಿರುವ ‘ದೋಷ’ ಎಂಬ ಹುಸಿನಂಬಿಕೆಯ ಕುರಿತೂ ಅವಳಿಗೆ ಸರಳವಾಗಿ ವಿವರಿಸಿ ಸ್ಪಷ್ಟವಾಗಿ ಮನವರಿಕೆ ಮಾಡಿಸುತ್ತ ಸಾಗಿದ. ಅದರಿಂದ ಅವಳಲ್ಲೂ ಆ ಕುರಿತ ಅಜ್ಞಾನ ಮತ್ತು ಭಯ ನಿಧಾನವಾಗಿ ಕಡಿಮೆಯಾಗುತ್ತ ಅವಳು ಮತ್ತಷ್ಟು ಗೆಲುವಾದಳು. ಆಗ ಅವಳಿಗೊಂದು ವಿಚಾರವೂ ನೆನಪಿಗೆ ಬಂತು. ಆದ್ದರಿಂದ ತಮ್ಮ ವಠಾರದಲ್ಲಿ ಸುತ್ತಾಡುತ್ತಿದ್ದ ನಾಗರಹಾವಿನ ಕಥೆಯನ್ನೂ ಮತ್ತದರ ಸಲುವಾಗಿ ಸುಮಿತ್ರಮ್ಮ ಬಂದು ತಮ್ಮನ್ನು ಹೆದರಿಸುತ್ತಿದ್ದುದನ್ನೂ, ಅದಕ್ಕೆ ಸಂಬಂಧಿಸಿ ಸಮೀಪದ ದೊಡ್ಡ ಕಾಡೊಂದು ಇನ್ನು ಕೆಲವೇ ತಿಂಗಳೊಳಗೆ ನೆಲಸಮವಾಗಿ ಜೀರ್ಣೋದ್ಧಾರವಾಗಲಿರುವುದನ್ನೂ, ಆ ಕೆಲಸವನ್ನು ಊರಿನವರೂ ಮತ್ತು ತಮ್ಮ ವಠಾರದವರೂ ಕೂಡಿಯೇ ಮಾಡಬೇಕೆಂದು ಏಕನಾಥ ಗುರೂಜಿಯವರು ಆಜ್ಞೆ ಮಾಡಿರುವುದನ್ನೂ ಸವಿವರವಾಗಿ ಅವನಿಗೆ ತಿಳಿಸಿದಳು. ಅಷ್ಟು ಕೇಳಿದ ನರಹರಿಗೆ ತನ್ನ ಹೃದಯವನ್ನು ಯಾರೋ ಬಲವಾಗಿ ಹಿಂಡಿದಂತಾಯಿತು! ಏಕೆಂದರೆ ಅವನು ಕೂಡಾ ಬುಕ್ಕಿಗುಡ್ಡೆಯ ಸುತ್ತಮುತ್ತಲಿನ ಕಾಡು ಗುಡ್ಡಗಳನ್ನೂ ಮುಖ್ಯವಾಗಿ ನಿತ್ಯ ಹರಿದ್ವರ್ಣದ ಆ ದೇವರಕಾಡನ್ನೂ, ಅದರ ಶುದ್ಧ ಆಮ್ಲಜನಕವನ್ನೂ ಹಾಗೂ ವರ್ಷವಿಡೀ ತುಂಬಿ ಹರಿಯುತ್ತ ಇಡೀ ಊರಿಗೆ ತಣ್ಣನೆಯ ನೀರನ್ನು ಪೂರೈಸುತ್ತಿದ್ದ ಅಲ್ಲಿನ ಬೃಹತ್ ಮದಗವನ್ನೂ ನೋಡಿಯೇ ಮನಸೋತು ಅಲ್ಲಿ ಜಾಗವನ್ನು ಕೊಂಡು ಮನೆ ಕಟ್ಟಿಸಿ ಬಾಳಲು ಮನಸ್ಸು ಮಾಡಿದ್ದವನು. ಅಷ್ಟುಮಾತ್ರವಲ್ಲದೇ, ಅವನು ತನ್ನ ಬಿಡುವಿನ ಸಮಯವನ್ನು ಹಾಗೂ ರಜಾದಿನಗಳ ಬಹುಪಾಲನ್ನು ಸ್ವರ್ಗದಂಥ ಆ ಕಾಡಿನಲ್ಲೂ, ಅದರೊಳಗಿನ ಸರೋವರದ ದಡದಲ್ಲೂ ಕುಳಿತು ಕಳೆಯುತ್ತ ಅಲ್ಲಿನ ಪ್ರಾಣಿಪಕ್ಷಿಗಳ ಕಲವರವನ್ನೂ ಇತರ ಜೀವರಾಶಿಗಳ ವಿಸ್ಮಯ ಜಗತ್ತನ್ನೂ ಕಂಡು ಆಸ್ವಾದಿಸುತ್ತ ಬಂದಂಥ ಮನಸ್ಥಿತಿಯವನು. ಹಾಗಾಗಿ ಆ ಹಸಿರು ತಾಣವನ್ನು ಅವನು ತನ್ನ ಜೀವಕ್ಕಿಂತಲೂ ಮಿಗಿಲಾಗಿ ಪ್ರೀತಿಸುತ್ತಿದ್ದ. ಆದರೆ ಆ ಅಮೂಲ್ಯ ಪರಿಸರವು ಇನ್ನು ಕೆಲವೇ ಕಾಲದೊಳಗೆ ಸುಡುಗಾಡಾಗಿ ಬಿಡಲಿದೆ ಎಂಬ ಸತ್ಯವನ್ನು ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ! ಅದೇ ನೋವಿನಿಂದ ಮೌನವಾಗಿ ಕಾರು ಚಲಾಯಿಸುತ್ತಿದ್ದ. ಅವನು ಸಾಗುತ್ತಿದ್ದ ದಾರಿಯುದ್ದಕ್ಕೂ ಕಣ್ಣ ಮುಂದೆ ಚಿತ್ರಪಟಗಳಂತೆ ಸರಿದು ಹೋಗುತ್ತಿದ್ದ ಬೆಟ್ಟಗುಡ್ಡಗಳೂ, ಗಿಡಮರ ಬಳ್ಳಿಗಳೂ
