ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಪ್ರಬಂಧ

ಪಾರಿಜಾತ ಗಿಡ

ಲಲಿತ ಪ್ರಬಂಧ ಪಾರಿಜಾತ ಗಿಡ ವಿದ್ಯಾ ಶ್ರೀ ಎಸ್ ಅಡೂರ್. ಪಾರಿಜಾತ ಹೂವಿನ ಮರ ಎಂದರೆ ಚಿಕ್ಕಂದಿನಿಂದಲೂ ನನಗೆ ಅದೆಂತದೋ  ಒಂದು  ರೀತಿಯ ಪ್ರೀತಿ.ಅದೊಂದು ದೇವಲೋಕದ ಸುವಸ್ತು, ಕೃಷ್ಣ ತನ್ನ ಮಡದಿ ಸತ್ಯಭಾಮೆಗಾಗಿ ತಂದ ಹೂವು ಎಂದೆಲ್ಲ  ಅರ್ದಂಬರ್ದ ಕಥೆಗಳು ಕಲಸುಮೇಲೋಗರ ವಾಗಿ ಒಂದು ಅಲೌಕಿಕ ಆಕರ್ಷಣೆ ಯಾಗಿ ಬೆಳೆದಿದೆ.             ಕೆಲವು ವರ್ಷಗಳ ಹಿಂದೆ ಎಲ್ಲೋ ನೆಂಟರ ಮನೆಗೆ ಹೋಗಿದ್ದಾಗ ಒಂದು ಗೆಲ್ಲು ಕೇಳಿ ತಂದು ಮನೆಯ ಹಿತ್ತಿಲಲ್ಲಿ ನೆಟ್ಟಿದ್ದೆ. ಕಾಲಮಾನ ಕ್ಕೆ ಅನುಗುಣವಾಗಿ ಅದು ಮಣ್ಣಿನೊಳಗೆ ಬೇರಿಳಿಸಿ, ಚಿಗುರಿ,ನಿಧಾನವಾಗಿ ತನ್ನ ಪಾಡಿಗೆ ಬೆಳೆದು, ಈಗ ಅಗಾಧವಾಗಿ ಹಬ್ಬಿ ನಿಂತಿದೆ. ಸಂಜೆಯಾದರೆ ಸಾಕು ಮೈಯೆಲ್ಲ ಮುತ್ತು ಸುರಿದಂತೆ ಮೊಗ್ಗು ತುಂಬಿಕೊಂಡು ಗಾಳಿಗೆ ತೊಯ್ದಾಡುತ್ತದೆ. ಮುಸ್ಸಂಜೆಯ ವೇಳೆಯಲ್ಲಿ ಮೈಮೇಲೆ ಬೆಣ್ಣೆ ಚೆಲ್ಲಿದಂತೆ, ಮಂಜು ಮುಸುಕಿದಂತೆ, ಹೂವುಗಳೆಲ್ಲಾ ಅರಳಿ ಹೊಳೆಯತೊಡಗುತ್ತವೆ. ಹುಣ್ಣಿಮೆಯ ಮತ್ತು ಅದರ ಆಚೆ ಈಚೆ ಗಿನ ರಾತ್ರಿ ಗಳಲ್ಲಿ ದೇವಲೋಕವೇ ಭೂಮಿಗಿಳಿದಂತೆ ತನ್ನ ಮಂದ ಘಮ ದೊಂದಿಗೆ ಮನಕ್ಕೆ ಮುದ ನೀಡುತ್ತದೆ.             ಹಿಂದೆಲ್ಲ ಮನೆಯ ಹಿತ್ತಿಲಲ್ಲಿ ಇದ್ದ ಈ ಮರ ಈಗ ಕೆಲ ವರ್ಷಗಳ ಹಿಂದೆ ಹಳೆ ಮನೆ ಕೆಡವಿ ಹೊಸ ಮಾಳಿಗೆ ಮನೆ ಕಟ್ಟಿ, ಮಾಳಿಗೆ ಮೇಲೆ ನನಗೊಂದು ರೂಮು ಅಂತ ಮಾಡಿ, ಅದಕ್ಕೊಂದು ಬಾಲ್ಕನಿ ಅಂತ ಮಾಡಿ ಕೊಂಡು,ಸಂಜೆಯ ವೇಳೆಗೆ ಅಲ್ಲಿ ಒಂದು ಕುರ್ಚಿ ಹಾಕಿ ಕೂತರೆ, ಎಲ!ಕೈಗೆಟುಕುವ ದೂರ ದಲ್ಲಿ “ಪಾರಿಜಾತ ಹೂವಿನ ಮರ “.ಆನಂತರದ  ದಿನಗಳಲ್ಲಿ ಅದೆಷ್ಟು ಸಂಜೆ ನಾನು ಅದರ ಸೌಂದರ್ಯ, ಘಮ ಸವಿದಿಲ್ಲ??.ನನ್ನ ರೂಮಿನ ಕಿಟಕಿ ತೆರೆದರೆ ನೇರ ನನ್ನ ಮಂಚಕ್ಕೇ ಕಾಣುವ ಮರ, ಅದೆಷ್ಟು ದಿನ ತನ್ನ ಘಮದಿಂದಲೇ ನನ್ನನ್ನು ಲಾಲಿ ಹಾಡಿ ಮಲಗಿಸಿಲ್ಲ??ನನ್ನ ಅದೆಷ್ಟು ಒಂಟಿ ಸಂಜೆಗಳನ್ನು ನಾನು ಅದರ ಜೊತೆಗೆ ಕಳೆದಿಲ್ಲ??ಲೆಕ್ಕ…….ನನಗೂ ಇಲ್ಲ……ಅದಕ್ಕೂ ಇಲ್ಲ..        ಬೆಳಗಾದರೆ ಸಾಕು, ಸಣ್ಣ ಸಣ್ಣ ಹಕ್ಕಿ ಗಳು  ಅದೇನೋ ದೊಡ್ಡ ಆಲದಮರ ವೇನೋ ಎಂಬಂತೆ, ನನ್ನ ಪಾರಿಜಾತ ಗಿಡದ ಕೊಂಬೆಯಿಂದ ಕೊಂಬೆಗೆ ಹಾರುತ್ತ,ಜಿಗಿಯುತ್ತ ಸಂಭ್ರಮ ಪಡುವಾಗ ಬೆಳ್ಳನೆಯ ಪಾರಿಜಾತ ಹೂವುಗಳು ಹಿಮದ ಮಳೆಯಂತೆ ನೆಲಕ್ಕೆ ಉದುರುವುದ ನೋಡುವುದೇ ಒಂದು ಸೊಬಗು. ನನ್ನ ಬೆಳಿಗಿನ ಅವಶ್ಯ ಕೆಲಸ ಗಳನ್ನು ಪೂರೈಸಿ,ದೇವರ ಪೂಜೆಗೆ ಹೂವು ಕೊಯ್ಯಲು ಹೊರಟು, ಪಾರಿಜಾತ ಮರದ ಅಡಿಗೆ ಬಂದರೆ, ಬೆಳ್ಳನೆಯ ಹೂವಿನ ಹಾಸು ನೆಲದ ತುಂಬೆಲ್ಲಾ…….ಆ ಸುಂದರ ನೋಟ,..ಘಮ..ಮನಸಿಗೆ ನೀಡುವ ಖುಷಿ ಕೋಟಿಕೊಟ್ಟರೂ ಸಿಗದು.                 ಇತ್ತೀಚೆಗೆ ನನ್ನ ಯಜಮಾನರಿಗೆ  ಅಂಗಳ ದೊಡ್ಡದು ಮಾಡುವ ಮನಸ್ಸಾಗಿ, ಮನೆಯ ಸುತ್ತಲ ಗಿಡ ಗಳನ್ನೆಲ್ಲಾ ತೆಗೆಯಬೇಕು ಎಂದುಬಿಟ್ಟರು. ಅವರು ಹೇಳುವಂತೆ ಅದನ್ನು ಕಡಿದು, ಗೆಲ್ಲು ಬೇರೆ ಕಡೆ ಊರಿದರೆ ಇನ್ನೊಂದು ಗಿಡ ತಯಾರಾಗುತ್ತದೆ. ವಿಷಯವೇನೋ ಸರಿ. ಆದರೆ ನಾನು ಹಾಗೆ ಭಾವಿಸಲು ಹೇಗೆ ಸಾಧ್ಯ?? … ಅದರ ಸಾನ್ನಿಧ್ಯ ಕ್ಕೆ ನಾನು ಹೇಗೆ ಚಡಪಡಿಸುತ್ತೇನೋ.ಹಾಗೆಯೇ..ಅದೂ ನನ್ನ ಇರುವಿಕೆಯನ್ನು ಬಯಸುತ್ತದೆ…ಎಂದು ನನಗೆ ಗೊತ್ತಿದ್ದಮೇಲೆ….               ಬದಲಾಗುವ ಜಗತ್ತು, ಕಾಲಮಾನ, ಮನುಷ್ಯನ ನಡುವೆ, ಉದ್ದುದ್ದ…ಅಗಲಗಲ…..ಬೆಳೆದು, ಬಂದು ನನ್ನ ಬಾಲ್ಕನಿ ಬಳಿ ಇಣುಕಲು ಕಲಿತ ಒಂದು ಯಃಕಶ್ಚಿತ್ ‘ಪಾರಿಜಾತ ಗಿಡ ‘ ,ಆಚೆ ಈಚೆ ಹೋಗಲು ಯಾಕೆ ಕಲಿತಿಲ್ಲ!!? ಕಲಿತಿದ್ದರೆ ಸ್ವಲ್ಪ ಬದಿಗೆ ಕರೆದು ಕೂರಿಸಬಹುದಿತ್ತಲ್ಲ, ಎಂದು ಅನಿಸುತ್ತದೆ ನನಗೆ. ಮತ್ತೆ ಅನಿಸುತ್ತದೆ….ಅದರ ಪುಣ್ಯ, ಅದು ಇನ್ನೂ ಪಾರಿಜಾತ ಗಿಡ ವಾಗಿಯೇ ಉಳಿದಿದೆ. ಮನುಷ್ಯನಂತೆ ಬುಧ್ಧಿ ಬೆಳೆದು ಅಸಂಬದ್ಧ ಗಳಲ್ಲಿ ಸಿಕ್ಕಿಹಾಕಿಕೊಂಡಿಲ್ಲ. ಉಳಿದರೂ ಪಾರಿಜಾತ ಗಿಡ ವಾಗಿ ಯೇ…ಅಳಿದರೂ ಪಾರಿಜಾತ ಗಿಡ ವಾಗಿ ಯೇ…             ಮನುಷ್ಯನ ಜೀವನ ತೀರ ವ್ಯಾವಹಾರಿಕ ವಾಗಿ ಉಳಿದಿರುವ, ದಿನಕ್ಕೊಂದು ಐವತ್ತು ಮುಖವಾಡಗಳನ್ನು ಹಾಕಿ ಅಸಲಿಯತ್ತು ಮರೆಮಾಡುವ, ನೈಜತೆಗೆ ಬೆಲೆಯೇ ಇಲ್ಲದ ಇಂದಿನ ಕಾಲಮಾನ ದಲ್ಲಿ “ಪಾರಿಜಾತ ಗಿಡ ,ಪಾರಿಜಾತ ಗಿಡ ವಾಗಿ ಯೇ ಉಳಿದದ್ದು ಅದರ ತಪ್ಪೇ??”ಎಂದು ಯೋಚಿಸತೊಡಗಿದೆ…. ************************************

ಪಾರಿಜಾತ ಗಿಡ Read Post »

ಇತರೆ, ಪ್ರಬಂಧ

ಬೀದಿಯ ಪ್ರಪಂಚ….

ಲಲಿತ ಪ್ರಬಂಧ ಬೀದಿಯ ಪ್ರಪಂಚ…. ಟಿ.ಎಸ್.ಶ್ರವಣಕುಮಾರಿ ಹಾದಿ ಬೀದಿಗಳಿಗೆ ತನ್ನದೇ ಒಂದು ಆಕರ್ಷಣೆಯಿದೆ. ಅದರದ್ದೇ ಒಂದು ಪ್ರಪಂಚ. ಎಂಥ ಅಳುತ್ತಿರುವ ಪುಟ್ಟ ಮಕ್ಕಳನ್ನೂ ಎತ್ತಿಕೊಂಡು ಬೀದಿಗೆ ಕರೆದುಕೊಂಡು ಬಂದರೆ ಕೆಲವೇ ಕ್ಷಣಗಳಲ್ಲಿ ಅವುಗಳ ಅಳು ಮಾಯ. ಅವುಗಳಿಗೆ ತೋರಿಸುವುದಕ್ಕೆ ಇಡಿಯ ಪ್ರಪಂಚವೇ ಅಲ್ಲಿದೆ. “ಪುಟ್ಟೂ ಅಲ್ನೋಡು ಕಾರು.. ಬಂತು ಬಂತು ಬಂತು…. ಈಗ ಸ್ಕೂಟರ್ ನೋಡೋಣ.. ಮಾಮಾ ಬಂದ್ಮೇಲೆ ಸ್ಕೂಟರ್‌ನಲ್ಲಿ ರೌಂಡ್ ಹೋಗ್ತೀಯಾ…  ಇದೇನಿದು..? ಸ್ಕೂಲು ವ್ಯಾನು.. ಮುಂದಿನ್ವರ್ಷದಿಂದ ನೀನೂ ಸ್ಕೂಲಿಗೆ ಹೋಗ್ತೀಯಾ ಅಣ್ಣಾ ತರ…. ಇಲ್ನೋಡು ಮರ.. ಅಬ್ಭಾ! ಎಷ್ಟೊಂದು ಹೂವು ನೋಡು… ಅಲ್ನೋಡು ಕಾಕಿ `ಕಾವ್ ಕಾವ್’ ಅದರ ಬಳಗಾನೆಲ್ಲಾ ಕರೀತಿದೆ. ಹೌದಾ.. ಹಾರಿಹೋಯ್ತಾ ಅದು. ಅಲ್ಲೇ ನೋಡ್ತಾ ಇರು ಈಗ ಗಿಣಿಮರಿ ಬರತ್ತೆ ಅಲ್ಲಿ… ನೋಡ್ದ್ಯಾ ನೋಡ್ದ್ಯಾ ಎಷ್ಟು ಚೆನ್ನಾಗಿದೆ ನೋಡು.. ಈಗ ನೋಡು ಅದರ ಫ್ರೆಂಡೂ ಬಂತು.. ಏನೋ ಮಾತಾಡ್ಕೊಂಡು ಒಟ್ಗೆ ಹಾರೋದ್ವು. ಇಲ್ನೋಡಿಲ್ನೋಡು ಪಕ್ಕದ್ಮನೆ ಮೀನಾ ಅಜ್ಜಿ ಒಣಗಿ ಹಾಕಿರೋ ಬೇಳೇನ ಎಷ್ಟೊಂದು ಗುಬ್ಬಿಗಳು ತಿಂತಾ ಇವೆ.” ಅಷ್ಟರಲ್ಲಿ ಎದುರಂಗಡಿಯ ಬದರಿ ಮಾಮ ಪುಟ್ಟೂನ ಕರೀತಾನೆ “ಬರ್ತೀಯಾ ನಮ್ಮಂಗಡೀಗೆ ಬಿಸ್ಕತ್ತು, ಚಾಕಲೇಟು ಎಲ್ಲಾ ಕೊಡ್ತೀನಿ.” “ಆಮೇಲ್ಬರ್ತೀನಿ” ಅನ್ನೂ ಮಾಮಂಗೆ… ಅಲ್ನೋಡು ತರಕಾರಿ ಗಾಡಿ ಬರ್ತಾ ಇದೆ. ಅಜ್ಜೀನ ಕೇಳ್ಕೊಂಡು ಬರೋಣ್ವಾ ಏನು ತರಕಾರಿ ಬೇಕೂಂತ” ….. ಹೀಗೆ ಮಾತಾಡಿಸ್ತಾ ಇದ್ರೆ ಟೈಂಪಾಸಾಗದೆ ಅಳ್ತಾ ಇದ್ದ ಮಗು ಬೇರೆ ಪ್ರಪಂಚಕ್ಕೇ ಹೋಗ್ಬುಡತ್ತಲ್ವಾ… ಮಗೂನೆ ಯಾಕೆ?!.. ನಮಗೂ ಮನೆಯ ಏಕತಾನತೆ ಬೇಸರ ಬಂದರೆ ಒಂದು ಸ್ವಲ್ಪ ಹೊತ್ತು ಮನೆಯ ಮುಂದೋ ಅಥವಾ ಬಾಲ್ಕನಿಯ ಕಿಟಕಿಯೆದುರೋ ಕೂತು ಹಾಗೇ ಬೀದಿಯ ಕಡೆ ನೋಡುತ್ತಿದ್ದರೆ ಎಷ್ಟು ವೈವಿಧ್ಯಮಯ ಪ್ರಪಂಚದಲ್ಲಿ ನಾವೂ ಕಳೆದುಹೋಗುತ್ತೇವೆ…. ಏಳುವಾಗಲೇ `ಸೊಪ್ಪೋ ಸೊಪ್ಪು’ ಎಂದು ಕೂಗಿಕೊಂಡು ಬರುವ ಮುದುಕನ ಕರೆಯಿಂದಲೇ ನನಗೆ ದಿನವೂ ಬೆಳಗಾಗುವುದು. ಬೆಳಗಿನ ಐದು ಗಂಟೆಗೆ ಮುಲ್ಲಾ `ಏಳಿ ಬೆಳಗಾಯಿತು’ ಎಂದು ಕರೆದಾಗ ಎಚ್ಚರಾದರೂ `ಸ್ವಲ್ಪ ಹೊತ್ತು ಬಿಟ್ಟು ಏಳೋಣ’ ಎಂದು ಮುದುರಿಕೊಂಡವಳನ್ನು ಆರೂವರೆಯಾಯಿತು ಇನ್ನಾದರೂ ಏಳು ಎಂದು ಎಬ್ಬಿಸುವುದು ಸೊಪ್ಪಿನವನ ಕರೆಯೇ. ಎದ್ದ ಐದು ಹತ್ತು ನಿಮಿಷಗಳಲ್ಲಿಯೇ `ಹಾಲು’ ಎಂದು ಕೂಗುತ್ತಾ ಹಾಲಿನ ಪ್ಯಾಕೆಟ್ಟನ್ನು ತಂದಿಡುವ ಬದರಿ. `ಹೂವು’ ಎಂದು ಹೂವಿನ ಸರವನ್ನು ಬಾಗಿಲಿಗೆ ಸಿಕ್ಕಿಸಿ ಹೋಗುವ ಹೂವಮ್ಮ. ಕಾಫಿಯ ಲೋಟ ಹಿಡಿದು ಬರುವ ವೇಳೆಗೆ ದಿನ ಪತ್ರಿಕೆ ಎಸೆದು ಹೋಗುವ ಹುಡುಗ…. ಎಲ್ಲರೂ ಹೊರಗಿನ ಜಗತ್ತಿನ ಸಂಪರ್ಕವಾಹಕರು. ಹೂವಿನ ಗಾಡಿಯ ಹಿಂದೆಯೇ ತೆಂಗಿನ ಕಾಯಿ ಮಾರುವವನು ಬರುತ್ತಾನೆ. ಎಂಟು ಗಂಟೆಗೆ ತರಕಾರಿ ಗಾಡಿಯವರ ಸಾಲು ಶುರುವಾಗುತ್ತದೆ. ಕೆಲವು ಗಾಡಿಗಳು ಒಂದೊಂದೇ ತರಕಾರಿಯದು, ಟೊಮೇಟೋ, ಈರುಳ್ಳಿ, ಅವರೆ ಕಾಯಿ’ ಇಂತವು. ಇನ್ನು ಕೆಲವು ಡಿಪಾರ್ಟ್-ಮೆಂಟಲ್ ಸ್ಟೋರಿನ ಹಾಗೆ ಶುಂಟಿ, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪಿನಿಂದ ಶುರುವಾಗಿ ಎಲ್ಲ ಬಗೆಯ ತರಕಾರಿಗಳನ್ನೂ ಕಣ್ಣಿಗಂದವಾಗುವ ಹಾಗೆ ಜೋಡಿಸಿಕೊಂಡು ಬಂದ ತರಕಾರಿ ಗಾಡಿಗಳು. ಮನೆಯೊಳಗೇ ಇದ್ದರೂ, ಅವರ ಧ್ವನಿಯ ಮೇಲೆ ಇಂತದೇ ಗಾಡಿ ಬಂದಿದೆಯೆಂದು ಅಂದಾಜಾಗುವಷ್ಟರ ಮಟ್ಟಿಗೆ ಅವರ ಧ್ವನಿ ಮೆದುಳಿನೊಳಗೆ ಮುದ್ರಿತವಾಗಿರುತ್ತದೆ. ಹೀಗೇ ದಿನಾ ಬೆಳಗ್ಗೆ ಏಳೂವರೆಗೆ `ರೋಜಾ ಹೂವು ಶ್ಯಾವಂತ್ಗೆ ಹೂವೂ..’ ಅಂತ ಗೊಗ್ಗರು ದನಿಯಲ್ಲಿ ಕೂಗಿಕೊಂಡು ಬರುತ್ತಿದ್ದ ಮುದುಕನ ಧ್ವನಿ ಮೂರ್ನಾಲ್ಕು ದಿನ ಕೇಳದೇ ಏನೋ ಕೊರೆಯಾದಂತೆನಿಸುತ್ತಿತ್ತು. ನಂತರ ಅವನು ಮುಂದಿನ ಬೀದಿಯಲ್ಲಿ ಗಾಡಿ ತಳ್ಳಿಕೊಂಡು ಹೋಗುವಾಗ ಸೇವಾಕ್ಷೇತ್ರ ಆಸ್ಪತ್ರೆಯ ಬಳಿ ಹೃದಯಾಘಾತವಾಗಿ ದಾರಿಯಲ್ಲೇ ಸತ್ತಿದ್ದ ಸುದ್ದಿ ಕೇಳಿದಾಗ ಬಂದುಗಳೊಬ್ಬರನ್ನು ಕಳೆದುಕೊಂಡ ಭಾವ ಬಹಳದಿನಗಳು ಆ ಹೊತ್ತಿಗೆ ಕಾಡುತ್ತಿತ್ತು. ಹನ್ನೊಂದು ಗಂಟೆಯ ವೇಳೆಗೆ ಬರುವ ಎಳನೀರು ಮಾರುವವನು, ಹಣ್ಣಿನ ಬುಟ್ಟಿ ಹೊತ್ತು ಬರುವವನು “ಪಕ್ಕದವ್ರಿಗೆ ಹೇಳ್ಬೇಡಿ. ನಿಮಗಂದ್ರೆ ಎರಡು ರೂಪಾಯಿ ಕಮ್ಮಿಗೇ ಕೊಡ್ತಿದೀನಿ” ಎಂದು ಎಲ್ಲರ ಮನೆಯಲ್ಲೂ ಹಾಗೆ ಹೇಳಿಯೇ ವ್ಯಾಪಾರ ಮಾಡಿದ್ದರೂ, ಅವನು ಹೇಳಿದ್ದು ನಮಗಷ್ಟೇ ನಿಜವೆಂದು ಆ ಕ್ಷಣಕ್ಕಾದರೂ ನಂಬುವಂತಾಗುತ್ತದೆ. ಮಧ್ಯಾನ್ಹದ ವೇಳೆ ಬರುವ ಪೈನಾಪಲ್, ಸೌತೆಕಾಯಿ, ಇಂತವನ್ನು ಹೆಚ್ಚಿಕೊಡುವ ಗಾಡಿಗಳು, ಅಲಂಕಾರಿಕ ಸಸ್ಯಗಳು ಮತ್ತು ಹೂಕುಂಡಗಳನ್ನಿಟ್ಟುಕೊಂಡು ಬರುವ ಕೈಗಾಡಿಗಳು, ಸಾಯಂಕಾಲ ನಾಲ್ಕು ಗಂಟೆಯಿಂದ ಶುರುವಾಗುವ ಮಲ್ಲಿಗೆ ಮೊಗ್ಗು, ಕಳ್ಳೇ ಪುರಿ, ಚುರುಮುರಿ-ಪಾನೀಪೂರಿ ಗಾಡಿ, ಠಣಾ ಠಣಾ ಎಂದು ಸದ್ದು ಮಾಡುತ್ತಾ ಕಡಲೇಕಾಯನ್ನು ಹುರಿಯುವವನ ಗಾಡಿ ಎಲ್ಲರೂ ರಂಗಸ್ಥಳದ ಮೇಲಿನ ತಮ್ಮ ಪಾತ್ರವನ್ನು ಚೊಕ್ಕವಾಗಿ ನಿರ್ವಹಿಸುವವರಂತೆ ಆಯಾಕಾಲಕ್ಕೆ ಬಂದು ಹೋಗುತ್ತಿರುತ್ತಾರೆ. ಇವರೆಲ್ಲಾ ನಿಯತಕಾಲಿಕರಂತಿದ್ದರೆ ಸೋಫಾ ರಿಪೇರಿ, ಛತ್ರಿ, ಪಾದರಕ್ಷೆ ರಿಪೇರಿಯವರು, ಚಾಕು, ಈಳಿಗೆಗಳನ್ನು ಚೂಪು ಮಾಡುವವರು, ಚಾಪೆ, ನೆಲವಾಸು, ಮತ್ತು ಕಾರ್ಪೆಟ್ಟುಗಳನ್ನು ಮಾರುವವರು, ಪ್ಲಾಸ್ಟಿಕ್, ಅಲ್ಯುಮಿನಿಯಂ, ಮತ್ತು ಸ್ಟೀಲ್ ಪಾತ್ರೆ ಮಾರಾಟಗಾರರು, ಕಡೆಗೆ ರಂಗೋಲಿ, ಪೊರಕೆ, ಮಕ್ಕಳ ಬಟ್ಟೆಗಳು, ಆಟಿಕೆಗಳು, ಪೆಟ್ಟಿಕೋಟು ಇತ್ಯಾದಿಗಳನ್ನು ಮಾರುವವರು ಅತಿಥಿ ನಟರಂತೆ ಆಗೀಗ ಬಂದು ತಮ್ಮ ದರ್ಶನ ಭಾಗ್ಯವನ್ನು ಇತ್ತು ಹೋಗುತ್ತಿರುತ್ತಾರೆ. ಇದಷ್ಟೇ ಬೀದಿ ಪ್ರಪಂಚವೇ? ಖಂಡಿತಾ ಅಲ್ಲ. ಈಗ ಅಂಚೆಯಣ್ಣ ಇಲ್ಲ ಬಿಡಿ; ಅವನಾದರೆ ಒಂದು ನಿಗದಿತ ಸಮಯದಲ್ಲಾದರೂ ಬರುತ್ತಿದ್ದ. ಈಗ ಅವನ ಬದಲಿಗೆ ಕೊರಿಯರ್ ಹುಡುಗರು ಹೊತ್ತು ಗೊತ್ತಿಲ್ಲದೆ ಬಾಗಿಲು ತಟ್ಟುತ್ತಾರೆ. ಮೊದಲಿಗೆ ದಿನವೂ ಬರುತ್ತಿದ್ದ ಅಂಚೆಯಣ್ಣ ಮನೆಯವರೆಲ್ಲರಿಗೆ ಪರಿಚಿತನಾಗಿರುತ್ತಿದ್ದ. ಎಷ್ಟೋ ಹಳ್ಳಿಗಳಲ್ಲಿ, ಸಣ್ಣ ಪುಟ್ಟ ಊರುಗಳಲ್ಲಿ ಸಂದೇಶವಾಹಕನಾಗಿಯೂ ಇರುತ್ತಿದ್ದ. ಓದು ಬಾರದವರಿಗೆ ಪತ್ರದಲ್ಲಿದ್ದುದನ್ನು ಓದಿ ಹೇಳುತ್ತಿದ್ದ. ಬಿಸಿಲು ಹೊತ್ತಿನಲ್ಲಿ ಬಂದವನಿಗೆ ಒಂದು ಲೋಟ ಪಾನಕವೋ, ಮಜ್ಜಿಗೆಯೋ ಕೊಡುವ ಪರಿಪಾಠವೂ ಕೆಲವು ಮನೆಗಳಲ್ಲಿರುತ್ತಿತ್ತು. ಬಂಧುವಲ್ಲದಿದ್ದರೂ ಆತ ಮಿತ್ರರ ಗುಂಪಿನಲ್ಲಿ ಸೇರಿ ಹೋಗುತ್ತಿದ್ದ. ಈಗಲಾದರೋ ದಿನಕ್ಕೊಬ್ಬ ಕೊರಿಯರ್ ಹುಡುಗರು. ಯಾರು ನಿಜವಾದವರೋ, ಯಾರು ಮೋಸಗಾರರೋ ಒಂದೂ ಅರಿವಾಗದೆ ಅವರನ್ನು ಬಾಗಿಲ ಹೊರಗೇ ನಿಲ್ಲಿಸಿ ಗ್ರಿಲ್ ಬಾಗಿಲಿನ ಕಿಂಡಿಯಿಂದಲೇ ಮಾತಾಡಿಸಿ ಲಕೋಟೆಯಾದರೆ ಅಲ್ಲಿಂದಲೇ ತೆಗೆದುಕೊಂಡು, ಪಾರ್ಸೆಲ್ ಆದರೆ, ಅದರ ಹಿಂದು ಮುಂದನ್ನೆಲ್ಲಾ ವಿಚಾರಿಸಿಕೊಂಡು ನಂತರ ಬಾಗಿಲನ್ನು ಸ್ವಲ್ಪವೇ ತೆರೆದು ಡಬ್ಬಿಯನ್ನು ತೆಗೆದುಕೊಂಡ ತಕ್ಷಣ ಮತ್ತೆ ಬಾಗಿಲು ಮುಚ್ಚುವುದು ಸಹಜವೇ ಆಗಿದೆ. ಇನ್ನು ಮನೆ ಬಾಗಿಲು ತಟ್ಟುವ ಮಾರಾಟಗಾರರದಂತೂ ಇನ್ನೊಂದು ಉಪಟಳ. ಪುಸ್ತಕ, ದಿನೋಪಯೋಗಿ ವಸ್ತುಗಳಿಂದ ಹಿಡಿದು ಮಕ್ಕಳ ಡೈಪರ್ ವರೆಗೆ ಎಲ್ಲವನ್ನೂ ಮನೆಬಾಗಿಲಿಗೆ ತರುತ್ತಾರೆ. ನಕಲಿಯೆಷ್ಟೋ, ಅಸಲಿಯೆಷ್ಟೋ ದೇವನೇ ಬಲ್ಲ! ಬೀದಿಯ ಮೇಲೆ ಬರುವ ಮೆರವಣಿಗೆ, ದೇವರ ಉತ್ಸವಗಳೆಂದರೆ ಮಕ್ಕಳಾದಿಯಾಗಿ ದೊಡ್ಡವರವರೆಗೂ ಎಲ್ಲರಿಗೂ ಆಕರ್ಷಣೆ. ಅಂತಹ ಸದ್ದು ಕಿವಿಗೆ ಬಿದ್ದಿತೆಂದರೆ ಸಾಕು… ಮನೆಯಲ್ಲಿರುವವರೆಲ್ಲರೂ ಬೀದಿಯ ಕಡೆಗೇ… ನಾನು ಎಳೆಯದರಲ್ಲಿ ನೋಡುತ್ತಿದ್ದ ಮಾರ್ಗಶಿರ ಮಾಸದ ಬೆಳಗಿನ ಝಾವದಲ್ಲಿ ತಾಳ ತಟ್ಟಿಕೊಂಡು ತನ್ನದೇ ಒಂದು ಅಲೌಕಿಕ ಛಾಪನ್ನು ನಿರ್ಮಿಸಿಕೊಂಡು ಬರುತ್ತಿದ್ದ ದತ್ತ ಜಯಂತಿಯ ಭಜನೆ, ರಥಸಪ್ತಮಿಯಲ್ಲಿ ಸುಶ್ರಾವ್ಯ ವಾಲಗದೊಂದಿಗೆ ಬರುತ್ತಿದ್ದ ತೇರು, ಆಡಿ ಕೃತ್ತಿಕೆಯ ದಿನದಂದು ಗುಡ್ಡೇಕಲ್ಲಿನ ಸುಬ್ರಹ್ಮಣ್ಯೇಶ್ವರನ ದೇವಸ್ಥಾನಕ್ಕೆ `ಹರೋಹರ’ ಎಂದು ಕೂಗುತ್ತಾ ಬೇವಿನ ಮತ್ತು ಅರಿಶಿನ ಬಣ್ಣದ ಉಡುಗೆಯುಟ್ಟು ಕಾವಡಿ ಎತ್ತಿಕೊಂಡು ಹೋಗುತ್ತಿದ್ದ, ಕೆಲವರು ಭೀಕರವಾಗಿ ಕೆನ್ನೆಯನ್ನೂ, ನಾಲಗೆಯನ್ನೂ ಕಂಬಿಯಿಂದ ಚುಚ್ಚಿಕೊಂಡು, ಮತ್ತೆ ಕೆಲವರು ಬೆನ್ನಿಗೆ ಕೊಕ್ಕೆಯನ್ನು ಸಿಕ್ಕಿಸಿಕೊಂಡು ಎಳೆದುಕೊಂಡು ಹೋಗುತ್ತಾ ನಮ್ಮ ಮನದಲ್ಲಿ ಭಕ್ತಿಯೊಂದಿಗೆ ಭಯವನ್ನೂ ಹುಟ್ಟಿಸುತ್ತಿದ್ದ ಭಕ್ತರ ಗುಂಪು… ವಿಜಯ ದಶಮಿಯ ದಿನ ಊರಿನ ಎಲ್ಲ ದೇವರೂ ಬನ್ನಿ ಕಡಿಯುತ್ತಿದ್ದ ನೆಹರೂ ಮೈದಾನಕ್ಕೆ ಮೆರವಣಿಗೆ ಹೋಗುತ್ತಿದ್ದ ದೃಶ್ಯ…  ಎಲ್ಲವೂ ನನ್ನ ನೆನಪಿನ ಕೋಶದಲ್ಲಿ ಭದ್ರವಾಗಿ ಬೇರುಬಿಟ್ಟು ಕುಳಿತುಬಿಟ್ಟಿವೆ. ಹೀಗೇ ಒಂದು ಆಡಿ ಕೃತ್ತಿಕೆಯ ದಿನ ನಾವೆಲ್ಲರೂ ಕಾವಡಿಯ ಮೆರವಣಿಗೆಯನ್ನು ನೋಡಲು ಬೀದಿಗೆ ಬಂದು ನಿಂತಿದ್ದೆವು. ನಮ್ಮ ಮನೆಯ ಕೆಲಸದಾಕೆ ಮುನಿಯಮ್ಮನೂ ನಮ್ಮ ಜೊತೆಗೇ ನಿಂತಿದ್ದವಳಿಗೆ ಅದೇನಾಯಿತೋ ಇದ್ದಕ್ಕಿದ್ದಂತೆ ಅರೆಗಣ್ಣಿನಲ್ಲಿ ಎರಡೂ ಕೈಗಳನ್ನು ತಲೆಯಮೇಲೆ ಜೋಡಿಸಿ ಮುಗಿದುಕೊಂಡು ಮೆರವಣಿಗೆಯ ಹಿಂದೆಯೇ ಓಡಿಹೋದಳು. ನಾವೆಲ್ಲರೂ `ಮುನಿಯಮ್ಮಾ ಮುನಿಯಮ್ಮಾ’ ಎಂದು ಜೋರಾಗಿ ಕರೆಯುತ್ತಲೇ ಇದ್ದೇವೆ; ಅವಳಿಗೆ ಕೇಳಿಸಿದ್ದರೆ ತಾನೆ! ಸ್ವಲ್ಪ ಹೊತ್ತು ಕಾದು ನಿಂತಿದ್ದು ನಾವೆಲ್ಲಾ ಮನೆಯೊಳಗೆ ಬಂದವು. ಅದೆಷ್ಟು ದೂರ ಹೋಗಿದ್ದಳೋ… ಒಂದು ಗಂಟೆಯ ನಂತರ ಅವಳೂ ವಾಪಸ್ಸು ಬಂದಳು. ಬಹಳ ಆಯಾಸಗೊಂಡಿದ್ದಳು. ಅಮ್ಮನಿಗೆ ಅವಳು ಸಾಕ್ಷಾತ್ ಸುಬ್ರಹ್ಮಣ್ಯೇಶ್ವರನೇ ಅನ್ನಿಸಿಬಿಟ್ಟಿತೋ ಏನೋ..  ಅವಳನ್ನು ಕೂರಿಸಿ ಒಂದು ಲೋಟ ತಣ್ಣಗೆ ಪಾನಕ ಮಾಡಿಕೊಟ್ಟು “ಸುಸ್ತಾಗಿದ್ದರೆ ಮನೆಗೆ ಹೋಗಿ ಮಲಗಿಕೋ. ನಾಳೆ ಬಂದು ಬಟ್ಟೆ ಒಗೆಯುವೆಯಂತೆ” ಎಂದರು. ಸ್ವಲ್ಪ ಹೊತ್ತು ಕೂತಿದ್ದವಳು ಮುನಿಯಮ್ಮನಾಗೇ `ಈಗ ಸರಿಹೋಯ್ತು’ ಎನ್ನುತ್ತಾ ತನ್ನ ಕೆಲಸಕ್ಕೆ ಎದ್ದಳು. ನಮಗೆಲ್ಲಾ ಭಕ್ತಿಯ ಈ ಮುಖದ ದರ್ಶನವಾಗಿತ್ತು! ಈಗ ಬೆಂಗಳೂರಿನಲ್ಲಿ ನಾವಿರುವ ರಸ್ತೆಯ ಒಂದು ಅಡ್ಡರಸ್ತೆಯಲ್ಲಿ ಗಂಗಮ್ಮನ ಗುಡಿಯಿದೆ. ಅದರ ಮುಂದಿನ ರಸ್ತೆಯಲ್ಲಿ ಮಸೀದಿಯಿದೆ. ಅಣ್ಣಮ್ಮ ದೇವಿಯ ಭಕ್ತಮಂಡಳಿ ನಮ್ಮ ಮನೆಯ ಪಕ್ಕಕ್ಕೇ ಇದೆ. ಮನೆಯ ಹಿಂಬಾಗದಲ್ಲಿ ವೆಂಕಟರಮಣನ ದೇವಸ್ಥಾನವಿದೆ. ಹಾಗಾಗಿ ಆಗಾಗ ಎಷ್ಟೆಲ್ಲಾ ಮೆರವಣಿಗೆಗಳನ್ನು ನೋಡುವ ಭಾಗ್ಯ ನಮ್ಮದಾಗಿದೆ. ಗಂಗಮ್ಮನ ಹೂವಿನ ಕರಗ, ರಥೋತ್ಸವ, ವೆಂಕಟರಮಣನ ಕಡೆಯ ಶ್ರಾವಣ ಶನಿವಾರದ ಉತ್ಸವ, ಮುಸ್ಲಿಮರ ಹಬ್ಬಗಳ ಹಲವು ಬಗೆಯ ಉತ್ಸವಗಳು, ಮೆರವಣಿಗೆಗಳು, ವರ್ಷಕ್ಕೊಮ್ಮೆ ಚೈತ್ರಮಾಸದಲ್ಲೋ, ವೈಶಾಖ ಮಾಸದಲ್ಲೋ ನಮ್ಮ ಮನೆಯ ಪಕ್ಕದಲ್ಲೇ ಮೂರು ದಿನ ಠಿಕಾಣಿ ಹಾಕುವ ಅಣ್ಣಮ್ಮ.. ಶುಕ್ರವಾರ ಆಕೆ ಬರುವುದು. ಅದಕ್ಕೆ ಪೂರ್ವಭಾವಿಯಾಗಿ ಆ ಸೋಮವಾರದಿಂದಲೇ ಇಡೀ ಬೀದಿ ಅಲಂಕರಿಸಿಕೊಂಡು ನಿಂತಿರುತ್ತದೆ. ಬೀದಿಯ ಮುಂಬಾಗದಲ್ಲಿ ವಿದ್ಯುದ್ದೀಪಗಳಲ್ಲಿ ಅಣ್ಣಮ್ಮನ ದೊಡ್ಡ ಚಿತ್ರ, ಬೀದಿಯುದ್ದಕ್ಕೂ ತೋರಣದಂತೆ ಬಣ್ಣ ಬಣ್ಣದ ವಿದ್ಯದ್ದೀಪಗಳು, ಮಾವು ಬೇವಿನ ತೋರಣಗಳು, ಬಾಳೆಯ ಕಂಬದ ಅಲಂಕರಣ, ಇನ್ನು ದೇವಿಯನ್ನು ಕೂರಿಸುವ ವೇದಿಕೆಯಂತೂ ಗುರುವಾರದಿಂದಲೇ ವೈಭವವಾಗಿ ಸಿದ್ಧವಾಗಿರುತ್ತದೆ. ಅಣ್ಣಮ್ಮ ಬೀದಿಯ ಕೊನೆಯಲ್ಲಿರುವಾಗಲೇ ಅವಳನ್ನು ಎದುರುಗೊಳ್ಳಲು ನಮ್ಮ ಪಕ್ಕದ ಅಡ್ಡರಸ್ತೆಯಲ್ಲಿರುವ ಗಂಗಮ್ಮದೇವಿಯ ಉತ್ಸವಮೂರ್ತಿ ಗೆಳತಿಯನ್ನು ಕರೆದುಕೊಂಡು ಬರಲು ಹೊರಡುತ್ತದೆ. ಇಬ್ಬರೂ ಒಟ್ಟಿಗೆ ಅಲ್ಲಿಂದ ಬರುತ್ತಾರೆ. ದೇವಿಯರ ಮುಂದೆ ಪೂರ್ಣಕುಂಭ ಹೊತ್ತ ಸಿಂಗಾರಗೊಂಡ ಮಹಿಳೆಯರು, ಬಾಜಾ ಬಜಂತ್ರಿ, ಆರತಿಗಳು, ಕಿವಿ ಗಡಚಿಕ್ಕುವ ಅಣ್ಣಮ್ಮನ ಭಕ್ತಿಯ ಹಾಡುಗಳು.. ಅದೇನು ಸಂಭ್ರಮ… ಮೂರುದಿನಗಳೂ ಮನೆಯ ಮುಂದೆ ಹಬ್ಬವಿದ್ದಂತೆ. ಮಾರನೆಯ ದಿನ ಅಣ್ಣಮ್ಮ ದೇವಿ ಇಲ್ಲಿನ ಆಸುಪಾಸಿನ ಬೀದಿಯಲ್ಲಿರುವ ಅರವತ್ತು ಎಪ್ಪತ್ತು ಮನೆಗಳಿಗೆ ವರ್ಷಕ್ಕೊಮ್ಮೆ ಬರುವ ಮಗಳಂತೆ ಹೋಗಿ ಪೂಜೆ ಮಾಡಿಸಿಕೊಂಡು ಉಡಿತುಂಬಿಸಿಕೊಂಡು ಬರುತ್ತಾಳೆ. ಅಂದು ಸಂಜೆ ದೇವಿಯ ಎದುರಿಗೆ ಮೂರು ಬೀದಿ ಕೂಡುವಲ್ಲಿ ಒಂದು ಸ್ಟೇಜನ್ನು ಹಾಕಿ ನಾಟಕವೋ, ಆರ್ಕೆಸ್ಟ್ರಾನೋ ಏನಾದರೊಂದು ನಡೆಯುತ್ತಿರುತ್ತದೆ. ನಮ್ಮ ಮನೆಯ ಕಾರ್ ಗ್ಯಾರೇಜೇ ಅವರಿಗೆ ಗ್ರೀನ್ ರೂಮು. ಪಕ್ಕದ ಬೀದಿಗಳಲ್ಲಿರುವ ಮುಸಲ್ಮಾನ್ ಬಂಧುಗಳೂ ಹೆಂಗಸರು, ಮಕ್ಕಳಾದಿಯಾಗಿ ಇದರಲ್ಲಿ ಮತ್ತು ಮಾರನೆಯ ದಿನ ನಡೆಯುವ ರಾಗಿ ಅಂಬಲಿ ಮತ್ತು ಅನ್ನ ಸಂತರ್ಪಣೆಗಳಲ್ಲಿ ಪಾಲುಗೊಳ್ಳುತ್ತಾರೆ. ಎಲ್ಲರನ್ನೂ ಒಂದುಗೂಡಿಸಿ ಸಂತೋಷ ಪಡಿಸುತ್ತಾ ಪರಸ್ಪರ ಬಾಂಧವ್ಯ ವೃದ್ಧಿಸುವುದರಲ್ಲಿ ಬೀದಿಯ ಪಾತ್ರವೇನು ಕಮ್ಮಿಯೇ?! ಬೀದಿ ಜಗಳಗಳ ಮಹಾತ್ಮೆ ಅತ್ಯಂತ ಪುರಾತನವಾದದ್ದು. ಬೀದಿ ಬದಿಯಲ್ಲಿ ನೀರಿಗಾಗಿ ಕಾದಾಡುವುದು; ಅಕ್ಕಪಕ್ಕದವರ ಜಗಳ ಬೀದಿಗೆ ಬರುವುದು ಇವೆಲ್ಲಾ ಬಹಳ ಸಹಜವಾದ ಕ್ರಿಯೆಗಳು. ಇಬ್ಬರೂ ಅಮ್ಮ, ಅಪ್ಪ, ಅಜ್ಜಿ, ತಾತ ಎಲ್ಲರ ಜಾಯಮಾನವನ್ನೂ ನೀವಾಳಿಸುತ್ತಾ ಕೂಗಾಡುತ್ತಿದ್ದರೆ, ಅಲ್ಲಿಯವರೆಗೆ ಗೆಳೆಯರಾಗಿದ್ದ ಅವರಿಬ್ಬರ ಮನೆಯ ನಾಯಿಗಳೂ ತಮ್ಮ ಮಾಲೀಕರನ್ನು ಅನುಕರಿಸಿ `ಭೌ…ವೌ…’ ಎಂದು ಹಿಮ್ಮೇಳ ನೀಡುತ್ತಿದ್ದರೆ ಒಂದಷ್ಟು ಕಾಲ ಜನರೆಲ್ಲಾ ಮನರಂಜನೆಯನ್ನು ತೆಗೆದುಕೊಂಡು ನಂತರ ಯಾರೋ ಒಬ್ಬರು ಹಿರಿಯರು ಇಬ್ಬರ ಮಧ್ಯ ನಿಂತು ಇಬ್ಬರಿಗೂ ಸಮಾಧಾನ

ಬೀದಿಯ ಪ್ರಪಂಚ…. Read Post »

ಇತರೆ, ಪ್ರಬಂಧ

ಹೊರಗೋಡೆ

ಪ್ರಬಂಧ ಹೊರಗೋಡೆ ಗೋಡೆ ಎಂಬುದು ಹಲವಾರು ವಸ್ತುಗಳು, ವಿಶೇಷಗಳು ಹಾಗೂ ವಿಷಯಗಳನ್ನು ಮುಚ್ಚಿಡಬಹುದಾದ ಇಟ್ಟಿಗೆ, ಮರಳು, ಸುಣ್ಣ, ಬೆಲ್ಲ, ಸಿಮೆಂಟುಗಳಿಂದ ಕಟ್ಟಿದ ಒಂದು ರಚನೆ ಎಂದುಕೊಳ್ಳುವುದು ಒಂದು ಬಗೆಯಲ್ಲಿ ಒಪ್ಪಬಹುದಾದ ವಿಷಯವಾದರೂ, ಹಲವಾರು ಕಾರಣಗಳಿಂದ ಗೋಡೆಗಳು ನಮ್ಮನ್ನು ಪೂರ್ವಜರೊಂದಿಗೆ ಬೆಸೆಯುತ್ತಲೇ ಪ್ರಸ್ತುತ ಜೀವನದಲ್ಲಿ ಆಸಕ್ತಿ ಮೂಡಿಸುತ್ತಾ ಹೋಗುತ್ತವೆ. ಪ್ರತಿಯೊಂದು ಗೋಡೆಯನ್ನು ಕಟ್ಟಲು ಆರಂಭಿಸಿದ ಕೂಡಲೇ ಹೊರಗೋಡೆ ಹಾಗೂ ಒಳಗೋಡೆ ಎರಡೂ ಜೊತೆ ಜೊತೆಗೆ ನಿರ್ಮಾಣವಾಗುತ್ತಾ ಸಾಗುತ್ತದೆ. ನಾಗರೀಕತೆಯ ಆರಂಭವನ್ನು ನಾವು ಅರಿಯಲು ಹಾಗೂ ನಮ್ಮ ಪೂರ್ವಜರ ಇರುವನ್ನು ನಂಬಲು ಅವರುಗಳು ಕಟ್ಟಿ, ಬಿಟ್ಟು ಹೋಗಿರುವ ಗೋಡೆಗಳೇ ಸಾಕ್ಷಿ. ಅಂತೆಯೇ ಶತಮಾನಗಳೇ ಕಳೆದರೂ ಇನ್ನೂ ಸುಸ್ಥಿತಿಯಲ್ಲಿರುವಂಥಹ ಗೋಡೆಗಳಿಗೆ ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳನ್ನೇ ಬಳಸಿಕೊಂಡು, ಸಾವಿರಾರು ವರ್ಷಗಳಷ್ಟು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಿರುವುದು ಮಾತ್ರ ಒಟ್ಟೊಟ್ಟಿಗೇ ಭೂಮಿಯ ಗುಣ ಹಾಗೂ ನಮ್ಮ ಪೂರ್ವಜರ ಬುದ್ಧಿವಂತಿಕೆಯನ್ನು ಅನಾವರಣಗೊಳಿಸುತ್ತದೆ. ತಮ್ಮ ವೈಯಕ್ತಿಕ ಜೀವನವನ್ನು ಅನ್ಯರಿಗೆ ಕಾಣಿಸುವ ಅಗತ್ಯವಿಲ್ಲದಾಗ ಸುರಕ್ಷತೆಯ ಹಾಗೂ ಸಂರಕ್ಷಿಸಿಕೊಳ್ಳುವ ದೃಷ್ಟಿಯಿಂದ ಸಿಂಧೂ ನಾಗರೀಕತೆಯ ಕಾಲದಲ್ಲಿಯೇ ಗೋಡೆಗಳನ್ನು ಕಟ್ಟಿರುವ ಸಾಕ್ಷಿ ಇಂದಿಗೂ ಹರಪ್ಪಾ ಹಾಗೂ ಮೊಹಾಂಜದಾರೋ ರೂಪದಲ್ಲಿ ನಮ್ಮ ಕಣ್ಣ ಮುಂದಿದೆ ಎನ್ನುವುದು, ಮಾನವರಿಗೆ ಗೋಡೆಗಳ ಅಗತ್ಯ ಹಾಗೂ ಅವರುಗಳು  ಅನಾದಿಕಾಲದಿಂದಲೂ ಗೋಡೆಗಳಿಗೆ ನೀಡುತ್ತಿದ್ದ ಮಹತ್ವ ಹಾಗೂ ಪ್ರಾಮುಖ್ಯತೆಯನ್ನು ಅರಿಯಲು ಸಹಕಾರಿಯಾಗಿದೆ. ಅಂತೆಯೇ ಕೋಟೆಯ ಗೋಡೆಗಳೂ ಸಹ ಸಾವಿರಾರು ವರ್ಷಗಳೇ ಕಳೆದರೂ, ಕೆಲವು ಅವಶೇಷ ಸ್ಥಿತಿ ತಲುಪಿ ಇಂದಿಗೂ ನೋಡಬಹುದಾದ ಗೋಡೆಗಳು ಎಂಥಹವರಲ್ಲೂ ಭೂಮಿಯ ಮೇಲೆ ಬಾಳಿ, ಆಳಿದ ನಂತರ ಅಳಿದ ಪ್ರತಿಯೊಂದು ಪರಂಪರೆಯನ್ನು ನಮ್ಮ ಕಣ್ಮುಂದೆ ತರುವ ಒಂದು ಅದ್ಭುತವೇ ಸರಿ. ಈಜಿಪ್ಟಿನ ಪೂರ್ವಜರು ನಿರ್ಮಿಸಿರುವ ಪಿರಾಮಿಡ್ಡುಗಳೂ, ಚೈನಾ ಗೋಡೆಗಳೂ ಸಹ ಇದನ್ನು ಸಾಕ್ಷೀಕರಿಸುತ್ತದೆ ಎಂದರೆ ಅತಿಶಯೋಕ್ತಿಯಲ್ಲ. ಯಾವುದೋ ಕಾಲದಲ್ಲಿ ಕಟ್ಟಿದ ಗೋಡೆಯನ್ನು ಇಂದಿಗೂ ಹೊಡೆದುಹಾಕುವುದೋ ಅಥವಾ ಇನ್ನಷ್ಟು ಬೆಳೆಸುವುದೋ ಸಾಧ್ಯವಾಗದೇ ಯಥಾಸ್ಥಿತಿ ಕಾಪಾಡಿಕೊಂಡು, ಇಂದು ದೇಶ ದೇಶಗಳ ನಡುವೆ ಸ್ವಾಭಿಮಾನ ಹಾಗೂ ಪ್ರತಿಷ್ಠೆಯ ಪ್ರತೀಕವಾಗಿಯೂ ಉಳಿದುಕೊಂಡು ಬಂದಿರುವ ಅನೇಕ ಉದಾಹರಣೆಗಳು ಸಹಾ ಇಲ್ಲದೆ ಇಲ್ಲ. ವೈರಿಗಳು ಗಡಿ ನುಸುಳದಂತೆ ಹಾಗೂ ಒಂದು ದೇಶದಲ್ಲಿ ನಡೆಯುವ ವಿಷಯಗಳನ್ನು ಗುಟ್ಟಾಗಿಡುವ ಉದ್ದೇಶದಿಂದ ಯಾವ ದೇಶವೇ ಗೋಡೆಯನ್ನು ಕಟ್ಟಿದರೂ, ಉಭಯ ದೇಶಗಳಿಗೂ ಗೋಡೆಯಾಚಿನ ಪ್ರದೇಶ “ಹೊರಗೋಡೆ” ಆಗಿರುತ್ತದೆ. ಇಂದಿಗೂ ನೋಡಲು ಲಭ್ಯವಿದ್ದು, ಗೋಡೆಗಳೇ ಹೇಳುವ ಕಥೆಯನ್ನು ತಿಳಿಯುತ್ತಲೇ, ಪ್ರಸ್ತುತ ನಾಗರೀಕರು ಗೋಡೆಯನ್ನು ಕಟ್ಟುವ ಹಾಗೂ ನಿರ್ವಹಿಸುವ ಅದರಲ್ಲಿಯೂ ಹೊರಗೋಡೆಯ ಬಗ್ಗೆ ತಿಳಿಯಬೇಕಾಗುತ್ತದೆ. ಬಹುತೇಕ ಹೊರ ಪ್ರಪಂಚದಿಂದ ನಮ್ಮನ್ನು ಬೇರ್ಪಡಿಸುವ ಗೋಡೆಗಳು ಕೆಲವರಿಗೆ ಸ್ವಂತದ್ದಾದರೆ ಹಲವರಿಗೆ ಬಾಡಿಗೆ ಅಥವಾ ಭೋಗ್ಯದವು. ಗೋಡೆಗಳನ್ನು ಕೂಡಿಸಿ, ಕೋಣೆಗಳನ್ನು ಬೇರ್ಪಡಿಸಿದ ಮನೆಗೆ ಸೇರಿಕೊಂಡು ಬಾಗಿಲು ಹಾಕಿದರೆ ಗೋಡೆಯಾಚೆ ನಡೆಯಬಹುದಾದ, ನಡೆದುಹೋದ ಹಾಗೂ ನಡೆಯುತ್ತಿರುವ ಎಷ್ಟೋ ವಿಷಯಗಳು ತಮ್ಮ ಗಣನೆಗೆ ಬರುವುದಾಗಲೀ ಅಥವಾ ತಮ್ಮ ಕಲ್ಪನೆಗೆ ಎಟುಕುವುದಾಗಲೀ ಸಾಧ್ಯವೇ ಇರುವುದಿಲ್ಲ. ಒಬ್ಬ ಕಳ್ಳನು ಕದ್ದ ವಸ್ತುಗಳನ್ನು ತಂದು ಒಂದು ಬಂಗಲೆಯ ಹಿಂಭಾಗದಲ್ಲಿ ಶೇಖರಿಸಿಟ್ಟು, ಗೋಡೆಗೆ ಒಲೆ ನಿರ್ಮಿಸಿ, ಅಡುಗೆ ಮಾಡಿಕೊಂಡು ದಿನ ಕಳೆಯುತ್ತಿದ್ದ ಘಟನೆಯು ಒಂದೊಮ್ಮೆ ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯ ನಾಗರಿಕರ ನಿದ್ದೆ ಕೆಡುವಂತೆ ಮಾಡಿತ್ತು. ಆ ಮಟ್ಟಿಗೆ ನಮ್ಮದೇ ಮನೆಯ ಹೊರಗೋಡೆಯಲ್ಲಿ ನಡೆಯುವ ಹಲವಾರು ವಿಷಯಗಳು ನಮ್ಮ ಗಮನಕ್ಕೆ ಬಂದೇ ಇರುವುದಿಲ್ಲ ಎನ್ನುವುದು ವಿಪರ್ಯಾಸ. ಮೊದಲೆಲ್ಲಾ ನಮ್ಮ ಹೊರ ಗೋಡೆಯಲ್ಲಿ ನಡೆಯುವ ಹಲವಾರು ಘಟನೆಗಳು ಬೇರೆಯವರಿಗೆ ಕಾಣಬಹುದಿತ್ತಾಗಲೀ, ನಮಗೆ ತಿಳಿಯಬೇಕಿದ್ದರೆ, ಸ್ವತಃ ನಾವು ಹೊರ ಬಂದು ನೋಡಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಬೆಳೆಯುತ್ತಿರುವ ತಂತ್ರಜ್ಞಾನವು ನಮ್ಮದೇ ಗೋಡೆಯಾಚೆ ನಡೆಯುವ ವಿದ್ಯಮಾನಗಳ ಮಾಹಿತಿಯನ್ನು ಮನೆಯೊಳಗೆ ಕುಳಿತು ಯಾರಾದರೂ ಗೋಡೆ ಹತ್ತಿ ಮಹಡಿ ತಲುಪುವುದನ್ನೂ ತಿಳಿದುಕೊಳ್ಳುವಷ್ಟು ಬೆಳೆದಿದೆ. ಮನೆಯ ಹೊರಗೋಡೆಗೆ ವಿಶೇಷವಾದ ಹೆಸರಿರುವುದಿಲ್ಲವಾಗಿ, ಕಟ್ಟಿಗೆ ಒಟ್ಟಿದ್ದರೆ ಕಟ್ಟಿಗೆಗೋಡೆ, ಹಿತ್ತಲಿಗೆ ತೆರೆದುಕೊಂಡಿದ್ದರೆ ಹಿತ್ತಲಗೋಡೆ, ಬೀದಿಕಡೆಗಿದ್ದರೆ ಬೀದಿಗೋಡೆ, ಅಡಿಗೆಮನೆಯ ಹೊರಗೋಡೆ ಹೀಗೆ ಕರೆಯುವುದು ಸಾಮಾನ್ಯ. ಕಾಂಪೌಂಡಿನ ಹೊರ ಗೋಡೆಯಾದರಂತೂ ನಾವೇ ಕಟ್ಟಿಸಿದ ಗೋಡೆಯನ್ನೇ ಅಕ್ಕಪಕ್ಕದವರ ಮನೆಯವರ ಹೆಸರಿನೊಂದಿಗೆ ಗುರುತಿಸುತ್ತೇವೆ. “ಮಾಚಿ ಮನೆ ಕಂಪೌಂಡಿನ ಒಳಗೆ ಇಲಿ ಸತ್ತುಹೋಗಿದೆ” ಅನ್ನುವುದು. ಅಥವಾ “ಮಂಜು ಮನೆ ಕಂಪೌಂಡಿನಲ್ಲಿ ಮಲ್ಲಿಗೆ ಹೂ ಬಿಟ್ಟಿದೆ” ಎಂದು ಆ ಬದಿ ಯಾರಿದ್ದರೆ ಅವರದೇ ಹೆಸರಿನೊಂದಿಗೆ ಕಂಪೌಂಡಿನ ಹೊರಗೋಡೆಗೆ ನಾಮಕರಣವಾಗುತ್ತದೆ. ಅಥವಾ ಪಕ್ಕದ ಮನೆಯವರು ಹಣ ಖರ್ಚು ಮಾಡಿ  ಕಂಪೌಂಡ್ ಕಟ್ಟಿಸಿದ್ದರೂ ನಮ್ಮನ್ನು ಕುರಿತು “ರೀ ನಿಮ್ಮ ಕಂಪೌಂಡ್ ಒಳಗೆ ನಮ್ಮ ಬಟ್ಟೆ ಬಿದ್ದಿದೆ” ಅನ್ನುವುದೋ ಅಥವಾ “ಪೋಸ್ಟ್ ಮಾಸ್ಟರ್ ಲೆಟರನ್ನ ನಿಮ್ಮ ಕಂಪೌಂಡ್ ಕಡೆ ಹಾಕಿದ್ದಾನೆ” ಎಂದು ಅವರು ಕಟ್ಟಿಸಿದ ಕಂಪೌಂಡಿಗೆ ನಮ್ಮನ್ನು ಒಡೆಯರನ್ನಾಗಿಸುತ್ತಾರೆ. ಹೀಗೆ ಹೊರಗೋಡೆಯು ಒಬ್ಬರಿಂದ ಖರ್ಚುಮಾಡಿಸಿ ಮತ್ತೊಬ್ಬರಿಗೆ ರಕ್ಷಣೆ ಹಾಗೂ ಒಡೆತನವನ್ನು ನೀಡುತ್ತದೆ. ಇದು ಹೊರಗೋಡೆಗಲ್ಲದೆ ಭೂಮಿ ಮೇಲಿನ ಯಾವುದೇ ಮಾನವ ರಚನೆಗೆ ಸಾಧ್ಯವಿರಲಾರದು ಎನ್ನುವುದು ಇಲ್ಲಿ ಪ್ರಸ್ತುತ. ಸಾಮಾನ್ಯವಾಗಿ ಮನೆ ಕಟ್ಟುವವರು, ತಮ್ಮ ಮನೆಯನ್ನು ಎಲ್ಲರಿಗಿಂತಲೂ ವಿಶೇಷ ಹಾಗೂ ಪ್ರತ್ಯೇಕವಾಗಿ ಕಾಣಿಸುವ ದಿಸೆಯಲ್ಲಿ ಬೀದಿಗೆ ಕಾಣುವ  ಹೊರಗೋಡೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾರೆ. ನಗರದಲ್ಲಿಯ ಸ್ಥಿತಿವಂತರ ಮನೆಯ ಹೊರಗೋಡೆಗಳು ಮನೆಯಿಂದ ಮನೆಗೆ ಸಾಧ್ಯವಾದಷ್ಟು ವಿಭಿನ್ನ ಅಭಿರುಚಿಯಿಂದ ಕೂಡಿದ್ದು, ತಮ್ಮ ವಿಚಾರಧಾರೆಗೆ ತಕ್ಕಂತೆ ವಿನ್ಯಾಸಗೊಳಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಇತ್ತೀಚೆಗೆ ನಗರೇತರ ಪ್ರದೇಶಗಳಲ್ಲಿಯೂ ಹೊರಗೋಡೆಗಳನ್ನು ಅಂದಗಾಣಿಸುವ ಹವ್ಯಾಸ ಬೆಳೆಯುತ್ತಿದೆ. ಹೊರಗೋಡೆಗೆ ಹೆಚ್ಚಿನ ಆಸಕ್ತಿ ತೋರುವ ಮಾಲೀಕರು ತಮ್ಮದೇ ಮನೆಯ ಅಕ್ಕಪಕ್ಕದ ಗೋಡೆಗಳನ್ನು ಚೂರುಪಾರು ಅಲಂಕರಿಸಿದರೆ, ಹಿಂದಿನ ಗೋಡೆಯದಂತೂ ಗೌಣಗಣನೆ ಅಂತೆಯೇ ಅದನ್ನು ಅಂದಗೊಳಿಸುವ ಅಗತ್ಯವೂ ಇರುವುದಿಲ್ಲ.  ವಿನ್ಯಾಸಕಾರರ ವಿಶೇಷತೆ ಹಾಗೂ ನಿರಂತರ ಆವಿಷ್ಕಾರದೊಂದಿಗೆ ಅರಳುವ ಮನೆಯ ಮುಂದಿನ ಹೊರಗೋಡೆ ವಿನ್ಯಾಸವನ್ನು ನೋಡಿಯೇ ರಸ್ತೆಯಲ್ಲಿ ಓಡಾಡುವ ಜನರು, ಮನೆಯಲ್ಲಿರುವವರ ಆರ್ಥಿಕ ಸ್ಥಿತಿ ಹಾಗೂ ಅಭಿರುಚಿಯನ್ನು ಅಳಿಯಬಹುದಾಗಿದೆ. ಇಂತಿರುವ ಹೊರಗೋಡೆಯ ಪುರಾಣವು ಇಲ್ಲಿಗೇ ಮುಗಿಯುವುದಿಲ್ಲ. ಸಾಮಾನ್ಯವಾಗಿ ಸರಕಾರೀ ಕಟ್ಟಡಗಳು, ಸಮುದಾಯ ಭವನಗಳು, ಸರಕಾರಿ ಸಿಬ್ಬಂದಿ ಕ್ವಾರ್ಟರ್ಸಿನ ಗೋಡೆಗಳಲ್ಲಿ ಮೊದಲೇ ಕಳಪೆ ಕಾಮಗಾರಿಯಿಂದ ಹಲವೆಡೆ ಹೊರಗೋಡೆಗಳಲ್ಲಿ ಬಿರುಕು ಉಂಟಾಗಿದ್ದರೆ, ಅದೇ ಗೋಡೆಯಲ್ಲಿ ಜೇಡರಬಲೆ ಜಾಳುಜಾಳಾಗಿ ನೇತಾಡುವುದನ್ನು ಕಾಣಬಹುದು. ಆಲ, ಗಸಗಸೆ, ಔದಂಬರ, ಅರಳಿ, ಕ್ಯಾಕ್ಟಸ್ ಹಾಗೂ ಮುಂತಾದ ಗಿಡಗಳು ಹುಟ್ಟಿ ಮರವಾಗುವ ಹಂತ ತಲುಪಿದ್ದರೂ ಅದನ್ನು ಕಿತ್ತೆಸೆಯುವ ಗೋಜಿಗೇ ಹೋಗದೇ ತಮಗೆ ಸಂಬಂಧಿಸಿದ ವಿಷಯವೇ ಅಲ್ಲವೆಂಬಂತೆ ವರ್ತಿಸಿ, ಸಾರ್ವಜನಿಕರ ಹಣವನ್ನು ಪೋಲು ಮಾಡುವುದರಲ್ಲಿ ಹಲವರ ಉದಾಸೀನ ಭಾವನೆ ಎದ್ದು ಕಾಣುತ್ತದೆ. ನೌಕರರು ಬಿಟ್ಟಿಯಾಗಿರಲು ಕಟ್ಟಿದ ಕಟ್ಟಡವೆಂದು ಸರ್ಕಾರವೂ, ತಾವು ಕೇವಲ ತಂಗುವವರು ಮಾತ್ರವಾದ್ದರಿಂದ ನಿರ್ವಹಣೆಯ ಉಸ್ತುವಾರಿಯನ್ನು ಸರ್ಕಾರವೇ ನೋಡಿಕೊಳ್ಳಲಿ ಎನ್ನುವ ಧೋರಣೆ ತೋರುವ ನಿವಾಸಿಗಳು, ಹೀಗೆ ಹಲವರ ತಾಕಲಾಟದಲ್ಲಿ ಹೊರ ಗೋಡೆಯಿಂದ ಹಾಳಾಗಳಾರಂಭಿಸಿ ಪೂರ್ತಿ ಕಟ್ಟಡವೇ ಪಾಳು ಬೀಳುವ ಹಂತದಲ್ಲಿರುವ ಅಸಂಖ್ಯಾತ ಕಟ್ಟಡಗಳನ್ನು ನಾವು ನಮ್ಮ ಅಕ್ಕಪಕ್ಕದಲ್ಲಿಯೇ ಕಾಣಬಹುದು. ಸರ್ಕಾರಿ ಕಟ್ಟಡಗಳಲ್ಲಿ ತಾನಾಗಿಯೇ ಗೂಡುಕಟ್ಟಿ ನೆಲೆ ನಿಂತು ಸಂತಾನಾಭಿವೃದ್ಧಿ ಮಾಡಿಕೊಳ್ಳುವ ಹಲವು ಹಕ್ಕಿಗಳು, ಈಗೀಗ  ಮಾಲೀಕರು ತಮ್ಮ ಮನೆಯ ಹೊರಗೋಡೆಯಲ್ಲಿ ಹಕ್ಕಿಗಳಿಗಾಗಿಯೇ ನಿರ್ಮಿಸಿರುವ ಗೂಡುಗಳಲ್ಲಿ ಸೇರಿಕೊಂಡು ಚಿಲಿಪಿಲಿಗುಟ್ಟುತ್ತಿವೆ. ******************************* ಶಾಂತಿವಾಸು

ಹೊರಗೋಡೆ Read Post »

ಇತರೆ, ಪ್ರಬಂಧ

ಆಡು ಭಾಷೆಯ ವೈಶಿಷ್ಟ್ಯತೆ

ಪ್ರಬಂಧ ಆಡು ಭಾಷೆಯ ವೈಶಿಷ್ಟ್ಯತೆ ಬಾಲಾಜಿ ಕುಂಬಾರ ನಮ್ಮ ಉತ್ತರ ಕರ್ನಾಟಕದ ಭಾಷೆಗೂ ದಕ್ಷಿಣ ಕನ್ನಡದ ಮಾತುಗಾರಿಕೆಗೂ ತುಂಬಾ ವ್ಯತ್ಯಾಸ ಕಾಣುತ್ತೇವೆ. ಉತ್ತರ ಕರ್ನಾಟಕದ ಮಂದಿ ಹೇಳಿ ಕೇಳಿ ತುಂಬಾ ಸೀದಾ ಸಾದಾ, ಭಾಳ ಮುಗ್ದ ಸ್ವಭಾವದ ಗಟ್ಟಿ ಜನ, ಬಿಳಿ ಜೋಳ ರೊಟ್ಟಿ , ಫುಂಡೆ ಪಲ್ಯ ಜೊತೆಗೆ ಉಳಾಗಡ್ಡೆ ಖಾರಾ, ಹಸಿ ಖಾರಾ ತಿಂದರೂ ‘ಇನ್ನೂ ಸ್ವಲ್ಪ ಸಪ್ಪಗೆ ಆಗ್ಯಾದ್ ಪಲ್ಯ’ ಎನ್ನುವ ಜವಾರಿ ಜನ, ಎಲ್ಲಿ ಹೋದರೂ ಏನಾದರೂ ಹೊಸತನ ಕಾಣುವುದು, ಹೊಸ ಕಲಿಕೆ, ಹೊಸ ಅಲೋಚನೆ , ವಿಶಿಷ್ಟ ಕಾರ್ಯಗಳಿಗೆ ಹೆಸರುವಾಸಿ ಜನ ಉತ್ತರ ಕರ್ನಾಟಕ ಮಂದಿ, ಹೀಗಾಗಿ ಉತ್ತರ ಕರ್ನಾಟಕ ಭಾಷೆ ಕೂಡ ಅಷ್ಟೇ ವೈವಿಧ್ಯಮಯ ಲವಲವಿಕೆಯಿಂದ ಕೂಡಿದೆ.  ಇಲ್ಲಿನ ಜನ ಹೊರಗಡೆ ಹೋಗಲು ಬಸ್ ರೈಲುಗಳಲ್ಲಿ ಪ್ರಯಾಣ ಮಾಡಬೇಕಾದರೆ ಪಕ್ಕದ ಸೀಟಿನಲ್ಲಿ ಕುಳಿತಿರುವ ದಕ್ಷಿಣ ಕನ್ನಡ ಭಾಗದವರಿಗೆ ನಾವು ಬೀದರ್ ನವರು ಎಂದು ಹೇಳಬೇಕಾಗಿಲ್ಲ.  ‘ಎಲ್ಲಿ , ಕಲ್ಲಿ, ಹೊಂಟಾನ, ಹೋಗ್ಯಾನ’ ಇಷ್ಟು ಸಾಕು, ಅವರು ಅನಾಮತ್ತಾಗಿ ನೀವು ಬೀದರ್ ದವರು ಅಲ್ಲವೇ? ಎಂದು ಕೇಳೇ ಬೀಡ್ತಾರೆ.  ಇನ್ನೂ ನಮ್ಮ ಬೀದರ್, ಮೊದಲೇ ಗಡಿನಾಡು ಜಿಲ್ಲೆ ,  ಆ ಕಡೆ ‘ಎಕ್ಕಡ’ ಎನ್ನುವ ಆಂಧ್ರ ಪ್ರದೇಶ, ಹಾಗೇ ಸ್ವಲ್ಪ ದೂರ ಹೋದರೆ ‘ರಂಡಿ, ಪೊಂಡಿ’ ಎಂದು ಮತ್ತು ತೆಲುಗುಮಾತನಾಡುವ ತೆಲಂಗಾಣ, ಈ ಕಡೆ ‘ಕಸ,ಕಾಯಿ, ಗೇಲಾ, ಏ ರೇ’ ಎನ್ನುವ ಮರಾಠಿ ಪದಗಳು, ‘ಕಲ್ ‘ ಎನ್ನುವ ಹಿಂದಿ ಪದ ಕನ್ನಡದಲ್ಲಿ ‘ಕಲ್ಲು’ ಎನ್ನುವ ಅರ್ಥ ಕೊಡುತ್ತದೆ, ಹೀಗೆ ಕನ್ನಡದವರಿಗೆ ವಿಭಿನ್ನ ಅರ್ಥಗಳಾಗಿ ಕಾಣುತ್ತವೆ.  ಬೀದರಿನ ಹೆಚ್ಚಿನ ಜನರು ತ್ರಿಭಾಷಾ ಪಾಂಡಿತ್ಯ ಉಳ್ಳವರು, ಕನ್ನಡ ನಾಡಿನ ಯಾವುದೇ ಭಾಗದಲ್ಲಿ ಹೋಗಿ, ನಾಲ್ಕೈದು ಕಿ.ಮೀ. ಗೊಂದು ಬದಲಾಗುವ ಭಾಷಾಶೈಲಿ, ಜನರ ಬದುಕು, ಕಲೆ, ಉಣ್ಣುವ ಅನ್ನ, ತೊಡುವ ಬಟ್ಟೆ ಎಲ್ಲವೂ ಭಿನ್ನ ವಿಭಿನ್ನ, ಇದೇ ನಮ್ಮ ನಾಡಿನ ವೈಶಿಷ್ಟ್ಯತೆ ಕನ್ನಡದ ಅಸ್ಮಿತೆ, ಹಸಿರು, ಉಸಿರು ಎಲ್ಲವೂ ಒಳಗೊಂಡಿದೆ.  ನಾವೊಮ್ಮೆ ಶಾಲಾ ಮಕ್ಕಳಿಗೆ ಮೈಸೂರು ಭಾಗದ ವಿವಿಧ ಕಡೆ ಪ್ರವಾಸಕ್ಕೆ ತೆಗೆದುಕೊಂಡು ಹೋಗಿದ್ದೇವು, ಆ ಭಾಗದ ಬಹುತೇಕ ಗ್ರಾಮ, ಪಟ್ಟಣಗಳ ಹೆಸರು ಓದಿಕೊಂಡು ನಮ್ಮ ಶಾಲಾ ಮಕ್ಕಳಿಗೆ ವಿಚಿತ್ರ  ಅನುಭವ ಹಾಗೂ ನಗುತ್ತಿದ್ದರು. ಹಾಗೇ ಬೀದರ್ ಜಿಲ್ಲೆಯಲ್ಲಿ ಒಂದು ಗ್ರಾಮದ ಹೆಸರು ‘ಹುಡುಗಿ’ ಅಂತ ಇದೆ, ಬೇರೆ ಭಾಗದವರು ಈ ಕಡೆ ಬಂದರೆ ಈ ‘ಹುಡುಗಿ’ ಎಲ್ಲಿ ಸರ್, ಇನೆಷ್ಟು ದೂರ ಸರ್ ಎಂದು ಕೇಳಿ ತುಂಬಾ ನಗಬಹುದು, ಆ ಕಡೆ ‘ಸೂಳೆಬಾವಿ’ ಎಂದು ಕೇಳಿ ನಗಬಹುದು, ಆದರೆ ಹಾಸ್ಯವಾಗಿ ಕಂಡರು ತನ್ನದೇ ಆದ ವೈವಿಧ್ಯಮಯ ಹೊಂದಿರುವ ಪ್ರದೇಶಗಳು ಎಂದು ಅರ್ಥೈಸಿಕೊಳ್ಳಬೇಕು. ಹಾಗೇ ಉತ್ತರ ಕರ್ನಾಟಕದ ತಿಂಡಿ ತಿನಿಸು, ಹೆಸರು, ಅಡ್ಡ ಹೆಸರು, ಮಾತು, ಬೈಗಳು ತುಂಬಾ ವಿಚಿತ್ರ, ಇಂಗ್ಲಿಷ್ ಬಾರದ ನಮ್ಮ ಹಳ್ಳಿಯ ಜನರೂ ಕೂಡ ಗ್ಲಾಸ್ ಬದಲಿಗೆ ‘ಗಿಲಾಸ್’ ಫೋಟೋ ಬದಲಿಗೆ ‘ಫೂಟೂ’ ಕೋಟೆಗೆ ‘ಕ್ವಾಟೀ’ ಮದುವೆಗೆ ‘ಮದಿ’ ಮುದುಕ ಬದಲು ‘ಮುದ್ಯಾ’ ಖರೀದಿ ಬದಲಾಗಿ ಖರ್ದಿ, ಬಟ್ಟೆ ಬದಲಿಗೆ ‘ಅರ್ಬಿ’ ಮಕ್ಕಳಿಗೆ ನಿಮ್ಗು ಎಷ್ಟು ‘ಪಾರುಗೋಳು’ ಎಂದು ಕೇಳುತ್ತಾರೆ.  ಒಮ್ಮೆ ಮಹಾರಾಷ್ಟ್ರದ ಒಂದು ಪ್ರವಾಸಿ ಸ್ಥಳಕ್ಕೆ ಭೇಟಿ ನೀಡಿದ್ದಾಗ ಅಲ್ಲಿ ‘ಕಚರಾ ಕುಂಡಿ’ ಎಂದು ಮರಾಠಿಯಲ್ಲಿ ಬರೆದಿದ್ದು ನೋಡಿ ನಾವೇ ನಕ್ಕಿದ್ದೇವೆ. ಇಂತಹ ಬಹುತೇಕ ಮಿಶ್ರಿತ ಭಾಷೆ, ಅನ್ಯ ಭಾಷೆ, ವಿವಿಧ ಅರ್ಥಗಳಿಂದ ಕೂಡಿದ್ದು ಈ ನೆಲದ ವಿಶೇಷ ಎನ್ನಬಹುದು.  ತರಕಾರಿಗಳಿಗೂ ವಿಚಿತ್ರವಾಗಿ ಕರೀತಾರೆ, ಉಳಾಗಡ್ಡೆ ಬದಲು ‘ಉಳಗಡ್ಡಿ’ ಬೆಳ್ಳುಳ್ಳಿ ಬದಲು ‘ಬೆಳಗಡ್ಡಿ’ ಕೊತ್ತಂಬರಿ ಅನ್ನುವ ಬದಲು’ ಕೊತ್ಮೀರಿ, ಟಮೋಟೋ ಅನ್ನದೇ ‘ಟಮಾಟೆ ,ಟಮಟಾ’ ಮೌಂಸದ ಬದಲು ಇಗೊತ್ತು ಸಂಡೇ ಅದಾ ‘ಖಂಡಾ’ ತಿಂಬರೀ ಅಂತಾರೆ. ಶಾಲೆ ಅಂತೂ ಕರೆಯುವ ಅಪರೂಪದ ಜನರ ನಡುವೆ ಈವತ್ತು ‘ಸಾಳಿ’ ಅವನಾ ಸರ್’ ಎಂದೇ ಬಹಳಷ್ಟು ಜನ ಕೇಳುತ್ತಾರೆ. ಕೆಟ್ಟದ್ದಕ್ಕೆ ‘ಖರಾಬ್’ ಎಂದು, ಚಟಗಳಿಗೆ ‘ರಾಟಿ’ ಜೋಳಕ್ಕೆ ‘ಜ್ವಾಳಾ’, ಜ್ವರ ಬಂದರೆ ‘ಉರಿ’ ಬಂದವ ಎನ್ನುತ್ತಾರೆ.  ಇನ್ನೂ ಸಿಟ್ಟು ಬಂದಾಗ  ‘ಸುಳೆಮಗಾ’ ‘ಅಕ್ಕಲ್’  ಆ ಮಗಾ ಎಷ್ಟು ಹುಷಾರ್ ಆಗ್ಯಾನ್ ಅಂತ ‘ಜರಾ ತೋರ್ಸತಾ’ ಎನ್ನುತ್ತಾರೆ, ಮತ್ತೆ ಚಿಕ್ಕ ಮಕ್ಕಳಿಗೆ ಸಲುಗೆಯಿಂದ ‘ಹಲ್ಕಟ್ ಹಾಟ್ಯಾ’ ‘ಭಾಡಕಾವ್’ ‘ಮುಕುಡ್ಯಾ’ ಅವನ ‘ಇವ್ನ ಹೆಣ ಎತ್ಲಿ’ ಎಂದು ಪ್ರೀತಿಯಿಂದಲೇ ಬೈಯ್ತಾರೆ. ಹೀಗಾಗಿ ‘ಬೀದರ್ ಜಿಲ್ಲೆಯ ಬೈಗಳು’ ಎನ್ನುವ ಪುಸ್ತಕ ಬೀದರ್ ಭಾಷೆ ವೈಶಿಷ್ಟ್ಯತೆ ಬಿಂಬಿಸುತ್ತದೆ. ಇತ್ತೀಚೆಗೆ ಲಾಕ್ ಡೌನ್ ಸಂದರ್ಭದಲ್ಲಿ ‘ಲಂಗ್ ಡಂಗ್’ ‘ಲಾಕ್ ಡಾನ್’ ಮುಖ ಬದಲಿಗೆ ‘ಮೂತಿ’ ‘ಮಾರಿ’ ಮಾಸ್ಕ್ ಬದಲಿಗೆ ‘ಮುಸ್ಕಿ’ ಡ್ರೆಸ್ ಬದಲು ‘ಡಿರೇಸ್’ ‘ಸಾರಿ’ಗೆ ‘ಸೀರಿ’ ಒನ್ ಪ್ಲಾಟ್ ಜಾಗ ಎನ್ನದೇ ‘ಒಂದು ಪಿಲೇಟ್ ಜಾಗ’ ಎಂದು ಉಚ್ಚರಿಸುತ್ತಾರೆ. ಕನ್ನಡ ನಾಡಿನ ಇಂಗ್ಲಿಷ್ ಬಲ್ಲವರಿಗೆ ಇವೆಲ್ಲ ಹಾಸ್ಯ ಅನ್ನಿಸಬಹುದು, ಆದರೆ ತಾಯ್ನುಡಿಯವರು ಅವುಗಳನ್ನು ಉಚ್ಚರಿಸುವುದು ಬೇರೆ ರೀತಿ.  ಹೆಚ್ಚು ಕಾಡಿಸುವರನ್ನು ಕಂಡು ಅವನ ‘ಕಟ ಕಟಿ’ ಜಾಸ್ತಿ ಮತನಾಡಿದರೆ ಹೆಚ್ಚಿಗ್ ‘ತಿನ್ಕಬ್ಯಾಡ್’ ಅಂತಾರೆ, ಮೆಣಸಿನಕಾಯಿ, ಕತ್ತೆ, ಮೊಸರೆ, ತುಪ್ಪ, ಜೀರ್ಗೆ, ಉಳಾಗಡ್ಡೆ, ಲಂಗೋಟಿ, ಬ್ಯಾಳೆ ಎನ್ನುವ ಅಡ್ಡ ಹೆಸರುಗಳು ಈ ಪ್ರಾದೇಶಿಕ ವೈಶಿಷ್ಟ್ಯ ಹಾಗೂ ಪುರಾತನ ಸಂಸ್ಕೃತಿಯ ಸಂಕೇತವಾಗಿ ಗುರುತಿಸುತ್ತೇವೆ.  ಹಾಗೇ ನಮ್ಮ ಬೀದರ್ ಕಲ್ಬುರ್ಗಿ ಭಾಗದಲ್ಲಿ ಬಹುತೇಕ ಹಣ್ಣುಗಳಿಗೆ ಹಣ್ಣು ಎಂದು ಕರೆಯುವ ಬದಲಿಗೆ ಕಾಯಿ ಎಂದೇ ಉಚ್ಚರಿಸುತ್ತಾರೆ. ಮಾವಿನಕಾಯಿ, ಬಾಳೆಕಾಯಿ, ಕ್ಯಾರೆಕಾಯಿ ಎನ್ನುತ್ತಾರೆ. ಸೀತಾಫಲ ಹಣ್ಣಿಗೆ ಚಿಪ್ಪುಲಕಾಯಿ, ನೆರಳೆ ಹಣ್ಣಿಗೆ ನೆಳ್ಳೆಕಾಯಿ ಕರೆಯುತ್ತಾರೆ,  ಹೆಜ್ಜೆ ಹೆಜ್ಜೆಗೂ ಭಾಷಾ ಭಿನ್ನತೆ ಮಾತಿನ ಉಚ್ಚಾರದಲ್ಲಿ ವ್ಯತ್ಯಾಸ, ವಿವಿಧ ಅರ್ಥದಲ್ಲಿ ವ್ಯತ್ಯಾಸಗಳು ಕಂಡುಬರುತ್ತವೆ. ರೊಟ್ಟಿ- ಗಿಟ್ಟಿ, ಬ್ಯಾಳಿ- ಗೀಳಿ, ಎನ್ನುವ ಹಲವು ವಿಭಿನ್ನತೆಗಳು ಇರುವಾಗ ಈ ಕೆಲವರು ಕೊತ್ತುಂಬರಿಗೆ ಕೊತ್ಮೀರಿ ಎನ್ನುವುದು ಏನು ದೊಡ್ಡ ವಿಷಯವೇ ಆಗಬೇಕಿರಲಿಲ್ಲ‌. ಚಂದಿರನಿಗೆ ‘ಚಂದಮಾಮ’, ಭೂಮಿಗೆ ‘ತಾಯಿ’, ನೀರಿಗೆ ‘ದೇವತೆ’ ಎಂದು ಪೂಜಿಸುತ್ತಾರೆ. ಇನ್ನೂ ಅನೇಕ ವ್ಯಕ್ತಿಗಳ ಹೆಸರುಗಳು ಕೂಡ ಆಯಾ ಪ್ರಾದೇಶಿಕ ಪರಂಪರೆ, ಐತಿಹಾಸಿಕ ಹಿನ್ನೆಲೆಯನ್ನು ಪ್ರತಿಬಿಂಬಿಸುತ್ತವೆ. ಉತ್ತರ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ಪ್ರಭಾವ ಹೆಚ್ಚಿದೆ, ಬಸಪ್ಪ , ಶರಣಪ್ಪ, ಕಲ್ಲಪ್ಪ, ಮಹಾದೇವಿ, ಶರಣಮ್ಮ, ಹೀಗೆ ಪಟ್ಟಿ ಬೆಳೆಯುತ್ತದೆ. ಇನ್ನೂ ಒಂದು ವಿಚಿತ್ರ ಎಂದರೆ ಕೃಷಿಕರು ಹೊಲದಲ್ಲಿ ಕೆಲಸಕ್ಕೆ ಹೋದಾಗ ಮಗು ಜನನ ಆಗಿರುವ ಕಾರಣಕ್ಕೆ ಅಡೆಪ್ಪಾ, ಹುಲ್ಲಪ್ಪ ಎನ್ನುವ ಹೆಸರುಗಳು ಉಂಟು, ದೇವರ ಹೆಸರುಗಳೇ ತಮ್ಮ ಮಕ್ಕಳಿಗೆ ಹೆಸರಿಡುವ ಪರಂಪರೆ ನಮ್ಮ ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿದೆ ಎಂದು ಹೇಳಬಹುದು. ಸಮಾಜದಲ್ಲಿ ಕೊರೊನಾ ವೈರಸ್ ಗಿಂತಲೂ ಭೀಕರ ಮತ್ತು ಅಷ್ಟೇ ಮಾರಕವಾಗಿ ಹರಡಿರುವ ‘ಕೋಮು ವೈರಸ್ ‘ ಈಗ ಬಹುತೇಕ ಮೆದುಳುಗಳ ಒಳಹೊಕ್ಕಿ ಕೊಳೆತು ನಾರುತ್ತಿದೆ. ಹಳ್ಳಿಗಾಡಿನ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಬಸಪ್ಪ – ಬಶೀರ್ ಅವರಿಗೆ ಯಾವುದೇ ಜಾತಿ ಧರ್ಮಗಳಿಲ್ಲ, ತಮ್ಮನ್ನು ತಾವು ಭಾಯಿ – ಭಾಯಿಗಳಾಗಿ ಅನ್ಯೋನ್ಯತೆ ಬೆಳೆಸಿಕೊಂಡು ಬದುಕುತ್ತಿದ್ದಾರೆ. ರಕ್ತ ಸಂಬಂಧಗಳು ಇರದೇ ಇರುವ ಮುಸ್ಲಿಂ ಸಹೋದರು ಹಿಂದೂ ಸಹೋದರಿಯರಿಗೆ ಅವ್ವ, ಸಣ್ಣಪ್ಪಾ, ದೊಡ್ಡಪ್ಪ , ಕಾಕಾ ಎಂದು ಆಪ್ತವಾದ ಸಂಬಂಧ ಹೊಂದಿದ್ದಾರೆ. ಹೀಗಾಗಿ ಹಳ್ಳಿಗಾಡಿನಲ್ಲಿ ಇಂದಿಗೂ ಜಾತಿ ಧರ್ಮಗಳ ಚೌಕಟ್ಟ ಮೀರಿ ಸೌಹಾರ್ದತೆ ಪ್ರೀತಿಯೇ ಉಸಿರಾಡುತ್ತಿದೆ.  ಆಡು ಭಾಷೆಯ ಆಳ ಯಾರಿಗೂ ನಿಲುಕಲು ಸಾಧ್ಯವಿಲ್ಲ, ಅದರ ವ್ಯಾಪ್ತಿ ವಿಶಾಲವಾಗಿ ಬೇರೂರಿದೆ. ಇದುವೇ ಕನ್ನಡ ನಾಡಿನ ವಿಶೇಷ ಗಮ್ಮತ್ತು, ಇದರೊಳಗೆ ಅಡಗಿದೆ ಕನ್ನಡತನದ ತಂಪು, ಇಂಪು, ಉಸಿರು, ಹಸಿರು… ಎಲ್ಲವೂ…ಹೌದಲ್ಲವೇ..? *************************************************

ಆಡು ಭಾಷೆಯ ವೈಶಿಷ್ಟ್ಯತೆ Read Post »

ಇತರೆ, ಪ್ರಬಂಧ

ಶಿಶುತನದ ಹದನದೊಳು ಬದುಕಲೆಳಸಿ…

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ… ಲಕ್ಷ್ಮಿ ನಾರಾಯಣಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ ಬಾಲ್ಯದ ದಿನಗಳು ಮತ್ತೆ ಜೀವ ತಳೆಯುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯತೊಡಗುತ್ತವೆ. ನೆನಪಿನ ದೋಣಿಯಲ್ಲಿ ತೇಲುತ್ತಾ, ಕಾಲಾತೀತ ಭಾವಪ್ರಪಂಚಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಆದರೆ ಯಾವುದೇ ದಿನಪತ್ರಿಕೆಯ ಮುಖಪುಟದ ಸುದ್ದಿ, ಅಂತೆಯೇ ಟಿವಿ ಚ್ಯಾನೆಲ್-ಗಳ ಆರ್ಭಟ ಓದಿದೊಡನೆ/ನೋಡಿದೊಡನೆ ಕನಸಿನ ಈ ಸುಂದರ ಲೋಕ ನುಚ್ಚುನೂರಾಗಿ ಹೋಗುತ್ತದೆ. ದುರಂತಗಳ ಸರಮಾಲೆ –- ರಾಜಕೀಯ ದೊಂಬರಾಟ, ರೇಪ್, ಕೊಲೆ, ಸುಲಿಗೆ, ವಂಚನೆ, ಭಯೋತ್ಪಾದನೆ, ಅಪಘಾತ, ಈಗಂತೂ ಕೊರೊನಾ ಕೊರೊನಾ ಸಹಸ್ರನಾಮ ಕಣ್ಣಿಗೆ ಹೊಡೆಯುವಂತೆ ರಾರಾಜಿಸುತ್ತಿರುತ್ತದೆ. ಕೇವಲ ಯೋಚಿಸಿದರೂ ಭಯ, ಜಿಗುಪ್ಸೆ ಹುಟ್ಟಿಸುವ ಮಾನವನ ಅತೀ ಆಸೆ, ತೀರದ ದಾಹ -– ಹಣ, ಅಧಿಕಾರ, ಭೋಗಲಾಲಸೆಗಳೇ ನಮ್ಮನ್ನು ಈ ದುಃಸ್ಥಿತಿಗೆ ದೂಡಿವೆ. ಇದಕ್ಕೆ ಕಾರಣ, ಪರಿಹಾರ ಏನೆಂದು ಯೋಚಿಸಬೇಡವೇ? ಜೀವ ಪ್ರಪಂಚದಲ್ಲಿ ಮನುಷ್ಯ ಮಾತ್ರ ಕನಸು ಕಾಣಬಲ್ಲ, ನಗಬಲ್ಲ ಅದ್ಭುತ ಸಾಮರ್ಥ್ಯ ಪಡೆದಿದ್ದಾನೆ. ಇತರ ಯಾವ ಪ್ರಾಣಿಯೂ – ಪ್ರಾಣ ಇರುವುದೆಲ್ಲವೂ ‘ಪ್ರಾಣಿ’ಯೇ – ನಗುವುದೂ ಇಲ್ಲ, ಕನಸು ಕಾಣುವುದೂ ಇಲ್ಲ. ಹುಲಿ, ಸಿಂಹಗಳಂತಹ ಕೂರ ಪ್ರಾಣಿಗಳೂ ಕೂಡಾ ಭಾವನೆಗಳಿಗೆ, ನಾವು ತೋರುವ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಇದಕ್ಕೆ ಏಕೈಕ ಅಪವಾದವೆಂದರೆ ಮನುಷ್ಯ ಪ್ರಾಣಿ ಮಾತ್ರ! ಪ್ರೀತಿಗೆ ದ್ರೋಹ; ನಂಬಿಕೆ, ವಿಶ್ವಾಸಕ್ಕೆ ಪ್ರತಿಯಾಗಿ ಮೋಸ, ದಗಲ್ಬಾಜಿ ಎಲ್ಲವನ್ನೂ – ತನ್ನವರನ್ನೂ ಸೇರಿಸಿ – ಭಾವನಾರಹಿತವಾಗಿ, ಅಷ್ಟೇ ಚಾಣಾಕ್ಷತನದಿಂದ ಮನುಷ್ಯ ಮಾಡಬಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಏನು ಎಂದರೆ ಯಾವಾಗ ಮನುಷ್ಯ ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆವಾಗಲೆಲ್ಲಾ ಭಾವನೆಗಳಿಗೆ ಎರವಾಗುತ್ತಾನೆ. ಎಲ್ಲಿಲ್ಲದ ದುರಂಹಕಾರ ಆತನ ರಾಕ್ಷಸೀ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ವಿನಾಶದಂಚಿಗೆ ಆತನನ್ನು ತಳ್ಳುತ್ತದೆ. ಸುನಾಮಿ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳು, ಹಾಗೆಯೇ ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೊನಾ ವೈರಸ್-ನಂತಹ ಮಹಾವ್ಯಾಧಿಜನಕ ಹೆಮ್ಮಾರಿಗಳು ಉಂಟುಮಾಡುವ ವಿನಾಶಕ್ಕಿಂತಲೂ ಹೆಚ್ಚು ದುರಂತವನ್ನು ಕೆಟ್ಟ ಮನಸ್ಸಿನ ಕೇವಲ ಒಬ್ಬನೇ ಒಬ್ಬ ಮನುಷ್ಯ ಮಾಡಬಲ್ಲ! ಇದರಿಂದ ಬಿಡುಗಡೆ ಬೇಕಾದರೆ, ಮನುಷ್ಯ ಮತ್ತೆ ತನ್ನ ಬಾಲ್ಯದ ಮುಗ್ಧ, ಸ್ನಿಗ್ಧ ಭಾವಪ್ರಪಂಚಕ್ಕೆ ಹಿಂತಿರುಗಬೇಕು. ಸಹಜ ಮುಗ್ಧತೆ, ನಗು, ನಲಿವು, ಸಂಭ್ರಮಗಳ ಆ ದಿನಗಳನ್ನು ಪುನಃ ಜೀವಂತಗೊಳಿಸಬೇಕು. ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಭಾವ ಪ್ರಧಾನ ಮಾಧ್ಯಮಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಮನಸ್ಸನ್ನು ಉದಾತ್ತ ಭಾವಗಳತ್ತ ಹರಿಯಬಿಡಬೇಕು. ಕನಸು ಕಾಣುವ, ಶಿಶುವಿನೋಪಾದಿಯಲ್ಲಿ ನಿರ್ಮಲವಾಗಿ ನಗುವ ಸಹಜ ಪ್ರವೃತ್ತಿಗೆ ಮತ್ತೆ ಮರಳಬೇಕು. ಪ್ರಸಿದ್ಧ ಆಂಗ್ಲ ದಾರ್ಶನಿಕ ಕವಿ ವಿಲಿಯಂ ಬ್ಲೇಕ್-ನ (೧೭೫೭-೧೮೨೭) ‘Auguries of Innocence’ ಎಂಬ ಕವನದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ: It is right it should be so Man was made for Joy & Woe And when this we rightly know Thro the World we safely go ಕಷ್ಟ, ಸುಖಗಳನ್ನು ಅನುಭವಿಸಲೆಂದೇ ದೇವರು ಮನುಷ್ಯನನ್ನು ಸೃಷ್ಟಿಸಿ ಈ ಪ್ರಪಂಚಕ್ಕೆ ತಂದ. ಇದರಲ್ಲಿ ಮನುಷ್ಯನಿಗೆ ಆಯ್ಕೆಯ ಅವಕಾಶವೇ ಇಲ್ಲ. ಎರಡನ್ನೂ ಅನುಭವಿಸಬೇಕು. ಹಾಗಿದ್ದಾಗ ಅದನ್ನು ಸಮಚಿತ್ತದಿಂದ ಸ್ವೀಕರಿಸುವುದೊಂದೇ ದಾರಿ. ಮಗುವಿಗೂ, ಅನುಭಾವಿಗೂ ಇರುವ ಸಾಮ್ಯತೆ ಎಂದರೆ ಈ ಸಮಚಿತ್ತತೆ; ಅನುಭಾವಿ ನಕ್ಕು ಸುಮ್ಮನಾಗುತ್ತಾನೆ, ಮಗು ಅತ್ತು, ನಗುತ್ತದೆ. ಮರುಕ್ಷಣ ನಕ್ಕದ್ದೇಕೆ, ಅತ್ತದ್ದೇಕೆ ಎಂಬುದನ್ನು ಮರೆತುಬಿಡುತ್ತದೆ. ದೊಡ್ಡವರು ನಾವು ಹೀಗಲ್ಲ. ಎಂದೋ ಆಗಿ ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನಿತ್ಯ ದುಃಖಿಗಳಾಗುತ್ತೇವೆ. ವಿಸ್ಮಯ ಎಂದರೆ ಇದು ‘ಸುಖದ ಕ್ಷಣಗಳಿಗೆ’ ಅನ್ವಯವಾಗುವುದಿಲ್ಲ. ಎಂದೋ ಅನುಭವಿಸಿದ ಸುಖವನ್ನು ಮತ್ತೆ ಮತ್ತೆ ನೆನಪಿಸಿಕೊಂಡರೆ ಆಗುವುದು ದುಃಖವೇ ಹೊರತು ಸಂತೋಷವಲ್ಲ! ಬ್ಲೇಕ್-ನ ಕವನದ ಇನ್ನೊಂದೆರಡು ಸಾಲುಗಳನ್ನು ನೋಡೋಣ: The Childs Toys & the Old Mans Reasons Are the Fruits of the Two seasons ಮಗುವಿನ ಆಟಿಕೆಗಳೇ ಅದರ ಪ್ರಪಂಚ ಹಾಗೂ ಸರ್ವಸ್ವ. ಮಲಗಿ ನಿದ್ರಿಸುವಾಗಲೂ ಒಂದು ಗೊಂಬೆಯನ್ನೋ, ಅಥವಾ ಇನ್ಯಾವುದಾರೊಂದು ಆಟದ ವಸ್ತುವನ್ನೋ ಎದೆಗವಚಿಕೊಂಡು ಮಗು ಸುಖ ನಿದ್ರೆಗೆ ಜಾರುವುದನ್ನು ನಾವೆಲ್ಲಾ ಕಂಡವರೇ. ಅಂತೆಯೇ ಜೀವನ ಸಂಧ್ಯಾಕಾಲದಲ್ಲಿರುವ ಒಬ್ಬ ಹಿರಿಯ ತನ್ನ ಅನುಭವದಿಂದ ಮಾಗಿ, ಹಣ್ಣಾಗಿ, ಪಕ್ವವಾಗಿರುತ್ತಾನೆ. ಈಗ ಆ ಹಿರಿಯನ ನಿಜವಾದ ಗಳಿಕೆ, ಆಸ್ತಿ ಎಂದರೆ ಈ ಅನುಭವದ ಮೂಟೆಗಳೇ. ಅವು ಸುಖಾಸುಮ್ಮನೆ ಬಂದವುಗಳಲ್ಲ. ಪ್ರತಿಯೊಂದು ಅನುಭವದ ಹಿಂದೆಯೂ ಒಂದೊಂದು ಕಾದಂಬರಿಗಾಗುವಷ್ಟು ಸರಕು ಇದ್ದಿರಬೇಕು. ಅವನ ಮುಖದ ಸುಕ್ಕುಗಳೇ ಅದಕ್ಕೆ ಸಾಕ್ಷಿ. ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಅವನು ನಗುವಾಗ ಅದೆಷ್ಟೋ ಅನುಭವಗಳು ಸದ್ದಿಲ್ಲದೇ ತೂರಿಹೋಗುತ್ತಾವೋ ಏನೋ! ವಾರ್ಧಕ್ಯ ಎಂದರೆ ಮತ್ತೆ ಶಿಶುತನಕ್ಕೆ ಜಾರುವುದು: ಹಣ್ಣೆಲೆಯನ್ನು ನೋಡಿ ಚಿಗುರೆಲೆ ಹಾಸ್ಯ ಮಾಡುವುದೂ ಉಂಟು. ಸಂದಿಗ್ಧ ಕಾಲದಲ್ಲಿ ಕಿರಿಯನಾದವನು ಹಿರಿಯನೊಡನೆ ಪರಾಮರ್ಶೆ ಮಾಡುವುದೂ ಉಂಟು. ತೀರಾ ಚಿಕ್ಕವನಾದರೆ ಕಥೆ ಹೇಳು ಎಂದು ಗೋಗರೆಯುವುದೂ ಉಂಟು. ಹೀಗೆ ಮಗುವಿಗೂ ಮುದಿಯನಿಗೂ ಬಿಡಿಸಲಾರದ ನಂಟು ಉಂಟೇ ಉಂಟು. ಮಗುವಿಗೆ ಆಟವಾಡಲು ಓರಗೆಯ ಸಮವಯಸ್ಕ ಮಕ್ಕಳಿಲ್ಲದಿದ್ದರೆ ಒಳ್ಳೆಯ ಜತೆ ಅಂದರೆ ಆಜ್ಜ, ಅಜ್ಜಿಯೇ ಅಲ್ಲವೇ? ಏಕೆಂದರೆ ಇಬ್ಬರಿಗೂ ಸಮಯದ ಒತ್ತಡ, ಧಾವಂತ ಇಲ್ಲ. ಎಲ್ಲವನ್ನೂ ನಿಧಾನವಾಗಿ ಮಾಡಿದರಾಯಿತು, ಸಲ್ಪ ಹೆಚ್ಚು ಕಡಿಮೆಯಾದರೂ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವ ವಾಸ್ತವ ಹಿರಿಯನಿಗೆ ಅನುಭವದಿಂದ ದಕ್ಕಿದರೆ, ಮಗುವಿಗೆ ಅದು ಸಹಜ ಪ್ರಾಪ್ತಿ. ಅದಕ್ಕಾಗಿಯೇ ಮರಳಿ ಬಾಲ್ಯಕ್ಕೆ ಹೋಗೋಣ. ಬದುಕಿನ ನಿತ್ಯದ ಜಂಜಾಟದಲ್ಲಿ ನಾವು ಕಳೆದುಕೊಂಡ ಆ ಶಿಶು-ಸಹಜ-ವರ್ತನೆಯನ್ನು ಮತ್ತೆ ಆವಾಹಿಸಿಕೊಳ್ಳೋಣ. ಇದು ಕೇವಲ ಹಗಲುಕನಸು, ಸಾಧಿಸಾಲಾಗದ ಗೊಡ್ಡು ಆದರ್ಶ, ಕೈಲಾಗದವ ಮೈ ಪರಚಿಕೊಂಡಂತೆ ಎಂದೆಲ್ಲಾ ಅಂದುಕೊಂಡು ಒಳಗೊಳಗೇ ನೀವೂ ನಗುತ್ತಿಲ್ಲ ತಾನೇ? ಸರಿ ಹಾಗಾದರೆ, ಈ ನೆವದಿಂದಲಾದರೂ ನಿಮ್ಮ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬಂತಲ್ಲ, ಅಷ್ಟೇ ಸಾಕು ನನಗೆ. ಈಗ ನೋಡಿ, ನಕ್ಕು ಹಗುರಾಗುವುದೊಂದೇ ಇದಕ್ಕಿರುವ ಪರಿಹಾರ ಎಂದು ನೀವೂ ನಂಬುತ್ತೀರಲ್ಲ? ಹಾಗಾದರೆ ಒಮ್ಮೆ ಜೋರಾಗಿ ನಕ್ಕುಬಿಡಿ. ************************************

ಶಿಶುತನದ ಹದನದೊಳು ಬದುಕಲೆಳಸಿ… Read Post »

ಇತರೆ, ಪ್ರಬಂಧ

ಫ್ಲೈಟ್ ತಪ್ಪಿಸಿದ ಮೆಹೆಂದಿ

ಪ್ರಬಂಧ    ಫ್ಲೈಟ್ ತಪ್ಪಿಸಿದ  ಮೆಹೆಂದಿ ಸುಮಾ ವೀಣಾ                                         ಫ್ಲೈಟ್  ರಾತ್ರಿ ಹತ್ತು ಗಂಟೆಗೆ ಅಂದುಕೊಂಡು ಬೆಳಗ್ಗೆ 6 ಗಂಟೆಗೆಎದ್ದು  ವಿದೇಶೀ ಲಲನೆಯರಿಗಿಂತ ನಾವೇನು ಕಡಿಮೆ ನಾವೂ ಹೇರ್ ಕಲರ್ ಮಾಡಿಕೊಳ್ಳೋಣ  ಎನ್ನುತ್ತಲೇ ನಾನು ನನ್ನ ತಮ್ಮನ ಹೆಂಡತಿ ಶಾಲಿನಿ ಇಬ್ಬರೂ ಮೆಹೆಂದಿ ಕಲೆಸಿ ತಲೆಗೆ ಮೆತ್ತಿಕೊಂಡೆವು.  ಫಿಲ್ಟರ್ ಕಾಫಿ ಹೀರುತ್ತಾ   ಹರಟುತ್ತಿರಬೇಕಾದರೆ ನಮ್ಮ ಮೊಬೈಲಿಗೆ ಮೆಸೇಜ್  ಮಹಾಶಯ ಬಂದು “ನನ್ನನ್ನು ಒಮ್ಮೆ ನೋಡುವಿರಾ! ನೋಡುವಿರಾ!” ಎಂದು ವಿನಂತಿಸಿಕೊಳ್ಳಲಾರಂಭಿಸಿದ. ಹಾಗೆ  ತಲೆಯನ್ನೊಮ್ಮೆ ನೇವರಿಸಿಕೊಂಡರೆ ಮೆಹೆಂದಿ ಕೈಗೆಲ್ಲಾ ತಾಗಿ ಇರಿಸು ಮುರಿಸಾಯಿತು.  ಆದರೂ ಬಿಡದೆ ಮೊಬೈಲನ್ನೊಮ್ಮೆ ತೀಡಿದೆವು. ಆ ಮೆಸೇಜ್  ಮಹಾಶಯ ನಮ್ಮನ್ನೇ ಗುರಾಯಿಸುವಂತಿದ್ದ. ಅವನನ್ನು ಓದಿದರೆ ಅವನು ನಮ್ಮ ಫಾರಿನ್ ಟೂರ್ ಕುರಿತೇ ಎಚ್ಚರ  ನೀಡಿದಂತೆ ಇತ್ತು. ಫ್ಲೈಟ್  ಬೆಳಗ್ಗೆ ಹತ್ತು ಗಂಟೆಗೇ ಎಂದಿತ್ತು.   ನಾನು ಶಾಲಿನಿ ಇಬ್ಬರೂ ತಡಬಡಾಯಿಸಿಕೊಂಡು ಕಾಫಿಮಗ್ ಅನ್ನು ಕೆಳಕ್ಕೆ  ಕುಕ್ಕರಿಸಿ  “ಇನ್ನು ಹೊರಡಲು ಹೆಚ್ಚಿಗೆ ಸಮಯವೇನು ಉಳಿದಿಲ್ಲ! ಹೊರಡೋಣ! ಹೊರಡೋಣ!” ಎಂದು ಕೈ ಸನ್ನೆ ಮಾಡಿಕೊಂಡೆವು. ಮಾತನಾಡುವುದಕ್ಕೆ ಸಮಯವಿರಲಿಲ್ಲ ರಾತ್ರಿಯೇ ಲಗೇಜ್ ಪ್ಯಾಕ್  ಮಾಡಿಕೊಂಡಿದ್ದರೆ ಬಹುಶಃ ಗಾಬರಿಯಾಗುತ್ತಿರಲಿಲ್ಲವೇನೋ…..?? “ರಾತ್ರಿ ಹತ್ತು ಗಂಟೆಗಲ್ಲವ ಫ್ಲೈಟ್” ಎಂದು ಹರಟುತ್ತಿದ್ದೆವು. ಮೆಸೇಜ್ ಮಹಾಶಯ ಎಚ್ಚರಿಸದೇ ಇರದಿದ್ದರೆ ನಾವು ಇನ್ನೂ ಹಾಗೆ ಇರುತ್ತಿದ್ದವೋ ಏನೋ??  ಏರ್ಪೋರ್ಟಿಗೆ ಟ್ಯಾಕ್ಸಿಯಲ್ಲೇ ಹೋಗೋಣ  ಎಂದು ಟ್ಯಾಕ್ಸಿಯನ್ನೂ ಬುಕ್ ಮಾಡಿ ಕರೆಸಿಕೊಂಡೆವು. ಸೂಟ್ಕೇಸ್ನಲ್ಲಿ ಬಟ್ಟೆಗಳನ್ನು , ಟ್ರಾವಲಿಂಗ್  ಬ್ಯಾಗ್ನಲ್ಲಿ ತಿಂಡಿತೀರ್ಥಗಳನ್ನು ತುರುಕಿಕೊಂಡು ಟ್ಯಾಕ್ಸಿ ಹತ್ತಿ ಹೊರಟೆವು. ಟ್ಯಾಕ್ಸಿ  ಏರ್ಪೋರ್ಟ್ ಪ್ರವೇಶಿಸಿದೊಡನೆ ದಢಕ್ಕನೆ ನಿಂತಿತು. ಸಧ್ಯ! ವಾರಕ್ಕೆ ಮೊದಲೇ ಟಿಕೇಟ್ ಪ್ರಿಂಟ್ ಅವ್ಟು, ಪಾಸ್ಪೋರ್ಟ, ವೀಸಗಳನ್ನು ಬೇರೊಂದು ಬ್ಯಾಗಿಗೆ ತುರುಕಿ ಇಟ್ಟಿದ್ದೆವು.  ಅದನ್ನೇ ಕ್ಯೂನಲ್ಲಿ ನಿಂತು ಬೀಗುತ್ತಾ ತೋರಿಸಿ “ನಮಗೆ ವಿಂಡೋ ಸೈಡ್ ಸಿಕ್ಕರೆ ಸಾಕು ವಿಂಗ್ ಹತ್ತಿರ ಬೇಡ” ಎಂದುಕೊಂಡೆವು. ಅಲ್ಲೇ ಏಕೋ ಕಸಿವಿಸಿಯಾಗಲು ಪ್ರಾರಂಭವಾಯಿತು.  ಅದಕ್ಕೆ ಕಾರಣ ಅಲ್ಲಿದ್ದವರು ಸೆಲಿಬ್ರಿಟಿಗಳನ್ನಲ್ಲ ಅಪರಾಧಿಗಳನ್ನು ಗಮನಿಸುವಂತೆ, ನೋಡುವಂತೆ, ಧಿಕ್ಕರಿಸುವಂತೆ ರೆಪ್ಪೆ ಬಡಿಯದೆ ನಮ್ಮನ್ನೇ ನೋಡುತ್ತಿದ್ದರು. ನಾನು ಶಾಲಿನಿ “ ನಾವು ಈಗಷ್ಟೆ  ಫಾರಿನ್  ಟೂರ್ ಹೊರಟಿರುವುದು.  ಇನ್ನು ಫಾರಿನ್ನವರಾಗಿಲ್ಲವಲ್ಲ “ಏಕೆ ಹೀಗೆ ನೋಡುತ್ತಾರೆ” ಅಂದುಕೊಂಡೆವು.      ಹಾಗೆ ಎರಡು ಹೆಜ್ಜೆ ಮುಂದೆ ಇಡುವಷ್ಟರಲ್ಲಿ ಯುವತಿಯೊಬ್ಬಳ ಭಾರೀ ಕನ್ನಡಕದಿಂದ  ಪ್ರೇರಿತರಾದ ನಾವು ತಂಪು ಕನ್ನಡಕವನ್ನು ಹುಡುಕಿ ಹಾಕಿಕೊಂಡವು. ತಲೆಯನ್ನೊಮ್ಮೆ ನೇವರಿಸಿಕೊಳ್ಳಬೇಕೆಂದಾಗಲೇ ನಮಗೆ ಹೊಳೆದದ್ದು ನಮ್ಮ  ತಲೆಯ ಮೆಹೆಂದಿಗೆ ಜಲಭಾಗ್ಯ ಕರುಣಿಸಿಲ್ಲವೆಂದು.  ಅಷ್ಟರಲ್ಲಾಗಲೇ ನಮ್ಮ ಕೈಗೆ ಬೋರ್ಡಿಂಗ್ ಪಾಸ್ ದೊರೆಯಿತು,. ಯಾವ ಲೌಂಜಿನಲ್ಲಿ ಕುಳಿತುಕೊಳ್ಳಬೇಕೆಂಬ ವಿವರ ಪಡೆದುಕೊಂಡೆವು. ಹಾಗೆ ಅತ್ತಿಗೆ ನಾದಿನಿಯರಿಬ್ಬರೂ  ಒಬ್ಬರ ಮುಖವನ್ನೊಮ್ಮೆ ನೋಡಿಕೊಂಡೆವು ನಗು ಬರಲಿಲ್ಲ. ನಮ್ಮ ಅವಾಂತರಕ್ಕೆ  ನಮ್ಮಿಬ್ಬರಿಗೂ ಸಿಟ್ಟು ಬರುತ್ತಿತ್ತು .ಲೌಂಜಿನಲ್ಲೊಮ್ಮೆ ನಮ್ಮ ಲಗೇಜನ್ನು ಕುಕ್ಕರಿಸಿ ವಾಶ್ ರೂಮಿಗೆ ದೌಡಿಟ್ಟೆವು  ಮೆಹೆಂದಿ ವಾಶ್ ಮಾಡಲೆಂದು.  ಎಲ್ಲರ ಕಣ್ಣು ನಮ್ಮ ಮೇಲೆಯೇ.  ಮನೆ ಅಲ್ಲವಲ್ಲ ಬೇಕಾದ ಹಾಗೆ ತಲೆತೊಳೆದುಕೊಳ್ಳಲು, ಇನ್ನು ಜನ್ಮಾಪಿ ಮೆಹೆಂದಿ ಸಹವಾಸ ಮಾಡುವುದಿಲ್ಲ ಎಂದು ಶಪಥ ಮಾಡಿ ಒಬ್ಬರ ತಲೆಯನ್ನು ಒಬ್ಬರು ಪರಸ್ಪರ ತೊಳೆದುಕೊಂಡು ತಕ್ಷಣ ಲೌಂಜಿನ ಕಡೆಗೆ ಓಡಿಬಂದೆವು . ನಮ್ಮ ಸಹಪ್ರಾಯಣಿಕರೆಲ್ಲಾ ಫ್ಲೈಟ್ ಹತ್ತಿದ್ದರು. ಸಮಯ ಹತ್ತಾಗುವ ಹಾಗಿತ್ತು  ನಮಗೆ ಮತ್ತೆ ಪ್ರಯಾಣಕ್ಕೆ ಅವಕಾಶವಿರಲಿಲ್ಲ. ಕೈಕೈ ಹಿಡಿದುಕೊಂಡು ಲಗೇಜ್ ಕಡೆ ಗಮನ  ಹರಿಸಿದೆವು ಅದೂ ಅಲ್ಲಿರಲ್ಲಿಲ್ಲ . ಫಾರಿನ್ ಪ್ರಯಣಕ್ಕೆ ವಿಘ್ನ ಬಂತು ! ಅಲ್ಲಿರುವವರೆಲ್ಲರೂ ನಮ್ಮನ್ನೇ ನೋಡುತ್ತಿದ್ದರು.  ನಮ್ಮ ಕೋಪ ನೆತ್ತಿಗೇರಿತ್ತು.  ಎಲ್ಲರನ್ನು ಸುಟ್ಟುರಿಯುವಂತೆ ನೋಡುವ ಹಾಗಾಯಿತು ಏರ್ಪೋರ್ಟ್ ಸಿಬ್ಬಂದಿಯ ಮೇಲೂ ರೇಗಾಡಲೂ ಪ್ರಾರಂಭಿಸಿದೆವು. ನೀರಿಗಿಳಿದ ಮೇಲೆ ಚಳಿಯೇನು? ಎಂಬಂತೆ ಕೈಗಳನ್ನು ಜೋರಾಗಿಯೇ ಬೀಸಿಕೊಂಡು ಕಿರುಚಾಡಲು ಪ್ರಾರಂಭಿಸಿದೆವು. ಆದರೆ ನನಗೆ ಗಂಟಲಲ್ಲಿ ಏನೋ ಹಿಡಿದ ಅನುಭವ ಆಗುತ್ತಿತ್ತು.  “ಮಮ್ಮಿ! ಮಮ್ಮಿ!  ನಾನು ಎದ್ದು ಹೊರಗೆ ಹೋಗ್ತೀನಿ ನೀವೇ ಲೈಟ್ ಆಫ್ ಮಾಡಿಕೊಳ್ಳಿ” ಎಂದು ಅಲ್ಲೇ ಇದ್ದ ಚಿನ್ನು ಎರಡೆರಡು ಬಾರಿ ಕಿರುಚಿದಾಗ ನನಗೆ ದೂರದಲ್ಲಿ ಯಾರೋ ಕರೆದಂತಾಯಿತು. ಮೂರನೆಯ ಬಾರಿ ಕಿರುಚಿದಾಗ ಎದ್ದು ಕುಳಿತೆ “ ಅಯ್ಯೋ ಫ್ಲೈಟ್ ಮಿಸ್ ಆಗಲಿಲ್ವ”, “ಫ್ಲೈಟ್ ಹೋಯ್ತು”, ಲಗೇಜ್” , ಮೆಹಂದಿ,  ಶಾಲಿನಿ…. ಮತ್ತೆ ಆ ಜಗಳ ಇತ್ಯಾದಿ ಇತ್ಯಾದಿ ನೆನಪು ಮಾಡಿಕೊಂಡು ಲೈಟ್ ನೋಡಿದ ಬಳಿಕ ನನಗೆ ಅರಿವಾಯ್ತು “ಅಯ್ಯೋ! ನಾನು ಕನಸು ಕಂಡಿದ್ದು! “ಎಂದು ಮತ್ತೆ ಮತ್ತೆ ಕನಸನ್ನು ನೆನಪು ಮಾಡಿಕೊಂಡು  ಹಾಗೆ ಮಲಗಿದ್ದೆ. ಮತ್ತೆ ಚಿನ್ನು “ವ್ಯಾನ್ ಬೇಗ ಬರುತ್ತೆ” ಎಂದು ಎಚ್ಚರಿಸಿದಳು.  ಮನಸ್ಸಿಲ್ಲದೆ ಎದ್ದು  ಕನಸಿನಲ್ಲಿ ಮಿಸ್ ಮಾಡಿಕೊಂಡ ಫ್ಲೈಟನ್ನು ನೆನಪಿಸಿಕೊಂಡು ಸ್ನಾನ ,ಪೂಜೆ ಮುಗಿಸಿ  ದೋಸೆ ಹಾಕಿ ತಿರುವಿ ಮತ್ತೆ ಬೇಯಿಸುತ್ತಾ ಹಾಟ್ ಬಾಕ್ಸ್ನೊಳಗೆ ಹಾಕುವಾಗಲೆ ಇನ್ನೂ ಹಳೆಯ ನೆನಪುಗಳು ,ಮರುಕಳಿಸುತ್ತಾ ಹೋದವು.  ಹೊಟ್ಟೆ ಹುಣ್ಣಾಗುವಂತೆ ನಗಲಾರಂಭಿಸಿದೆ. “ಯಾಕೆ? ಮಮ್ಮಿ ಒಬ್ಬರೇ ನಗುವುದು” ಎಂದು ಚಿನ್ನು ಕೇಳಿದಳು. “ಏನೋ ನೆನಪಾಯಿತು” ಅಂದೆ. “ಅದೇ ನಮ್ಮ ಸೋದರ ಮಾವ ಶ್ರೀನಿವಾಸ ತಾತ ಇದ್ರಲ್ಲ ಅವರು ನೆನಪಾದರು” ಎಂದು ಘಟನೆಯನ್ನು ಚುಟುಕಾಗಿ ಹೇಳಿದೆ.  “ನಯನನ ಮದುವೆ ಇನ್ನೆರಡು  ವಾರವಿತ್ತು ಮನೆಯಲ್ಲಿ ಎಲ್ಲರೂ ಮದುವೆ ಸಾಮಾಗ್ರಿ ಖರೀದಿಗೆಂದು ಹೋಗಿದ್ದರು, ಕಾಲಿಂಗ್ ಬೆಲ್ ಸದ್ದಾಯಿತು. ಸರಿ ಬಾಗಿಲು ತೆಗೆದರೆ ಶ್ರೀನಿವಾಸ ತಾತ ಅಲ್ಲಿದ್ದರು “ಬನ್ನಿ ಬನ್ನಿ” ಎಂದು ಅವರನ್ನು ಕೂರಿಸಿ ತಿಂಡಿಕಾಫಿ ಕೊಟ್ಟೆ ಆದರೆ ಅವರು  ತೆಗೆದುಕೊಳ್ಳುವ ಸ್ಥಿತಿಯಲ್ಲಿ  ಇರಲಿಲ್ಲ ಅವರ  ಮುಖದಲ್ಲಿ ಗಾಬರಿಯಿತ್ತು “ಮದುವೆಮುಂದಕ್ಕೆ ಹೋಯ್ತ’?   ಎಂದರು “ಇಲ್ಲ ಎಂದೆ ಮದುವೆ ನಿಂತು ಹೋಯ್ತ?”  ಎಂದರು “ಇಲ್ಲ!” ಎಂದೆ ಅಷ್ಟರಲ್ಲಿ  ಅಲ್ಲೇ ಟೇಬಲ್ ಮೇಲೆ ಇದ್ದ  ನಯನಳ ಮದುವೆ ಆಮಂತ್ರಣ ಪತ್ರಿಕೆ ನೋಡಿ ತಂತಾನೆ ನಗಲಾರಂಭಿಸಿದರು. ನನಗೆ ಗಾಬರಿ ಇದೇಕೆ ಹೀಗೆ” ಹುಷಾರಾಗೇ  ಇದ್ರಲ್ಲ ಅಂದುಕೊಂಡೆ ಸರಿ ! ನಾನು ಹೊರಡುವೆ  ಎಂದು ಎದ್ದು ನಿಂತು ಮನೆಯವರನ್ನೆಲ್ಲಾ ನಾನು ಕೇಳಿರುವುದಾಗಿ ತಿಳಿಸು ನಾನು ಇವತ್ತೆ ವರಪೂಜೆ ಅಂದುಕೊಂಡು ಬಂದೆ ಸರಿಯಾಗಿ ದಿನಾಂಕ ನೋಡಿರಲಿಲ್ಲ ಎಂದು ನಗುತ್ತಲೇ ಅವರಿಗಾದ ಮದುವೆ ದಿನಾಂಕ ಕುರಿತ ಗೊಂದಲವನ್ನು  ವಿವರಿಸಿದರು. ಪರವಾಗಿಲ್ಲ ಬಿಡಿ ಬರುವ ವಾರ  ಅತ್ತೆಯನ್ನೂ ಕರೆದುಕೊಂಡು ಬನ್ನಿ       ಎಂದೆ. ಇಲ್ಲ!  ಇಲ್ಲ! ನಾನು ಹೇಗೂ ಬಂದಿದ್ದೇನಲ್ಲಾ ಅವಳೇ ಮದುವೆಗೆ ಬರುತ್ತಾಳೆ   ಮದುವೆಗೆ ಎನ್ನುತ್ತಾ ನಗುತ್ತಲೇ ಹೊರಟರು” ಎಂದು ಹೇಳಿ ಮುಗಿಸಿಲ್ಲ. ಚಿನ್ನು ಮತ್ತೆ ಜೋರಾಗಿ ನಗಲಾರಂಭಿಸಿದಳು ಅರೆ…..!! ಅವರ್ಬಿಟ್ ಇವರ್ಬಿಟ್ ಅವರ್ಯಾರು ಅನ್ನೋಹಂಗೆ ನಿನಗೇನಾಯ್ತು? ಎಂದೆ.” ನಾನು ಮಧು ಬರ್ತಡೆ ಆದ ಮೇಲೆ ಅವರ ಮನೆಗೆ ಗಿಫ್ಟ್ ತೆಗೆದುಕೊಂಡು ಹೋಗಿದ್ದೆ ಅಲ್ವ” ಎಂದಳು. ಗಿಫ್ಟ್ ಹಿಡಿದುಕೊಂಡು ಅವರ ಮನೆ ಬಾಗಿಲು ಬಡಿದರೆ “ನಿನ್ನೆ ಕರೆದರೆ ಇವತ್ತು ಬಂದಿದ್ದೀಯ ಬಾ” ಎಂದು ಕರೆದು ಕೂರಿಸಿ ಸ್ವೀಟ್, ಕೇಕ್  ತಂದು ನನ್ನ ಮುಂದೆ  ಹಿಡಿದ. ತನ್ನ ತಪ್ಪನ್ನ ಇನ್ನೊಮ್ಮೆ ಹೇಳಲಾರದೆ ,ಮುರುಕು ಡಿಲೇಟೆಡ್ ವಿಶಸ್   ಹೇಳಿ  ಮನೆಗೆ ಬಂದೆ “  ಹೇಗ್ ಮಿಸ್ ಮಾಡಿಕೊಳ್ತಿವಿ ಅಲ್ವ? ಪರೀಕ್ಷೆ  ಟೈಮಲ್ಲಿ ಹೀಗಾದರೆ …..! ಎಂದು ಉದ್ಗಾರ  ಎಳೆದಳು.  “ ಅನುಭವವೇ ಗುರು ಅಂತ ಅದಕ್ಕೆ ಹೇಳೋದು” ಎಂದು ನಾನು ಹೇಳಿದೆ. ಇನ್ನು  ಮುಂದೆ ಯಾವುದೇ ಪರೀಕ್ಷೆ, ಪೂಜೆ, ವೃತ ಫಂಕ್ಷನ್ಗಳೇ ಇರಲಿ ಪಂಕ್ಚುವಲ್ ಆಗಿ ಹೋಗಬೇಕು, ಮೊಬೈಲ್ನಲ್ಲಿ  ಅಲರಾಂ ಸೆಟ್ ಮಾಡಿ ಆದರೂ ಸರಿ,  ಕ್ಯಾಲೆಂಡರ್ ನಲ್ಲಿ  ಗುರುತು ಮಾಡಿಯಾರೂ ಸರಿ, ವಾರ್ಡ್ರೋಬ್ಗಳ ಮೇಲೆ ಚೀಟಿ ಅಂಟಿಸದರೂ ಸರಿ” ಎಂದೆ  ಅದಕ್ಕೆ ಅವಳು” ಕ್ಯಾಲೆಂಡರಿನಲ್ಲೂ ಸರಿಯಾಗಿ ಬರೆಯಬೇಕು ಸೆಪ್ಟೆಂಬರ್ನಲ್ಲಿ ಹೋಗಬೇಕಾದ ಕಾರ್ಯಕ್ರಮದ  ವಿವರವನ್ನು ಅಕ್ಟೋಬರ್ನಲ್ಲಿ ಬರೆಯಬಾರದಷ್ಟೇ” ಎಂದಳು. ಇಬ್ಬರೂ ನಕ್ಕೆವು ಗಡಿಯಾರ ನೋಡಿದರೆ ಸ್ವಲ್ಪ ಹೆಚ್ಚೇ ಮುಂದೇ ಓಡಿದಂತಿತ್ತು. ನೆನಪಿನ ಮಡಿಕೆಗಳನ್ನು  ತೆರೆಯಲು ಈಗ ಸಮಯವಿಲ್ಲ ಎಂದು ಹೇಳುತ್ತಾ ನೆನಪಿನ ಬುತ್ತಿಯನ್ನು, ಚಿನ್ನುವಿಗೆ ಮದ್ಯಾಹ್ನಕ್ಕೆ ಬೇಕಾದ  ಬುತ್ತಿಯನ್ನು ಮುಚ್ಚಿ ಯಥಾಪ್ರಕಾರ ನಿತ್ಯದ ಕೆಲಸಗಳಲ್ಲಿ ನಿರತಳಾದೆ. ಆದರೆ ಕಂಡ ಕನಸು, ಫಾರಿನ್  ಹೋಗುವ ಆತುರದ ಕನಸು ಮತ್ತೆ ಮತ್ತೆ ನನ್ನನ್ನು ಪ್ರಶ್ನಿಸುತ್ತದೆ.  ಯಾವಾಗ   ಇನ್ನೊಮ್ಮೆ ಫ್ಲೈಟ್ ಹತ್ತುವುದು ಎಂದು? **************************************   

ಫ್ಲೈಟ್ ತಪ್ಪಿಸಿದ ಮೆಹೆಂದಿ Read Post »

ಇತರೆ, ಪ್ರಬಂಧ

ನಾನು ಈಜು ಕಲಿತ ಪ್ರಸಂಗ:

ಪ್ರಬಂದ ನಾನು ಈಜು ಕಲಿತ ಪ್ರಸಂಗ: ಲಕ್ಷ್ಮಿನಾರಾಯಣ್ ಭಟ್ ಪಿ. ಚಿಕ್ಕಂದಿನಲ್ಲಿ ನನಗೆ ಈಜು ಕಲಿಯುವ ಉಮೇದು. ಅದಕ್ಕೆ ಮನೆಯಲ್ಲಿ ಯಥಾಪ್ರಕಾರ ಅಡ್ಡಿ – ‘ಮಾಣಿಗೆ ಏನಾದ್ರೂ ಹೆಚ್ಚು-ಕಮ್ಮಿ’ (ನೇರ ಮಾತಲ್ಲಿ ‘ಗೊಟಕ್!’) ಆದರೆ ಎಂಬ ಭಯ! ಅದಕ್ಕೆ ಸರಿಯಾಗಿ ಅದೇ ಸಮಯಕ್ಕೆ ನಮ್ಮ ಮನೆ ಪಕ್ಕದ ಸುಬ್ರಾಯ ದೇವಸ್ಥಾನದ ಚಿಕ್ಕ, ಅಷ್ಟೇನೂ ಆಳವಿಲ್ಲದಿದ್ದ ಕೆರೆಯಲ್ಲಿ ಈಜು ಕಲಿಯುವಾಗ ಓರಗೆಯ ಹುಡುಗನೊಬ್ಬ ಮುಳುಗಿ ಪ್ರಾಣಬಿಟ್ಟಿದ್ದ. ಅವನು ಮುಳುಗುವುದನ್ನು ನೋಡಿ ಉಳಿದ ಚಿಳ್ಳೆಪಿಳ್ಳೆಗಳೆಲ್ಲಾ ಹೆದರಿ ಪದ್ರಾಡ್! ( ತುಳು ಭಾಷೆಯಲ್ಲಿ ‘ಪದ್ರಾಡ್’ ಅಂದರೆ ‘ಸದ್ದಿಲ್ಲದೆ ತಪ್ಪಿಸಿಕೊಂಡು ಓಡಿಹೋಗುವುದು’ ಎಂದು ಅರ್ಥ; ಅಲ್ಲದೇ ಅದು ಅಂಕೆ 12 ರ ಸಂಖ್ಯಾವಾಚಕ ಶಬ್ದವೂ ಹೌದು). ಹಿರಿಯರಿಗೆ ತಿಳಿಸಲೂ ಭಯ. ಆ ವಯಸ್ಸೇ ಅಂತಹ ಹುಚ್ಚಾಟದ್ದು. ಹೀಗಾಗಿ ನನಗೆ ಈಜು ಕಲಿಯಲು ಹಸಿರು ನಿಶಾನೆ ಸಿಗುವ ಸಂಭವವೇ ಇರಲಿಲ್ಲ. ನಮ್ಮ ಊರಿನ ಕೋಟಿಕೆರೆ ಬಹು ದೊಡ್ಡದು. ಮನೆಯಿಂದ ಒಂದು ಕಿ.ಮಿ. ದೂರದಲ್ಲಿ ಹಸಿರು ಗದ್ದೆಗಳ ನಡುವೆ ವಿಸ್ತಾರವಾಗಿ ಹರಡಿತ್ತು. ಆ ಕೆರೆ ವಿಶ್ವವಿಖ್ಯಾತ — ಆ ಕಾಲಕ್ಕೆ ‘ನಮ್ಮ ಊರೇ ನಮ್ಮ ವಿಶ್ವ, ಸರ್ವಸ್ವ’ — ಆಗಿದ್ದರೂ ಮೊತ್ತಮೊದಲ ಬಾರಿಗೆ ನಮ್ಮ ಊರಿನವರೇ ಆದ ಪರಮೇಶ್ವರ ಹೊಳ್ಳರನ್ನು ನ್ಯಾಶನಲ್ ಚಾಂಪಿಯನ್ ಮಟ್ಟದವರೆಗೆ ತರಬೇತುಗೊಳಿಸಿದ ಮಹಾನ್ ಕೆರೆ ಎಂಬಭಿದಾನದಿಂದ ಕಂಗೊಳಿಸುತ್ತಿರ್ಪ ಒಂದು ಶುಭಮುಹೂರ್ತದಲ್ಲಿ ನನ್ನ ಪಾಲಿಗೂ ಅದು ಅನುಕೂಲವಾಗಿಯೇ ಒದಗಿ ಬಂತು. ಅದೇ ಪರಮೇಶ್ವರ ಹೊಳ್ಳರನ್ನು ತಯಾರು ಮಾಡಿದ ನಮ್ಮ ಹೈಸ್ಕೂಲಿನ ವ್ಯಾಯಾಮ ಶಿಕ್ಷಕರಾಗಿದ್ದ ಶ್ರೀ ಸುಬ್ರಾಯ ಶೆಟ್ಟಿಗಾರ್ ನನಗೂ ಈಜು-ಗುರುಗಳು. ಆದರೆ ಮನೆಯಲ್ಲಿ ಗೊತ್ತಾಗದಂತೆ ಈಜು ಕಲಿಯುವುದು ಹೇಗೆ? ಮನೆಯಿಂದ ಹೆಚ್ಚುವರಿ ಬಟ್ಟೆ ತರುವಂತೆಯೂ ಇಲ್ಲ. ಅದಕ್ಕಿದ್ದದ್ದೊಂದೇ ಪರಿಹಾರ. ಹಾಕಿದ್ದ ಅಂಗಿ ಚಡ್ದಿಯನ್ನೇ ಪುನರ್ಬಳಕೆ ಮಾಡುವುದು – ಮೈ, ತಲೆ ಒಣಗಿದ ಬಳಿಕ! ಆ ಕೋಟಿಕೆರೆ ಎಂದರೆ ಸಾಮಾನ್ಯವೇನಲ್ಲ. ಅದರ ಸುತ್ತಲೂ ಹಲವು ಮನೆಗಳೂ ಇದ್ದುವು. ಹಳ್ಳಿಮನೆ ಎಂದ ಮೇಲೆ ಜನರಿಗಿಂತ ಹೆಚ್ಚು ಜಾನುವಾರುಗಳೂ – ಹಸು, ಎಮ್ಮೆ, ಕೋಳಿ, ನಾಯಿ, ಬೆಕ್ಕು ಇವೆಲ್ಲ ಸೇರಿ ಒಂದು ಪ್ರಪಂಚ – ಇದ್ದುವು. ಅವುಗಳಿಗೂ ಜಳಕವಾಗಬೇಕಲ್ಲ. ಕೋಟಿಕೆರೆಯ ಒಂದು ತುದಿಯಲ್ಲಿ ದನಗಳೂ, ಹೆಚ್ಚಾಗಿ ಎಮ್ಮೆಗಳೂ ಅಲ್ಲಿ ಜಲವಿಹಾರದಲ್ಲೋ ಜಲಕೇಳಿಯಲ್ಲೋ – ಹಾಲುಕರೆಯುವ ಸಮಯವೊಂದನ್ನು ಬಿಟ್ಟು – ಸದಾ ತೊಡಗಿರುತ್ತಿದ್ದವು. ಜೊತೆಗೆ ಹಳ್ಳಿಯ ಹೆಣ್ಣುಮಕ್ಕಳ ಬಟ್ಟೆಬರೆ ತೊಳೆಯುವ ಕೆಲಸ, ಮೈ…(!) ತೊಳೆಯುವ ಕೆಲಸ – ಮರೆಯಲ್ಲಿ ‘ಸ್ನಾನ’ ಎಂಬುದು ಎಲ್ಲೋ ಕೆಲವರಿಗಷ್ಟೇ ಲಭ್ಯವಿದ್ದ ಘನಕಾರ್ಯ; ಹಾಗೆಯೇ ಮುಸುರೆಪಾತ್ರೆಗೆ ಬೂದಿ ಬಳಿದು ಶುದ್ಧೀಕರಿಸುವ ಕೆಲಸ, ಸ್ವಲ್ಪ ಮಟ್ಟಿಗೆ ಕೃಷಿಗಾರಿಕೆಗೂ – ಹೀಗೆ ಹಲವು ಹನ್ನೊಂದು ಕೆಲಸಗಳಿಗೆ ಈ ಕೋಟಿಕೆರೆಯೇ ಆಧಾರ. ಇವೆಲ್ಲದರ ಜೊತೆಗೆ ಕೋಟಿಕೆರೆಯ ಇನ್ನೊಂದು ತುದಿ ಈಜುವುದಕ್ಕೆ ಮೀಸಲು. ಹೀಗೆ ಕ್ಷೇತ್ರ ವಿಂಗಡಣೆಯ ವಿಷಯ ಸರ್ವರಿಗೂ ತಿಳಿದಿದ್ದ ಕಾರಣದಿಂದ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರವರ ಕೆಲಸ-ಕಾರ್ಯಗಳು ಅದರದರ ಪಾಡಿಗೆ ಸ್ವಯಂಚಾಲಿತ ಕ್ರಿಯೆಯಂತೆ ನಡೆದುಕೊಂಡು ಹೋಗುತ್ತಿತ್ತು. ಯಾರೂ ತಮ್ಮ ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ಮೀರುವಂತಿಲ್ಲದ ಒಂದು ಅಲಿಖಿತ ನಿಯಮ ಜಾರಿಯಲ್ಲಿತ್ತು ಮತ್ತು ಇದು ಎಲ್ಲರಿಗೂ ತಿಳಿದಿದ್ದ ಗುಟ್ಟು. ಈಜು ಕಲಿಯುವ ಪ್ರಾಥಮಿಕ ಪಾಠ ಕೆರೆದಂಡೆಯ ಕಲ್ಲುಗಳನ್ನು ಆಧಾರಕ್ಕೆ ಹಿಡಿದುಕೊಂಡು ಕೈ ಕಾಲು ಬಡಿಯುವುದು. ಆಗ ಈಜಿನಲ್ಲಿ ಪರಿಣತಿ ಹೊಂದಿದ್ದ ಇತರ ಗೆಳೆಯರು ಸುಬ್ರಾಯ ಶೆಟ್ಟಿಗಾರ್ ಅವರ ಸುಪರ್ದಿನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದರು ಮತ್ತು ಶೆಟ್ಟಿಗಾರ್ ಮಾಸ್ತರ್ ತಮ್ಮ ಸ್ಟಾಪ್-ವಾಚ್ ಹಿಡಿದು ಟೈಮ್ ನೋಡುತ್ತಿದ್ದರು. ನನಗೋ ಇದನ್ನು ನೋಡಿ ಒಂಥರಾ ಹೊಟ್ಟೆಯುರಿ. ನಾನು ಅವರಂತೆ ಈಜುವುದು ಯಾವಾಗ? ಶೆಟ್ಟಿಗಾರ್ ಮಾಸ್ಟರ್ ಅವರ ಹೆಚ್ಚಿನ ಗಮನ ಆ ವಿದ್ಯಾರ್ಥಿಗಳ ಮೇಲೆ. ನನಗೆ ನನ್ನ ಮೇಲೂ, ನನ್ನಂತೆ ಕೈ ಕಾಲು ಬಡಿಯುತ್ತಿದ್ದ ಇನ್ನಿತರ ಬಾಲಪಾಠದ ವಿದ್ಯಾರ್ಥಿಗಳ ಮೇಲೂ ಒಂದು ಥರಾ ಅಸಹನೆ ಮೂಡುತ್ತಿತ್ತು. ಆದರೆ ವಿಧಿಯಿಲ್ಲ. ಬಹುಶಃ ಮಾಸ್ತರಿಗೆ ಇದು ಗೊತ್ತಾಯಿತೇನೋ ‘ಇರಿ ಮಾಡುತ್ತೇನೆ’ ಎಂದು ಎರಡನೆ ಬಾಲಪಾಠ –- ಲೆಸನ್ ನಂಬರ್ ೨ – ಶುರು ಮಾಡಿದರು: ಹಾಗೆಯೇ ಕೈಕಾಲು ಬಡಿಯುತ್ತಾ ಅರ್ಧತಲೆಯನ್ನು ನೀರಿಗೆ ಮುಳುಗಿಸಿ ಉಸಿರು ತೆಗೆದುಕೊಳ್ಳಲು ಮಾತ್ರ ಮುಖ ಒಂದು ಬದಿಗೆ ವಾಲಿಸಿ ಉಸಿರೆಳೆದುಕೊಂಡು ತಕ್ಷಣ ಮತ್ತೆ ಅರ್ಧತಲೆ ಮುಳುಗಿಸಿ ಇನ್ನೊಂದು ದಿಕ್ಕಿಗೆ ತಲೆ ವಾಲಿಸಿ ಉಸಿರೆಳೆದುಕೊಳ್ಳುವುದು. ಆಗ ಕೈಕಾಲು ಬಡಿಯುವುದನ್ನು ನಿಲ್ಲಿಸುವಂತಿಲ್ಲ! ಇದನ್ನು ಒಂದೆರಡು ಬಾರಿ ಮಾಡುವಷ್ಟರಲ್ಲಿ ನಾನು ಸಾಕಷ್ಟು ನೀರು ಕುಡಿದದ್ದಾಯಿತು, ಅಲ್ಲದೆ ತಲೆ ಮುಳುಗಿಸುವಾಗ ಕೈಕಾಲು ಬಡಿಯುವುದು ನಿಲ್ಲುತ್ತಿತ್ತು; ಕೈಕಾಲು ಬಡಿಯುತ್ತಿದ್ದರೆ ತಲೆ ಮುಳುಗುತ್ತಿರಲಿಲ್ಲ.ಒಳ್ಳೇ ಪೇಚಾಟಕ್ಕೆ ಬಂತು. ಆದರೇನು ಮಾಡುವುದು? ಬೇರೆ ವಿಧಿಯಿಲ್ಲ. ಇದನ್ನು ಆದಷ್ಟು ಬೇಗನೆ ಕಲಿಯದಿದ್ದರೆ ಈಜಲು ಸಾಧ್ಯವಿಲ್ಲ ಎಂಬ ಜ್ಞಾನೋದಯವಾಗಿ ತಕ್ಕ ಮಟ್ಟಿಗೆ ಅಭ್ಯಾಸ ಮಾಡಿದ ಮೇಲೆ ಮಾಸ್ತರಿಗೆ ದುಂಬಾಲು ಬಿದ್ದು ಮುಂದಿನ ಪಾಠ ಹೇಳಿ ಕೊಡಿ ಅಂತ ಅವರನ್ನು ಪೀಡಿಸಿದೆ. ಮೊದಲಿನಿಂದಲೂ ನನಗೆ ತಾಳ್ಮೆ ಸ್ವಲ್ಪ ಕಡಿಮೆಯೇ. ಎಲ್ಲವೂ ಬೇಗ ಬೇಗ ಆಗಬೇಕು. ಆಗೆಲ್ಲಾ ‘ಏನು ಆರು ತಿಂಗಳಿಗೆ ಹುಟ್ಟಿದ ಹಾಗೆ ಮಾಡುತ್ತಿ?’ ಎನ್ನುವ ವಾಡಿಕೆಯ ಚುಚ್ಚುಮಾತು ನನ್ನೆದೆಗೆ ಚುಚ್ಚಿದರೂ ನಾನದನ್ನು ‘ಡೋಂಟ್ ಕೇರ್’ ಮಾಡುತ್ತಿದ್ದೆ! ಸರಿ ಮುಂದಿನ ಪಾಠ: ಎರಡು ಪೊಟ್ಟು ತೆಂಗಿನಕಾಯಿಗಳನ್ನು ಒಟ್ಟಿಗೆ ಚಿಕ್ಕ ಹಗ್ಗದ ಸಹಾಯದಿಂದ ಜೋಡಿಸಿ ಹೊಟ್ಟೆಗೆ ಆಧಾರವಾಗಿಟ್ಟುಕೊಂಡು (ಇವು ನಮ್ಮನ್ನು ನೀರಲ್ಲಿ ಮುಳುಗದಂತೆ ತಡೆಯುತ್ತವೆ ಮತ್ತು ಇದು ಈಜು ಕಲಿಯಲು ಎಲ್ಲರೂ ಬಳಸುತ್ತಿದ್ದ ಅತೀ ಸಾಮಾನ್ಯ ಸಾಧನ, ಅದಿಲ್ಲದಿದ್ದರೆ ಉದ್ದದ ಬಾಳೆದಿಂಡೂ ಇದೆ ರೀತಿ ಆಸರೆಯಾಗುತ್ತಿತ್ತು.) ಕಡಿಮೆ ಆಳದ ನೀರಿನಲ್ಲಿ ಈಜುವ ಅಭ್ಯಾಸ ಮಾಡುವುದು. ಆಗ ಚೆನ್ನಾಗಿ ಈಜು ಗೊತ್ತಿದ್ದ ಇತರ ಮಕ್ಕಳು ನಮ್ಮ ಸುತ್ತ ಈಜುತ್ತಾ ಹುರಿದುಂಬಿಸುತ್ತಿದ್ದರು. ಕೆಲವೊಮ್ಮೆ ನಮಗೆ ಅರಿವೇ ಆಗದಂತೆ ಈ ಪೊಟ್ಟು ತೆಂಗಿನಕಾಯಿಗಳನ್ನು ತಪ್ಪಿಸಿ ನಾವು ಈಜುವಂತೆ ಮಾಡುತ್ತಿದ್ದರು. ಆದರೆ ಈ ಆಸರೆ ತಪ್ಪಿದೆ ಎಂದು ತಿಳಿದ ತಕ್ಷಣ ಕೈಕಾಲು ಬಡಿಯುವುದು ನಿಂತು ಮುಳುಗುವ ಭಯದಲ್ಲಿ ಇನ್ನಷ್ಟು ನೀರು ಕುಡಿದು ದಡದ ಕಡೆಗೆ ಈಜುವುದಲ್ಲ, ಹಾರುವುದು ಎಂದರೂ ಸರಿಯೇ – ಆಗುತ್ತಿತ್ತು. ಹೀಗೆ ನಿಧಾನವಾಗಿ ಈಜುವುದು ಅಭ್ಯಾಸವಾಯಿತು. ಆಮೇಲೆ ಕೇಳಲುಂಟೇ! ‘ಭಳಿರೇ ಪರಾಕ್ರಮ ಕಂಥೀರವ’ ಎಂದು ‘ಡೈವ್’ ಮಾಡುವುದರಿಂದ ಹಿಡಿದು ಫ್ರೀ-ಸ್ಟೈಲ್, ಬ್ಯಾಕ್ ಸ್ಟ್ರೋಕ್ ಇತ್ಯಾದಿಗಳಲ್ಲಿ ಪಳಗಿದ್ದುಂಟು. ಆದರೆ ಇದನ್ನು ಸ್ಪರ್ಧೆಯ ಮಟ್ಟಕ್ಕೆ ಮುಂದುವರಿಸುವುದಕ್ಕಾಗಲಿಲ್ಲ. ಇದರಿಂದ ಊರೇನೂ ಮುಳುಗಿಹೋಗಿಲ್ಲ ಅಥವಾ ದೊಡ್ಡ ನಷ್ಟ ಯಾರಿಗೂ ಏನೂ ಇಲ್ಲ. ಇರಲಿ ಬಿಡಿ. ನನ್ನ ಜೊತೆ ಈಜಿಗೆ ಸಾಥ್ ಕೊಡುತ್ತಿದ್ದ ಒಬ್ಬ ಸಹಪಾಠಿ ಶೇಕ್ ಹಸನ್ ಸಾಹೇಬ್. ಹೀಗೆ ಹೇಳಿದರೆ ಹೆಚ್ಚಿನವರಿಗೆ ತಿಳಿಯಲಾರದು. ‘ವಿಟ್ಲ ಹಸನ್’ ಎಂದರೆ ಎಲ್ಲರಿಗೂ ತಿಳಿಯುತ್ತದೆ. ನಾನು ಅವನ ಮನೆಗೆ, ಅವನು ನಮ್ಮ ಮನೆಗೆ ಬಂದು ಹೋಗುವುದು ಮಾಮೂಲಾಗಿತ್ತು. ಅವನ ತಾಯಿ ನನ್ನನ್ನು ತುಂಬಾ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಆ ಕಾಲದಲ್ಲಿ ನಮ್ಮಿಬ್ಬರಿಗೂ ಬಡತನ ಹಾಸಿ ಹೊದೆಯುವಷ್ಟು ಇದ್ದರೂ ಪರಸ್ಪರ ಪ್ರೀತಿ, ವಿಶ್ವಾಸಗಳು ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ನಿಂತದ್ದು ಒಂದು ಸುಖಾನುಭವ. ಜೊತೆಗೆ ಹಸನ್ ಕೂಡಾ ನನ್ನೊಂದಿಗೆ ನಾಟಕಗಳಲ್ಲಿ ಬಣ್ಣ ಹಚ್ಚುತ್ತಿದ್ದ. ನಾವು ರಿಹರ್ಸಲ್-ಗೂ ಜೊತೆಯಲ್ಲೇ ಹೋಗುತ್ತಿದ್ದೆವು. ನಾವು ಹತ್ತನೇ ತರಗತಿಯಲ್ಲಿರುವಾಗ ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ (ಆಗೆಲ್ಲಾ ರಾತ್ರಿಪೂರ್ತಿ ಬೆಳಗಾಗುವ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದವು. ರಾತ್ರಿ ಎರಡರ ಬಳಿಕ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ ಹೀಗೆ ನಡೆಯುತ್ತಿತ್ತು. ಹಳ್ಳಿಯ ಜನರು ಇದಕ್ಕೆ ತಯಾರಾಗಿಯೇ ಬರುತ್ತಿದ್ದರು.) ನಮ್ಮ ಮಾಸ್ತರ್ ಮಹಾಬಲ ರೈ ಅವರು ಬರೆದು ನಿರ್ದೇಶಿಸಿದ ತುಳು ನಾಟಕ ‘ಲಾಟ್ರಿ ಲಕ್ಕಪ್ಪೆ ದಿವಾಳಿ ದೂಮಪ್ಪೆ’ ದಲ್ಲಿ ನನ್ನದು ಲಕ್ಕಪ್ಪನ ಪಾತ್ರ. ದೂಮಪ್ಪನ ಪಾತ್ರ ಬಹುಶಃ ಹಸನ್ ಮಾಡಿದ್ದ ಅಂತ ನೆನಪು. ಇರಲಿ, ತಿರುಗಿ ಮತ್ತೆ ನನ್ನ ಈಜು ಪುರಾಣಕ್ಕೆ ಬರೋಣ. ನಾನು ಕೆಲವೊಮ್ಮೆ ಬೆಳ್ಳಂ ಬೆಳಗ್ಗೆ 5 ಗಂಟೆಗೆ ಹಸನ್ ಮನೆಗೆ ಬಂದು (ನಮ್ಮ ಮನೆಯಲ್ಲಿ ಏನೋ ಒಂದು ಸುಳ್ಳು ಹೇಳಿ; ಏನದು ಸುಳ್ಳು ಸಬೂಬು ಈಗ ನೆನಪಾಗುತ್ತಿಲ್ಲ) ಇನ್ನೂ ಮಲಗಿಯೇ ಇರುತ್ತಿದ್ದವನನ್ನು ಎಬ್ಬಿಸಿ, ಬಳಿಕ ಕಾರಿನ ಹಳೆ ಟ್ಯೂಬ್ (ಅದು ಅವನ ಮಾವನ ಕಾರಿನದ್ದು) ಹಿಡ್ಕೊಂಡು ನಿದ್ದೆಗಣ್ಣಿನಲ್ಲಿ ಒಂದು ಕಿಲೋ ಮೀಟರ್ ನಡ್ಕೊಂಡು ಹೋಗಿ ಈಜು ಕ್ಲಾಸಿಗೆ ಮೊದಲು ಹಾಜರು ಹಾಕುತ್ತಿದ್ದೆವು. ಪೊಟ್ಟು ತೆಂಗಿನ ಕಾಯಿ, ಬಾಳೆದಿಂಡುಗಳಿಂದ ಮೇಲ್-ಬಡ್ತಿ ಕಾರಿನ ಹಳೆ ಟ್ಯೂಬ್. ಇದರ ಮಧ್ಯದಲ್ಲಿ ಕೂತರೆ ಯಾವ ಭಯ, ಸುಸ್ತು ಇಲ್ಲದೆ ಬೇಕಾದಷ್ಟು ಹೊತ್ತು ನೀರಿನಲ್ಲಿ ಖುಷಿ ಬಂದಂತೆ ವಿಹರಿಸಬಹುದಾಗಿತ್ತು. ಆದರೆ ನಮ್ಮ ಶೆಟ್ಟಿಗಾರ್ ಮಾಸ್ತರಿಗೆ ಇದನ್ನು ಕಂಡರೆ ಅಷ್ಟಕ್ಕಷ್ಟೇ. ಮಕ್ಕಳು ಈಜು ಕಲಿಯುವುದು ಬಿಟ್ಟು ಜಲವಿಹಾರ ಮಾಡುತ್ತಾ ಕಾಲಕಳೆಯುತ್ತಾರೆ ಎಂದು ಅವರಿಗೆ ಅನಿಸುತ್ತಿತ್ತು. ಮತ್ತು ಅದು ಸತ್ಯವೂ ಆಗಿತ್ತು.ಅಜಿತ್ ಕುಮಾರ್ ರೈ ಕೂಡಾ ಈ ಈಜು ಕ್ಲಾಸಿನ ಸದಸ್ಯನೇ. ಇವರಿಬ್ಬರು ಮತ್ತು ಗಣಪತಿ ಭಟ್ (ಉಳಿದವರ ಹೆಸರು ನೆನಪಾಗುತ್ತಿಲ್ಲ) ಮೈಸೂರು ದಸರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿ ಟ್ರೋಫಿ ಹಿಡಿದು ಮೆರೆದ ಘಟನೆ ಒಂದು ರೋಚಕ ಕಥೆ. ಈ ಕೋಟಿಕೆರೆಗೆ ಬರಬೇಕಾದರೆ ನನಗೆ ಎರಡು ದಾರಿಗಳಿದ್ದವು. ಒಂದು ಜಟಾಧಾರಿ ಕೆರೆದಂಡೆ ಮೇಲೆ ಸಾಗಿ ಸದಾ ನೀರು ಹರಿಯುವ ಒಂದು ಸಣ್ಣ ತೋಡಿನಲ್ಲಿ ಸ್ವಲ್ಪ ದೂರ ನಡೆದು ದಾಟಿ ಬರುವುದು – ಇದು ಮಳೆಗಾಲದಲ್ಲಿ ಸಾಧ್ಯವಿಲ್ಲದ ಮಾತು – ಮಳೆ ಬರುತ್ತಿದ್ದ ದಿನಗಳಲ್ಲೂ ಎಷ್ಟೋ ಬಾರಿ ನಾನು ಈಜು ಹೊಡೆಯುತ್ತಿದ್ದೆ. ಆಗೆಲ್ಲಾ ಸಾಮಾನ್ಯವಾಗಿ ನಾನು ಒಂಟಿಯೇ. ಇನ್ನೊಂದು ದಾರಿ ನಮ್ಮ ಹೈಸ್ಕೂಲ್ ಬದಿಯಿಂದ ಗದ್ದೆಗಳನ್ನು ಹಾದು ನನ್ನ ಸಹಪಾಠಿ ಸುಬ್ರಹ್ಮಣ್ಯ ಹೊಳ್ಳನ (ಪರಮೇಶ್ವರ ಹೊಳ್ಳರ ಖಾಸಾ ತಮ್ಮ – ಈತ ಪ್ರಾಥಮಿಕ ಶಾಲಾ ಶಿಕ್ಷಕನಾಗಿ, ಮುಖ್ಯೋಪಾಧ್ಯಾಯನಾಗಿ ಕೆಲಸ ನಿರ್ವಹಿಸುತ್ತಿದ್ದಾಗಲೇ ದುರದೃಷ್ಟವಶಾತ್ ಬೈಕ್ ಆಕ್ಸಿಡೆಂಟ್-ನಲ್ಲಿ ತೀರಿಹೋದ) ಮನೆಗೆ ಬಂದು ಅವನೊಂದಿಗೆ ಕೋಟಿಕೆರೆಗೆ ಬರುವ ಬಳಸು ದಾರಿ. ಅವನು ನನ್ನೊಂದಿಗೆ ಬರುತ್ತಾನೆ ಎನ್ನುವ ಕಾರಣಕ್ಕೆ ನಾನು ಈ ಬಳಸು ದಾರಿಯನ್ನೇ ಹೆಚ್ಚು ನೆಚ್ಚಿದ್ದೆ. ಈಜುವಿಕೆಯಲ್ಲಿ ಸಾಧನೆ ಮಾಡಿದ ನನ್ನ ಇನ್ನೊಬ್ಬ ಸಹಪಾಠಿ ಕಾಶೀಮಟದ ಗಣಪತಿ ಭಟ್. ಇವನೊಂದಿಗೆ ತಳುಕುಹಾಕಿಕೊಂಡ ನೆನಪು ನಾನು ಏಳನೆಯ ತರಗತಿಯಲ್ಲಿ ಇದ್ದಾಗ ಜೀವಂಧರ ಮಾಷ್ಟ್ರ ನಿರ್ದೇಶನದ ‘ಕುರುಕ್ಷೇತ್ರ’ ನಾಟಕ. ಅದರಲ್ಲಿ ಗಣಪತಿಯದ್ದು ಕೌರವನ ಪಾತ್ರ, ನನ್ನದು ಬಲರಾಮನ ಪಾತ್ರ. ನಾಟಕದ ತರಬೇತಿ ಸಮಯದಲ್ಲಿ ಮಾತು ಮರೆತರೆ ಜೀವಂಧರ ಮಾಸ್ತರಿಗೆ (ನಮ್ಮ ಊರಿನ ಎರಡೋ ಮೂರೋ ಜೈನ ಮನೆಗಳಲ್ಲಿ ಇವರದೂ ಒಂದು; ಇನ್ನೊಂದು ಜೈನ ಬಸದಿಯ ಇಂದ್ರ ಅವರದು.) ಅಸಾಧ್ಯ ಸಿಟ್ಟು. ಕೌರವನ ಗದೆ, ಬಲರಾಮನ ಹಲಾಯುಧಗಳನ್ನು ನಾವು ನಮ್ಮ ನಮ್ಮ ಕೈಯಲ್ಲಿ ಇದೆ ಎಂದೇ ಭಾವಿಸಿಕೊಂಡು ರಿಹರ್ಸಲ್ ನಡೆಸುತ್ತಿದ್ದೆವು. ನಾಟಕದ ದಿನ ನನಗೆ ಸಣ್ಣಗೆ ಜ್ವರ. ಇದು ಮಾಸ್ತರಿಗೆ ಗೊತ್ತಾದರೆ ಫಜೀತಿ ಎಂದು ಸಾಧ್ಯವಾದಷ್ಟು ಉಮೇದು ತೋರಿಸುತ್ತಿದ್ದೆ. ಮೇಕಪ್ ಎಲ್ಲಾ ಮುಗಿದು ನಾಟಕ ನಡೆಯುತ್ತಿದೆ. ಆದರೆ ನನ್ನ ಹಲಾಯುಧ ಮಾತ್ರ ಕಾಣೆಯಾಗಿದೆ; ಅದನ್ನು ತಂದೇ ಇಲ್ಲವೋ ಅಥವಾ ಉಳಿದ ಪರಿಕರಗಳೆಡೆಯಲ್ಲಿ ಎಲ್ಲಿ ಮರೆಯಾಗಿತ್ತೋ

ನಾನು ಈಜು ಕಲಿತ ಪ್ರಸಂಗ: Read Post »

ಇತರೆ, ಪ್ರಬಂಧ

ಶಿಶುತನದ ಹದನದೊಳು ಬದುಕಲೆಳಸಿ

ಪ್ರಬಂಧ ಶಿಶುತನದ ಹದನದೊಳು ಬದುಕಲೆಳಸಿ ಡಾ.ಲಕ್ಷ್ಮಿನಾರಾಯಣ ಭಟ್ ಈ ಸುಂದರ ಮುಂಜಾನೆ ನನಗೆ ತುಂಬಾ ಪ್ರಿಯವಾದ ಹಾಡೊಂದರ ಸಾಲುಗಳು ನನ್ನ ಮನ:ಪಟಲದಲ್ಲಿ ಭಾವ ತರಂಗಗಳನ್ನು ಎಬ್ಬಿಸುತ್ತಿವೆ. ನಾನು ಹಾಡುಗಾರನಲ್ಲದಿದ್ದರೂ, ಈ ಸಾಲುಗಳಿಗೆ ದಯವಿಟ್ಟು ಕಿವಿಗೊಡಿ. ನೆನಪಿದೆಯೇ ನಿನಗೆ? ನಾವಿಬ್ಬರೂ ಅಂದು ಹೊಳೆಯ ದಡದಲ್ಲಿ ನಿಂದು ಮರಳು ಮನೆಗಳ ಕಟ್ಟಿ ಆಟವಾಡಿದ್ದು ನಿನಗೆ ನೆನಪಿದೆಯೇ ನಿನಗೆ? ಬಾ ಗೆಳೆಯ ಬಾರಯ್ಯಾ, ಆಟವಾಡೋಣ ಬಾಲ್ಯದ ನೆನಪನು ಮರಳಿ ಕಟ್ಟೋಣ. ನೆನಪಿದೆಯೇ ನಿನಗೆ? ನನಗೆ ಬೇಜಾರಾದಾಗಲೆಲ್ಲಾ ಈ ಸಾಲುಗಳನ್ನು ಗುಣುಗುಣಿಸುತ್ತೇನೆ. ಆಗ ಬಾಲ್ಯದ ದಿನಗಳು ಮತ್ತೆ ಜೀವ ತಳೆಯುತ್ತವೆ. ಕನಸುಗಳು ಗರಿಬಿಚ್ಚಿ ಕುಣಿಯತೊಡಗುತ್ತವೆ. ನೆನಪಿನ ದೋಣಿಯಲ್ಲಿ ತೇಲುತ್ತಾ, ಕಾಲಾತೀತ ಭಾವಪ್ರಪಂಚಕ್ಕೆ ಮನಸ್ಸು ತೆರೆದುಕೊಳ್ಳುತ್ತದೆ. ಆದರೆ ಯಾವುದೇ ದಿನಪತ್ರಿಕೆಯ ಮುಖಪುಟದ ಸುದ್ದಿ, ಅಂತೆಯೇ ಟಿವಿ ಚ್ಯಾನೆಲ್-ಗಳ ಆರ್ಭಟ ಓದಿದೊಡನೆ/ನೋಡಿದೊಡನೆ ಕನಸಿನ ಈ ಸುಂದರ ಲೋಕ ನುಚ್ಚುನೂರಾಗಿ ಹೋಗುತ್ತದೆ. ದುರಂತಗಳ ಸರಮಾಲೆ –- ರಾಜಕೀಯ ದೊಂಬರಾಟ, ರೇಪ್, ಕೊಲೆ, ಸುಲಿಗೆ, ವಂಚನೆ, ಭಯೋತ್ಪಾದನೆ, ಅಪಘಾತ, ಈಗಂತೂ ಕೊರೊನಾ ಕೊರೊನಾ ಸಹಸ್ರನಾಮ ಕಣ್ಣಿಗೆ ಹೊಡೆಯುವಂತೆ ರಾರಾಜಿಸುತ್ತಿರುತ್ತದೆ. ಕೇವಲ ಯೋಚಿಸಿದರೂ ಭಯ, ಜಿಗುಪ್ಸೆ ಹುಟ್ಟಿಸುವ ಮಾನವನ ಅತೀ ಆಸೆ, ತೀರದ ದಾಹ -– ಹಣ, ಅಧಿಕಾರ, ಭೋಗಲಾಲಸೆಗಳೇ ನಮ್ಮನ್ನು ಈ ದುಃಸ್ಥಿತಿಗೆ ದೂಡಿವೆ. ಇದಕ್ಕೆ ಕಾರಣ, ಪರಿಹಾರ ಏನೆಂದು ಯೋಚಿಸಬೇಡವೇ? ಜೀವ ಪ್ರಪಂಚದಲ್ಲಿ ಮನುಷ್ಯ ಮಾತ್ರ ಕನಸು ಕಾಣಬಲ್ಲ, ನಗಬಲ್ಲ ಅದ್ಭುತ ಸಾಮರ್ಥ್ಯ ಪಡೆದಿದ್ದಾನೆ. ಇತರ ಯಾವ ಪ್ರಾಣಿಯೂ – ಪ್ರಾಣ ಇರುವುದೆಲ್ಲವೂ ‘ಪ್ರಾಣಿ’ಯೇ – ನಗುವುದೂ ಇಲ್ಲ, ಕನಸು ಕಾಣುವುದೂ ಇಲ್ಲ. ಹುಲಿ, ಸಿಂಹಗಳಂತಹ ಕೂರ ಪ್ರಾಣಿಗಳೂ ಕೂಡಾ ಭಾವನೆಗಳಿಗೆ, ನಾವು ತೋರುವ ಪ್ರೀತಿಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತವೆ. ಇದಕ್ಕೆ ಏಕೈಕ ಅಪವಾದವೆಂದರೆ ಮನುಷ್ಯ ಪ್ರಾಣಿ ಮಾತ್ರ! ಪ್ರೀತಿಗೆ ದ್ರೋಹ; ನಂಬಿಕೆ, ವಿಶ್ವಾಸಕ್ಕೆ ಪ್ರತಿಯಾಗಿ ಮೋಸ, ದಗಲ್ಬಾಜಿ ಎಲ್ಲವನ್ನೂ – ತನ್ನವರನ್ನೂ ಸೇರಿಸಿ – ಭಾವನಾರಹಿತವಾಗಿ, ಅಷ್ಟೇ ಚಾಣಾಕ್ಷತನದಿಂದ ಮನುಷ್ಯ ಮಾಡಬಲ್ಲ. ಇಲ್ಲಿ ನಾವು ಮುಖ್ಯವಾಗಿ ಗಮನಿಸಬೇಕಾದದ್ದು ಏನು ಎಂದರೆ ಯಾವಾಗ ಮನುಷ್ಯ ಕನಸು ಕಾಣುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾನೋ ಆವಾಗಲೆಲ್ಲಾ ಭಾವನೆಗಳಿಗೆ ಎರವಾಗುತ್ತಾನೆ. ಎಲ್ಲಿಲ್ಲದ ದುರಂಹಕಾರ ಆತನ ರಾಕ್ಷಸೀ ಪ್ರವೃತ್ತಿಯನ್ನು ಬಡಿದೆಬ್ಬಿಸಿ, ವಿನಾಶದಂಚಿಗೆ ಆತನನ್ನು ತಳ್ಳುತ್ತದೆ. ಸುನಾಮಿ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳು, ಹಾಗೆಯೇ ನಮ್ಮನ್ನೆಲ್ಲಾ ಕಾಡುತ್ತಿರುವ ಕೊರೊನಾ ವೈರಸ್-ನಂತಹ ಮಹಾವ್ಯಾಧಿಜನಕ ಹೆಮ್ಮಾರಿಗಳು ಉಂಟುಮಾಡುವ ವಿನಾಶಕ್ಕಿಂತಲೂ ಹೆಚ್ಚು ದುರಂತವನ್ನು ಕೆಟ್ಟ ಮನಸ್ಸಿನ ಕೇವಲ ಒಬ್ಬನೇ ಒಬ್ಬ ಮನುಷ್ಯ ಮಾಡಬಲ್ಲ! ಇದರಿಂದ ಬಿಡುಗಡೆ ಬೇಕಾದರೆ, ಮನುಷ್ಯ ಮತ್ತೆ ತನ್ನ ಬಾಲ್ಯದ ಮುಗ್ಧ, ಸ್ನಿಗ್ಧ ಭಾವಪ್ರಪಂಚಕ್ಕೆ ಹಿಂತಿರುಗಬೇಕು. ಸಹಜ ಮುಗ್ಧತೆ, ನಗು, ನಲಿವು, ಸಂಭ್ರಮಗಳ ಆ ದಿನಗಳನ್ನು ಪುನಃ ಜೀವಂತಗೊಳಿಸಬೇಕು. ಕನಸು ಕಾಣಬೇಕು. ಇದಕ್ಕೆ ಪೂರಕವಾಗಿ ಸಾಹಿತ್ಯ, ಸಂಗೀತ, ನಾಟಕ ಇತ್ಯಾದಿ ಭಾವ ಪ್ರಧಾನ ಮಾಧ್ಯಮಗಳಲ್ಲಿ ಅಭಿರುಚಿ ಬೆಳೆಸಿಕೊಂಡು ಮನಸ್ಸನ್ನು ಉದಾತ್ತ ಭಾವಗಳತ್ತ ಹರಿಯಬಿಡಬೇಕು. ಕನಸು ಕಾಣುವ, ಶಿಶುವಿನೋಪಾದಿಯಲ್ಲಿ ನಿರ್ಮಲವಾಗಿ ನಗುವ ಸಹಜ ಪ್ರವೃತ್ತಿಗೆ ಮತ್ತೆ ಮರಳಬೇಕು. ಪ್ರಸಿದ್ಧ ಆಂಗ್ಲ ದಾರ್ಶನಿಕ ಕವಿ ವಿಲಿಯಂ ಬ್ಲೇಕ್-ನ (೧೭೫೭-೧೮೨೭) ‘Auguries of Innocence’ ಎಂಬ ಕವನದಲ್ಲಿ ಬರುವ ಈ ಸಾಲುಗಳನ್ನು ಗಮನಿಸಿ: It is right it should be so Man was made for Joy & Woe And when this we rightly know Thro the World we safely go ಕಷ್ಟ, ಸುಖಗಳನ್ನು ಅನುಭವಿಸಲೆಂದೇ ದೇವರು ಮನುಷ್ಯನನ್ನು ಸೃಷ್ಟಿಸಿ ಈ ಪ್ರಪಂಚಕ್ಕೆ ತಂದ. ಇದರಲ್ಲಿ ಮನುಷ್ಯನಿಗೆ ಆಯ್ಕೆಯ ಅವಕಾಶವೇ ಇಲ್ಲ. ಎರಡನ್ನೂ ಅನುಭವಿಸಬೇಕು. ಹಾಗಿದ್ದಾಗ ಅದನ್ನು ಸಮಚಿತ್ತದಿಂದ ಸ್ವೀಕರಿಸುವುದೊಂದೇ ದಾರಿ. ಮಗುವಿಗೂ, ಅನುಭಾವಿಗೂ ಇರುವ ಸಾಮ್ಯತೆ ಎಂದರೆ ಈ ಸಮಚಿತ್ತತೆ; ಅನುಭಾವಿ ನಕ್ಕು ಸುಮ್ಮನಾಗುತ್ತಾನೆ, ಮಗು ಅತ್ತು, ನಗುತ್ತದೆ. ಮರುಕ್ಷಣ ನಕ್ಕದ್ದೇಕೆ, ಅತ್ತದ್ದೇಕೆ ಎಂಬುದನ್ನು ಮರೆತುಬಿಡುತ್ತದೆ. ದೊಡ್ಡವರು ನಾವು ಹೀಗಲ್ಲ. ಎಂದೋ ಆಗಿ ಹೋದ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ನಿತ್ಯ ದುಃಖಿಗಳಾಗುತ್ತೇವೆ. ವಿಸ್ಮಯ ಎಂದರೆ ಇದು ‘ಸುಖದ ಕ್ಷಣಗಳಿಗೆ’ ಅನ್ವಯವಾಗುವುದಿಲ್ಲ. ಎಂದೋ ಅನುಭವಿಸಿದ ಸುಖವನ್ನು ಮತ್ತೆ ಮತ್ತೆ ನೆನಪಿಸಿಕೊಂಡರೆ ಆಗುವುದು ದುಃಖವೇ ಹೊರತು ಸಂತೋಷವಲ್ಲ! ಬ್ಲೇಕ್-ನ ಕವನದ ಇನ್ನೊಂದೆರಡು ಸಾಲುಗಳನ್ನು ನೋಡೋಣ: The Childs Toys & the Old Mans Reasons Are the Fruits of the Two seasons ಮಗುವಿನ ಆಟಿಕೆಗಳೇ ಅದರ ಪ್ರಪಂಚ ಹಾಗೂ ಸರ್ವಸ್ವ. ಮಲಗಿ ನಿದ್ರಿಸುವಾಗಲೂ ಒಂದು ಗೊಂಬೆಯನ್ನೋ, ಅಥವಾ ಇನ್ಯಾವುದಾರೊಂದು ಆಟದ ವಸ್ತುವನ್ನೋ ಎದೆಗವಚಿಕೊಂಡು ಮಗು ಸುಖ ನಿದ್ರೆಗೆ ಜಾರುವುದನ್ನು ನಾವೆಲ್ಲಾ ಕಂಡವರೇ. ಅಂತೆಯೇ ಜೀವನ ಸಂಧ್ಯಾಕಾಲದಲ್ಲಿರುವ ಒಬ್ಬ ಹಿರಿಯ ತನ್ನ ಅನುಭವದಿಂದ ಮಾಗಿ, ಹಣ್ಣಾಗಿ, ಪಕ್ವವಾಗಿರುತ್ತಾನೆ. ಈಗ ಆ ಹಿರಿಯನ ನಿಜವಾದ ಗಳಿಕೆ, ಆಸ್ತಿ ಎಂದರೆ ಈ ಅನುಭವದ ಮೂಟೆಗಳೇ. ಅವು ಸುಖಾಸುಮ್ಮನೆ ಬಂದವುಗಳಲ್ಲ. ಪ್ರತಿಯೊಂದು ಅನುಭವದ ಹಿಂದೆಯೂ ಒಂದೊಂದು ಕಾದಂಬರಿಗಾಗುವಷ್ಟು ಸರಕು ಇದ್ದಿರಬೇಕು. ಅವನ ಮುಖದ ಸುಕ್ಕುಗಳೇ ಅದಕ್ಕೆ ಸಾಕ್ಷಿ. ಹಲ್ಲಿಲ್ಲದ ಬೊಚ್ಚು ಬಾಯಲ್ಲಿ ಅವನು ನಗುವಾಗ ಅದೆಷ್ಟೋ ಅನುಭವಗಳು ಸದ್ದಿಲ್ಲದೇ ತೂರಿಹೋಗುತ್ತಾವೋ ಏನೋ! ವಾರ್ಧಕ್ಯ ಎಂದರೆ ಮತ್ತೆ ಶಿಶುತನಕ್ಕೆ ಜಾರುವುದು: ಹಣ್ಣೆಲೆಯನ್ನು ನೋಡಿ ಚಿಗುರೆಲೆ ಹಾಸ್ಯ ಮಾಡುವುದೂ ಉಂಟು. ಸಂದಿಗ್ಧ ಕಾಲದಲ್ಲಿ ಕಿರಿಯನಾದವನು ಹಿರಿಯನೊಡನೆ ಪರಾಮರ್ಶೆ ಮಾಡುವುದೂ ಉಂಟು. ತೀರಾ ಚಿಕ್ಕವನಾದರೆ ಕಥೆ ಹೇಳು ಎಂದು ಗೋಗರೆಯುವುದೂ ಉಂಟು. ಹೀಗೆ ಮಗುವಿಗೂ ಮುದಿಯನಿಗೂ ಬಿಡಿಸಲಾರದ ನಂಟು ಉಂಟೇ ಉಂಟು. ಮಗುವಿಗೆ ಆಟವಾಡಲು ಓರಗೆಯ ಸಮವಯಸ್ಕ ಮಕ್ಕಳಿಲ್ಲದಿದ್ದರೆ ಒಳ್ಳೆಯ ಜತೆ ಅಂದರೆ ಆಜ್ಜ, ಅಜ್ಜಿಯೇ ಅಲ್ಲವೇ? ಏಕೆಂದರೆ ಇಬ್ಬರಿಗೂ ಸಮಯದ ಒತ್ತಡ, ಧಾವಂತ ಇಲ್ಲ. ಎಲ್ಲವನ್ನೂ ನಿಧಾನವಾಗಿ ಮಾಡಿದರಾಯಿತು, ಸಲ್ಪ ಹೆಚ್ಚು ಕಡಿಮೆಯಾದರೂ ಆಕಾಶ ಕಳಚಿ ಬೀಳುವುದಿಲ್ಲ ಎನ್ನುವ ವಾಸ್ತವ ಹಿರಿಯನಿಗೆ ಅನುಭವದಿಂದ ದಕ್ಕಿದರೆ, ಮಗುವಿಗೆ ಅದು ಸಹಜ ಪ್ರಾಪ್ತಿ. ಅದಕ್ಕಾಗಿಯೇ ಮರಳಿ ಬಾಲ್ಯಕ್ಕೆ ಹೋಗೋಣ. ಬದುಕಿನ ನಿತ್ಯದ ಜಂಜಾಟದಲ್ಲಿ ನಾವು ಕಳೆದುಕೊಂಡ ಆ ಶಿಶು-ಸಹಜ-ವರ್ತನೆಯನ್ನು ಮತ್ತೆ ಆವಾಹಿಸಿಕೊಳ್ಳೋಣ. ಇದು ಕೇವಲ ಹಗಲುಕನಸು, ಸಾಧಿಸಾಲಾಗದ ಗೊಡ್ಡು ಆದರ್ಶ, ಕೈಲಾಗದವ ಮೈ ಪರಚಿಕೊಂಡಂತೆ ಎಂದೆಲ್ಲಾ ಅಂದುಕೊಂಡು ಒಳಗೊಳಗೇ ನೀವೂ ನಗುತ್ತಿಲ್ಲ ತಾನೇ? ಸರಿ ಹಾಗಾದರೆ, ಈ ನೆವದಿಂದಲಾದರೂ ನಿಮ್ಮ ಮುಖದಲ್ಲಿ ಒಂದಿಷ್ಟು ಮುಗುಳ್ನಗೆ ಬಂತಲ್ಲ, ಅಷ್ಟೇ ಸಾಕು ನನಗೆ. ಈಗ ನೋಡಿ, ನಕ್ಕು ಹಗುರಾಗುವುದೊಂದೇ ಇದಕ್ಕಿರುವ ಪರಿಹಾರ ಎಂದು ನೀವೂ ನಂಬುತ್ತೀರಲ್ಲ? ಹಾಗಾದರೆ ಒಮ್ಮೆ ಜೋರಾಗಿ ನಕ್ಕುಬಿಡಿ. ನಮಸ್ಕಾರ. ****************************

ಶಿಶುತನದ ಹದನದೊಳು ಬದುಕಲೆಳಸಿ Read Post »

You cannot copy content of this page

Scroll to Top