ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಲಹರಿ

‘ಎಳೆ ಹಸಿರು ನೆನಪು ..’

ಲಹರಿ ವಸುಂಧರಾ ಕದಲೂರು    ಆಗೆಲ್ಲಾ ಮೂರ್ನಾಲ್ಕು ವರ್ಷಗಳಿಗೊಮ್ಮೆ ಮನೆಯ ಸಾಮಾಗ್ರಿಗಳನ್ನು ಗಂಟುಮೂಟೆ ಕಟ್ಟಿಕೊಂಡು ನಮ್ಮ ಕುಟುಂಬ ಊರಿಂದೂರಿಗೆ ಪ್ರಯಾಣಿಸುತ್ತಿತ್ತು. ನಾನು ಸಣ್ಣವಳಿದ್ದಾಗಿನ ವಿಷಯವಿದು. ಈ ಸಂಚಾರದ ನಿರಂತರತೆಗೆ ನಮ್ಮಪ್ಪ ಸರಕಾರಿ ನೌಕರರಾಗಿದ್ದು ಹಾಗೂ ವರ್ಗಾವಣೆಯನ್ನು ಅವರು ಸಹಜವಾಗಿ ಸ್ವೀಕರಿಸುತ್ತಿದ್ದದ್ದು ಪ್ರಮುಖವಾಗಿತ್ತು ಎನ್ನುವುದು ನನಗೀಗ ಅರ್ಥವಾಗುತ್ತಿದೆ.          ಹೀಗೆ ಪದೇ ಪದೇ ವರ್ಗವಾಗುತ್ತಿದ್ದರಿಂದ ನನ್ನ ಶಾಲಾ ಶಿಕ್ಷಣ ಮೈಸೂರು, ಹಾಸನ ಜಿಲ್ಲೆಗಳ ಹಲವು ಹಳ್ಳಿಗಳ ಸರಕಾರಿ ಶಾಲೆಗಳಲ್ಲಿ ನಡೆಯಿತು. ಮತ್ತೆ ಮತ್ತೆ  ಹೊಸ ಶಾಲೆ, ಹೊಸ ಗೆಳೆತನ, ಹೊಸ ಪರಿಸರ. ಈ ಎಲ್ಲವೂ ಆ ಬಾಲ್ಯದಲ್ಲಿ ಸಾಹಸಮಯವಾಗಿ ಕಾಣುತ್ತಿತ್ತು. ಅಂದಿನ ಸೊಗಸಿನ ದಿನಗಳ ಒಂದೆರಡು ಅನುಭವಗಳನ್ನು ಈಗ ಸುಮ್ಮನೆ ನೆನಪಿಸಿಕೊಂಡರೆ  ಸಾಕೂ ಮನಸ್ಸು ಜಿಗಿಯುವ ಹುಲ್ಲೆಮರಿಯಾಗುತ್ತದೆ.   ಆ ದಿನಗಳಲ್ಲಿ ನಮ್ಮದು ತೀರಾ ಹಗುರವಾದ ಬಟ್ಟೆಯಿಂಜ ಮಾಡಿದ ಪಾಟೀಚೀಲ. ಸ್ಲೇಟು, ಬಳಪ, ಪಠ್ಯಪುಸ್ತಕಗಳಿಗಿಂತಲೂ ಹೆಚ್ಚಾಗಿ ವಿವಿಧ ನಮೂನೆಯ ಕಲ್ಲು, ಮಿರುಗುವ ಬಟ್ಟೆ ಚೂರು, ಹಕ್ಕಿ ಪುಕ್ಕ, ಯಾವುದೋ ಹಣ್ಣು- ಕಾಯಿ-ಕಡ್ಡಿ ಚೂರು ಹೀಗೆ ಏನೇನೂ ತುಂಬಿಕೊಂಡು ಅದು ನಮ್ಮ ಅತೀ ಜೋಪಾನ ಮಾಡುವ ಆಸ್ತಿಯಾಗಿ ನಮಗದೇ ಬ್ರಹ್ಮಾಂಡವಾಗುತ್ತಿತ್ತು.  ಯಾರಾದರೂ ಹಲವು ಕೋಟಿ ರೂಪಾಯಿ ಕೊಡುತ್ತೇವೆ ಆ ಚೀಲವನ್ನು ನಮಗೆ ಕೊಡಿ ಎಂದರೆ, ಸಾರಾಸಗಟಾಗಿ ಅಷ್ಟೂ ನಗದನ್ನು ನಿರಾಕರಿಸಲು ಕಾರಣವಾಗಬಹುದಾದ ಅತ್ಯಮೂಲ್ಯ ವಸ್ತುಗಳು ಅದರಲ್ಲಿರುತ್ತಿದ್ದವು. (ಕೋಟಿಗಿರುವ ಸೊನ್ನೆ ಎಷ್ಟೆಂದು, ಅದರ ಮೌಲ್ಯ ಎಷ್ಟೆಂದು ತಾನೇ ಆಗ ಗೊತ್ತಾಗುತ್ತಿತ್ತೇ!?)     ಅದು ಒತ್ತಟ್ಟಿಗಿರಲಿ, ಸದಾ ಆರೇಳು ಮಕ್ಕಳ ಜೊತೆ ಸೇರಿ ಶಾಲಾಪಠ್ಯದೊಡನೆ ಹಲವು ಪರಿಕರಗಳನ್ನು ಹೊತ್ತು ಶಾಲೆಗೆ ಹೋಗುತ್ತಿದ್ದ ನಮ್ಮ ತಂಡವು ಯಾವ ‘ಸಾರ್ಥ’ಕ್ಕೂ (ವ್ಯಾಪಾರೀ ತಂಡ) ಕಡಿಮೆ ಇರುತ್ತಿರಲಿಲ್ಲ. ದಾರಿ ತುಂಬೆಲ್ಲಾ ಗಿಜಿಬಿಜಿ.. ಅದೇನು ಮಾತಾಡಿಕೊಳ್ಳುತ್ತಿದ್ದೆವೋ…!   ಬಟ್ಟೆಯಿಂದ ಮಾಡಿದ ಪಾಟೀಚೀಲದ ಹಿಡಿಕೆಯನ್ನು ತಲೆಯ ಮೇಲೆ ಹಾಕಿಕೊಂಡು, ಬೆನ್ನ ಹಿಂದೆ ಇಳಿಬೀಳಿಸಿ ನಡಿಗೆಯ ಲಯಕ್ಕೆ ಚೀಲವನ್ನು ಬಡಿದುಕೊಳ್ಳುತ್ತಾ, ಕೆಲವೊಮ್ಮೆ ಜೋಳಿಗೆಯಂತೆ ಹೆಗಲಿನಿಂದ ಇಳಿಸಿಕೊಂಡು, ಮತ್ತೆ ಕೆಲವೊಮ್ಮೆ ನೆತ್ತಿಯ ಮೇಲೇರಿಸಿಕೊಂಡು, ಮುಂದಿನ ಬಾರಿ ಎದೆಯ ಮುಂದಿನಿಂದ ಕುತ್ತಿಗೆಗೆ ನೇತು ಬೀಳಿಸಿಕೊಂಡು, ಸೊಂಟ ಕೈಗಳಿಗೆ ಸುತ್ತಿಕೊಂಡು, ಮೊಣಕಾಲುಗಳಿಂದ  ಚೀಲದೊಳಗೆ ಇದ್ದ ಸ್ಲೇಟನ್ನು ಬಡಿಯುತ್ತಾ ಸಾಗುತ್ತಿದ್ದಾಗ ಅದರೊಳಗಿರುವುದು ‘ಸಾಕ್ಷಾತ್ ಸರಸ್ವತಿ ಸ್ವರೂಪ’ ಎನ್ನುವುದು ಸಾಸುವೆಯ ಕಾಳಷ್ಟೂ ನೆನಪಾಗುತ್ತಿರಲಿಲ್ಲವಲ್ಲಾ ! ಅಂಥಾ ಅತಿ ಮುಗ್ಧ ಸೊಗಸುಗಾರಿಕೆಯ ಅನುಭವ ಆರೇಳು ಕೇಜಿ ಭಾರ ತೂಗುವ ಶಾಲಾ ಬ್ಯಾಗ್  ಹಾಗೂ ಮನೆಯ ಮುಂದೆಯೇ ಶಾಲಾ ವಾಹನಗಳನ್ನು ಏರಿಳಿಯುವ ನಮ್ಮೀ ಮಕ್ಕಳಿಗೆಲ್ಲಿ ಸಿಗಬೇಕು ಹೇಳಿ?       ನಾಲ್ಕನೇ ತರಗತಿಯ ವಿದ್ಯಾಭ್ಯಾಸವು ಹಾಸನ ಜಿಲ್ಲೆಯ ಅರಕಲಗೂಡು ಎಂಬ ತಾಲೂಕಿನಲ್ಲಾಯ್ತು. ಅದು ಆ ಕಾಲಕ್ಕಿನ್ನೂ ದೊಡ್ಡ ಹಳ್ಳಿಯಂತೆ ಇತ್ತೇ ಹೊರತು ಪಟ್ಟಣದ ಕುರುಹು ಅಷ್ಟಾಗಿ ಕಾಣುತ್ತಿರಲಿಲ್ಲ. ಮಧ್ಯಾಹ್ನದ ಬಿಸಿ ಊಟ ಸವಿದದ್ದು ಅಲ್ಲಿನ ಶಾಲೆಯಲ್ಲಿಯೇ ಮೊದಲು. ಜೊತೆಗೆ, ಚೈತ್ರ, ವೈಶಾಖ, ಜೇಷ್ಠ.. ಎಂಬ 12 ಮಾಸಗಳೂ, ವಸಂತ , ಗ್ರೀಷ್ಮ, ವರ್ಷ.. ಎಂಬ 6 ಋತುಗಳೂ, ಅಶ್ವಿನಿ, ಭರಣಿ, ಕೃತಿಕಾ, ರೋಹಿಣೀ.. ಎಂಬಿತ್ಯಾದಿ 27 ನಕ್ಷತ್ರಗಳ ಹೆಸರುಗಳನ್ನು ಉರುಹೊಡೆದದ್ದೂ ಸಹ ಆ ಶಾಲೆಯಲ್ಲಿಯೇ. ಆಗ ಅಭ್ಯಾಸ ಮಾಡಿದ್ದು ಈಗ ಪೂರ್ಣ ನೆನಪಿರದಿದ್ದರೂ, ಆ ಊರಿನ ಬಸ್ ನಿಲ್ದಾಣದ ಬಳಿಯಿದ್ದ ಎತ್ತರದ ಮರದ ಮೇಲೆ ತಲೆಕೆಳಗಾಗಿ ನೇತಾಡುತ್ತಿದ್ದ ನೂರಾರು ಕಪ್ಪು ಬಾವಲಿಗಳು ಮಾತ್ರ ನೆನಪಿನಾಳದಲ್ಲಿ ಹಾಗೇ ಕಪ್ಪುಬಣ್ಣದಲಿ ಹೆಪ್ಪುಗಟ್ಟಿವೆ. ಆದರೆ ಅತ್ಯಂತ ಕಡಿಮೆ ಅವಧಿಯ ಆ ಶಾಲೆಯಲ್ಲಿ ದೊರೆತ ಗೆಳೆತನದ ಹೆಸರುಗಳು ಮನದ  ನೇಪಥ್ಯಕ್ಕೆ ಸರಿದು ಮಸುಕಾಗಿರುವುದು ನನ್ನ ದುರಾದೃಷ್ಟ.         ರಾವಂದೂರು ಎಂಬ ಊರಿದೆ. ಹಾಸನ ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನಲ್ಲಿ. ಅಲ್ಲಿ ನಾನು ಐದು ಮತ್ತು ಆರನೆಯ ಇಯತ್ತೆ ಓದುವಾಗಿನ ನೆನಪುಗಳು ಮಾತ್ರ ಇನ್ನೂ ಹಸುರಾಗಿ ಸೊಗಸಾಗಿವೆ! ಅಲ್ಲಿನ  ಶಾಲಾ ಕಾರ್ಯಕ್ರಮಕ್ಕೆ ಮೋಟು ಜಡೆಗೆ ಚೌಲಿ ಹಾಕಿಸಿಕೊಂಡದ್ದು, ಡಾನ್ಸ್ ಮಾಡುವಾಗ ಸೀರೆ ಸಡಿಲವಾಗಿ ಜಾರಿಕೊಂಡದ್ದು, ಕೋಗಿಲೆ ಕಂಠವಿಲ್ಲದ ನಾನೂ ಸಹ “ಚೆಲುವಿ ಚೆಲುವಿ ಎಂದು ಅತಿಯಾಸೆ ಪಡಬೇಡ….” ಎಂದು ಜನಪದ ಗೀತೆ ಹಾಡಲು ಹೋಗಿ ಅರ್ಧಕ್ಕೇ ಬಾಯೊಣಗಿ ನನ್ನ ಸ್ವರ ನನಗೇ ಕೇಳಿಸದಂತಾಗಿ ಮುಂದೆ ಹಾಡದೇ ಬಿಟ್ಟದ್ದು, ಒಂದು ದಪ್ಪದಾಗಿರುವ ಜೀವಂತ ಮೀನನ್ನು  ಬಕೇಟಿನ ಒಳಗಿಟ್ಟುಕೊಂಡು ತಂದ ವಿಜ್ಞಾನದ ಮಾಸ್ಟರರು ಮೀನಿನ ರಚನೆ ಬಗ್ಗೆ ಪಾಠ ಮಾಡಿದ್ದು… ಎಲ್ಲವೂ ನನ್ನ ನೆನಪಿನ ಪರದೆಯ ಮೇಲೆ ಇನ್ನೂ ಚಲಿಸುತ್ತಿರುವ ಚಿತ್ರಗಳು.       ರಾವಂದೂರಿನಲ್ಲಿ ನಮಗೊಂದು ರಮಣೀಯ ಸ್ಥಳವಿತ್ತು. ಅದು ನನ್ನಣ್ಣ ಓದುತ್ತಿದ್ದ ಹೈಸ್ಕೂಲು. ಅದೇ ಊರಿನಲ್ಲಿಯೇ ತುಂಬಾ ದೂರದಲ್ಲಿತ್ತು. ಅಲ್ಲಿಗೆ ಒಂದು ಭಾನುವಾರ ನಾನು, ನನ್ನ ಗೆಳತಿಯರಾದ ಪ್ರಿಯಾ, ಬಬಿತಾ, ರೂಪ, ಶ್ವೇತಾ ಮೊದಲಾದವರು ಪಿಕ್ನಿಕ್ ಹೋಗಿದ್ದೆವು. ಬಹುಶಃ ಮನೆಯಲ್ಲಿ ಹೇಳರಲಿಲ್ಲ. ಹೇಳಿದ್ದರೆ ಅಷ್ಟು ದೂರ ಸಣ್ಣ ಮಕ್ಕಳಾದ ನಮ್ಮನ್ನು ಅವರು ಕಳಿಸುತ್ತಲೂ ಇರಲಿಲ್ಲ. ನಮಗೋ ಅದು ಮೋಸ್ಟ್ ಅಡ್ವೆಂಚರಸ್ ಪಿಕ್ನಿಕ್..! ನಾವೆಲ್ಲಾ ಆ ಹೈಸ್ಕೂಲಿನ ವಿಶಾಲ ಜಾಗ, ದೊಡ್ಡ ಕಟ್ಟಡ, ಆ ಶಾಲಾ ಆವರಣದ ಕಾರಂಜಿ ಕೊಳ, ಮರಗಳ ಸಾಲು, ವಿಶಾಲ ಮೈದಾನ ನೋಡಿ ಕಣ್ಣರಳಿಸಿಕೊಂಡು ಸಂಭ್ರಮಿಸಿದ್ದೆವು.     ಹುಣಸೇಹಣ್ಣು, ಉಪ್ಪು , ಸಕ್ಕರೆ, ಖಾರದಪುಡಿ ಬೆರೆಸಿ ಜಜ್ಜಿ ಮಾಡಿಕೊಂಡ ಅದ್ಭುತ ರುಚಿಯ ಉಂಡೆಯೇ ನಮ್ಮ ಪಿಕ್ನಿಕ್ಕಿನ ಊಟ, ಅಲ್ಲಿ ಆಡಿದ ಮರಕೋತಿ ಆಟ.. ಎಷ್ಟು ಸೊಗಸಿತ್ತು! ಮಕ್ಕಳಿನ್ನೂ ಮನೆ ಸೇರಿಲ್ಲವೆಂದು ದೊಡ್ಡವರ ಆತಂಕವು ಅಮೋಘ ಸಾಹಸದಲ್ಲಿ ಮೈ ಮರೆತಿದ್ದ ನಮಗೆ ಹೇಗೆ ಗೊತ್ತಾಗಬೇಕು?       ಸಂಜೆ ಸೂರ್ಯನನ್ನು ಅವನ ಮನೆಗೆ ಕಳಿಸಿಯೇ ನಾವು ನಮ್ಮ ನಮ್ಮ ಮನೆಗೆ  ಬಂದದ್ದು. ಈ ಬೇಜವಾಬ್ದಾರಿತನದ ಸಾಹಸಕ್ಕೆ ನನಗೆ ಮನೆಯಲ್ಲಿ ಬಹುದೊಡ್ಡ ಸನ್ಮಾನ ಕಾಯುತ್ತಿತ್ತು. ಬಾಗಿಲ ಸಂದಿಗೆ ಸೇರಿಸಿ ಕಣ್ಣು ಅಗಲಿಸಿಕೊಂಡು  ರೊಟ್ಟಿ ಮಗುಚುವ ಕೋಲಿನಿಂದ ಅಮ್ಮ ಬಿಸಿಯಾಗಿ ಕೊಟ್ಟ ಏಟಿನ ರುಚಿಯು ಇವತ್ತಿಗೆ ನಗು ಬರಿಸುವುದು ನಿಜವಾದರೂ ಆ ಹೊತ್ತಿನಲ್ಲಿ ಇನ್ಮುಂದೆ ಗೆಳೆಯರೂ ಬೇಡ, ಅವರೊಡನೆ ಮಾಡಬೇಕೆಂದಿರುವ ಪಿಕ್ನಿಕ್ಕೂ ಬೇಡವೆನಿಸುವಂತೆ ಮಾಡಿತ್ತು. ಇಷ್ಟಾದ ಮೇಲೂ ಆ ಶಾಲೆಯ ರಮ್ಯತೆಗೆ, ಅದರ ಸೊಗಸುಗಾರಿಕೆಗೆ ಸೋತ ಮನಸ್ಸು ಹೈಸ್ಕೂಲ್ ಅನ್ನು ಆ ಶಾಲೆಯಲ್ಲಿಯೇ ಓದಬೇಕೆಂದು ಸಂಕಲ್ಪಿಸಿಕೊಂಡಿತ್ತು. ಅದನ್ನು ಮಾತ್ರ ಇನ್ನೂ ಮರೆಯಲಾಗಿಲ್ಲ. ಆದರೆ ನನಗೆ ಅದೊಂದು ಈಡೇರಲಾಗದ ಕನಸಾಗಿಯೇ ಉಳಿದು ಬಿಟ್ಟದ್ದು ಮಾತ್ರ ನನ್ನ ಜೀವನದ ಪರಮ ನಿರಾಸೆಯ ವಿಷಯವಾಗಿದೆ..      ಅಷ್ಟರಲ್ಲಿ ನನ್ನ ಅಪ್ಪನಿಗೆ ಮಂಡ್ಯ ಜಿಲ್ಲೆಯತ್ತ ವರ್ಗವಾಗಿ ಹಳ್ಳಿಗಳ ಗಮ್ಮತ್ತು ನಿಧಾನವಾಗಿ ದೂರವಾಗುತ್ತಾ ಪಟ್ಟಣವೆಂಬ ಬೆರಗಿನ ಬೆಳಕು ಕಣ್ಣೊಳಗೆ ಹಾಯಲು ಶುರುವಾಯಿತು. ***********************

‘ಎಳೆ ಹಸಿರು ನೆನಪು ..’ Read Post »

ಇತರೆ, ಲಹರಿ

ಹೆಣ್ಣುಮಕ್ಕಳ ಓದು

ಲಹರಿ ವಸುಂಧರಾ ಕದಲೂರು ಒಂದು ತಮಾಷೆಯ ಲಹರಿ…     ಹೆಣ್ಣು ಮಕ್ಕಳು ಓದು ಬರಹ ಕಲಿಯೋದು ಏಕೆ? ಅವರು ಯಾವ ಸಾಮ್ರಾಜ್ಯ ಕಟ್ಟಬೇಕು? ಯಾರನ್ನ ಉದ್ಧಾರ ಮಾಡಬೇಕು? ಇವೇ ಇಂತಹವೇ ನೂರು ಪ್ರಶ್ನೆಗಳು ಹುಟ್ಟಿಕೊಳ್ತವೆ.    ಇಂಥ ಪ್ರಶ್ನೆಗಳು ಈಗ ಹೆಚ್ಚು ಇರಲಾರದು ಬಿಡಿ. ಆದರೂ ಲೇಖನಿ ಹಿಡಿದರೂ, ಕೀಲಿಮಣೆ ಕುಟ್ಟಿದರೂ ಮುಸುರೆ ತಿಕ್ಕೋದು, ತೊಟ್ಟಿಲು ತೂಗೋದು ನಿಮಗೆ ತಪ್ಪಿದ್ದಲ್ಲ ಎಂದು ಕೊಂಕು ರಾಗ ಹಾಡುವವರಿಗೇನೂ ಕಮ್ಮಿಯಿಲ್ಲ.    ಅಲ್ಲಾ ಇವರೇ.., ನಮ್ಮ ಮನೆ ಪಾತ್ರೆ ಪರಡೆಗಳನ್ನು ನಾವು ತೊಳೆದು ಸ್ವಚ್ಛ ಮಾಡಿಕೊಳ್ಳೋದ್ರಲ್ಲಿ ಏನು ತಪ್ಪಿದೆ ಹೇಳಿ? ಕೆಲಸಕ್ಕೆ ಹೊರಗೆ ಹೋಗಿ ಬಂದು ಮನೇಲಿ ಅಚ್ಚುಕಟ್ಟು ಮಾಡಬಾರದು ಅಂತ ಇದೆಯೇ? ಇಲ್ಲಾ ನಾಕಾರು ಅಕ್ಷರ ಕಲಿತರೆ ಮಕ್ಕಳನ್ನು ಹೆರಬಾರದು ಎಂದು ಎಲ್ಲಾದರೂ ಕಾನೂನಾಗಿದೆಯೇ?    ಒಟ್ಟಿನಲ್ಲಿ ಜನಕ್ಕೆ ಹೇಗಿದ್ದರೂ ತಪ್ಪೇ… ಅವರಿಗೆ ಕಂಡವರನ್ನು ಮೂದಲಿಸದೇ ಇರಲಾಗದು. ಇತರರನ್ನು ಎತ್ತಾಡದೇ ಹೋದರೆ ತಿಂದದ್ದೂ ಜೀರ್ಣವಾಗದು. ಕಲಹ ಪ್ರಿಯರು ಮೊಸರಲ್ಲಿ ಕಲ್ಲು ಹುಡುಕೀ ಹುಡುಕಿ, ಅದು ಸಿಗದೇ ಹೋದಾಗ ತಾವೇ ನಾಕಾರು ಬೆಣಚು ಚೂರು ಹಾಕಿಬರುವಷ್ಟು ಮಟ್ಟಿಗೆ ಕೆಟ್ಟಿರುತ್ತಾರೆ.   ಈಗಂತೂ ಮನೇಲಿ ಕೂರುವವರಿಗಿಂತಲೂ ಹೊರಗೆ ಒಂದಿಲ್ಲೊಂದು ಕೆಲಸಕ್ಕೆ ಹೋಗಿ ಬರುವವರೇ ಹೆಚ್ಚು. ಹಳ್ಳಿಯಿರಲಿ, ಪಟ್ಟಣವಿರಲಿ ವಿದ್ಯೆ ಕಲಿಯುವುದಕ್ಕೆ ಹಿಂದಿನಂತೆ ಅಡ್ಡಿ ಆತಂಕಗಳ ಹರ್ಡಲ್ಸ್ ಹೆಚ್ಚು ಇಲ್ಲ. ಹಾಗಾಗಿ ಹೆಣ್ಣುಮಕ್ಕಳು ವಿದ್ಯಾವತಿಯರಾಗುವ ನಾಗಾಲೋಟಕ್ಕೆ ತಡೆಯಂತೂ ಸಧ್ಯಕ್ಕಿಲ್ಲ.    ಆದರೂ ಒಂದು ಸಂದೇಹ ಯಾವಾಗಲೂ ಕಾಡುತ್ತಿರುತ್ತದೆ.     ಏಕೆ ಹಿಂದಿನವರು ಮಹಿಳೆಯರನ್ನು ಓದುವ, ಕಲಿಯುವ ಅಪೂರ್ವ ಅವಕಾಶಗಳಿಂದ ವಂಚಿತರನ್ನಾಗಿ ಮಾಡಿದ್ದರು ಎಂದು..?!      ಈಗಿನಂತೆ ಸೈನ್ಸು, ಕಾಮರ್ಸು, ಆರ್ಟ್ಸು ಎಂದೆಲ್ಲಾ ಹೆಚ್ಚೇನು ಪಠ್ಯಶಾಖೆಗಳು ಇರದಿದ್ದ ಕಾಲದಲ್ಲಿ ಏನೇನಿತ್ತು ಓದಲು? ಮಹಾಕಾವ್ಯಗಳೂ, ಕತೆ- ಪುರಾಣಗಳೂ, ವೇದೋಪನಿಷತ್ತುಗಳೂ ಇವೇ ಮೊದಲಾದವು ಅಲ್ಲವೇ?     ವೇದೋಪನಿಷತ್ತು ಕಲಿಯಲು ಅನ್ಯರಿಗೆ ನಿಷಿದ್ಧವಿದ್ದಾಗ ಪುರಾಣ ಕಾವ್ಯಗಳನ್ನಲ್ಲದೇ ವಿದ್ಯಾಕಾಂಕ್ಷಿಗಳಿಗೆ ಮತ್ತೇನು ಕಲಿಸಬೇಕಿತ್ತು? ಅಕ್ಷರಾಭ್ಯಾಸ, ಶ್ಲೋಕಾಭ್ಯಾಸ, ಸಾಮಾನ್ಯ ಲೆಕ್ಕ – ಪುಕ್ಕ ಕಲಿಯುವುದು ಬಿಟ್ಟರೆ ಉಳಿಯುವುದು ಮಹಾಕಾವ್ಯಗಳೇ…    ಅವಾದರೂ ಎಂತಹವು..!? ಲೋಕಪ್ರಸಿದ್ಧವಾದ ರಾಮಾಯಣ – ಮಹಾಭಾರತ; ಅದರ ಉಪಕತೆ – ಪುರಾಣ…   ಇನ್ನು ನಮ್ಮ ಹೆಣ್ಣುಮಕ್ಕಳು ಮಹಾಕಾವ್ಯಗಳನ್ನು ಓದಿ, ಅಭ್ಯಾಸ ಮಾಡಿ ತಿಳಿಯುವುದಾದರೂ ಏನಿತ್ತು ಹೇಳಿ? ಬರಿಯ ಶಂಕೆ, ಅಪಮಾನ, ಸೇಡಿನ ಕಿಡಿ, ಮತ್ಸರ, ಶಪಥ, ತಿರಸ್ಕಾರ, ಅಪಮಾನ, ಅಗಲುವಿಕೆ, ಯುದ್ಧ, ಸಾವು, ನೋವು ಇತ್ಯಾದಿ, ಇತ್ಯಾದಿ, ಇತ್ಯಾದಿ…     ಇಂತಹವನ್ನು ಓದುವ ಬದಲು ಮನೆವಾರ್ತೆಗಳೇ ಮುಖ್ಯ ಎಂದುಕೊಂಡು ಓದಿನತ್ತ ನಮ್ಮ ಹೆಣ್ಣುಮಕ್ಕಳು ಮುಖ ತಿರುಗಿಸಿರಲಿಕ್ಕೂ ಸಾಕು.       ಮನೆ ಕೆಲಸ ಎಂದರೆ ಬರೀ ಅಡುಗೆ, ತೊಳಿ- ಬಳಿ ಅಲ್ಲ. ಅಡುಗೆಗೆ ಪೂರಕ ಸಾಮಾಗ್ರಿಗಳು ಇವೆಯೇ ಎಂದು ನೋಡಿಕೊಂಡು ಅವನ್ನು ಸಿದ್ಧಮಾಡಿಕೊಳ್ಳಬೇಕು. ಏನೇನು ಮಾಡಬೇಕು, ಮಳೆಗಾಲಕ್ಕೆ, ಬೇಸಿಗೆಗೆ, ಚಳಿಗೆ ಹೀಗೆ ಹವಮಾನಕ್ಕೆ ಅನುಕೂಲಕರ ಸಿದ್ಧತೆಯಾಗಿರಬೇಕು. ಹಬ್ಬ ಹರಿದಿನ ಶುಭಕಾರ್ಯ ಇತರೆ ಸಮಾರಂಭಗಳಿಗೆ ತಯಾರಿ ಮಾಡಬೇಕು. ಮಕ್ಕಳು – ಹಿರಿಯರು ಹೊರಗೆ ದುಡಿಯಲು ಹೋಗುವವರ ದೇಖರೇಖಿ ನೋಡಬೇಕು. ಬಂಧು ಬಳಗ, ಅತಿಥಿ ಅಭ್ಯಾಗತರ ಯೋಗಕ್ಷೇಮ ವಿಚಾರಿಸಿಕೊಳ್ಳಬೇಕು. ಮನೆವಾರ್ತೆ ಒಂದೇ ಎರಡೇ…!    ಇವೇ ಇಷ್ಟೆಲ್ಲಾ ಇರುವಾಗ ಪುರಾಣ- ಕಾವ್ಯ ಓದಿಕೊಂಡು ಕೂರಲಿಕ್ಕಾಗುತ್ತಿತ್ತೇ? ಅದೇನು ಹೊಟ್ಟೆ ತುಂಬಿಸುತ್ತದೆಯೇ? ನೆತ್ತಿ ಕಾಯುತ್ತದೆಯೇ? ಹಾಗಾಗಿ ಕಲಿಯಲು ನಮ್ಮ ಹೆಣ್ಣು ಮಕ್ಕಳೂ ಅಸಡ್ಡೆ ಮಾಡಿರಬಹುದು ಬಿಡಿ.       ಇಲ್ಲಾ ಏನಿದೆ ಇದರೊಳಗೆ ಎಂದು ಗುರುಗಳ ಗರಡಿಗೆ ಕಲಿಯಲು ಹೋದವರಿಗೆ ಹೆಣ್ಣುಗಳನ್ನು ಕಾವ್ಯದೊಳಗೆ ಇನ್ನಿಲ್ಲದಂತೆ ಅಬಲೆಯರೂ, ಹೊಟ್ಟೆಕಿಚ್ಚಿನವರೂ, ಯುದ್ಧ ಕಾರಣರೂ, ತಂದು ಹಾಕುವವರೂ, ಕಲಹ ಪ್ರಿಯರೂ ಹೀಗೆ ಚಿತ್ರಿಸಿರುವುದನ್ನು ಕಂಡು ಕೋಪಗೊಂಡು ಇದೇಕೆ ಹೀಗೆ..?! ಎಂದು ಮಾತಿನ ಚಕಮಕಿಯಾಗಿ ವಾದವಿವಾದ ತಾರಕಕ್ಕೆ ಹಚ್ಚಿಕೊಂಡಿರಬಹುದು.      ಹಾಗಾಗಿ ಇದೆಲ್ಲಾ ಬೇಡಬಿಡು, ಚೆನ್ನಾದ ವಿಚಾರಗಳು ಕಲಿಯುವ ಸಂದರ್ಭ ಬಂದಾಗಲೇ ನಾವು ಓದುವ ಬಗ್ಗೆ ಚಿಂತಿಸೋಣ ಎಂದು ನಮ್ಮ ಹೆಣ್ಣುಮಕ್ಕಳು ವಿಚಾರ ಮಾಡಿರಬೇಕು.   ಹಾಗಾಗಿಯೇ ಆಧುನಿಕ ವಿದ್ಯಾಭ್ಯಾಸ ಕ್ರಮ ಜಾರಿಗೆ ಬಂದು ಕಲೆ, ವಿಜ್ಞಾನ, ವಾಣಿಜ್ಯ ವಿಚಾರಗಳು ಓದುವ ರೂಢಿ ಬೆಳೆದು ಬಂದ ಮೇಲೆಯೇ ನಮ್ಮ ಹೆಣ್ಣುಮಕ್ಕಳು ಓದಿನಲ್ಲಿ ಮೇಲುಗೈ ಸಾಧಿಸಿರುವುದು…  ಇದು ನನ್ನ ಒಂದು ವಿಚಾರವಷ್ಟೇ… ಸತ್ಯಕ್ಕೆ ಹಲವು ಮಗ್ಗಲುಗಳಿವೆ. – —

ಹೆಣ್ಣುಮಕ್ಕಳ ಓದು Read Post »

ಇತರೆ, ಲಹರಿ

ನಾನು ನಾನೇ…..

ಲಹರಿ ರಾಧಿಕಾ ಕಾಮತ್ ಜೀವನ ಒಂದು ಚಲನಚಿತ್ರ… ನಮ್ಮದು ಅದರಲ್ಲಿ ಒಂದೊಂದು ಪಾತ್ರ… ಮೇಲಿರುವ ನಿರ್ದೇಶಕ ಹಿಡಿದಿರುವ ಸೂತ್ರ… ಕೊನೆಗೆ ಎಲ್ಲರೂ ಮರಳಬೇಕು ಅವನ ಹತ್ರ… ಈ ಜೀವನ ಎಂಬ ನಾಟಕ/ ಚಲನಚಿತ್ರದಲ್ಲಿ ನಾವು ಹುಟ್ಟಿನಿಂದ  ಹಲವಾರು ಪಾತ್ರಗಳನ್ನು ನಿಭಾಯಿಸುತ್ತಲೇ ಇರುತ್ತೇವೆ. ಅದು ನಮ್ಮ ಇಷ್ಟದ್ದಾಗಲಿ ಇಷ್ಟವಿಲ್ಲದ್ದಾಗಲಿ ನಾವು ನಿರ್ವಹಿಸಲೇ ಬೇಕು. ನಾನು ಹುಟ್ಟಿದಾಗ ಒಂದೇ ಬಾರಿಗೆ ಮಗಳು ,ಮೊಮ್ಮಗಳು ತಂಗಿ ಎಂಬ ಮೂರು ಪಾತ್ರಗಳನ್ನು ಒಟ್ಟಿಗೆ ನಿಭಾಯಿಸಿದ್ದೆ. ಮುಂದೆ ನಾಲ್ಕೈದು ವರ್ಷ ಕಳೆದಾಗ ಅಮ್ಮನ ಮಮತೆ ಕಂಡು ನನಗೂ ಅಮ್ಮನ ಪಾತ್ರ ನಿರ್ವಹಿಸುವ ಆಸೆ. ಆಗ ನನಗೆ ಮಗುವಾಗಿದ್ದು ನನ್ನ ಬಳಿ ಇದ್ದ ಒಂದು ಬೊಂಬೆ.ಅದನ್ನೇ ಮಗುವೆಂದು ತಿಳಿದು ಅಮ್ಮನಾಗಿಬಿಟ್ಟಿದ್ದೆ. ಮುಂದೆ ಮುಂಬೈನಲ್ಲಿದ್ದ ನನ್ನ ಅಕ್ಕ ಊರಿಗೆ ಬಂದಾಗ ಅವಳು ಕೇಳಿದ ,ಓದಿದ ಸಿಂಡ್ರೆಲ್ಲಾ, ಸ್ನೋವೈಟ್  ಕತೆ ಕೇಳಿದಾಗ ಅದರಲ್ಲಿದ್ದ ರಾಜಕುಮಾರಿಯೂ ನಾನೇ ಆಗಿಬಿಟ್ಟಿದ್ದೆ… ಮುಂದೆ ಶಾಲೆಗೆ ಹೋದಾಗ ನಮ್ಮನ್ನು ಪ್ರೀತಿಯಿಂದ ನೋಡಿಕೊಂಡ ಶಿಕ್ಷಕಿಯನ್ನು ಕಂಡಾಗ ನನಗೂ ಶಿಕ್ಷಕಿಯಾಗಬೇಕು  ಎಂಬ ಆಸೆ. ಅದನ್ನು ನೆರವೇರಿಸಿಬಿಟ್ಟಿದ್ದ ಆ ಸೂತ್ರಧಾರ. ಮುಂದೆ ಬಂಧು ಬಳಗದ ಹೊರತಾಗಿ ಸ್ನೇಹಿತೆ ಎಂಬ ಪಾತ್ರ ನನಗಿಷ್ಟವಾಗಿತ್ತು.ಅದನ್ನು ಎಲ್ಲ ಕಡೆಗಳಲ್ಲೂ  ನಿರ್ವಹಿಸಿದೆ ಮುಂದಿನದು ಪತ್ನಿ,ಸೊಸೆ,ಅಮ್ಮನ ಪಾತ್ರ ಗಳು ನನ್ನ ಹೆಗಲೇರಿಬಿಟ್ಟವು..ಇದು ತುಸು ತ್ರಾಸಾದಯಕ ಪಾತ್ರಗಳು. ಯಾವುದೇ ರಿಹರ್ಸಲ್(ಪೂರ್ವತಯಾರಿ) ಗಳಿಲ್ಲದೆ ಮಾಡಬೇಕಾದ ಪಾತ್ರಗಳು.. ಕಷ್ಟವೋ ಸುಖವೊ ಸಧ್ಯಕ್ಕೆ ಅವನ್ನು ಕೂಡ ನಿರ್ವಹಿಸಿರುವೆ.. ಇನ್ನು ಸಧ್ಯ ಎರಡು ಪಾತ್ರಗಳು ಬಾಕಿ ಇವೆ..ಅತ್ತೆ ಹಾಗೂ ಅಜ್ಜಿಯ ಪಾತ್ರ ಆ ಸೂತ್ರದಾರನ ದಾರ ಎಷ್ಟು ಉದ್ದ ಇದೆಯೋ ಗೊತ್ತಿಲ್ಲ. ಅದನ್ನು ನನ್ನಿಂದ ಆಡಿಸುವ ಇಚ್ಛೆ ಅವನಿಗಿದೆಯೋ.. ನನ್ನಿಂದ ಅದು ನಿರ್ವಹಿಸಲು ಸಾಧ್ಯವಿದೆಯೋ ನನಗೆ ತಿಳಿದಿಲ್ಲ… ಒಟ್ಟಾರೆ ನಾನು ನಾನಾಗಿಯೇ…ನಾನೇ ಪಾತ್ರವಾಗಿ ಇದುವರೆಗೆ ನಟಿಸಿರುವೆ… ಕೆಲವೊಂದು ಕಡೆ ಪೋಷಕ ನಟಿ,ಕೆಲವೊಂದು ಕಡೆ ನಾಯಕ ನಟಿ,ಇನ್ನೂ ಕೆಲವು ಕಡೆ ಖಳನಾಯಕಿಯಾಗಿಯೂ ನಟಿಸುವ ಸಂದರ್ಭ ಬಂದಿರುತ್ತದೆ. ಈ ಜೀವನ ಎಂಬ ನಾಟಕದಲ್ಲಿ ನಾವು ನಿರ್ದೇಶಕರಾಗಲು ಖಂಡಿತಾ ಸಾಧ್ಯವಿಲ್ಲ ಕೊನೆಯದಾಗಿ ನಾವು ನೋಡುವ ಚಲನಚಿತ್ರಗಳ ನಟರಿಗೆ ಇಷ್ಟು ಪಾತ್ರಗಳಲ್ಲಿ ನಿಮಗೆ ಇಷ್ಟವಾದ ಪಾತ್ರ ಯಾವುದು ಅಂತ ಕೇಳ್ತಾರಲ್ಲ ಹಾಗೆಯೇ ನನಗೇನಾದರೂ ಕೇಳಿದರೆ ನನ್ನ ಉತ್ತರ ಸ್ನೇಹಿತೆಯ ಪಾತ್ರ *****

ನಾನು ನಾನೇ….. Read Post »

ಇತರೆ, ಲಹರಿ

ಶ್ರಾವಣಕ್ಕೊಂದು ತೋರಣ

ಲಹರಿ ಪ್ರಜ್ಞಾ ಮತ್ತಿಹಳ್ಳಿ ಭರ‍್ರೋ…. ಎಂದು ಬೀಸುತ್ತಿದೆ ಗಾಳಿ. ಅನಾದಿ ಸೇಡೊಂದು ಹೂಂಕರಿಸಿ ಬಂದಂತೆ ಉರುಳಿ ಬೀಳುತ್ತಿವೆ ಹಳೆ ಮರದ ಗೆಲ್ಲುಗಳು. ನಡುಹಗಲೆ ಕತ್ತಲಾಗಿದೆ ಕರೆಂಟಿಲ್ಲದ ಒಳಮನೆಯಲ್ಲಿ. ತೌರಿಗೆ ಹೋದ ಹೊಸ ಸೊಸೆಯ ಕೋಣೆಯಲ್ಲಿ ಕಪಾಟಿನೊಳಖಾನೆಯಲ್ಲಿ ಮಡಿಸಿಟ್ಟ ರೇಷ್ಮೆ ಸೀರೆ ಅಸಹನೆಯಿಂದ ಮೈ ಕೊಡವಿ ಕೇಳುತ್ತಿದೆ ಎಂದು ಬರುತ್ತಾಳೆ? ಒಮ್ಮಲೆ ರಪರಪ ರಾಚಲಾರಂಭಿಸುತ್ತದೆ ಮಳೆ ಎಲ್ಲವನ್ನೂ ನೆನಪಿಸುವಂತೆ ಮತ್ತೆ ಎಲ್ಲವನ್ನೂ ಮರೆಸುವಂತೆ. ಕನ್ನಡಿಗಂಟಿಸಿದ ಬಿಂದಿಯೊಂದು ಗೋಡೆಯ ಕ್ಯಾಲಂಡರಿನತ್ತ ನೋಡಿ ಸಣ್ಣಗೆ ಕಣ್ಣು ಅರಳಿಸುತ್ತದೆ. ಸೋಮವಾರವೇ ಅಮಾವಾಸ್ಯೆ. ಅಂದರೆ ಇನ್ನು ತಡವಿಲ್ಲ. ಅಪ್ಪ ಕೊಡಿಸಿದ ಹೊಸ ಸೀರೆಯುಟ್ಟು ಅಮ್ಮ ನೀರೆರೆದು ಬೆಳೆಸಿದ ಜಾಜಿ ದಂಡೆ ಮುಡಿದು ಬಂದು ಬಿಡುತ್ತಾಳೆ. ಆಷಾಡ ತಿಂಗಳಿಡೀ ಈ ಕೋಣೆಯಲ್ಲಿ ಹೆಪ್ಪುಗಟ್ಟಿದ ವಿರಹದುರಿಯ ಅಸಹನೆಯೊಂದು ಹೇಳ ಹೆಸರಿಲ್ಲದೆ ಓಡಿ ಹೋಗುತ್ತದೆ. ಹೊಸ ಸೊಸೆಯೆದುರು ತನ್ನ ಕ್ರಮ ಪದ್ಧತಿಗಳ್ಯಾವುವೂ ಕಡಿಮೆಯಿಲ್ಲವೆಂದು ನಿರೂಪಿಸಲಿಕ್ಕೆ ಹಳೆಯ ರೂಢಿಗಳನ್ನೆಲ್ಲ ನೆನಪು ಮಾಡಿಕೊಂಡು ಪ್ರತಿ ಮಂಗಳವಾರವೂ ಗೌರಿಪೂಜೆ, ಶುಕ್ರವಾರ ಲಕ್ಷ್ಮಿಪೂಜೆ ಅಂತೆಲ್ಲ ಮಾಡಿಸಬೇಕೆಂದು ಹಂಬಲಿಸುತ್ತ ಸರಭರ ಓಡಾಡುತ್ತಿದ್ದಾಳೆ ಅತ್ತೆ. ಇಷ್ಟು ದಿವಸ ಮಂಡಿ ನೋವು ಅಂತ ನರಳುತ್ತಿದ್ದವಳಲ್ಲೆ ಆವಾಹಿಸಲ್ಪಟ್ಟ ಹೊಸ ಉಮೇದು ನೋಡಿ ಖುಷಿಯಾದ ಮಾವ ಅವಳ ಟ್ರಂಕಿನ ಅಡಿಯಿಂದ ಹೊರ ಬರುವ ಒಂದೊಂದೇ ರೇಶ್ಮೆ ಸೀರೆಗಳ ನೋಡುತ್ತ ತನ್ನ ಆಷಾಢದ ವಿರಹ ನೆನಪಿಸಿಕೊಳ್ಳುತ್ತಿದ್ದಾನೆ.  ಇನ್ನೇನು ಪಾದವೂರಲಿದೆ ಶ್ರಾವಣ. ಜ್ಯೇಷ್ಠ, ಆಷಾಢಗಳಲ್ಲಿ ಬಿಡುವಿಲ್ಲದೆ ಸುರಿದ ಮಳೆ ಶ್ರಾವಣದಲ್ಲಿ ತನ್ನ ಧಾರಾಗತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಳ್ಳುತ್ತದೆ. ಒಂದುಕ್ಷಣ ಹನಿಯುದುರಿಸುವ ಮೋಡಗಳು ಮುಂದೋಡಿದ ಕೂಡಲೆ ಎಳೆ ಬಿಸಿಲು ಬೆನ್ನಟ್ಟಿ ಬರುತ್ತದೆ. ಅದಕ್ಕಾಗಿಯೇ ಬೇಂದ್ರೆಯವರು ಹೇಳಿದ್ದು “ಅಳಲು ನಗಲು ತಡವೆ ಇಲ್ಲ, ಇದುವೆ ನಿನಗೆ ಆಟವೆಲ್ಲ ಬಾರೋ ದಿವ್ಯ ಚಾರಣಾ ತುಂಟ ಹುಡುಗ ಶ್ರಾವಣಾ” ಹಾಗೆ ಹೇಳದೇ ಕೇಳದೇ ರಜಾ ಹಾಕಿ ಹೋದ ಸೂರ್ಯ ಮತ್ತೆ ಆಗೀಗ ಕಾಣಿಸಿಕೊಳ್ಳತೊಡಗಿದ್ದೇ ಗಿಡಗಳ ಚೈತನ್ಯ ಪರಿಧಿ ಹಿಗ್ಗತೊಡಗುತ್ತದೆ.ಹೆಂಚಿನ ಮೇಲೆ ಜರ‍್ರೆನ್ನುವ ಮಳೆಯ ಅನಾಹತ ನಾದ ಕೇಳಿ ಕೇಳಿ ಸಾಕಾದ ಕಂಬಗಳು ಬಾಗಿಲಾಚೆಗಿನ ಪಾಗಾರದತ್ತ ನೋಟ ಹರಿಸುತ್ತಿವೆ. ಕೆಂಪು ಕಲ್ಲಿನ ಅದರ ಮೈ ತುಂಬ ಹಚ್ಚ ಹಸಿರಿನ ಪಾಚಿಯ ಅಂಗಿ ಬೆಳೆಯುತ್ತಿದೆ. ಬಿರುಬಿಸಿಲ ತಾಪಕ್ಕೆ ನೆಲದೊಳಗೆ ಗೆಡ್ಡೆರೂಪದಲ್ಲಿ ತಲೆ ಮರೆಸಿಕೊಂಡಿದ್ದ ಭೂಚಕ್ರ ಕೆಂಪನೆಯ ಬೆಂಕಿ ಚೆಂಡಾಗಿ ಅರಳಲು ಮೊಗ್ಗೊಡೆದು ತಯಾರಾಗಿದೆ. ಸರಸರನೆ ಚಿಗಿತುಕೊಂಡ ಡೇರೆ ಹಿಳ್ಳೆ, ಶ್ಯಾವಂತಿಗೆಗಳು ಹೊಸ ಸೊಸೆಯಷ್ಟೇ ಚೆಂದಗೆ ಸಿಂಗರಿಸಿಕೊಂಡು ನಗುತ್ತಿವೆ. ಅಂಗಳದ ತುಂಬ ಹೆಸರೇ ಗೊತ್ತಿಲ್ಲದ ಕಳೆಗಿಡಗಳು ಪುಟುಪುಟು ಎದ್ದು ನಿಂತುಬಿಟ್ಟಿವೆ. ಯಾರೂ ನೆಡದಿದ್ದರೂ ಎಲ್ಲಿಯದೊ ನೆಲದ ಬೀಜಗಳು ಗಾಳಿ ಸವಾರಿ ಮಾಡಿಕೊಂಡು ಇಷ್ಟು ದೂರ ಬಂದು ಈ ಮಣ್ಣ ಮೈಯಲ್ಲಿ ಮುಖ ಒತ್ತಿ ಕಾಯುವುದೆಂದರೆ, ಆಮೇಲೆ ಯಾವಾಗಲೊ ಬೀಳುವ ಮಳೆಹನಿಯ ಕರೆಗೆ ಓಗೊಟ್ಟು ಚಿಗಿತು ಕುಡಿಯೊಡೆಯುವುದೆಂದರೆ ಅದೆಂತಹ ಪ್ರೀತಿಯ ಋಣಾನುಬಂಧ ಇರಬಹುದು! ಅದಿನ್ನೆಂತಹ ಜೀವದುನ್ಮಾದ ಛಲವಿರಬಹುದು! ಎಲ್ಲಿ ನೋಡಿದರಲ್ಲಿ ಹಸುರಿನ ಹೊಸ ಗಾನ ವಿತಾನ. ಬೇಂದ್ರೆಯವರು ಉದ್ಘರಿಸಿದಂತೆ  “ಬೇಲಿಗೂ ಹೂ ಅರಳಿದೆ ನೆಲಕೆ ಹರೆಯವು ಮರಳಿದೆ ಭೂಮಿ ತಾಯ್ ಒಡಮುರಿದು ಎದ್ದಳೋ ಶ್ರಾವಣದ ಸಿರಿ ಬರಲಿದೆ ಮಣ್ಣಹುಡಿಯ ಕಣಕಣವೂ ಕಣ್ಣಾಗಿ ಪಡೆದು ಬಣ್ಣಗಳ ಜಾತ್ರೆ ಶುರುವಾಗುತ್ತದೆ. ಅಂಗಳದ ತುಂಬ ಮಲ್ಲಿಗೆ, ಅಬ್ಬಲ್ಲಿಗೆ, ಗೆಂಟಿಗೆ, ದಾಸಾಳ, ಶ್ಯಾವಂತಿಗೆ, ಗುಲಾಬಿ, ಶಂಖಪುಷ್ಪ ಒಂದೇ ಎರಡೇ ನೂರಾರು ಹೂಗಳ ಸಂತೆ ನೆರೆಯಲಿದೆ. ಈ ಸೊಬಗು ನೋಡಲು ಮುಗಿಲಂಚಿನಲ್ಲಿ ಮೋಡ ಬಾಗಿ ನಿಲ್ಲುತ್ತದೆ. ಯಾವ ಹೂವಿನಂಗಡಿಗೆ ನುಗ್ಗಬೇಕೊ ತಿಳಿಯದ ಗೊಂದಲದಲ್ಲಿ ಪಾತರಗಿತ್ತಿಗಳು ಗಲಿಬಿಲಿಯಿಂದ ಕುಪ್ಪಳಿಸಬೇಕಾಗುತ್ತದೆ. ಮಸುಕು ಹರಿದು ಪಕ್ಕ ತೆರೆದು ಮುಕ್ತಿ ಪಡೆಯುವ ಚಿಟ್ಟೆಗಳು ಅಪ್ಸರೆಯರೇ ಅಂಗಳಕ್ಕಿಳಿದ ಭಾಸ ಮೂಡಿಸುತ್ತವೆ. ಮನೆ ಬಿಟ್ಟು ಹೊರಗೆ ಬರಲಾರದಂತೆ ಸುರಿದ ಮಳೆಯೊಮ್ಮೆ ಬಿಡುವು ಕೊಟ್ಟರೆ ಬಾಗಿಲಾಚೆಗೆ ಗೇಟು ದಾಟಿ ಬಯಲಿಗಿಳಿಯಬಹುದು. ಹಿಂಡು ಮೋಡಗಳು ದಂಡೆತ್ತಿ ಹೊರಟಂತೆ ಓಡುವುದ ನೋಡಬಹುದು. ತುಂಬಿ ಹರಿವ ಕೆರೆಯ ಕೆನ್ನೆ ಮೇಲೆ ಮುತ್ತಿಡುವ ತುಟಿಯಂತೆ ಕೂತ ಕೆನ್ನೈದಿಲೆಗೆ ಕೈ ಬೀಸಬಹುದು. ಅರೆರೆ ಇದೇನಾಶ್ಚರ್ಯ ಕೊಳವು ನೀಲಿ ಮುಗಿಲಂತೆ ಕಾಣುತ್ತಿದೆ, ಮುಗಿಲು ನೀರಕೊಳದಂತೆ ಕಾಣುತ್ತಿದೆ. ಬೇಂದ್ರೆ ಕವನದ ಸಾಲು ಹೇಳುವಂತೆ ಕೃಷ್ಣವರ್ಣದ ವಾಸುದೇವ ಬೀರಿದ ಬೆಳಕು ಘನ ನೀಲ ಗಗನದಲಿ ಸೋಸಿ ಬಂದಂತೆ ನೀಲ ಘನ ವೃಷ್ಟಿಯನ್ನುಂಡಾ ವಸುಂಧರೆಯು ಹಸಿರಿನಲಿ ಕಾಮನನೆ ಹಡೆದು ತಂದಂತೆ. ಹಸಿರುಡುಗೆಯುಟ್ಟು ಹೂ ಮುಡಿದುಕೊಳ್ಳುವ ಶ್ರಾವಣದಲ್ಲಿ ಸಾಲುಸಾಲು ಹಬ್ಬಗಳು. ಪ್ರತಿ ದಿನವೂ ಒಂದೊಂದು ವೃತ, ಸಡಗರ. ನಾಗಪ್ಪನಿಗೆ ತನಿ ಎರೆಯುವ ಚೌತಿ, ಅರಳು-ಎಳ್ಳು-ಶೆಂಗಾ-ಸೇವಿನುಂಡೆಗಳ ಪಂಚಮಿ. ಎತ್ತೆತ್ತರದ ಮರದ ಗೆಲ್ಲುಗಳಲಿ ಜೀಕುವ ಜೋಕಾಲಿ. ಹೊಸ ಜನಿವಾರ ಧರಿಸುವ ನೂಲು ಹುಣ್ಣಿಮೆ, ಅಣ್ಣ-ತಮ್ಮಂದಿರ ಪ್ರೀತಿ-ವಾತ್ಸಲ್ಯಗಳ ನವೀಕರಣಕ್ಕೆ ರಕ್ಷಾ ಬಂಧನ. ಎರಡನೆ ಶುಕ್ರವಾರದ ವರಮಹಾಲಕ್ಷ್ಮಿ ಕೃಷ್ಣ ಪಕ್ಷದ ಅಷ್ಟಮಿಯಂದು ಗೋಕುಲಾಷ್ಟಮಿ. ಮತ್ತೆ ಹತ್ತು ದಿನ ಕಳೆಯುತ್ತಿದ್ದಂತೆ ಭಾದ್ರಪದದ ಸ್ವರ್ಣಗೌರಿ ವೃತ. ಮರುದಿನ ಬರುತ್ತಾನೆ ಗಣೇಶ. ಐದು ದಿನದ ಪೆಂಡಾಲುಗಳು, ಬೀದಿಗಳಲ್ಲಿ ಮೆರವಣಿಗೆ ಎಳೆಯಷ್ಟಮಿ, ಅನಂತನ ಚತುರ್ದಶಿ, ಪಿತೃಪಕ್ಷದ ಶ್ರಾದ್ಧಗಳು, ಮಹಾಲಯ ಅಮಾವಾಸ್ಯೆ.  ಓಹ್ ಇನ್ನು ಅಡಿಗೆ ಮನೆಗೆ ಬಿಡುವೇ ಇಲ್ಲ. ಸಣ್ಣಗೆ ಬೆಂಕಿಯುರಿ ಮಾಡಿಕೊಂಡು ಒಂದೊAದೇ ಕಾಳುಗಳನ್ನು ಹುರಿದುಕೊಳ್ಳಬೇಕು. ಆಚೀಚೆ ಮನೆಯವರಿಗೆ ಘಂ ಎಂಬ ವಾಸನೆ ತಲುಪಿ ಯಾವ ಉಂಡೆಗಳ ತಯಾರಿ ನಡೆದಿದೆ ಎಂಬ ಸುದ್ದಿ ತಲುಪಿಯೇ ಬಿಡುತ್ತದೆ. ಹೆಸರು, ಕಡಲೆ, ಪುಟಾಣಿಗಳೆಲ್ಲ ಹುರಿದು ಕೆಂಪಾಗಿ ಡಬ್ಬಿಯಲ್ಲಿ ಕೂತು ಗಿರಣಿಗೆ ಹೋಗುತ್ತವೆ. ಪಂಚಮಿ ಇದಿರಿರುವಾಗ ಎಷ್ಟೇ ಮಳೆಯಿದ್ದರೂ ಕರೆಂಟಿದ್ದಷ್ಟೂ ಹೊತ್ತು ಗಿರಣಿ ತೆರೆದುಕೊಂಡು ಕೂಡುತ್ತಾನೆ ಆತ. ಹಿಟ್ಟು ಬೀಸಿಕೊಂಡು ಬಂದೊಡನೆ ಶುರುವಾಗುತ್ತದೆ ಬಿಡುವಿಲ್ಲದ ಕೆಲಸ. ಕರದಂಟಿನುಂಡೆ, ಸೇವಿನುಂಡೆ, ಲಡ್ಡಕಿಯುಂಡೆ, ತಂಬಿಟ್ಟು, ರವೆಲಾಡು, ಬೇಸನ್ ಲಾಡು ಪ್ರತಿ ಮನೆಯಲ್ಲೂ ಕಡೇ ಪಕ್ಷ ಐದು ಬಗೆ ಉಂಡೆಗಳನ್ನು ಮನೆಯ ಹೆಣ್ಣು ಮಕ್ಕಳಿಗೆ ಉಡಿ ತುಂಬಬೇಕು. ಆಚೀಚೆಯವರು ತಾಟಿನಲ್ಲಿ ಬಗೆಬಗೆಯ ಉಂಡಿಗಳನ್ನಿಟ್ಟು ಕೊಟ್ಟಾಗ ತಿರುಗಿ ನಮ್ಮ ಮನೆಯ ಉಂಡಿಗಳನ್ನು ತುಂಬಿ ಕೊಡಬೇಕಲ್ಲ! ಸಿಹಿಯ ಜೊತೆಗೆ ಖಾರದ ತಿನಿಸಿರದಿದ್ದರೆ ನಡೆಯುತ್ತದೆಯೆ? ಚಕ್ಕುಲಿ, ಕೋಡಬಳಿ, ಖಾರದವಲಕ್ಕಿ, ಶಂಕರಪಾಳಿ ಇಷ್ಟಾದರೂ ಆಗಲೇಬೇಕಲ್ಲ! ಹಬ್ಬಕ್ಕೆ ಮಗಳು ತವರಿಗೆ ಬರಲೇಬೇಕು. ಉಡಿ ತುಂಬಲಿಕ್ಕೆ ಹೊಸ ಸೀರೆ ತರಬೇಕು. ಒಂದು ಕೊಳ್ಳಲು ಹೋದಾಗಲೇ ನಾಕು ಚೆಂದ ಕಾಣುತ್ತವೆ. ಯಾವುದು ಕೊಳ್ಳುವುದು ಯಾವುದು ಬಿಡುವುದು ಗೊಂದಲವುಂಟಾಗಿ ಎರಡಾದರೂ ಕೊಳ್ಳೋಣ ಎನಿಸಿಬಿಡುತ್ತದೆ. ಮಗಳಿಗೆ ಕೊಡುವಾಗ ತನಗೂ ಒಂದು ಇದ್ದರೆ ಹೇಗೆ ಅಂತ ಪ್ರಶ್ನೆ ಹುಟ್ಟುತ್ತದೆ. ಈ ಮಾದರಿಯದು ತನ್ನ ಬಳಿ ಇಲ್ಲವಲ್ಲ ಅಂತ ಸಮಜಾಯಶಿ ಸಿಗುತ್ತದೆ. ಅದು ನಾರಿಗೂ ಸೀರೆಗೂ ಇರುವ ಜನ್ಮ ಜನ್ಮದ ಅನುಬಂಧ! ಕೊಂಡಷ್ಟೂ ತೀರದ ವ್ಯಾಮೋಹ. ಅದಕ್ಕಾಗಿಯೇ ಜಡಿಮಳೆಯಲ್ಲೂ ಗಿಜಿಗಿಜಿ ವ್ಯಾಪಾರ ನಡೆಸಿವೆ ಸೀರೆಯಂಗಡಿಗಳು. ಪೇಟೆ ಬೀದಿ ಹೊಕ್ಕ ಮೇಲೆ ಕೇಳಬೇಕೆ. ಗಿಳಿಹಸಿರು ಬಣ್ಣದಲ್ಲಿ ಚೆಂದಗೆ ನಗುತ್ತಿರುವ ಪೇರಲ ಕಾಯಿಗಳು, ಕೆಂಪಗೆ ಹಲ್ಲುಕಿಸಿದು ಕೂತಿರುವ ದಾಳಿಂಬೆಗಳು, ದಪ್ಪಗೆ ಮುಖ ಊದಿಸಿಕೊಂಡು ಬಡಿವಾರದಲ್ಲಿ ಎತ್ತರದ ಹಲಗೆ ಹತ್ತಿರುವ ಸೇಬುಗಳು. ಹಣ್ಣು ನೈವೇದ್ಯಕ್ಕಿಡದಿದ್ದರೆ ಅದೆಂಥಹ ಹಬ್ಬವಾದೀತು. ಹೂವಿನ ರಾಶಿ ಹಾಕಿಕೊಂಡು ಕೂತವಳ ಎದುರಿಗೆ ಬಂದಾಗಲೇ ಹೌಹಾರುವಂತಹ ಸ್ಥಿತಿ ಬರುವುದು. ಅಬ್ಬಾ ಮಲ್ಲಿಗೆ ಮಾರೊಂದಕ್ಕೆ ಎಷ್ಟು ಹೇಳುತ್ತಿದ್ದಾಳೆ! ಕೇಳಿದರೆ ಎಲ್ಲೂ ಮಾಲೇ ಇಲ್ಲ ಅಮ್ಮಾ ನನಗೆ ಬುಟ್ಟಿಗೆ ಇಷ್ಟು ಬಿದ್ದಿದೆ ಅಂತ ಇಷ್ಟುದ್ದ ಕತೆ ಹೇಳುತ್ತಾಳೆ. ಅದ್ಯಾಕೆ ಮಹಾಲಕ್ಷ್ಮಿಗೂ ರೇಟೇರಿಸಿಕೊಳ್ಳುವ ಹೂಮಾಲೆಗೂ ಸಂಬಂಧ ಹೀಗೆ ಕುದುರಿಕೊಂಡಿದೆಯೊ ಗೊತ್ತಿಲ್ಲ. ಪೂಜೆಗೆ ಬರುವ ಮುತ್ತೈದೆಯರಿಗೆ ಅರಿಶಿಣ ಕುಂಕುಮದ ಜೊತೆ ಎಲೆ-ಅಡಿಕೆ ಇಟ್ಟು ಹೂಮಾಲೆಯ ತುಂಡು ಕೊಡಲೇಬೇಕಲ್ಲ. ಅಂತೂ ಚೌಕಾಶಿ ಮಾಡಿ ಗೊಣಗೊಣ ಎಂದು ಅಲವತ್ತುಕೊಳ್ಳುತ್ತಲೇ ಖರೀದಿಸಬೇಕು. ಉಡಿ ತುಂಬುವ ವಸ್ತುಗಳೆಲ್ಲ ಒಂದೇ ಅಂಗಡಿಯಲ್ಲಿ ಸಿಕ್ಕಿಬಿಡುವುದರಿಂದ ತಾಪತ್ರಯವಿಲ್ಲ. ಖಣದ ಬಟ್ಟೆ, ಹಣಿಗೆ, ಬಳೆಗಳು, ಕರಿಮಣಿ, ಕೊಳ್ ನೂಲು(ಕೆಂಪುದಾರ) ಜೊತೆಗೆ ಪಿಳಿಪಿಳಿ ಕನ್ನು ಮಿಟುಕಿಸುತ್ತ ಇಣುಕಿ ನೋಡುತ್ತಿದೆ ಪುಟಾಣಿ ಕನ್ನಡಿ. ಯಾರೂ ಹೊಲಿಸಿಕೊಳ್ಳಲು ಸಾಧ್ಯವಿಲ್ಲದ ರವಿಕೆ ಬಟ್ಟೆಗಳನ್ನು ಕೊಡುವ ಬದಲಿಗೆ ಈಗೀಗ ಪುಟ್ಟ ಸ್ಟೀಲು ತಟ್ಟೆಗಳನ್ನು, ಡಬ್ಬಿಗಳನ್ನು ಅಥವಾ ಪರ್ಸುಗಳನ್ನು ಕೊಡುತ್ತಿದ್ದಾರೆ. ಆಚೀಚೆ ಮನೆಯವರನ್ನೇನೋ ಹೋಗಿ ಕರೆಯಬಹುದು ಆದರೆ ಉಳಿದ ಗೆಳತಿಯರನ್ನು ಕರೆಯಲಿಕ್ಕೆ ಫೋನೇ ಗತಿ. ಮೊದಲ ಮಂಗಳವಾರ ಬಂದವರನ್ನು ಇನ್ನುಳಿದ ವಾರಗಳಂದು ನೀವೇ ಬಂದುಬಿಡಿ ಮತ್ತೆ ಫೋನು ಮಾಡಲಿಕ್ಕೆ ನನಗೆ ಸಮಯ ಸಿಕ್ಕುವುದಿಲ್ಲ ಎಂದು ಪುಸಿ ಹೊಡೆದಿಟ್ಟುಕೊಂಡರೆ ಸಾಕು. ಅಯ್ಯೊ ಅರಿಶಿಣ ಕುಂಕುಮಕ್ಕೆ ಇಲ್ಲವೆನ್ನಲಿಕ್ಕೆ ಸಾಧ್ಯವಿದೆಯೆ ಎಂದು ಬರಲೊಪ್ಪುತ್ತಾರೆ. ನಸುಕಿಗೇ ಎದ್ದು ಮನೆಯೆದುರು ದೊಡ್ಡ ದೊಡ್ಡ ರಂಗೋಲಿ ಹಾಕಿ ಬಾಗಿಲಿಗೆ ತೋರಣ ಕಟ್ಟಿ ಹೋಳಿಗೆ ಅಂಬೋಡೆ ಕೋಸಂಬರಿ ಪಾಯಸಗಳ ಅಡುಗೆ ಮಾಡಿ ಆಮೇಲೆ ದೇವರ ಎದುರಿಗೆ ಕಲಶವಿರಿಸಿ ತೆಂಗಿನಕಾಯಿಗೆ ದೇವಿಯ ಮುಖವಾಡವಿಟ್ಟು ಹೊಸ ಸೀರೆಯುಡಿಸಿ, ಬಗೆಬಗೆಯ ಆಭರಣ ತೊಡಿಸಿ ಅಲಂಕರಿಸಿ ಪೂಜೆ ಮುಗಿಸುವಷ್ಟರಲ್ಲಿ ಮೂರೋ-ನಾಕೋ ಗಂಟೆಯಾಗಿಬಿಡುತ್ತದೆ. ಬೆಳಗಿಂದ ಉಪವಾಸವಿದ್ದದ್ದಕ್ಕೆ ಊಟವೂ ಸೇರುವುದಿಲ್ಲ. ಅಷ್ಟರಲ್ಲಿ ನೆನಪಾಗುತ್ತದೆ ಒಹೋ ಮುತ್ತೈದೆಯರು ಅರಿಶಿಣ-ಕುಂಕುಮಕ್ಕೆ ಬರುವ ಸಮಯವಾಯಿತು. ಈಗ ಮಾತ್ರ ಅವಸರ ಮಾಡುವಂತಿಲ್ಲ. ಸಾಧ್ಯವಾದಷ್ಟು ಚೆನ್ನಾಗಿ ಅಲಂಕರಿಸಿಕೊಳ್ಳಬೇಕು. ಏಕೆಂದರೆ ಹದ್ದಿನ ಕಣ್ಣಿನಿಂದ ಉಟ್ಟ ಸೀರೆಯ ಬಣ್ಣ-ಬುಟ್ಟಾ-ಸೆರಗು ನೋಡುತ್ತ  ತೊಟ್ಟ ಆಭರಣದ ತೂಕವನ್ನು ಅಳೆದು ಬಿಡುತ್ತಾರೆ. ಪರಸ್ಪರರ ಮೇಲೆ ನೋಟದ ಸರ್ಚ ಲೈಟ್ ಓಡಾಡಿದ ಕೂಡಲೇ ಪ್ರಶ್ನೆಗಳ ಬಾಣದ ಮಳೆ ಶುರುವಾಗುತ್ತವೆ. ಎಲ್ಲಿ ತಗೊಂಡ್ರಿ, ಎಷ್ಟು ಕೊಟ್ರಿ, ಎಷ್ಟು ಡಿಸ್ಕೌಂಟು ಬಿಟ್ರು ಅಂತ. ಉಡುಪು-ತೊಡಪುಗಳನ್ನೆಲ್ಲ ಅಳೆದಾದ ನಂತರ ಸರ್ಚಲೈಟ್ ನಾರಿಮಣಿಯರ ದೇಹದಾಕಾರವನ್ನು ಅಳೆಯಲು ಶುರು ಮಾಡುತ್ತದೆ. ತೆಳ್ಗೆ ಕಾಣ್ತಿದೀರಲ್ಲ ಏನು ಮಾಡಿದ್ರಿ?  ಯಾಕೊ ಸ್ವಲ್ಪ ದಪ್ಪಗಾಗೀದೀರಲ್ಲ ವಾಕಿಂಗ್ ಬಿಟ್ಟಿದೀರಾ? ಕಣ್ಣ ಕೆಳಗೆ ಕಪ್ಪು ಕಾಣ್ತಿದೆಯಲ್ಲ ಹುಶಾರಿಲ್ವಾ? ಹೀಗೆ ಉಭಯ ಕುಶಲೋಪರಿ ಸಾಂಪ್ರತ ನಡೆಸುತ್ತ ಲಕಲಕ ಹೊಳೆಯುವ ಲಲನೆಯರ ಹಿಂಡು ತನ್ನ ಕಡೆಗೆ ನೋಡುವುದೇ ಇಲ್ಲವಲ್ಲ ಎಂದು ಪೆಚ್ಚಾಗುವ ಮಹಾಲಕ್ಷಿಗೆ ಪಿಸುಧ್ವನಿಯಲ್ಲಿ ಸಾಂತ್ವನ ಹೇಳುತ್ತಿದೆ ಅವಳ ಕೊರಳ ಕಾಸಿನ ಸರ- ಇದೂ ಒಂಥರ ಲೌಕಿಕದ ಸಹಸ್ರನಾಮಾವಳಿ ಕಣಮ್ಮ ದೇವಿ. ಪ್ರತಿ ವಾರ ಗಿಲಿಗಿಲಿ ಎನ್ನುವ ಲಕ್ಷ್ಮಿಯನ್ನು ನೋಡುತ್ತ ತನ್ನ ಸೀರೆಯ ಪದರ ಬಿಡಿಸಿ ಕೊಡವಿ ತಯಾರಾಗುತ್ತಿದ್ದಾಳೆ ಸ್ವರ್ಣಗೌರಿ. ಅಮ್ಮಾ ನಾನೊಂದಿನ ತಡವಾಗಿ ಯಾಕೆ ಬರಬೇಕು ನಿನ್ನ ಜೊತೆಗೆ ಬಂದು ಬಿಡಲಾ? ಎನ್ನುವುದು ಗಣಪನ ಪ್ರಶ್ನೆ. ಏಯ್ ಒಂದು ದಿವಸವಾದರೂ ಗಂಡ-ಮಕ್ಕಳ ಕಾಟವಿಲ್ಲದೇ ಹಾಯಾಗಿ ಹೋಗಿ ಬರ್ತೀನಿ ನೀನು ನಿಮ್ಮಪ್ಪನ ಜೊತೆಗಿರು ಎಂದು ಸಿಡುಕುತ್ತಿದ್ದಾಳೆ ಶ್ರೀಗೌರಿ. ಆಹಾ ಇನ್ನೂ ಏನೆಲ್ಲ ನಡೆಯಲಿದೆ ನೋಡೋಣ ಬನ್ನಿ ಎಂದು ಓಡೋಡಿ ಬಂದ ಮೋಡಗಳು ಢಿಕ್ಕಿಯಾಟ ನಡೆಸಿವೆ. ಅರೆರೆ ಇದೆಲ್ಲ ಪ್ರತಿ ವರ್ಷದ ಕತೆಯಾಯಿತು. ಈ ವರ್ಷ ಹಾಗಿಲ್ಲವಲ್ಲ. ಯಾರನ್ನೂ ಕರೆಯುವಂತಿಲ್ಲ. ಬಂದವರನ್ನು ಕಳಿಸುವಂತಿಲ್ಲ. ಅರಿಶಿನ ಹಚ್ಚುವ ಜಾಗದಲ್ಲಿ ಕೂತಿದೆ ಮಾಸ್ಕ್. ಮಂಗಳಗೌರಿ ಭೂಮಿಗೆ ಬರಬೇಕೆಂದರೂ ಮಾಸ್ಕ್ ಕಡ್ಡಾಯ. ಸ್ಯಾನಿಟೈಸರ್ ಬೊಗಸೆಗಳಿಗೆ ಮಹಾಲಕ್ಷ್ಮಿ ಕೃಪೆ ಮಾಡುತ್ತಾಳೆಯೆ? ********

ಶ್ರಾವಣಕ್ಕೊಂದು ತೋರಣ Read Post »

ಇತರೆ, ಲಹರಿ

ಭರವಸೆಯ ಹೊರತು ಬೇರೇನೂ ಉಳಿದಿಲ್ಲ

ಲಹರಿ  ವಸುಂಧರಾ ಕದಲೂರು  ಖಾಲಿ ಮಂಕರಿ ಕವಚಿ ಹಾಕಿದಂತೆ ಎಲ್ಲಾ ಖಾಲಿಖಾಲಿಯಾದ ಭಾವ. ನಿರಾಳ ಅಂತೇನಲ್ಲ. ಮನಸ್ಸು ಭಾರವಾಗಿದೆ. ಏನೆಲ್ಲಾ ಇದೆ. ಆದರೂ ಏನೇನೂ ಇಲ್ಲ ಎನ್ನುವ ಒಂಟಿತನ ಹಿಂಡಿಹಿಪ್ಪೆ ಮಾಡುವಂತೆ. ಬಿಸಿಲಿಗೆ ಒಣ ಹಾಕಿದ ಬಟ್ಟೆ ಒಣಗೀ ಒಣಗೀ ಅಲ್ಲೇ ಇದ್ದು ಕೊನೆಗೆ ಬಣ್ಣಗೆಟ್ಟಂತೆ…      ಸದಾ ಗಿಜಿಗಿಜಿ ಗಜಿಬಿಜಿಯಲ್ಲಿ ಸುತ್ತಾಡುತ್ತಿದ್ದ ಮೈ ಮನಸ್ಸೆಲ್ಲಾ ಒಂದು ಕ್ಷಣಕ್ಕೆ  ಥಟ್ ಎಂದು ಏಕಾಂತ ವಾಸಕ್ಕೆ ನಿರ್ಜನ ಕಾಡ ಮಧ್ಯದಲ್ಲಿ ವಿರಮಿಸಿದಂತೆ ಭಾಸವಾಯಿತು. ಆಹಾ..!! ಇದೇ ಬೇಕಾಗಿತ್ತು ನನಗೆ ಎನಿಸಿ ಎಷ್ಟು ಖುಷಿಪಟ್ಟಿತೋ ಮನಸ್ಸು ಗೊತ್ತಿಲ್ಲ. ಆದರೆ ದಿನ ಕಳೆದ ಮೇಲೆಯೇ ಗೊತ್ತಾದದ್ದು ಅದು ವಿಶ್ರಮಿಸುವ ಏಕಾಂತವಲ್ಲ ಭಯ ಹುಟ್ಟಿಸುವ ಸೆರೆವಾಸವೆಂದು.       ಏನೇನೋ ಕಸರತ್ತುಗಳು. ಸಮಾಧಾನಕ್ಕೆ, ಸ್ಫೂರ್ತಿಗೆ, ಭರವಸೆಗೆ ಯತ್ನಿಸುತ್ತಾ ನಾನೂ ನನ್ನವರೂ ಎಲ್ಲರನ್ನೂ ಹುರಿದುಂಬಿಸಲು ಪ್ರಯತ್ನಿಸುತ್ತಲೇ ಇರುವುದು.     ಇದೇ ಸರಿಯಾದ ಸಮಯ. ನಿನ್ನೊಳಗೆ ನೀನೇ ಇಣುಕಿ ನೋಡು. ನೀನು ಯಾರೆಂಬುದೇ ಮರೆತಿದ್ದೆಯಲ್ಲಾ. ಮನೆ, ಮಕ್ಕಳು, ಮನೆಯವರು… ಇನ್ನಾದರೂ ಗಮನಕೊಡು. ಆಂತರ್ಯದ ಕೂಗು ಇನ್ನಿಲ್ಲದಂತೆ ಎಬ್ಬಿಸಲು ಪ್ರಯತ್ನಿಸಿತು. ಹೌದು ನಿಜ. ನಮ್ಮ ಬದುಕು ಈಗ ಮತ್ತೆ ನಮಗೇ ಸಿಕ್ಕಿದೆ. ನಮ್ಮ ಇಷ್ಟದ ತಿನಿಸು, ಮನೆಯವರಿಷ್ಟದ ಉಣಿಸು, ಸಿನೆಮಾ, ಪುಸ್ತಕ…     ಇಷ್ಟಯೇ… ಸಾಕೇ..?!    ಇಲ್ಲ, ಸ್ನೇಹವಿಲ್ಲದೇ, ಸುತ್ತಾಟವಿಲ್ಲದೇ ಇರಲಾಗದು, ಇರಲಾಗದು. ನಾನೇನು ಅವ್ವ, ಅಮ್ಮನ ಕಾಲದವಳೇ..?  ಪ್ರತಿ ದಿನವೂ ಎಂಟರಿಂದ ಹತ್ತು ಗಂಟೆ ಕಾಲ ಮನೆಯ ಹೊರಗೇ ಕಾಲನ್ನು ಇಟ್ಟವಳು. ಈಗ ಕಾಲಿನ ಚಲನೆಯೂ ಇಲ್ಲದಂತೆ, ಕಾಲದ ಚಲನೆಯೂ ಕಾಣದಂತೆ ಉಳಿದುಬಿಡುವುದು ಹೇಗೆ ಸಾಧ್ಯ?     ಎಷ್ಚೆಂದು ಟಿ.ವಿ ನೋಡುವುದು? ಪುಸ್ತಕ ಸಾಂಗತ್ಯ ಮಾಡುವುದು? ಮನೆ ಮಂದಿಯೊಡನೆ ಹರಟುವುದು?  ಅವರಿಗೂ ಬೇಸರವೇ…    ಮಕ್ಕಳಂತೂ ಜೊತೆಗಾರರಿಲ್ಲದೆ ಮೊಬೈಲ್, ಲ್ಯಾಪ್ಟಾಪು, ಟಿ.ವಿ. ಗಳ ಸಾಂಗತ್ಯದಲ್ಲಿ  ರೊಬೋಟುಗಳೇ ಆಗಿಬಿಡುತ್ತಾರೇನೋ ಎಂಬ ಆತಂಕ. ಮಡದಿಯೊಡನೆ ಹೇಳಿಕೊಳ್ಳಲಾರದ ಆಡಲಾರದ ಮಾತುಗಳಿಗೆ ಗಂಡನಿಗೆ ಗೆಳೆಯನ ಕಿವಿ ಬೇಕು. ಹೃದಯದ ಸಾಂತ್ವಾನಕೆ ಸ್ನೇಹದ ಕೈ ಕುಲುಕುವಿಕೆ ಬೇಕು. ಪತಿಯನ್ನು ಪ್ರತಿ ದಿನವೂ ಕೆರಳಿಸಲಾಗದೆ, ಅರಳಿಸಲಾಗದೆ, ಸಮಾಧಾನಿಸಲಾಗದ ಹೆಂಡತಿಯ ಸಂಕಟಕೆ ಸ್ನೇಹಿತೆ ಬೇಕು. ಆಕೆಯೊಡನಾಡುವ ನಾಕಾರು ಮಾತುಗಳು, ಹೊಸ ಪಾಕದ ಪಾಠ, ಧಾರಾವಾಹಿಯ ಕಂತುಗಳ ಕುರಿತ ವಿಮರ್ಶೆ,  ಬಿರುಸಾಗಿ ಪಾರ್ಕುಗಳಲ್ಲಿ ಒಂದರ್ಧ ಗಂಟೆ ಸುತ್ತಾಡುವ ಸ್ವಾತಂತ್ಯ್ರ ಮತ್ತೆ ಇವೆಲ್ಲವೂ ಅವಶ್ಯ ಬೇಕು.         ಪ್ರತಿ ದಿನವೂ ಕೈ ಗಾಡಿಯಲಿ ಸೊಪ್ಪು ತರಕಾರಿ ಹಣ್ಣುಗಳನ್ನಿಟ್ಟುಕೊಂಡು ಕುಳಿತಿರುತ್ತಿದ್ದ ಅಜ್ಜನೋ, ಯುವಕನೋ, ಅಕ್ಕ – ತಂಗಿಯಂತಹವರೋ ತಮ್ಮತಮ್ಮ ಊರದಾರಿ ಹಿಡಿದಿದ್ದಾರೆ. ಅವರಿಗಲ್ಲಿ ಏನಾಗಿದೆಯೋ..? ಪ್ರತಿದಿನದ ಒಂದು ಸಣ್ಣ ನಗೆಯ ವಿನಿಮಯ ಈಗ ಕಡಿತಗೊಂಡಿದೆ. ಮೊಬೈಲ್ ನಂಬರೂ ಪಡೆದಿಲ್ಲ. ದಿನಂಪ್ರತಿ ಸಿಗುವ ಭರವಸೆಯಿದ್ದಾಗ ಮೊಬೈಲ್ ನಂಬರ್ ಪಡೆದು ದೂರಕರೆ ಮಾಡುವ ಜರೂರೇನಿತ್ತು?           ವಾರಕ್ಕೊಮ್ಮೆ ಹೆಚ್ಚು ಖಾರ, ಈರುಳ್ಳಿ, ಕ್ಯಾರೆಟ್ಟು ಹಾಕಿಸಿಕೊಂಡು ತಿನ್ನುತ್ತಿದ್ದ ಮೈಸೂರು ಚುರುಮುರಿಯವನ ಗಾಡಿಯ ಸದ್ದು ಈಗ ಅಡಗಿ ಹೋಗಿದೆ.     ದಿನಪತ್ರಿಕೆಗಳ ಜೊತೆಗೆ ಬರುತ್ತಿರುವ ಜಾಹೀರಾತುಗಳಲ್ಲಿ ಒಂದು ಕರೆ ಮಾಡಿದರೆ ಸಾಕು ಅರ್ಧ ಗಂಟೆಯೊಳಗೆ ನೀವು ಬಯಸಿದ್ದೆಲ್ಲಾ ಮನೆ ಬಾಗಿಲಿಗೆ ಬಂದು ಡೆಲಿವರಿಯಾಗುತ್ತದೆ ಎಂಬುದನ್ನು ನೋಡೀ ನೋಡೀ ಸಾಕಾಗಿದೆ.      ಮನೆಗೆ ಸ್ನೇಹಿತರನ್ನೂ ಬಂಧುಗಳನ್ನೂ ಆರ್ಡರ್ ಮಾಡಿಸಿ ತರಿಸಿಕೊಳ್ಳಬಹುದೇ….?! ಕಾಲ ಇಷ್ಟು ನಿರ್ದಯಿಯಾಗಿ ಹೀಗೆ ಎಲ್ಲವನ್ನೂ ಕಡಿತ ಮಾಡಬಾರದಿತ್ತು… ಆದರೆ ಈಗ ಭರವಸೆಯ ಹೊರತು ಬೇರೇನೂ ಉಳಿದಿಲ್ಲ.  **********

ಭರವಸೆಯ ಹೊರತು ಬೇರೇನೂ ಉಳಿದಿಲ್ಲ Read Post »

You cannot copy content of this page

Scroll to Top