ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಸಂಪ್ರೋಕ್ಷಣ

ಪಾಲಿಸೋ ಹೂವ ನಾನು ಚಿಕ್ಕವಳಿದ್ದಾಗ ಊರಿನ ಆಂಜನೇಯ ದೇವಸ್ಥಾನದ ದೇವರ ಪಲ್ಲಕ್ಕಿ ವರುಷಕ್ಕೊಮ್ಮೆ ನಮ್ಮ ಮನೆಗೆ ಬರುತ್ತಿತ್ತು. ಮನೆಯ ಹಿರಿಯರೆಲ್ಲರೂ ಭಯ-ಭಕ್ತಿಗಳಿಂದ ದೇವರನ್ನು ಸ್ವಾಗತಿಸಲು ಸಿದ್ಧರಾದರೆ, ನನ್ನ ಮನಸ್ಸಿನಲ್ಲೊಂದು ವಿಚಿತ್ರವಾದ ಸಡಗರ ತುಂಬಿಕೊಳ್ಳುತ್ತಿತ್ತು. ಕಲ್ಲು-ಮುಳ್ಳು ಬಿಸಿಲು ಯಾವುದನ್ನೂ ಲೆಕ್ಕಿಸದೆ ಮಡಿಬಟ್ಟೆಯಲ್ಲಿ ಪಲ್ಲಕ್ಕಿ ಹೊರುತ್ತಿದ್ದ ಗಂಡಸರು, ಅವರ ಕಾಲುಗಳನ್ನು ತಣ್ಣೀರಿನಿಂದ ತೊಳೆದು ಹಳೆಹಾಡುಗಳನ್ನು ಹಾಡುತ್ತ ಪಲ್ಲಕ್ಕಿಯನ್ನು ಸ್ವಾಗತಿಸುತ್ತಿದ್ದ ಹೆಂಗಸರು, ದೇವರು-ಶಾಸ್ತ್ರ ಯಾವುದರ ಬಗ್ಗೆಯೂ ಸ್ಪಷ್ಟ ಕಲ್ಪನೆಯಿಲ್ಲದೆ ದೇವರ ಆಗಮನವನ್ನು ನೆಂಟರು ಬಂದಂತೆ ಸಂಭ್ರಮಿಸುತ್ತಿದ್ದ ಮಕ್ಕಳು ಹೀಗೆ ಬಿಡಿಬಿಡಿಯಾದ ಪ್ರಪಂಚಗಳನ್ನು ಜೋಡಿಸುವ ಕೆಲಸವನ್ನು ಪಲ್ಲಕ್ಕಿ ಮಾಡುತ್ತಿತ್ತು. ಅದು ನಮ್ಮನೆಯಲ್ಲಿದ್ದಷ್ಟೂ ದಿನ ಸೊಸೈಟಿಯ ಸಾಲವಾಗಲೀ, ವಯಸ್ಸಾದವರ ಸೊಂಟದ ನೋವಾಗಲೀ, ನ್ಯೂಸ್ ಪೇಪರಿನ ರಾಜಕೀಯವಾಗಲೀ ಮನೆಯ ಯಾವ ಚರ್ಚೆಯಲ್ಲೂ ಭಾಗವಹಿಸುತ್ತಿರಲಿಲ್ಲ. ಮನೆಯವರೆಲ್ಲರ ಗಮನ ಪಲ್ಲಕ್ಕಿಯ ಮೇಲೆ ಕೇಂದ್ರೀಕೃತವಾಗಿ, ಮನೆಯಲ್ಲೊಂದು ವಿಶಿಷ್ಟವಾದ ಸಂತೋಷ-ಸಮಾಧಾನಗಳ ವಾತಾವರಣ ಸೃಷ್ಟಿಯಾಗುತ್ತಿತ್ತು. ಅಂತಹ ಯಾವುದೋ ಒಂದು ಸಂದರ್ಭದಲ್ಲಿಯೇ ಈ ದೇವರು ಎನ್ನುವುದೊಂದು ಸಮಾಧಾನ ತರುವ ಸಂಗತಿಯೆನ್ನುವ ನಂಬಿಕೆ ನನ್ನಲ್ಲಿ ಹುಟ್ಟಿಕೊಂಡಿದ್ದಿರಬೇಕು!           ಈ ಸಮಾಧಾನ-ನೆಮ್ಮದಿಗಳ ವ್ಯಾಖ್ಯಾನ ಒಮ್ಮೆ ಆಧ್ಯಾತ್ಮದ ವಿವರಣೆಗೆ, ಇನ್ನೊಮ್ಮೆ ಸಂಬಂಧಗಳ ಕ್ಲಿಷ್ಟಕರವಾದ ನಿರೂಪಣೆಗೆ, ಒಮ್ಮೊಮ್ಮೆ ಮನೋವಿಜ್ಞಾನದ ಸಮಾಲೋಚನೆಗಳಿಗೂ ಸಿಲುಕಿ ಸಂಕೀರ್ಣವಾಗಿಹೋಗುವುದುಂಟು. ಸರಳವಾಗಿ ಯೋಚಿಸಿದರೆ ಸಮಾಧಾನವೆನ್ನುವುದು ಮೂಲಂಗಿ ಸೊಪ್ಪಿನ ಪಲ್ಯವಿದ್ದಂತೆ. ಮೂಲಂಗಿಯ ವಾಸನೆಗೆ ಮೂಗುಮುರಿಯುವವರಿಗೆ ಮೂಲಂಗಿಯೊಂದಿಗೆ ಮೂಲಂಗಿಯ ಸೊಪ್ಪನ್ನೂ ಸೇರಿಸಿ ಪಲ್ಯ ಮಾಡಿ ಬಡಿಸಿದರೆ, ವಾಸನೆಯನ್ನು ಮರೆತು ತಕರಾರಿಲ್ಲದೆ ಊಟ ಮಾಡಿ ಕೈ ತೊಳೆಯುತ್ತಾರೆ. ಮೂಲಂಗಿಯೆಡೆಗಿನ ನಿರಾಕರಣೆಯನ್ನು ಅದರದೇ ಭಾಗವಾದ ಎಲೆಗಳು ನಿರಾಯಾಸವಾಗಿ ದೂರ ಮಾಡುತ್ತವೆ. ಆ ಒಗ್ಗಿಕೊಳ್ಳುವಿಕೆಯ ಭಾಗವಾಗಿ ಸಮಾಧಾನದ ಹರಿವು ತನ್ನದೇ ಆದ ಜಾಗವನ್ನು ಗುರುತಿಸಿಕೊಳ್ಳುತ್ತ ಹೋಗುತ್ತದೆ. ಆ ಜಾಗದ ಮಧ್ಯದಲ್ಲಿಯೇ ಎಲ್ಲಿಯೋ ಒಂದು ಕಡೆ ದೇವರು ಎನ್ನುವ ಪರಿಕಲ್ಪನೆ ತನ್ನ ಅಸ್ತಿತ್ವವನ್ನು ಜೋಡಿಸಿಕೊಂಡು ಜೀವಜಗತ್ತಿನ ಪ್ರವಹಿಸುವಿಕೆಯ ಮೂಲವಾಗಿ ಹೊರಹೊಮ್ಮುತ್ತದೆ. ಹಾಗೆ ಒಡಮೂಡಿದ ಒರತೆಯೇ ಅಂಗಾಲುಗಳನ್ನು ಸೋಕಿ, ಹೊಸತನದ ಸಾಕ್ಷಾತ್ಕಾರದೊಂದಿಗೆ ಜೀವಜಲವಾಗಿ ಪ್ರವಹಿಸುತ್ತದೆ.           ಹೊಸತನದ ಅನುಭೂತಿಯೂ ದೇವರೊಂದಿಗೆ ಒಂದು ಅನುಪಮವಾದ ಸಾಮರಸ್ಯವನ್ನು ಬೆಳಸಿಕೊಂಡಿದೆ. ವರುಷಕ್ಕೊಮ್ಮೆ ಮಾತ್ರವೇ ಮನೆಗೆ ಆಗಮಿಸುತ್ತಿದ್ದ ಹೊಸಬಟ್ಟೆಯನ್ನು ತೊಟ್ಟು ದೇವರಿಗೆ ದೀಪ ಹಚ್ಚಿದ್ದು, ಹೈಸ್ಕೂಲಿಗೆ ಸೇರಿದ ಮೊದಲ ದಿನ ಹೆಡ್ ಮಾಷ್ಟ್ರ ಕಾಲಿಗೆ ನಮಸ್ಕಾರ ಮಾಡಿದ್ದು, ದೀಪಾವಳಿಯ ದಿನ ಹೊಸ ಚಿಗುರನ್ನು ತಂದು ಮನೆಯ ಹೊಸ್ತಿಲ ಮೇಲಿಟ್ಟು ನಮಸ್ಕರಿಸಿದ್ದು ಈ ಯಾವ ಕ್ರಿಯೆಗಳೂ ಆಧುನಿಕತೆಯ ಹೆಸರಿನಲ್ಲಿ ಹಳತಾಗುವುದಿಲ್ಲ. ಹೊಸಬಟ್ಟೆಯ ಸಂಭ್ರಮ ದೀಪವಾಗಿ ಉರಿದು ಮನಸ್ಸುಗಳನ್ನು ಬೆಸೆದು ನೆನಪಿನ ಟ್ರಂಕಿನಲ್ಲಿ ಸದಾಕಾಲ ಹೊಸದಾಗಿಯೇ ಉಳಿದುಕೊಳ್ಳುತ್ತದೆ; ಹೈಸ್ಕೂಲಿನ ಹೆಡ್ ಮಾಷ್ಟ್ರು ತೋರಿಸಿದ ದಾರಿಯಲ್ಲಿ ಉಸಿರು ಬಿಗಿಹಿಡಿದು ನಡೆದ ಬದುಕು ಮಾರ್ಕ್ಸ್ ಕಾರ್ಡಿನ ಹುಟ್ಟಿದದಿನದ ದಾಖಲೆಯಾಗಿ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ; ಬಾಗಿಲಪಟ್ಟಿಯ ಮೇಲಿನ ಹೊಸ ಚಿಗುರಿನ ಭತ್ತದ ಕಾಳು ಪ್ರತಿದಿನದ ಅನ್ನವಾಗಿ ಜೀವತುಂಬುತ್ತದೆ. ವಾರಾಂತ್ಯದ ಶಾಪಿಂಗುಗಳಲ್ಲಿ ಕ್ರೆಡಿಟ್ ಕಾರ್ಡಾಗಿ, ಹೊಸ ಕೆಲಸದ ಹುಡುಕಾಟದಲ್ಲಿ ಮಾರ್ಕ್ಸ್ ಕಾರ್ಡಾಗಿ, ಬಿರಿಯಾನಿಯ ಬಾಸುಮತಿ ಅಕ್ಕಿಯಾಗಿ ದೇವರೆನ್ನುವ ಸಾಂಗತ್ಯ ಹೊಸ ಸ್ವರೂಪಗಳಲ್ಲಿ ಕೈಹಿಡಿದು ನಡೆಸುತ್ತಲೇ ಇರುತ್ತದೆ.          ಆ ಸಹಜಸ್ಥಿತಿಯ ಇರುವಿಕೆಯಲ್ಲಿ ಶಾಪಿಂಗ್ ಮಾಲ್ ನ ಬಟ್ಟೆ ಅಂಗಡಿಯ ಕ್ಯಾಶ್ ಕೌಂಟರಿನಲ್ಲೊಬ್ಬ ಕಿವಿ ಕೇಳಿಸದ ಹುಡುಗ ತುಟಿಗಳ ಚಲನೆಯಿಂದಲೇ ಪ್ರಶ್ನೆಗಳನ್ನು ಅರಿತು ಹಣಕಾಸಿನ ವ್ಯವಹಾರಗಳನ್ನು ತಪ್ಪಿಲ್ಲದೇ ನಿರ್ವಹಿಸುತ್ತಾನೆ; ಬೀದಿಬದಿಯಲ್ಲೊಬ್ಬಳು ಹೂ ಮಾರುವ ಹುಡುಗಿ ಏರುದನಿಯಲ್ಲಿ ದರಗಳನ್ನು ಕಿವಿಗಳಿಗೆ ತಲುಪಿಸಿ, ಹೂವಿನ ಬದುಕನ್ನು ಮಾರುಗಳಲ್ಲಿ ಲೆಕ್ಕ ಹಾಕುತ್ತಾಳೆ; ರಿಸರ್ವ್ ಫಾರೆಸ್ಟಿನಲ್ಲೊಬ್ಬ ಜೀಪು ಚಲಿಸುವವ ನಿಶ್ಯಬ್ದದ ದಾರಿಯಲ್ಲಿ ಹುಲಿಯ ಹೆಜ್ಜೆಗಳನ್ನು ಹಿಂಬಾಲಿಸುತ್ತಾನೆ; ಏರ್ ಪೋರ್ಟಿನ ಕೆಂದುಟಿಯ ಚೆಲುವೆ ನಗುವನ್ನೇ ಬದುಕಾಗಿಸಿಕೊಂಡು ದೇಶಗಳ ನಡುವಿನ ಅಂತರವನ್ನು ಇಲ್ಲವಾಗಿಸುತ್ತಾಳೆ. ಹೀಗೆ ದೇವರೆನ್ನುವ ಅಸ್ತಿತ್ವ ಒಮ್ಮೆ ಮೌನವಾಗಿ, ಮತ್ತೊಮ್ಮೆ ಧ್ವನಿಯಾಗಿ, ನಿಶ್ಯಬ್ದವೂ ಆಗಿ ಬದುಕಿನ ಚಲನೆಯ ಉದ್ದೇಶಗಳನ್ನು ಕೆಡದಂತೆ ಕಾಪಾಡುತ್ತದೆ. ರೂಪ-ಆಕಾರಗಳ ಬಂಧನವನ್ನು ಮೀರಿದ ಆ ಅಸ್ತಿತ್ವವೇ ಆ ಕ್ಷಣದ ಬದುಕುಗಳ ಸಮಾಧಾನವನ್ನು ನಿರ್ಧರಿಸುತ್ತಿರುತ್ತದೆ. ಆ ಸಮಾಧಾನದ ಕ್ಷಣಗಳಲ್ಲಿ ಬ್ಯಾಂಕಿನೊಂದಿಗಿನ ನಂಬಿಕೆಯ ಸಂಬಂಧ ಕ್ಯಾಶ್ ಕೌಂಟರಿನಲ್ಲಿ ಬಲಗೊಂಡರೆ, ರೈತನೊಬ್ಬನ ಬೆವರಿನಲ್ಲಿ ಮೂಡಿದ ಮೊಗ್ಗು ರಸ್ತೆಬದಿಯಲ್ಲಿ ಹೂ ಮಾರುವವಳ ಧ್ವನಿಯಲ್ಲಿ ಅರಳುತ್ತದೆ; ಜೀಪಿನಲ್ಲಿ ಕುಳಿತವನ ಕ್ಯಾಮರಾ ಕಣ್ಣುಗಳು ಡ್ರೈವರಿನ ನಡೆಯನ್ನು ನಂಬಿಕೊಂಡರೆ, ನಗುಮೊಗದ ಚೆಲುವೆ ಒತ್ತುವ ಸೀಲು ದೇಶ ಬಿಡುವವನ ದುಗುಡವನ್ನು ಕಡಿಮೆ ಮಾಡುತ್ತದೆ. ಹಾಗೆ ಆ ಕ್ಷಣದಲ್ಲಿ ಹುಟ್ಟಿಕೊಂಡ ನಂಬಿಕೆಯೇ ದೇವರಾಗಿ ಸಕಲ ರೂಪಗಳಲ್ಲೂ ಸಂಧಿಸಿ, ಮಧ್ಯರಾತ್ರಿಯ ನೀರವತೆಯಲ್ಲಿ ದೂರದ ಹೈವೆಯಲ್ಲೆಲ್ಲೋ ಚಲಿಸುವ ಲಾರಿಗಳ ಸದ್ದಿನಂತೆ ದಿನಚರಿಯ ಭಾಗವಾಗಿ ಬೆರೆತುಹೋಗುತ್ತದೆ.           ಹಾಗೆ ಬದುಕಿನ ಚಲನೆಗಳೊಂದಿಗೆ ಅನುಸಂಧಾನಗೊಳ್ಳುವ ದೇವರೆನ್ನುವ ಪರಿಕಲ್ಪನೆಯ ಪರಿಧಿಯಲ್ಲಿ ಅಜ್ಜಿ ಮಾಡುತ್ತಿದ್ದ ಬಾಳೆಹಣ್ಣಿನ ರೊಟ್ಟಿಯ ಮೇಲಿನ ಗಟ್ಟಿತುಪ್ಪ ಪ್ರೀತಿಯ ಹನಿಯಾಗಿ ಕರಗಿ ನೆನಪಾಗಿ ಬೆರಳಿಗಂಟಿಕೊಳ್ಳುತ್ತದೆ; ದೂರದ ಹೊಳೆಯಿಂದ ನೀರು ತಂದು ಅಮ್ಮ ನೆಟ್ಟು ಬೆಳಸಿದ ಹಲಸಿನಮರದ ಬುಡದಲ್ಲಿ ಹಸುವೊಂದು ಮಲಗಿ ದಣಿವಾರಿಸಿಕೊಳ್ಳುತ್ತದೆ; ಅಪರಿಚಿತ ರಸ್ತೆಗಳ ಬೀದಿದೀಪಗಳನ್ನು ಒಂದೊಂದಾಗಿ ದಾಟುವ ರಾತ್ರಿಬಸ್ಸಿನ ಕನಸುಗಳು ನಿಶ್ಚಿಂತೆಯಿಂದ ಊರು ತಲುಪುತ್ತವೆ; ಹಸಿರು ಬಣ್ಣದ ಶರ್ಟು ತೊಟ್ಟ ಹುಡುಗನ ನಿಶ್ಚಲ ಕಣ್ಣುಗಳು ಮಳೆಗಾಲದ ಒಂದು ಸಂಜೆಯ ಏಕಾಂತಕ್ಕೆ ಜೊತೆಯಾಗುತ್ತವೆ. ಅಜ್ಜಿಯ ಪ್ರೇಮ, ಅಮ್ಮನ ನಂಬಿಕೆ, ಕಣ್ಣಂಚಿನ ಕನಸುಗಳು, ಹಸಿರಂಗಿಯ ಸಾಂಗತ್ಯಗಳೆಲ್ಲವೂ ಹೆಗಲನ್ನೇರಿ ಬದುಕಿನ ಪಲ್ಲಕ್ಕಿಯ ಭಾರವನ್ನು ಕಡಿಮೆ ಮಾಡುತ್ತವೆ. ಅಲ್ಲೊಂದು ಮೋಹ, ಇಲ್ಲೊಂದು ಸ್ನೇಹ, ಇನ್ನೆಲ್ಲೋ ಒಂದು ಪ್ರೀತಿಯ ಒರತೆ ಎಲ್ಲವೂ ಪೂರ್ವನಿರ್ಧರಿತವಾದಂತೆ ಭಾಸವಾಗುವ ಪಥಗಳಲ್ಲಿ ನಡೆದು ನೆಮ್ಮದಿಯ ನೆಲೆಯನ್ನು ಕಂಡುಕೊಳ್ಳುತ್ತವೆ. ಆ ನೆಲೆಯಂಗಳದಲ್ಲಿ ಅರಳುತ್ತಿರುವ ಹೂವಿನ ಗೊಂಚಲುಗಳು ಭರವಸೆಯ ಬೆಳಕಿನೆಡೆಗೆ ಹೊರಳುತ್ತವೆ. ****************************************************************** – ಅಂಜನಾ ಹೆಗಡೆ ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಜುಮ್ಮಾ- ಕಥಾ ಸಂಕಲನ ಜುಮ್ಮಾ- ಕಥಾ ಸಂಕಲನತೆಲುಗು ಮೂಲ: ವೇಂಪಲ್ಲಿ ಶರೀಫ್ಕನ್ನಡಕ್ಕೆ:ಸೃಜನ್ಪ್ರ : ನವಕರ್ನಾಟಕ ಪಬ್ಲಿಕೇಷನ್ಸ್ಪ್ರಕಟಣೆಯ ವರ್ಷ : ೨೦೧೭ಬೆಲೆ : ರೂ.೭೫ಪುಟಗಳು : ೯೬ ಮುಸ್ಲಿಂ ಸಂವೇದನೆಗಳಿಗೆ ಧ್ವನಿ ನೀಡುವ ಮತ್ತು ಓದುಗರ ಮನಮಿಡಿಯುವಂತೆ ಮಾಡುವ ೧೩ ಹೃದಯಸ್ಪರ್ಶಿ ಕಥೆಗಳ ಸಂಕಲನವಿದು. ಮುಖ್ಯವಾಗಿ ಗ್ರಾಮೀಣ ತಳ ಸಮುದಾಯದವರ ಕುರಿತಾದ ಕಥೆಗಳು ಇಲ್ಲಿವೆ. ಬದುಕಿನಲ್ಲಿ ಸುಖವೆಂದರೇನೆಂದೇ ತಿಳಿಯದ ಅಸ್ತಿತ್ವಕ್ಕಾಗಿ ಹೆಣಗಾಡುವ ಮಂದಿ ಇಲ್ಲಿದ್ದಾರೆ.  ಲೇಖಕರಾದ ವೇಂಪಲ್ಲಿ ಶರೀಫ್ ತಮ್ಮ ಸುತ್ತಮುತ್ತ ತಾವು ಕಂಡ ಜಗತ್ತನ್ನು ಸ್ವಲ್ಪವೂ ಉತ್ಪ್ರೇಕ್ಷೆಯಿಲ್ಲದೆ ನಿರುದ್ವಿಗ್ನತೆಯಿಂದ ದಾಖಲಿಸುತ್ತಾ ಹೋಗುತ್ತಾರೆ.  ತಮ್ಮ ಅನುಭವಗಳನ್ನು ತಾರ್ಕಿಕ ವಿಶ್ಲೇಷಣೆಗೆ ಒಳಪಡಿಸಿ ನಿರೂಪಿಸುತ್ತ ಹೋಗುತ್ತಾರೆ.  ಇಲ್ಲಿನ ಪ್ರತಿಯೊಂದು ಕಥೆಯೂ ದಮನಿತರ ಹದಗೆಟ್ಟ ಬದುಕು ಮತ್ತು ವ್ಯವಸ್ಥೆಯ ಹುಳುಕನ್ನು ಪ್ರತಿಫಲಿಸುತ್ತ ಓದುಗರ ಕಣ್ಣುಗಳನ್ನು ಹನಿಗೂಡಿಸುತ್ತವೆ. ದುಃಖವು ಈ ಕಥೆಗಳ ಸ್ಥಾಯೀಭಾವ.            ‘ಪರದೆ’ ಅನ್ನುವ ಕಥೆಯಲ್ಲಿ ಪರದೆ ಅನ್ನುವುದು ಧಾರ್ಮಿಕತೆಯ ದ್ಯೋತಕವಾದರೂ  ಅದು ಹೇಗೆ ಮನುಷ್ಯ ಸಂಬಂಧಗಳ ನಡುವೆ ಗೋಡೆ ನಿರ್ಮಿಸುತ್ತದೆ ಮತ್ತು ಬದುಕನ್ನು ಹೇಗೆ ಕೃತಕಗೊಳಿಸುತ್ತದೆ ಎನ್ನುವ ಸತ್ಯವನ್ನು ಕಥೆ ಬಯಲಿಗೆಳೆಯುತ್ತದೆ. ‘ಜುಮ್ಮಾ’ ಎಂಬ ಕಥೆಯಲ್ಲಿ ಧಾರ್ಮಿಕ ಶ್ರದ್ಧೆಯ ಹೆಸರಿನಲ್ಲಿ ಶುಕ್ರವಾರ ನಮಾಜು ಮಾಡಲು ಮಸೀದಿಗೆ ಹೋಗಲೇ ಬೇಕೆಂದು ಒತ್ತಾಯಿಸುವ ಅಮ್ಮ  ಕೊನೆಯಲ್ಲಿ ಅಷ್ಟು ಭವ್ಯವಾದ ಮಸೀದಿಯೊಳಗೆ  ಸ್ಫೋಟ ಸಂಭವಿಸಿದ ಸುದ್ದಿ ಕೇಳಿ  ತನ್ನ ನಂಬಿಕೆಯಿಂದಲೇ ಕಳಚಿಕೊಳ್ಳುವುದು ಬದುಕು ಹೇಗೆ ಮತೀಯ ನಂಬಿಕೆಗಿಂತ ದೊಡ್ಡದು ಅನ್ನುವ ಸತ್ಯವನ್ನು ನಿರೂಪಿಸುತ್ತದೆ.  ‘ಜೀಪು ಬಂತು’ ಎಂಬ ಕಥೆ ಬಡತನದ ಕುರಿತಾದದ್ದು. ಜೀವನೋಪಾಯಕ್ಕಾಗಿ ಹೊಲದಲ್ಲಿ ಬೆವರು ಸುರಿಸುವ ರೈತ ಮಳೆಯಿಲ್ಲದೆ ಅಸಹಾಯಕನಾಗಿ ಬೋರ್ ಹಾಕಿಸಿದರೆ  ವಿದ್ಯುತ್ ಇಲಾಖೆಯ ಅಧಿಕಾರಿಗಳು ಬಂದು ಹಣ ಕಟ್ಟಲಿಲ್ಲವೆಂದು ಅವನ ಜತೆಗೆ ನಿರ್ದಯವಾಗಿ ನಡೆದುಕೊಳ್ಳುವುದು  ಅಧಿಕಾರಶಾಹಿಯ ಕ್ರೌರ್ಯವನ್ನು  ಬಿಂಬಿಸುತ್ತದೆ.  ‘ಪಚ್ಚೆ ರಂಗೋಲಿ’ ಕಥಾನಾಯಕನ ಅಕ್ಕ ಹಿಂದೂ ಸಂಸ್ಕೃತಿಯಾದ ರಂಗೋಲಿಯ ಮೇಲಿನ ಪ್ರೀತಿಯಿಂದಾಗಿ ತನ್ನ ಕಣ್ಣುಗಳನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋಗುವುದು, ಮುಂದೆ ತನ್ನ ಆ ಆಸೆಯನ್ನು ಮೆಹಂದಿ ವಿನ್ಯಾಸದ ಮೂಲಕ ಪೂರೈಸಿಕೊಳ್ಳುವುದು-ಚಿಕ್ಕ ಚಿಕ್ಕ ವಿಷಯಗಳೂ ಹೇಗೆ ಧಾರ್ಮಿಕ ಸಂಘರ್ಷಗಳಿಗೆ ಕಾರಣವಾಗುತ್ತವೆ ಎಂಬುದನ್ನು ಹೇಳುತ್ತದೆ.      ಹೀಗೆ ಇಲ್ಲಿನ ಎಲ್ಲ ಕಥೆಗಳೂ ಮತೀಯ ಪೂರ್ವಾಗ್ರಹದಿಂದ ಮುಕ್ತವಾದ ಸೌಹಾರ್ದದ ಆಶಯವನ್ನು ವ್ಯಕ್ತಪಡಿಸುತ್ತಾನೆ. ಮೂಲಕಥೆಗಳ ವಸ್ತು, ಭಾಷೆ, ನಿರೂಪಣಾ ತಂತ್ರ ಎಲ್ಲವೂ ಸೊಗಸಾಗಿವೆ. ಅನುವಾದದ ಶೈಲಿ ಬಹಳ ಸುಂದರವಾಗಿದೆ. ************************************************ ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

Read Post »

ಅಂಕಣ ಸಂಗಾತಿ, ಹೊಸ ದನಿ-ಹೊಸ ಬನಿ

ಅಂಕಣ ಬರಹ ಘೋಷಣೆಗಳ ನಡುವೆ ರೂಪಕಗಳಿಗೂ ಕಾತರಿಸುವ ಕಲ್ಮೇಶ ತೋಟದ್  ಕವಿತೆಗಳು ಕಲ್ಮೇಶ ತೋಟದ್ . ಮೂರು ಗೇಣಿನಷ್ಟೇ ಅಂತರ ಭಾಸವಾಗುತ್ತಿದ್ದ ಬಾನಹಂದರ ನೋಡಲದೆಷ್ಟು ಸುಂದರ ಆಕಾಶ ಭೂಮಿ ಮಂದಾರ ಅಪ್ಪನ ಹೆಗಲದು ಸುಂದರ ಇಂಥ ಭಾವುಕ ಸಾಲುಗಳಲ್ಲಿ ಅಪ್ಪನ ಹೆಗಲನ್ನು ವರ್ಣಿಸಿ ಅಪ್ಪನನ್ನು ಕುರಿತಂತೆ ಈವರೆಗೂ ಇದ್ದ ಇಮೇಜುಗಳಿಗೆ ಮತ್ತೊಂದು ಹೊಸ ರೂಪಕವನ್ನು ಕೊಡಮಾಡಿರುವ ೨೬ರ ಹರಯದ ಯುವ ಕವಿ ಕಲ್ಮೇಶ ತೋಟದ ಅವರ ಕವಿತೆಗಳನ್ನು ಪರಿಚಯಿಸುವುದಕ್ಕೆ ಸಂತೋಷ ಮತ್ತು ಸಂಭ್ರಮಗಳು ಮೇಳೈಸುತ್ತವೆ.  “ಕೌದಿ” ಶೀರ್ಷಿಕೆಯಲ್ಲಿ ಈಗಾಗಲೇ ಒಂದು ಸಂಕಲನ ಪ್ರಕಟಿಸಿರುವ ಈ ಕವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಸ್ನಾತಕೋತ್ತರ ಪದವಿ ಪಡೆದು ಸದ್ಯ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕಲ್ಮೇಶ ತೋಟದ ತಮ್ಮ ಕವನ ಸಂಕಲನಕ್ಕೆ ಕವಿಯ ಮಾತು ಬರೆಯುವಾಗ ಹೀಗೆ ಟಿಪ್ಪಣಿಸುತ್ತಾರೆ; “ಅವ್ವ ಹಸಿದ ಬೆಕ್ಕಿನ ಮರಿಯೊಂದು ಕಂಡರೆ ಹಿಂದೆ ಮುಂದೆ ನೋಡದೆ ಒಂದಷ್ಟು ಹಾಲು ಹಾಕುತ್ತಾಳೆ. ನಾಯಿ ಕಂಡರೆ ಅನ್ನ ಹಾಕುತ್ತಾಳೆ. ಹಸು ಕಂಡರೆ ಒಂದು ರೊಟ್ಟಿ ಕೊಟ್ಟು ಬೆನ್ನು ಸವರುತ್ತಾಳೆ‌. ಪಕ್ಷಿಗಳಿಗೆ ಕಂಪೌಂಡ್ ಮೇಲೆ ಹಸನು ಮಾಡಿ ಉಳಿದ ಕಾಳು ಕಡ್ಡಿ ಚಲ್ಲುತ್ತಾಳೆ. ತುಳಸಿ ಗಿಡದ ಕುಂಡಲಿ ಪಕ್ಕ ಇರುವೆಗಳಿಗೆ ಸಕ್ಕರೆ ಹರವುತ್ತಾಳೆ. ಕೂದಲು, ಪಿನ್ನು ಮಾರಲು ಬರುವ ಮಹಿಳೆಯರಿಗೆ ತಾನಾಗಿಯೇ ಕುಡಿಯಲು ನೀರು ಬೇಕೆ ಎಂದು ಕೇಳಿ ನೀರು ಕೊಡುತ್ತಾಳೆ. ಇಷ್ಟೆಲ್ಲ ಮಾಡಿದ್ದಕ್ಕೆ ಆಕೆ ಫೋಟೋ ಕ್ಲಿಕ್ಕಿಸಿಕೊಂಡೋ, ಸೆಲ್ಫಿ ತೆಗೆದುಕೊಂಡು ಸಾಕ್ಷಿ ನೀಡುವುದಿಲ್ಲ. ಏನೂ ಮಾಡಿಯೇ ಇಲ್ಲವೆಂಬಂತೆ ಎಲ್ಲವನ್ನು ಮರೆತು ಮತ್ತೆ ನಾಳೆಗೆ ಸಿದ್ಧಳಾಗುತ್ತಾಳೆ”. ಫೇಸ್ಬುಕ್ ಪುಟ ತೆರೆದರೆ ಸಾಕು, ಸುಮ್ಮ ಸುಮ್ಮನೇ ಪಟ ಬದಲಿಸುವ, ಸಣ್ಣ ಪುಟ್ಟ ಸಂಗತಿಗಳನ್ನೂ ಎಂಥದೋ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಸೆಲ್ಫಿ ಹುಚ್ಚಿನವರು ಗಮನಿಸಲೇ ಬೇಕಾದ ಮತ್ತು ಅನುಸರಿಸಲೇ ಬೇಕಾದ ಸಾಲುಗಳು ಇವು. ತಮ್ಮ ಪಾಡಿಗೆ ತಾವು ಮಾನವೀಯ ಕೆಲಸಗಳನ್ನು ಮಾಡುತ್ತಿದ್ದರೂ ತೋರಿಸಿಕೊಳ್ಳದೇ ಹೇಳಿಕೊಳ್ಳದೇ ತಮ್ಮಲ್ಲೇ ಸುಖ ಕಾಣುತ್ತಿರುವವರನ್ನು ನಮ್ಮ ಫೇಸ್ಬುಕ್ಕಿಗರು ಗಮನಿಸದೇ ಇರುವುದು ಇದಕ್ಕೆ ಕಾರಣ. ಕವಿಯೆಂದು ಬೀಗುತ್ತಿರುವ ಹಲವರು ಮೊದಲು ತಮ್ಮ ಸುತ್ತ ಇರುವ ಜನ ಹೇಗೆ ಯಾವುದಕ್ಕೆ ಪ್ರತಿಕ್ರಯಿಸುತ್ತಾರೆ ಎನ್ನುವುದನ್ನು ಕಂಡುಕೊಳ್ಳದೇ ಅಂದು ಕೊಂಡದ್ದನ್ನೇ ಕಾವ್ಯ ಎಂದು ಬರೆಯುವಾಗ ಈ ಕವಿಯ ಈ “ನೋಟ” ಅವರ ಕವಿತೆಗಳಲ್ಲೂ ಚಾಚಿವೆ. “ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ” ಕವಿತೆ ಕೂಡ ಇಂಥದೇ ಬೆರಗಿನ ನೋಟದಲ್ಲೇ ಅರಳುತ್ತದೆ ಮತ್ತು ನಾವೆಲ್ಲರೂ ನೋಡಿ ಗಮನಿಸದೇ, ಗಮನಿಸಿದ್ದರೂ ತುಲನೆ ಮಾಡದ ಸಂಗತಿಗಳನ್ನು ಚಿತ್ರಿಸುತ್ತದೆ. ಕಣ್ಣಿಗೆ ಕಂಡದ್ದನ್ನು ಕಂಡಹಾಗೆ ಬರೆಯುತ್ತಿದ್ದ ಕವಿ ಒಮ್ಮೆಲೇ “ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ” ಎಂದು ಹೇಳುತ್ತ ರೂಪಕದ ಸಾಧ್ಯತೆಯನ್ನು ತೋರುತ್ತಾರಲ್ಲ, ಈ ಇಂಥ ಯತ್ನಗಳೇ ನಾಳೆಯ ಇವರ ಕವಿತೆಗಳನ್ನು ಎದುರು ನೋಡಲು ಪ್ರೇರೇಪಿಸುತ್ತದೆ. “ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ” “ದೇವರು ತುಂಬ ದೊಡ್ಡವನು” ಹೆಸರಿನ ಕವಿತೆಯ ಆಶಯ ಮಾನವೀಯ ಗುಣ ಇಲ್ಲದವರಿಗೆ ಸುಲಭಕ್ಕೆ ದಕ್ಕದ್ದು ಮತ್ತು ಸಿದ್ಧಿಸದ್ದು ಕೂಡ. ಏಕೆಂದರೆ ತಮ್ಮ ತಮ್ಮ ದೇವರು ಧರ್ಮ ಜಾತಿಗಳನ್ನೇ ದೊಡ್ಡದೆಂದು ಭಾವಿಸುವವರ ನಡುವೆ ಇಂಥ ಔದಾರ್ಯ ಮತ್ತು ಆತ್ಮ ನಿರ್ಭರತೆ ಇಲ್ಲದ ಯಾರೂ ಕವಿಯೆಂದು ಹೇಳಿಕೊಂಡ ಮಾತ್ರಕ್ಕೇ ಕವಿಯಾಗುವುದಿಲ್ಲ, ಅನ್ಯರ ಕಷ್ಟವನ್ನೂ ತನ್ನದೆಂದು ಭಾವಿಸದವನು ಕವಿಯಾಗುವುದು ಆಗದ ಮಾತು. ಆದರೆ ಇಷ್ಟು ಚಂದದ ದಾರಿಯಲ್ಲಿ ನಡೆದಿದ್ದ ಈ ಕವಿತೆ ಅಂತ್ಯದಲ್ಲಿ ಹೇಳಿಕೆಯಾಗಿ ಬದಲಾಗುತ್ತದೆ; “ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ…” ಇಂಥ ಹೇಳಿಕೆಗಳು ಮತ್ತು ಘೋಷಣೆಗಳು ಒಂದು ವರ್ಗದ ಮನಸ್ಥಿತಿ ಇದ್ದವರಿಗೆ “ಹಿತ” ಅನ್ನಿಸುವದರಿಂದ ಮತ್ತು ಫೇಸ್ಬುಕ್ ಪುಟಗಳ ತುಂಬ ಅಂಥವರದೇ ಲೈಕು ಕಮೆಂಟುಗಳು ತುಂಬಿಕೊಳ್ಳುವುದರಿಂದ ಯುವ ಕವಿಗಳು ಕ್ಷಣದ ಹೊಗಳಿಕೆಗಾಗಿ ಹೇಳಿಕೆಗಳಲ್ಲೋ ಘೋಷಣೆಗಳಲ್ಲೋ ಕವಿತೆಯನ್ನು ಧ್ವನಿಸದೇ ಪ್ರತಿಮೆ ರೂಪಕಗಳ ಮೂಲಕವೇ ತಮ್ಮ ಅಭಿವ್ಯಕ್ತಿಯನ್ನು ಪ್ರಚುರಗೊಳಿಸುವ ಅಗತ್ಯತೆ ಇದೆ. “ಒಂದರೆಘಳಿಗೆಯ ನಿದ್ದೆ” ಕವಿತೆ ಕೂಡ ಮೇಲ್ನೋಟಕ್ಕೆ ರಿಯಲ್ ಮತ್ತು ವರ್ಚ್ಯುಯಲ್ ಪ್ರಪಂಚಗಳ ಡಿಸೆಕ್ಷನ್ ಥರ ಕಂಡರೂ ಆ ಡಿಸೆಕ್ಷನ್ನಿಗೆ ಬೇಕಾದ ಪರಿಕರಗಳನ್ನು ಇಟ್ಟುಕೊಳ್ಳದೇ ಥಟ್ಟನೇ ಹೊಳೆದ ಜನ ಮನ್ನಣೆಗೆ ಬರೆದ ಸಾಲುಗಳಾಗಿ ಬದಲಾಗಿವೆ. ಈ ಎರಡೂ ಕವಿತೆಗಳ ಆತ್ಮವನ್ನು ಬೆಳಗಿ ದೈಹಿಕ ನ್ಯೂನತೆಗಳನ್ನು ಸರಿಪಡಿಸಿದರೆ ಎರಡೂ ಕೂಡ ಉತ್ತಮ ರಚನೆಗಳಾಗುವ ವಸ್ತು ಹೊಂದಿವೆ. “ಸಾವು ಅಂತಿಮ ಎನಿಸಿದಾಗ ನೀನೊಮ್ಮೆ” ಎಂಬ ಸಾಲುಗಳನ್ನು ಪ್ರತಿ ಅನುಪಲ್ಲವಿಯಲ್ಲಿ ಮತ್ತೆ ಮತ್ತೆ ಧೇನಿಸುವ ಕವಿತೆ ಅದ್ಭುತ ಚಿತ್ರಗಳನ್ನು ಚಿತ್ರಿಸುತ್ತಲೇ ನಿಜಕ್ಕೂ ಬದುಕಿಗೆ ಬೇಕಾದ ಪರಿಕರಗಳನ್ನು, ಜರೂರು ಬೇಕಿರುವ ಆತ್ಮ ಸಾಂಗತ್ಯದ ಅನಿವಾರ್ಯಗಳನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತಲೇ ಬದುಕಿದ್ದಷ್ಟೂ ದಿನ ಅರ್ಥ ಪೂರ್ಣವಾಗಿ ಬದುಕಬೇಕಿರುವ ಹೃದಯವಂತಿಕೆಯ ಚಿತ್ರಣವಾಗಿದೆ. ಆದರೆ ಈ ಕವಿ ಏಕೋ ಘೋಷಣೆಗೋ ಅಥವ ಹೇಳಿಕೆಗೋ ಹೆಚ್ಚು ಮಹತ್ವ ಕೊಟ್ಟ ಕಾರಣಕ್ಕೆ ಕಡೆಯ ಸಾಲುಗಳಲ್ಲಿ ಕವಿತೆ ತಟಸ್ಥವಾಗಿ ಬಿಡುತ್ತದೆ. “ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ” ಎಂದು ಆರಂಭವಾಗುವ ತಲೆ ಬರಹವಿಲ್ಲದ ಪದ್ಯದ ಆಶಯ ಮಹತ್ವದ್ದು. ಘೋಷಣೆ ಅಥವ ಹೇಳಿಕೆಗಳಿಲ್ಲದ ನಿಜದ ಮಾತುಗಳೇ ತುಂಬಿರುವ ಪದ್ಯ ಹರೆಯದ ಹುಡುಗರು ಸಾಮಾನ್ಯ ಸೃಷ್ಟಿಸುವ ಪ್ರೀತಿ, ಪ್ರೇಮಗಳ ಕುರಿತಾದ ಅಂಶಗಳಿದ್ದರೂ ಭೋರ್ಗರೆತ ಮತ್ತು ಸುಳಿ ತಿರುವುಗಳ ಚಿತ್ರಣವಿಲ್ಲದೆಯೂ ಸರಾಗ ಹರಿದು ಕಡಲು ಸೇರುವ ನದಿಯ ಹರಿವಂತೆ ಭಾಸವಾಗುತ್ತದೆ. “ಹುಡುಕುತ್ತಲೇ ಇದ್ದಾಳೆ ಅವ್ವ ಕುಂಕುಮದ ಬಟ್ಟಲಲ್ಲಿ, ಅರಿಶಿಣದ ಬೇರಿನಲ್ಲಿ ಮಲ್ಲಿಗೆ ಹೂ ದಾರದಲ್ಲಿ ಬಳೆಯ ಸದ್ದಿನ ಗುಂಗಿನಲ್ಲಿ ಗೆಜ್ಜೆನಾದದ ಸದ್ದಿನಲ್ಲಿ…..” ಇಲ್ಲವಾದ ಅಪ್ಪನನ್ನು ಸಾರ್ಥಕವಾಗಿ ಚಿತ್ರಿಸಿದ ಸಾಲು ಇಷ್ಟವಾಗುತ್ತದೆ. ಆದರೆ ಇನ್ನೂ ಬೆಳಸಬಹುದಾಗಿದ್ದ ಈ ಪದ್ಯ ಅವಸರದಲ್ಲಿ ಬರೆದಂತೆ ಕಾಣುತ್ತದೆ. “ಎರೆಮಣ್ಣ ನೆಲದಲ್ಲಿ ತರತರದ ಸೊಬಗಲ್ಲಿ ಮೂಡಗಾಳಿಯ ಎದುರು, ಮಸಡಿ ಬಿರಿತರು ಕೂಡ ಬನ್ನಿಗಿಡದಡಿಯ ಕಲ್ಲು ಪಾಂಡವರಿಗೆ ಕೈ ಮುಗಿದು ದೆವ್ವದ ಗಾಳಿಗೆ ಎದೆಯೊಡ್ಡಿ ನಿಂತ ಭೂತಾಯಿ ಇವಳು ಜನಕರಾಜನ ಮಗಳು..” ಎನ್ನುವ ಸಾಲುಗಳನ್ನು ಓದುತ್ತಿದ್ದಾಗ ಯಾಕೋ ಲಂಕೇಶರ ಅವ್ವ ಪದ್ಯ ಬೇಡ ಬೇಡ ಎಂದರೂ ನೆನಪಾಗುತ್ತದೆ. ಕನ್ನಡದ ಕವಿತೆಗಳೇ ಹಾಗೆ, ಒಂದರ ನೆರಳು ಮತ್ತೊಂದರ ತಲೆಗೆ ತಾಕುತ್ತದೆ, ಮಗದೊಂದು ತೋರಿದ ಝಳಕ್ಕೆ ಎಗ್ಗು ಸಿಗ್ಗಿಲ್ಲದೇ ಅರಳಿಕೊಳ್ಳುತ್ತದೆ, ಹೊರಳಿಕೊಳ್ಳುತ್ತದೆ. ಶ್ರೀ ಕಲ್ಮೇಶ ತೋಟದ ಈಗಿನ್ನೂ ೨೬ರ ಹರಯದ ಯುವಕ. ಅವರು ಸಾಗಬೇಕಿರುವ ದಾರಿ ಮತ್ತು ಮುಟ್ಟ ಬೇಕಿರುವ ಗುರಿ ಬಹಳ ದೊಡ್ಡದಿದೆ. ಆತ್ಮ ಸಂಗಾತಕ್ಕೆ ಅನುಭವದ ಹಾದಿಯ ಎಡರು ತೊಡರುಗಳನ್ನು ಬಳಸುತ್ತಲೇ ಅವನ್ನೇ ಕವಿತೆಯ ರೂಪಕಗಳನ್ನಾಗಿ ಬಳಸುವ ಜಾಣ್ಮೆ ಮತ್ತು ಕಲೆ ಅವರು ಸಿದ್ಧಿಸಿಕೊಳ್ಳುತ್ತ ಇದ್ದಾರೆ ಎನ್ನುವುದು ಅವರ ರಚನೆಗಳ ಮೇಲ್ನೋಟದ ಓದಿನ ಫಲಶೃತಿ. ಇಂಥ ಕವಿಗಳು ಅವರಿವರು ಬೆನ್ನು ತಟ್ಟಿದರೆಂಬ ಖುಷಿಯಲ್ಲಿ, ಮೈ ಮರೆಯದೇ ತಮ್ಮ ಅನುಭವಕ್ಕೆ ಬಂದ ಸಂಗತಿಗಳತ್ತಲೇ ಕಿವಿ ಮೂಗು ಕಣ್ಣುಗಳನ್ನು ಕೀಲಿಸಿದರೆ ಮಾತ್ರ ಹೇಳಿಕೆಗಳಿಂದಲೂ ಘೋಷಣೆಗಳಿಂದಲೂ ಮುಕ್ತರಾಗಬಲ್ಲರು. ಆ ಅಂಥ ಶಕ್ತಿ ಇರುವ ಈ ಯುವಕವಿ ತಕ್ಷಣಕ್ಕಲ್ಲವಾದರೂ ನಿಧಾನದ ಓದಿನಿಂದ, ಪೂರ್ವ ಸೂರಿಗಳ ಒಡನಾಟದಿಂದ ಪಡೆಯಲಿ, ಪಡೆಯುತ್ತಾರೆ ಎನ್ನುವ ಹಾರೈಕೆಯ ಜೊತೆಗೇ ಅವರ ಆಯ್ದ ಐದು ಕವಿತೆಗಳನ್ನು ಕಾವ್ಯಾಸಕ್ತರ ಓದಿಗೆ ಶಿಫಾರಸು ಮಾಡುತ್ತಿದ್ದೇನೆ; ಕಲ್ಮೇಶ ತೋಟದ್ ಕವಿತೆಗಳು 1.ಸರ್ಕಾರಿ ಬಸ್ಸಿನ ಕೊನೆಯ ಗಿರಾಕಿ ಕಿಕ್ಕಿರಿದು ತುಂಬಿದ ವಾ.ಕ.ರ.ಸಾ.ಸಂ ಬಸ್ಸಿನಲ್ಲಿ ಎಷ್ಟೊಂದು ಮುದ್ರಣಗೊಳ್ಳದ ಬದುಕುಗಳಿವೆ ಬಸ್ಸು ತನ್ನ ಪಾಡಿಗೆ ತಾ ಹೊರಟಿರುತ್ತದಷ್ಟೆ ಒಳಗೆ ಅಲ್ಲಲ್ಲಿ ಒಂದಿಷ್ಟು ಗುಂಪುಗಳು ಮಾತಿಗಿಳಿದಿರುತ್ತವೆ ಎಷ್ಟೊಂದು ರಾದ್ಧಾಂತದ ಬದುಕು  ಪ್ರತಿಯೊಬ್ಬರು ಇನ್ನೊಬ್ಬರನ್ನು ದೂಷಿಸುವುದರಲ್ಲಿಯೇ ಮಗ್ನರಾಗಿದ್ದಾರೆ ಅಲ್ಲೊಂದು ಹಿರಿಯ ನಾಗರಿಕರಿಗೆ ಮೀಸಲಿಟ್ಟ ಆಸನದಲ್ಲಿ ಕುಳಿತ ಹುಡುಗರಿಗೆ ಕಾಲೇಜಿನ ಗೌಜು ಗದ್ದಲದ ಚಿಂತೆ ಅಲ್ಲೆ ಮುಂದೆ ಸೀಟು ಸಿಗದೆ ನಿಂತ ಮುದುಕನೊಬ್ಬ ಎಡಗಾಲನ್ನೊಮ್ಮೆ, ಬಲಗಾಲನ್ನೊಮ್ಮೆ ಬದಲಿಸುತ್ತ ದೇಹದ ಭಾರ ನಿಭಾಯಿಸುತ್ತಾನೆ ಅಜ್ಜನ ದೋತ್ರಕ್ಕೆ ಎಷ್ಟೊಂದು ನೆರಿಗೆಗಳು ಥೇಟ್ ಅವನ ಮುಖದ ಮೇಲಿನಂತೆ ಹಿಂದೆ ಯಾರದ್ದೊ ಮೊಬೈಲಿನಲಿ ಹಳೆ ಟ್ಯಾಕ್ಟರ್ ಜಾನಪದದ ಹಾಡು ಎಗ್ಗಿಲ್ಲದೆ ಬಡಿದುಕೊಳ್ಳುತ್ತಲೆ ಇದೆ ಚಿಲ್ಲರೆ ಕೇಳಿ ಕೇಳಿ ಸುಸ್ತಾದ ಕಂಡಕ್ಟರ್ ಕೂಡಾ ಸಾರ್ವಜನಿಕರಿಗೆ ಮನದಲ್ಲೆ ಬೈಯುತ್ತ ಟಿಕೆಟ್ ಹರಿಯುತ್ತಿದ್ದಾನೆ ಬಸ್ಸು ತಗ್ಗು ದಿಬ್ಬಿನ ರಸ್ತೆಯೊಡನೆ ಎಷ್ಟೊಂದು ಆತ್ಮೀಯವಾಗಿದೆ ಎದ್ದರೂ, ಬಿದ್ದರೂ ಮುಗ್ಗರಿಸದೆ ಮುನ್ನಡೆಯುತ್ತದೆ ಬಸ್ಸಿನ ಕಂಬಗಳೆಲ್ಲವೂ ಈಗ ಅನಾಥ ಎಲ್ಲರೂ ಮೊಬೈಲ್ ಹಿಡಿದು ಕುಳಿತವರೆ ನಾನು ಬಸ್ಸಿಗೆ ಹೊಸಬನೊ ಅಥವಾ ಬಸ್ಸು ನನಗೆ ಹೊಸದೊ, ಥೋ… ಗೊತ್ತಿಲ್ಲ ಒಂದೊಂದೆ ನಿಲ್ದಾಣ ಬಂದಂತೆಲ್ಲಾ ಬಸ್ಸು ಬರಿದಾಗತ್ತಲೆ ಇದೆ ಈಗೋ ಕಂಡಕ್ಟರ್ ನ ಅಂತಿಮ ಪ್ರಕಟಣೆ ‘ಲಾಸ್ಟ್ ಸ್ಟಾಪ್ ಯಾರ ನೋಡ್ರಿ ಇಳಕೊಳ್ಳೊರು ಇಳಕೊಳ್ರಿ’ 2. ದೇವರು ತುಂಬ ದೊಡ್ಡವನು ರಾಮನಾದರೂ ದಕ್ಕಲಿ, ರಹೀಮನಾದರೂ ದಕ್ಕಲಿ ಬಿಕ್ಕಿ ಅಳುವ ಕಂದನ , ಕಣ್ಣೀರು ಕೊಂಚ ಒರೆಸಲಿ ಬಣ್ಣದ ಬಾವುಟಗಳು ಒಂದಿಷ್ಟು ಶಾಂತವಾಗಲಿ ಬದುಕೆ ಇಲ್ಲದೆ ಕೊರಗುವವರಿಗೆ ಒಂದಿಷ್ಟು ರಂಗು ದೊರೆಯಲಿ ಧರ್ಮ ಶ್ರೇಷ್ಠತೆಯ ಬೊಬ್ಬೆಯಿಡು ನೀನು ನಾನು ಮಾತ್ರ ಹಸಿದವರಿಗೆ ಒಂದು ತುತ್ತು ಅಣ್ಣ ಕಲಸಿ, ಕೈತುತ್ತನ್ನಷ್ಟೆ ನೀಡಬಲ್ಲೆ ಅಲಿಸಾಬ್ ಕಾಕಾನೊಂದಿಗೆ ವ್ಯವಹಾರ ನಡೆಸುತ್ತಿದ್ದ ದೊಡ್ಡಪ್ಪ ಎಂದಿಗೂ ಧರ್ಮ-ಜಾತಿಗಳ ಲೆಕ್ಕ ಹಾಕಿದ್ದು ಕಂಡಿಲ್ಲ ಇಷ್ಟ್ಯಾಕೆ ಕಚ್ಚಾಡಿ, ಕಷ್ಟಪಡುತ್ತೀರಿ ದೇವರು ತುಂಬ ದೊಡ್ಡವನು ನಿವ್ಯಾಕೆ ಬೀದಿಗಿಳಿದು ಚಿಕ್ಕವರಾಗುತ್ತೀರಿ ಗೋಡೆಯಾದರೂ ಉರುಳಲಿ, ಗುಮ್ಮಟವಾದರೂ ಉರುಳಲಿ ಹಸಿವಿನ ಕಟ್ಟೆ ಒಡೆಯದಿರಲಿ ಕಟ್ಟುವುದೇ ಆದರೆ ಒಂದು ಶಾಲೆಯನ್ನೊ, ಶೌಚಗೃಹವನ್ನೊ ಕಟ್ಟೋಣ ಹಸಿವು, ಅಜ್ಞಾನ, ಮಾನದ ಮುಂದೆ ಯಾವ ದೇವರೂ ದೊಡ್ಡವನಲ್ಲ ಅಲ್ಲವೆ… 3. ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಪಾರಿಜಾತದ ಹೂ ನೋಡಬೇಕಿತ್ತು ಕೊಂಡಿ ಕಳಚಿದಾಗಲೂ ಅದು ನಗುತ್ತಲೆ ನೆಲಕ್ಕುದುರುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ನವಿಲು ಗರಿಯನ್ನ ಮಾತಿಗೆಳೆಯಬೇಕಿತ್ತು ಮೈ ಕೊಡವಿದಾಗ ದೇಹದಿಂದ ಬೇರ್ಪಟ್ಟರು ಅದು ನಗುವ ಪರಿ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಕಡಲ ಚಿಪ್ಪನ್ನು ಕಂಡು ಬರಬೇಕಿತ್ತು ತಲೆ ಒಡೆಸಿಕೊಂಡಾಗ ಮುತ್ತು ನೀಡಿದ ಘಳಿಗೆಯ ನೆನದು ಅದು ಸಾಂತ್ವನ ಹೇಳುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಹೆತ್ತವ್ವನ ಒಡಲಲ್ಲಿ ಸುಮ್ಮನೆ ತಲೆಯಿಟ್ಟು ಮಲಗಬೇಕಿತ್ತು ಕರುಳಬಳ್ಳಿ ಕತ್ತರಿಸಿ, ಕೋಡಿ ನೆತ್ತರ ಹರಿಸಿದಾಗಲೇ ನೀ ಹುಟ್ಟಿದ್ದನ್ನು ಕಿವಿ ಹಿಂಡಿ  ಹೇಳುತ್ತಿತ್ತು ಸಾವೇ ಅಂತಿಮ ಎನಿಸಿದಾಗ ನೀನೊಮ್ಮೆ ನಿನ್ನಾತ್ಮದೊಂದಿಗೆ ಸಂವಾದಕ್ಕಿಳಿಯಬೇಕಿತ್ತು ಕೊನೆ ಪಕ್ಷ ಇದ್ದು ಮಾಡಬೇಕಾದ ಜರೂರತ್ತುಗಳನ್ನ ನೆನಪಿಸುತ್ತಿತ್ತು ಸಾವು ಅಂತಿಮ ಎನಿಸಿದಾಗ ನೀನೊಮ್ಮೆ ಮೌನ ಮುರಿದು ಮಾತಾಗಬೇಕಿತ್ತು ನಾನು ಹೆಗಲುಕೊಟ್ಟು ದುಃಖಕ್ಕೆ ಜೊತೆಯಾಗುತ್ತಿದ್ದೆ ನೀ ಇದ್ದರೂ, ಇಲ್ಲದಿದ್ದರೂ ಇಲ್ಲಿ ಯಾವುದು ನಿಲ್ಲುವುದಿಲ್ಲ ಈಗ ಎಲ್ಲವೂ ಮೀರಿ ಹೋಗಿದೆ ಅಷ್ಟೆ ನಿನ್ನ ಬಿತ್ತಿದ ನೆಲವೂ ಉಬ್ಬಿ ನಿಂತಿದೆ ಹೂಗಳ ಹೊತ್ತು ಸನ್ಮಾನವೆಂದು ಭ್ರಮಿಸಿ ನೀನಷ್ಟೆ ಕುಗ್ಗಿ ಮಣ್ಣಾಗಿ ಹೋದವ ಮೂರ್ಖ 4. ಜಿನುಗುವ ಮಳೆಯಲ್ಲಿ ಬಿಕ್ಕುವ ಹಳೆ ನೆನಪುಗಳ ಕೆಣಕಬೇಡ ಸಖಿ ಸುಕ್ಕುಗಟ್ಟಿದ ಮನಸ್ಸಲ್ಲಿ ಮತ್ತೆ ಮುಂಗಾರು ಮಳೆ ಸುರಿದು ಒಲವ ಹೂ

Read Post »

ಅಂಕಣ ಸಂಗಾತಿ, ದಿಕ್ಸೂಚಿ

ಮರೆವಿಗೆ ಇಲ್ಲಿದೆ ರಾಮಬಾಣ           ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಓದ್ತಿನಿ.ಆದರೂ ಬೇಕೆಂದಾಗ ನೆನಪಿಗೆ ಬರುವುದೇ ಇಲ್ಲ. ಅದೂ ಪರೀಕ್ಷೆ ಸಮಯದಲ್ಲಂತೂ ಸರಿಯಾಗಿ ಕೈ ಕೊಡುತ್ತದೆ ಏನು ಮಾಡಬೇಕು ತಿಳಿಯುತ್ತಿಲ್ಲ. ಎನ್ನುವುದು ಬಹಳಷ್ಟು ಪರೀಕ್ಷಾರ್ಥಿಗಳ ದೊಡ್ಡ ಸಮಸ್ಯೆ. ನನ್ನ ಮಕ್ಕಳು ಓದಲ್ಲ ಅಂತಿಲ್ಲ. ಎಲ್ಲವನ್ನೂ ಓದ್ತಾರೆ.ಆದರೆ ಅವರಿಗೆ ಜ್ಞಾಪಕ ಶಕ್ತಿದೇ ಸಮಸ್ಯೆ. ಪರೀಕ್ಷೆಯಲ್ಲಿ ಓದಿದ್ದು ಚೆನ್ನಾಗಿ ನೆನಪಿಗೆ ಬರಲಿಲ್ಲ ಅದಕ್ಕೆ ಅಂಕ ಕಡಿಮೆ ಬಂದಿದೆ ಎಂದು ಕಣ್ಣಿರಿಡುತ್ತಾರೆ ನಮಗೇನು ಮಾಡಬೇಕು ಅಂತ ಹೊಳಿತಿಲ್ಲ ಎನ್ನುವುದು ಹಲವು ಹೆತ್ತವರ ಗೋಳು. ಈ ಸಮಸ್ಯೆಗೆ ಅವರಿವರ ಜೊತೆ ಚರ್ಚಿಸಿ ಕೆಲ ಟಿಪ್ಸ್ ಸಿಕ್ಕರೂ ಅವು ಅಷ್ಟೊಂದು ಫಲ ನೀಡುತ್ತಿಲ್ಲ ಅನ್ನೋದು ಕೆಲವು ಪಾಲಕರ ಚಿಂತೆ. ಮರೆವು ಎನ್ನುವುದು ಒಂದು ರೋಗವೇ? ಇದಕ್ಕೆ ಮದ್ದು ಇಲ್ಲವೇ? ನನಗೆ ಜ್ಞಾಪಕ ಶಕ್ತಿ ಕಡಿಮೆ ಎಂಬ ಭ್ರಮೆ ತಲೆಯಲ್ಲಿ ಪ್ರ್ರಾರಂಭವಾದರೆ  ಅದನ್ನು ಹೋಗಲಾಡಿಸುವುದು ಕಷ್ಟ ಸಾಧ್ಯ.ಮರೆವು ಒಂದು ವರವೂ ಹೌದು. ಮರೆವು ಇರದಿದ್ದರೆ ಕಹಿ ಘಟನೆಗಳನ್ನು ದುಃಖದ ಸಂಗತಿಗಳನ್ನು ಮರೆಯಲು ಸಾಧ್ಯವಾಗದೇ ಬಾಳು ನಿತ್ಯ ನರಕವಾಗುತ್ತಿತ್ತು. ಪ್ರಮುಖ ವಿಷಯಗಳನ್ನು ಮರೆಯದೇ ನೆನಪಿÀಡಬೇಕೆ? ಹಾಗಾದರೆ ಇಲ್ಲಿದೆ ಅದಕ್ಕೆ ರಾಮಬಾಣ.  ಅಟೋ ಸಜೇಷನ್  ಸಾಮಾನ್ಯವಾಗಿ ಜ್ಞಾಪಕ ಶಕ್ತಿ ಎಲ್ಲರಲ್ಲೂ ಒಂದೇ ರೀತಿಯಲ್ಲಿರುತ್ತದೆ. ಇದನ್ನು ದಿನ ನಿತ್ಯ ಮೊಂಡಾದ ಚಾಕು ಹರಿತಗೊಳಿಸುವಂತೆ, ಪರಿಶ್ರಮದಿಂದ ವೃದ್ಧಿಸಿಕೊಳ್ಳುತ್ತಾರೆ. ಗೆಲುವು ಸಾಧಿಸುತ್ತಾರೆ. ಇನ್ನೂ ಕೆಲವರು ತಮ್ಮಲ್ಲಿ ಜ್ಞಾಪಕ ಶಕ್ತಿಯ ಪ್ರಮಾಣವೇ ಕಡಿಮೆ ಇದೆ ಎಂಬ ಭ್ರಮೆಗೆ ಜೋತು ಬಿದ್ದು ವಿಫಲರಾಗುತ್ತಾರೆ. ಕೆಲ ಜನರು ತೀರಾ ಅನಗತ್ಯವೆನಿಸುವ ವಿಷಯಗಳನ್ನು ಪ್ರಮುಖವೆಂದು ಭಾವಿಸಿ ಆ ಸಂಗತಿಗಳು ತಮ್ಮ ತಲೆಯಲ್ಲಿ ಉಳಿಯುವುದಿಲ್ಲ ಎಂದು ಚಿಂತಿಸುತ್ತಾರೆ. ನಿಜ ಹೇಳಬೇಕೆಂದರೆ ಚಿಕ್ಕ ಪುಟ್ಟ ವಿಷಯಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡುತ್ತಿಲ್ಲ ಎಂದು ಖುಷಿ ¥ಡಬೇಕು ನೀವು ಪುಸ್ತಕ ಪೆನ್ನು ಇತ್ಯಾದಿ . ದಿನ ನಿತ್ಯ ಇಡುವ ಜಾಗದಲ್ಲಿ ಇಡದೇ ಬೇರೆ ಜಾಗದಲ್ಲಿಟ್ಟು ಹುಡುಕುತ್ತ ಇತ್ತೀಚಿಗೆ ನನಗೆ ಮರೆವು ಹೆಚ್ಚಾಗ್ತಿದೆ ಎಂದು ಬೇಸರಿಸಿಕೊಂಡರೆ ಅದೊಂದು ರೀತಿಯ ಮೂರ್ಖತನವೇ ಅಲ್ಲವೇ? ಎಲ್ಲೋ ಇಟ್ಟು ಎಲ್ಲೋ ಹುಡುಕಿದರೆ ಸಿಗುವುದಾದರೂ ಹೇಗೆ? ನನಗೆ ಜ್ಞಾಪಕ ಶಕ್ತಿ ಕಡಿಮೆ ಮರೆವು ಜಾಸ್ತಿ ಎಂದು ಪದೇ ಪದೇ ಹೇಳಬೇಡಿ. ಈ ಸಂಗತಿ  ಮೆದುಳಲ್ಲಿ ಪ್ರತಿಷ್ಟಾಪಿಸಿದರೆ ಅಪಾಯಕಾರಿ. ನನಗೆ ಅದ್ಭುತ ಜ್ಞಾಪಕ ಶಕ್ತಿ ಇದೆ ಎಂದು ಅಟೋ ಸಜೆಷನ್ (ಸ್ವ ಸಲಹೆ) ಕೊಟ್ಟುಕೊಳ್ಳಿ ಪರಿಣಾಮವೂ ಅದ್ಭುತವಾಗಿರುತ್ತದೆ. ಆಸಕ್ತಿ ವಲಯ ಬದಲಿಸಿ ನಿಮಗೆ ಕ್ರಿಕೆಟ್ ನಲ್ಲಿ ಆಸಕ್ತಿ ಇದ್ದರೆ ಯಾರು ಎಷ್ಟು ಶತಕ ಬಾರಿಸಿದರು? ಭಾರತ ಯಾವಾಗ ವಿಶ್ವ ಕಪ್ ಗೆದ್ದಿತು? ಯಾರು  ಬ್ಯಾಟಿಂಗ್  ದಾಖಲೆ ಸಾಧಿಸಿದ್ದಾರೆ ಎನ್ನುವ ಪ್ರಶ್ನೆಗಳಿಗೆ ನಿರಾಯಾಸವಾಗಿ ಉತ್ತರಿಸುತ್ತೀರಿ. ಒಂದು ವೇಳೆ ಸಿನಿಮಾದಲ್ಲಿ ಆಸಕ್ತಿ ಇದ್ದರೆ ಯಾವ ಸಿನಿಮಾದಲ್ಲಿ ಯಾರು ಹೀರೋ? ನಿರ್ದೇಶನ ಯಾರದು ಎಂಬಿತ್ಯಾದಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುತ್ತೀರಿ. ಸಂಗೀತದಲ್ಲಿ ಆಸಕ್ತಿ ಇದ್ದರೆ ಗೀತೆ ರಚನೆಕಾರರು ಯಾರು? ಹಾಡಿದವರು ಯಾರು? ಎನ್ನುವ ಪ್ರಶ್ನೆಗಳಿಗೆ ಅರೆ ಕ್ಷಣ ಯೋಚಿಸದೇ ಫಟಾ ಫಟ್ ಉತ್ತರಿಸಿ ಬಿಡುತ್ತಿರಿ. ಇಷ್ಟವಾದ ವಿಷಯಗಳನ್ನು ನೆನಪಿಡಲು ಕಷ್ಟವೆನಿಸುವುದಿಲ್ಲ. ಆದರೆ ಇಷ್ಟ ಇಲ್ಲದ ವಿಷಯ ಬಂದಾಗ ಮರೆವು ಜಾಸ್ತಿ ಇದೆ ಎನ್ನುವ ದೂರು ನೀಡುವ ನಿಮಗೆ ಇದೆಲ್ಲ ಉತ್ತರಿಸೋಕೆ ಹೇಗೆ ಸಾಧ್ಯ? ಎಂಬ ಪ್ರಶ್ನೆ ಭ್ರಮೆಯಲ್ಲಿರುವವರಿಗೆ ಹೆಚ್ಚಾಗಿ ಮೂಡುವುದಿಲ್ಲ. ಒಮ್ಮೆ ಪ್ರಶ್ನಿಸಿಕೊಂಡು ನೋಡಿ ಹೌದು ನನ್ನಲ್ಲಿ ಜ್ಞಾಪಕ ಶಕ್ತಿ ಅಗಾಧವಾಗಿದೆ. ಆದರೆ ನನ್ನ ಆಸಕ್ತಿ ವಲಯ ಬದಲಿಸಿದರೆ ನಾನು ಓದಿಗೆ ಸಂಬಂಧಿಸಿದ ಅಥವಾ ನನಗೆ ಬೇಕಾದ ವಿಷಯ ನೆನಪಿನಲ್ಲಿಟ್ಟುಕೊಳ್ಳಬಲ್ಲೆ ಎಂಬುದು ಸ್ಪಷ್ಟವಾಗುವುದು. ಪುನರಾವಲೋಕನ  ನೀವು ಓದಿದ ವಿಷಯಗಳನ್ನು ಮೇಲಿಂದ ಮೇಲೆ ಪುನರಾವಲೋಕನ ಮಾಡಿಕೊಳ್ಳುತ್ತಿರಬೇಕು  ಪುನರಾವರ್ತನೆಗೊಳ್ಳುವ ವಿಷಯಗಳನ್ನು ಮೆದುಳು ಅಷ್ಟು ಸಲೀಸಾಗಿ ಮರೆಯಲು ಸಾಧ್ಯವಿಲ್ಲ. ಪರೀಕ್ಷೆ ಬರೆಯುವಾಗ ಈ ವಿಷಯಗಳು ಖಂಡಿತ ನೆನಪಿಗೆ ಬರುವವು. ಒಮ್ಮೆ ಮನೆಯಲ್ಲಿ ಪ್ರಶ್ನೆ ಪತ್ರಿಕೆ ಬಿಡಿಸಿ ಪರೀಕ್ಷಿಸಿ ನೋಡಿ. ನಿಮಗೆ ಅಚ್ಚರಿ ಎನಿಸುತ್ತದೆ. ಪುನರಾವಲೋಕನ ಮನೋಬರಲವನ್ನು ಹೆಚ್ಚಿಸಿ ಜ್ಞಾಪಕ ಶಕ್ತಿಯನ್ನು ವೃದ್ಧಿಸುತ್ತದೆ. ಅರಿಯದೇ ನೋಡದೇ ಯೋಚಿಸದೇ ಕಾರ್ಯ ಮಾಡಬಾರದು ಎಂದು ವಿಷ್ಣು ಶರ್ಮ ಹೆಳಿದ್ದಾನೆ. ಅಂತೆಯೇ ಓದಿದ ವಿಷಯಗಳನ್ನು ಅರ್ಥೈಸಿಕೊಂಡು ಪುನರಾವಲೋಕನ ಮಾಡಿಕೊಳ್ಳಿ. ಅಕ್ರೋನಿಮ್ಸ್ ಬಳಸಿ ಹತ್ತು ಹಲವು ಅಂಶಗಳುಳ್ಳ ದೊಡ್ಡ ದೊಡ್ಡ ಉತ್ತರಗಳನ್ನು ನೆನಪಿನಲ್ಲಿಕೊಟ್ಟುಕೊಳ್ಳುವುದು ತುಂಬಾ ಕಷ್ಟ ಎನಿಸುವುದು ಸಹಜ. ಕಂಠ ಪಾಠ ಮಾಡುವ ಪದ್ದತಿ ಇಲ್ಲಿ ಉಪಯೋಗಕ್ಕೆ ಬಾರದು. ಶ್ಲೋಕಗಳು ಪದ್ಯಗಳು ಸುಭಾಷಿತಗಳನ್ನು ನೆನಪಿಡಲು ಮಾತ್ರ ಕಂಠ ಪಾಠ ಸೂಕ್ತ. ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ವಿಬ್ಗಾರ್ ಎಂದು ಅಕ್ಷರ ಮುದ್ರಿಕೆಯನ್ನು ಉಪಯೋಗಿಸುತ್ತಾರೆ.  ದೊಡ್ಡ ಉತ್ತರಗಳ ಅಂಶಗಳ ಮೊದಲ ಅಕ್ಷರಗಳನ್ನು ಒಟ್ಟುಗೂಡಿಸಿದರೆ ಅಕ್ಷರ ಮುದ್ರಿಕೆ (ಸಣ್ಣ ಪದಗಳು) ಅಬ್ರಿವೇಶನ್ಸ್ನಂತೆ  ಆಗುತ್ತದೆ. ನೆನಪಿಟ್ಟುಕೊಳ್ಳಲು ಅನುಕೂಲವಾಗುವಂತೆ ವಾಕ್ಯವನ್ನು ರಚಿಸಿಕೊಳ್ಳಬಹುದು.ಅದೂ ಪರಿಣಾಮಾಕಾರಿ ಆಗಿರುತ್ತದೆ. . ಬೇಡ ಒತ್ತಡ ಕೇಳಿದ ಓದಿದ ನೋಡಿದ ವಿಷಯಗಳು ಮನದಲ್ಲಿ ಅಚ್ಚೊತ್ತಿದಮತೆ ಉಳಿಯಬೇಕೆಂದರೆ ಮನಸ್ಸು ಪ್ರಫುಲ್ಲವಾಗಿರಬೇಕು. ಒತ್ತಡದಿಂದ ಕೂಡಿದ್ದರೆ ಸಣ್ಣ ಸಂಗತಿಗಳನ್ನು ನೆನಪಿಲ್ಲಿಡಲು ಸಾಧ್ಯವಾಗುವುದಿಲ್ಲ. ಪ್ರಶಾಂತ ವಾತಾವರಣದಲ್ಲಿ ನಿಮ್ಮ ಓದು ಬರಹ ಸಾಗಲಿ. ದಿನ ನಿತ್ಯ ಕಲಿತ ಹೊಸ ಸಂಗತಿಗಳನ್ನು ಪುರ್ನಮನನ ಮಾಡಿಕೊಳ್ಳಿ. ಶ್ರೀರಂಗರು ಹೇಳಿದಂತೆ ಮಾನವರಿಗೆ ವಿಚಾರಕ್ಕಿಂತ ಆಚಾರದ ಮಹತ್ವವಿದೆ. ಬುದ್ಧಿಗಿಂತ ಶ್ರದ್ಧೆಗೆ ಮಹತ್ವವಿದೆ. ಹೀಗಾಗಿ ನೆನಪಿನ ಶಕ್ತಿಗೆ ಶ್ರದ್ಧೆ ಅತಿ ಮುಖ್ಯವಾದುದು. ಏಕಾಗ್ರತೆ ವಿವೇಕಾನಂದರು ನುಡಿವಂತೆ ಇಂದ್ರೀಯಗಳು ಪ್ರತಿಕ್ಷಣದಲ್ಲೂ ನಮ್ಮನ್ನು ಮೋಸಪಡಿಸುತ್ತಿರುತ್ತವೆ.ನಮ್ಮೆಲ್ಲ ಇಂದ್ರೀಯಗಳನ್ನು ನಿಗ್ರಹಗೊಳಿಸಿ ಒಂದೇ ಕಡೆ ಚಿತ್ತದ ಗಮನ ಹರಿಸುವುದೇ ಏಕಾಗ್ರತೆ. ಇಂದ್ರೀಯಗಳು ಯಾವಾಗಲೂ ಪರತಂತ್ರವಾಗಿವೆ. ಹೊರಗಣ ತಂತ್ರಗಳನ್ನು ಅವಲಂಬಿಸಿವೆ. ಹೀಗಾಗಿ ಯಾವುದೇ ಕೆಲಸ ಕಾರ್ಯದಲ್ಲಿ ತೊಡಗಿರುವಾಗ ಅದರಾಚಿಗಿನ ವಿಷಯವನ್ನು ಎಂದಿಗೂ ಯೋಚಿಸಬಾರದು. ವರ್ತಮಾನದಲ್ಲಿ ಮಾತ್ರ ಚಿತ್ತ ಮುಳಗಿರಬೇಕು. ಅಡುಗೆಗೆ ಉಪ್ಪು ಹೇಗೋ ಹಾಗೆ ಜ್ಞಾಪಕ ಶಕ್ತಿಯ ವೃದ್ಧಿಗೆ ಏಕಾಗ್ರತೆ. ಏಕಾಗ್ರತೆ ಇಲ್ಲದೇ ಸಣ್ಣ ಸಂಗತಿಯನ್ನು ಮೆದುಳಿನಲ್ಲಿ ದಾಖಲಿಸಲಾಗುವುದಿಲ್ಲ.  ಮನೆ ಮದ್ದು ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವ ಮನೆ ಮದ್ದುಗಳನ್ನು ಬಳಸಿ. ಸರಿಯಾದ ಸಮಯಕ್ಕೆ  ಸಮತೋಲಿತ ಆಹಾರ, ನೀರಿನ ಸೇವನೆ ವ್ಯಾಯಾಮ ನಿದ್ದೆ ಮೆದುಳಿಗೆ ಕಸರತ್ತು ನೀಡುವ ಮೆಮರಿ ಗೇಮ್ಸ್ಗಳನ್ನು ಆಡಿ ಅವು ಮೆದುಳನ್ನು ಬಲಪಡಿಸುತ್ತವೆ ಅದರೊಂದಿಗೆ ಈ ಎಲ್ಲವೂ ಜ್ಞಾಪಕ ಶಕ್ತಿಗೆ ಪರೋಕ್ಷವಾಗಿ ಪುಷ್ಟಿ ನೀಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ವಿಜ್ಞಾನಿಗಳು ಮತ್ತು ಮಾನಸಿಕ ತಜ್ಞರು ಜ್ಞಾಪಕ ಶಕ್ತಿ ಹೆಚ್ಚಿಸಲು ಅನೇಕ ವಿಧಾನಗಳನ್ನು ಕಂಡು ಹಿಡಿದಿದ್ದಾರೆ. ಅವುಗಳನ್ನು ತಿಳಿದು ಅಳವಡಿಸಿಕೊಳ್ಳಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಮರೆವಿಗೆ ಮದ್ದು ನೀಡುವ ಪುಸ್ತಕಗಳನ್ನು ಓದಿ. ಜ್ಞಾಪಕ ಸಕ್ತಿ ಹೆಚ್ಚಿಸಿಕೊಂಡು ಗೆಲುವಿನ ನಗೆ ಬೀರಿ. ********** ಲೇಖಕಿ ಜಯಶ್ರೀ ಜೆ ಅಬ್ಬಿಗೇರಿ ಸರಕಾರಿ ಪದವಿ ಪೂರ‍್ವ ಕಾಲೇಜಿನಲ್ಲಿ ಆಂಗ್ಲ ಭಾಷಾ ಉಪನ್ಯಾಸಕಿ . ಇವರ ಹನ್ನೆರಡು ಪುಸ್ತಕಗಳು ಪ್ರಕಟಗೊಂಡಿವೆ. ಓದು ಮತ್ತು ಬರಹ ಹಾಡುಗಾರಿಕೆ ಮಾತುಗಾರಿಕೆ ಇವರ ಹವ್ಯಾಸಗಳು

Read Post »

ಅಂಕಣ ಸಂಗಾತಿ, ಮುಖಾಮುಖಿ

ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿಗಿಂತ ದೊಡ್ಡ ಧರ್ಮವಿಲ್ಲ’ ಫಾಲ್ಗುಣ ಗೌಡ ತಣ್ಣಗಿನ ವ್ಯಕ್ತಿತ್ವದ ಸರಳ ಮನುಷ್ಯ ನಮ್ಮ ಫಾಲ್ಗುಣ ಗೌಡ. ಹುಟ್ಟಿದ್ದು ಅಂಕೋಲಾ ತಾಲೂಕಿನ ಅಚವೆ. ಕಾಲೇಜು ಹಂತದಲ್ಲಿ ಬರವಣಿಗೆ ಪ್ರಾರಂಭಿಸಿದರು. ಜಿ.ಸಿ .ಕಾಲೇಜಿನ ಭಿತ್ತಿ ಪತ್ರ ವಿಭಾಗದಿಂದ ಕವಿತೆ ಬರೆಯಲು ಪ್ರಾರಂಭ.  ಬೆಂಗಳೂರಿನ ಕ್ರೈಸ್ಟ್ ಕಾಲೇಜು ಏರ್ಪಡಿಸಿದ ಬೇಂದ್ರೆ ಸ್ಮ್ರತಿ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಎರಡು ಸಲ ಬಹುಮಾನ ಪಡೆದರು ಪಾಲ್ಗುಣ.  ಬೆಂಗಳೂರಿನ ಸಾಂಸ್ಕೃತಿಕ ಪತ್ರಿಕೆ  `ಸಂಚಯ’ ನಡೆಸುವ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಸತತ ಐದು ಬಾರಿ ಬಹುಮಾನ ಪಡೆದಿದ್ದಾರೆ. ಕಾರವಾರ, ಧಾರವಾಡ, ಭದ್ರಾವತಿ  ಆಕಾಶವಾಣಿ ಕೇಂದ್ರಗಳಲ್ಲಿ ಕತೆ, ಕವಿತೆ ಪ್ರಸಾರವಾಗಿವೆ. ಗೋವಾದಲ್ಲಿ ನಡೆದ ಅಂತರರಾಜ್ಯ ಕವಿಗೋಷ್ಟಿ ಸೇರಿದಂತೆ ತಾಲ್ಲೂಕು, ಜಿಲ್ಲಾ ಮಟ್ಟದ ಕವಿಗೋಷ್ಟಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇವರ ಮೊದಲ ಕವನ ಸಂಕಲನ `ಮಾಮೂಲಿ ಮಳೆಯಲ್ಲ’ ಪ್ರಕಟಿಸಿದೆ. ` ಅಶಾಂತ ಕಡಲು ಪ್ರಶಾಂತ ಮುಗಿಲು’ ಎಂಬ ಪ್ರಬಂಧ ಸಂಕಲನ ಪ್ರಕಟವಾಗಿದೆ. ಚೌಕಿಮನೆ(ಕವನ ಸಂಕಲನ), ಬಕ್ಕೆಮರ (ಕಥಾ ಸಂಕಲನ) ಸಿದ್ದತೆಯಲ್ಲಿದ್ದಾರೆ.  ದಾಂಡೇಲಿಯ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ `ಯುವ ಕವಿ ಪ್ರಶಸ್ತಿ’ ನೀಡಿ ಗೌರವಿಸಿದೆ.ಕಾರವಾರದ ಆಕಾಶವಾಣಿಯಲ್ಲಿ ಉದ್ಘೋಷಕರಾಗಿ ಕೆಲಸ ಮಾಡುತ್ತ ನಗರದ ದಿವೇಕರ ವಾಣಿಜ್ಯ ವಿದ್ಯಾಲಯದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಸದ್ಯ ಅಂಕೋಲೆಯ ಪಿ.ಎಂ.ಸಂಯುಕ್ತ ಪ.ಪೂ.ಕಾಲೇಜಿನಲ್ಲಿ  ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. …………………………………  ಕತೆ, ಕವಿತೆ ಯಾಕೆ ಬರೆಯುತ್ತೀರಿ? ಎಲ್ಲೋ ಕಂಡ ಸನ್ನಿವೇಶಗಳು, ಸಂದರ್ಭಗಳು ನನ್ನ ಮನಸ್ಸನ್ನು ತಟ್ಟಿದರೆ ತಕ್ಷಣ ಬರೆಯಲು ತೊಡಗುತ್ತೇನೆ. ಕೆಲವು ಪಾತ್ರಗಳು ನನ್ನನ್ನು ಕಾಡಿದರೆ ಅದೇ ವಸ್ತುವಾಗಿ ಒಂದು ಕಥೆಯಾಗಬಹುದು. ಯಾವುದೋ ಒಂದು ಸನ್ನಿವೇಶ ನನ್ನದೆಯ ಭಾವನೆಗಳನ್ನು ಉಕ್ಕಿಸಿದರೆ ಅದು ಕವಿತೆಯಾಗುತ್ತದೆ. ಯಾವುದಕ್ಕೂ ಸ್ಫೂರ್ತಿ ಬೇಕೇ ಬೇಕು. ಸ್ಫೂರ್ತಿ ಸಿಕ್ಕರೆ ಅದನ್ನು ಕಥೆ, ಕವಿತೆಯಾಗಿಸುವುದಕ್ಕೆ ಪ್ರತಿಭೆ ಕೂಡಾ ಬೇಕಾಗುತ್ತದೆ. ಬರೆಯುವುದಕ್ಕೆ ಶುರು ಮಾಡಿದರೆ ಮಾತ್ರ ಮನಸ್ಸಿನ ಕದ ತೆರೆದು ಭಾವನೆಗಳನ್ನು ಉದ್ದೀಪನಗೊಳಿಸುತ್ತದೆ. ತನಗೆ ತಾನೇ ಹೇಗೆ ಬರೆಯಬೇಕೆಂದು ನಿರ್ದೇಶಿಸುತ್ತದೆ. ನನ್ನ ಪ್ರೀತಿಯ ಚಿತ್ತಾಲರು ಹೇಳಿದ ಹಾಗೆ ‘ನಾನು ತಿಳಿದದ್ದನ್ನು ಬರೆಯುವುದಲ್ಲ, ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುತ್ತೇನೆ’. ಈ ಹೇಳಿಕೆ ನನಗೆ ತುಂಬಾ ಇಷ್ಟ. ಆಗಲೇ ಹೇಳಿದಂತೆ ನನಗೆ ಕಾಡಿದ ಪಾತ್ರಗಳು, ಸನ್ನಿವೇಶಗಳು ಕಾಡಿದ್ದರಿಂದಲೇ ನಾನು ಬರೆಯುವುದಕ್ಕೆ ತೊಡಗುತ್ತೇನೆ. ಕತೆ, ಕವಿತೆ ಹುಟ್ಟುವ ಕ್ಷಣ ಯಾವುದು?  ಅಕಾರಣ ಭಾವವೊಂದು ಸ್ಪೂರ್ತಿಯ ಬಿಂದುವಿನಲ್ಲಿ ಲೀನವಾದಾಗ ಮೂರ್ತರೂಪ ಪಡೆದು ಕೆಲವೇ ಸಾಲುಗಳಲ್ಲಿ ಬರೆದರೆ ಅದು ಕವಿತೆ. ಅದು ವಿಸ್ತಾರ ಪಡೆದರೆ ಕಥೆಯಾಗುತ್ತದೆ. ಆ ಕ್ಷಣ ಲೌಕಿಕವಾದ್ದು. ಅದು ಅಕಾರಣ ಪ್ರೀತಿಯಂತೆ. ನಾವು ಅನುಭವಿಸಿದ ನೋವುಗಳು ಕೂಡ ಕಥೆ, ಕವಿತೆಯ ರೂಪ ಪಡೆಯುತ್ತದೆ. ಕವಿಯಾದವ ಆ ಕ್ಷಣಕ್ಕಾಗಿ ಕಾಯಬೇಕಾಗುತ್ತದೆ. ಕವಿತೆಯ ಭಾವವೋ ಕಥೆಯ ಪಾತ್ರವೋ, ವಸ್ತುವೋ ಮನಸ್ಸಿನ ತುಂಬ ತುಂಬಿ ಅದು ಬರವಣಿಗೆ ರೂಪ ಪಡೆದಾಗಲೇ ಮನಸ್ಸು ನಿರಾಳತೆ ಅನುಭವಿಸುವುದು. ಹೆಣ್ಣು ಅನುಭವಿಸುವ ಹೆರಿಗೆ ನೋವನ್ನು ಒಬ್ಬ ಕವಿ, ಕಥೆಗಾರನೂ ಅನುಭವಿಸುತ್ತಾನೆ.  ನಿಮ್ಮ ಕಥೆಗಳ ವಸ್ತು ವ್ಯಾಪ್ತಿ ಹೆಚ್ಚಾಗಿ ಯಾವುದು? ಪದೇ ಪದೇ ಕಾಡುವ ವಿಷಯ ಯಾವುದು? ಸಾಮಾನ್ಯವಾಗಿ ದುರ್ಬಲ ವರ್ಗದವರ ಮೇಲೆ ಮಾಡುವ ಉಳ್ಳವರ ಶೋಷಣೆ ಪ್ರೀತಿಯ ಅಗಾಧತೆ ಸಮಾಜವನ್ನು ನಡೆಯುವ ಘಟನೆಗಳು ಉದ್ಯೋಗಸ್ತರ ಮಾನಸಿಕ ತಾಕಲಾಟಗಳು, ದ್ವೇಷ ತುಂಬಿದ ವ್ಯಕ್ತಿತ್ವಗಳ ಮನೋಧರ್ಮಗಳು ಕಥೆಯಾಗುವಲ್ಲಿ ಕಾರಣವಾಗಿವೆ. ನನಗೆ ತುಂಬಾ ಕಾಡುವ ವಿಷಯವೆಂದರೆ ಪ್ರಾಮಾಣಿಕತೆ, ನಿಷ್ಠೆಗೆ ಈಗ ಕವಡೆ ಕಾಸಿನ ಕಿಮ್ಮತ್ತಿಲ್ಲದಿರುವುದು. ಅಸೂಯೆ ತುಂಬಿದ ಸಣ್ಣತನದ ವ್ಯಕ್ತಿತ್ವಗಳು, ಹೆದ್ದಾರಿಯಲ್ಲಿ ಹೂಮಾರಿ ಶಾಲೆಗೆ ಹೋಗುವ ಹುಡುಗಿಯರು, ಹತ್ತಾರು ಕೀಲೋಮೀಟರ್ ಬೆಟ್ಟ ಸುತ್ತಿ ಸೌದೆ ತಂದು, ಮತ್ತೆ ಅಷ್ಟೇ ಕೀಲೋ ಮೀಟರ್ ಸೌದೆ ಹೊತ್ತು ಅದನ್ನು ಕಡಿಮೆ ದುಡ್ಡಿಗೆ ಮಾರಿ ಮನೆಗೆ ಬೇಕಾದ ಸಾಮಾನುಗಳನ್ನು ತೆಗೆದುಕೊಂಡು ಮನೆ ಮುನ್ನಡೆಸುವ ‘ಲಂಕೇಶರ ಅವ್ವ’ನಂತ ನನ್ನ ಜನಾಂಗದ ಮಹಿಳೆಯರು. ಮನುಷ್ಯನಲ್ಲಿ ಮಾನವೀಯತೆ ಕಳಕೊಂಡಾಗ ಪ್ರಾಣಿಗಳಲ್ಲಿ ಅದು ವ್ಯಕ್ತವಾಗುತ್ತದಲ್ಲ ಅದು ನನ್ನನ್ನು ತುಂಬಾ ಕಾಡುತ್ತದೆ. ವಿಕಲಚೇತನ ವ್ಯಕ್ತಿ ಇರುವ ಒಂದೇ ಅದೂ ಸೊಟ್ಟಗಾಗಿರುವ ಕಾಲಿನಲ್ಲಿ ಚಿತ್ರ ಬಿಡಿಸಿ, ಬಣ್ಣ ತುಂಬಿ ಅದನ್ನು ದಾರಿಹೋಕರಿಗೆ ಮಾರಿ ಮನೆಯಲ್ಲಿರುವ ತಾಯಿ ತಂಗಿಯನ್ನು ಸಾಕುವ ಬೆಂಗಳೂರಿನ ಒಬ್ಬ ವ್ಯಕ್ತಿಯೊಬ್ಬ ನನ್ನನ್ನು ತುಂಬಾ ಕಾಡುತ್ತಾನೆ.  ಕಥೆ, ಕವಿತೆಗಳಲ್ಲಿ ಬಾಲ್ಯ ಇಣುಕಿದೆಯೇ? ಹೌದು. ಬಾಲ್ಯವಿಲ್ಲದೆ ಯಾವುದು ಇಲ್ಲ. ನಾನು ಬರೆಯುವ ಕಥೆ ಮತ್ತು ಕವಿತೆಗಳಲ್ಲಿ ಬಾಲ್ಯದ ಅನುಭವಗಳೇ ಜಾಸ್ತಿಯಾಗಿವೆ. ಬಾಲ್ಯ ಅನುಭವಿಸದೆ ಹರೆಯಕ್ಕೆ ಅರ್ಥವಿಲ್ಲ. ಈಗ ಮಕ್ಕಳ ಬಾಲ್ಯವೆಲ್ಲಾ ಹೋಮ್ ವರ್ಕ, ರಿಯಾಲಿಟಿ ಶೋಗಳ ತಯಾರಿ, ಮೊಬೈಲಿನ ವಿಡಿಯೋ ಗೇಮ್‌ಗಳಲ್ಲಿ. ಮಕ್ಕಳ ಪ್ರತಿಭಾ ಪ್ರದರ್ಶನದ ಹೆಸರಿನಲ್ಲಿ, ಪ್ರಖ್ಯಾತಿಯ ಹುಚ್ಚಿನ ಪಾಲಕರು ಮಕ್ಕಳಿಗೆ ಉಂಟು ಮಾಡುವ ಒತ್ತಡ ಕಂಡಾಗ ಅಚ್ಚರಿಯೆನಿಸುತ್ತದೆ. ಬಾಲ್ಯದ ಮುಗ್ಧತೆ ಅನುಭವಿಸುವುದನ್ನು ಪಾಲಕರು ನೋಡಬೇಕು. ಆ ನಂತರ ಪ್ರತಿಭಾ ಪ್ರದರ್ಶನ ಮಾಡುವುದಕ್ಕೆ ಅವಕಾಶ ಮಾಡಿಕೊಡಬೇಕು.  ಪ್ರಸ್ತುತ ರಾಜಕೀಯ ಸನ್ನಿವೇಶದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು? ‘ಸೇವೆ’ ಎನ್ನುವುದು ಅರ್ಥ ಕಳೆದು ಕೊಂಡಿದೆ ಪ್ರಸ್ತುತ ರಾಜಕೀಯ ಅವಕಾಶವಾದಿ ರಾಜಕಾರಣವಾಗಿದೆ. ಮೌಲ್ಯಾಧಾರಿತ ರಾಜಕಾರಣ ಎಂದೋ ಕಳೆದು ಹೋಗಿದೆ. ವಿರೋಧ ಪಕ್ಷ ಇದ್ದು ಇಲ್ಲದಂತಾದ ಎಂಬತ್ತರ ದಶಕದಲ್ಲಿ ಲಂಕೇಶರ ‘ಲಂಕೇಶ ಪತ್ರಿಕೆ’ ಪ್ರಬಲ ವಿರೋಧ ಪಕ್ಷದಂತೆ ಕೆಲಸ ಮಾಡುತ್ತಿತ್ತು. ಅದು ದೇಶಕ್ಕೇ ಮಾದರಿ. ಯಾವ ಜಾಹಿರಾತಿಲ್ಲದೇ ಪತ್ರಿಕೆ ನಡೆಸಿ ರಾಜಕೀಯ ಪಕ್ಷಗಳನ್ನು, ಸರ್ಕಾರವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋದದ್ದು ಎಲ್ಲಾ ತರದ ಪತ್ರಿಕೆಗಳಿಗೆ ಮಾದರಿ. ಪತ್ರಿಕೆಗಳೂ ಕೂಡಾ ಪಕ್ಷಗಳ ಮುಖವಾಣಿಯಾಗಬಾರದು. ನಮ್ಮ ದಿನಕರ ದೇಸಾಯಿಯಂತವರು ಸೇವೆಗಾಗಿ ರಾಜಕೀಯ ಪ್ರವೇಶ ಮಾಡಿದರು. ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಇಡೀ ಜಿಲ್ಲೆಯನ್ನು ಆವರಿಸಿದೆ. ಶಿಕ್ಷಣ, ರೈತ ಹೋರಾಟ, ದುರ್ಬಲ ವರ್ಗದವರ ಅಭ್ಯುದಯ ಅವರ ನಿಸ್ವಾರ್ಥ ಸೇವೆಯನ್ನು ಹೇಳುತ್ತದೆ. ಆಗಿನ ಅವರ ರೈತ ಹೋರಾಟ ಕರ್ನಾಟಕದ ಮೊದಲ ರೈತ ಹೋರಾಟ ಎಂದು ಲಂಕೇಶ ಕರೆದಿದ್ದರು. ಕಾಗೋಡ ಹೋರಾಟದ ಭರಾಟೆಯಲ್ಲಿ ದೇಸಾಯಿಯವರ ರೈತ ಹೋರಾಟಕ್ಕೆ ಅಷ್ಟು ಪ್ರಭಾವ ಸಿಗಲಿಲ್ಲವೆನ್ನಬೇಕು. ಈಗಲೂ ಕೂಡ ಉತ್ತಮ ರಾಜಕಾರಣಿಗಳು ಖಂಡಿತಾ ಇದ್ದಾರೆ. ಅಂತವರಿಂದಲೇ ನಾಡಿನ ಅಭಿವೃದ್ಧಿಯನ್ನು ನೀರಿಕ್ಷಿಸಬಹುದು. ಹಣ, ಅಧಿಕಾರದ ದುರಾಸೆ ಇಲ್ಲದ ಯುವಕರು ಕಾರಣಕ್ಕೆ ಬರಬೇಕು. ಮತ ಕೂಡ ಮಾರಾಟದ ಸರಕಾಗಿರುವುದು ಪ್ರಜಾಪ್ರಭುತ್ವದ ದೌರ್ಭಾಗ್ಯ. ರಾಮಕೃಷ್ಣ ಹೆಗಡೆ, ದಿನಕರ ದೇಸಾಯಿ, ಹೆಚ್ಚೇನು ಕೈಗಾ ಅಣುಸ್ಥಾವರ ಸ್ಥಳಾಂತರ ಮಾಡಲು ಚುನಾವಣೆಗೆ ನಿಂತ ಕಾರಂತರನ್ನು ಸೋಲಿಸಿದ ಜಿಲ್ಲೆ ನಮ್ಮದು.  ಧರ್ಮ ದೇವರು ವಿಷಯದಲ್ಲಿ ನಿಮ್ಮ ನಿಲುವೇನು?  ಧರ್ಮದ ಬಗ್ಗೆ ಮಾತಾಡುವುದೇ ಕಷ್ಟ. ಅದೊಂದು ಧರ್ಮ ಸೂಕ್ಷ್ಮ. ದಯವೇ ಧರ್ಮದ ಮೂಲವೆಂದರು ಬಸವಣ್ಣನವರು. ಮನುಷ್ಯ ಮಾನವೀಯವಾಗುವುದೇ ಧರ್ಮವೆನ್ನುವುದು ನನ್ನ ಭಾವನೆ. ನಮ್ಮ ಆಚಾರ ವಿಚಾರಗಳು ಸಕಲ ಜೀವಿಗಳ ಬಗ್ಗೆ ಪ್ರೀತಿ ತೋರುವುದೇ ನಿಜವಾದ ಧರ್ಮ ಮತ್ತೆ ‘ನಮ್ಮನ್ನು ಹೆತ್ತಿರುವ ತಾಯಿ, ನಮ್ಮನ್ನು ಹೊತ್ತಿರುವ ಭೂಮಿತಾಯಿಗಿಂತ ದೊಡ್ಡ ಧರ್ಮವಿಲ್ಲ’ವೆಂದು ನನಗನಿಸುತ್ತದೆ. ಈ ಸೃಷ್ಠಿಯ ಹಿಂದೆ ಒಂದು ಕಾಣದ ಕೈ ಕೆಲಸ ಮಾಡುತ್ತಿದೆ. ಅದೇ ದೇವರು. ಅದಕ್ಕೆ ಮನುಷ್ಯ ಹಲವು ಹೆಸರುಗಳನ್ನಿಟ್ಟು ಪೂಜಿಸುತ್ತಿರುವದು. ಅದು ಅವರವರ ನಂಬಿಕೆಗೆ ಬಿದ್ದದ್ದು. ಯಾಕೆಂದರೆ ನಮ್ಮ ಬದುಕು ನಿಂತಿರುವುದೇ ಪ್ರೀತಿ, ವಿಶ್ವಾಸ, ನಂಬಿಕೆಗಳ ಆಧಾರದ ಮೇಲೆ. ಅಲ್ಲವೇ? ಅದರ ಸಾಕ್ಷಾತ್ಕಾರ ಆದವರಿಗೆ ಅದರ ಬಗ್ಗೆ ನಂಬಿಕೆ ಇರುತ್ತದೆ. ರಾಜಕುಮಾರ ಹೇಳ್ತಾರೆ. “ಮಕ್ಕಳೇ ದೇವರು, ದೇವರು ಒಂದು ಮಗು” ಅಂತ. ಪ್ರಸ್ತುತ ಸಾಂಸ್ಕೃತಿಕ ವಾತಾವರಣದ ಬಗ್ಗೆ ನಿಮಗೆ ಏನನಿಸುತ್ತದೆ?  ಸಾಹಿತ್ಯಿಕ, ಸಾಂಸ್ಕೃತಿಕ ವಾತಾವರಣ ಸದಾ ನಡೆಯುತ್ತಿದ್ದರೆ ಭಾಷೆ ಮತ್ತು ಸಂಸ್ಕೃತಿಯ ಕುರಿತು ಜನಗಳಿಗೆ ಜಾಗೃತಿ ಮೂಡಿಸಿದಂತಾಗುತ್ತದೆ. ಜಾಗತೀಕರಣದ ಮಾರಿ ನಮ್ಮ ಭಾಷೆ, ಸಂಸ್ಕೃತಿಯನ್ನು ಹೊಸಕಿ ಹಾಕುತ್ತಿದೆ. ಜಾಗತೀಕರಣ ಎಂಬ ವಿಷಕನ್ಯೆ ಮನೆ ಬಾಗಿಲಿಗೆ ಬಂದು ನಿಂತಿದೆ. ಅದರ ಕಬಂಧ ಬಾಹುಗಳ ಆಲಿಂಗನದಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ. ಆದರೆ ಅದಕ್ಕೆ ಸಮನಾಗಿ ನಮ್ಮ ಭಾಷೆಯನ್ನು ಉಳಿಸುವ, ಸಂಸ್ಕೃತಿಯನ್ನು ಪೋಷಿಸುವ ಕೆಲಸ ನಿರಂತರ ನಡೆಯಬೇಕು. ನಮ್ಮ ಜನಪದರ ಹಾಡುಗಳು, ಗುಮಟೆ ಪಾಂಗ್, ಸುಗ್ಗಿ ಕುಣಿತ, ತರ‍್ಲೆ, ಪುಗಡಿ ಜೊತೆಗೆ ಬಹುತೇಕ ಜನಾಂಗಗಳಲ್ಲಿ ಉಳಿದಿರುವ ಜನಪದ ಪ್ರಕಾರಗಳನ್ನು ಗುರುತಿಸಿ ಕಲಾವಿದರಿಗೆ ವೇದಿಕೆ, ಗೌರವಧನ ನೀಡಿ ಪ್ರೋತ್ಸಾಹಿಸಬೇಕು. ಅವರಿಗೆ ಸರ್ಕಾರ ಪಿಂಚಣಿ ನೀಡುವ ವ್ಯವಸ್ಥೆ ಮಾಡಬೇಕು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆಯ ಕರಾವಳಿ ಉತ್ಸವ, ಹಂಪಿ ಉತ್ಸವ, ನಮ್ಮ ಜಿಲ್ಲೆಯಲ್ಲಿ ನಡೆಯುವ ಉತ್ಸವಗಳ ಕಾರ್ಯ ಖಂಡಿತಾ ಶ್ಲಾಘನೀಯ. ಜಿಲ್ಲೆಯ ಕಲಾವಿದರಿಗೆ ಪ್ರಥಮ ಪ್ರಾಶಸ್ತ್ಯ ನೀಡಬೇಕು. ಯಾಕೆಂದರೆ ನಿಜವಾಗಿಯೂ ಭಾಷೆ ಸಂಸ್ಕೃತಿ ಉಳಿದಿರುವುದು ಹಳ್ಳಿಗಳಲ್ಲಿ. ಬೆಂಗಳೂರು ತುಮಕೂರಿನವರೆಗೆ ವಿಸ್ತಾರ ಪಡೆದರೆ ಅದು ಅಭಿವೃದ್ಧಿಯಲ್ಲ ; ನಾಡಿನ ಬೆಳವಣಿಗೆಯ ಮೂಲ ಹಳ್ಳಿಗಳಲ್ಲಿದೆ ಎಂದು ಮಹಾತ್ಮ ಗಾಂದೀಜಿ ಹೇಳ್ತಾರೆ. ಹಳ್ಳಿಯ ಕಲಾವಿದರನ್ನು ಗೌರವಿಸುವ ಕೆಲಸ ಮಾಡಿದರೆ ಹಾಗೆಯೇ ಅವರ ನಂತರದ ಪೀಳಿಗೆಯನ್ನು ಪ್ರೋತ್ಸಾಹಿಸಿದರೆ ಸಂಸ್ಕೃತಿ ಉಳಿಯುತ್ತದೆ. ಈಗ ಬೆಳಂಬಾರದ ಸುಗ್ಗಿ ಜನಪದ ಪ್ರಕಾರಕ್ಕೆ ಯಾವ ಜಾಗತೀಕರಣದ ಬಿಸಿ ಇನ್ನೂ ತಟ್ಟಿಸಿಕೊಂಡಿಲ್ಲ. ಒಂದೊಂದು ತುರಾಯಿ ಮಾಡಿಸಲು ಸಾವಿರಗಟ್ಟಲೆ ಖರ್ಚು ಮಾಡುವ ಆ ಹಾಲಕ್ಕಿಗಳಿಗೆ ಸರ್ಕಾರ ಇಲಾಖೆಗಳು ಪ್ರೋತ್ಸಾಹಿಸಬೇಕು. ನಮ್ಮ ಅಂಕೋಲಾ, ಕಾರವಾರ ಮತ್ತು ಜಿಲ್ಲೆಯ ಜನಸ್ಪಂದಿ ಪತ್ರಕರ್ತರು ಇಲಾಖೆಗಳ ಗಮನ ಸೆಳೆಯಬೇಕು. ಸಾಹಿತ್ಯ ವಲಯದ ರಾಜಕಾರಣದ ಬಗ್ಗೆ ನೀವು ಹೇಗೆ ಪ್ರತಿಕ್ರಿಯಿಸುವಿರಿ?  ಸಾಹಿತ್ಯದ ರಾಜಕಾರಣದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷ ಪಂಗಡಗಳನ್ನು ಬಿಟ್ಟು ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಗಬೇಕು. ನಿಜವಾದ ಸಾಹಿತ್ಯಕ್ಕೆ ಕೃತಿಗೆ ಮನ್ನಣೆ ಸಿಗಬೇಕು. ಸುಮ್ಮನೆ ಕೂತು ಬರೆಯುವುದು, ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬೀಳದೆ ಬರೆಯುವುದು. ಬರೆಯುವುದರ ಮೂಲಕ ತಿಳಿದುಕೊಳ್ಳಲು ಬಯಸುವುದು, ಆರೋಗ್ಯಕರ ಸಮಾಜವನ್ನು ಕಾಪಾಡಿಕೊಂಡು ಹೋಗುವಂತಹ ಬರಹಗಳನ್ನು ಬರೆಯುವುದು ಒಬ್ಬ ಬರಹಗಾರನ ಜವಾಬ್ದಾರಿಯಾಗಬೇಕು. ‘ನಾನು ತಿಳಿದಿದ್ದನ್ನು ಬರೆಯಲು ಪ್ರಯತ್ನಿಸುವುದಿಲ್ಲ. ಬರೆಯುವುದರ ಮೂಲಕ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ನನ್ನ ಪ್ರೀತಿಯ ಚಿತ್ತಾಲರು ಹೇಳುತ್ತಾರೆ. ದೇಶದ ಚಲನೆಯ ಬಗ್ಗೆ ನಿಮ್ಮ ಮನಸ್ಸು ಏನು ಹೇಳುತ್ತಿದೆ? ಈ ಬಗ್ಗೆ ನಾನು ಏನನ್ನೂ ಪ್ರತಿಕ್ರಿಯಿಸುವುದಿಲ್ಲ.  ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು? ಸದ್ಯ ಕಾವ್ಯ ಬರೆಯುತ್ತಿರುವೆ. ಕಥೆ ಬರೆಯುವುದು ನನ್ನದೇ ಒತ್ತಡಗಳ ಮಧ್ಯೆ ನಿಂತು ಹೋಗಿದೆ. ಮತ್ತೆ ಬಿಡುವು ಮಾಡಿಕೊಂಡು ಸುಮ್ಮನೆ ಬರೆಯಬೇಕು. ಇನ್ನು ತುಂಬಾ ಓದಬೇಕು. ಕವಿತೆ, ಕಥಾ ಸಂಕಲನ ಪ್ರಕಟಿಸಬೇಕು. ಒಂದು ಕಾದಂಬರಿ ಬರೆಯುವ ಇರಾದೆ ಇದೆ. ಜಯಂತ ಸರ್ ಕಾದಂಬರಿ ಬರೆ ಎಂದು ಹೇಳುತ್ತಿರುತ್ತಾರೆ. ಅವರ ಕಾದಂಬರಿ ನೀರಿಕ್ಷೆಯಲ್ಲಿ ನಾವಿದ್ದೇವೆ. ಇನ್ನು ನನ್ನ ನೆಚ್ಚಿನ ಮತ್ತು ಕಾಡಿದ ಸಾಹಿತಿಗಳು ಹಲವಾರು ಜನ ಇದ್ದಾರೆ. ಒಬ್ಬೊಬ್ಬರು ಒಂದೊಂದು ಕಾರಣಕ್ಕೆ ಇಷ್ಟವಾಗುತ್ತಾರೆ. ಜಯಂತ್ ಸರ್ ಹೇಳಿದಂತೆ ಅವರನ್ನು ಇಷ್ಟ ದೇವತೆಗಳು ಎನ್ನುತ್ತೇವೆ. ಶಿವರಾಮ ಕಾರಂತ, ತೇಜಸ್ವಿ, ಲಂಕೇಶ, ಅನಂತಮೂರ್ತಿ, ಚಿತ್ತಾಲ, ಬರಗೂರು, ಜಯಂತ ಕಾಯ್ಕಿಣಿ, ಎಸ್. ಮಂಜುನಾಥ ಮುಂತಾದವರು ನನಗೆ ಬಹಳ ಇಷ್ಟ. ಶಿವರಾಮ ಕಾರಂತರ ಬಗ್ಗೆ ಅವರ ಪರಿಸರ ಪ್ರೀತಿಯ ಕಾರಣಕ್ಕೆ ಬಹಳ ಗೌರವ. ಚಿತ್ತಾಲರ ‘ಸೆರೆ’ ಕಥೆ ನನ್ನನ್ನು ಕಥೆಗಾರನನ್ನಾಗಿ ಮಾಡಿತ್ತು. ಅವರ ಶೈಲಿಯ

Read Post »

ಅಂಕಣ ಸಂಗಾತಿ, ಅನುವಾದಿತ ಕೃತಿ ಪ್ರಪಂಚ ಪ್ರವೇಶ

ಶತಮಾನದ ಕವಿ ಯೇಟ್ಸ್

ಅಂಕಣ ಬರಹ ಶತಮಾನದ ಕವಿ ಯೇಟ್ಸ್ ಅನುವಾದ :ಡಾ. ಯು.ಆರ್.ಅನಂತಮೂರ್ತಿಪ್ರ : ಅಭಿನವ ಪ್ರಕಾಶನಪ್ರಕಟಣೆಯ ವರ್ಷ : ೨೦೦೮ಬೆಲೆ : ರೂ.೭೫಻ಪುಟಗಳು : ೧೨೮ ಜಗತ್ಪ್ರಸಿದ್ಧ ಇಂಗ್ಲಿಷ್ ಕವಿ ಡಬ್ಲಿಯೂ.ಬಿ.ಯೇಟ್ಸ್ನ ಮಹ ತ್ವದ ೧೭ ಕವನಗಳ ಅನುವಾದ ಈ ಸಂಕಲನದಲ್ಲಿದೆ.  ಜೊತೆಗೆ ಕವಿ-ಕಾವ್ಯ ಪರಿಚಯ,ಪ್ರವೇಶಿಕೆ ಮತ್ತು ವಿಶ್ಲೇಷ ಣೆಗಳೂ ಇವೆ. ಕಾವ್ಯ ರಚನೆಯ ಹಿಂದಿನ ಶ್ರಮ ಮತ್ತು  ಗಂಡು-ಹೆಣ್ಣು ಪರಸ್ಪರ ತಮ್ಮೊಳಗೆ ಹುಟ್ಟಿಕೊಳ್ಳುವ ಪ್ರೀತಿ ಯನ್ನು ತೆರೆದು ಹೇಳಿಕೊಳ್ಳಲು ಪಡುವ ಒದ್ದಾಟಗಳ ಕುರಿ ತು ‘ಆದಮ್ಮಿನ ಶಾಪ’ ಹೇಳಿದರೆ,ಮುಂದಿನ ಕವನ. ‘ಓ  ಬಹುಕಾಲ ಪ್ರೀತಿಸಬೇಡ’ ಪ್ರೀತಿಯ ಬಗೆಗೇ ಇದೆ.  ‘ಈಸ್ಟರ್ ೧೯೧೬’ ಐರ್ಲ್ಯಾಂಡಿನ ಸ್ವಾತಂತ್ರ್ಯ ಹೋರಾಟದ ಲ್ಲಿ  ಅಸುನೀಗಿದ ಹುತಾತ್ಮರ ಕುರಿತು ಸಾಂದರ್ಭಿಕವಾಗಿ ಬರೆದ ಕವನವಾದರೂ ಯೇಟ್ಸನ ರಾಜಕೀಯ ಚಿಂತನೆ, ಕಲಾತ್ಮಕ ದೃಷ್ಟಿಕೋನ,ಮತ್ತು ವೈಯಕ್ತಿಕ ಭಾವನಾತ್ಮಕ ಬೆಸುಗೆಗಳ ಸುಂದರ ಬೆಸುಗೆ ಇಲ್ಲಿದೆ. ಬದುಕಿನ ಅಗ್ನಿ ದಿವ್ಯ ದಲ್ಲಿ ಸುಟ್ಟು ಪುಟಗೊಳ್ಳುವ ಕವಿಯ ಆಸೆಯನ್ನು ‘ಬೈಝಾಂಟಿಯಮ್ಮಿಗೆ ಯಾನ’ ವ್ಯಕ್ತ ಪಡಿಸು ತ್ತದೆ.ಕವಿಯ ದೃಷ್ಟಿಯಲ್ಲಿ ದೇಹವೆಂದರೆ ಮದದಿಂದ ಕೊ ಬ್ಬುವ,ಆದರೆ ಮುದಿತನದಲ್ಲಿ ಬೆದರುಗೊಂಬೆಯಂತೆ ಸು ಕ್ಕಿ ಸೊರಗುವ ಪಶು.ಇಲ್ಲಿ ಕವಿ ಜೈವಿಕವಾದ ಹಾಡುವ ಶಕ್ತಿ ಎಂದೆಂದಿಗೂ ಸೊರಗದೆ ಉಳಿಯುವ ಬಂಗಾರದ ಪಕ್ಷಿ ಯಾಗಲು ಪ್ರಯತ್ನಿಸುತ್ತಾನೆ.  ‘ಜೀವ-ಆತ್ಮರ ನಡುವೆ ಸಂವಾದ’ ಎಂಬ ಕವನವೂ ದೇಹ ಮತ್ತು ಆತ್ಮಗಳ ನಡುವಣ ದ್ವಂದ್ವ-ತಾಕಲಾಟಗಳ ಕುರಿತು ಚರ್ಚಿಸುತ್ತದೆ. ಇಲ್ಲಿ ದೇಹಕ್ಕೆ ಎದುರಾಗಿ ನಿಲ್ಲುವ ಆತ್ಮದ ಮಾತು ತಾತ್ವಿಕವಾದದ್ದು.ಆದರೆ ಕೊನೆಯಲ್ಲಿ ಕವಿ ಜೀವ ಪರವಾಗಿ ಮಾತನಾಡುತ್ತಾನೆ.ಎಲ್ಲ ಸಂಕೋಚಗಳನ್ನು ಗಾ ಳಿಗೆ ಚೆಲ್ಲಿ ಮುಕ್ತನಾದ ಜೀವಿಯಷ್ಟೇ ಶುಭ್ರನಾಗುತ್ತಾನೆ.  ವೃದ್ಧಾಪ್ಯದಲ್ಲಿ ವೈರಾಗ್ಯದತ್ತ ವಾಲಿದ್ದ ಯೇಟ್ಸ್ ಕೊನೆಗಾಲ ದಲ್ಲಿ  ಕಾಮವನ್ನು ಹತ್ತಿಕ್ಕಲಾಗದೆ ಬರೆದ ‘ಹುಚ್ಚು ಕವನ’ ಗಳಲ್ಲಿ ಒಂದಾದ ‘ಮರುಳಿ ಜೇನ್ ಪಾದ್ರಿಗೆ’ ಕಾಮವನ್ನು ಮುಕ್ತವಾಗಿ ಅನುಭವಿಸಿದ  ಓರ್ವ ವೇಶ್ಯೆ ಕಾಮವನ್ನು ಬಲವಂತವಾಗಿ ಹತ್ತಿಕ್ಕಿಕೊಂಡು ಬದುಕಿದ ಒಬ್ಬ ಬಿಷಪ್ಪನಿ ಗೆ ಹಾಕುವ ಸವಾಲುಗಳ ಮೂಲಕ ಕವಿ ಕಂಡುಕೊಂಡ ಸತ್ಯಗಳನ್ನು ಬಯಲು ಮಾಡುತ್ತದೆ. ಹೀಗೆ ದೇಶ-ಕಾಲಗಳ ಪರಿಮಿತಿಗಳನ್ನು ಮೀರಿ ಮಹತ್ವ ಪಡೆದ ಕವನಗಳನ್ನು ಈ ಸಂಕಲನ ಸೇರಿಸಿಕೊಂಡಿದೆ. ಇವು ಅನುವಾದ ಅನ್ನುವುದಕ್ಕಿಂತಲೂ ಯೇಟ್ಸನ ಮೂಲ ಕವನಗಳ ಸ್ಫೂರ್ತಿ ಪಡೆದು ಬರೆದ ಸ್ವತಂತ್ರ ಕವನಗಳಂತಿ ವೆ.ಹಲವು ಪದಗಳು,ಪದಪುಂಜಗಳು,ಕೆಲವೊಮ್ಮೆ ಪೂ ರ್ತಿ ಸಾಲುಗಳೇ ತಮ್ಮ ಸ್ವರೂಪದಲ್ಲಿ ಮೂಲಕ್ಕಿಂತ ಭಿನ್ನ ವಾಗಿ ನಿಲ್ಲುವುದು ಸ್ಪಷ್ಟವಾಗಿ ಕಾಣುತ್ತದೆ. ‘ಆಫ್ಟರ್ ಲಾಂ ಗ್ ಸೈಲೆನ್ಸ್’, ‘ಅ ಡಯಲಾಗ್ ಆಫ್ ದ ಸೆಲ್ಫ್ ಅಂಡ್ ಸೋಲ್’ ‘ದ ಚಾಯಿಸ್’ ಮೊದಲಾದ ಕವನಗಳಲ್ಲಿ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ************************** ಡಾ.ಪಾರ್ವತಿ ಜಿ.ಐತಾಳ್ ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಇದೀಗ ನಿವೃತ್ತಿ ಜೀವನವನ್ನು ಸಾಹಿತ್ಯದಲ್ಲಿ ಪ್ರವೃತ್ತರಾಗಿ ಕಳೆಯುತ್ತಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ತುಳು ಮತ್ತು ಮಲೆಯಾಳ ಭಾಷೆಗಳ ಮೇಲೆ ಹಿಡಿತ ಸಾಧಿಸಿರುವ ಇವರು ಈ ಎಲ್ಲ ಭಾಷೆಗಳ ನಡುವೆ ೪೦ಕ್ಕೂ ಹೆಚ್ಚು ಸಾಹಿತ್ಯಕ ಮೌಲ್ಯಗಳುಳ್ಳ ಕಾದಂಬರಿ, ಸಣ್ಣ ಕಥೆ, ನಾಟಕ, ವೈಚಾರಿಕ ಕೃತಿಗಳನ್ನು ಅನುವಾದಿಸಿದ್ದಾರೆ. ಸ್ವತಂತ್ರವಾಗಿಯೂ ಇಂಗ್ಲಿಷ್, ಕನ್ನಡ,ತುಳು ಮತ್ತು ಮಲೆಯಾಳಗಳಲ್ಲಿ ೨೭ಕೃತಿಗಳನ್ನು ಪ್ರಕಟಿಸಿದ್ದಾರೆ. ಕುವೆಂಪು ಭಾಷಾ ಭಾರತಿಯಿಂದ ಶ್ರೇಷ್ಠ ಅನುವಾದಕಿ ಎಂಬ ನೆಲೆಯಲ್ಲಿ ಗೌರವ ಪ್ರಶಸ್ತಿ ಪಡೆದಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯಶ್ರೀ ಪ್ರಶಸ್ತಿಯನ್ನೂ ಕೇರಳದಿಂದ ಕಾಳಿಯತ್ತ್ ದಾಮೋದರನ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. A Comparative Study of the Fictional Writings of Shivaram Karanth and Thakazhi Shivashankara Pillai from a Feminist Perspective ಎಂಬ ಇವರ ಪಿ.ಹೆಚ್.ಡಿ ಮಹಾಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾ ನಿಲಯವು ಡಾಕ್ಟರೇಟ್ ಪದವಿ ನೀಡಿದೆ

ಶತಮಾನದ ಕವಿ ಯೇಟ್ಸ್ Read Post »

ಅಂಕಣ ಸಂಗಾತಿ, ರಹಮತ್ ತರೀಕೆರೆ ಬರೆಯುತ್ತಾರೆ

ಮನೆಖರೀದಿ ಪತ್ರ 2009ನೇ ಇಸವಿ. ಹೆಸರಾಂತ ರಿವಾಯತ್ ಗಾಯಕರಾದ ಕದರಮಂಡಲಗಿ ಅಲ್ಲಾಬಕ್ಷರ ಭೇಟಿ ಮುಗಿಸಿಕೊಂಡು, ಬ್ಯಾಡಗಿಯಿಂದ ಹಂಪಿಗೆ ಹಿಂತಿರುಗುತ್ತಿದ್ದೆ. ದಾರಿಯಲ್ಲಿ ಬಳ್ಳಾರಿ ಜಿಲ್ಲೆ ಪ್ರವೇಶಿಸುವಾಗ ಹಾವೇರಿ ಜಿಲ್ಲೆಯ ಕೊನೆಯ ಊರು ಗುತ್ತಲ ಸಿಕ್ಕಿತು. ಅಲ್ಲೊಬ್ಬ ಗಾಯಕ ಇದ್ದಾನೆಂದು ತಿಳಿದು ಹುಡುಕಿಕೊಂಡು ಹೊರಟೆ. ಹೆಸರು ಗೌಸ್‍ಸಾಬ್ ಹಾಲಗಿ. ಗೌಸ್‍ಸಾಬರು ಮನೆಯೊಂದರ ಜಗುಲಿಕಟ್ಟೆಯ ಮೇಲೆ ಕುಳಿತು ಮನೆಖರೀದಿ ಪತ್ರ ಬರೆಯುತ್ತಿದ್ದರು. ಈ ಕೆಲಸಕ್ಕೆ ರೆವಿನ್ಯೊ ಇಲಾಖೆಯಲ್ಲಿ `ಬಿಕ್ಕಲಂ’ ಎನ್ನುವರು. ಪ್ರಾಮಿಸರಿ ನೋಟಿನ ಬರೆಹ ಮುಗಿದ ಬಳಿಕ ಅವರಿಂದ ರಿವಾಯತ್ ಹಾಡನ್ನೂ ಕಿತ್ತೂರ ಚೆನ್ನಮ್ಮನ ಲಾವಣಿಯನ್ನೂ ಆಲಿಸಿದೆ. ಅವರು ಬರೆದ ಪತ್ರದ ಕನ್ನಡ ವಿಶಿಷ್ಟವಾಗಿತ್ತು. ಅದರ ಕೊನೆಯ ಭಾಗ ಹೀಗಿತ್ತು: “ಕೆಂಪು ಹಂಚಿನಮನೆ, ನನ್ನ ಖಬ್ಜೀಲೆ ಖಾತೆ ವ ವಹಿವಾಟು ಇದ್ದು, ಈಗ ನಮ್ಮ ಗೃಹಬಳಕೆಯ ಸಾಲಕೊಡಲಿಕ್ಕೆ ಅವಶ್ಯ ರಖಮ್ ಬೇಕಾಗಿದ್ದರಿಂದ ಈ ಮೇಲ್ಕಂಡ ಕೆಂಪು ಹಂಚಿನಮನೆ ವ್ಯಾಪಾರಕ್ಕೆ ಹಚ್ಚಲು ನೀವು ಈಗಿನ ಬಜಾರ್ ಭಾವದ ಪ್ರಕಾರ, ಯೋಗ್ಯ ಬೆಲೆಯಾದ ಪೂರಾ ಮನೆಗೆ ಎಪ್ಪತ್ತಾರು ಸಾವಿರ ರೂಪಾಯಿಗಳಿಗೆ ಖಂಡಮೊತ್ತ ಖರೀದಿಗೆ ಕೇಳಿದ್ದರಿಂದ, ನಿಮ್ಮ ಬೆಲಿಯು ಯೋಗ್ಯ ಹೆಚ್ಚಿದ್ದರಿಂದ, ನಾನು ಮನಸಾರೆ ಒಪ್ಪಿಕೊಂಡು ನಿಮಗೆ ತಕ್ಕ ಖರೀದಿಗೆ ಕೊಟ್ಟು, ಈ ದಿವಸ ನಿಮ್ಮ ಕಡೆಯಿಂದ ಕೆಳಗೆ ಸಹಿ ಮಾಡಿದ ಸಾಕ್ಷೀದಾರರ ಸಮಕ್ಷಮ, ಸಂಚಗಾರವಾಗಿ 36000 ರೂಪಾಯಿಗಳನ್ನು ಚುಕ್ತ ಪಡೆದುಕೊಂಡಿರುತ್ತೇನೆ. ಬಾಕಿ ಉಳಿದ ರಕಂ ನೀವು ಕರದಾಗ ಬಂದು ಹಾವೇರಿ ಸಬರಿಜಿಸ್ಟ್ರಾರ ಸಾಹೇಬರ ಸಮಕ್ಷಮ ಚುಕ್ತ ಎಣಿಸಿಕೊಂಡು ನಿಮದೇ ಖರ್ಚಿನಿಂದ ನೋಂದ ಮಾಡಿಸಿಕೊಡುತ್ತೇನೆ. ಮನೆ ಕಬಜಾ ಇವತ್ತಿನಿಂದಲೇ ನಿಮ ಕಬಜಾ ಕೊಟ್ಟಿರುತ್ತೇನೆ. ನೀವು ನಿಮ್ಮ ಮರ್ಜಿ ಪ್ರಕಾರ ವಹಿವಾಟು ಉಪಭೋಗ ಮಾಡಿಕೊಳ್ಳತಕ್ಕದ್ದು. ಈ ವ್ಯವಹಾರದಲ್ಲಿ ನನ ಕಡಿಂದಾಗಲಿ ನನ ವಾರಸಾ ಕಡಿಂದಾಗಲಿ, ತಂಟೆ ತಕರಾರು ಬಂದು ಮನೆ ಕಬಜಾ ತಪ್ಪಿ ನಿಮಗೆ ಲುಕ್ಸಾನ್ ಸಂಭವಿಸಿದಲ್ಲಿ, ನಾನು ನನ್ನ ಜಾತಿನಿಷೆಯಿಂದ ಲುಕ್ಸಾನ್ ಭರಾಯಿಸಿ ಕೊಡುತ್ತೇನೆ ಅಂತ ಆತ್ಮಸಂತೋಷದಿಂದ ವ ಅಕ್ಕಲ ಹುಶಾರಿಯಿಂದ ಬರದುಕೊಟ್ಟ ಹಂಚಿನಮನೆ ಖರೀದಿ ಒಪ್ಪಂದ ಪತ್ರವು.’’ ಪತ್ರದ ಭಾಷೆಯಲ್ಲಿ ಮರಾಠಿ ಕನ್ನಡ ಫಾರಸಿ ಇಂಗ್ಲೀಶು ಎಲ್ಲ ಮಿಶ್ರವಾಗಿವೆ. ಈ ಸಂಕರಭಾಷೆಯ ಹಿಂದೆ ಫಾರಸಿಯನ್ನು ಆಡಳಿತ ಭಾಷೆಯಾಗಿಸಿಕೊಂಡಿದ್ದ ಮೊಗಲರು ಮತ್ತು ಬಿಜಾಪುರದ ಆದಿಲಶಾಹಿಗಳು; ಮರಾಠಿ ಮತ್ತು ಫಾರಸಿಯನ್ನು ಬಳಸುತ್ತಿದ್ದ ಪೇಶ್ವೆಗಳೇ ಮೊದಲಾಗಿ ಮರಾಠಿ ಸಂಸ್ಥಾನಿಕರು; ಇಂಗ್ಲೀಶ್ ಆಡಳಿತ ಭಾಷೆಯಾಗಿಸಿಕೊಂಡಿದ್ದ ಮುಂಬೈ ಪ್ರಾಂತ್ಯದ ಬ್ರಿಟಿಶರು; ಕನ್ನಡ ಆಡಳಿತ ಭಾಷೆಯಾಗಿಸಿಕೊಂಡಿರುವ ಸದ್ಯದ ಕರ್ನಾಟಕ ಸರ್ಕಾರ-ಈ ಎಲ್ಲರ ಆಳಿಕೆಯ ಚಾರಿತ್ರಿಕ ಹಿನ್ನೆಲೆಯಿದೆ. ಹಲವು ಆಡಳಿತ ಪದ್ಧತಿಗಳು ಕೂಡಿ ಹುಟ್ಟಿಸಿರುವ ಕನ್ನಡವಿದು. ಬೆಳಗಾವಿ ಬಳ್ಳಾರಿ ಗುಲಬರ್ಗ ಮಂಗಳೂರು ಮೈಸೂರು ಭಾಗಗಳಲ್ಲಿರುವ ಇಂತಹ ಖರೀದಿ ಪತ್ರಗಳ ಜತೆಗಿಟ್ಟು ನೋಡಿದರೆ, ಇದರ ವಿಶಿಷ್ಟತೆ ಮತ್ತಷ್ಟು ಸ್ಪಷ್ಟವಾದೀತು. ಇದನ್ನು ನೋಡುವಾಗ, ಕರ್ನಾಟಕದ ಬೇರೆಬೇರೆ ಆಡಳಿತಗಾರರು ರೂಢಿಸಿದ್ದ ಕನ್ನಡಗಳು ನೆನಪಾಗುತ್ತವೆ. ಹೈದರ್ ಟಿಪ್ಪು ಪೂರ್ಣಯ್ಯ ಮುಂತಾದವರು ಬರೆಸಿದ ಪತ್ರ ಹಾಗೂ ಹೊರಡಿಸಿದ ಫರ್ಮಾನುಗಳು ನೆನಪಾಗುತ್ತವೆ; ನಲ್ಲಪ್ಪ ಶೆಟ್ಟಿ ವಿರಚಿತ ಹೈದರಾಲಿಯ ಜೀವನಚರಿತ್ರೆ `ಹೈದರ್‍ನಾಮಾ’ದ ಕನ್ನಡವು ಇನ್ನೂ ಅನನ್ಯ. ಶ್ರೀರಂಗಪಟ್ಟಣದ ಖಾಜಿಯಾಗಿದ್ದ ಮಿಸ್‍ಕಿನ್ ನಸೀರುದ್ದೀನನ `ಜಂಗನಾಮಾ’ದ ಕನ್ನಡ ಇನ್ನೊಂದು ಬಗೆಯಾಗಿದೆ. ಶೃಂಗೇರಿ ಮಠದ ಕಡತಗಳಲ್ಲಿಯೂ 19ನೇ ಶತಮಾನದ ವ್ಯಾವಹಾರಿಕ ಕನ್ನಡವಿದೆ. ಮೈಸೂರು ರಾಜ್ಯದಲ್ಲಿ ಬ್ರಿಟಿಶರ ಕಾಲದಲ್ಲಿ ರೆವಿನ್ಯೂ ಅಧಿಕಾರಿಯಾಗಿದ್ದ ನವರತ್ನ ರಾಮರಾಯರು ಬರೆದ ಆತ್ಮಕಥೆಯ ಗದ್ಯ ಕೂಡ ಇಂತಹ ಫಾರಸಿ ಮಿಶ್ರಿತ ಕಸುವುಳ್ಳದ್ದು. ಮುಂಬೈ ಪ್ರಾಂತ್ಯದಲ್ಲಿ ದೊಡ್ಡ ಅಧಿಕಾರಿಯಾಗಿದ್ದ ಅರಟಾಳ ರುದ್ರಗೌಡರು ಬರೆಯಿಸಿದ ತಮ್ಮ ಆತ್ಮಚರಿತ್ರೆಯಲ್ಲಿ ಬಳಕೆಯಾಗಿರುವ ಕನ್ನಡವು ಮರಾಠಿ ಮಿಶ್ರಣದಿಂದ ಕೂಡಿದೆ. ಕನ್ನಡ ಗದ್ಯಕ್ಕೆ ಕುವೆಂಪು ಸಂಸ್ಕøತ ಬೆರೆಸುತ್ತ ಒಂದು ಖದರನ್ನು ಒದಗಿಸಿದರೆ, ಗೋವಿಂದ ಪೈಗಳು, ಹಳಗನ್ನಡ ರೂಪಗಳನ್ನು ಬಳಸುತ್ತ ಇನ್ನೊಂದು ಚಹರೆ ಕಟ್ಟಿಕೊಟ್ಟರು. ಹೀಗೆ ಕನ್ನಡವು ಬೇರೆಬೇರೆ ವೃತ್ತಿಕ್ಷೇತ್ರಗಳಲ್ಲಿ ಬಳಕೆಯಾಗುತ್ತ ರೂಪವೈವಿಧ್ಯ ಪಡೆದುಕೊಂಡಿದೆ. ಅದು ತನಗೆ ಅಗತ್ಯವಾದ ಶಬ್ದಗಳನ್ನು ಕಾಲಕಾಲಕ್ಕೆ ಬೇರೆಬೇರೆ ಭಾಷೆಗಳಿಂದ ಪಡೆದುಕೊಂಡು ಸಮೃದ್ಧವಾಗಿದೆ. ಆ ಶಬ್ದಗಳನ್ನು ಹೊರಹಾಕಿ ಅಚ್ಚಗನ್ನಡ ಉಳಿಸಿಕೊಳ್ಳುವುದು ಕನ್ನಡಪರ ಕೆಲಸ ಎಂದು ಕೆಲವರು ಭಾವಿಸಿದ್ದಾರೆ; ಎಗ್ಗಿಲ್ಲದ ಸ್ವೀಕಾರ ನಡೆಯಲಿ ಏನಾಗುತ್ತೆ ಎನ್ನುವ ನಿಶ್ಚಿಂತವಾದಿಗಳೂ ಉಂಟು. ಯಾವುದೇ ಸ್ವೀಕಾರ-ನಿರಾಕರಣೆಗಳಿಗೆ, ಅದು ಒಂದು ಭಾಷೆ ಮತ್ತು ಭಾಷಿಕರ ಮೂಲಶಕ್ತಿಯನ್ನು ಹಿಗ್ಗಿಸಿದೆಯೊ ಕುಗ್ಗಿಸಿದೆಯೊ ಎಂಬುದೇ ಮಾನದಂಡ. ಕನ್ನಡವು ಮೊದಲಿಂದಲೂ ಅತಿರೇಕಗಳನ್ನು ನಿರಾಕರಿಸಿದೆ. ಪಂಪನ `ದೇಸಿಯೊಳ್ ಪೊಕ್ಕು ಮಾರ್ಗದೊಳೆ ತಳ್ವುದು’ ಕೇವಲ ಕಾವ್ಯಕ್ಕೆ ಮಾತ್ರವಲ್ಲ, ಭಾಷೆಗೂ, ಜೀವನ ವಿಧಾನಕ್ಕೂ ಅನ್ವಯವಾಗುವ ಸಮತೋಲನ ವಿಧಾನವಾಗಿದೆ. ನಮ್ಮ ನಾಡಿನ ಸಾಂಸ್ಕøತಿಕ ಸಮೃದ್ಧಿಯಂತೂ ಈ ಕೊಡುಕೊಳೆಯ ವಿವೇಕದಿಂದಲೇ ಸಂಭವಿಸಿದೆ.ಯೂರೋಪಿನಿಂದ ಬಂದ ಹಾರ್ಮೊನಿಯಂ, ವೈಯಲಿನ್, ಅರಬಸ್ಥಾನದಿಂದ ಬಂದ ದಫ್ (ಡಪ್ಪು) ನಮ್ಮ ಸಂಗೀತ-ರಂಗಭೂಮಿಗಳಲ್ಲಿ ಸೇರಿಹೋಗಿರುವ ಬಗೆಯನ್ನು ಗಮನಿಸಬೇಕು.ಕನ್ನಡ ಗದ್ಯಕ್ಕಿರುವ ಅನಂತ ಮಗ್ಗುಲುಗಳನ್ನು ಗಮನಿಸುವಾಗ ಸೋಜಿಗವಾಗುತ್ತದೆ. ಮಾತ್ರವಲ್ಲ, ಪತ್ರಿಕೆಗಳಲ್ಲಿ ನಮ್ಮ ಬರೆಹಗಳಲ್ಲಿ ನಾವು ಬಳಸುತ್ತಿರುವ ಗದ್ಯ ಎಷ್ಟೊಂದು ನಿಸ್ಸತ್ವವಾಗಿದೆ ಎಂದು ದುಗುಡವೂ ಆವರಿಸುತ್ತದೆ. ಜನರಾಡುವ ಮಾತುಗಳನ್ನು ಆಲಿಸದೆ ಹೊಸಭಾಷೆಯನ್ನು ಲೇಖಕರು ಕೇವಲ ಸ್ವಪ್ರತಿಭೆಯೊಂದರಿಂದಲೇ ಹುಟ್ಟಿಸಲಾರರು. ಹುಟ್ಟಿಸಿದರೂ ಅದಕ್ಕೆ ನೆಲದ ಕಸುವು ಇರುವುದಿಲ್ಲ. ಭಾಷೆಯ ಬೆಳವಣಿಗೆ ಎಂದರೇನು? ಬೋರ್ಡು ಬ್ಯಾನರುಗಳಲ್ಲಿ ಬಳಕೆಯಾಗುವುದೇ? ಅದು ಬಳಕೆಯ ಒಂದು ಹೊರ ಮತ್ತು ಸರಳ ಮುಖವಷ್ಟೆ. ಭಾಷೆಗೆ ದೈನಿಕ ಬದುಕಿನ ಮಾತುಕತೆಯಲ್ಲಿ ವ್ಯವಹಾರದಲ್ಲಿ ಬಳಕೆಯಾಗುವ ಹಲವಾರು ಸ್ತರಗಳಿವೆ. ಶಿಕ್ಷಣ ಮತ್ತು ಆಡಳಿತದಲ್ಲಿ ಬಳಕೆಯಾಗುವ ಸ್ತರಗಳಿವೆ. ಇವುಗಳ ಜತೆಗೆ ಗಹನವಾದ ವಿಚಾರಗಳನ್ನು ಅಭಿವ್ಯಕ್ತಿ ಮಾಡಲು ಸಾಧ್ಯವಾಗುವಂತೆ, ಧಾರಣಶಕ್ತಿಯನ್ನು ಪಡೆಯುವ ಸ್ತರವೂ ಇದೆ. ಇದನ್ನು 12ನೇ ಶತಮಾನದಲ್ಲಿ ಶರಣರು ತಾತ್ವಿಕವಾದ ವಾಗ್ವಾದಕ್ಕೆ ಕನ್ನಡವನ್ನು ಬಳಸುವ ಮೂಲಕ ಮಾಡಿದರು. ನೋಡಲು ಸರಳವಾಗಿ ಕಾಣುವ ಆದರೆ ದಾರ್ಶನಿಕ ಅರ್ಥಗಳಿಂದ ತುಂಬಿದ ಅಲ್ಲಮನ ವಚನಗಳ ಕನ್ನಡ ಒಂದು ಅದ್ಭುತ. ಭಾಷೆಗೆ ಧಾರಣ ಶಕ್ತಿ ಮಾತ್ರವಲ್ಲ, ಅನುಭವ-ವಿಚಾರಗಳನ್ನು ರೂಪಕ ಪ್ರತಿಮೆ ನುಡಿಗಟ್ಟುಗಳಲ್ಲಿ ಹೇಳುವಂತೆ ಸೌಂದರ್ಯಾತ್ಮಕ ಸ್ತರವೂ ಬೇಕು. ಈ ಸ್ತರವು ಹಳ್ಳಿಗಳಲ್ಲಿ ಅತ್ಯಂತ ಚತುರ ಮಾತುಗಾರರು ಆಡುವ ಭಾಷೆ ಕಂಡರೂ ಗೊತ್ತಾಗುತ್ತದೆ. ಇದು ಪಂಪನ ಕಾವ್ಯ, ಬೇಂದ್ರೆಯವರ ಪದ್ಯ, ಕುವೆಂಪು ಕಾದಂಬರಿಗಳ ಗದ್ಯ ನೋಡಿದರೆ ಅರಿವಾಗುತ್ತದೆ. ನಾಗೇಶ್ ಹೆಗಡೆ, ಚನ್ನೇಶ್ ಮುಂತಾದವರು ಬರೆಯುವ ವಿಜ್ಞಾನದ ಬರೆಹಗಳು ಅವುಗಳ ಭಾಷೆ ಈ ಕಾರಣಕ್ಕೇ ಮಹತ್ವದವಾಗಿವೆ.ಯಾವುದೇ ಜನ ಭಾಷೆಗೆ ಆಂತರಿಕವಾದ ಸ್ತರಸಂಪತ್ತು ಮತ್ತು ಕಸುವುಗಳಿದ್ದರೆ ಸಾಲದು. ಅದು ಬಳಕೆಯಾಗುವ ವಿಪುಲ ಮತ್ತು ಸವಾಲಿನ ಅವಕಾಶಗಳೂ ನಿರ್ಮಾಣವಾಗಬೇಕು. ಇಲ್ಲವಾದರೆ, ಕುಸ್ತಿ ಪಂದ್ಯಗಳಿಲ್ಲದೆ ದೃಢದೇಹ ಸಾಕಿಕೊಂಡ ಪೈಲ್ವಾನನಂತೆ. ವೈರುಧ್ಯವೆಂದರೆ, ದಿನಗಳೆದಂತೆ ಕೋರ್ಟು, ವೈದ್ಯ, ಇಂಜಿನಿಯರಿಂಗ್, ವಿಜ್ಞಾನಗಳಲ್ಲಿ ಕನ್ನಡ ಬಳಕೆಯ ಅವಕಾಶಗಳು ಕ್ಷೀಣಿಸುತ್ತಲೇ ಹೋಗುತ್ತಿವೆ. ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿ ಬಂದಿವೆಯೆಂದು ನಾವು ಬೀಗುತ್ತಲೇ ಇದ್ದೇವೆ. ************************************ ರಹಮತ್ ತರಿಕೆರೆಯವರು- ಕನ್ನಡದ ಗಮನಾರ್ಹ ಲೇಖಕ. ಹಂಪಿ ವಿಶ್ವವಿದ್ಯಾಲಯದ ಪ್ರೋಫೆಸರ್. ನಾಡಿನ ಸಂಸ್ಕೃತಿ, ಸೌಹಾರ್ದತೆಯ ಬೇರುಗಳ ಜಾಡು ಹಿಡಿದು, ಆಯಾ ಊರುಗಳಿಗೆ ಹೋಗಿ, ಮಾಹಿತಿ ಹಾಕಿ, ಅಲ್ಲಿನ ಜನರ ಜೊತೆ ಬೆರೆತು, ಸಂಶೋಧನಾ ಲೇಖನಗಳನ್ನು ಬರೆದವರು.‌ಕರ್ನಾಟಕದ ಸಂಗೀತಗಾರರು ಹಾಗೂ ಅವರು ದೇಶದ ಇತರೆ ಭಾಗಗಳಲ್ಲಿ ನೆಲೆಸಿದವರ ಬಗ್ಗೆ ಹುಡುಕಾಡಿ ಬರೆದವರು. ಅವರ ನಿರೂಪಣಾ ಶೈಲಿ ಅತ್ಯಂತ ಆಕರ್ಷಕ. ಮನಮುಟ್ಟುವಂತೆ ಬರೆಯುವ ರಹಮತ್ ತರೀಕೆರೆ ಕನ್ನಡದ ,ಬಹುತ್ವದ ,ಸೌಹಾರ್ದತೆಯ ಪ್ರತೀಕವೂ ಆಗಿದ್ದಾರೆ

Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಕಬ್ಬಿಗರ ಅಬ್ಬಿ ೧೧.  ಹಸಿವಿನಿಂದ ಹಸಿರಿನತ್ತ  ಹಸಿವಿನಿಂದ ಹಸಿರಿನತ್ತ “Generations to come will scarce believe that such a one as this ever in flesh and blood walked upon this earth” .(Albert Einstein, About Mahatma Gandhi) ” ಮುಂದಿನ ಪೀಳಿಗೆಯ ಮಕ್ಕಳು ಆಶ್ಚರ್ಯ ಪಡುವ ದಿನ ಬರಲಿದೆ, ಇಂತಹಾ  ಮನುಷ್ಯ ದೇಹ, ಈ ಭೂಮಿಯ ಮೇಲೆ ನಡೆದಾಡಿರಬಹುದೇ?” ( ಆಲ್ಬರ್ಟ್ ಐನ್ ಸ್ಟೈನ್ ,ಮಹಾತ್ಮಾ ಗಾಂಧಿ ಅವರ ಕುರಿತು).  ಅಹಿಂಸಾ ಸತ್ಯಾಗ್ರಹದ ಮೂಲಕ ಗಾಂಧೀಜಿ ಅವರ ಹೋರಾಟದಿಂದ ಪ್ರೇರಣೆ ಪಡೆದು, ಐನ್‍ಸ್ಟೈನ್ ಮೇಲಿನ ಮಾತುಗಳನ್ನು ಹೇಳಿದ್ದು ಕಳೆದ ಶತಮಾನದ ಮಧ್ಯಭಾಗದಲ್ಲಿ. ವಿಪರ್ಯಾಸವೆಂದರೆ, ಜಪಾನ್ ನ ಮೇಲೆ ಅಮೆರಿಕಾ ಸುರಿದ ಅಣು ಬಾಂಬ್ ತಯಾರಿಸಿದ ವಿಜ್ಞಾನಿಗಳ ತಂಡದಲ್ಲಿ ಐನ್‍ಸ್ಟೈನ್ ಮುಖ್ಯ ವಿಜ್ಞಾನಿಗಳಾಗಿದ್ದರು!. ಅಣು ಬಾಂಬ್ ನಿಂದ ಮನುಷ್ಯ ಮನುಷ್ಯನನ್ನೇ ನಾಶಮಾಡುವ ಕ್ರೌರ್ಯವನ್ನು  ನೋಡಿ ಜಗತ್ತಿನ ಎದೆಯೇ ನಡುಗಿತ್ತು. ನಮ್ಮದೊಂದು ತತ್ವವಿತ್ತು, ನೆನಪಿದೆಯೇ! “ವಸುಧೈವ ಕುಟುಂಬಕಂ” ಅಂತ. ಕುವೆಂಪು ಅವರ ಕನಸು ‘ವಿಶ್ವ ಮಾನವ’  ಇದಕ್ಕಿಂತ ಬೇರೆಯಲ್ಲ. ಆದರೆ ಕಳೆದ ಶತಮಾನದ ಪ್ರತಿಯೊಂದು ಹೆಜ್ಜೆಯ ಮಾನವ ಸಂಕುಲದ ಇತಿಹಾಸ ರಕ್ತಸಿಕ್ತ. ಭೂಮಿ ಮತ್ತದರ ವಾತಾವರಣದ ಹೊದಿಕೆಯೊಳಗೆ ೭೦೦ ಕೋಟಿ ಮನುಷ್ಯರು ಮತ್ತು ಅದಕ್ಕಿಂತ ಲಕ್ಷ ಪಟ್ಟು ಜಾಸ್ತಿ ಜೀವಸಂಕುಲಗಳು ಒಂದೇ ಬಾನನ್ನು ಹಂಚಿ ಬದುಕುತ್ತಿದ್ದೇವೆ. ಈ ಬಯೋ ಡೈವರ್ಸಿಟಿಯೊಳಗೆ ಒಂದು ಸೂಕ್ಷ್ಮ ಸಮತೋಲನ ಇದೆ. ಹಾಗೆಯೇ, ವಾತಾವರಣದಲ್ಲಿ ಮೋಡ,ಗಾಳಿ, ಭೂಮಿಯೊಳಗೆ ಒತ್ತಡ, ಭೂಕಂಪನದ ಅಲೆಗಳು, ಸಾಗರದೊಳಗೆ ನೀರಿನ ಪ್ರವಾಹಗಳು, ಭೂಮಿ,ಚಂದ್ರ, ಸೂರ್ಯಾದಿಗಳ ಚಲನೆಯ ನಿರ್ದಿಷ್ಟ ತತ್ವಗಳು, ಎಲ್ಲ ಚಲನಶೀಲತೆಯಲ್ಲಿಯೂ ಅದರಷ್ಟಕ್ಕೇ ಹದ ಹುಡುಕಿ ಸಮೀಕೃತವಾಗಿವೆ. ಇಂತಹಾ ಸಂದರ್ಭದಲ್ಲಿ ಮನುಷ್ಯ, ತನ್ನ ಆಧಿಪತ್ಯದ ಅಮಲಿನಲ್ಲಿ ನಡೆಸುವ ವೈಪರೀತ್ಯಗಳು, ಒಟ್ಟೂ ಸಮತೋಲನವನ್ನು ಹೇಗೆ ಸ್ಥಾನಪಲ್ಲಟ ಮಾಡುತ್ತೆ ಎಂಬುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿದೆ.  ಇಂದಿನ ಅಂಕಣದಲ್ಲಿ ಮನುಷ್ಯ ಮತ್ತು  ಪ್ರಾಣಿ ಸಸ್ಯ ಸಂಕುಲಗಳ ನಡುವೆ, ಹಾಗೂ ಮನುಷ್ಯ ಮನುಷ್ಯನ ನಡುವೆ ಮತ್ತು ಮನುಷ್ಯನ ಮನಸ್ಸೊಳಗಿನ ಹಲವು ಧ್ರುವಗಳ ನಡುವಿನ ತಿಕ್ಕಾಟ ದ ಬಗ್ಗೆ ಅವಲೋಕನದ ಪ್ರಯತ್ನ ಮಾಡುವೆ. ಅಮೆರಿಕಾದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ನಾನು ಸಂಶೋಧನೆ ಮಾಡಲು ಹೋಗಿದ್ದಾಗ, ಓರ್ವ ಚೀನೀ ಸಂಶೋಧಕ ನನ್ನ ಲ್ಯಾಬ್ ಮೇಟ್ ಆಗಿದ್ದ. ಆತನ ಹತ್ತಿರ ಒಂದು ಟಿನ್ ತುಂಬಾ ಅರೆ ಒಣಗಿಸಿದ ಮಾಂಸದ ಹಸಿ ತುಣುಕುಗಳು. ಹಸಿವಾದಾಗ ಆ ತುಣುಕುಗಳನ್ನು ಅತ ಜಗಿದು ತುಂಬಾ ರಸಭರಿತವಾಗಿದೆ ಅಂತ ಚಪ್ಪರಿಸುತ್ತಿದ್ದ. ಅದು ಅವರಿಗೆಲ್ಲಾ ಸಾಮಾನ್ಯವೇ ಆಗಿತ್ತು. ವಿವೇಚನೆಯಿಲ್ಲದೆ ಸೃಷ್ಟಿಯಲ್ಲಿರುವ ಇನ್ನೊಂದು ಜೀವಿಯನ್ನು ತಿನ್ನುವುದು ಮನುಷ್ಯಸಹಜವೇ? ಎರಡನೆಯ ಉದಾಹರಣೆ ಇನ್ನೊಂದು ಆಯಾಮದ್ದು. ವ್ಯಾಪಾರೀ ಜಗತ್ತು ತನ್ನ ಉತ್ಪಾದನೆಯನ್ನು ಹೆಚ್ಚಿಸಲು, ಹಣ ಸಂಪಾದಿಸಲು, ಲಾಭ ಪಡೆಯಲು ನಡೆಸುವ ಅಮಾನವೀಯ ಕತೆ ಇದು. ಕೆಲವು ವರ್ಷಗಳ ಹಿಂದೆ mad cow disease ಎಂಬ ರೋಗ ಮನುಷ್ಯರಲ್ಲಿ ಹಬ್ಬಿತು. ಇದು ದನದ ಮಾಂಸ ತಿಂದವರಲ್ಲಿ ಕಾಣಿಸಿತ್ತು. ದನಕ್ಕೆ ಈ ರೋಗ ಎಲ್ಲಿಂದ ಬಂತು? ಎಂದು ಶೋಧಿಸಿದಾಗ ದನಕ್ಕೆ ತಿನ್ನಲು ಕೊಟ್ಟ ಕುರಿ ಮಾಂಸದಿಂದ ಬಂತು ಎಂದು ತಿಳಿಯಿತು. ಹೌದು, ನೀವು ಸರಿಯಾಗಿ ಓದಿದ್ದೀರಿ. ದನ ಹೆಚ್ಚು ಹಾಲು ಕೊಡಲು ಮತ್ತು ದನ ದಷ್ಟಪುಷ್ಟವಾಗಿ ಬೆಳೆದ ಮೇಲೆ ಅದರ ಮಾಂಸ ಮಾರುವಾಗ ಮಾಂಸದ ತೂಕ ಹೆಚ್ಚಾಗಲು, ಮಾತು ಬಾರದ ದನಕ್ಕೆ ಕುರಿ ಮಾಂಸ ತಿನಿಸಿದ ಮನುಷ್ಯರ ಹಣದ ಲಾಭದ ಆಸೆಗೆ ಏನು ಹೇಳೋಣ. ಇಂತಹ ಅನೈಸರ್ಗಿಕ ವಿಧಾನಗಳನ್ನು ಪ್ರಕೃತಿಯ ಮೇಲೆ ಹೇರಿದ ಮನುಷ್ಯನಿಗೆ ಮ್ಯಾಡ್ ಕೌ ಡಿಸೀಸ್ ಬಂದದ್ದಲ್ಲಿ ಆಶ್ಚರ್ಯವೇನು?. ಇನ್ನೊಂದು ಉದಾಹರಣೆ ಇತ್ತೀಚಿನದ್ದು. ಚೀನಾ ವುಹಾನ್ ನಲ್ಲಿ ದೇಶದ ಜೀವಂತ ಪ್ರಾಣಿಗಳ ಭಾರೀ ದೊಡ್ಡ ಮಾರ್ಕೆಟ್ ಇದೆ ಅಲ್ಲಿ. ಸಾವಿರಾರು ಕಾಡು ಪ್ರಾಣಿಗಳನ್ನು ಜೀವಂತ ಹಿಡಿದು ಪಂಜರ, ಗೂಡೊಳಗಿಟ್ಟು, ಮಾರುವ ಮಾರುಕಟ್ಟೆ, ಇದಕ್ಕೆ ಆಂಗ್ಲರು Wet market  ಅಂತಾರೆ. ಅಂತಹ ನೂರಾರು ಮಾರ್ಕೆಟ್ ಚೀನಾದಲ್ಲಿದೆ. ಅಲ್ಲಿನ ಬಾವಲಿಯಿಂದ ಮನುಷ್ಯನಿಗೆ, ಕೊರೊನಾ ವೈರಸ್ಸು ಬಂತು ಎಂಬುದು ಇದುವರೆಗೆ ಜಗತ್ತು ನಂಬಿದ ಸತ್ಯ. ಇವುಗಳು ಮನುಷ್ಯನಿಗೆ ತಿನ್ನಲೆಂದೇ ಸೃಷ್ಟಿಯಾದವು ಎಂಬಂತೆ, ಸಿಕ್ಕಿದ ಬಡ ಪ್ರಾಣಿಗಳನ್ನು, ಕಡಿದು ತಿಂದು ತೇಗಿದ್ದು ಮಾನವನ ಹೆಗ್ಗಳಿಕೆ. ಕಳೆದ ಒಂದು ವರ್ಷದಿಂದ ಜಗತ್ತಿನ ಮನುಷ್ಯ ಸಮಾಜವನ್ನು ಕಟ್ಟಿ ಹಾಕಿದ ಕೊರೊನಾ,ಬರಲು ಮನುಷ್ಯನ ಈ ಮನೋಭಾವ ಕಾರಣವಲ್ಲವೇ?. ಪ್ಯಾಂಟು, ಕೋಟು ತೊಟ್ಟು ಆಧುನಿಕ ನಾಗರಿಕತೆಯನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಸಮಾಜದ, ಕ್ರೌರ್ಯವನ್ನು ನೋಡ ಬೇಕಾದರೆ ಕಸಾಯಿಖಾನೆಯಲ್ಲಿ ಪ್ರಾಣಿಗಳನ್ನು ಜೀವಂತ ತಲೆ ಕೆಳಗಾಗಿ ತೂಗು ಹಾಕಿ ನೇಲಿಸಿ ಚರ್ಮ ಸುಲಿಯುವ ( ಹೀಗೆ ಉತ್ಪಾದಿಸುವ ಮಾಂಸ ರುಚಿಕರವಂತೆ) ಉತ್ಪಾದನಾ ಲೈನ್ ಗಳನ್ನು ನೋಡಿಬಂದರೆ ಸಾಕು. ಅಂತಹ  ಸಾವಿರಾರು ಉತ್ಪಾದನಾ ಘಟಕಗಳು ಭಾರತದಲ್ಲಿಯೂ ಇವೆ. ಪಂಚೆ ಕಚ್ಚೆ ಕಟ್ಟಿ ನೆಲದಲ್ಲಿ ಮಲಗಿ ಪ್ರಕೃತಿಯ ಜತೆಗೆ ಜೀವನ ನಡೆಸುವ ಹಳ್ಳೀ ಮಂದಿ ನಾಗರಿಕರೋ, ಮೇಲೆ ಹೇಳಿದ ಅಮಾನವೀಯ ಆಧುನಿಕರು ನಾಗರಿಕರೋ ಎಂಬ ಪ್ರಶ್ನೆ  ಮನುಷ್ಯನ ಸೂಕ್ಷ್ಮ ಪ್ರಜ್ಞೆಯನ್ನು ಕಾಡುತ್ತೆ. ಇಂತಹ ಅಮಾನವೀಯ ಕಾಲಘಟ್ಟದಲ್ಲಿ ನಿಂತು, ಕವಿ, ತನ್ನ ಸ್ಪಂದನೆಯನ್ನು ಹರಿಯಬಿಟ್ಟರೆ, ಬರುವ ಕವಿತೆ, ಕೆ. ವಿ. ತಿರುಮಲೇಶ್ ಅವರ  “ನೂರು ಮಂದಿ ಮನುಷ್ಯರು” ನೂರು ಮಂದಿ ಮನುಷ್ಯರು ಒಮ್ಮೆ ನೂರು ಮಂದಿ ಮನುಷ್ಯರು ಆಸಿಕ್ಕಿಬಿದ್ದರು ಒಂದು ದ್ವೀಪದಲ್ಲಿ ಮೊದಲು ಅವರು ಅಲ್ಲಿನ ಸಸ್ಯಗಳನ್ನು ತಿಂದರು ನಂತರ ಅಲ್ಲಿನ ಪ್ರಾಣಿಗಳನ್ನು ಮುಗಿಸಿದರು ನಂತರ ತಮ್ಮಲ್ಲೊಬ್ಬರನ್ನು ವಾರಕ್ಕೊಂದರಂತೆ ತಿಂದರು ಕೊನೆಗುಳಿದವನು ಒಬ್ಬನೇ ಒಬ್ಬ ಅವನು ಮೊದಲು ತನ್ನ ಪಾದದ ಬೆರಳುಗಳನ್ನು ತಿಂದ ನಂತರ ಪಾದಗಳನ್ನು ತಿಂದ ನಂತರ ತನ್ನ ಕೈಬೆರಳುಗಳನ್ನು ತಿಂದ ನಂತರ ಕೈಗಳನ್ನು ತಿಂದ ನಂತರ ಕಿವಿ ಕಣ್ಣು ಮೂಗುಗಳನ್ನು ಒಂದೊಂದಾಗಿ ತಿಂದ ಕೊನೆಗೆ ತನ್ನ ತಲೆಯನ್ನೇ ತಿನ್ನತೊಡಗಿದ ಅರೇ! ಇದು ಹೇಗೆ ಸಾಧ್ಯ ಎಂದು ಕೇಳದಿರಿ ಇಂಥ ಪ್ರಶ್ನೆ ಮೊದಲೇ ಕೇಳಿರುತ್ತಿದ್ದರೆ ಈಗ ಇಂಥಾ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ. **     ***    **     ಇದರ ಶೀರ್ಷಿಕೆ “ನೂರು ಮಂದಿ ಮನುಷ್ಯರು” ಈ ಕವನ ಓದಿದ ನಂತರ, ನಿಮಗೇ ಪ್ರಶ್ನೆ ಹುಟ್ಟುತ್ತದೆ, ಇವರು ಮನುಷ್ಯರೇ?. ಶೀರ್ಷಿಕೆ ಹಾಗಿದ್ದರೆ ವಿಡಂಬನಾತ್ಮಕವೇ?. ತಿರುಮಲೇಶ್ ಅವರ ಎಲ್ಲಾ ಕವಿತೆಗಳ ಹಾಗೆಯೇ ಈ ಕವಿತೆಯೂ ಓದಲು ಸುಲಭ. ಓದುತ್ತಾ ಓದುತ್ತಾ ನಮ್ಮನ್ನು ಚಿಂತನೆಯ ಸುಳಿಗೆ ಸೆಳೆದು ತಿರು ತಿರುಗಿಸಿ ತಿಳಿಸಿ ಹೇಳುತ್ತೆ. ದಿನವಿಡೀ ಕಾಡುತ್ತೆ. ಕವಿತೆ ಬೆಳೆಯುತ್ತಾ ಹೋದಂತೆ ಪ್ರಶ್ನೆಗಳು ಉದ್ಭವವಾಗುತ್ತವೆ. ಉತ್ತರ ಹೇಳುವತ್ತ ಚಿತ್ತವಲ್ಲ,  ಶಿಷ್ಟ ದಾರಿಯಿಂದ ವಿಶಿಷ್ಟ ಹಾದಿಗೆ ಹೊರಳಿಸುವ ಪ್ರಯತ್ನ. ಕವಿತೆಯುದ್ದಕ್ಕೂ ಒಂದು ಅತ್ಯಂತ ಕಾಮನ್ ಡಿನಾಮಿನೇಟರ್,  ಹಸಿವು ಮತ್ತು ತಿನ್ನುವುದು. ಊಟ, ಲೈಂಗಿಕ ಕ್ರಿಯೆ ಮತ್ತು ನಿದ್ದೆ, ಇವು ಮೂರು, ದೇಹಕ್ಕೆ ಮಾತ್ರ ಸಂಬಂಧಿಸಿದ್ದು. ಇವು ಮನುಷ್ಯನ ಪ್ರಾಣಿ ಗುಣಗಳು. ತಿನ್ನುವ ಕ್ರಿಯೆಯಲ್ಲಿ ಹಸಿವಿಗೆ ದಾಸನಾದವ ಏನೂ ತಿನ್ನಬಲ್ಲ. ಪ್ರಾಣಿಗಳ ತಿನ್ನುವ ಕ್ರಿಯೆ,  ಬದುಕುಳಿಯುವುದಕ್ಕಾಗಿ ಅತ್ಯಂತ ಅಗತ್ಯ. ಜೀವವುಳಿಸುವುದಕ್ಕಾಗಿ ಸಸ್ಯ, ಪ್ರಾಣಿ, ತನ್ನ ಸಹಚರರು, ಕೊನೆಗೆ ತನ್ನನ್ನೂ ತಿನ್ನುವುದರಲ್ಲಿ ಕವಿತೆ ಮುಗಿಯುತ್ತದೆ. ತನ್ನನ್ನೂ ತಿನ್ನುವ ಈ ಕವಿತೆಯ ಸಾಲುಗಳು ಫ್ಯಾಂಟಸಿಕಲ್ ಆಗಿರುವುದು ಕವಿತೆಯ ಆಶಯಕ್ಕೆ ರೂಪ ಕೊಡಲು ಮಾಡಿದ ಪ್ರಯತ್ನ. ಎರಡನೆಯ ಅಂಶ, ಮನುಷ್ಯನ ಆಕ್ರಮಣಕಾರಿ ಮನೋಭಾವ. ಆತ, ಮೊದಲು ಸಸ್ಯಗಳನ್ನು, ಆಮೇಲೆ ಪ್ರಾಣಿಗಳನ್ನು, ತಿನ್ನುತ್ತಾ ಮುಂದುವರೆಯುತ್ತಾನೆ. ಮನುಷ್ಯನ ಸ್ವಕೇಂದ್ರಿತ ಮನೋಭಾವ, ಮತ್ತು ತನ್ನದಲ್ಲದ ಎಲ್ಲವನ್ನೂ ಆಕ್ರಮಿಸುವ ಮತ್ತು ತನ್ನದಾಗಿಸುವುದನ್ನು ಈ ಸಾಲುಗಳು ಸೂಚಿಸುತ್ತವೆ. ತಿಂದ ಆಹಾರ ಸ್ವಂತದ ಜೀವಕೋಶಗಳಾಗುತ್ತವೆ. ಇಲ್ಲಿ expansionist ( ವಿಸ್ತಾರವಾದ) ಮನೋಭಾವದ ಛಾಯೆಯನ್ನು ಕಾಣಬಹುದು. ರಾಜ, ತನ್ನ ರಾಜ್ಯ ವಿಸ್ತಾರ ಮಾಡುತ್ತಾನೆ, ಇತರ ದೇಶಗಳನ್ನು ತನ್ನ ದೇಶದೊಳಗೆ ವಿಲೀನ ಮಾಡುತ್ತಾನೆ, ಕೊನೆಗೆ ಒಂದು ದೊಡ್ಡ ಸಾಮ್ರಾಜ್ಯ ಕಟ್ಟುತ್ತಾನೆ. ಆಮೇಲೆ ಆತನಿಗೆ ದಂಡೆತ್ತಿಹೋಗಲು ಬೇರೇನೂ ಉಳಿದಿಲ್ಲ. ಆಗ, ಆತ ತನ್ನ ಈ ಆಕ್ರಮಣಕಾರಿ ಮನೋಭಾವ ಬದಲಿಸದಿದ್ದರೆ, ತನ್ನೊಳಗೇ ಅಂತರ್ಯುದ್ಧ ಮಾಡುತ್ತಾನೆ. ತನ್ನ ತಲೆಯನ್ನೇ ತಿನ್ನತ್ತಾನೆ. ಮೂರನೆಯ ಅಂಶ, ಮನುಷ್ಯ ಮತ್ತು ಪ್ರಕೃತಿಗಳ ನಡುವಿನ, ಚಲನಶೀಲ ಸಂಘರ್ಷ. ಕವಿತೆಯ ಮೊದಲೆರಡು  ಹಂತಗಳಲ್ಲಿ, ಸಸ್ಯವನ್ನೂ ಪ್ರಾಣಿಗಳನ್ನು ಮನುಷ್ಯ ತಿಂದು ಮುಗಿಸುತ್ತಾನೆ. ಮುಗಿಸುತ್ತಾನೆಯೇ? ಸಾಧ್ಯವೇ?  ಕೊರೊನಾ ಅನುಭವದ ಬೆಳಕಿನಲ್ಲಿ ನೋಡಿದರೆ, ಮನುಷ್ಯ ಪ್ರಕೃತಿಯ ಮೇಲೆ ಹತೋಟಿ ಸಾಧಿಸಿದ ಎಂದರೆ ತಪ್ಪಾಗುತ್ತದೆ. ಅಲ್ಲವೇ. ಆ ಪ್ರಶ್ನೆ ಕವಿತೆಯಲ್ಲಿ ಮನುಷ್ಯನ attitude ನೋಡುವಾಗ ನಮ್ಮನ್ನು ಕಾಡುತ್ತೆ. ನನ್ನ ಮಟ್ಟಿಗೆ, ನಮಗೆ ಪರಿಹಾರ, ತೀರ್ಪು ಇತ್ಯಾದಿ ಕೊಡುವುದು ಕವಿತೆಯ ಉದ್ದೇಶ ಅಲ್ಲ. ನಮ್ಮೊಳಗಿನ ಸಂವೇದನೆಯನ್ನು ಎಬ್ಬಿಸಿ ಜಾಗೃತಗೊಳಿಸುವತ್ತ ಕಾವ್ಯದೃಷ್ಟಿ ಅನ್ಸುತ್ತೆ. ಮನುಷ್ಯನ ಹೊಸತನ್ನು ಅರಸುವ ಮನೋಭಾವ, ಆಕ್ರಮಣಕಾರೀ ಮನೋಭಾವವಾಗಿ ಪರಿವರ್ತನೆಗೊಂಡಾಗ, ಅಸಂಖ್ಯ ಜೀವ ಜಾಲಗಳ ನಡುವಿನ ಮತ್ತು ನಿರಜೀವ ಕಾಯಗಳೊಳಗಿನ ಡೈನಾಮಿಕ್ಸ್ ನ ಸೂಕ್ಷ್ಮ ತಂತುಗಳನ್ನು ಕತ್ತರಿಸಿ, ಬ್ರಹ್ಮಾಂಡದ ಮೇಲೆ ತನ್ನ ಸ್ವಾಮ್ಯವನ್ನು ಸ್ಥಾಪಿಸುವ ಪ್ರಯತ್ನದ ಚಿತ್ರಣವಿದು. ಆದರೆ, ಓ ನನ್ನ ಚೇತನಾ, ಅನಂತದ ಒಡೆಯನಾಗುವ ಬದಲು ಅನಂತವೇ ತಾನಾಗುವ ಕನಸು ಕವಿಪ್ರಜ್ಞೆಯದ್ದು. ಕವಿತೆಯಲ್ಲಿ ಮನುಷ್ಯ ಮೊದಲು ಕಾಲಿನ ಬೆರಳುಗಳನ್ನು, ಕೊನೆಗೆ, ಮೂಗು ಕಿವಿ, ಕಣ್ಣು ತಿನ್ನುತ್ತಾನೆ. ಮೂಗು,ಕಿವಿ,ಕಣ್ಣು ಮನುಷ್ಯನ ಸಂವೇದನೆಯ ಇಂದ್ರಿಯಗಳು. ಮನುಷ್ಯ ಸಂವೇದನೆ ಕಳೆದು ಕೊಂಡಾಗ, ಕಣ್ಣಿದ್ದೂ ಕುರುಡ, ಕಿವಿಯಿದ್ದೂ ಕಿವುಡನಾಗುತ್ತಾನೆ. ಆತ ಎಷ್ಟು ಸ್ವಕೇಂದ್ರಿತನಾಗುತ್ತಾನೆ ಎಂದರೆ ಇತರರ ಸಮಸ್ಯೆಗೆ ಅಂಧನಾಗುತ್ತಾನೆ. ಕೊನೆಗೆ ಆತ ತನ್ನ ತಲೆಯನ್ನು ತಿನ್ನುತ್ತಾನೆ. ಅಂದರೆ, ತನ್ನ ವಿವೇಚನಾ ಶಕ್ತಿಯನ್ನು ಕಳೆದುಕೊಂಡು ಪರಿಸ್ಥಿತಿಗೆ ದಾಸನಾಗುತ್ತಾನೆ. ಕೊನೆಯದಾಗಿ, ಮೇಲಿನ ಕವನದ ನೂರು ಮನುಷ್ಯರು, ಒಂದು ವಿಭಾಗ. ಅದನ್ನು ಒಂದು ವರ್ಗ ಅಂತ ಇಟ್ಟುಕೊಳ್ಳೋಣ. ಆ ವರ್ಗವನ್ನು ಬಿಟ್ಟು ಉಳಿದವೆಲ್ಲಾ, ಇನ್ನೊಂದು ವರ್ಗ. ಈ ಎರಡೂ ವರ್ಗಗಳ ಸಂಘರ್ಷ, ಮೊದಲು. ಕಾರಣ ಅಸ್ಥಿತ್ವದ ಪ್ರಶ್ನೆ. ಒಮ್ಮೆ, ಹೊರಗಿನ ವರ್ಗ ಮತ್ತು ಸ್ವವರ್ಗದ ತಿಕ್ಕಾಟ ಮುಗಿದಾಗ, ಇರುವ ಒಂದೇ ವರ್ಗ ಒಡೆದು ಕಾದುತ್ತದೆ. ಹೀಗೇ ಸಂಘರ್ಷ ಮುಂದುವರೆದು ಉಳಿಯುವುದು ಒಬ್ಬ. ಆತ ತನ್ನೊಳಗೇ  ತಿಕ್ಕಾಟ ನಡೆಸಿ ಕೊನೆಗೆ ತಲೆಯನ್ನೂ ತಿಂದು ಏನೂ ಉಳಿಯುವುದಿಲ್ಲ. ಅಂದರೆ ಸ್ವಕೇಂದ್ರಿತ ವರ್ಗ ಸಂಘರ್ಷದ ಕೊನೆ ಸರ್ವನಾಶವೇ?. ಈ ಕವಿತೆ ಕೊನೆಯಲ್ಲಿ ಕವಿ ಅತ್ಯಂತ ಸಹಜವಾಗಿ ಅಭಿವ್ಯಕ್ತಿಸುವುದು ಹೀಗೆ. ” ಇದು ಹೇಗೆ ಸಾಧ್ಯ ಎಂದು ಕೇಳದಿರಿ ಇಂಥ ಪ್ರಶ್ನೆ ಮೊದಲೇ ಕೇಳಿರುತ್ತಿದ್ದರೆ ಈಗ ಇಂಥಾ ಸ್ಥಿತಿ ಯಾರಿಗೂ ಬರುತ್ತಿರಲಿಲ್ಲ.” ನಿಯಂತ್ರಿತ, ವಿದ್ಯಮಾನ, ಅನಿಯಂತ್ರಿತ ವಿಸ್ಪೋಟವಾಗುವುದರ ನಡುವೆ ಇರುವ ಗೆರೆಯ ಅರಿವಿಲ್ಲದೆ, ಚಲನಶೀಲ ಜಗತ್ತಿನ ಸೂಕ್ಷ್ಮ ತೋಲನದ ಕಂಟ್ರೋಲ್ ಸಿಸ್ಟಮ್ ನ ಮೇಲೆ ಬೆರಳಾಡಿಸುವುದು, ವಿನಾಶದ ಕದ ತೆರೆದಂತೆ,ಅಲ್ಲವೇ. ಮೊನ್ನೆ ಜೈಪುರದ ಮರುಭೂಮಿ ಪ್ರದೇಶದಲ್ಲಿ ೧೭ ಸೆಂಟಿಮೀಟರ್ ಮಳೆ ಬಂತು. ಜೈಪುರದ ಬೀದಿಗಳಲ್ಲಿ ಬಂದ ಪ್ರವಾಹ ಹೊಳೆಯ ಥರಾ, ಎಲ್ಲವನ್ನೂ ಕೊಚ್ಚಿಕೊಂಡು ಹೋಗುವ ದೃಶ್ಯ ನೋಡಿದೆ. ಮರುಭೂಮಿಯಲ್ಲಿ ಇಷ್ಟೊಂದು ಮಳೆ ಇತಿಹಾಸದಲ್ಲಿ ದಾಖಲಾಗಿಲ್ಲ. ಪಶ್ಚಿಮ ಘಟ್ಟಗಳ ಸಾಲುಗಳಲ್ಲಿ, ಕೇರಳದ ಮುನಾರ್ ನಲ್ಲಿ ಗುಡ್ಡಗಳು ಜಾರಿ ಚಹಾ

Read Post »

ಅಂಕಣ ಸಂಗಾತಿ, ಮೂರನೇ ಆಯಾಮ

ದೇಹದ ಹಂಗು ತೊರೆದು; ಹೊಸದನ್ನು ಹುಡುಕಿ         ಯಾರಾದರೂ ವ್ಯಾಟ್ಸ್‌ಆಪ್ ಅಥವಾ ಫೇಸ್‌ಬುಕ್‌ನ ಇನ್ ಬಾಕ್ಸ್‌ಗೆ ಬಂದು ಅಡ್ರೆಸ್ ಕೊಡಲು ಕೇಳಿದರೆ ನಾನು ಮಾತನಾಡದೇ ಕೊಟ್ಟುಬಿಡುವುದು ನನಗೆ ರೂಢಿಯಾಗಿಬಿಟ್ಟಿದೆ. ಯಾಕೆಂದರೆ ಬಹುತೇಕ ಹಾಗೆ ಕೇಳುವವರು ಸಾಹಿತಿ ಮಿತ್ರರೇ. ಅದೂ ಆಗಷ್ಟೇ ಅವರ ಪುಸ್ತಕ ಪ್ರಕಟವಾದವರು. ಹೀಗಾಗಿ ಪ್ರಕಾಶ ನಾಯಕರು ವಿಳಾಸ ತಿಳಿಸು ಎಂದು ವ್ಯಾಟ್ಸ್ ಆಪ್‌ನಲ್ಲಿ ಕೇಳಿದಾಗ ಅವರ ಅಂತೂ ಫೇಸ್‌ಬುಕ್‌ನಲ್ಲಿ ಸದ್ದು ಮಾಡ್ತಿರೋದನ್ನು ಗಮನಿಸಿದ್ದರಿಂದ ಅಷ್ಟೇನು ಗಮನವಹಿಸದೇ ಕೊಟ್ಟುಬಿಟ್ಟೆ. ಅದಾದ ನಂತರ ನನಗೆ ಒಂದೇ ಸಮನೆ ಯೋಚನೆ ಪ್ರಾರಂಭವಾಯಿತು. ಈ ಪ್ರಕಾಶಣ್ಣ ಎಲ್ಲಿಂದ ಪುಸ್ತಕ ಕಳಿಸ್ತಾರೆ? ಕ್ಯಾಲಿಪೋರ್ನಿಯಾದಿಂದ ಕಳಿಸಿದರೆ ನನಗೆ ಎಷ್ಟು ದಿನಕ್ಕೆ ಬಂದು ತಲುಪಬಹುದು? ಒಂದು ಕ್ಷಣ ಯೋಚನೆಯಾಯಿತಾದರೂ ನಂತರ ನಾನು ಯಾವಾಗಲೂ ಹೇಳಿಕೊಳ್ಳುವಂತೆ ‘ಮುಂದಿನ ಜನ್ಮದಲ್ಲಿ ಸಿಗಬಹುದು ಬಿಡು,’ ನನಗೆ ನಾನೇ ಹೇಳಿಕೊಂಡು ಸಮಾಧಾನ ಮಾಡಿಕೊಂಡೆ. ಆದರೆ ಈ ಮಾತುಕತೆ ನಡೆದು ನಾಲ್ಕನೇ ದಿನಕ್ಕೆ ನಾನು ಮನೆ ತಲುಪುವ ಹೊತ್ತಿಗೆ ಮನೆಯ ಮುಂದಿನ ಟಿಪಾಯಿಯ ಮೇಲೆ  ನನ್ನ ಖುಷಿ ಹೆಚ್ಚಿಸುವಂತೆ ಈ ಪುಸ್ತಕ ಕುಳಿತಿತ್ತು. ನನಗೆ ಅಚ್ಚಿರಿಯಾಗುವಂತೆ ನಾನು ಹೇಳಿದಂತೆ ಮುಂದಿನ ಜನ್ಮಕ್ಕೂ ಈ ಕಥೆಗೂ ತೀರಾ ಸಾಮ್ಯವಿದೆ.     ಇಡೀ ಕಥೆಯು ಅನಿವಾಸಿ ಭಾರತೀಯರ ಸುತ್ತ ಸುತ್ತುತ್ತ ಹೋಗುತ್ತದೆ. ಇಲ್ಲಿ ಕಥೆ ಹೇಳುವ ಪ್ರಥಮ ಪುರುಷ ಕಥೆಯನ್ನು ಕಥೆಯಾಗಿಸಲು ಒಂದು ವೇದಿಕೆ ಅಷ್ಟೆ. ಆದರೆ ಇಡೀ ಕಥೆ ನಮ್ಮನ್ನು ನಮ್ಮದೇ ಕಾಲಚಕ್ರದ ನಡುವಲ್ಲಿ ಕುಳ್ಳಿರಿಸಿ ಸುತ್ತುವಂತೆ ಮಾಡುತ್ತದೆ. ಯಾಕೆಂದರೆ ಘಟನೆ ನಡೆಯುವುದು ಅಮೇರಿಕಾದಲ್ಲೇ ಆದರೂ  ಕಾದಂಬರಿಕಾರರೇ ಒಂದು ಕಡೆ ಬಳಸಿರುವಂತೆ  ನಮ್ಮನ್ನು ಅರ್ಧ ಭೂಗೋಳ ಸುತ್ತಿಸಿ ಅಮೇರಿಕಾಕ್ಕೆ ಕರೆದೊಯ್ಯುವುದು ನಮ್ಮದೇ ಸುತ್ತಮುತ್ತಲಿನ ಪಾತ್ರಗಳು. ಕೇವಲ ಏಳೆಂಟು ಕಿ.ಮಿ ದೂರವಿರುವ ನಮ್ಮ ಪಾಲಿಗೆ ಪರಿಚಿತವೆಂದರೆ ಪರಿಚಿತವಲ್ಲದ, ಏನೂ ತಿಳಿಯದು ಎಂದು ಕೈ ಚೆಲ್ಲಿದರೂ ಯಾರೂ ನಂಬದ ಗೋಕರ್ಣದ ಪಿರ್ಕಿಬಾಬಾ ಎನ್ನುವವ ಹೇಳಿದ್ದ ಎನ್ನುವ ವಾಕ್ಯದಿಂದಲೇ ಪ್ರಾರಂಭವಾಗುತ್ತದೆ. ‘ಬದುಕಿದವರು ಸಾಯಲಾರರು, ಸಾಯುವವರು ಬದುಕಲಾರರು.’ ಎನ್ನುವ ಕಾದಂಬರಿಯ ಮೊದಲ ವಾಕ್ಯವೇ ಇಡೀ ಕಾದಂಬರಿಯನ್ನು ತನ್ನೊಳಗೆ ನಿಗೂಢವಾಗಿ ಬಚ್ಚಿಟ್ಟುಕೊಂಡಿದೆಯೇನೋ ಎಂಬಂತೆ ತೋರುತ್ತದೆ. ಅಂಕೋಲಾದ ಬಸ್ ಸ್ಟಾಂಡಿನಲ್ಲಿ ಯಾವಾಗಲೂ ಒಬ್ಬ ಹುಚ್ಚ ಇರುತ್ತಿದ್ದ. ನಾಕಾಣಿ ಕೊಡಾ… ಎನ್ನುತ್ತ ಬೇಡಲು ಬರುವ ಅವನಿಗೆ ನೀವು ನೂರು ರೂಪಾಯಿ ನೀಡಿದರೂ ತಿರಸ್ಕರಿಸಿ ಬಿಡುತ್ತಿದ್ದ. ಆತ ಕೇಳುವುದು ಕೇವಲ ನಾಲ್ಕಾಣೆ. ಅದಕ್ಕಿಂತ ಹೆಚ್ಚಿಗೆ ಕೊಟ್ಟರೆ ಅದು ಅವನಿಗೆ ಅಪಥ್ಯ. ಅದನ್ನು ನೋಡಿದಾಗಲೆಲ್ಲ ನಮಗೆ ತಮಾಷೆ. ನಾನು ಮತ್ತು ಗೆಳತಿ ರಾಜಶ್ರೀ ಹತ್ತು ರೂಪಾಯಿಯ ನೋಟು ಹಿಡಿದು, ‘ಹಿಡಿ ತಕ್ಕಾ. ಮಜಾ ಮಾಡ್…’ ಎನ್ನುತ್ತಿದ್ದರೆ ಆತ ಅದೇನೋ ವಿಷಸರ್ಪ ಎಂಬಂತೆ ಹತ್ತು ರೂಪಾಯಿಯ ನೋಟನ್ನು ಕಂಡು ಬೆಚ್ಚಿ ಬೀಳುತ್ತಿದ್ದ. ನಮಗೋ ಹತ್ತು ರೂಪಾಯಿಯನ್ನು ತಿರಸ್ಕರಿಸಿ ‘ನಾಕಾಣಿ ಕುಡಾ..’ ಎನ್ನುವ ಅವನು ಕೇವಲ ಹುಚ್ಚನಾಗಿ ಅಲ್ಲ, ಮಹಾ ಪಿರ್ಕಿಯಾಗಿ ಕಾಣುತ್ತಿದ್ದ. ನಂತರದ ದಿನಗಳಲ್ಲಿ ಅದೆಷ್ಟೋ ಸಲ ಯೋಚಿಸಿದ್ದೇನೆ. ಬದುಕಿಗೆ ಸಾಕಾಗುವ ನಾಲ್ಕಾಣೆಯನ್ನು ಬಿಟ್ಟು ನಾವು ನಮಗೆ ಬೇಕಿಲ್ಲದ ಹತ್ತು ರೂಪಾಯಿಯ ಹಿಂದೆ ಓಡುತ್ತಿದ್ದೇವೇನೋ ಎಂದು. ಇಲ್ಲಿನ ಕಥೆಯೂ ಇದಕ್ಕೆ ಅನುಗುಣವಾಗಿಯೇ ಇದೆ.     ಬದುಕಿನಲ್ಲಿ ಖುಷಿಯಾಗಿರುವುದಕ್ಕೆ ನಮಗೇನು ಬೇಕು? ಎಷ್ಟು ಹಣ ಬೇಕು? ಎಂತಹ ಅಧಿಕಾರ ಬೇಕು?  ಅಥವಾ ಎಂತಹ ಉದ್ಯೋಗ ಬೇಕು? ಇದು ಸಹಜವಾಗಿ ಎಲ್ಲರನ್ನೂ ಕಾಡುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಈ ವರ್ಷದ ಎಸ್.ಎಸ್.ಎಲ್.ಸಿ ಮುಗಿಸಿ ಮುಂದಿನ ಓದಿಗೆ ಹತ್ತನೇ ತರಗತಿಯ ವರ್ಗಾವಣೆ ಪತ್ರ ಪಡೆಯಲು ಬಂದಿದ್ದ ಹುಡುಗನೊಬ್ಬನನ್ನು ‘ಮುಂದೆ ಏನು ಮಾಡ್ತೀಯಪ್ಪಾ’ ಎಂದು ಸಹಜವಾಗಿ ಎಲ್ಲರನ್ನೂ ಕೇಳುವಂತೆಯೇ ಪ್ರಶ್ನಿಸಿದೆವು. ಆತ ಕೂಡ ಅದೊಂದು ಸಹಜ ವಿಷಯ ಎಂಬಂತೆ ‘ಪಿಯುಸಿ ಮುಗಿದ ಕೂಡಲೇ ಗಲ್ಫ್‌ಗೆ ಹೋಗಿ ಬಿಡ್ತೇನೆ ಟೀಚರ್, ಅಲ್ಲಿ ಹೋದರೆ ಜಾಸ್ತಿ ದುಡಿದು, ಹಣ ಸಂಪಾದನೆ ಮಾಡಬಹುದು.’ ಎಂದ. ಯಾಕೆಂದರೆ ಅವನ ಮನೆಯಲ್ಲಿ ಈಗಾಗಲೆ ಬಹಳಷ್ಟು ಜನ ಉದ್ಯೋಗದ ನಿಮಿತ್ತ ಹೊರದೇಶಗಳಿಗೆ ಹೋಗಿದ್ದಾರೆ. ಪಿಯುಸಿ ಮುಗಿಸಿದ ತಕ್ಷಣವೇ ಒಂದು ಪಾಸ್‌ಪೋರ್ಟ್ ಮಾಡಿಸಿ, ವೀಸಾ ಮಾಡಿಕೊಂಡು ಹೊರಟು ಬಿಡುವ ಅದೆಷ್ಟೋ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಹಾಗಾದರೆ ಭಾರತಕ್ಕಿಂತ ಅಲ್ಲಿ ಅವರ ಜೀವನಮಟ್ಟ ಒಳ್ಳೆಯದಾಗಿರುತ್ತದೆಯೇ? ಅಥವಾ ಭಾರತಕ್ಕಿಂತ ಸುಖೀ ಜೀವನ ನಡೆಸಲು ಸಾಧ್ಯವೇ? ಹಾಗೆಂದು ನಿಖರವಾಗಿ ಹೇಳಲು ಬರುವುದೇ ಇಲ್ಲ. ಇಲ್ಲಿ ಯಾವ್ಯಾವುದೋ ಕನಸನ್ನು ಇಟ್ಟುಕೊಂಡು ಹೋದವರು ಅಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿಯೋ, ಕಸ ಬಳಿಯಲೋ ಅಥವಾ ಅದಕ್ಕಿಂತ ಕನಿಷ್ಟ ಕೆಲಸಗಳಿಗೆ ನೇಮಕವಾದ ವಿಷಯ ಊರಿನ ಬಾಯಿಂದ ನುಣುಚಿಕೊಳ್ಳುವುದಿಲ್ಲ. ಆದರೆ ಮೂರು ವರ್ಷಗಳ ನಂತರ ಭಾರತಕ್ಕೆ ಹಿಂದಿರುಗಿದಾಗ ಮಾತ್ರ ಅವರಿಗೆ ರಾಜ ಮರ್ಯಾದೆ ದೊರಕುತ್ತದೆ. ಅಂತೂ ಓದಿದಾಗ ಈ ಎಲ್ಲಾ ವಿಷಯಗಳೂ ಕಣ್ಣಿಗೆ ಕಟ್ಟುತ್ತವೆ. ಅಮೇರಿಕಾದಂತಹ ದೇಶಗಳಲ್ಲಿ ನಮ್ಮ ವಿದ್ಯೆಯನ್ನು ಅಡವಿಟ್ಟುಕೊಳ್ಳುವ ಪ್ರಕ್ರಿಯೆಯ ಚಂದದ ಚಿತ್ರಣವಿದೆ.                    ಇಲ್ಲಿ ಪ್ರಥಮ ಪುರುಷದಲ್ಲಿ ಬರುವ ನಿರೂಪಣೆಗಾರ ಕಾದಂಬರಿಗೆ ಒಂದು ಕುತೂಹಲದ ಪ್ರವೇಶಿಕೆಯನ್ನು ಹಾಕಿಕೊಡುತ್ತಾನೆ. ಅಲ್ಲೇ ಸನಿಹದಲ್ಲಿರುವ ಭಾರತೀಯ ಮೂಲದ ಕೌಶಿಕ್ ಕೃಷ್ಣ ಎನ್ನುವ ಜೀವ-ಭೌತ ವಿಜ್ಞಾನಿಯ ಹೆಂಡತಿ ಆಡ್ರಿಯಾನಾಳ ಆತ್ಮಹತ್ಯೆಯ ಕುರಿತಾಗಿ ಪೇಪರ್‌ನಲ್ಲಿ ಬಂದ ವಿಷಯವನ್ನು ಆಧರಿಸಿ ಲೇಖನ ಬರೆದು, ಅದಕ್ಕೆ ಒಬ್ಬ ಭಾರತೀಯ ಮೂಲದವನೇ ಆದ ಇನ್ನೊಬ್ಬನ ತೀಕ್ಷ್ಣ ಪ್ರತಿಕ್ರಿಯೆ ಬಂದಾಗಲೇ ಅರಿವಾಗುವುದು ಇದು ಸುಲಭದಲ್ಲಿ ಅರಿವಾಗದ ಚಕ್ರವ್ಯೂಹ ಎಂಬುದು. ಇಲ್ಲಿ ಪ್ರಕಾಶ ನಾಯಕರು ಬಳಸಿರುವ ಮಾತು ಮತ್ತು ಭಾಷೆಯನ್ನು ಗಮನಿಸಬೇಕು. ಒಬ್ಬ ನುರಿತ ತತ್ವಶಾಸ್ತ್ರ ಪ್ರಾಧ್ಯಾಪಕನು ತರಗತಿ ತೆಗೆದುಕೊಂಡಂತಿದೆ. ತನ್ನ ಸಹೋದ್ಯೋಗಿ ವಿವಿಯನ್‌ನ ಬಾಯಿಂದ ಆಡಿಸುವ ಈ ಮಾತುಗಳನ್ನೇ ಕೇಳಿ. ಹಾಗೆ ನೋಡಿದರೆ ಎಲ್ಲಾ ಕೊಲೆಗಳೂ ಆತ್ಮಹತ್ಯೆಗಳೇ. ತನ್ನ ಅಸ್ತಿತ್ವದಿಂದ ಬೇರೆಯವರಿಗೆ ಸಹಿಸಲಾಗದ ನಷ್ಟವೋ ಅಥವಾ ತನ್ನ ಸಾವಿನಿಂದ ಕಡೆಗಣಿಸಲಾಗದ ಲಾಭವೋ ಆಗುವಂತೆ ಮಾಡುವಲ್ಲಿ ಕೊಲೆಗೀಡಾಗುವವನ ಜವಾಬ್ಧಾರಿಯೇನು ಕಡಿಮೆಯೇ? ತನ್ನ ಸಾವಿನ ನಂತರ ಜೀವಂತ ಮನುಷ್ಯನನ್ನು ಅಪಮಾನದ ಬೇಗೆ ಅಥವಾ ಪಶ್ಚಾತ್ತಾಪದ ಉರಿಯಲ್ಲಿ ಬೇಯುವಂತೆ ಮಾಡುವುದು ಕೊಲೆಗಿಂತ ಹೇಯ. ಒಂದು ಕೊಲೆಯನ್ನು ಅಥವಾ ಆತ್ಮಹತ್ಯೆಯನ್ನು ಹೀಗೂ ನೋಡಬಹುದು ಎನ್ನುತ್ತದೆ. ಕಾದಂಬರಿಯ ತುಂಬ ಇಂತಹ ತರ್ಕ ವಿತರ್ಕಗಳು ತನ್ನ ಇರುವನ್ನು ಸಾಧಿಸುತ್ತಲೇ ಹೋಗುತ್ತದೆ.    ಕೌಶಿಕ್ ಕೃಷ್ಣ ತಾನಾಗಿಯೇ ಸಾವನ್ನು ತಂದುಕೊಳ್ಳುವ ಆ ಮೂಲಕ ಆತ್ಮವನ್ನು ಹಿಡಿದಿಟ್ಟುಕೊಂಡು  ಅದನ್ನು ಇನ್ನೊಂದು ಶರೀರಕ್ಕೆ ರವಾನಿಸುವ ಹೊಸ ಪ್ರಯೋಗವನ್ನು ಮಾಡುವ ನಿಟ್ಟಿನಲ್ಲಿ ಪೆಗಾಸಿಸ್ ಎನ್ನುವ ಯಂತ್ರವನ್ನು ಕಂಡು ಹಿಡಿಯುವುದು, ಅದಕ್ಕೆ ಎಲ್ಲವನ್ನೂ ವ್ಯವಹಾರದ ದೃಷ್ಟಿಯಿಂದಲೇ ನೋಡುತ್ತ, ಈ ತರಹದ ಆಧ್ಯಾತ್ಮಿಕ ವಿಷಯಗಳನ್ನು ಒಪ್ಪದ ಅಭಿಜಿತ್ ಕಿಮಾನಿ ಹಣ ಹೂಡುವುದು ಎಲ್ಲವೂ ವಿಚಿತ್ರವೇ. ಅವನ ಆಫೀಸಿನಲ್ಲಿ ಎಲ್ಲಿಯೂ ಸರಿಯಾಗಿ ಕೆಲಸ ಮಾಡದ, ಅಲೆಮಾರಿಯಾಗಿಯೇ ಬದುಕಬೇಕೆನ್ನುತ್ತ ಕೇವಲ ವಾರ, ತಿಂಗಳುಗಳ ಲೆಕ್ಕದಲ್ಲಿ ಕೆಲಸ ಮಾಡುವ ದಿಗಂಬರ ಸೇರಿಕೊಳ್ಳುವುದೂ ಕೂಡ. ಇಲ್ಲಿಯೇ ಅಮೇರಿಕಾದಲ್ಲಿರುವ ಭಾರತೀಯರ ಜೀವನದ ಅನಾವರಣವಾಗುತ್ತದೆ. ‘ಅಮೇರಿಕಾದಲ್ಲಿದ್ದಾನೆ. ಇಂಜಿನಿಯರ್.’ ಎಂದುಕೊಳ್ಳುತ್ತ ಇಲ್ಲಿಯವರು ಮೆರೆಸುವಾಗ ಅಲ್ಲಿ ಒಂದು ಹೊತ್ತಿನ ಊಟಕ್ಕೂ ತತ್ವಾರ ಪಡುವುದೂ ಇದೆ. ಮಕ್ಕಳನ್ನು ಓದಿಸಿ ಪರದೇಶಿಗಳನ್ನಾಗಿ ಮಾಡುವ ತಂದೆ ತಾಯಿಯರು ಇದನ್ನು ಒಮ್ಮೆಯಾದರೂ ಓದಬೇಕು ಎಂದೆನ್ನಿಸುತ್ತದೆ.    ಕೌಶಿಕ್ ಕೃಷ್ಣನ ಪ್ರಯೋಗಕ್ಕಾಗಿ ಹಣ ಹಾಗೂ ಪ್ರಾಜೆಕ್ಟ್ ಮಾಡಲು ಸಮಯ ಹಾಗೂ ಸ್ಥಳವನ್ನು ಮೀಸಲಿಟ್ಟ ಅಭಿಜಿತ್ ಕಿಮಾನಿ ನಂತರ ಇಡೀ ಪ್ರಾಜೆಕ್ಟ್‌ನ್ನೇ ಮಾರಿ ಬಿಡುತ್ತಾನೆ. ಆದರೆ ಕೌಶಿಕ್ ಕೃಷ್ಣನಿಗೆ ಅದೇನೂ ಒಪ್ಪಿಗೆಯಾದ ಕೆಲಸವಲ್ಲ. ಹೀಗಾಗಿ ಆತ ಪ್ರಯೋಗವನ್ನು ತನ್ನ ಮನೆಗೆ  ಸ್ಥಳಾಂತರಿಸಿಕೊಳ್ಳುತ್ತಾನೆ. ಅಲ್ಲಿ ಆತನೊಡನೆ ಕೆಲಸ ಮಾಡುವ ಉತ್ಸಾಹಿ ಯುವಕ ಅನ್ಸೆಲ್ಮೋ ಈ ಕೆಲಸಕ್ಕೆ ಸಹಕಾರ ನೀಡುತ್ತಾನೆ. ಆತನಿಗೆ ಕೌಶಿಕ್ ಕೃಷ್ಣನ ಕೆಲಸದ ಬಗ್ಗೆ ಯಾವ ಮಾಹಿತಿಯೂ ಇಲ್ಲದಿದ್ದರೂ ಆತ ಮತ್ತು ಆತನ ಜೊತೆಗೇ ವಾಸಿಸುತ್ತಿದ್ದ ಪ್ರೇಯಸಿ ಎಂಜಲಿತೋ ಇಡೀ ಪ್ರಯೋಗದ ಯಶಸ್ಸಿಗೆ ಕಂಕಣ ಬದ್ಧರಾಗುತ್ತಾರೆ. ಕೌಶಿಕ್ ಕೃಷ್ಣನ ಹೆಂಡತಿ ಎಡ್ರಿಯಾನ ಒಬ್ಬ ಅತ್ಯುತ್ತಮ ಚಿತ್ರಕಾರಳು. ಹಾಗೆ ನೋಡಿದರೆ ಕೌಶಿಕ್ ಕೃಷ್ಣ ಅಭಿಜಿತ್ ಕಿಮಾನಿಗೆ ಪರಿಚಯವಾದ್ದೇ ಇಂತಹ ಚಿತ್ರಕಲಾ ಪ್ರದರ್ಶನದಲ್ಲಿ. ಕೌಶಿಕ್ ಕೃಷ್ಣ ಹಾಗೂ ಆತನ ಹೆಂಡತಿ ಎಡ್ರಿಯಾನಾ ಇಬ್ಬರೂ ಸೇರಿ ಚಿತ್ರಿಸಿದ್ದ ಪೇಂಟಿಂಗ್‌ಗಳು ಹೊಸದೊಂದು ಸಂಚಲನವನ್ನೇ ಅಭಿಜಿತ ಕಿಮಾನಿಯಲ್ಲಿ ಮೂಡಿಸಿದ್ದವು. ಪ್ರತ್ಯೇಕ ಆಲೋಚನೆ, ಪ್ರತ್ಯೇಕ ನಂಬಿಕೆಗಳನ್ನು ಹೊಂದಿರುಹಿಬ್ಬರು ಜೊತೆಯಾಗಿ ಒಂದು ಕೆಲಸ ಮಾಡುವುದೆಂದರೆ ಅದು ಅದ್ಭುತವೇ ಸರಿ. ಅದರಲ್ಲೂ ಚಿತ್ರಕಲೆಯಂತಹ ಸೂಕ್ಷ್ಮ ಸಂವೇದನೆ ಬೇಡುವ ವಿಭಾಗದಲ್ಲಿ. ಆದರೆ ಕೌಶಿಕ್ ಕೃಷ್ಣ ಹಾಗೂ ಎಡ್ರಿಯಾನಾ ಚಿತ್ರಗಳು ಅದ್ವಿತೀಯವಾಗಿದ್ದವು ಮತ್ತು ಅಲ್ಲಿಯೂ ಕೌಶಿಕ್ ಕೃಷ್ಣ ಆತ್ಮ ಹಾಗೂ ದೇಹದ ಸಂಗಾತವನ್ನು, ಆತ್ಮವನ್ನು ಸಂರಕ್ಷಿಸಿ ಬೇರೆಡೆಗೆ ಅದನ್ನು ಜೀವಂತ ಗೊಳಸುವ ಕುರಿತಾಗಿಯೇ ತನ್ನ ಬಣ್ಣವನ್ನು ಬಳಸುತ್ತಿದ್ದುದು ವಿಚಿತ್ರ.   ಕೊನೆಗೆ ಅಭಿಜಿತ್ ಕಿಮಾನಿಯ ಇಂಡಸ್ ಕಂಪನಿಯಿಂದ ಫಿನಿಕ್ಸ್ ಎನ್ನುವ ಆತ್ಮವನ್ನು ಕಾಪಿಟ್ಟು ಬೇರೆ ದೇಹಕ್ಕೆ ಸ್ಥಳಾಂತರಿಸುವ ಯೋಜನೆಯಿಂದಾಗಿ ಅಭಿಜಿತ್ ವಿಚಾರಣೆಗೆ ಒಳಗಾಗಬೇಕಾಗುತ್ತದೆ, ಆತನ ತಂದೆ ಇನ್ನೆಂದೂ ಅಮೇರಿಕಾಕ್ಕೆ ಬರದಿರುವ ತೀರ್ಮಾನ ಕೈಗೊಂಡು ಭಾರತಕ್ಕೆ ಹಿಂದಿರುಗುತ್ತಾರೆ. ಆದರೆ ಕೊನೆಯಲ್ಲಿ ಅನ್ಸೆಲ್ಲೋ ಹೇಳುವ ಸತ್ಯ ಬೆಚ್ಚಿ ಬೀಳಿಸುತ್ತದೆ. ಅದನ್ನು ಬೆಂಬಲಿಸುವಂತೆ ಸ್ವತಃ ಕೌಶಿಕ್ ಕೃಷ್ಣನೇ ತನ್ನ ಪತ್ನಿ ಎಡ್ರಿಯಾನಾಳ ಆತ್ಮಹತ್ಯೆ ಯೋಜಿತವಾದ್ದು ಹಾಗೂ ಪೆಗಾಸಿಸ್ ಯಂತ್ರ ಅವಳ ಆತ್ಮವನ್ನು ಅನೆಲ್ಲೋನ ಪ್ರೇಯಸಿ ಎಂಜಲಿತೋಳ ದೇಹಕ್ಕೆ ಯಶಸ್ವಿಯಾಗಿ ಸೇರಿಸಿದೆಯೆಂದು ಹೇಳುತ್ತಾನೆ. ಇದಕ್ಕೂ ಮೊದಲೇ ಬರುವ ಇಂಡಸ್ ಕಂಪನಿಯ ಸ್ವಾಗತಕಾರಿಣಿಯಾಗಿರುವ ಸೋಫಿಯಾಳ ನಾಯಿ ಅಲೆಕ್ ಒಂದು ದಿನ ಹಠಾತ್ ಆಗಿ ಯಾವುದೇ ಸೂಚನೆ ನೀಡದೆ ಸಾವಿಗೀಡಾಗಿದ್ದು ಮತ್ತು ಪೆಗಾಸಿಸ್ ಯಂತ್ರದ ಕಾರ್‍ಯ ವೈಖರಿ ತಿಳಿಯಲು ಹೋಗಿದ್ದ ಗಿಲ್ಟನ್ ಸಡನ್ನಾಗಿ ಹಾರ್ಟ್ ಅಟ್ಯಾಕ್‌ಗೆ ಒಳಗಾಗಿದ್ದು ಈ ಯಂತ್ರದ ನಿಜಾಯತಿಯನ್ನು ಸಾಬೀತುಪಡಿಸುತ್ತವೆಯೋ ಎನ್ನುವಂತಿದ್ದರೂ ಅದೇ ಫಿನಿಕ್ಸ್ ಪ್ರಾಜೆಕ್ಟಿಗೆ ಡಾಟಾ ಸಂಗ್ರಹಿಸಿ ತರ್ಕಕ್ಕೆ ಹಚ್ಚುವ ದಿಗಂಬರ ಕೊನೆಯವರೆಗೂ ನಂಬುವುದಿಲ್ಲ ಅನ್ನುವುದೂ ಅಷ್ಟೇ ಸತ್ಯ.      ಕಾದಂಬರಿಯ ಒಟ್ಟೂ ಓಟ ಓದುಗನನ್ನು ಖುರ್ಚಿಯ ತುದಿಯಲ್ಲಿ ಕುಳಿತು ಓದುವಂತೆ ಮಾಡುತ್ತದೆ. ಒಮ್ಮೆ ಓದಲು ಪ್ರಾರಂಭಿಸಿದ ನಂತರ ಮುಂದೇನಾಗುತ್ತದೆ ಎನ್ನುವ ಕುತೂಹಲವನ್ನು ಹೆಚ್ಚಿಸುತ್ತಲೇ ಹೋಗಿ ಕೊನೆಯವರೆಗೂ ಪುಸ್ತಕವನ್ನು ಕೆಳಗಿಡಲಾಗದಂಥಹ ಒತ್ತಡವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ. ಇಲ್ಲಿನ ಪ್ರತಿ ಮಾತು, ಪ್ರತಿ ನಡತೆಯೂ ನಮ್ಮೊಳಗೇ ಹಾಸು ಹೊಕ್ಕಾಗಿರುವ ಮಾತುಗಳೇನೋ ಎಂದುಕೊಳ್ಳುವಂತೆ ಅಥವಾ ನಮ್ಮೊಡನೆ ವ್ಯವಹರಿಸಿದ್ದ ಯಾರದ್ದಾದರೂ ಮಾತನ್ನು ನೆನಪಿಗೆ ತರುತ್ತದೆ. ಇಲ್ಲಿ ಪೊಕ್ಕೆ ಪಾಂಡು ಹೇಳುವಂತೆ ‘ಅರ್ಧ ಭೂಗೋಲ ದಾಟಿದರೂ ಕಾಸೀಮನ ದೋಸ್ತಿ ತಪ್ಪಲಿಲ್ಲ’ ಎನ್ನುವ ಮಾತು, ‘ಅಣ್ಣ ಹೇಳ್ತೆ ಕೇಳ್’ ಎಂದು ಪದೇ ಪದೇ ಹೇಳುವ ಇದೇ ಪೊಕ್ಕೆಪಾಂಡು ಇಲ್ಲೆಲ್ಲೋ ನಮ್ಮ ಪಕ್ಕದಲ್ಲೇ ಇದ್ದವರು ಎನ್ನುವ ಭಾವ ಹುಟ್ಟಿಸುತ್ತದೆ. ಯಾಕೆಂದರೆ ತನ್ನನ್ನೇ ತಾನು ಅಣ್ಣ ಎಂದು ಕರೆದುಕೊಳ್ಳುವವರನ್ನು ನಮ್ಮೂರ ಕಡೆ ಪೊಕ್ಕೆ ಎನ್ನುವುದು ಸಹಜವಾದ ಮಾತು. ಕಿಮಾನಿ ಎನ್ನುವ ಸನಿಹದ ಊರಿನ ಹೆಸರೂ ಕೂಡ ಒಂದು ರೀತಿಯ ತಾದ್ಯಾತ್ಮವನ್ನು ಕಾದಂಬರಿಗೆ ನೀಡಿಬಿಡುತ್ತದೆ.     ಇಷ್ಟೆಲ್ಲ ಆದನಂತರ ಮತ್ತೊಂದು ಹೇಳಲೇಬೇಕಾದ ಮಾತಿದೆ. ಇಲ್ಲಿ ಬರುವ ವಿವರಣೆಗಳು ನಮಗೆ ಇಂಚಿಂಚಾಗಿ ಆ

Read Post »

ಅಂಕಣ ಸಂಗಾತಿ, ಸಂಪ್ರೋಕ್ಷಣ

ಅಂಕಣ ಬರಹ ಅಂಜನಾ ಬರೆಯುತ್ತಾರೆ ಜಗಲಿಯೆನ್ನುವ ಮೊದಲಪ್ರೇಮ ಸೂರ್ಯ ಮೂಡುವ ಹೊತ್ತು ಬರಿಗಾಲಲ್ಲಿ ಒಮ್ಮೆ ಅಂಗಳಕ್ಕಿಳಿದು ನೋಡಿ. ಮಣ್ಣಿನೊಂದಿಗಿನ ಮೊದಲಪ್ರೇಮದ ಸ್ಪರ್ಶ ಅಂಗಾಲುಗಳನ್ನು ತಾಕಿ ಹೃದಯವನ್ನು ಸೋಕುತ್ತದೆ; ಬಾಗಿಲುಗಳಾಚೆ ಬಂದು ಸುರಿವ ಮಳೆಗೆ ಒಮ್ಮೆ ಮುಖವನ್ನೊಡ್ಡಿ ನೋಡಿ. ಮಳೆಯೊಂದಿಗಿನ ಮೊದಲಪ್ರೇಮದ ಸುಖ ಮುಂಗುರುಳನ್ನು ತೋಯಿಸಿ ಹನಿಹನಿಯಾಗಿ ನೆಲಕ್ಕಿಳಿಯುತ್ತದೆ; ಒಂದು ಏಕಾಂತದ ಸಂಜೆಯಲ್ಲಿ ಸದ್ದಿಲ್ಲದೆ ಅರಳುತ್ತಿರುವ ಜಾಜಿಯ ಮೊಗ್ಗುಗಳನ್ನು ಅಂಗೈಯಲ್ಲಿ ಹಿಡಿದು ನೋಡಿ. ಪರಿಮಳದೆಡೆಗಿನ ಮೊದಲಪ್ರೇಮದ ಭಾವ ಇಂದ್ರಿಯಗಳ ಹಂಗು ತೊರೆದು ಗಾಳಿಯೊಂದಿಗೆ ತೇಲಿ ಹಗುರಾಗುತ್ತದೆ. ಮೃದುವಾದ ಪುಟ್ಟಪುಟ್ಟ ಕಾಲುಗಳಿಗೆ ಅಮ್ಮ ತೊಡಿಸಿದ ಗೆಜ್ಜೆ, ದೀಪಾವಳಿಗೆಂದು ಅಪ್ಪ ಕೊಡಿಸಿದ ಉದ್ದತೋಳಿನ ಫ್ರಾಕು, ಶನಿವಾರದ ಕೊನೆಯ ಕ್ಲಾಸು ತಪ್ಪಿಸಿ ಹೊಟೆಲಿಗೆ ಹೋಗಿ ತಿಂದ ಮಸಾಲೆದೋಸೆ, ಸಿಟಿಬಸ್ಸಿನಲ್ಲಿ ಎದುರಾಗುತ್ತಿದ್ದ ಹುಡುಗನ ನೀಲಿಬಣ್ಣದ ಅಂಗಿ ಎಲ್ಲವೂ ಮೊದಲಪ್ರೇಮವೆನ್ನುವ ಸುಂದರ ಅನುಭೂತಿಯ ಭಾಗವಾಗಿ ಬದುಕನ್ನು ಆವರಿಸಿಕೊಳ್ಳುತ್ತವೆ. ಅಕ್ಕನ ಮದುವೆಯಲ್ಲಿ ಮುಡಿದ ಮಲ್ಲಿಗೆಮಾಲೆಯಿಂದ ಹಿಡಿದು ಸಂಧ್ಯಾವಂದನೆಯ ಧೂಪದಾರತಿಯವರೆಗೂ ಮೊದಲಪ್ರೇಮದ ನರುಗಂಪು ನೆನಪಿನ ಜಗಲಿಯಲ್ಲಿ ತೇಲುತ್ತಲೇ ಇರುತ್ತದೆ.           ಈ ಜಗಲಿಯೆಡೆಗಿನ ನನ್ನ ಪ್ರೇಮವೂ ನಿನ್ನೆ-ಮೊನ್ನೆಯದಲ್ಲ. ಪಕ್ಕದಮನೆಯ ಪುಟ್ಟ ಮಗುವೊಂದು ಅಂಬೆಗಾಲಿಡುತ್ತ ಜಗಲಿಯ ಕಂಬಗಳನ್ನು ಸುತ್ತುವಾಗಲೆಲ್ಲ, ನನ್ನ ಬಾಲ್ಯವೂ ಹೀಗೆ ಸ್ವಚ್ಛಂದವಾಗಿ ಜಗಲಿಯ ಮೇಲೆ ಹರಡಿಕೊಂಡಿದ್ದ ಗಳಿಗೆಯನ್ನು ನೆನೆದು ಪುಳಕಗೊಳ್ಳುತ್ತೇನೆ; ನೆನಪುಗಳಿಗೆ ದಕ್ಕಿರದ ಅವೆಷ್ಟೋ ಸಂಗತಿಗಳು ವಾಸ್ತವದಲ್ಲಿ ಕಣ್ಣೆದುರೇ ಕುಣಿದಾಡುತ್ತ, ಪುಟ್ಟಪುಟ್ಟ ಹೆಜ್ಜೆಗಳನ್ನಿಟ್ಟು ಅನುಭವಗಳಾಗಿ ಜಗಲಿಗಿಳಿಯುವ ವಿಸ್ಮಯಕ್ಕೆ ಚಕಿತಗೊಳ್ಳುತ್ತೇನೆ. ಹಾಗೆ ನಡೆದಾಡುವ ಅನುಭವಗಳ ಸ್ವರೂಪ ಕಾಲಕಾಲಕ್ಕೆ ಬದಲಾಗಿರಬಹುದಾದರೂ, ಅವುಗಳ ಸೌಂದರ್ಯ ಕಳೆಗುಂದಿದ್ದನ್ನು ಎಂದಿಗೂ ಕಂಡಿಲ್ಲ. ಜಗಲಿಯ ದಾಸ್ತಾನುಗಳ ಮಾಲೀಕನಂತಿರುವ ಮರದ ಟಿಪಾಯಿಯ ಮೇಲಿನ ದಿನಪತ್ರಿಕೆ-ವಾರಪತ್ರಿಕೆಗಳ ಜಾಗವನ್ನು ಮೊಬೈಲುಗಳು, ಟಿವಿ ರಿಮೋಟುಗಳು ಆಕ್ರಮಿಸಿಕೊಂಡಿರಬಹುದು; ಮಹಾರಾಜರ ಗತ್ತಿನಲ್ಲಿ ಕುಳಿತಿರುತ್ತಿದ್ದ ಆರಾಮಕುರ್ಚಿಗಳ ಜಾಗದಲ್ಲಿ ಅಂದದ ಮೈಕಟ್ಟಿನ ಸೋಫಾಸೆಟ್ಟುಗಳು ವಿರಾಜಿಸುತ್ತಿರಬಹುದು; ಲಾಟೀನುಗಳನ್ನು ಟ್ಯೂಬ್ ಲೈಟುಗಳು, ಮಣ್ಣಿನ ನೆಲವನ್ನು ಮಾರ್ಬಲ್ಲುಗಳು, ರೇಡಿಯೋಗಳನ್ನು ಲ್ಯಾಪ್ಟಾಪುಗಳು ರಿಪ್ಲೇಸ್ ಮಾಡಿರಬಹುದಾದರೂ, ಆ ಮಾರ್ಪಾಡಿನ ಪ್ರಕ್ರಿಯೆಯಲ್ಲಿ ಜಗಲಿಯೆಂದೂ ತನ್ನ ನೈಜತೆಯ ಖುಷಿಯನ್ನು ಕಳೆದುಕೊಳ್ಳುವುದಿಲ್ಲ. ಎಲ್ಲ ಬದಲಾವಣೆಗಳಿಗೂ ಭಯವಿಲ್ಲದೆ ತನ್ನನ್ನು ಒಡ್ಡಿಕೊಳ್ಳುವ ಜಗಲಿ ಮನೆಯೊಳಗಿಂದ ಹೊರಗೆ ಬಂದವರಿಗೊಂದು ಬಿಡುವಿನ ಸಡಗರ ಒದಗಿಸುತ್ತ, ಹೊರಗಿನಿಂದ ಒಳಬಂದವರನ್ನು ತೆರೆದ ಹೃದಯದಿಂದ ಸ್ವಾಗತಿಸುತ್ತ ಒಳಗು-ಹೊರಗುಗಳ ಅನುಬಂಧವನ್ನು ಹಿಡಿದಿಡುವ ಬಂಧುವಿನಂತೆ ಭಾಸವಾಗುತ್ತದೆ.           ಎಲ್ಲ ಅನುಬಂಧಗಳ ಹುಟ್ಟು, ಬೆಳವಣಿಗೆಗಳು ಸಂಭವಿಸುವುದು ಜಗಲಿಯಲ್ಲಿಯೇ ಎನ್ನುವ ಬಲವಾದ ನಂಬಿಕೆಯಿದೆ ನನಗೆ. ಆರಾಮಕುರ್ಚಿಯಲ್ಲಿ ಪೇಪರ್ ಓದುತ್ತ ಕುಳಿತಿದ್ದ ಅಪ್ಪನ ಕಾಲನ್ನು ಹಿಡಿದುಕೊಂಡು ನಾನು ಮೊದಲಸಲ ನನ್ನ ಕಾಲುಗಳ ಮೇಲೆ ನಿಂತಿದ್ದಿರಬಹುದು; ದೊಡ್ಡಪ್ಪನ ಕಿರುಬೆರಳನ್ನು ಹಿಡಿದು ಜಗಲಿಯ ತುಂಬ ಓಡಾಡಿದ ಮೇಲೆಯೇ ಎತ್ತಿಡುವ ಹೆಜ್ಜೆಗಳಿಗೊಂದು ಧೈರ್ಯ ಬಂದಿರಬಹುದು; ಅದೇ ಜಗಲಿಯ ಕಂಬಗಳ ಸುತ್ತ ಕಟ್ಟಿಕೊಂಡ ಬಂಧನಗಳೇ ಜಗತ್ತನ್ನೆದುರಿಸುವ ಚೈತನ್ಯವನ್ನು ಒದಗಿಸಿರಬಹುದು. ಹೀಗೆ ಹೊರಗೆ ಎತ್ತಿಟ್ಟ ಪ್ರತಿ ಹೆಜ್ಜೆಯನ್ನೂ ಹಗುರಾಗಿಸಿಕೊಳ್ಳುವ ಪಾಠವೊಂದನ್ನು ಜಗಲಿ ಗುರುವಿನ ಜಾಗದಲ್ಲಿ ನಿಂತು ಕಲಿಸಿಕೊಡುತ್ತದೆ. ಆ ಕಲಿಕೆಯ ಭಾಗವಾಗಿ ನೆನಪುಗಳು, ಅನುಭವಗಳು, ಅನುಬಂಧಗಳೆಲ್ಲವೂ ಅವುಗಳ ಕರ್ತವ್ಯವನ್ನು ನಿಭಾಯಿಸುತ್ತಿರುತ್ತವೆ. ಜಗಲಿಯ ಬಾಗಿಲಿನಲ್ಲೊಂದು ರಂಗೋಲಿ ಒಮ್ಮೆ ಅಳಿದರೂ ಮತ್ತೆ ಕೈಗಂಟಿಕೊಳ್ಳುವ ಬದುಕಿನ ಚಿತ್ತಾರವಾಗಿ, ಅದರ ಮೇಲೊಂದು ಹೂವು ಬಾಡುವ ಸಂಗತಿಯನ್ನು ಸಹಜಕ್ರಿಯೆಯಾಗಿಸಿ ಮತ್ತೊಮ್ಮೆ ಅರಳುವ ಕನಸಾಗಿ, ಪಕ್ಕದಲ್ಲೊಂದು ನೀರಿನ ಗಿಂಡಿ ಆಗಾಗ ಬರಿದಾಗುತ್ತ ಮತ್ತೆ ತುಂಬಿಕೊಳ್ಳುವ ಪ್ರಕೃತಿಯಾಗಿ ಜಗಲಿಯ ಮೇಲೊಂದು ಸಹಜ-ಸುಂದರ ಬದುಕಿನ ಚಿತ್ರಣ ರೂಪುಗೊಳ್ಳುತ್ತದೆ. ಬಾಗಿಲ ಮೇಲೊಂದು ಅಜ್ಜನ ಭಾವಚಿತ್ರ ಕೊಲಾಜಿನಂತಹ ಜಗಲಿಯ ಬದುಕುಗಳನ್ನು ಸಹನೆಯಿಂದ ಕಾಯುತ್ತಿರುತ್ತದೆ. ಹೀಗೆ ಜಗಲಿಯ ಮೇಲೆ ದಿನ ಬೆಳಗಾದರೆ ತೆರೆದುಕೊಳ್ಳುವ ಚಿತ್ರಣವೇ ಬಯಲಿಗಿಳಿವ ಬದುಕುಗಳ ಬೆನ್ನಹಿಂದೆ ನಿಂತು, ಅಗತ್ಯ ಬಂದಾಗ ಆಚೀಚೆ ಚಲಿಸಿ ಬೆರಗಿನ ದರ್ಶನವನ್ನು ಮಾಡಿಸುತ್ತಿರುತ್ತದೆ.           ಈ ಜಗಲಿಯ ಬದುಕಿನೊಂದಿಗೆ ನಮ್ಮ ಬದುಕನ್ನು ಜೋಡಿಸಿಕೊಂಡಾಗಲೇ ಅದೊಂದು ಬೆರಗು ಎನ್ನುವ ಅರಿವು ಸಾಧ್ಯವಾದೀತು. ಶಾಲೆಗೆ ಹೋಗುವುದೊಂದು ಬೇಸರದ ಸಂಗತಿಯೆನ್ನಿಸಿದಾಗ ಜಗಲಿಯ ಮೂಲೆಯಲ್ಲಿ ಗೋಡೆಗೆ ಆತು ನಿಂತಿರುತ್ತಿದ್ದ ಕೇರಂ ಬೋರ್ಡು ಎಲ್ಲ ಬೇಸರಗಳನ್ನೂ ಹೋಗಲಾಡಿಸುತ್ತಿತ್ತು. ಸಂಜೆ ಶಾಲೆಯಿಂದ ಮನೆಗೆ ಹಾಜರಾಗುತ್ತಿದ್ದಂತೆಯೇ ಜಗಲಿಯ ಮೇಲೊಂದು ಕಂಬಳಿ ಹಾಸಿ, ಬೋರ್ಡಿನ ಮೇಲೆ ರಾಣಿಯನ್ನು ಪ್ರತಿಷ್ಠಾಪಿಸಿ ಆಟಕ್ಕೆ ಕುಳಿತರೆ ಪ್ರಪಂಚದ ಸಕಲ ಸಂತೋಷಗಳೂ ಜಗಲಿಗೆ ಹಾಜರಾಗುತ್ತಿದ್ದವು. ಗಣಿತದ ಮಾಸ್ತರು ಕಷ್ಟಪಟ್ಟು ಕಲಿಸಿದ ಲೆಕ್ಕಾಚಾರಗಳೆಲ್ಲ ಕಪ್ಪು-ಬಿಳಿ ಬಿಲ್ಲೆಗಳ ಮಧ್ಯದಲ್ಲಿ ಸಿಕ್ಕು ತಲೆಕೆಳಗಾಗಿ, ಮರುದಿನ ಮತ್ತೆ ಶಾಲೆಯ ಮೆಟ್ಟಿಲೇರಿದಾಗಲೇ ಲೆಕ್ಕಕ್ಕೆ ಸಿಗುತ್ತಿದ್ದವು. ಜಗಲಿಯ ಮೇಲಿನ ಮಕ್ಕಳ ಸಂಖ್ಯೆ ನಾಲ್ಕಕ್ಕಿಂತ ಜಾಸ್ತಿಯಾದಾಗ ರಾಣಿಯನ್ನು ಮರೆತು ಕತ್ತೆಯ ಸವಾರಿ ಶುರುವಾಗುತ್ತಿತ್ತು. ಹಿರಿಯರ ಕಣ್ಣು ತಪ್ಪಿಸಿ ಎತ್ತಿಟ್ಟುಕೊಂಡಿರುತ್ತಿದ್ದ ಹಳೆಯ ಇಸ್ಪೀಟು ಕಟ್ಟುಗಳನ್ನು ಹೊಸದಾಗಿ ಜೋಡಿಸಿಕೊಂಡು ಕತ್ತೆಯಾಗುವ, ಕತ್ತೆಯಾಗಿಸಿ ಖುಷಿಪಡುವ ಆಟವನ್ನು ಕಲಿಸಿಕೊಟ್ಟವರ ನೆನಪಿಲ್ಲ. ಅದೊಂದು ಪರಂಪರಾನುಗತ ಸಂಪ್ರದಾಯವೆನ್ನುವಂತೆ ಕಲಿತು, ಕಿರಿಯರಿಗೂ ಕಲಿಸಿ, ಜಗಲಿಯನ್ನೇ ಶಾಲೆಯನ್ನಾಗಿಸಿಕೊಳ್ಳುತ್ತಿದ್ದ ಬಾಲ್ಯದ ನೆನಪುಗಳನ್ನೆಲ್ಲ ಜಗಲಿ ಜಾಗರೂಕತೆಯಿಂದ ಜೋಪಾನ ಮಾಡುತ್ತದೆ.           ನೆನಪುಗಳೆಲ್ಲ ಚದುರಿಹೋಗಿ ಬದುಕು ತಲ್ಲಣಿಸುವ ಸಮಯದಲ್ಲೂ ಜಗಲಿಯಲ್ಲಿ ದೊರೆಯುವ ನೆಮ್ಮದಿ ಶಬ್ದಗಳಾಚೆ ನಿಲ್ಲುವಂಥದ್ದು. ಹೊರಬಾಗಿಲಿನಲ್ಲಿ ಚಪ್ಪಲಿ ಕಳಚಿ ಜಗಲಿಯ ತಣ್ಣನೆಯ ಸ್ಪರ್ಶವನ್ನು ನಮ್ಮದಾಗಿಸಿಕೊಂಡ ಮರುಕ್ಷಣವೇ, ಎಲ್ಲ ತಲ್ಲಣಗಳನ್ನು ತಣಿಸುವ ಜೀವಶಕ್ತಿಯಾಗಿ ಜಗಲಿ ನಮ್ಮನ್ನಾವರಿಸಿಕೊಳ್ಳುತ್ತದೆ. ಅಕ್ಕನ ಮದುವೆಯಲ್ಲಿ ಜಗಲಿಯ ಮೇಲೆ ಹಾಸಿದ್ದ ಜಮಖಾನದ ಮೇಲೆ ಕಾಲುಚಾಚಿ ಕುಳಿತಿದ್ದ ಕನಸಿನಂತಹ ಹುಡುಗ ಎದೆಯಲ್ಲೊಂದು ನವಿರಾದ ಭಾವವನ್ನು ಮೂಡಿಸಿ, ಮುಡಿದಿದ್ದ ಮಲ್ಲಿಗೆಮಾಲೆಯ ಪರಿಮಳದೊಂದಿಗೆ ಬೆರೆತುಹೋಗಿದ್ದ ನೆನಪು ಮತ್ತದೇ ಮೊದಲಪ್ರೇಮದ ಹಗುರಾದ ಅನುಭವವನ್ನು ಒದಗಿಸುತ್ತದೆ; ಮದುವೆಯಾಗಿ ದೂರದ ಊರಿಗೆ ಹೋದ ಅಕ್ಕ ವರುಷಕ್ಕೊಮ್ಮೆ ಭಾವನೊಂದಿಗೆ ಬಂದಾಗ, ನೀರು ತುಂಬಿದ ತಂಬಿಗೆಯನ್ನು ಅವರೆದುರಿಗಿಟ್ಟು ಬಗ್ಗಿ ನಮಸ್ಕಾರ ಮಾಡಿ ಸ್ವಾಗತಿಸುತ್ತಿದ್ದ ಸೊಗಸಾದ ಸಂಪ್ರದಾಯವೊಂದು ಜಗಲಿಯ ತುಂಬ ಸರಿದಾಡಿದಂತಾಗಿ ಹೊಸ ಹುರುಪೊಂದು ಹೃದಯವನ್ನಾವರಿಸುತ್ತದೆ; ಅಕ್ಕನ ಮಕ್ಕಳನ್ನು ಕೈಹಿಡಿದು ನಡೆಯಲು ಕಲಿಸಿದ, ಮಡಿಲಲ್ಲಿ ಕೂರಿಸಿಕೊಂಡು ದೇವರ ಭಜನೆಯನ್ನು ಹಾಡಿದ, ಪುಟ್ಟಪುಟ್ಟ ಕೈಗಳಿಗೆ ಮದರಂಗಿಯನ್ನು ಹಚ್ಚಿ ಸಂಭ್ರಮಿಸಿದ ನೆನಪುಗಳೆಲ್ಲವೂ ಅದೆಲ್ಲಿಂದಲೋ ಹಾಜರಾಗಿ, ಜಮಖಾನವೊಂದು ರತ್ನಗಂಬಳಿಯಾಗಿ ಬದಲಾಗಿ ಅರಮನೆಯಂತಹ ವೈಭವ ಜಗಲಿಗೆ ಪ್ರಾಪ್ತಿಯಾಗುತ್ತದೆ. ದೊಡ್ಡಮ್ಮ ಮಾಡುತ್ತಿದ್ದ ಬಿಸಿಬಿಸಿಯಾದ ಗೋಧಿಪಾಯಸ, ದೊಡ್ಡಪ್ಪನೊಂದಿಗೆ ಕುಳಿತು ಬೆರಗಾಗಿ ನೋಡುತ್ತಿದ್ದ ರಾಮಾಯಣ-ಮಹಾಭಾರತ, ಪಲ್ಲಕ್ಕಿಯೊಳಗೆ ಕುಳಿತಿರುತ್ತಿದ್ದ ಹನುಮಂತನಿಗೆಂದು ದೂರದ ಗದ್ದೆಯಿಂದ ಕೊಯ್ದು ತರುತ್ತಿದ್ದ ಗೆಂಟಿಗೆ ಹೂವು, ದೀಪಾವಳಿಯ ರಾತ್ರಿ ಜಗಲಿಯುದ್ದಕ್ಕೂ ಉರಿಯುತ್ತಿದ್ದ ಹಣತೆಯ ಸಾಲು ಎಲ್ಲವೂ ಆ ವೈಭವದ ಮೆರವಣಿಗೆಯಲ್ಲಿ ಭಾಗವಹಿಸಿದಂತೆ ಭಾಸವಾಗಿ ಹಸನಾದ ಹೊಸ ಬದುಕೊಂದು ನಮ್ಮದಾದ ಭಾವ ಬೆಚ್ಚಗಾಗಿಸುತ್ತದೆ.           ಹೀಗೆ ಅಗತ್ಯಬಿದ್ದಾಗ ತಲ್ಲಣಗಳನ್ನು ತಣಿಸುತ್ತ, ಇನ್ನೊಮ್ಮೆ ಬದುಕು ಬೆಚ್ಚಗಿರುವ ಭರವಸೆಯನ್ನು ತುಂಬುತ್ತ ಜಗಲಿಯೆನ್ನುವ ಮೊದಲಪ್ರೇಮ ಬದುಕಿನುದ್ದಕ್ಕೂ ಕೈಹಿಡಿದು ನಡೆಯುತ್ತದೆ. ಮಣ್ಣಿನ ಜಗಲಿಯಲ್ಲಿ ಮಡಿಲಮೇಲೆ ಕುಳಿತಿರುತ್ತಿದ್ದ ಅಕ್ಕನ ಮಗ ಗ್ರಾನೈಟ್ ನೆಲದ ಫ್ಲೋರ್ ಕುಷನ್ನಿನ ಮೇಲೆ ಕುಳಿತು ಹೊಸ ಸಿನೆಮಾದ ಬಗ್ಗೆ ಚರ್ಚಿಸುತ್ತಾನೆ; ದೊಡ್ಡಮ್ಮನ ಗೋಧಿಪಾಯಸದ ರೆಸಿಪಿ ಹಳೆಯ ಡೈರಿಯ ಪುಟಗಳಲ್ಲಿ ಆತ್ಮಬಂಧುವಿನಂತೆ ಕುಳಿತು ತನ್ನ ಪಾಡಿಗೆ ತಾನು ಕಾಲ ಕಳೆಯುತ್ತಿರುತ್ತದೆ; ಮಹಾಭಾರತದ ಶ್ರೀಕೃಷ್ಣ  ರಾಧೆಯೊಂದಿಗೆ ಆಗಾಗ ಕನಸಿನಲ್ಲಿ ಕಾಣಿಸಿಕೊಳ್ಳುತ್ತಾನೆ; ದೀಪಾವಳಿಯ ಹಣತೆಗಳೆಲ್ಲ ಕ್ಯಾಂಡಲ್ ಲೈಟ್ ಡಿನ್ನರುಗಳಾಗಿ, ನಾಗರಪಂಚಮಿಯ ಮದರಂಗಿ ಪಾರ್ಲರುಗಳ ನೇಲ್ ಪಾಲಿಶ್ ಆಗಿ, ದೇವರ ಕಲ್ಪನೆಯೊಂದು ಸ್ನೇಹದಂಥ ಸುಮಧುರ ಸಾಂಗತ್ಯವಾಗಿ ಬದುಕುಗಳನ್ನು ಹೊಸತನದೆಡೆಗೆ ಹದಗೊಳಿಸುತ್ತವೆ. ಜಗಲಿಯಲ್ಲಿ ಕಾಲುಚಾಚಿ ಕುಳಿತಿದ್ದ ಹುಡುಗನ ನೆನಪು ಮಲ್ಲಿಗೆಮಾಲೆಯಾಗಿ ಬಾಗಿಲುಗಳ ಮೇಲೆ ತೂಗುತ್ತಿರುತ್ತದೆ. *********************************** ಮೂಲತ: ಉತ್ತರ ಕನ್ನಡದವರಾದ ಅಂಜನಾ ಹೆಗಡೆಯವರು ಸದ್ಯ ಬೆಂಗಳೂರಲ್ಲಿ ನೆಲೆಸಿರುತ್ತಾರೆ. ‘ಕಾಡ ಕತ್ತಲೆಯ ಮೌನ ಮಾತುಗಳು’ ಇವರು ಪ್ರಕಟಿಸಿದ ಕವನಸಂಕಲನ.ಓದು ಬರಹದ ಜೊತೆಗೆ ಗಾರ್ಡನಿಂಗ್ ಇವರ ನೆಚ್ಚಿನ ಹವ್ಯಾಸ

Read Post »

You cannot copy content of this page