ಸ್ವಾತ್ಮಗತ
ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ಕೆ.ಶಿವು ಲಕ್ಕಣ್ಣವರ ಬಸವಣ್ಣನ ಕಾಲದ ಗೌಪ್ಯ ವಚನಕಾರ್ತಿಯರು..! ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು ‘ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು’ ಅಥವಾ ‘ಗೌಪ್ಯವಚನಕಾರ್ತಿಯರೆಂದು ‘ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ… ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ ‘ವಚನ ಸಾಹಿತ್ಯ ಕಾಲ’. ಹಾಗಾಗಿ ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿತ್ತು. ಶ್ರೀಸಾಮಾನ್ಯರಿಗೆ ಅವರ ರಚನೆಗಳೊಂದು ಅರ್ಥವಾಗುತ್ತಿರಲಿಲ್ಲ. ಭಾರತೀಯ ಮಹಿಳೆಯರ ಪಾಲಿಗೆ ಪುರಾಣ ಹಾಗೂ ಧರ್ಮಶಾಸ್ತ್ರಗಳ ಕಾಲ ‘ಕಗ್ಗತ್ತಲ ಯುಗ’ವಾಗಿತ್ತು. ಹಾಗೆ ನೋಡಿದರೆ ಆರ್ಯ ಸಂಸ್ಕೃತಿಯ ಪೂರ್ವ ಕಾಲದಲ್ಲಿ ಮಹಿಳೆಯರು ಸ್ವತಂತ್ರರಾಗಿದ್ದರು. ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿ ಯಂತಹ ಮಹಿಳಾ ವಿದ್ವಾಂಸರು ಪಂಡಿತರೊಂದಿಗೆ ಆಧ್ಯಾತ್ಮಿಕ ಚರ್ಚೆಗಳಲ್ಲಿ ಪಾಲ್ಗೊಂಡಿರುವುದಕ್ಕೆ ಅಲ್ಲಲ್ಲಿ ನಿದರ್ಶನಗಳಿವೆ. ಅಲ್ಲಿಂದ ಹೆಣ್ಣು ಮತ್ತೆ ಸ್ವತಂತ್ರಳಾಗಲು ಹಲವಾರು ಶತಮಾನಗಳವರೆವಿಗೂ ಕಾಯಬೇಕಾಯಿತು. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾ ಗ್ರಹಪೀಡಿತ ದೃಷ್ಠಿ ದೋಷವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಆ ಕಾಲ ಘಟ್ಟದಲ್ಲಿ ಜಾತಿ, ಮತಗಳ ಬೇಧ ವಿಲ್ಲದೆ ಹೆಣ್ಣು-ಗಂಡು ಸಂಯುಕ್ತವಾಗಿ ‘ಅನುಭವ ಮಂಟಪ’ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದು ಕಂಡು ಬರುತ್ತದೆ. ವಚನಕಾರ್ತಿಯರೆಂದೊಡನೆ ತಟ್ಟನೆ ನೆನಪಿಗೆ ಬರುವವರು ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ. ಇವರಿಬ್ಬರೂ ಪ್ರಸಿದ್ದ ವಚನಕಾರ್ತಿಯರೆನಿಸಿದ್ದಾರೆ. ಆದರೆ ಇವರ ಕಾಲದಲ್ಲೇ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಪ್ರಚುರ ಪಡಿಸದೆ ಇರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಇಂತಹವರನ್ನು ‘ಅಪ್ರಸಿದ್ದ ವಚನಕಾರ್ತಿಯರು’ ಅಥವಾ ‘ಗೌಪ್ಯವಚನ ಕಾರ್ತಿಯರೆಂದು ‘ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವ ಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆ ಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಇವರಲ್ಲಿ ಬಹುಪಾಲು ಶರಣೆಯರು ಸಂಸಾರದ ಸತ್ಯವನ್ನು ಅರಿತು, ಬದುಕಿನ ಶುದ್ದತೆಗಾಗಿ ಹಂಬಲಿಸಿ, ಸಂಸಾರವೆಂಬುದು ಆಧ್ಯಾತ್ಮಕ್ಕೆ ಬಾಧಕವಲ್ಲ, ಪ್ರೇರಕ, ಪೋಷಕವೆಂಬುದನ್ನು ಶ್ರುತ ಪಡಿಸಿದರು. ಇವರು ವ್ರತಾಚರಣೆ, ಜಾತೀಯತೆ, ಕುಲ ಭೇಧ, ಭಕ್ತಿ, ಜ್ಞಾನ, ಆಚರಣೆ,ನೀತಿ-ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಇವರಲ್ಲಿ ಬಹಳಷ್ಟು ಜನ ಶರಣೆಯರು ತಮ್ಮ ಗಂಡನ ಕಾಯಕವೆಂಬ ಹಣತೆಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ ಪತಿಗೆ ಮಾರ್ಗಜ್ಯೋತಿಯಾಗಿದ್ದಾರೆ. ಅವರಲ್ಲೆ ಕೆಲವರು ಎಚ್ಚರ ತಪ್ಪಿದ ತಮ್ಮ ಗಂಡನನ್ನು ಸರಿದಾರಿಗೆ ತರಲು ಶ್ರಮಿಸಿ ಯಶಸ್ವೀಯಾಗಿದ್ದಾರೆ. ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ. ಶರಣೆಯರು ತಮ್ಮ ವಚನಗಳಲ್ಲಿ- ಪ್ರಚಲಿತ ವಿದ್ಯಮಾನಗಳ ವಿಮರ್ಶೆ, ಕಾಯಕ ಪ್ರೀತಿ, ಧರ್ಮನಿಷ್ಠೆ, ಕರುಣೆ, ಮಾನವೀಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸದಿಂದ ವಚನಗಳನ್ನು ರಚಿಸಿರುವುದು ಕಂಡು ಬರುತ್ತದೆ… ಬಸವಣ್ಣನವರ ಕಾಲದಲ್ಲಿ ವಚನಕಾರ್ತಿಯರು..! ಸುಮಾರು ೮೦೦ವರ್ಷಗಳ ಹಿಂದೆ ಅಂದರೆ ೧೨ನೇ ಶತಮಾನದ ಮಧ್ಯಭಾಗದಲ್ಲಿದ್ದ ಬಸವಣ್ಣ ಜಗತ್ತಿನ ಪ್ರ ಪ್ರಥಮ ವಿಚಾರವಾದಿ, ಕ್ರಾಂತದರ್ಶಿ, ವಿಭೂತಿಪುರುಷ,ದಾರ್ಶನಿಕ, ಅನುಭಾವಿ, ಕ್ರಿಯಾಶೀಲ ಹೋರಾಟಗಾರ, ದೂರಗಾಮಿ ಚಿಂತಕ, ಮಹಿಳಾವಾದಿ, ಸತ್ಯ ಸಾಮ್ರಾಜ್ಯದ ಸಾರ್ವ ಭೌಮ. ತಾವು ಬೆಳೆಯುವುದು ಮಾತ್ರವಲ್ಲದೆ, ಲೋಕವು ತಮ್ಮೊಡನೆ ಬೆಳೆಯಬೇಕೆಂಬ ಸಂಕಲ್ಪ ತೊಟ್ಟ ವಿಶ್ವಕುಟುಂಬಿ. ವಿಶ್ವದಲ್ಲಿ ಎಲ್ಲಾ ಜಾತಿ-ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತ:ಕರಣದಿಂದ ಕೂಡಿದ ಜೀವನ ಪ್ರೀತಿ. ಈ ಲೋಕ ಮಾನವ ಕೇಂದ್ರಿತವಲ್ಲ, ಜೀವ ಕೇಂದ್ರಿತವಾದುದು. ಅಹಿಂಸೆ, ನಿಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಠಿಸುವುದೇ ಬಸವಣ್ಣನವರ ಕನಸಾಗಿತ್ತು. ಅವರ ದೃಷ್ಟಿಯಲ್ಲಿ ಹೆಣ್ಣು ಪ್ರತಿಭೆಯಲ್ಲಿ, ಬೌದ್ಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು. ಜೀವನದ ಸಕಲ ವ್ಯವಹಾರದಲ್ಲಿ ಅವಳಷ್ಟು ಕುಶಾಗ್ರಮತಿ ಬೇರ್ಯಾರಿಲ್ಲ. ಬಸವಣ್ಣ ಮಹಿಳೆಯರ ಅಂತ:ಕರಣವನ್ನು ಓರೆಗಚ್ಚಿ ನೋಡಿದರು. ಹಾಗಾಗಿ ‘ಗೌಪ್ಯ ವಚನಕಾರ್ತಿಯರು’ ವಚನ ಸಾಹಿತ್ಯ ರಚನೆಯಲ್ಲಿ ಉತ್ಸುಕರಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ-ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ, ಕದಿರ ರೆಮ್ಮವ್ವೆ, ಕಾಳವ್ವೆ, ಕಾಮವ್ವೆ, ಗಂಗಮ್ಮ, ಗೊಗ್ಗವ್ವೆ, ಬೊಂತಾದೇವಿ, ನೀಲಾಂಬಿಕೆ, ಲಿಂಗಮ್ಮ, ಮಸಣಮ್ಮ, ವೀರಮ್ಮ, ಲಕ್ಷಮ್ಮ, ರೆಮ್ಮವ್ವೆ, ರೇಕಮ್ಮ, ಸತ್ಯಕ್ಕ, ವೊದಲಾದವರು. ಇನ್ನು ಇರುವ ಬಹುತೇಕ ವಚನಕಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ. ಉದಾ: ಕಲ್ಯಾಣಮ್ಮ, ಕದಿರ ಕಾಳವ್ವೆ ಮುಂತಾದವರು. ವಚನ ಸಾಹಿತ್ಯವು ಕನ್ನಡ ದೇಸಿಯ ಪದ್ಯಜಾತಿ. ವಚನಕಾರರು ಅಚ್ಚ ಕನ್ನಡ ಕೃಷಿಕರು… ಗೌಪ್ಯ ವಚನಕಾರ್ತಿಯರ ಸಂಕ್ಷಿಪ್ತ ಪರಿಚಯ/ವಚನಗಳು ಅಮುಗೆರಾಯಮ್ಮ— ಈಕೆ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. ಇವಳ ವಚನಗಳಲ್ಲಿ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ರಾಯಮ್ಮನ ಅಂಕಿತ “ಅಮುಗೇಶ್ವರ”… ‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ಕೆಡಿಸುವರಾರನೂ ಕಾಣೆನಯ್ಯಾ ಆದ್ಯರ-ವೇದ್ಯರ ವಚನಗಳಿಂದ ಅರಿದೆವೆಂಬುವರು ಅರಿಯಲಾರರು ನೋಡಾ! ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು ಅಮುಗೇಶ್ವರಲಿಂಗವ ನಾನೇ ಅರಿಯಬೇಕು’. ಅಕ್ಕಮ್ಮ– ಈಕೆ ‘ರೆಮ್ಮವ್ವೆ’ ಎಂದೂ ಗುರ್ತಿಸಲ್ಪಟ್ಟಿದ್ದಾಳೆ. ಅಕ್ಕಮಹಾದೇವಿಯ ಪ್ರಭಾವಕ್ಕೆ ಒಳಗಾಗಿ ಸಂಸಾರ ಬಂಧನಕ್ಕೆ ಸಿಲುಕದೆ, ಸ್ವತಂತ್ರವಾಗಿ ಬದುಕಲು ಹಂಬಲಿಸಿ ವೈವಾಹಿಕ ಜೀವನವನ್ನು ಧಿಕ್ಕರಿಸಿದವಳು. ವ್ರತಾಚರಣೆಗೆ ಸಂಬಂಧಿಸಿದಂತೆ ಕೆಲವು ವಚನಗಳನ್ನು ಸರಳ, ಸುಂದರ, ಸ್ಪಷ್ಟ ವಾಗಿ ಪ್ರೌಢಭಾಷೆಯಲ್ಲಿ ನಿರೂಪಿಸಿರುವಳು. ಇವಳ ಅಂಕಿತನಾಮ “ಆಚಾರ ವೇ ಪ್ರಾಣವಾದ ರಾಮೇಶ್ವರಲಿಂಗ”… ‘ಬತ್ತಲೆಯಿದ್ದವರೆಲ್ಲ ಕತ್ತೆಯ ಮರಿಗಳು ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು ತಲೆ ಜೆಡೆಗಟ್ಟಿದವರೆಲ್ಲ ಹೊಲೆಯರ ಸಂತಾನ ಆವ ಪ್ರಕಾರವಾದಡೇನು, ಅರಿವೆ ಮುಖ್ಯವಯ್ಯಾ ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ’. ಅಕ್ಕನಾಗಮ್ಮ– ಅಕ್ಕನಾಗಮ್ಮನು ಬಸವಣ್ಣನವರ ಸಹೋದರಿ, ಚನ್ನಬಸವಣ್ಣನ ತಾಯಿ, ಶಿವದೇವ/ಶಿವಸ್ವಾಮಿ ಎಂಬುವರ ಪತ್ನಿ. ಈಕೆಗೆ ನಾಗಮ್ಮ, ನಾಗಲಾಂಬಿಕೆ, ನಾಗಾಂಬಿಕೆ, ನಾಗಾಯಿ ಮುಂತಾದ ಹೆಸರುಗಳಿವೆ. ಇವಳು ಧಿರೋದಾತ್ತ ಶರಣೆ. ಮಹಾ ಮನೆಯ ಸೂತ್ರಧಾರಿಣಿಯಾಗಿ, ಮಹಾ ಶಕ್ತಿಯಾಗಿ, ಅನ್ನಪೂರ್ಣೆಯಾಗಿ ‘ಅನುಭವ ಮಂಟಪದ’ ಜ್ಞಾನ ಹಾಗೂ ಅನುಭಾವ ದಾಸೋಹದಲ್ಲಿ ಭಾಗಿಯಾಗಿ ತಮ್ಮನ ಅಭ್ಯುದಯಕ್ಕೆ ನೆರವಾದವಳು. ನಾಗಮ್ಮನ ವಚನಗಳ ವಸ್ತು-ಬಸವಭಾವ, ವ್ರತಾಚಾರ, ಶರಣಸತಿ, ಲಿಂಗಪತಿ ಮನೋಧರ್ಮ, ಅದರೊಂದಿಗೆ ಜೀವನದಲ್ಲಿ ಎದುರಿಸಿದ ಎಡರು-ತೊಡರುಗಳು. ತನ್ನ ಸಮಕಾಲೀನ ಶಿವಶರಣ, ಶಿವಶರಣೆಯರನ್ನು ಕುರಿತು ಪ್ರಸ್ತಾಪಿಸಿದ್ದಾಳೆ. ಈಕೆಯ ವಚನಗಳ ಅಂಕಿತ “ಬಸವಣ್ಣ ಪ್ರಿಯ ಚನ್ನಸಂಗಣ್ಣ”… ಗುರು ಸಂಬಂಧಿ ಗುರುಭಕ್ತಯ್ಯನು ಲಿಂಗ ಸಂಬಂಧಿ ಪ್ರಭುದೇವರು ಜಂಗಮ ಸಂಬಂಧಿ ಸಿದ್ಧರಾಮನು ಪ್ರಸಾದ ಸಂಬಂಧಿ ಮರುಳ ಶಂಕರದೇವರು ಪ್ರಾಣಲಿಂಗ ಸಂಬಂಧಿ ಅನಿಮಿಷದೇವರು ಶರಣ ಸಂಬಂಧಿ ಘಟ್ಟಿವಾಳಯ್ಯನು ಐಕ್ಯ ಸಂಬಂಧಿ ಅಜಗಣ್ಣಯ್ಯನು ಸರ್ವಾಚಾರ ಸಂಬಂಧಿ ಚನ್ನಬಸವಣ್ಣನು ಇಂತಿವರ ಸಂಬಂಧ ಎನ್ನ ಸರ್ವಾಂಗದಲಿ ನಿಂದು ಬಸವಣ್ಣಪ್ರಿಯ ಚನ್ನಸಂಗಣ್ಣಯ್ಯನ ಹೃದಯ ಕಮಲದಲಿ ನಿಜ ನಿವಾಸಿಯಾಗಿದ್ದೆನು ಆಯ್ದಕ್ಕಿ ಲಕ್ಕಮ್ಮ– ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೋಕಿನ ‘ಅಮರೀಶ್ವರಿ ಗ್ರಾಮ’ದವಳು. ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು. ಅವಳ ಪತಿ ‘ಮಾರಯ್ಯ’. ‘ಬಡತನ’ವೆಂಬ ದಿವ್ಯ ಅನುಭವವೇ ಲಕ್ಕಮ್ಮನಲ್ಲಿ ಸೂಕ್ಷ್ಮ ಚಿಂತನೆ ಮತ್ತು ಗಾಂಭೀರ್ಯದ ಬದುಕನ್ನು ಕಲಿಸಿತು. ದಂಪತಿಗಳು ಬಸವಣ್ಣನವರ ತತ್ವಕ್ಕೆ, ವ್ಯಕ್ತಿತ್ವಕ್ಕೆ ಮಾರು ಹೋಗಿ, ‘ಅಮರೀಶ್ವರಿ ಗ್ರಾಮ’ದಿಂದ ಕಲ್ಯಾಣಕ್ಕೆ ಬಂದು ನೆಲೆಸಿದರು. ಕಾಯಕ ಮಾಡಿ, ಜನರಿಗೆ ನೀಡಿ ಬದುಕ ಬೇಕೆ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವಿನವಳು. ಲಕ್ಕಮ್ಮ ‘ಹಿಡಿಯಕ್ಕಿ’ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ “ಸೈ”ಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ ‘ಭಕ್ತಿಯ ಮುಂದೆ ಎಲ್ಲವೂ ಮಿಥ್ಯ’ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋ ದ್ಧಾರಗಳೆಂಬ ದ್ವಿಮುಖ ಆಶಯ, ಕಾಯಕತತ್ವ , ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ. ಆಕೆಯ ಅಂಕಿತನಾಮ ‘ಮಾರಯ್ಯಾ ಪ್ರಿಯ ಅಮರೇಶ್ವರಲಿಂಗ’… ‘ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ ಭಾವ ಶುದ್ಧವಾಗಿ ಮಹಾ ಶರಣರ ತಿಪ್ಪೆಯ ತಪ್ಪಲು ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು ಮಾರಯ್ಯಾಪ್ರಿಯ ಅಮರೇಶ್ವರಲಿಂಗಕ್ಕೆ ಬೇಗ ಹೋಗು ಮಾರಯ್ಯಾ ಅಂಗವರಿತ ಅರುವೆಯ ಅಂಗದಲ್ಲಿ ಕಟ್ಟಿ ಬಯಕೆಯರಿತ ಕೈಯಲ್ಲಿ ತಂಡುಲವನಾಯ್ದುಕೊಂಡು ಬನ್ನಿರಿ’ ಕದಿರ ರೆಮ್ಮವ್ವೆ– ನೂಲುವ ಕಾಯಕದವಳು. ತನ್ನ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ಪ್ರೌಢವೆನಿಸುವ ‘ಬೆಡಗಿನ ವಚನ’ಗಳನ್ನೂ ರಚಿಸಿದ್ಧಾಳೆ. ತನಗೆ ಜೀವನ ರೂಪಿಸಿ ಕೊಳ್ಳಲು, ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟ ಶರಣರನ್ನು ಕೃತಜ್ಞತೆಯಿಂದ ಸ್ಮರಿಸಿರುವಳು. ಸೃಷ್ಠಿ, ಸ್ಥಿತಿ ,ಲಯಕಾರರಾದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ತನ್ನ ಕದಿರ ಕಾಯಕದ ದೃಷ್ಟಾಂತಗಳೊಂದಿಗೆ ಅಂತರ್ಗತಗೊಳಿಸಿರುವಳು. ಈಕೆಯ ವಚನಗಳ ಅಂಕಿತ “ಗುಮ್ಮೇಶ್ವರ”… ನಾ ತಿರುಗುವ ರಾಟೆಯ ಕುಲ-ಜಾತಿ ಕೇಳಿರಣ್ಣಾ ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು ನಿಂದ ಬೊಂಬೆ ಮಹಾರುದ್ರ ರುದ್ರನ ಬೆಂಬಳಿಯವೆರಡು ಸೂತ್ರಕರ್ಣ ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ ಸುತ್ತಿತು ನೂಲು ಕದಿರು ತುಂಬಿತ್ತು ರಾಟೆಯ ತಿರುಹಲಾರೆ ಎನ್ನ ಗಂಡ ಕುಟ್ಟಿಹ ಇನ್ನೇವೆ ಕದಿರರೆಮ್ಮಿಯೊಡೆಯ ಗುಮ್ಮೇಶ್ವರ ? ಕನ್ನಡಿ ಕಾಯಕದ ರೇಮವ್ವ– ಈಕೆ ಸಾಮಾನ್ಯ ಜನವರ್ಗದಿಂದ ಬಂದವಳು. ಲಿಂಗಾಯತಧರ್ಮದಲ್ಲಿ ಇವಳಿಗಿದ್ದ ನಿಷ್ಠೆ, ಶ್ರದ್ಧೆ, ನೇರ ನಡೆ-ನುಡಿ, ನಿಷ್ಠುರ ಮನೋಭಾವ ಅವಳ ವಚನಗಳಲ್ಲಿ ವ್ಯಕ್ತಗೊಂಡಿವೆ. ಕೆಲವೆಡೆ ಈಕೆ ಅಹಂಕಾರಿಗಳ ವರ್ತನೆಯ ವಿಡಂಬನೆ ಮಾಡಿದ್ದಾಳೆ. ಇವಳ ವಚನಗಳ ಅಂಕಿತ “ನಿರಂಗಲಿಂಗ”… ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ? ಲಿಂಗ-ಜಂಗಮದ ಪ್ರಸಾದಕ್ಕೆ ತಪ್ಪದಲ್ಲಿ ಕೊಲ್ಲಬಾರದೆ ? ಕೊಂದಡೆ ಮುಕ್ತಿಯಿಲ್ಲವೆಂಬುವರ ಬಾಯಲ್ಲಿ ಪಡಿಹಾರನ ಪಾದರಕ್ಷೆಯನಿಕ್ಕುವೆ ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ! ಎತ್ತಲಾರದಡೆ ಸತ್ತ ಕುನ್ನಿ ನಾಯ ಬಾಲವ ನಾಲಗೆಯ ಮುರುಟಿರೊ ಸದ್ಗುರುಸಂಗ ನಿರಂಗಲಿಂಗದಲ್ಲಿ ಉರಿಲಿಂಗ ಪೆದ್ದಿಗಳ ಪತ್ನಿ ಕಾಳವ್ವೆ — ಈ ದಂಪತಿಗಳು ಮಹಾರಾಷ್ಟೃದ ಕಡೆಯಿಂದ ಬಂದವರು. ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ








