ದೇವರ ವಾನಪ್ರಸ್ತ.
ರಾತ್ರಿಯಿಡೀ ಕಗ್ಗತ್ತಲು. ಯಾಕಿಲ್ಲ, ಅಮವಾಸ್ಯೆಯ ರಾತ್ರೆಯದು. ಗುಹೆಯೊಂದರಲ್ಲಿ ಮಲಗಿದ್ದ ಶಿಲಾಮಾನವ ರಾತ್ರೆ ಕಳೆಯುತ್ತಿದ್ದ. ಸುತ್ತ ,ಅಡವಿ. ಅದೊಂದು ನಿದ್ದೆಯಲ್ಲದ ನಿದ್ದೆ. ಗಾಳಿಗೆ ಮರಗಳ ಸುಂಯ್..ಸುಂಯ್.. ಒಂಥರಾ ನೀರವ ಕಗ್ಗತ್ತಲು. ಕಣ್ಣಿಗೇನೂ ಕಾಣಿಸದಾದಾಗ, ಕಿವಿ ಅತ್ಯಂತ ಸೂಕ್ಷ್ಮವಾಗುತ್ತೆ. ದೂರದಿಂದ, ನರಿಗಳು ಊಳಿಡುವ ಶಬ್ಧ, ಪಟ್ಟೆ ಹುಲಿ ನಡೆಯುವಾಗ,ಓಡುವಾಗ ಶಬ್ಧಮಾಡುವುದಿಲ್ಲ. ಸೈಲೆಂಟ್ ಕಿಲ್ಲರ್ ಅದು! ಹ್ಞಾ! ಕೇಳಿಸಿತಲ್ಲ, ಜಿಂಕೆಯ ಮರಣಾಕ್ರಾಂದನ..ಖಂಡಿತಾ ಹುಲಿ ಹಿಡಿದಿರಬೇಕು, ನಾಳೆ ಸಿಗುತ್ತೆ ಅದರ ಅವಶೇಷಗಳು. ಹೇಗಿದ್ದರೂ, ಗುಹೆಯ ಬಾಗಿಲಿಗೆ ಬಂಡೆ ಪಾರ್ಶ್ವದಿಂದ ಮುಚ್ಚಿದೆ. ಹುಲಿಗೂ ಭಯವಿದೆ. ಎಲ್ಲಿ, ನನ್ನ ಈಟಿ ಹತ್ತಿರವೇ ಇದೆಯಲ್ಲ. ಅಂತಹ ಹೋರಾಟದ ರಾತ್ರೆ, ಗಾಢನಿದ್ದೆಗೆ ಬಿದ್ದರೆ, ಹುಲಿಯ ಬಾಯಿಗೆ ತುತ್ತು.ಹ್ಞಾ! ..ಬೆಳಕಿನ ಮೊದಲ ಕಿರಣ ಕಾಡಿನ ಎತ್ತರದ ಮರಗಳ ಎಲೆಗಳ ನಡುವಿಂದ ನುಸುಳಿ ಬಂತಲ್ಲಾ!. ರಾತ್ರಿ ಕಳೆಯಿತು.. ಸೂರ್ಯ ಉದಯಿಸಿದ್ದು ಅಂದರೆ ಹೊಸ ಜೀವ ಬಂದಂತೆಯೇ. ಅಂತಹ ಸೂರ್ಯನಿಗೆ ತನ್ನ ಒರಟು ಕೈಗಳನ್ನು ಎತ್ತಿ, ಈಟಿ ಬೀಸಿ, ಕೇಕೇ ಹಾಕಿ ತನ್ನದೇ ರೀತಿಯಲ್ಲಿ ನಮಸ್ಕರಿಸಿದ ಆ ಶಿಲಾ ಮಾನವ!ಅಂದು ನಕ್ಷತ್ರ ಸೂರ್ಯನಿಗೆ ದೇವರ ದರ್ಜೆ! ಹೀಗೇ ನೀರು,ಗಾಳಿ,ಬೆಂಕಿ,ಆಕಾಶ, ತನ್ನ ವ್ಯಾಪ್ತಿಗೆ ಮೀರಿದ,ಅರಿವಿಗೆ ನಿಲುಕದ ಸೋಜಿಗಗಳೆಲ್ಲಾ ದೇವರೇ.ದೇವರನ್ನು, ನಾವೆಷ್ಟು ಹುಡುಕುತ್ತೇವೋ ಅಷ್ಟೇ, ವಿಚಾರವಾದಿಗಳು,ಸಾಹಿತಿಗಳು ದೇವರ ಪರಿಕಲ್ಪನೆಯನ್ನು,ಅದರ ಮನೋವೈಜ್ಞಾನಿಕ ಹಿನ್ನೆಲೆಯನ್ನು ಹುಡುಕುತ್ತಾರೆ.ಡಿ.ವಿ.ಜಿ.ಅವರ ಕಗ್ಗದಿಂದಲೇ ಶುರುಮಾಡೋಣವೇ?. ಧರ್ಮವೆಂಬುದದೇನು? ಕರ್ಮವೆಂಬುದದೇನು?|ಬ್ರಹ್ಮಾಂಡಕಥೆಯೇನು? ಜೀವಿತವಿದೇನು?||ಬ್ರಹ್ಮವೆಲ್ಲಕು ಮೂಲ ಮಾಯೆ ತತ್ಕೃತಿಜಾಲ|ಬ್ರಹ್ಮವೇ ಜೀವನವೊ – ಮಂಕುತಿಮ್ಮ||೯೭|| ಆಕಾರಭ್ರಹ್ಮನಿಂದ ನಿರಾಕಾರ ಬ್ರಹ್ಮನವರೆಗೆ ಬೆಳೆದುಬಂದ ಈ ಜ್ಞಾನದ ಅಗಾಧತೆ, ನನ್ನ ಅರಿವಿಗೂ, ವಿದ್ಯೆಗೂ ಮೀರಿದ್ದು. ಈ ಅಬ್ಬಿಯ ಧಾರೆಗೆ, ಕನ್ನಡ ಸಾಹಿತ್ಯದ ಸಂದರ್ಭವನ್ನಷ್ಟೇ ಉಲ್ಲೇಖಿಸುವೆ.ಶಿವರಾಮ ಕಾರಂತರ ಮೂಕಜ್ಜಿಯ ಮಾತುಗಳನ್ನು ಕೇಳಿ. ” ಭೂಮಿಯಲ್ಲಿ ಹುಟ್ಟಿದ ಎಲ್ಲರೂ ಒಟ್ಟುಗೂಡಿ ಒಂದು ದೇವರನ್ನು ಮಾಡಿಕೊಂಡಿದ್ದಾರೆ. ಅವನೇನು ಮಾಡುತ್ತಿದ್ದಾನೋ? ಯಾರ್ಯಾರು ನನ್ನನ್ನು ನಂಬುತ್ತಿದ್ದಾರೆ, ಯಾರ್ಯಾರು ನಂಬುವುದಿಲ್ಲ ಎಂದು ಹುಡುಕಿ ಹೋಗಲಾರ . ಅವನ ಚಿಂತೆಯೇ ಇಲ್ಲದ ಪ್ರಾಣಿಗಳಿಲ್ಲವೋ? ಅವುಗಳನ್ನೂ ಬದುಕಿಸಿ ಇರಿಸಿದ್ದಾನಲ್ಲ . ಅವನನ್ನು ತಿಳಿಯಬೇಕಾದರೆ ನಾವು ಅವನನ್ನು ಹುಡುಕಿದ ಹಾಗೆ ಅವನೂ ನಮ್ಮನ್ನು ಹುಡುಕಿಕೊಂಡು ಬರಬೇಕಾದುದು ಇಲ್ಲ . ನಾವೇ ಅವನಲ್ಲಿ ಪ್ರಶ್ನೆ ಕೇಳುತ್ತೇವೆ. ನಾವೇ ಅವಕ್ಕೆ ಉತ್ತರವನ್ನು ಹೇಳಿಕೊಳ್ಳುತ್ತೇವೆ.” ಮನಸ್ಸಿನ, ಚಿಂತನೆಯ ತರ್ಕದೊಳಗೆ ದೇವರನ್ನು ಅನ್ವೇಷಿಸುವ ಪ್ರಯತ್ನವದು. ಜಿ.ಎಸ್ ಶಿವರುದ್ರಪ್ಪನವರು “ಎಲ್ಲೋ ಹುಡುಕಿದೆ ಇಲ್ಲದ ದೇವರಕಲ್ಲು ಮಣ್ಣುಗಳ ಗುಡಿಯೊಳಗೆ” ಅಂತ ಬರೆಯುತ್ತಾರೆ. ಕಲ್ಲು ಮಣ್ಣುಗಳ ಗುಡಿಯೊಳಗೆ ದೇವರನ್ನು ಹುಡುಕಬೇಡ, ದೇವರು ಅಲ್ಲಿಲ್ಲ, ಆತ ನಮ್ಮೊಳಗಿನ ಪ್ರೀತಿ,ಬಾಂಧವ್ಯದೊಳಗಿರುವನು, ಎನ್ನುವಾಗ, ಅವರ ಕವಿಸಹಜ ಅನಂತಪ್ರೇಮವೇ ದೇವರ ರೂಪತಾಳುತ್ತದೆ. ಕುವೆಂಪು ಅವರು ಇನ್ನೊಂದು ಹೆಜ್ಜೆ ಮುಂದೆ ಹೋಗಿ, “ನೂರು ದೇವರನೆಲ್ಲ ನೂಕಾಚೆ ದೂರಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ” ಹಾಗೆ ಬರೆಯುವಾಗ ದೇಶ, ನಾಡು ಮತ್ತು ನೆಲ ಅವರಿಗೆ ದೇವೀ ಸ್ವರೂಪವಾಗುತ್ತೆ. ಹೀಗೆ ಸಾಮಾನ್ಯರು ದೇವರನ್ನು ಬೇರೆ ಬೇರೆ ರೂಪಗಳಲ್ಲಿ, ಕಂಡರೆ, ಕವಿಗಳು,ದಾರ್ಶನಿಕರು ಆತನನ್ನು, ಎಲ್ಲರೊಳಗೂ, ಎಲ್ಲವಲ್ಲೂ, ಮೂರ್ತವಾಗಿ ಹಲವೊಮ್ಮೆ, ಅಮೂರ್ತವಾಗಿ ಕೆಲವೊಮ್ಮೆ ಕಾಣುತ್ತಾರೆ. ಅದಕ್ಕೆ ಸರಿಹೊಂದುವ ಪ್ರಾರ್ಥನಾ ಪದ್ಧತಿ ಜನಜೀವನದ ವಿವಿಧ ಎಸಳುಗಳ ಬಣ್ಣಗಳಂತೆ ವಿವಿಧ ಆಚರಣೆಗಳಾಗಿವೆ.ಹಿಂದೂ ಸಮಾಜದಲ್ಲಿ ಮೂರ್ತಿಪೂಜೆ ಅತ್ಯಂತ ಸಾಮಾನ್ಯ. ಮೂರ್ತಿ ಸಿಗಲಿಲ್ಲವಾದರೆ ದೇವರ ಚಿತ್ರವೂ ನಮಗೆ ಸರಿಯೇ. ಹೈದರಾಬಾದ್ ನ ಕವಯಿತ್ರಿ, ಪ್ರಭಾ ಮಟಮಾರಿ ಅವರ “ದೇವರ ವಾನಪ್ರಸ್ಥ ” ಕವಿತೆಯ ಈ ವಸ್ತು, ಬಹಳ ಗಹನವಾದದ್ದೇ. ” ತನ್ನ ಜೀವನಕೊಂದು ಇರಲೆಂದು ಮಿತಿ.ಮನುಷ್ಯನೇ ಸೃಷ್ಟಿಸಿದಾ ಧರ್ಮನೀತಿ ನಿಷ್ಟೆ ಯಿಂದ ಧರ್ಮವ ಪಾಲಿಸಿದಾತಎನಿಸಿಕೊಂಡ ಧರ್ಮದಾತ. ಮಿತಿ ಮೀರಿ ಮಾಡಿದ ತಪ್ಪುಅಪರಾಧಗಳು ತಿರುಗುಬಾಣಗಳಾದಾಗಮೊರೆ ಹೋದ ದೇವರಬಗೆ ಬಗೆಯ ದೇವರ ಚಿತ್ರಗಳ ತಂದುಗೋಡೆಗೆ ನೇತ್ಹಾಕಿಯೋಮಂಟಪದಲ್ಲಿ ಬಂಧಿಸಿಯೋಫಲಪುಷ್ಪ, ದೀಪ ಧೂಪಗಳಅಟ್ಟಹಾಸದ ಪೂಜೆಗೈದ,ಸುಗ್ರಾಸ ಭೋಜನವ ಮಾಡಿನೈವೇದ್ಯವೆಂದಾತಾನೇ ತಿಂದು ತೇಗಿದಾ. ಸಂಪೂರ್ಣವಾದಾಗ ತನ್ನಾಸೆ ,ತಾಯ್ತಂದೆಯರನಟ್ಟಿ ವೃದ್ಧಾಶ್ರಮಕೆಶ್ರದ್ಧೆಯಿಂದ ಪೂಜೆ ದೇವರ ಪಟಗಳಿಗೆಬಿಟ್ಟಾ,ಊರಾಚೆಯ ನಿರ್ಜನಪ್ರದೇಶದ ಹಳೆಯ ಮರವೊಂದರಡಿಗೆ !ವೃದ್ಧ ಮಾನವನಿಗೆ ನಾಲ್ಕು ಗೋಡೆಗಳಮೇಲೊಂದು ಸೂರಿನ ಛಾಯೆಯದಯಪಾಲಿಸಿದ ದೇವರಿಗೆ,ಮಾನವ ಹೇರಿದ ವಾನಪ್ರಸ್ಥದ ದೀಕ್ಷೆ! ಮರದಕೆಳಗೆ ಹಳೆಯ ದೇವರ ಪಟದಲ್ಲಿಅದೇ ದಿಟ್ಟನೋಟ, ನಸುನಗೆಅಭಯ ವರದ ಹಸ್ತದ ಚಿತ್ರಮಳೆ ಚಳಿ ಗಾಳಿ ಹೆಚ್ಚಾದಾಗ ,ಕೊಚ್ಚಿ ಹೋಗಿ ನೀರಿನೊಡನೆ ,ನಿಸರ್ಗದಲ್ಲಿ ಹಸಿರಾಗಿ ನೀಲಾಕಾಶದಡಿಯಲಿ ಧುಮ್ಮಿಕ್ಕುವ ಜಲಪಾತವಾಗಿ ,ಜುಳು ಜುಳು ಹರಿವ ಹಳ್ಳವಾಗಿ ,ಹೊಳೆಯಾಗಿ ನಳ ನಳಿಸುವಹೂ ಬಳ್ಳಿಯಾಗಿ ಕವಿಯ ಕಣ್ಣಲ್ಲಿದೇವರೂ ಕವಿತೆಯಾದ.” ಅವರ ಕವಿತಾ ಕಥನದ ಆರಂಭದ ಸಾಲುಗಳು, ಕವಿತೆಗೆ ಅವರು ಹಾಕುವ ತಾತ್ವಿಕ ತಳಹದಿ. ಮುಂದಿನ ಸಾಲುಗಳಲ್ಲಿ, ಸ್ವಾರ್ಥಿ ಮನುಷ್ಯ, ತನ್ನ ಆಚಾರದೋಷಗಳ ಪರಿಣಾಮಗಳನ್ನು ಎದುರಿಸಲಾಗದೆ, ದೇವರ ಮೊರೆ ಹೋಗುತ್ತಾನೆ. ಇದು ಒಂದು ನಂಬಿಕೆಯ ಮೇಲೆ ನಿಂತಿರುವ ಸೌಧ. ಪ್ರಾರ್ಥನೆ, ಪೂಜೆ ಇತ್ಯಾದಿ ಆಚರಣೆಗಳಿಂದ ದೇವರು ಪ್ರಸನ್ನನಾಗಿ, ಸಮಸ್ಯೆ ಪರಿಹಾರವಾಗುತ್ತೆ,ಎಂಬುದೇ ಆ ನಂಬಿಕೆ.ಪ್ರಭಾ ಅವರು, ಈ ಆಚರಣೆ, ಸ್ವಾರ್ಥ, ಮತ್ತು ದೇವರ ನಿಜ ಭಕ್ತಿಯ ನಡುವಿನ ತಳಕಾಣದ ಅಂತರವನ್ನು ಮಥಿಸಿ ತೆಗೆಯುತ್ತಾರೆ. ಈ ಸಾಲುಗಳು, ಅಲ್ಲಮ ಪ್ರಭುಗಳ ವಚನವನ್ನು ನೆನಪಿಸುತ್ತೆ. “ಮಾಡಿದ ಓಗರ ಮಾಡಿದಂತೆ ಇದ್ದಿತ್ತುನೀಡಿದ ಕೈಗಳೆಡೆಯಾಡುತ್ತಿದ್ದವುಲಿಂಗಕ್ಕರ್ಪಿತವ ಮಾಡಿದೆನೆಂಬರುಒಂದರಲೊಂದು ಸವೆಯದು ನೋಡಾಲಿಂಗವಾರೋಗಣೆಯ ಮಾಡಿದನೆಂಬರುತಾವುಂಡು ನಿಮ್ಮ ದೂರುವರು ಗುಹೇಶ್ವರ.” ಪ್ರಭಾ ಅವರ ಕವಿತೆಗೆ ಹೊಸ ಹೊಳಹು ಕೊಡುವುದೇ ಮುಂದಿನ ಸಾಲುಗಳು. ಈ ಸಾಲುಗಳಲ್ಲಿ, ಆಧುನಿಕ ನಾಗರಿಕ ಸಮಾಜದ, ವ್ಯಾಪಾರೀ ವ್ಯವಸ್ಥೆಯ ಮನೋಭಾವ ಕಾಣಿಸುತ್ತೆ. ತನ್ನ ಅಗತ್ಯ ಪೂರ್ಣವಾದ ನಂತರ ಮನುಷ್ಯ ಯಾವುದನ್ನೂ ಇಟ್ಟುಕೊಂಡು ನಷ್ಟ ಅನುಭವಿಸಲು ತಯಾರಿಲ್ಲ. ಅದು, ತನ್ನ ವೃಧ್ಧ ತಂದೆತಾಯಂದಿರಿರಬಹುದು, ಹಾಲು ನಿಂತ ದನವಿರಬಹುದು, ದೇವರ ಮೂರ್ತಿಯೇ ಇರಬಹುದು. ತಾಯಿತಂದೆಯರನ್ನು ವೃದ್ಧಾಶ್ರಮಕ್ಕೂ, ದೇವರ ಪಟಗಳನ್ನು ಮರದಡಿಯ ಕಟ್ಟೆಗೂ ( ವಾನಪ್ರಸ್ತಕ್ಕೂ) ಕಳಿಸುವ ಕ್ರಿಯೆಯಲ್ಲಿ ಬಿಂಬ ಪ್ರತಿಬಿಂಬಗಳಿವೆ. ” ಮರದಕೆಳಗೆ ಹಳೆಯ ದೇವರ ಪಟದಲ್ಲಿಅದೇ ದಿಟ್ಟನೋಟ, ನಸುನಗೆ “ ಮನುಷ್ಯನ ಭೌತಜಗತ್ತಿನ ಕ್ರಿಯೆಗಳು, ಪರಮಾತ್ಮ ಪ್ರಜ್ಞೆಯಲ್ಲಿ ಯಾವುದೇ ಬದಲಾವಣೆ ಉಂಟುಮಾಡುವುದಿಲ್ಲ. ಭಾವಾತೀತ ಶಕ್ತಿಯದು ಎಂಬ ಧ್ವನಿ, ಕವಿತೆಯದ್ದು. ಮಳೆಗೆ ಕೊಚ್ಚಿಹೋಗುವ ದೇವರ ಚಿತ್ರ, ಮಳೆಯೇ ಆಗಿ, ಜಲಪಾತವಾಗಿ, ಪ್ರಕೃತಿಯಾಗಿ ಕೊನೆಗೆ ಕವಿತೆಯ ಹಿಂದಿನ ಕಾವ್ಯಪ್ರಜ್ಞೆಯೂ ಆಗಿ ಹರಿಯುತ್ತೆ. ಸ್ಥಿರ,ಸ್ಥಿತ ಚಿತ್ರ ಹರಿಯುವ ಚೇತನವಾಗುತ್ತೆ,ಆಕಾರದಿಂದ ಬಹುರೂಪೀ ಪ್ರಕೃತಿಯಾಗಿ,ಕೊನೆಗೆ ಕಾವ್ಯಪ್ರಜ್ಞೆಯಾಗುವಾಗ, ನಿರಾಕಾರ ಬ್ರಹ್ಮನಾಗಿ, ಪ್ಯೂರ್ ಕಾನ್ಶಿಯಸ್ ನೆಸ್ ಆಗುತ್ತೆ. ಇಲ್ಲಿ ವಾನಪ್ರಸ್ತ ಅನುಭವಿಸುವ ದೇವರ ಚಿತ್ರ, ಮಳೆಗೆ ಕೊಚ್ಚಿಹೋಗುವುದು, ನಶ್ವರವಾದ ದೇಹವನ್ನು ತ್ಯಜಿಸಿ ( ದೇಹದ ಸಾವು) ಆತ್ಮ ಸ್ವತಂತ್ರವಾಗುವ ಕ್ರಿಯೆಯಾಗಿಯೂ ನೋಡಬಹುದು. ಕುವೆಂಪು ಅವರ, “ದೇವರು ರುಜು ಮಾಡಿದನು” ಎಂಬ ಕವಿತೆಯ ಕೊನೆಯ ಸಾಲುಗಳನ್ನು ಗಮನಿಸಿ. ” ಸೃಷ್ಟಿಯ ರಚನೆಯ ಕುಶಲಕೆ ಚಂದಕೆಜಗದಚ್ಚರಿಯಂದದ ಒಪ್ಪಂದಕೆಚಿರಚೇತನ ತಾನಿಹೆನೆಂಬಂದದಿಬೆಳ್ಳಕ್ಕಿಯ ಹಂತಿಯ ಆ ನೆವದಿದೇವರು ರುಜು ಮಾಡಿದನು:ರಸವಶನಾಗುತ ಕವಿ ಅದ ನೋಡಿದನು!” ಕುವೆಂಪು ಅವರ ಕವಿತೆಯಲ್ಲಿ, ಪ್ರಕೃತಿಯ ಪ್ರತೀ ಕ್ರಿಯೆಗಳ ಮೇಲೆ, ದೇವರು ರುಜುಮಾಡುತ್ತಾನೆ ಮತ್ತು ರಸವಶನಾಗುತ,ಕವಿ ಅದನ್ನು ನೋಡುತ್ತಾನೆ.ಪ್ರಭಾ ಅವರ ಕವನ, “ದೇವರ ವಾನಪ್ರಸ್ತ” ದಲ್ಲಿ, ದೇವರು ಅದೆಲ್ಲವನ್ನೂ ಮೀರಿ, ಕಾವ್ಯಪ್ರಜ್ಞೆಯೂ ಆಗುತ್ತಾನೆ. *** ಮಹಾದೇವ ಕಾನತ್ತಿಲ









