ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನಮ್ಮ ಪೇಲವ ನಗುವ ಕಂಡು ನಗುತಿರುವನೇ ದಿನಕರ ನಿಸ್ತೇಜ ಬದುಕನು ಕಂಡು ಮರುಗಿರುವನೇ ದಿನಕರ ವಸಂತ ಬಂದಿದ್ದಾನೆ ನಿಜ, ಎಂದಿನಂತಿಲ್ಲ ದಿನ ನಮ್ಮ ಗೋಳನು ಕಂಡು ಕರಗಿರುವನೇ ದಿನಕರ ಅವನೋ ಧಗಧಗಿಸಿದ್ದಾನೆ ಎಂದಿನ ಉಗ್ರತೆಯಲ್ಲಿ ಹೂಕರಗಳಿಂದ ಎತ್ತಿ ನಮ್ಮ ಮುದ್ದಿಸುವನೇ ದಿನಕರ ಅವನಿಂದಲೇ ನಳನಳಿಸಿದೆ ಇಳೆ, ಎಲ್ಲರ ಬಾಳು ಬಂದಿರುವ ಸಂಕಟಕೆ ಮದ್ದರೆಯುವನೇ ದಿನಕರ ಹೆಣ ಬಣಬೆ ಬಿದ್ದಿದೆ ಜಗದ ಬೀದಿಬೀದಿಗಳಲ್ಲಿ ಭರವಸೆಯ ಕಿರಣ ಸುರಿದು ಪೊರೆಯುವನೇ ದಿನಕರ ಕತ್ತಲು ಸರಿದು ಬೆಳಕು, ಲೋಕದ ನಡೆ ‘ಜಂಗಮ’ ಆಪದಗಳ ಕಳೆದು ನಲವ ಎರೆಯುವನೇ ದಿನಕರ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾವೆಲ್ಲರೂ ಮನೆಯಲ್ಲೇ ಇದ್ದೇವೆ ರೇಖಾಭಟ್ ನಾವೆಲ್ಲರೂ ಮನೆಯಲ್ಲೇ ಇದ್ದೇವೆ ಒಂದೊಂದು ಖುರ್ಚಿಗೆ ಒಬ್ಬೊಬ್ಬರಂತೆ ಅಡುಗೆಮನೆ ಈಗ ಕೇಂದ್ರ ಸ್ಥಾನ ಟಿ.ವಿ ಹಾಲ್ ನಮ್ಮ ಆಸ್ಥಾನ ಬೀದಿಗಂತೂ ಹೋಗೋದಿಲ್ಲ ಅದಂತೂ ಈಗ – ಖಬರಸ್ಥಾನ! ಮಾವನ ವಾಕಿಂಗ್ ಸ್ಟಿಕ್ ಗೋಡೆ ಮೂಲೆಯಲ್ಲೆ ನಿದ್ರೆಗೆ ಜಾರಿದೆ! ಅತ್ತೆಯ ಹೂವಿನ ಚೊಬ್ಬೆ ದೇವಸ್ಥಾನ ಮರೆತು ಬೊರಲು ಬಿದ್ದಿದೆ! ಪುಟ್ಟ ಪಿಂಕ್ ಸೈಕಲ್ ಮರದ ಬುಡದಲಿ ಒರಗಿ ನಿಂತು ಇಷ್ಟಿಷ್ಟೇ ಬಣ್ಣವ ಕಳೆದುಕೊಳ್ಳುತ್ತಿದೆ! ಕೊರೊನಾ ಬೂತದ ಚಿತ್ರ ಬಿಡಿಸಿ ಅದಕ್ಕೆ ಕ್ರಾಸ್ ಮಾರ್ಕ್ ಹಾಕಿ ಆಗಾಗ ಕಿಟಕಿಯಲ್ಲಿ ಹಣಕುವ ಮಗಳ ಕಣ್ಣೊಳಗಿನ ಬಣ್ಣವೂ ತುಸು ಕಡಿಮೆಯೇ ಆಗಿದೆ ಕಂಪ್ಯೂಟರೊಳಗೆ ಹೊಕ್ಕು ಇ ಪೇಪರ್ ಓದುತ್ತ ಆಗಾಗ ಕೊರಾನಾ ಅಂಕಿ ಅಂಶ ವರದಿ ಮಾಡುವ ಅವಳಪ್ಪನೋ ಬಂಧಿತ- ಕಾಲು ಸುಟ್ಟ ಬೆಕ್ಕು- ಆದರೂ ಹೊತ್ತು ಸರಿಯುತ್ತಿದೆ ಅದಕೆ ಕಾರಣ ಇಂಟರ್ ನೆಟ್ಟು!! ಒಮ್ಮೆ ಗ್ರೀನ್ ಟೀ ಮತ್ತೊಮ್ಮೆ ಕಷಾಯ ತುಸು ಹೊತ್ತಿಗೆ ಚಹಾ ಬಿಸಿಲೇರಲು ಮಜ್ಜಿಗೆ ಬೆಲ್ಲ ಈ ದಾಹ ಹೆಚ್ಚುತ್ತಿರುವುದು ಬಿಸಿಲಿಗೊ, ಆತಂಕಕ್ಕೊ ಅರ್ಥವಾಗುತ್ತಿಲ್ಲ ಮನೆಯೊಳಗಿನ ಬಿಸಿಯ ಹೊರಹಾಕಲು ಫ್ಯಾನ್ ಇಪ್ಪತ್ತ್ನಾಲ್ಕು ಗಂಟೆ ತಿರುಗುತ್ತಿದೆ ಒಳಗುದಿಯ ಹೊರಹಾಕಲಾರದ ನಾನು ಯಾವ ಕವಿತೆಯನ್ನು ಪೂರ್ತಿ ಬರೆಯಲಾಗದೇ ಪೂರ್ಣವಿರಾಮ ಇಡುತ್ತಿದ್ದೇನೆ! *******************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೆರಳ ಕಂಡೂ ಬೆಚ್ಚ ಬೇಕಾಗಿದೆ ಜೀವ ತಲ್ಲಣಿಸಿದೆ ಮುಂದೇನು ಕಾದಿದೆ ತಿಳಿಯದೆ ಜೀವ ತಲ್ಲಣಿಸಿದೆ ಗೋಡೆ ನಾಲ್ಕರ ನಡುವೆ ಬಂದಿಯಾಗಿದೆ ಬದುಕು ಹೊರ ದಾರಿಗಳೇ ಕಾಣದೆ ಜೀವ ತಲ್ಲಣಿಸಿದೆ ಹತ್ತಾರು ತಾಸಿನ ಬಂದ್ ಈಗ ವಾರಗಳ ಲೆಕ್ಕ ಭಯ ಕತ್ತು ಹಿಸುಕುತಿದೆ ಜೀವ ತಲ್ಲಣಿಸಿದೆ ಮೂಗು ಕಣ್ಣುಗಳನ್ನೇ ಮುಟ್ಟುವಂತಿಲ್ಲ ಈಗ ಕೈ ತೊಳೆದಿದ್ದನ್ನೇ ತೊಳೆದಿದೆ ಜೀವ ತಲ್ಲಣಿಸಿದೆ ಕಾಣದ ಕ್ರಿಮಿಯ ದಾಳಿಗೆ ಆಹುತಿಯಾದವರೆಷ್ಟು ಕೊನೆಯೆಲ್ಲಿ ಯಾವಾಗ ಅರಿಯದೆ ಜೀವ ತಲ್ಲಣಿಸಿದೆ ಎಲ್ಲಿಂದಲೂ ಎಷ್ಟು ಹೊತ್ತಿಗೂ ಎರಗೀತು ವಿಪತ್ತು ರಕ್ಷಣೆಯ ಉಪಾಯಗಳಿಲ್ಲದೆ ಜೀವ ತಲ್ಲಣಿಸಿದೆ ಒಬ್ಬರಿಗೊಬ್ಬರ ಸಾಂಗತ್ಯವಿರದೇ ಬದುಕು ಹೇಗೆ ‘ಜಂಗಮ’ ವಿಧಿಯ ದೂರಿದೆ ಜೀವ ತಲ್ಲಣಿಸಿದೆ **************************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಮಯ ಕಳೆಯಲು ರೇಖಾ ವಿ.ಕಂಪ್ಲಿ ಅಂದೋ ನಮ್ಮಿರಿಯರು ಕಾಲ ಕಳೆಯಲು ಅರಳಿ ಕಟ್ಟೆ ಬೇವಿನ ಕಟ್ಟೆ ನೆರಳಡಿಯಲಿ ಕೂತು ಹರಟೆ ಮಾತುಗಳನಾಡುತ ತೂಕಡಿಸಿ ಆಕಳಿಸಿ ಒಂದು ನಿದ್ದೆ ಹೊಡಿಯುತ್ತಿದ್ದರು………….. ಅಂದೋ ನಮ್ಮೆಂಗಸರು ಓಣಿಗಳಲಿ ಅವರೀವರ ಮನೆ ವಿಚಾರಗಳನು ಗುಸುಗುಸು ಪಿಸುಪಿಸು ಎಂದು ಪುಸುಪುಸು ಮಾತಾಡಿಬಿಡುತ್ತಿದ್ದರು ಮರಡಬ್ಬಾಕಿಕೊಂಡು ಜಗಳವಾಡಿ…….. ಅಂದೋ ನಮ್ಕಿರಿಯರು ಸಡಿಲ ವಸ್ತ್ರಗಳ ಏರಿಸಿಕೊಳ್ಳುತಾ ಮಣ್ಣು ಮಸಿಗಳ ಬಳಿದುಕೊಂಡು ಮಳೆಯ ನೀರಿನಲಿ ಜಿಗಿದು ಚಳಿಯ ಬೆಂಕಿ ಮುಂಜಾವಿನಲಿ ಕಾಸಿ ಚಿನ್ನಿದಾಂಡು ಗೋಲಿ, ಮರಕೋತಿ ಆಡುತಾ… . ಇಂದೋ ನಾವುಗಳೆಲ್ಲಾ ಟಿವಿ, ಮೊಬೈಲ್, ಕಂಪ್ಯೂಟರ್ ಗಳಿಗೆ ಜೊತುಬಿದ್ದು ಕೂತಲ್ಲಿಯೇ ಕೂತು ಬಿಡುತ್ತಿದ್ದೇವೆ ಭಾರವಾದ ದೇಹಗಳನು ಹೊತ್ತು, ತುತ್ತು ಅನ್ನ ಮಾಡಲಾಗದೇ ಹೊರಗಿನಿಂದ ತಂದುಕೊಂಡು…… ಹೀಗೆ ಅಂದು ಇಂದು ಸಮಯ ಕಳೆಯಲು ವ್ಯತ್ಯಾಸದ ಹಾದಿ ಬದಲಿಸಿಹೆವು………. ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರೋನಾದ ಮುಂದೆ ಯುಗಾದಿ ಬಿದಲೋಟಿ ರಂಗನಾಥ್ ಹೊಸ್ತಿಲ ಮುಂದೆ ಲಕ್ಷ್ಮಣರೇಖೆ ಒಳಗೆ ಕರಳರಚುವ ಸದ್ದು ಉಗಾದಿಯ ಬೆನ್ನಿಗೂ ಬಿತ್ತು ಕಲ್ಲು ಇರುವ ಪುಡಿಕಾಸಿನಲಿ ಹೋಳಿಗೆ ತಟ್ಟಿದರೆ,ಹೊಸಬಟ್ಟೆ ತಂದರೇ… ಇಪ್ಪತ್ತೊಂದು ದಿನಗಳ ಹಾಲಿಗಿಲ್ಲ ಕಾಸು ಊರಿನ ಬಸ್ಸಿಗಿಲ್ಲ ಬಾಗಿಲು,ಟೈರು ಇದ್ದರು ಭಯದ ಪಂಕ್ಚರ್ರು ಬಿರು ಬಿಸಿಲ ಬೇಗೆಯಲಿ ಸುಡುವ ತಾಯ ಕರುಳು ಅಪ್ಪನ ವಾತ್ಸಲ್ಯದ ಮನಸು ಕಾಯುತ್ತಿವೆ…ಹಬ್ಬದ ನೆವದಲ್ಲಿ ಯಾರೋ ಮಾಡಿದ ತಪ್ಪಿಗೆ ದೇಶದ ಜನ ನರಳುತ್ತಾ ನಲುಗುವ ಕ್ಷಣ ಕ್ಷಣಕ್ಕೂ ಭಯದ ಭುಗಿಲು ಹೆಗಲೇರಿ ಜೈಲಲ್ಲದ ಒಂಥರಾ ಜೈಲಲ್ಲಿ ಕೊಳೆಯುವಂತೆ ದೂಡಿ ದುಡಿಯುವ ಕೈಗಳನ್ನು ಕಟ್ಟಿ ಹಾಕಿ ಅವರವರದೇ ಸಾವಿನ ಚಿತ್ರ ಬರೆಸುತ್ತಿದೆ ಕೊರೋನ ಕಣ್ಣಿಗೆ ಕಾಣಲ್ಲ ಅಂಟಿದರೆ ಬಿಡಲ್ಲ ಇದೇನು ಜನರು ಮಾಡಿದ ಪಾಪಕರ್ಮವೋ ಹಿಟ್ಟುಬಟ್ಟೆ ಇಲ್ಲದೆ ಅಪ್ಪ ಅಮ್ಮಂದಿರು ಅಯ್ಯೋ ಅಂದಿದ್ದರ ಫಲವೋ ವಕ್ಕರಿಸಿದೆ ಹಿರಿಮಾರಿ ಎಲ್ಲಾ ಕಾಣುವ ಜಗತ್ತನ್ನೇ ಕಾಣದೇ ನುಂಗುತ್ತಾ ,ಹೆದರಿಸುತ್ತಾ ಬಾರುಕಾಲಾಕುತ್ತಿದೆ ಹತ್ತಿರ ನಿಂತು ಉಸಿರು ಬಿಡುವುದರಿಂದ, ಮುಟ್ಟುವುದರಿಂದ, ಇವನು ಮುಟ್ಟಿ ಹೋದ ವಸ್ತು ಅವನ್ಯಾರೋ ಮುಟ್ಟುವುದರಿಂದ, ಕೈ ಕುಲುಕುವುದರಿಂದ ಮನುಷ್ಯನ ಶ್ವಾಸಕೋಶದ ಮೇಲೆ. ಸ್ಪರ್ಶನೂ ಇಲ್ಲಿ ಅಸ್ಪೃಶ್ಯ ! ಅಘೋಚರ ವೈರಾಣುವಿನ ಹಸಿವಿನ ತುತ್ತು ತತ್ತರಿಸುವ ಜೀವಗಳು ಹಿಂಡು ಹಿಂಡು ಗುಂಪಿದ್ದರಂತೂ ಕರೋನಕ್ಕೆ ಹಸಿವೇ ಹೆಚ್ಚು ಕಾಲ ಕುರುಡಾಗಿ ತಟ್ಟಾಡುತ್ತಿದೆ ಜಗದ ಬೆಳಕು ಮಂಕಾಗಿ ಮಂಜಾಗಿವೆ ಕಣ್ಣುಗಳು ಮನೆಯ ದೀಪಕ್ಕೆ ಎಣ್ಣೆ ಇಲ್ಲ ಹಿಟ್ಟಿನ ಮಡಿಕೆಯ ತಳಕ್ಕೆ ಬೆಂಕಿ ತಾಕಿಲ್ಲ ಹೊಸ್ತಿಲು ದಾಟಲು ಬಾಗಿಲ ಬಳಿ ಲಕ್ಷ್ಮಣ ರೇಖೆ ಎಳೆದ ದೊರೆಗೂ ಹಸಿವಿನ ಸಂಕಟ ಗೊತ್ತಿಲ್ಲ ಬದುಕೆಂದರೆ ಹೇಗೆ ಬದುಕುವುದು ಹಾಗಂತ ಹೊರಗೆ ಹೋಗುವಂತೆಯೂ ಇಲ್ಲ ! ಇನ್ನು ಬಿಕ್ಷೆ ಎತ್ತುವ ರೇಷನ್ ಕಾರ್ಡೂ ಇಲ್ಲದ ಗೋಡೆ ಹೊಸ್ತಿಲುಗಳಿಲ್ಲದ ಮುರುಕು ಸಿಲ್ವಾರ್ ತಟ್ಟೆಗಳಿಗೆ ಯಾವ ಲಕ್ಷ್ಮಣ ರೇಖೆಗಳನ್ನು ಹಾಕುತ್ತೀರಿ ದೊರೆ.! **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರೋನ ದಿನಗಳು ರೇಶ್ಮಾ ಗುಳೇದಗುಡ್ಡಾಕರ್ ಕರೋನ ದಿನಗಳು ತಿರುಗಾಟ ತಪ್ಪಿಸಿದೆ ಮನೆಯಮಂತ್ರಾಲಯ ಮಾಡಿದೆಊರೆಲ್ಲಾ ಲಾಕ್ ಡೌನ್ ಮಾಡಿದೆಪ್ರಾಣಿ ಪಕ್ಷಿಗಳ ಸ್ವಂತಂತ್ರ ಹೆಚ್ಚಿಸಿದೆ ಮೌನಕ್ಕೊಂದು ಅರ್ಥ ವಿದೆ ಎಂಬಮಾತು ನಿಜವೆನ್ನಿಸಿದೆಜನಜಂಗುಳಿಯಿಂದ ದೊರವಾಗಿಅಂತರಂಗ ತೆರೆಯಲು ಅನುವು ಮಾಡಿದೆ ಸಮಯದೊಂದಿಗೆ ಓಡುವ ನಮ್ಮನ್ನುಪ್ರೀತಿ ಪಾತ್ರರೊಡನೆ ಕಳೆಯಲು ಬಿಟ್ಟೆನಮ್ಮಗಳ ಪರಿಚಯ ಮತ್ತೆ ನಮಗೆಮಾಡಿಸಿದೆ ನೋವಿನಲ್ಲೊ ನಗುವಿದೆಆತಂಕದ ನೆರಳಿನಲ್ಲಿಯೂ ಬಲುರೋಮಾಚಕ ತಿರುವಿದೆ ಈ ಬದುಕಿನಪಾಠ ಶಾಲೆ ಪ್ರತಿಯೊಬ್ಬರಿಗೊ ಉಚಿತವಿದೆ ನಿನ್ನ ದೂರ ಮಾಡಲು ಹೋಗಿನಮ್ಮವರಿಗೆ ಹತ್ತಿರವಾದೆವುಮೊಗೆದಷ್ಟು ನೆನಪುಗಳು ಗರಿ ಬಿಚ್ಚಿನರ್ತಿಸಿದವು ವರ್ತಮಾನದಕಟು ಸತ್ಯದ ಮುಂದೆ  ************

ಕಾವ್ಯಯಾನ Read Post »

ಕಾವ್ಯಯಾನ

ಕನ್ನಡ ಕಾವ್ಯ ಕುರಿತು

ಕಾವ್ಯವನ್ನು ಬಗೆಯುವ ಬಗೆ ರಾಮಸ್ವಾಮಿ ಡಿ.ಎಸ್. ಕಾವ್ಯವನ್ನು ಬಗೆಯುವ ಬಗೆ ಮೊನ್ನೆ ಭಾನುವಾರ ನಾವೆಲ್ಲ ಸ್ವಯಂ ಕರ್ಫ್ಯೂ ವಿಧಿಸಿಕೊಂಡು ಮನೆಯಲ್ಲೇ ಇದ್ದಾಗ ಬೆಳಗಾವಿಯ ಕವಿ ಪ್ರವೀಣ ಆಯ್ದ ಕೆಲ ಯುವ ಕವಿಗಳನ್ನು ಫೇಸ್ಬುಕ್ ಲೈವಲ್ಲಿ ಬರುವಂತೆ ಆಯೋಜಿಸಿ ಕವಿತೆಗೆ ಇರುವ ಅನನ್ಯ ಸಾಧ್ಯತೆಗಳ ವಿಸ್ತಾರವ‌ನ್ನು ಮತ್ತೊಮ್ಮೆ ಕಾವ್ಯಾಸಕ್ತರಿಗೆ ತಿಳಿಯಪಡಿಸಿದರು. ಶ್ರೀ ಪ್ರವೀಣ ಮತ್ತು ಅವರ ಎಲ್ಲ ಗೆಳೆಯರಿಗೂ ಅಭಿನಂದನೆಗಳು. ಕೆಲಸವಿಲ್ಲದೆ ಸುಮ್ಮನೆ ಏನನ್ನೋ ಟ್ರೋಲ್ ಮಾಡುತ್ತಿದ್ದಾಗ ಈ ಕವಿಗೋಷ್ಠಿಯ ಮೊದಲ ಕವಿ ವೀರಣ್ಣ ಮಡಿವಾಳರನ್ನು ಕೇಳಿಸಿಕೊಂಡೆ. ಅವರ ಮೊದಲ ಸಂಕಲನ ಸಾಕಷ್ಟು ಹೆಸರು ಮಾಡಿತ್ತು. ಮತ್ತು ಆ ಸಂಕಲನ ಕುರಿತ ಮೊದಲ ವಿಮರ್ಶೆ ಕನ್ನಡಪ್ರಭ ನನ್ನಿಂದ ಬರೆಸಿ ಪ್ರಕಟಿಸಿತ್ತು. ಕುತೂಹಲ ಹೆಚ್ಚಿ ಅವತ್ತು ಕವಿತೆಗಳನ್ನು ಪ್ರಸ್ತುತ ಪಡಿಸಿದ ಎಲ್ಲ ಕವಿಗಳನ್ನೂ ಕೇಳುತ್ತ (ಹಲವೊಮ್ಮೆ ನೆಟ್ ವರ್ಕ್ ಸಮಸ್ಯೆ ಇದ್ದರೂ) ವರ್ತಮಾನದಲ್ಲಿ ಬರೆಯುತ್ತಿರುವ ಭರವಸೆಯ ಮುಖಗಳನ್ನು ಕಂಡೆ. ರಾಜೇಂದ್ರ ಪ್ರಸಾದ್, ಭುವನಾ ಹಿರೇಮಠ, ಪ್ರವೀಣ, ಅರುಣ ಜೋಳದ ಕೂಡ್ಲಗಿ, ಮಮತಾ ಅರಸೀಕೆರೆ, ಭಾಗ್ಯಲಕ್ಡ್ಮಿ, ಮುಲ್ತಾನಿ, ಋಗ್ವೇದಿ ಮೊದಲಾಗಿ ಭಗವಹಿಸಿದ ( ಕೆಲವರ ಹೆಸರು ಮರೆತೆ) ಎಲ್ಲರ ಕವಿತೆಗಳೂ ಬೇರೆ ಬೇರೆ ಆಶಯದ ಆದರೆ ಮನು ಕುಲದ ನಿತ್ಯ ಸತ್ಯದ ಬೇಡಿಕೆಯಾಗಿಯೇ ಇದ್ದುದು ವಿಶೇಷ. ಕಾವ್ಯಾಸಕ್ತತೆ ಮತ್ತು ಪ್ರಯೋಗಶೀಲತೆ ಹೊಸ ಕವಿಯ ರಚನೆಗಳಲ್ಲಿ ಕಂಡೊಡನೆಯೇ ಪ್ರತಿಕ್ರಯಿಸುವುದು ನನ್ನ ಅಭ್ಯಾಸ. ವೀರಣ್ಣ, ಅರುಣ, ಮಮತಾ, ರಾಜೇಂದ್ರ ಪ್ರಸಾದ್ ಕುರಿತು ಪತ್ರಿಕೆಗೆ ಬರೆದಂತೆಯೇ ಪ್ರವೀಣ, ಭುವನಾ, ಕುರಿತು ಫೇಸ್ಬುಕ್ಕಲ್ಲಿ ಬರೆದು ಅನ್ನಿಸಿದನ್ನು ದಾಖಲಿಸಿದ್ದೇನೆ. ವಿಮರ್ಶೆಯ ಹರಿತ ಸ್ನೇಹಕ್ಕೆ ಮುಳುವಾದ ಸಂದರ್ಭಗಳೂ ಇವೆ! ಇರಲಿ. ಕಳೆದ ಮೂವತ್ತೈದು ವರ್ಷಗಳಿಂದಲೂ ಕವಿತೆಯ ಸಾಗಂತ್ಯದಲ್ಲಿ ಬದುಕು ಕಂಡುಕೊಂಡ ನನಗೆ ಹೊಸಕಾಲದ ಅದರಲ್ಲೂ ಹೊಸ ಮಾಧ್ಯಮಗಳಾದ ಫೇಸ್ಬುಕ್ ಮತ್ತು ವಾಟ್ಸ್ ಅಪ್ ಗುಂಪುಗಳಲ್ಲಿ ಹಾಗೇ ವೈಯುಕ್ತಿಕ ಪೇಜಲ್ಲಿ ಬರೆಯುತ್ತಿರುವ ಹಲವರ ಬಗ್ಗೆ ಖುಷಿ ಮತ್ತು ಕೆಲವರ ಬಗ್ಗೆ ಸಂತಾಪಗಳೂ ಇವೆ. ಹೊಗಳಿಕೆಗೋ ಲೈಕಿಗೋ ಅಥವ ತುಂಬ ಈಸಿಯಾದ ಇಮೋಜಿಗಳಿಗೋ ಇರುವ ಪ್ರಾಧಾನ್ಯತೆ ವಿಮರ್ಶೆಯ ನಿಜದ ಮಾತುಗಳಿಗೆ ಪ್ರೋತ್ಸಾಹಕ್ಕೆ ಹೇಳಿದ ತಿದ್ದುಪಡಿಗಳಿಗೆ ಇಲ್ಲದುದನ್ನು ಕಂಡಾಗ ಬೇಸರವೂ ಆಗಿದೆ. ಕಾವ್ಯಕೇಳಿ, ಕಾಜಾಣ, ಪದ್ಯ, ಮೊದಲಾದ ತಾಣಗಳು, ಹಾಗೇ ಅವಧಿ, ಕೆಂಡಸಂಪಿಗೆ, ಸಂಗಾತಿ, ಸಂಪದ ಮೊದಲಾದ ವೆಬ್ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿರುವ ಕವಿತೆಗಳೂ ಇದುವರೆಗೂ ನಂಬಿದ್ದ ಸಾಹಿತ್ಯ ಚರಿತ್ರೆ ಕಟ್ಟಿಕೊಟ್ಟಿದ್ದ ಮಿತಿ ಮತ್ತು ಪಾತಳಿಯನ್ನು ವಿಸ್ತರಿಸಿ ಹಾಗೇ ಕೆಡವಿ ಹೊಸದನ್ನು ಕಟ್ಟುತ್ತಿರುವ ಈ ಕಾಲದ ಎಲ್ಲ ನಿಜ ಕವಿಗಳನ್ನೂ ಅಭಿನಂದಿಸುತ್ತೇನೆ. ಈ ಕುರಿತು ಸದ್ಯ ಅನಿಸಿದ್ದನ್ನು ವಿಸ್ತರಿಸಿ ಈ ಲೇಖನ. ನಮ್ಮಲ್ಲಿ ಬಹಳ ಜನ ಕವಿತೆಯೆಂದರೆ ಕವಿಗೋಷ್ಠಿಯೆಂದರೆ ಮೂಗು ಮುರಿಯುತ್ತೇವೆ. ಕವಿತೆಯನ್ನು ಓದುವುದು ಅಥವ ಬರೆಯುವುದೆಂದರೆ ಮಾಡಲು ಬೇರೇನೂ ಕೆಲಸವಿಲ್ಲದವರು ಹೊಂಚಿಕೊಂಡ ಕೆಲಸವೆಂದು ಅನ್ನುವವರೂ ಇದ್ದಾರೆ. ಆದರೂ ಸಾಹಿತ್ಯ ಸಮ್ಮೇಳನಗಳ ಮುಖ್ಯ ಆಕರ್ಷಣೆಯೇ ಕವಿಗೋಷ್ಠಿಗಳಾಗಿರುವುದೂ ವಿಶೇಷವೇ. ಪಂಡಿತರಿಗಷ್ಟೇ ಕವಿತೆ ಪಾಮರರಿಗೆ ಏಕದರ ಗೊಡವೆ ಅನ್ನುವವರೂ ಇದ್ದಾರೆ. ಇನ್ನು ಕವಿಯಲ್ಲದವರು ಅಥವ ಕವಿತೆಯ ಗೊಡವೆ ಬೇಡದೆಯೂ ಕವಿತೆಯ ಜೊತೆಗೆ ಅನಿವಾರ್ಯವಾಗಿ ಬೆರೆಯುವವರೆಂದರೆ ಅದನ್ನು ಪಠ್ಯವಾಗಿ ಓದಲೇಬೇಕಿರುವ ವಿದ್ಯಾರ್ಥಿಗಳು ಮತ್ತು ಅದನ್ನವರಿಗೆ ಪಾಠ ಹೇಳಬೇಕಾದ ಗುರುತರ ಜಾವಾಬ್ದಾರಿ ಹೊಂದಿರುವ ಅಧ್ಯಾಪಕರು.ಕವಿತೆಯನ್ನು ಪಾಠ ಮಾಡುವುದು ಎಂದರೆ ಅಧ್ಯಾಪಕರಿಗೆ ಹಿಂಜರಿಕೆ.ವರ್ಷಾವಧಿ ಪರೀಕ್ಷೆಯಲ್ಲಿ ಕವಿತೆಗಳ ಮೇಲೆ ಕೇಳಿದ ಪ್ರಶ್ನೆಗಳಿಗೆ ಉತ್ತರಗಳನ್ನು ಬರೆಯುವುದೆಂದರೆ ವಿದ್ಯಾರ್ಥಿಗಳಿಗೆ ಅಂಜಿಕೆ. ಅರ್ಥವಾಗದು ಎಂಬ ಅಂಜಿಕೆ ಹುಡುಗರಿಗೆ. ಅರ್ಥವಾಗದಿದ್ದರೆ ಎಂಬ ಅಂಜಿಕೆ ಅಧ್ಯಾಪಕರಿಗೆ. ಓದಿದ ಕವಿತೆ ಅರ್ಥವಾಗದಿದ್ದರೆ ನಮ್ಮ ಅಹಂಕಾರಕ್ಕೆ ಪೆಟ್ಟು. ಅದಕ್ಕೇ ನಮಗೆ ಕವಿತೆಯ ಉಸಾಬರಿಯೇ ಬೇಡ ಎಂದು ಮುಖ ತಿರುಗಿಸುವ ಮಂದಿ ಬಹಳ. ಕವಿತೆಯೊಂದನ್ನು ಓದಿದೊಡನೆಯೇ ಅದು ಅರ್ಥವಾಗಲೇ ಬೇಕು ಎಂದು ದಯವಿಟ್ಟು ಹಠಮಾಡಬೇಡಿ. ಕವಿತೆಯನ್ನು ಅರ್ಥದ ಗೂಟಕ್ಕೆ ಕಟ್ಟಬೇಡಿ. ಅದನ್ನು ಸುಮ್ಮನೆ ವಿಹಾರಕ್ಕೆ ಬಿಡಿ. ಅಂಗಳದಲ್ಲಿ ಆಡಬಯಸುವ ಪುಟ್ಟ ಮಗುವಿನಂತೆ ಕವಿತೆ ಆರಾಮಾಗಿ ನಿಮ್ಮ ಮನದ ಅಂಗಳದಲ್ಲಿ ಆಡಿಕೊಳ್ಳಲಿ. ಕವಿತೆಯ ಭಯವನ್ನು ಗೆಲ್ಲಲು ನಾವು ಆರಂಭದಲ್ಲಿ ಕೈಗೊಳ್ಳಬೇಕಾದ ಸುಲಭ ಉಪಾಯವಿದು. ಸುಮ್ಮನೆ ಓದುತ್ತಾ ಹೋದರೆ, ಓದುತ್ತಲೇ ಹೋದರೆ ಹೇಗೆ ಈಗ ತಾನೇ ಓಡಾಡಲು ಪ್ರಾರಂಭಿಸಿರುವ ಮಗು ತನ್ನ ಆಟದಲ್ಲಿ ಒಂದು ಲಯ ಕಂಡೀತೋ ಹಾಗೆಯೇ ನೀವೂ ಕವಿತೆಯನ್ನು ಕಾಣಬೇಕು. ಕವಿತೆ ಹೇಗೆ ನಡೆಯುವುದು, ಹೇಗೆ ನಗುವುದು, ಹೇಗೆ ಅತಾರ್ಕಿಕವನ್ನು ಪಲುಕುವುದು ಗಮನಿಸಿ.ಕವಿತೆ ಎಂದರೆ ಮೊದಲು ಗಮನಿಸ ಬೇಕಾದದ್ದು ಅದನ್ನು ಕವಿಯು ಹೇಗೆ ಗುನುಗುನಿಸುವ ಮಾತುಗಳನ್ನು ಹಿಡಿದು ನೇಯ್ದು ಮಾಲೆ ಮಾಡಿದ್ದಾನೆ ಎಂಬುದನ್ನು ಓದಿನ ಮೂಲಕವೇ ದಕ್ಕಿಸಿಕೊಳ್ಳಬೇಕು.ಕವಿತೆಯ ಗ್ರಹಿಕೆ ಎಂಬುದು ಕವಿತೆಯ ಶಬ್ದ ಸಾಮಗ್ರಿಯಿಂದ ನೀವೇ ಸ್ವಂತ ಕಟ್ಟಿಕೊಂಡ ಗ್ರಹಿಕೆ ಎಂಬುದನ್ನು ಮರೆಯದಿರಿ. ಈ ಪದ್ಯದ ಇನ್ನೊಬ್ಬ ಓದುಗ ಭಿನ್ನವಾದ ಬೇರೆ ಒಂದು ಗ್ರಹಿಕೆಯನ್ನೇ ತನ್ನ ಓದಿನಿಂದ ಕಟ್ಟಿಕೊಂಡರೆ ನೀವು ಆತಂಕಗೊಳ್ಳಬೇಕಿಲ್ಲ. ಸದ್ಯಕ್ಕೆ ಇದು ನಿಮ್ಮ ಕಾವ್ಯ ಗ್ರಹಿಕೆ. ಮುಂದೆ ನಿಮ್ಮ ಓದು ಪರಿಷ್ಕಾರಗೊಂಡಂತೆ ಕವಿತೆ ಬೇರೊಂದು ವಿಭಿನ್ನವಾದ ಗ್ರಹಿಕೆಯನ್ನೇ ಕಟ್ಟಿಕೊಳ್ಳಬಲ್ಲುದು. ಕವಿತೆ ಒಂದೇ; ಆದರೆ ಅದರ ಗ್ರಹಿಕೆಗಳೂ ಅನಂತ. ಈ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಹೊಸ ಕಾವ್ಯಾರ್ಥಿಗಳು ತಮ್ಮ ಕಾವ್ಯ ಶೋಧವನ್ನು ಮುಂದುವರೆಸಲಿ. ಕವಿತೆಯೆಂಬುದು ನಿರಂತರ ವಿಕಸನಶೀಲವಾದ ಒಂದು ಜೈವಿಕ ಭಾಷಾನುಸಂಧಾನ ಎಂಬ ಅರಿವು ನಿಮಗಿರಲಿ. ಅದಕ್ಕಿಂತ ಮುಖ್ಯ ನಮ್ಮ ಪೂರ್ವಸೂರಿಗಳನ್ನೂ ಹಾಗೇ ಸಮಕಾಲೀನರನ್ನೂ ಎಷ್ಟು ಓದಿಕೊಂಡಿದ್ದೀರಿ ಎನ್ನುವುದು ಮುಖ್ಯ. ಸಾಹಿತ್ಯ ಚರಿತ್ರೆಯ ಅದು ನಡೆದ ಬಂದ ದಾರಿಯ ಬಗ್ಗೆ ಕೊಂಚವಾದರೂ ತಿಳುವಳಿಕೆ ನಾವು ನಡೆಯುತ್ತಿರುವ ದಾರಿಗೆ ತೋರುಬೆರಳು ಅನ್ನುವುದನ್ನು ಮರೆಯದಿರೋಣ. ಹಲವು ಯುವ ಬರಹಗಾರರು ಪರಂಪರೆಯನ್ನು ಧ್ಯಾನಿಸದೇ ಸುಮ್ಮನೇ ಮುಂದುವರಯುತ್ತಿರುವುದನ್ನೂ ಓದಿನಿಂದ ಬಲ್ಲೆ. ನಿಜಕ್ಕೂ ಭಾಷೆಯ ಸೊಗಸು, ಅದರ ನಿರ್ಮಿತಿಯ ವಿನ್ಯಾಸ ಹಾಗೂ ಮಿತಿ ಅರ್ಥವಾಗುವುದೇ ನಿರಂತರದ ಓದಿನಿಂದ‌. ಅನ್ಯರನ್ನು ಓದದೇ ನಾವು ನಮ್ಮ ಕಾವ್ಯ ಬೆಳೆಯಲಾರದು. ಇನ್ನು ನವ್ಯ ನವೋದಯ ಬಂಡಾಯ ಇತ್ಯಾದಿ ಇತ್ಯಾದಿ ಪ್ರಬೇಧಗಳೆಲ್ಲ ನಮ್ಮ ಓದಿನ ರುಚಿಯನ್ನು ಮತ್ತು ಕವಿತೆಗಳ ಓದಿನ ಮೂಲಕ ನಾವೇ ಕಟ್ಟಿಕೊಂಡ ಗ್ರಹಿಕೆಗಳನ್ನು ಅಳೆಯುವ ಸಾಧನವಾಗಿವೆಯೇ ವಿನಾ ಅವೇ ಅಂತಿಮವಲ್ಲ. ಏಕೆಂದರೆ ಒಂದು ಕಾಲದಲ್ಲಿ ಗಣ ಪ್ರಸ್ತಾರ ಛಂದೋಬಂಧವಿರದುದನ್ನು ಕಾವ್ಯವೆಂದು ಒಪ್ಪುತ್ತಿರಲಿಲ್ಲ. ನಂತರ ಬಂದ ನವೋದಯ ಸಾಹಿತ್ಯ ಮಾರ್ಗ ಲಯ ಮತ್ತು ಭಾವಗೀತಾತ್ಮಕ ಶೈಲಿಯನ್ನು ಮೈಗೂಡಿಸಿಕೊಂಡಿದ್ದರೆ ನಂತರದ ಪ್ರಗತಿಶೀಲ ಮಾರ್ಗ ಸರ್ವ ಸಮಾನತೆಯನ್ನು ಒಟ್ಟು ಜನಕಲ್ಯಾಣವನ್ನು ಬಯಸುವ ಸಮಾಜವಾದದ ಆಯಕಟ್ಟಿನ ಮೇಲೆ ನಿಂತಿತ್ತು. ನವ್ಯ ಕಾವ್ಯವಂತೂ ಕನ್ನಡ ಕಾವ್ಯ ಕೃಷಿಯ ಜಮೀನಿನ ಮೇಲೆ ಬಿದ್ದ ಹೊಸ ಬಗೆಯ ಬೆಳೆ. ಅಲ್ಲಿಯವರೆಗೂ ಮನುಷ್ಯನ ಆಂತರಿಕ ಸಂಗತಿಗಳನ್ನು ಅಷ್ಟಾಗಿ ಪ್ರಕಟಪಡಿಸದೇ ಪ್ರಾಕೃತಿಕ ಬಣ್ಣನೆಯಲ್ಲೇ ಕಳೆದು ಹೋಗಿದ್ದವರು ತಮ್ಮ ತಮ್ಮ ಜೀವನದ ಖಾಸಗೀ ಸಂಗತಿಗಳಿಗೂ ಕಾವ್ಯದ ಸ್ಪರ್ಶ ಕೊಟ್ಟ ಸಂದರ್ಭವಿದು. ಇನ್ನು ಬಂಡಾಯ ಮಾರ್ಗ ಕನ್ನಡಕಾವ್ಯ ಪರಂಪರೆಗೆ ಹೊಸ ದಿಕ್ಕು ದೆಸೆಗಳನ್ನು‌ ಕೊಟ್ಟು ಬೇಡಿಕೆಯನ್ನು ಹಕ್ಕಾಗಿ ಪ್ರಕಟಿಸುವ ಧೈರ್ಯವಾಗಿ ಮೊಳಗಿದ್ದು ಈಗ ಇತಿಹಾಸ. ಇನ್ನು ಸದ್ಯದ ಕಾವ್ಯ ಇನ್ನೂ ತನ್ನ ದಾರಿಯನ್ನು ಸ್ಪಷ್ಟಗೊಳಿಸಿಕೊಳ್ಳಬೇಕಿದೆ. ನವೋದಯದ ರಮ್ಯತೆ ಕಳೆದು ನವ್ಯದ ಪ್ರತಿಮೆ ರೂಪಕಗಳೂ ಸವೆದು ಬಂಡಾಯದ ದನಿ ಉಡುಗಿಹೋಗಿರುವ ಸಂದರ್ಭದಲ್ಲಿ ಕಾವ್ಯವೆಂದರೆ ಆ ಕ್ಷಣ ಅನ್ನಿಸಿದ್ದನ್ನು ತತ್ ಕ್ಷಣವೇ ಬರೆದು ಪ್ರಕಟಿಸುವ ಸಾಮಾಜಿಕ ಜಾಲತಾಣಗಳ ಪುಟಗಳಾಗಿ ಬದಲಾಗುತ್ತಿದೆ. ಇದು ಗಮನಿಸಬೇಕಾದ ಮುಖ್ಯ ಸಂಗತಿ. ಕವಿತೆ ಬರೆಯುವವರೆಂದರೆ ಅದ್ಯಾಪಕರೇ ಎಂಬ ಹುಸಿಯನ್ನು ವರ್ತಮಾನದ ಕವಿಗಳು ಅಳಿಸಿಹಾಕಿದ್ದಾರೆ. ಬದುಕಿನ ಹಲವು ಸ್ತರಗಳಿಂದ ಅನುಭವಗಳಿಂದ ಹುರಿಗೊಂಡ ಅನೇಕ ಮನಸ್ಸುಗಳು ಆಧುನಿಕ ಕಾವ್ಯ ಪ್ರಕಾರವನ್ನು ಕಟ್ಟುತ್ತಿವೆ. ತಮಗನ್ನಿಸಿದ್ದನ್ನು ನಿರ್ಭಿಡೆಯಿಂದ ಸ್ಪಷ್ಟವಾಗಿ ಹೇಳುವ ಸಿದ್ಧ ಸಾಮಗ್ರಿ ಈಕಾಲದ ಕವಿಗಳಿಗಿರುವುದು ವಿಶೇಷ. ದಿನಕ್ಕೊಂದು ಕವಿಯ ಒಂದೇ ಒಂದು ಕವಿತೆಯನ್ನು ಅಭ್ಯಾಸ ಮಾಡುವ ಕ್ರಮವನ್ನು ರೂಢಿಸಿಕೊಂಡರೆ ನಾವೇ ಅತ್ಯುತ್ತಮ ವಿಮರ್ಶಕರಾಗಲು ಸಾಧ್ಯ. ಆದರೆ ಅದಕ್ಕೂ ಮೊದಲು ನಮಗೆ ನಾವೇ ಹಾಕಿಕೊಂಡಿರುವ ಆದರ್ಶದ ಗೆರೆಗಳನ್ನು ಅಳಿಸಿಕೊಳ್ಳಬೇಕು. ಎಲ್ಲವನ್ನೂ ಎಲ್ಲವನ್ನೂ ಮುಗ್ಧತೆಯಿಂದ ನೋಡುವ ಗುಣವನ್ನು ಸಾಧಿಸಬೇಕು. ಆಗ ಬರಿಯ ಪ್ರಕಟಿತ ಕವಿತೆಯೇನು ಬದುಕಿನ ಹಲವು ಪಲುಕಗಳಲ್ಲಿ ನಿತ್ಯನೂತನ ಸಂಗತಿಗಳಲ್ಲಿರುವ ಕಾವ್ಯವನ್ನು ಅರಿಯಲು ಸಾಧ್ಯ. ಏನಂತೀರಿ? – ಡಿ.ಎಸ್.ರಾಮಸ್ವಾಮಿ

ಕನ್ನಡ ಕಾವ್ಯ ಕುರಿತು Read Post »

ಕಾವ್ಯಯಾನ

ಯುಗಾದಿಗೊಂದು ಗಝಲ್

ಗಝಲ್ ಸುಜಾತಾ ಲಕ್ಮನೆ ಒಲಿದೊಮ್ಮೆ ನಕ್ಕುಬಿಡು ಯುಗಾದಿ ಚೆಲ್ಲಲಿ ನಮ್ಮೊಳಗೆ ಮುನಿಸೇಕೆ ಹೇಳಿಬಿಡು ಯುಗಾದಿ ಮಾಗಲಿ ನಮ್ಮೊಳಗೆ ಕನಸು ಕಂಗಳ ತುಂಬ ರಂಗು ರಂಗಿನ ಚುಂಬಕ ಚಿತ್ತಾರ ಚುಕ್ಕಿಗಳ ಸುರಿದುಬಿಡು ಯುಗಾದಿ ತುಂಬಲಿ ನಮ್ಮೊಳಗೆ ಹೀಗೆ ವರುಷ ವರುಷಕೂ ಬರುವ ಹಬ್ಬವೇತಕೆ ಹೇಳು ನವ ಹರುಷವ ತೂಗಿಬಿಡು ಯುಗಾದಿ ಜೀಕಲಿ ನಮ್ಮೊಳಗೆ ತೆರೆಯು ತೆರೆವ ತೆರದಿ ನಾವು ತೆರೆದು ಬೆರೆಯಲಾರೆವೇನು ತೆರೆತೆರೆದು ಬೆರೆತುಬಿಡು ಯುಗಾದಿ ಬೀಗಲಿ ನಮ್ಮೊಳಗೆ ಉಸಿರುಸಿರು ಬೆರೆಯದೇ ಒಳಗೆ ಬಿಸುಪು ಹರಿವುದೇನೇ ನಿನ್ನ್ಹೆಸರ ಉಸಿರಿಬಿಡು ಯುಗಾದಿ ಮಿಂಚಲಿ ನಮ್ಮೊಳಗೆ ಹಗಲಿರುಳು ಪ್ರೀತಿ ಸುರಿವಾಗ ಜಗದ ಗೊಡವೆ ನಮಗೇಕೆ ಬರಸೆಳೆದು ಅಪ್ಪಿಬಿಡು ಯುಗಾದಿ ನಾಚಲಿ ನಮ್ಮೊಳಗೆ ಎದೆಕದವು ತೆರೆದಿದೆ ನಿನಗೆ ನೇರ ಒಳಗೆ ಬಾ ಎನ್ನೊಲವೆ “ಸುಜೂ” ಒಳ ಭಾವ ಅರಿತುಬಿಡು ಯುಗಾದಿ ಬಾಳಲಿ ನಮ್ಮೊಳಗೆ

ಯುಗಾದಿಗೊಂದು ಗಝಲ್ Read Post »

ಕಾವ್ಯಯಾನ

ಯುಗಾದಿ ಕಾವ್ಯ

ಶಾವ೯ರಿ ಯುಗಾದಿ ರೇಖಾ ವಿ.ಕಂಪ್ಲಿ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ವಿಕಾರಿ ಸಂವತ್ಸರದ ಕೊನೆಯಲಿ ವಿಷಕಾರಿತು ಕರೋನಾ ಜಗವ ತಲ್ಲಣಗೊಳಿಸಿದೇ ಉಸಿರಿಸಲು ಬೇವರಿಳಿಸುವಂತೆ ಮಾಡಿದೆ ಎಲ್ಲರನ್ನು ಮನೆಯೊಕ್ಕಿಸಿ ಬಿಟ್ಟಿದೆ ಮಹಾಮಾರಿ ರೋಗಕ್ಕೆ ಬೆದರಿದೇ ಜಗದೆದೆಯನು ಜಲ್ಲ ಎನ್ನಿಸಿದೆ ಯುಗಾದಿ ನಿನ್ನ ಸ್ವಾಗತಿಸುವ ಸಂಭ್ರಮ ಸಡಗರ ಮಡುಗಟ್ಟಿದೇ ಮುಡಿಗಟ್ಟಿ ಅದರುಟ್ಟಡಿಗಿಸಲು ಬಾ ಯುಗಾದಿ ಬಾ ಯುಗಾದಿ ಬಾ …………. ಯುಗಾದಿ ಯುಗ ಯುಗಾಂತರ ಕಳೆದರು ಹೊಸತು ತರುವ ನಿನ್ನ ಹಚ್ಚ ತೋರಣದಿ ಆಹ್ವಾನಿಸಲು ಶಾವ೯ರಿಯು ಕಾಯುತಿರುವಳು ಬಾ ಯುಗಾದಿ ಬಾ ಯುಗಾದಿ ಬಾ ಮೆಲ್ಲ ಮುದುಡಿದ ಮನಗಳ ಮೆಲ್ಲ ಮೇಲೆತ್ತಲು ನೀ ಮೆದುವಾಗಿ ಬಾ ಶಾವ೯ರಿಯ ಶಾಖಕ್ಕೆ ಸರಿದು ಹೋಗಲಿ ಜಗವ ಆವರಿಸಿದ ಮಹಾಮಾರಿಗಳೆಲ್ಲಾ ಮಯಾವಾಗಲಿ ಮತ್ತೆ ಬಾರದಾಗಲಿ ಬಾ ಯುಗಾದಿ ಬಾ ಯುಗಾದಿ ಬಾ…………. *******

ಯುಗಾದಿ ಕಾವ್ಯ Read Post »

ಕಾವ್ಯಯಾನ

ಯುಗಾದಿ ಕಾವ್ಯ

ಭರವಸೆಯೊಂದಿರಲಿ ಶಾಲಿನಿ ಆರ್. ಚಿಗುರಿದೆಲಿ ಮ್ಯಾಲೆಲ್ಲ ಚುಂಬನವಿತ್ತಿದೆ ಸಾವಿರ ಸೂರ್ಯಕಿರಣ ಗಾಳ್ಯಾಗ ತೇಲಿಬರುತಿವೆ ಹೂವ ಪರಿಮಳ ದುಂಬಿಗದುವೆ ಪ್ರಾಣ, ಹೊಸ ಆದಿಗೆ ತಳಿರು ತೂಗಿವೆ ತೋರಣ ಹೊಸ ಮನ್ವಂತರಕೆ ರಸದೌತಣವ ಬೀಡಿಗೆ ಪ್ರಕೃತಿ ಹಾಡಿದೆ ತಾನನ, ಕೋಗಿಲೆಯ ಗಾನ ದುಂಬಿಯ ಝೇಂಕಾರ ಕೇಳುತ ಮೈಮರೆತಿವೆ ಮರಗಳೆಲ್ಲ ಕೂತು ಹರಸುತ ನಮ್ಮನ್ನೆಲ್ಲ, ಬೇವಿನಮರಕದು ಹೂವಿನ ಸೀರಿ ಮಾವಿನ ಮರದಲಿ ಕಾಯಿಗಳ ಮೋಡಿ ಸುಂದರ ಸೊಬಗಿದು ಯುಗದ ಆದಿ ಎದಿಮನವ ಬೆಸೆದಿದೆ ಸಿರಿ ಸಂಭ್ರಮ ಚೈತ್ರ, ಬದುಕೆಲ್ಲ ಹಿಂಗಾ ಇರಲಿ ಸುಖ ದುಃಖಗಳ ಬಾಳ್ವೆ ಸಮ್ಮಿಳಿತವಾಗಿರಲಿ ಬೇವುಮಾವುಗಳ ಉಗಾದಿಯಾಗಿ ಚೈತ್ರದ ಒಲುಮೆಯಿದು ಮರಳಿ ಮರಳಿ ಬರಲಿ ಪ್ರತಿ ವರುಷ ಹೊಸ ಹರುಷ ಹೊಸ ಭರವಸೆಯೊಂದಿರಲಿ… *******

ಯುಗಾದಿ ಕಾವ್ಯ Read Post »

You cannot copy content of this page